` ಅಭಿಮಾನಿ ದೇವರು... ದೇವರಾಗಲಿಲ್ಲ..! - ಕೆ.ಎಂ. ವೀರೇಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
stars image
superstars of kannada movie industry

ನಿರ್ದೇಶಕ ಪ್ರೇಮ್ ಮೇಲೆ ಅದೆಂಥದ್ದೋ ಆಕ್ರೋಶ. ಹತೋಟಿ ಮೀರಿದ ಬೈಗುಳ. ಶಿವಣ್ಣಂಗೆ ಅದೇನೋ ಬುದ್ದಿವಾದ. ಸುದೀಪ್‍ಗೆ ಒಂದು ಕಡೆ ಜೈಕಾರ. ಇನ್ನೊಂದು ಕಡೆ ಟೀಕೆ.. ಕೆಲವು ಮಾತುಗಳಿಗಂತೂ ಲಂಗು ಲಗಾಮಿಲ್ಲ. ಸೊಂಟದ ಕೆಳಗಿನ ಭಾಷೆ ಬೇರೆ. ಹೀಗೆ ಆಡಿದವರೆಲ್ಲರೂ.. ಅಭಿಮಾನಿಗಳು. (ಡಾ.ರಾಜ್ ಅವರಿಂದ ದೇವರು ಎಂದು ಕರೆಸಿಕೊಂಡ ಅಭಿಮಾನಿ ದೇವರುಗಳು) . ಏನಾಗ್ತಿದೆ ಎಂದು ಅರ್ಥವಾಗುಷ್ಟರಲ್ಲಿ ಆಗಬಾರದ ಅನಾಹುತವೊಂದು ಆಗಿ ಹೋಗಿರುತ್ತೆ.

ದಿ ವಿಲನ್ ಸಿನಿಮಾ ಸೆಟ್ಟೇರಿದಾಗ ಸಂಭ್ರಮಿಸಿದ್ದವರು ಚಿತ್ರರಂಗದವರು. ಶಿವಣ್ಣ, ಸುದೀಪ್ ಒಟ್ಟಾಗಿ ನಟಿಸ್ತಾರಂತೆ ಎಂದಾಗ ಅದು ಸೃಷ್ಟಿಸುವ ಅಬ್ಬರವೇ ಬೇರೆ. ಜೊತೆಗಿದ್ದವರು ಜೋಗಿ ಪ್ರೇಮ್. ಪ್ರೇಮ್ ಕೆಲಸದಲ್ಲಿ ಒಬ್ಬ ರಾಕ್ಷಸ. ನೀವು ಆತನನ್ನು ಏನು ಬೇಕಾದರೂ ಹೇಳಿ. ಆದರೆ, ಸಿನಿಮಾ ಕುರಿತ ಆತನ ಪ್ಯಾಷನ್‍ನ್ನು ನೀವು ಖಂಡಿತಾ ಗೌರವಿಸಬೇಕು. ಇಂಥದ್ದೊಂದು ಸರ್ಟಿಫಿಕೇಟ್ ಕೊಟ್ಟಿದ್ದವರು ಸುದೀಪ್ ಮತ್ತು ಶಿವಣ್ಣ ಇಬ್ಬರೇ. 

ಆದರೆ, ಈಗ ಬರ್ತಿರೋ ಟೀಕೆಗಳಾದರೂ ಎಂಥವು ನೋಡಿ. ಸುದೀಪ್, ಶಿವಣ್ಣಂಗೆ ಹೊಡೆದ್ರೂ, ಶಿವಣ್ಣ ತಿರುಗಿ ಹೊಡೆಯೋದಿಲ್ಲ ಅನ್ನೋದೇ ಅಭಿಮಾನಿಗಳ ಆಕ್ರೋಶವಾಗಿ ಹೋಗಿದೆ. ಪ್ರೇಕ್ಷಕರಿಗೆ ಅರ್ಥವಾಗಬೇಕಾದ್ದು, ಅಲ್ಲಿ ಹೊಡೆತ ತಿನ್ನುವುದು ಶಿವಣ್ಣ ಅಲ್ಲ, ರಾಮಪ್ಪ. ಹೊಡೆಯುವುದು ಸುದೀಪ್ ಅಲ್ಲ, ರಾಮ್. ಅದು ಚಿತ್ರದ ಕಥೆ. ಕಥೆ ಮಾತ್ರ. 

bhoodana_18.jpg

ಅಭಿಮಾನಿಗಳ ಇಂತಹ ಅತಿಕೇರಕಗಳು ಸಿನಿಮಾ ಇಂಡಸ್ಟ್ರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತವೆ ಅನ್ನೋದು ಅತಿಶಯೋಕ್ತಿಯಲ್ಲ. ಕನ್ನಡ ಸಿನಿಮಾ ರಂಗವನ್ನು ಕಟ್ಟಿ ಬೆಳೆಸಿದವರು ಒಬ್ಬಿಬ್ಬರಲ್ಲ. ಈ ಹಿಂದೆ ರಾಜ್ ಜೊತೆ ವಿಷ್ಣು, ಶಂಕರ್‍ನಾಗ್, ಅನಂತ್‍ನಾಗ್, ಅಂಬರೀಷ್, ಶ್ರೀನಾಥ್.. ಹೀಗೆ ಹಲವು ಕಲಾವಿದರು ನಟಿಸಿದ್ದರು. ಕನ್ನಡದಲ್ಲಿ ಹಿಂದೆ ಭೂದಾನ ಎಂಬ ಚಿತ್ರ ಬಂದಿತ್ತು. ಕುಮಾರತ್ರಯರಾದ ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಉದಯ್‍ಕುಮಾರ್ ನಟಿಸಿದ್ದ ಚಿತ್ರವದು. ಆ ಚಿತ್ರದಲ್ಲಿ ಡಾ.ರಾಜ್‍ರದ್ದು ಅಜ್ಜನ ಪಾತ್ರ. ಅವರಿಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದ ಉದಯ್ ಮತ್ತು ಕಲ್ಯಾಣ್‍ರದ್ದು ಮಕ್ಕಳ ಪಾತ್ರ. ಇನ್ನು ಡಾ.ರಾಜ್, ವಿಷ್ಣು, ಅಂಬಿಯ ಸಿನಿಮಾಗಳನ್ನೇ ತೆಗೆದುಕೊಳ್ಳಿ. ಅವರು ಅದೆಷ್ಟು ಸೀನ್‍ಗಳಲ್ಲಿ ತಮಗಿಂತ ಕಿರಿಯ ಕಲಾವಿದರಿಂದ ಹೊಡೆತ ತಿಂದಿಲ್ಲ. ಈ ಮೂವರೂ ಸ್ಟಾರ್‍ಗಳಿಗೆ ತೆರೆಯ ಮೇಲೆ ಅತಿ ಹೆಚ್ಚು ಕಪಾಳಕ್ಕೆ ಹೊಡೆದವರು ಬಹುಶಃ ಅಶ್ವತ್ಥ್ ಅವರೇ ಇರಬೇಕು.  ಏಕೆಂದರೆ ಅವರಿಗೆ ಅದು ಸಿನಿಮಾ... ಹಾಗೂ ಅದು  ಸಿನಿಮಾ ಮಾತ್ರ ಎನ್ನುವುದು ಗೊತ್ತಿತ್ತು. ಇನ್ನು ವಿಷ್ಣು, ಅಂಬಿ, ಪ್ರಭಾಕರ್, ಶಂಕರ್‍ನಾಗ್, ಅನಂತ್‍ನಾಗ್, ರವಿಚಂದ್ರನ್.. ಮೊದಲಾದವರೆಲ್ಲ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಸ್ವತಃ ಶಿವರಾಜ್‍ಕುಮಾರ್, ಈಗಿನ ಸ್ಟಾರ್‍ಗಳಲ್ಲಿ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿರುವ ಏಕೈಕ ಕಲಾವಿದ. ಅದರಿಂದ ಲಾಭವಾಗಿರುವುದು ಚಿತ್ರರಂಗಕ್ಕೆ.

ಅಂಥಾದ್ದೊಂದು ದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದ ಚಿತ್ರರಂಗಕ್ಕೆ ಆಘಾತ ಮೂಡಿಸಿರುವುದು ಅಭಿಮಾನಿಗಳ ಈ ಆಕ್ರೋಶ. ಇದನ್ನು ತುಂಬು ಹೃದಯದಿಂದ ಸ್ವಾಗತಿಸಿಬಿಟ್ಟಿದ್ದರೆ.. ಇಂತಹ ಇನ್ನಷ್ಟು ಪ್ರಯೋಗಗಳು ಶುರುವಾಗುತ್ತಿದ್ದವು. ಮತ್ತೊಮ್ಮೆ ಮಲ್ಟಿಸ್ಟಾರ್‍ಗಳ ಯುಗ ಆರಂಭವಾಗುತ್ತಿತ್ತು. ತೆಲುಗಿನಲ್ಲೂ ಕೂಡಾ ಕೆಲವೇ ವರ್ಷಗಳ ಹಿಂದೆ ಇಂತಹದ್ದೊಂದು ಪ್ರಯೋಗ ಆರಂಭಿಸಿ ಸಕ್ಸಸ್ ಕಂಡಿರೋದು ಕಣ್ಣೆದುರೇ ಇದೆ. ಅಂಥಾದ್ದೊಂದು ಆಸೆಗೆ ಕೆಲವೇ ಕೆಲವು ಅತಿರೇಕಿ ಅಭಿಮಾನಿಗಳು ತಣ್ಣೀರು ಎರಚಿಬಿಟ್ಟರಾ..?

ದಿ ವಿಲನ್ ಚಿತ್ರದಲ್ಲಿ ಸುದೀಪ್, ಶಿವಣ್ಣಂಗೆ ಹೊಡೆಯುವ ಸೀನ್‍ಗೆ ಇಷ್ಟೆಲ್ಲ ಆಕ್ರೋಶಗೊಂಡ ಅಭಿಮಾನಿಗಳು, ಅದೇ ಚಿತ್ರದಲ್ಲಿ ನಾವಿಬ್ಬರೂ ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟದೇ ಇದ್ರೂ, ನಾನು ನಿನಗೆ ಅಣ್ಣ, ನೀನು ನನಗೆ ತಮ್ಮ ಅನ್ನೋ ಡೈಲಾಗ್‍ನಲ್ಲಿರೋ ಬಾಂಧವ್ಯದ ಸಂದೇಶವನ್ನು ಅದೇಕೆ ಮರೆಯುತ್ತಾರೋ...

ಕೆ.ಎಂ. ವೀರೇಶ್

Shivarjun Movie Gallery

Popcorn Monkey Tiger Movie Gallery