` Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kannada stars image
darshan, sudeep, yash, upendra

ರಿಪೋರ್ಟ್ ಸುಮಾರಾಗಿದೆ, ಆದರೆ ಕಲೆಕ್ಷನ್ ಮಾತ್ರಬಹಳ ಚೆನ್ನಾಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ಗಜಕೇಸರಿ’ಚಿತ್ರದ ಬಗ್ಗೆ ಇಂಥಾದ್ದೊಂದು ಮಾತು ಕೇಳಿಬರುತ್ತಿದೆ. ಚಿತ್ರದ ವಿಮರ್ಶೆ ಹೇಗೆ ಇರಲಿ, ಸದಭಿರುಚಿಯ ಸಿನಿಮಾ ವಕ್ತಾರರು ಏನೇ ಮಾತಾಡಲಿ, ಕೊನೆಗೆ ಮುಖ್ಯವಾಗುವುದು ಕಲೆಕ್ಷನ್. ನಿರ್ಮಾಪಕ ಉದ್ಧಾರವಾಗುವುದು ಅದರಿಂದಲೇ ಹಾಗೂ ಚಿತ್ರೋದ್ಯಮ ಉಳಿಯುವುದೂ ಅದರಿಂದಲೇ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಟಿಸಿದ ಯಾವ ಚಿತ್ರವನ್ನೂ ಚೆನ್ನಾಗಿದೆ ಎಂದು ಪತ್ರಿಕೆಗಳು ಬರೆಯುವುದಿಲ್ಲ. ಎಲ್ಲವೂ ಒಂದಕ್ಕಿಂತ ಒಂದು ಖರಾಬ್ ಚಿತ್ರಗಳೇ. ಆದರೆ ಕಲೆಕ್ಷನ್ ಮಾತ್ರ ಒಂದೇ ವಾರದಲ್ಲಿ ನೂರು ಕೋಟಿ ದಾಟುತ್ತದೆ. ಎಷ್ಟೇ ಕೆಟ್ಟ ಚಿತ್ರಗಳಲ್ಲಿ ಎಷ್ಟೇ ಕೆಟ್ಟದಾಗಿ ನಟಿಸಿದರೂ ಸಲ್ನಾನ್ ಖಾನ್ ನಂಬರ್ ಒನ್ ಸ್ಟಾರ್ ಆಗಿಯೇ ಉಳಿಯುತ್ತಾನೆ.

ಅದು ಹೇಗೆ ಸಾಧ್ಯ? ಚಿತ್ರವೊಂದು ಸುಮಾರಾಗಿದ್ದರೂ ಹೌಸ್ ಫುಲ್ ಪ್ರದರ್ಶನ ಕಾಣುವುದಕ್ಕೆ ಕಾರಣವೇನು?ಆ ಸ್ಟಾರ್ ನ  ಟೈಮ್ ಈಗ ಬಹಳ ಚೆನ್ನಾಗಿದೆ, ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ, ಹಾಗಾಗಿ ಆತ ನಟಿಸಿದ ಚಿತ್ರ ಹೇಗೆ ಇರಲಿ, ಅದು ದುಡ್ಡು ಮಾಡುತ್ತದೆ ಅನ್ನುವವರಿದ್ದಾರೆ. ಚಿತ್ರದ ಪ್ರೊಡಕ್ಷನ್ ತುಂಬಾ ರಿಚ್ ಆಗಿದೆ, ಎಂಟು ದೇಶಗಳಲ್ಲಿ ಶೂಟಿಂಗ್ ಮಾಡಿದ್ದಾರೆ, ಹಾಡುಗಳು-ಲೊಕೇಷನ್ನು-ಸೆಟ್ಟುಗಳು ಎಲ್ಲವೂ ಅದ್ದೂರಿಯಾಗಿವೆ. ಹಾಗಾಗಿ ಜನ ನೋಡುತ್ತಿದ್ದಾರೆ ಎಂದು ಹೇಳುವವರೂ ಇದ್ದಾರೆ.  ಇದನ್ನು ಮೂಢನಂಬಿಕೆ ಎಂದಾದರೂ ಕರೆಯಿರಿ, ಆದರೆ ಚಿತ್ರೋದ್ಯಮ ನಡೆಯುವುದು ಇಂತಾ ನಂಬಿಕೆಗಳ ಹಳಿ ಮೇಲೆ. ನೀತಿಯೇನಪ್ಪಾ ಅಂದರೆ ಸ್ಟಾರ್ ನಟಿಸಿದ ಚಿತ್ರಗಳಿಗೆ ಕತೆ ಬೇಕಾಗಿಲ್ಲ, ಆತನನ್ನು ಇನ್ನಷ್ಟು ವೈಭವೀಕರಿಸುವ, ಆತನ ಇಮೇಜಿಗೆ ತಕ್ಕನಾಗಿರುವ ದೃಶ್ಯಗಳು ಇದ್ದರೆ ಸಾಕು. ಇಲ್ಲಿ ಎಲ್ಲವೂ ನಿರೀಕ್ಷಿತ, ಆದರೂ ಪ್ರೇಕ್ಷಕನಿಗೆ ಅದು ಅಪೇಕ್ಷಿತ.

ನಮ್ಮ ಕಮರ್ಷಿಯಲ್ ಸಿನಿಮಾಗಳು ತಯಾರಾಗುವುದು ಏಕವ್ಯಕ್ತಿ ಕೇಂದ್ರಿತ ಸೂತ್ರದ ಮೇಲೆ. ಕಾಮೆಡಿ ಟ್ರಾಕ್ ಒಂದರ ಹೊರತಾಗಿ ಮಿಕ್ಕೆಲ್ಲಾ ಟ್ರಾಕ್ ಗಳ ಮೇಲೆ ನಮ್ಮ ನಾಯಕನದ್ದೇ ಸವಾರಿ. ಕತೆ, ಚಿತ್ರಕತೆ, ಹಾಡು. ಡೈಲಾಗು ಎಲ್ಲವೂ ಆತನನ್ನೇ ದೃಷ್ಟಿಯಲ್ಲಿಟ್ಟುಕೊಂಡು ರಚನೆಯಾಗುತ್ತವೆ. ಆ ಕಾರಣಕ್ಕೇ ಸ್ಟಾರ್ ನಟಿಸಿದ ಚಿತ್ರವೊಂದು ಗೆದ್ದಾಗ ಅದರ ಕ್ರೆಡಿಟ್ಟು ಸಂಪೂರ್ಣವಾಗಿ ಆತನಿಗೇ ಸಲ್ಲುತ್ತದೆ. ಕೆಲವೊಮ್ಮೆ ಆ ಚಿತ್ರದ ನಿರ್ದೇಶಕನ ಹೆಸರು ಕೂಡಾ ಪ್ರೇಕ್ಷಕನಿಗೆ ನೆನಪಿರುವುದಿಲ್ಲ.

ಆದರೆ ವಿಚಿತ್ರ ನೋಡಿ. ಒಬ್ಬ ಸ್ಟಾರ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರೂ, ಚಿತ್ರೋದ್ಯಮದ ಒಳವಲಯದಲ್ಲಿ ಆತ ಅಷ್ಟೊಂದು ಜನಪ್ರಿಯನಾಗಿರುವುದಿಲ್ಲ. ಪ್ರತಿಯೊಬ್ಬ ಸ್ಟಾರ್ ಬಗ್ಗೆಯೂ ಕೊಂಕುನುಡಿಗಳನ್ನು ಆಡುವವರಿದ್ದಾರೆ. ಸ್ಟಾರ್ ಸಿಸ್ಟಂನಿಂದಾಗಿ ಚಿತ್ರೋದ್ಯಮ ಹಾಳಾಗುತ್ತಿದೆ, ಚಿತ್ರವೊಂದರ ಅರ್ಧ ಬಜೆಟ್ ಆತನ ಸಂಭಾವನೆಗೇ ಹೋಗುತ್ತದೆ, ಒಳ್ಳೆಯ ಕತೆಯನ್ನಿಟ್ಟುಕೊಂಡು ಚಿತ್ರ ಮಾಡಿದರೂ ಸ್ಟಾರ್ ಇಲ್ಲ ಎಂಬ ಏಕೈಕ ಕಾರಣಕ್ಕೆ ಅದನ್ನು ಪ್ರೇಕ್ಷಕ ನೋಡುವುದಿಲ್ಲ, ಟೀವಿಯವರು ಅದರ ಹಕ್ಕನ್ನು ಖರೀದಿಸುವುದಿಲ್ಲ. ಸ್ಟಾರ್ ಆದವನು ಕತೆಯಿಂದ ಹಿಡಿದು ನಾಯಕಿಯ ಆಯ್ಕೆ ತನಕ ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸುತ್ತಾನೆ, ತನಗಿಷ್ಟವಾದವರಿಗೆ ಮಾತ್ರ ಕಾಲ್ ಷೀಟ್ ಕೊಡುತ್ತಾನೆ, ಶೂಟಿಂಗಿಗೆ ಸರಿಯಾಗಿ ಬಾರದೇ ನಖರಾ ಮಾಡುತ್ತಾನೆ,  ಚಿತ್ರ ಸೋತರ ಅದರ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ....ಹೀಗೇ ನಿರ್ಮಾಪಕರೂ, ನಿರ್ದೇಶಕರೂ ಆತನ  ಬೆನ್ನಹಿಂದೆ ಮಾತಾಡಿಕೊಳ್ಳುತ್ತಾರೆ. ಆದರೆ ಆತನ ಕಾಲ್ ಷೀಟ್ ಸಿಕ್ಕರೆ ಅದು ತಮ್ಮ ಪುಣ್ಯ ಮತ್ತು ತಮ್ಮ ಲೈಫ್ ಸೆಟ್ಲ್ ಆದಂತೆ ಎಂದು ಒಳಗೊಳಗೆ ಕನಸು ಕಾಣುತ್ತಾರೆ.

ಕಲಾತ್ಮಕ ಚಿತ್ರಗಳ ಮಾತು ಬಿಟ್ಟುಬಿಡಿ, ಯಾಕೆಂದರೆ ಅದು ನಿರ್ದೇಶಕನ ಮಾಧ್ಯಮ. ಅಲ್ಲಿ ಕಥಾವಸ್ತುವೇ ಮುಖ್ಯ ಮತ್ತು ಸಾಧ್ಯವಾದಷ್ಟು ಕಡಿಮೆ ಬಜೆಟ್ಟಲ್ಲಿ ಚಿತ್ರವನ್ನು ಮುಗಿಸಬೇಕಾದ ಅನಿವಾರ್ಯ ನಿರ್ದೇಶಕನಿಗಿರುತ್ತದೆ. ಪ್ರಶಸ್ತಿ ಮತ್ತು ಸಬ್ಸಿಡಿಯೇ ಆ ಚಿತ್ರವನ್ನು ಕಾಪಾಡಬೇಕು ಹೊರತಾಗಿ ಪ್ರೇಕ್ಷಕರಲ್ಲ ಅನ್ನುವ ಸತ್ಯ ನಿರ್ಮಾಪಕನಿಗೂ ಗೊತ್ತಿರುತ್ತದೆ. ಆದರೆ ಕಮರ್ಷಿಯಲ್ ಚಿತ್ರವೊಂದು ಸ್ಟಾರ್ ಇಲ್ಲದೇ ಯಶಸ್ಸು ಕಾಣುವುದಕ್ಕೆ ಸಾಧ್ಯವೇ?ತಮಿಳ್ನಾಡಿನಲ್ಲಿ ಅದು ಸಾಧ್ಯವಾಗುತ್ತಿದೆ, ನಮ್ಮಲ್ಲೇಕೆ ಆಗೋಲ್ಲ ಎಂದು ಕ್ರಾಸ್ ಕೊಶ್ಚನ್ ಹಾಕುವವರಿದ್ದಾರೆ. ಅಲ್ಲೂ ಸ್ಟಾರ್ ಸಿಸ್ಟಂ ಚಾಲ್ತಿಯಲ್ಲಿದೆ, ಅಪರೂಪಕ್ಕೆ ಅಲ್ಲೋ ಇಲ್ಲೋ ಒಂದು ಚಿತ್ರ ಸ್ಟಾರ್ ಇಲ್ಲದೇ ಯಶಸ್ಸು ಕಾಣಬಹುದು. ಅಂಥಾ ರಿಸ್ಕ್ ತೆಗೆದುಕೊಳ್ಳುವವರು ಇಲ್ಲಿ ಯಾರಿದ್ದಾರೆ? ರಿಸ್ಕ್ ತೆಗೆದುಕೊಂಡು ಗೆದ್ದವರ ಸಂಖ್ಯೆ ಎಷ್ಟಿದೆ?

ಒಂದು ಕತೆ ಅಂದಮೇಲೆ ಅದಕ್ಕೊಂದು ಕೇಂದ್ರಪಾತ್ರ ಇರಲೇಬೇಕು. ನಾವು ಆತನನ್ನು ನಾಯಕ ಎಂದು ಕರೆಯುತ್ತೇವೆ. ಇಡೀ ಚಿತ್ರ ಅವನ ಸುತ್ತವೇ ಸುತ್ತುತ್ತದೆ. ಆ ಪಾತ್ರವೇ ಚಿತ್ರದ ಹಣೆಬರಹವನ್ನು ನಿರ್ಧರಿಸುತ್ತದೆ. ಹಾಗಾದಾಗ ಆ ಪಾತ್ರವನ್ನು ಜನಮೆಚ್ಚಿದ ನಟನೇ ಮಾಡಿದರೆ ಸೇಫ್ ಎಂದು ನಿರ್ಮಾಪಕ ಅಪೇಕ್ಷಿಸುತ್ತಾನೆ. ಇದೊಂದು ಎಲ್ಲರೂ ಒಪ್ಪಿಕೊಂಡ ಸ್ವೀಕೃತ  ವ್ಯವಸ್ಥೆ. ಹೊಸಬನನ್ನು ಹಾಕಿಕೊಂಡು ಚಿತ್ರ ಮಾಡಿ, ಆ ಚಿತ್ರ ಏನಾದರೂ ಗೆದ್ದರೆ ಆ ಹೊಸಬನೇತನ್ನ ಎರಡನೇ ಚಿತ್ರಕ್ಕೆ ಸ್ಟಾರ್ ಆಗಿರುತ್ತಾನೆ. ಯಶಸ್ಸು ಯಾವಾಗಲೂ ಬಡ್ತಿಯನ್ನು ಬಯಸುತ್ತದೆ. ಅದು ಸಂಭಾವನೆಯ ರೂಪದಲ್ಲೇ ಇರಬಹುದು ಅಥವಾ ಸ್ಥಾನಮಾನಗಳ ರೂಪದಲ್ಲೇ ಇರಬಹುದು. ಕೇವಲ ಹತ್ತು ಲಕ್ಷ ಸಂಭಾವನೆ ಪಡೆದು ಒಂದು ಹಿಟ್ ಚಿತ್ರ ನೀಡಿದ ನಾಯಕನನ್ನು ಮತ್ತೊಮ್ಮೆ ಅದೇ ಸಂಭಾವನೆಗೆ ಒಪ್ಪಿಸುವುದಕ್ಕೆ ಸಾಧ್ಯವೇ. ಸಹಜವಾಗಿಯೇ ಆತ ಮಾರುಕಟ್ಟೆಯಲ್ಲಿ ತನಗಿರುವ ಬೇಡಿಕೆಗೆ ಅನುಗುಣವಾದ ಬೆಲೆ ಕೇಳುತ್ತಾನೆ. ಬ್ರಾಂಡೆಡ್ ಐಟಂಗೆ ಯಾವಾಗಲೂ ಬೆಲೆ ಜಾಸ್ತಿ.

ಯಾಕೆಂದರೆ.....

ಸ್ಟಾರ್ ಆಗುವ ಮುಂಚೆ ಆತ ಸಾಕಷ್ಟು ಸೈಕಲ್ ತುಳಿದಿರುತ್ತಾನೆ, ನಟನಾಗಬೇಕು ಎಂಬ ಏಕೈಕ ಆಸೆಯಿಂದ ಬೇರೆ ಯಾವ ಉದ್ಯೋಗವನ್ನೂ ಮಾಡಿರುವುದಿಲ್ಲ, ಹಲವು ನಿರ್ಮಾಪಕರ ಮುಂದೆ ಅವಕಾಶಕ್ಕಾಗಿ ಕೈಚಾಚಿ ಅವಮಾನ ಅನುಭವಿಸಿರುತ್ತಾನೆ, ದೈಹಿಕವಾಗಿಯೂ ಮಾನಸಿಕವಾಗಿಯೂ ಜರ್ಜರಿತನಾಗಿರುತ್ತಾನೆ. ಮನೆಯವರಿಂದ ಬಂಧುಬಳಗಿಂದ ತಿರಸ್ಕೃತನಾಗಿರುತ್ತಾನೆ,  ಅವೆಲ್ಲವೂ ಆತ ತನ್ನ ಬದುಕಿನ ಭವಿಷ್ಯದ ಮೇಲೆ ಹಾಕಿದ  ಬಂಡವಾಳವೇ ಅಲ್ವೇ?ಅಷ್ಟೆಲ್ಲಾ ಬಂಡವಾಳ ಹೂಡಿದವನು ಲಾಭಕ್ಕೆ ಆಸೆಪಟ್ಟರೆ ತಪ್ಪೇನಿದೆ?

ಉದಾಹರಣೆಗೆ ನಮ್ಮಲ್ಲಿರುವ ಸ್ಟಾರ್ ಗಳನ್ನು ಒಂದ್ಸಾರಿ ಪಟ್ಟಿ ಮಾಡಿ ನೋಡಿ, ರಾಜ್ ಕುಮಾರ್ ಅವರಿಂದ ಹಿಡಿದು ವಿಷ್ಣುವರ್ಧನ್ ತನಕ, ಉಪೇಂದ್ರರಿಂದ ಹಿಡಿದು ಸುದೀಪ್ ತನಕ, ದರ್ಶನ್ ಅವರಿಂದ ಹಿಡಿದು ಯಶ್ ತನಕ. ಇವರೆಲ್ಲರು ನಡೆದುಬಂದ ಹಾದಿಯತ್ತ ಕಣ್ಣು ಹಾಯಿಸಿ, ಯಾರು ಕೂಡಾ ರಾತ್ರೋರಾತ್ರಿ ಸ್ಟಾರ್ ಆದವರಲ್ಲ, ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಾ ಬೆಳೆದವರು. ಹಳಬರಾದರೆ ರಂಗಭೂಮಿ ಹಿನ್ನೆಲೆ, ಹೊಸಬರಾದರೆ ಟೀವಿ ಸೀರಿಯಲ್ಲುಗಳ ಹಿನ್ನೆಲೆ. ಈ ಮಧ್ಯೆ ಜಿಮ್ ಗೆ ಹೋಗಿ ದೇಹವನ್ನು ಹುರಿಗೊಳಿಸಬೇಕು, ಡ್ಯಾನ್ಸು, ಫೈಟು ಇತ್ಯಾದಿ ಕಲಿಯಬೇಕು. ಈಗಂತೂ ಸಿನಿಮಾ ಕೂಡಾ ಇಂಜಿನಿಯರಿಂಗ್, ಮೆಡಿಕಲ್ ಥರ ಒಂದು ಕೋರ್ಸು. ಇಲ್ಲೂ ಖರ್ಚಾಗುತ್ತದೆ, ಏಕಾಗ್ರಚಿತ್ತತೆ ಬೇಕಾಗುತ್ತದೆ, ಪರಿಶ್ರಮ ಹಾಕಬೇಕು, ಕಾಪಿ ಮಾಡಿ ಪಾಸಾಗುವಂತಿಲ್ಲ. ಇಷ್ಟೆಲ್ಲಾ ಮಾಡಿದ ಮೇಲೆಯೂ ಅದೃಷ್ಟ ಅನ್ನೋದು ಒಂದಿದೆಯಲ್ಲಾ, ಅದು ಕಣ್ಣು ಬಿಡಬೇಕು.  ಆ ಕಾರಣಕ್ಕೇ ಎಲ್ಲರೂ ಸ್ಟಾರ್ ಆಗುವುದಿಲ್ಲ.

ಆದರೆ ಹೀಗೆನಾನಾ ಕಷ್ಟದ ಕುಲುಮೆಗಳಲ್ಲಿ ಬೆಂದು ಸಿದ್ಧಗೊಂಡ ಒಂದು ಪ್ರತಿಭೆ  ಕಡಿಮೆ ರೇಟಿಗೆ ತನಗೆ ಸಿಗಬೇಕು ಎಂದು ನಿರ್ಮಾಪಕ ಬಯಸುವುದು ತಪ್ಪಾಗುತ್ತದೆ. ಅಷ್ಟಕ್ಕೂ ಚಿತ್ರೋದ್ಯಮ ನಡೆಯುವುದು ಸ್ಟಾರ್ ಗಳಿಂದಲೇ ತಾನೆ. ಸುಮ್ಮನೇ ಕಲ್ಪಿಸಿಕೊಳ್ಳಿ,. ಸುದೀಪ್, ಉಪೇಂದ್ರ, ದರ್ಶನ್, ಯಶ್ ಮೊದಲಾದ ಸ್ಟಾರುಗಳು ಏಕಾಏಕಿ ವೀಆರ್ ಎಸ್ ತೆಗೆದುಕೊಂಡರೆ ಏನಾದೀತು.  ಎಲ್ಲೆಡೆಯೂ ಹೊಸಬರ ಚಿತ್ರಗಳು ರಾರಾಜಿಸಬಹುದು, ಆದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರಾ...ನೋ ಚಾನ್ಸ್. ಉದಾಹರಣೆಗೆ ಈಗ ಬಾಂಗ್ಲಾ ದೇಶಕ್ಕೆ ಹೊರಟಿರುವ ಟೀಮ್ ಇಂಡಿಯಾದಲ್ಲಿ ಕೊಹ್ಲಿ, ರೋಹಿತ್, ಧೋನಿ ಮೊದಲಾದ ಸ್ಟಾರುಗಳೇ ಇಲ್ಲ. ಆ ಕಾರಣಕ್ಕೆ ಅಲ್ಲಿ ನಡೆಯುವ ಪಂದ್ಯಗಳನ್ನು ಪ್ರಸಾರ ಮಾಡುವುದಕ್ಕೆ ಯಾವ ಚಾನೆಲ್ಲುಗಳೂ ಮುಂದೆ ಬರುತ್ತಿಲ್ಲ.

ಇದು ಒಂದು ಸರಪಳಿ. ಸ್ಟಾರ್ ಇದ್ದರೆ ಚಿತ್ರಕ್ಕೆ ಸುಲಭವಾಗಿ ಥಿಯೇಟರುಗಳು ಸಿಗುತ್ತವೆ, ಹಂಚಿಕೆದಾರರೂ ಸಿಗುತ್ತಾರೆ, ಚಿತ್ರಕ್ಕೊಂದು ಓಪನಿಂಗ್ ಸಿಗುತ್ತದೆ, ಟೀವಿ ರೈಟ್ಸ್ ಮಾರಾಟವಾಗುತ್ತದೆ, ನಿರ್ಮಾಪಕ ಸೇಫ್ ಆಗುತ್ತಾನೆ. ಅಕಸ್ಮಾತ್ ಚಿತ್ರ ಸೋತರೆ ಏನಾಗುತ್ತದೆ?ನಿರ್ಮಾಪಕ ಮನೆ ಮಾರಾಟ ಮಾಡಬೇಕಾಗಬಹುದು. ಬಿಸಿನೆಸ್ ಅಂದಮೇಲೆ ಇಂಥಾ ರಿಸ್ಕಿಗೆ ರೆಡಿಯಾಗಿರಲೇಬೇಕು ಅಲ್ವೇ.

ಕಲೆ ಅನ್ನುವುದು ಬಿಜಿನೆಸ್ ಆಗಿ ರೂಪಾಂತರಗೊಂಡಾಗ ಇಂತಾ ಲೆಕ್ಕಾಚಾರಗಳು ಮುಖ್ಯವಾಗುತ್ತವೆ. ನಿರ್ದೇಶಕನೆಂಬ ಸೃಜನಶೀಲನೂ ಚಿತ್ರದ ಮೇಕಿಂಗ್ ಬಗ್ಗೆ ಯೋಚಿಸುವುದನ್ನು ಬಿಟ್ಟು, ನಿರ್ಮಾಪಕನನ್ನು ಗೆಲ್ಲಿಸುವುದು ಹೇಗೆ ಎಂದು ಚಿಂತಿಸುವುದಕ್ಕೆ ಶುರು ಮಾಡುತ್ತಾನೆ. ಕತೆಗಾರ ತನ್ನ ಸ್ವಂತಿಕೆಯನ್ನು ಪಕ್ಕಕ್ಕಿಟ್ಟು ಸ್ಟಾರ್ ನ ಇಮೇಜಿಗೆ ಒಗ್ಗುವ ಕತೆಯನ್ನು ಹೊಸೆಯುವುದಕ್ಕೆ ಆರಂಭಿಸುತ್ತಾನೆ. ಪತ್ರಕರ್ತರು ಒಂದು ಚಿತ್ರದ ವಸ್ತು-ನಿರೂಪಣೆಯನ್ನು ವಿಮರ್ಶಿಸುವುದರ ಬದಲಾಗಿ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಾರೆ.

ಇಷ್ಟೊತ್ತು ನಾನು ಮಾಡಿದ್ದು ಅದನ್ನೇ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುದ್ಧಿಗೆ ಭಾವ ಶರಣಾದಾಗ ಇಂಥಾದ್ದೆಲ್ಲಾ ಆಗುತ್ತದೆ. ಇಂಥಾ ಯೋಚನೆಗಳಿಂದ ನಮ್ಮ ಮನಸು ಕಳಚಿಕೊಳ್ಳಬೇಕಾದರೆ ಒಗ್ಗರಣೆಯಂಥಾ ಚಿತ್ರಗಳು ಆಗಾಗ ಬರಬೇಕು. ಭಾವನೆಗಳು ಅರಳುವ ಹೊತ್ತಲ್ಲಿ ಬುದ್ಧಿಗೆ ಕೆಲಸವಿರುವುದಿಲ್ಲ.

Also See

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery