ಮರ್ಸೆಲ್. ತಮಿಳಿನ ವಿಜಯ್ ಅಭಿನಯದ ಈ ಚಿತ್ರದಲ್ಲಿ ಜಿಎಸ್‍ಟಿ ಕುರಿತಂತೆ ಇರುವ ಒಂದೇ ಒಂದು ಡೈಲಾಗ್, ತಮಿಳುನಾಡಿನಲ್ಲಿ ಹಾಗೂ ರಾಜಕೀಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ತಮಿಳು ಚಿತ್ರರಂಗದ ಸೂಪರ್‍ಸ್ಟಾರ್‍ಗಳು, ರಾಜಕೀಯ ರಂಗದ ಅತಿರಥ ಮಹಾರಥರೆಲ್ಲ ಮಾತನಾಡುತ್ತಿದ್ದಾರೆ. ಆ ಚಿತ್ರದಲ್ಲಿನ ಆ ಡೈಲಾಗ್ ಅರ್ಧ ಸತ್ಯ. ಹಾಗೆಂದು ಜಿಎಸ್‍ಟಿ ಗೊಂದಲ ಇಲ್ಲವೇ ಇಲ್ಲ ಎಂದೇನೂ ಅಲ್ಲ. ಏಕೆಂದರೆ, ಇದು ನನ್ನ ಸ್ವಂತ ಅನುಭವ.
ಜಿಎಸ್‍ಟಿ ಬಂದ ಮೇಲೆ ನಾನೂ ಕೂಡಾ ಜಿಎಸ್‍ಟಿಗೆ ಬದಲಾದೆ. ನನ್ನ ತೆರಿಗೆ ಲೆಕ್ಕಾಚಾರಗಳನ್ನೆಲ್ಲ ಜಿಎಸ್‍ಟಿಗೆ ಸೇರಿಸಿದೆ. ಟ್ಯಾಕ್ಸ್ ಕಟ್ಟುವುದಕ್ಕೆ ಇರುವ ಡೆಡ್‍ಲೈನ್ ಒಳಗೇ ಟ್ಯಾಕ್ಸ್‍ನ್ನು ಕಟ್ಟಲಾಗಿದೆ. ಆದರೂ ಪೆನಾಲ್ಟಿ ಎಂದು 5,800 ರೂ. ದಂಡ ಹಾಕಿದ್ದಾರೆ.
ದಂಡ ಯಾಕೆ..? ಉತ್ತರ ಕೊಡುವವರಿಲ್ಲ. ಕಟ್ಟಬೇಕು ಅಷ್ಟೆ.
ಟ್ಯಾಕ್ಸ್ ಲೆಕ್ಕಾಚಾರದಲ್ಲೇನಾದರೂ ಸಮಸ್ಯೆ ಇದೆಯಾ..? ಏನಾದರೂ ತಪ್ಪಾಗಿದೆಯಾ ಎಂದು ಪ್ರಶ್ನಿಸಿದರೆ, ನೋ ಆನ್ಸರ್. ಎಲ್ಲ ಸರಿಯಾಗಿದೆ. ಈಗ ಪೆನಾಲ್ಟಿ ಕಟ್ಟಿ ಎನ್ನುತ್ತಾರೆ.
ಪೆನಾಲ್ಟಿ ಯಾಕೆ ಕಟ್ಟಬೇಕು..? ಲೆಕ್ಕವೂ ಸರಿಯಾಗಿದೆ. ನಿಗದಿತ ಅವಧಿಗೆ ಮುನ್ನವೇ ಕಟ್ಟುತ್ತಿದ್ದೇವೆ. ಯಾವ ಕಾರಣಕ್ಕೆ ಕಟ್ಟಬೇಕು ಹೇಳಿ ಎಂದರೂ ಉತ್ತರ ಕೊಡುವವರಿಲ್ಲ. ಅಥವಾ.. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೂ ಇಲ್ಲ.
ನಮ್ಮ ಪ್ರಶ್ನೆಗೆ ಉತ್ತರ ಕೊಡಿ. ಆಮೇಲೆ ಟ್ಯಾಕ್ಸ್ ಕಟ್ಟುತ್ತೇನೆ ಎಂದು ವಿಳಂಬ ಮಾಡೋಣವಾ ಎಂದರೆ, ಅದಕ್ಕೆ ಅವಕಾಶವೇ ಇಲ್ಲ. ಈಗಾಗಲೇ ಕಾರಣವೇ ಇಲ್ಲದೆ 5,800 ರೂ. ದಂಡ ಹಾಕಿರುವ ಇಲಾಖೆ, ನಂತರ ಪ್ರತಿದಿನಕ್ಕೂ 200 ರೂ. ದಂಡ ವಿಧಿಸುತ್ತಾ ಹೋಗುತ್ತೆ. ಹಾಗಾಗಿ, ಕಟ್ಟಲೇಬೇಕು.
ಹೋಗಲಿ, ಈಗೇನೋ ಮಿಸ್ಟೇಕ್ ಆಗಿದೆ. ಆಮೇಲೆ ಸರಿ ಮಾಡಿ, ನಿಮ್ಮ ಹಣವನ್ನು ರೀಫಂಡ್ ಮಾಡುತ್ತೇವೆ ಎಂಬ ಭರವಸೆಯಾದರೂ ಸಿಗುತ್ತಿದೆಯಾ ಎಂದರೆ, ಅದೂ ಇಲ್ಲ.
ಅಂದಹಾಗೆ, ನಾನೇನೂ ಜಿಎಸ್‍ಟಿ ವಿರೋಧಿಯಲ್ಲ. ಈ ತೆರಿಗೆ ಪದ್ಧತಿ ಬಂದಾಗ, ಇದರಿಂದ ದೇಶಕ್ಕೆ ಲಾಭವಿದೆ ಅನ್ನೋದಾದರೆ ಸ್ವಾಗತಿಸೋಣ ಬಿಡಿ ಎಂದುಕೊಂಡಿದ್ದವನೇ. ತೆರಿಗೆ ಕಟ್ಟುವುದು ನನ್ನ ಕರ್ತವ್ಯ ಎಂದೇ ನಂಬಿಕೊಂಡಿರುವವನು ನಾನು. ಆದರೆ, ಈ ರೀತಿಯ ಗೊಂದಲಗಳಿಗೆ ಉತ್ತರ ಕೊಡೋರು ಯಾರು..?
ಜಿಎಸ್‍ಟಿ ಜಾರಿಗೆ ತಂದವರು ಉತ್ತರ ಕೊಡುವರೇ..?
ಕೆ.ಎಂ.ವೀರೇಶ್,
ಚಿತ್ರಲೋಕ.ಕಾಮ್
ಸಂಪಾದಕರು