` Uma Column 55 - ಕನ್ನಡದಲ್ಲೂ ಒಬ್ಬ ಗುಲ್ಜಾರ್ ಇದ್ದರು! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tanike guljar khan image
tanike guljar khan

ಅಕ್ಬೋಬರ್ 10 ಮತ್ತು 11ರಂದು ‘ಸಿಂಹಾದ್ರಿ’ ಚಿತ್ರವನ್ನು ರಾಜ್ಯಾದ್ಯಂತ ಮಹಿಳಾ ಪ್ರೇಕ್ಷಕರಿಗೆ ಉಚಿತವಾಗಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ. ಇಂಥಾದ್ದೊಂದು ಜಾಹಿರಾತನ್ನು ದಿನಪತ್ರಿಕೆಗಳಲ್ಲಿ ನೋಡಿದಾಗ ನನಗೊಂದು ಅನುಮಾನ ಕಾಡಿತುಃ ಸಿಂಹಾದ್ರಿ ಚಿತ್ರ ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿದೆಯಾ? ಪತ್ರಕರ್ತರಿಗೆ ಎಲ್ಲವನ್ನೂ ಅನುಮಾನದಿಂದ ನೋಡುವ ಚಟ, ಹಾಗಾಗಿ ನಿಮ್ಮ ಕಾಮಾಲೆ ಕಣ್ಣಿಗೆ ಹೀಗೆ ಕಾಣಿಸುತ್ತಿದೆ ಎಂದು ನೀವು ಟೀಕಿಸಬಹುದು, ನನಗೆ ಬೇಜಾರಿಲ್ಲ. ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಂಥಾ ರಿಯಾಯಿತಿ ಯೋಜನೆಗಳು, ಡಿಸ್ಕೌಂಟ್ ಸ್ಕೀಮುಗಳು. ಉಡುಗೊರೆಗಳು, ಉಚಿತ ಕೆಸೆಟ್ಟುಗಳು, ಮೊದಲಾದ ಔದಾರ್ಯಗಳು ಪ್ರೇಕ್ಷಕರ ಮೇಲೆ ಪ್ರಯೋಗವಾದ ಸಂದರ್ಭಗಳನ್ನು ಒಂದು ಸಾರಿ ನೆನಪಿಸಿಕೊಳ್ಳಿ. ಅವೆಲ್ಲಾ ಯೋಜನೆಗಳೂ ಸೋತುಹೋದ ಚಿತ್ರಗಳನ್ನು ಮೇಲೆತ್ತುವ ವಿಫಲ ಪ್ರಯತ್ನಗಳೇ ಆಗಿರುತ್ತವೆ. ಸರ್ಕಾರದ ಅನ್ನಭಾಗ್ಯ ಯೋಜನೆ ಗೆಲ್ಲಬಹುದು, ಆದರೆ ನಿರ್ಮಾಪಕರ ಟಿಕೆಟ್ ಭಾಗ್ಯ ಯೋಜನೆ ಗೆಲ್ಲುವುದು ಕಷ್ಟ. ಲಂಚದ ಆಮಿಷಕ್ಕೆ ಮತದಾರ ಬಾಗಬಹುದು, ಪ್ರೇಕ್ಷಕ ಬಾಗಲಾರ.

ಮತ್ತೆ ನನ್ನ ಬಾಲ್ಯದತ್ತ ಹೊರಳುವುದಾದರೆ ನನ್ನೂರಿಗೆ ಸಮೀಪವಿದ್ದ ಪುತ್ತೂರಿನ ‘ಅರುಣಾ’ ಥಿಯೇಟರಲ್ಲಿ ಸಾಮಾನ್ಯವಾಗಿ ಹೊಸ ಕನ್ನಡ ಚಿತ್ರಗಳು ತೆರೆಕಾಣುತ್ತಲೇ ಇರಲಿಲ್ಲ. ಬೆಂಗಳೂರಲ್ಲಿ ತೆರೆಕಂಡ ಒಂದು ಚಿತ್ರ ಪುತ್ತೂರನ್ನು ತಲುಪುವುದಕ್ಕೆ ಕನಿಷ್ಟ ಆರು ತಿಂಗಳು ಬೇಕಾಗುತ್ತಿತ್ತು. ಅಪ್ಪಿತಪ್ಪಿ ಯಾವುದಾದರೂ ಒಂದು ಚಿತ್ರ ಬೆಂಗಳೂರಲ್ಲಿ ಬಿಡುಗಡೆಯಾದ ಒಂದೇ ವಾರಕ್ಕೆ ‘ಅರುಣಾ’ದಲ್ಲಿ ಪ್ರತ್ಯಕ್ಷವಾದರೆ ಅದು ಕೆಟ್ಟಸಿನಿಮಾ ಎಂದು ಸಿನಿಮಾ ನೋಡದೇ ನಾವು ತೀರ್ಮಾನಿಸುತ್ತಿದ್ದೆವು. ಈಗ ಸ್ಯಾಟಲೈಟ್ ಮೂಲಕ ಚಿತ್ರಗಳು ಬಿಡುಗಡೆಯಾಗುವುದರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಹೊಸಚಿತ್ರವನ್ನು ಪ್ರೇಕ್ಷಕರು ನೋಡುವುದಕ್ಕೆ ಸಾಧ್ಯವಾಗುತ್ತಿದೆ. ಹಾಗೆ ನೋಡಿದರೆ ಚಿತ್ರ ಚೆನ್ನಾಗಿಲ್ಲ ಎಂದು ನಮಗಿಂತ ಮುಂಚೆಯೇ ಅನುಮಾನ ಮೂಡುವುದು ನಿರ್ಮಾಪಕನಿಗೇ. ಚಿತ್ರವೊಂದು ಮೊದಲವಾರದಲ್ಲೇ ನಿರೀಕ್ಷೆಗೆ ತಕ್ಕಂತೆ ಗಳಿಕೆಯನ್ನು ಸಂಪಾದಿಸದೇ ಇದ್ದರೆ ಅತ ಕಂಗಾಲಾಗುತ್ತಾನೆ, ಇನ್ನಷ್ಟು ದಿನ ಕಾಯುವ ವ್ಯವಧಾನ ಆತನಿಗೂ ಇರುವುದಿಲ್ಲ, ಥಿಯೇಟರ್ ಮಾಲಿಕನಿಗೂ ಇರುವುದಿಲ್ಲ. ನಿರ್ಮಾಪಕನಿಗೆ ಥಿಯೇಟರ್ ಬಾಡಿಗೆಯ ಚಿಂತೆ, ಥಿಯೇಟರ್ ಮಾಲಿಕನಿಗೆ ಖಾಲಿಸೀಟುಗಳಿಂದಾಗಿ ಸೇವಾಶುಲ್ಕದ ಸೌಲಭ್ಯದಿಂದ ವಂಚಿತನಾಗುವ ಚಿಂತೆ. ಹೀಗಾಗಿ ಕೆಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ರಿಎಡಿಟ್ ಮಾಡಿ, ಚಿತ್ರದ ಉದ್ದವನ್ನು ಕಡಿತಗೊಳಿಸುತ್ತಾರೆ, ಲ್ಯಾಗ್ ಆಗುತ್ತೆ ಅನ್ನುವ ಕಾರಣಕ್ಕೆ ಒಂದು ಹಾಡನ್ನು ಕಿತ್ತು ಹಾಕುತ್ತಾರೆ. ಅಷ್ಟಕ್ಕೂ ಈಗಿನ ಕಾಲದಲ್ಲಿ ಮೂರು ಗಂಟೆಯ ಸಿನಿಮಾವನ್ನು ನೋಡುವ ತಾಳ್ಮೆ ಪ್ರೇಕ್ಷಕನಿಗೆ ಇಲ್ಲ ಅನ್ನುವುದು ನಿರ್ಮಾಪಕರಿಗೇಕೆ ಮೊದಲೇ ಗೊತ್ತಿರುವುದಿಲ್ಲ ಅನ್ನುವುದು ಆಶ್ಚರ್ಯಕರ ಸಂಗತಿಯೇ ಸರಿ.
ಕೆಲವು ವರ್ಷದ ಹಿಂದೆ ಚಿತ್ರವೊಂದು ಐವತ್ತನೇ ದಿನ ಆಚರಿಸಿದಾಗ ಒಂದು ಹಾಡನ್ನು ಹೆಚ್ಚುವರಿಯಾಗಿ ಸೇರಿಸುವ ಪದ್ಥತಿಯಿತ್ತು. ಈಗಾಗಲೇ ಒಂದು ಸಾರಿ ನೋಡಿದ ಪ್ರೇಕ್ಷಕರನ್ನು ಮತ್ತೆ ಸೆಳೆಯುವ ತಂತ್ರವದು. ಅದಕ್ಕೆ ವಿರುದ್ಧವಾದ ತಂತ್ರ ಈಗ ಚಿತ್ರವನ್ನು ಕಾಪಾಡುವುದಕ್ಕೆ ಬಳಕೆಯಾಗುತ್ತಿದೆ. ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು ಇತ್ತೀಚಿನ ಟ್ರೆಂಡು. ಒಂದು ಚಿತ್ರವನ್ನು ಆಯ್ದ ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಿ ಆ ಬಗ್ಗೆ ಚರ್ಚೆ ಏರ್ಪಡಿಸುವುದು. ಅಲ್ಲಿ ಸಾಹಿತಿಗಳು, ಕವಿಗಳು ಮತ್ತು ಬುದ್ದಿಜೀವಿಗಳು ಚಿತ್ರದ ಗುಣಾವಗುಣಗಳ ಬಗ್ಗೆ ತಾಸುಗಟ್ಟಲೆ ಮಾತಾಡುತ್ತಾರೆ. ಇದು ಕೂಡಾ ಚಿತ್ರ ಬಿದ್ದುಹೋಗಿದೆ ಅನ್ನುವುದರ ಸೂಚನೆ.

ಕನ್ನಡ ಚಿತ್ರರಂಗದಲ್ಲಿ ಇಂಥಾ ತಂತ್ರಗಾರಿಕೆಯನ್ನು ಮೊದಲು ಪ್ರಯೋಗಿಸಿದ ಕೀರ್ತಿ ಗುಲ್ಜಾರ್ ಖಾನ್ ಎಂಬ ನಿರ್ಮಾಪಕನಿಗೆ ಸಲ್ಲಬೇಕು. 1994ನೇ ಇಸ್ವಿಯಲ್ಲಿ ‘ತನಿಖೆ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಧೂಮಕೇತುವಿನಂತೆ ಅಪ್ಪಳಿಸಿದ ಗುಲ್ಜಾರ್ ಖಾನ್ ಪತ್ರಕರ್ತರಿಗೆ ಒಂದು ಕುತೂಹಲದ ಮತ್ತು ರಂಜನೀಯ ವಸ್ತುವಾಗಿದ್ದರು. ಅವರ ರೂಪ, ಸ್ವರೂಪ, ವಿಚಿತ್ರ ಲಾಂಗ್ವೇಜ್ ಮತ್ತು ಬಾಡಿ ಲಾಂಗ್ವೇಜ್, ಪತ್ರಿಕಾಗೋಷ್ಠಿಗಳು ಇವೆಲ್ಲವೂ ಪತ್ರಕರ್ತರಿಗೆ ತಮಾಷೆಯ ಸರಕಾಗಿತ್ತು. ತನಿಖೆ ಚಿತ್ರಕ್ಕೆ ಇವರೇ ನಿರ್ಮಾಪಕ, ನಿರ್ದೇಶಕ, ನಾಯಕ, ಗೀತರಚನೆಕಾರ, ಗಾಯಕ, ಛಾಯಾಗ್ರಾಹಕ ಎಲ್ಲವೂ ಆಗಿದ್ದರು. ಹಿಂದಿ ಚಿತ್ರಕ್ಕೊಬ್ಬರೇ ಗುಲ್ಜಾರ್ ಇದ್ದಹಾಗೆ, ಕನ್ನಡಕ್ಕೊಬ್ಬರೇ ಈ ಗುಲ್ಜಾರ್ ಖಾನ್. ಅವರೊಳಗಿದ್ದ ಅಪೂರ್ವ ಕಾವ್ಯಪ್ರತಿಭೆ ತನಿಖೆ ಚಿತ್ರದಲ್ಲಿ ಹೊರಹೊಮ್ಮಿದ ರೀತಿಯ ಬಗ್ಗೆ ಎರಡು ಸ್ಯಾಂಪಲ್ಲುಗಳನ್ನು ನಿಮಗಾಗಿ ನೀಡುತ್ತಿದ್ದೇನೆಃ

ಡಾಮ್ ಡಾಮ್ ಡಿಗಾ ಡಿಗಾ..
ಎದುರಲಿ ಇಡು ನಿಗಾ..
ಇನ್ನೊಂದು ಹಾಡುಃ
ಹೋಗಿ ಮತ್ತೆ ಬರಲೇ
ಓಹ್ ಚಿನ್ನ ನಿನ್ನ ಮುತ್ತನೊಂದು ತರಲೇ
ಪ್ರೀತಿ ತುಂಬಿ ಬಂತು ಯೌವನ
ಆ ಮನಮೋಹಕ ಗೀತೆಗಳು ದೂರದರ್ಶನದ ಚಿತ್ರಮಂಜರಿ ಕಾರ್ಯಕ್ರಮದಲ್ಲಿ ದಿನಕ್ಕೆ ನಾಲ್ಕು ಬಾರಿ ಪ್ರಸಾರವಾಗುತ್ತಿದ್ದವು ಅನ್ನುವುದು ಮತ್ತೊಂದು ವಿಶೇಷ. ಆಗ ಖಾಸಗಿ ಚಾನೆಲ್ಲುಗಳು ಇಲ್ಲದೇ ಇದ್ದುದರಿಂದ ವೀಕ್ಷಕರು ತನಿಖೆಯ ಹಾಡುಗಳನ್ನು ಕಡ್ಡಾಯವಾಗಿ ಆನಂದಿಸಬೇಕಾಗಿತ್ತು. ಈಗಲೂ ನಿಮಗೆ ಪೂರ್ತಿ ಹಾಡುಗಳನ್ನು ಕೇಳುವ ಮತ್ತು ನೋಡುವ ಆಸೆಯಿದ್ದರೆ ಯೂಟ್ಯೂಬ್ ನಲ್ಲಿ ಲಭ್ಯ. ತೆರೆಯ ಮೇಲೆ ಗುಲ್ಜಾರ್ ಖಾನ್ ಸ್ಟೆಪ್ ಹಾಕುತ್ತಿದ್ದರೆ, ತೆರೆಯ ಮೂಲೆಯಲ್ಲಿ ಆ ಗೀತೆಯನ್ನು ಅವರು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುವ ದೃಶ್ಯ ಬೋನಸ್.

ಖಾನ್ ಸಾಹೇಬರಿಗೆ ವಿಪರೀತ ಪ್ರಚಾರದ ಮೋಹ. ಅದಕ್ಕೋಸ್ಕರ ಆಗಾಗ ಪತ್ರಕರ್ತರನ್ನು ಕರೆದು ಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು, ತಮ್ಮ ವಿಚಿತ್ರ ಕನ್ನಡಭಾಷೋಚ್ಛಾರದಿಂದ ನಕ್ಕುನಲಿಸುತ್ತಿದ್ದರು. ಒಂದು ದಿನ ಅವರು ಶಿವಾಜಿನಗರದ ಸಮೀಪವಿರುವ ಹೋಟೆಲ್ ಒಂದರಲ್ಲಿ ಮುಸ್ಸಂಜೆ ವಿಶೇಷ ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದರು. ಅಲ್ಲಿಗೆ ಹೋದ ಕೆಲವೇ ಕೆಲವು ಪತ್ರಕರ್ತರಿಗೆ ಅಚ್ಚರಿಯೊಂದು ಕಾದಿತ್ತು. ಇಡೀ ಹೋಟೆಲ್ಲಿನ ಎಲ್ಲಾ ಟೇಬಲ್ಲುಗಳನ್ನು ಖಾನ್ ಸಾಹೇಬರು ರಿಸರ್ವ್ ಮಾಡಿಸಿದ್ದರು. ಪತ್ರಕರ್ತರ ಹೊರತು ಬೇರಾರಿಗೂ ಪ್ರವೇಶವಿಲ್ಲ. ಬಳಕೆಯಾಗಿದ್ದು ಎರಡೇ ಟೇಬಲ್ಲುಗಳು. ಹೋಟೆಲ್ ಹೊರಗೆ ಬಣ್ಣಬಣ್ಣದ ದೀಪಗಳ ಅಲಂಕಾರವಿತ್ತು. ಒಳಗೆ ಮಹಮ್ಮದ್ ರಫಿಯ ಹಾಡುಗಳು ಪ್ಲೇ ಆಗುತ್ತಿದ್ದವು. ಇದ್ಯಾಕೆ ರಫಿ ಹೀಗೆ ಹಾಡುತ್ತಿದ್ದಾರೆ, ಅವರಿಗೆ ಶೀತವಾಗಿದೆಯಾ ಅಥವಾ ಟೇಪ್ ರೆಕಾರ್ಡರ್ ಕೆಟ್ಟುಹೋಗಿದೆಯಾ ಎಂದು ನಾವೆಲ್ಲಾ ಚಿಂತಾಕ್ರಾಂತರಾಗುತ್ತಿದ್ದಂತೆಯೇ ಖಾನ್ ಸಾಹೇಬರು ಕೇಳಿದರು. ‘ಹೇಗಿದೆ ಹಾಡುಗಳು? ಇವೆಲ್ಲವನ್ನೂ ನಾನೇ ಹಾಡಿದ್ದು’. ನಾವು ಮೂರ್ಛೆ ಹೋಗುವುದೊಂದು ಬಾಕಿ ಇತ್ತು. ಖಾನ್ ಅವರು ರಫಿ ಅಭಿಮಾನಿ ಮತ್ತು ತಮ್ಮ ಧ್ವನಿ ಥೇಟು ರಫಿಯ ಧ್ವನಿಯಂತೆಯೇ ಇದೆ ಎಂದು ನಂಬಿದ್ದರು. ಅದರ ಪ್ರಯೋಗ ಆಗಿದ್ದು ಬಡಪಾಯಿ ಪತ್ರಕರ್ತರ ಮೇಲೆ.

ಇದೇ ಗುಲ್ಜಾರ್ ಖಾನ್ ಅವರಿಂದ ನನಗಾದ ಮಾನಹಾನಿ ಬಗ್ಗೆ ಹೇಳದೇ ಇದ್ದರೆ ಈ ಅಂಕಣ ಪೂರ್ಣವಾಗುವುದಿಲ್ಲ. ತನಿಖೆ ಬಿಡುಗಡೆಯಾದ ಸಂದರ್ಭದಲ್ಲೇ ನನ್ನ ಮದುವೆಯೂ ನಡೆದುಹೋಯಿತು. ನಿನ್ನ ಮದುವೆಯಲ್ಲಿ ನೀನೇ ಹೀರೋ ಆಗಿರಬೇಕು ಕಣಯ್ಯಾ, ಸಿನಿಮಾದವರನ್ನು ಕರೆದರೆ ಅತಿಥಿಗಳ ದೃಷ್ಟಿಯಲ್ಲೇ ಅವರ ಮೇಲೆಯೇ ಇರುತ್ತದೆ. ಹಾಗಾಗಿ ನೀನು ಜ್ಯೂನಿಯರ್ ಆರ್ಟಿಸ್ಟ್ ಆಗ್ತೀಯಾ ಅಂತ ಗೆಳೆಯರೊಬ್ಬರು ನೀಡಿದ ಸಲಹೆ ಮೇರೆಗೆ ಸಿನಿಮಾದವರಿಗೆ ಯಾರಿಗೂ ಆಮಂತ್ರಣವನ್ನು ನೀಡಿರಲಿಲ್ಲ. ಮದುವೆ ಸಾಂಗವಾಗಿ ನೆರವೇರಿತು, ನಮ್ಮೂರಿನಿಂದ ಬಂಧುಬಳಗದವರು ಬಂದಿದ್ದರು, ಆವರಲ್ಲಿ ಸಿನಿಮಾ ಹುಚ್ಚರೂ ಇದ್ದರು. ನಾನು ಸಿನಿಮಾ ವರದಿಗಾರನಾಗಿದ್ದರಿಂದ ರಾಜ್ ಕುಮಾರ್, ವಿಷ್ಣುವರ್ಧನ್ ನನ್ನ ಮದುವೆಗೆ ಬರಬಹುದು ಮತ್ತು ಅವರ ಜೊತೆ ಫೋಟೋ ತೆಗೆಸಿಕೊಳ್ಳಬಹುದು ಎಂಬ ನಿರೀಕ್ಷೆಯಿಂದ ಬಂದವರೂ ಇದ್ದರು. ಅವರಿಗೆಲ್ಲ ನಿರಾಸೆ ಕಾದಿತ್ತು, ಆದರೆ ಇನ್ನೇನು ತಾಳಿ ಕಟ್ಟಬೇಕು ಅನ್ನೋವಾಗ ಅನಾಹುತವೊಂದು ನಡೆದುಹೋಯಿತು. ಗುಲ್ಜಾರ್ ಖಾನ್ ಚೌಲ್ಟ್ರಿಯೊಳಗೆ ಎಂಟ್ರಿ ಕೊಟ್ಟೇಬಿಟ್ಟರು. ಅದು ಯಾವ ಥರದ ತಿರುವು ಪಡೆದುಕೊಂಡಿತು ಅಂದರೆ ಊರಲ್ಲಿ ಒಂದು ಪುಕಾರು ಹಬ್ಬಿತು- ಉದಯನ ಮದುವೆಗೆ ಸಿನಿಮಾದವರನ್ನೆಲ್ಲಾ ಕರೆದಿದ್ದನಂತೆ, ಆದರೆ ಬಂದಿದ್ದು ಗುಲ್ಜಾರ್ ಖಾನ್ ಮಾತ್ರ. ಈಗಲೂ ಊರಲ್ಲಿ ಅದೊಂದು ಐತಿಹಾಸಿಕ ಜೋಕ್ ಆಗಿ ಉಳಿದುಕೊಂಡಿದೆ.

ಇಂತಿಪ್ಪ ಗುಲ್ಜಾರ್ ಖಾನ್ ತಮ್ಮ ‘ತನಿಖೆ’ ಬಿಡುಗಡೆಯಾದಾಗ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಹೊಚ್ಚ ಹೊಸ ಯೋಜನೆಯೊಂದನ್ನು ಅವಿಷ್ಕಾರ ಮಾಡಿದ್ದರು - ತನಿಖೆ ಚಿತ್ರ ನೋಡುವುದಕ್ಕೆ ಬಂದವರಿಗೆ ಟಿಫಿನ್ ಡಬ್ಬಾ ಉಚಿತ. ಆವತ್ತಿಂದಲೇ ಡಬ್ಬ ಪಿಕ್ಚರ್ ಎಂಬ ನುಡಿಗಟ್ಟು ಜಾರಿಗೆ ಬಂದಿರಬೇಕು ಅನ್ನುವುದು ನನ್ನ ಗುಮಾನಿ. ಸ್ವಪ್ನಾ ಥಿಯೇಟರಲ್ಲಿ ‘ತನಿಖೆ’ ಶತದಿನೋತ್ಸವ ಆಚರಿಸಿತು. ಆ ಸಂತೋಷದಲ್ಲಿ ಖಾನ್ ಸಾಹೇಬರು ಇನ್ನೊಂದು ಬಾಂಬ್ ಹಾಕಿದರು. ಸಾರಥಿ ಎಂಬ ಚಿತ್ರ ತಯಾರಿಸಲಿದ್ದು, ಅದರಲ್ಲಿ ಒಂಭತ್ತು ವಿಭಾಗಗಳನ್ನು ತಾನೇ ನೋಡಿಕೊಳ್ಳುತ್ತೇನೆ ಎಂದರು. ಈ ಬಾರಿಯಂತೂ ಪ್ರೇಕ್ಷಕರು ಅಕ್ಷರಶಃ ಗಡಗಡ ನಡುಗಿದರು. ಸಾರಥಿ ಚಿತ್ರಕ್ಕೆ ರಾಜ್ ಕುಮಾರ್ ಒಂದು ಗೀತೆಯನ್ನು ಹಾಡಿದ್ದೂ ಆಯಿತು. ಆ ಹೊತ್ತಿಗೆ ಒಂದು ಅನಾಹುತ ಆಗಿ ಖಾನ್ ಸಾಹೇಬರ ಸಿನಿಮಾ ನಿರ್ಮಾಣ ಶಾಶ್ವತವಾಗಿ ಸ್ತಗಿತಗೊಂಡಿತು.

ತಮ್ಮ ವೈವಿಧ್ಯಮಯ ಮಂಗಾಟದಿಂದ ನಮ್ಮನ್ನು ರಂಜಿಸುತ್ತಿದ್ದ ಖಾನ್ ಸಾಹೇಬರು ಒಂದು ದಿನ ಸಿನಿಮಾ ಪುಟದ ವ್ಯಾಪ್ತಿಯಿಂದಾಚೆ ಜಿಗಿದರು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಬ್ಬಾತ ಕೊಲೆಯಾಗಿ ಹೋದ, ಪೊಲೀಸರು ತನಿಖೆ ಮಾಡಿದಾಗ ಆ ಕೊಲೆಯನ್ನು ಇವರೇ ಮಾಡಿದ್ದೆಂದು ಗೊತ್ತಾಯಿತು. ನ್ಯಾಯಾಲಯ ಖಾನ್ ಸಾಹೇಬರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲಿ ಅವರ ಆರೋಗ್ಯ ಹದಗೆಟ್ಟಿತು. 2007ರಲ್ಲಿ ಪೆರೋಲ್ ಮೇಲೆ ಹೊರಬಂದ ಗುಲ್ಜಾರ್ ಖಾನ್ ಆಮೇಲೆ ಏನಾದರು?
‘ತನಿಖೆ ಚಿತ್ರದ ನಟ, ನಿರ್ಮಾಪಕ, ಗೀತರಚನೆಕಾರ, ಗಾಯಕ, ಛಾಯಾಗ್ರಾಹಕ ಎಲ್ಲವೂ ಆಗಿದ್ದ 55 ವರ್ಷ ವಯಸ್ಸಿನ ಗುಲ್ಜಾರ್ ಖಾನ್ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು. ಕೋಲಾರ ಜಿಲ್ಲೆಯ ಬೇತಮಂಗಲದವರಾದ ಗುಲ್ಜಾರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ’. ಈ ಚಿಕ್ಕ ಸುದ್ದಿ 2007ನೇ ಇಸ್ವಿ ಸೆಪ್ಟೆಂಬರ್ 3ರ ದಿನಪತ್ರಿಕೆಗಳಲ್ಲಿ ಪ್ರಕಟವಾಯಿತು.

ಅದೇನೇ ಇರಲಿ, ಖಾನ್ ಸಾಹೇಬರು ಕನ್ನಡ ಚಿತ್ರರಂಗಕ್ಕೆ ಮಾಡಿದ ಕೆಲವು ಉಪಕಾರಗಳನ್ನು ಮರೆಯುವಂತಿಲ್ಲ. ಉದಾಹರಣೆಗೆ ಡಬ್ಬಾ ಸ್ಕೀಮನ್ನು ಪರಿಚಯಿಸಿದ್ದು, ನಿರ್ಮಾಪಕನೇ ನಾಯಕನಾಗುವ ಟ್ರೆಂಡು ಹುಟ್ಟುಹಾಕಿದ್ದು, ರಿಯಲ್ ಎಸ್ಟೇಟ್ ಕುಳಗಳಿಗೆ ಸಿನಿಮಾ ನಿರ್ಮಾಪಕರಾಗುವ ಹುಚ್ಚು ಹಿಡಿಸಿದ್ದು, ಇಡೀ ಚಿತ್ರವನ್ನು ಒಬ್ಬನೇ ಆವರಿಸಿಕೊಳ್ಳಬಹುದು ಎಂಬ ಪಾಠವನ್ನು ಚಿತ್ರೋದ್ಯಮಕ್ಕೆ ಹೇಳಿಕೊಟ್ಟಿದ್ದು.....ಅವರು ನಾಯಕರಾದ ಮೇಲೆ ಕನ್ನಡದ ಇತರೇ ನಿರ್ಮಾಪಕರಿಗೂ ನಾಯಕರಾಗುವ ಧೈರ್ಯ ಬಂತು. ಡಬ್ಬಾ ಸಿನಿಮಾಗಳ ನಿರ್ಮಾಣದಲ್ಲಿ ಗಣನೀಯ ಏರಿಕೆ ಕಂಡುಬಂತು. ಈ ಮೂಲಕ ಮಿಕ್ಕೆಲ್ಲಾ ನಿರ್ಮಾಪಕರಿಗೆ ತಮ್ಮ ರೂಪದ ಬಗ್ಗೆ ಇದ್ದ ಕೀಳರಿಮೆಯನ್ನು ತೊಡೆಯುವಲ್ಲಿ ಗುಲ್ಜಾರ್ ಖಾನ್ ಅವರ ಪಾತ್ರ ಮಹತ್ವವಾದದ್ದು.

ಗುಲ್ಜಾರ್ ಖಾನ್ ಅಂಥವರನ್ನು ಗೇಲಿ ಮಾಡುವುದು ಸುಲಭ, ಆದರೆ ಚಿತ್ರೋದ್ಯಮ ಅಂಥವರನ್ನು ಒಳಗೆ ಬಿಟ್ಟುಕೊಳ್ಳುತ್ತದೆಯಲ್ಲಾ, ಅದಕ್ಕೇನಂತೀರಿ? ಖಾಸಗಿ ಚಾನೆಲ್ಲುಗಳಲ್ಲಿ ಜ್ಯೋತಿಷಿಗಳ ಕಾಟದ ಬಗ್ಗೆ ಬೈದಾಡುವವರು ಇಂಥಾ ಅಪಸವ್ಯಗಳನ್ನು ಹೇಗೆ ಸಹಿಸಿಕೊಳ್ಳುತ್ತಾರೆ. ಈಗಲೂ ವರ್ಷಕ್ಕೆ ಒಬ್ಬರೋ ಇಬ್ಬರೋ ಗುಲ್ಜಾರ್ ಖಾನ್ ಗಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮಗೆ ಕೆಲಸ ಸಿಗುತ್ತಿದೆ ಅನ್ನುವ ಕಾರಣಕ್ಕೆ ನಿರ್ದೇಶಕರು, ಅವಕಾಶ ಸಿಗುತ್ತದೆ ಅನ್ನುವ ಕಾರಣಕ್ಕೆ ನಾಯಕಿ ನಟಿಯರು ಇಂಥವರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಮುಂದೊಂದು ದಿನ ಈ ನಕಲಿ ನಿರ್ಮಾಪಕರೇ ಫಿಲಂ ಚೇಂಬರ್ ಅಥವಾ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಗೆದ್ದುಬರುತ್ತಾರೆ. ರಾಜಕೀಯಕ್ಕೂ ಸೇರುತ್ತಾರೆ. ಒಂದು ಕಾಲದಲ್ಲಿ ಅವರನ್ನು ನೋಡಿ ನಗುತ್ತಿದ್ದವರೇ ಈಗ ಅವರ ಕೃಪೆಗೆ ಪಾತ್ರರಾಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಅವರ ಯಶಸ್ಸಿನ ಹಾದಿಯೇ ಒಂದು ಕಮರ್ಷಿಯಲ್ ಸಿನಿಮಾ ಕತೆಯಂತಿರುತ್ತದೆ ಮತ್ತು ಅವರೇ ಸಿನಿಮಾ ಕತೆಗಾರರೂ ಆಗುತ್ತಾರೆ.

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.


.
 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery