` Uma Column 53 - ಪರದೇಸಿ ನಾನಾದೆನೂ ನಂಜುಂಡ.... - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Drishya image
mohanlal, ravichandran

ಕೊಂಚ ವಿಷಾದ ಮತ್ತು ಸಂತೋಷದಿಂದ ಈ ಮಾತು ಹೇಳುತ್ತಿದ್ದೇನೆ, ದಯವಿಟ್ಟು ಅನ್ಯಥಾ ಭಾವಿಸದಿರಿ. ನಾನು ಇತ್ತೀಚೆಗೆ ಮಲೆಯಾಳಂ ಸಿನಿಮಾಗಳನ್ನು ನೋಡುತ್ತಿದ್ದೇನೆ. ಭಾನುವಾರ ಸಂಜೆಯಾದರೆ ಸಾಕು, ಏಷ್ಯಾನೆಟ್, ಸೂರ್ಯ, ಕೈರಾಳಿ, ಮನೋರಮಾ, ಅಮೃತಾ. ಮುಂತಾದ ಮಲೆಯಾಳಿ ಚಾನೆಲ್ಲುಗಳನ್ನೇ ರಿಮೋಟಲ್ಲಿ ಬ್ರೌಸ್ ಮಾಡುತ್ತೇನೆ. ಮಮ್ಮೂಟ್ಟಿ, ಮೋಹನ್ ಲಾಲ್, ದಿಲೀಪ್, ಜಯರಾಂ, ಸುರೇಶ್ ಗೋಪಿ ಇವರೆಲ್ಲಾ ನನ್ನ ಮನೆಯವರೋ ಎಂಬಷ್ಟು ಆತ್ಮೀಯರಾಗಿದ್ದಾರೆ. ಅವರನ್ನು ತಮ್ಮ ಅಂದಚಂದದಿಂದ ಹಾದಿತಪ್ಪಿಸುವ ಎಣ್ಣೆಗಪ್ಪಿನ ಕೇರಳ ಸುಂದರಿಯರೂ ನನಗಿಷ್ಟವಾಗುತ್ತಿದ್ದಾರೆ. ಅವರನ್ನು ಮತ್ತು ಅವರ ಅಭಿನಯವನ್ನೂ ಕಣ್ತುಂಬಿಕೊಂಡು ರಾತ್ರಿ ನೆಮ್ಮದಿಯಿಂದ ಮಲಗುತ್ತೇನೆ. ಮಿಕ್ಕ ದಿನಗಳಲ್ಲಿ ‘ಯೂ ಟ್ಯೂಬ’ಲ್ಲೂ ಸರ್ಚ್ ಮಾಡುತ್ತೇನೆ, ನನ್ನ ಪಾಲಿಗೆ ಅದು ರಿಸರ್ಚ್ ಕೂಡಾ ಹೌದು. ಈ ವರ್ಷ ಬಿಡುಗಡೆಯಾದ ‘ರಿಂಗ್ ಮಾಸ್ಟರ್’ ಎಂಬ ಮಲೆಯಾಳದ ಹಿಟ್ ಚಿತ್ರ ಈಗಾಗಲೇ ‘ಯೂ ಟ್ಯೂಬ’ಲ್ಲಿದೆ. ಅದೇನು ಪೈರಸಿಯೋ ಸುಡುಗಾಡೋ ಗೊತ್ತಿಲ್ಲ, ಒಟ್ಟಲ್ಲಿ ನೋಡುವ ಸುಖ ನನ್ನದು.

ನಾನು ಕನ್ನಡಪ್ರಭ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿದ್ದಾಗ ವಾರಕ್ಕೆ ಎರಡು ಅಥವಾ ಮೂರು ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ನೋಡಲೇಬೇಕಾಗಿತ್ತು, ನೋಡಿದ ಮೇಲೆ ವಿಮರ್ಶೆ ಬರೆಯಲೇಬೇಕಾಗಿತ್ತು. ಇವೆರಡೂ ಕ್ರಿಯೆಗಳಿಗೆ ಸಾಕಷ್ಟು ಪರಿಶ್ರಮ, ಸಮಯ ಮತ್ತು ಸಹನೆ ಖರ್ಚಾಗುತ್ತಿದ್ದುದರಿಂದ ಇತರೇ ಭಾಷೆಗಳ ಸಿನಿಮಾ ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ವೈಯಕ್ತಿಕವಾಗಿ ನನಗಾದ ನಷ್ಟವೇನು ಅನ್ನುವುದು ಈಗ ಅರಿವಾಗುತ್ತಿದೆ. ಗಾಂಧಿನಗರದ ರಾಜಕೀಯವನ್ನೇ ತಮ್ಮ ಸೋಲು ಮತ್ತು ನಿಷ್ಕ್ರಿಯತೆಗೆ ನೆಪವಾಗಿಟ್ಟುಕೊಳ್ಳುತ್ತಿದ್ದ ನಿರ್ದೇಶಕರ ಟೊಳ್ಳುತನವೂ ಈಗ ಅರ್ಥವಾಗುತ್ತಿದೆ. ಹಾಗೆ ನೋಡಿದರೆ ತೊಂಬತ್ತರ ದಶಕದಲ್ಲಿ ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಕಮರ್ಷಿಯಲ್ ಚಿತ್ರಗಳು ತಯಾರಾಗಿದ್ದವು. ಈಗ ಲೈಫಲ್ಲಿ ಮತ್ತು ವೃತ್ತಿಯಲ್ಲಿ ಸೆಟ್ಲ್ ಆಗಿರುವ ಸ್ಟಾರ್ ಗಳ ಆರಂಭದ ಒದ್ದಾಟದ ದಿನಗಳು ಅವಾಗಿದ್ದರಿಂದ ಸಹಜವಾಗಿಯೇ ಅವರಲ್ಲೊಂದು ಕಮಿಟ್ ಮೆಂಟ್ ಇತ್ತು. ದೇಸಾಯಿ, ಶಿವಮಣಿ, ದಿನೇಶ್ ಬಾಬು, ಡಿರಾ ಬಾಬು, ಮಹೇಂದರ್, ರವಿಚಂದ್ರನ್, ಮೊದಲಾದ ನಿರ್ದೇಶಕರು ಒಳ್ಳೆಯ ಫಾರ್ಮ್ ನಲ್ಲಿದ್ದ ದಿನಗಳು ಅವು.

ಈಗ ಹಳೇ ಸ್ಟಾರುಗಳಿಗೆ ವಯಸ್ಸಾಗಿದೆ (ಅದು ಅವರ ತಪ್ಪಲ್ಲ), ಹೊಸ ಸ್ಟಾರುಗಳು ಸೃಷ್ಟಿಯಾಗಿಲ್ಲ (ಯಶ್ ಹೊರತಾಗಿ), ಈಗಿನ ನಿರ್ದೇಶಕರಿಗೆ ಮಾಧ್ಯಮದ ಮೇಲೆ ಗಟ್ಟಿಯಾದ ಹಿಡಿತವಿದ್ದರೂ ವಸ್ತುಗಳ ಆಯ್ಕೆಯಲ್ಲಿ ಸೋಲುತ್ತಿದ್ದಾರೆ. ಆ ಕೊರತೆಯನ್ನು ತಂತ್ರಜ್ಞಾನದ ವೈಭವ ಮತ್ತು ರೀಮೇಕುಗಳ ಮೂಲಕ ತುಂಬಿಕೊಳ್ಳುವ ಅವರ ಪ್ರಯತ್ನ ದಾರುಣವಾಗಿ ಸೋಲುತ್ತಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಖಾಲಿತನ ಆವರಿಸುವುದು ಎಲ್ಲಾ ಭಾಷೆಯ ಚಿತ್ರೋದ್ಯಮಗಳಲ್ಲೂ ಇದ್ದಿದ್ದೇ. ಆಗ ಹೊಸ ತಲೆಮಾರು ಸೃಷ್ಟಿಯಾಗಬೇಕು. ಅದನ್ನೇ ನ್ಯೂ ಜನರೇಷನ್ ಸಿನಿಮಾ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಅದು ಆಗಿಲ್ಲ, ಹೊಸ ತಲೆಮಾರಿನ ಪ್ರೇಕ್ಷಕರು ಬಂದಿದ್ದಾರೆ, ಅವರ ಬೇಡಿಕೆಗಳನ್ನು ಪೂರೈಸುವಂಥಾ ಸಿನಿಮಾಗಳು ಸರಬರಾಜಾಗುತ್ತಿಲ್ಲ. ಅಚ್ಚರಿಯ ಸಂಗತಿಯೆಂದರೆ ಕನ್ನಡ ಸಿನಿಮಾ ಸಂಗೀತದಲ್ಲಿ ಅಂಥಾ ಪ್ರಯತ್ನಗಳು ನಡೆಯತ್ತಿವೆ. ಗೀತಸಾಹಿತ್ಯದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ.. ಅದಕ್ಕೆ ತಕ್ಕಂತೆ ಸಿನಿಮಾಗಳಿರುವುದಿಲ್ಲ. ಭಟ್ರು, ಸೂರಿ, ಶಶಾಂಕ್ ಅವರಂಥ ನಾಲ್ಕೈದು ನಿರ್ದೇಶಕರ ಹೊರತಾಗಿ ಮಿಕ್ಕವರು ಯಾರೂ ಪೂರ್ವನಿಶ್ಚಿತ ಯೋಚನೆಗಳಿಂದಾಚೆ ಜಿಗಿಯುತ್ತಿಲ್ಲ. ಒಂದು ಕಾಲದಲ್ಲಿ ತಮ್ಮ ವಿಶಿಷ್ಟ-ವಿಚಿತ್ರ ಚಿಂತನೆಗಳಿಂದ ಚಿತ್ರರಂಗಕ್ಕೆ ಶಾಕ್ ನೀಡಿದ ಉಪೇಂದ್ರರಂಥವರೂ ಈಗ ಅದೇ ಚಿಂತನೆಗಳನ್ನೇ ರೀಸೈಕಲ್ ಮಾಡುತ್ತಿದ್ದಾರೆ. ಇವರೆಲ್ಲರನ್ನೂ ನಾನು ಮಲೆಯಾಳಂ ಸಿನಿಮಾ ನೋಡಿ ಎಂದು ವಿನಂತಿಸಿಕೊಳ್ಳುತ್ತೇನೆ.

crazy star, traffic movies

ನಮ್ಮ ಕನ್ನಡದ ಉಗ್ರ ಅಭಿಮಾನಿಗಳಲ್ಲಿ ಒಂದು ಸಮಸ್ಯೆಯಿದೆ, ಬೇರೆ ಭಾಷೆಯಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ ಎಂದು ಹೇಳಿದ ತಕ್ಷಣ ಅವರನ್ನು ಕನ್ನಡ ವಿರೋಧಿ ಎಂದು ಬ್ರಾಂಡ್ ಮಾಡುತ್ತಾರೆ. ನಾವು ಯಾರಿಗೇನು ಕಡಿಮೆ, ಕನ್ನಡದಲ್ಲೂ ಎಂಥೆಂಥಾ ಒಳ್ಳೇ ಸಿನಿಮಾ ಬರ್ತಿದೆ ಗೊತ್ತಾ, ಎಂತೆಂಥಾ ಕಲಾವಿದರಿದ್ದಾರೆ ಗೊತ್ತಾ ಎಂದು ಸವಾಲು ಹಾಕಿ ಯುದ್ಧಕ್ಕೆ ಕರೆಯುತ್ತಾರೆ. ಅಷ್ಟಕ್ಕೂ ಅಭಿಮಾನ ಹೇಗೆ ಸೃಷ್ಟಿಯಾಗುತ್ತದೆ? ಒಂದು ಸಿನಿಮಾ ಅಭೂತಪೂರ್ವ ಯಶಸ್ಸು ಕಾಣುತ್ತದೆ ಅಂತಿಟ್ಟುಕೊಳ್ಳಿ. ಆ ಸಿನಿಮಾದಲ್ಲಿ ನಟಿಸಿದ ನಾಯಕ ಜನಮೆಚ್ಚುಗೆಗೆ ಪಾತ್ರವಾಗುತ್ತಾನೆ. ನೆನಪಿರಲಿ, ಆ ಕ್ಷಣದಲ್ಲಿ ಜನ ಮೆಚ್ಚುವುದು ಅವನ ಪಾತ್ರವನ್ನು, ಆತನನ್ನಲ್ಲ. ಕಾಲಕ್ರಮೇಣ ಆತನ ಪಾತ್ರಗಳು ಅಮುಖ್ಯವಾಗಿ ಆ ನಟನೇ ಅಭಿಮಾನಿಗಳಿಗೆ ಮುಖ್ಯವಾಗುತ್ತಾ ಹೋಗುತ್ತಾನೆ. ಅಲ್ಲಿಂದಾಚೆ ಆತನನ್ನು ಅಥವಾ ಆತ ನಿರ್ವಹಿಸಿದ ಪಾತ್ರಗಳನ್ನು ಯಾರಾದರೂ ಟೀಕಿಸಿದರೆ ಅವರು ತಮ್ಮ ನಂಬಿಕೆಗಳನ್ನೇ ಅಲ್ಲಾಡಿಸುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಅನಿಸುತ್ತದೆ. ಅಂಥಾ ಕೆಲಸ ಮಾಡುವ ಯಾರನ್ನೇ ಆಗಲಿ ಅವರು ಒಪ್ಪುವುದಿಲ್ಲ. ಕನ್ನಡದಲ್ಲಿ ರೀಮೇಕು ಚಿತ್ರಗಳದ್ದೇ ಕಾರುಬಾರು ಎಂದು ಹೇಳಿದ ತಕ್ಷಣ ಈ ಮಾತು ತಮ್ಮ ಆರಾಧ್ಯದೈವವನ್ನೇ ಕುರಿತಾದದ್ದು ಎಂದು ಅವರು ಸಿಟ್ಟಾಗುತ್ತಾರೆ. ಕೋಪವಿರುವ ಜಾಗದಲ್ಲಿ ವಿವೇಚನೆಯಿರುವುದಿಲ್ಲ.

ಅಂಥವರಿಗೆ ನಾನೊಂದು ಗುಟ್ಟು ಹೇಳಬೇಕು. ನನಗೆ ಈ ಮಲೆಯಾಳಂ ಸಿನಿಮಾಗಳನ್ನು ನೋಡುವ ದುರ್ಬುದ್ದಿ ಅಥವಾ ಸದ್ಬುದ್ದಿಯನ್ನು ಕರುಣಿಸಿದ್ದು ಕನ್ನಡ ಚಿತ್ರಗಳೇ. ಇದು ನನಗೇ ಬಹಳ ಆಶ್ಚರ್ಯ ನೀಡಿದ ಸಂಗತಿ. ಈ ಹಿಂದೆ ನಾನು ಉದಯ, ಸುವರ್ಣ, ಈಟೀವಿ, ಝೀಟೀವಿಗಳಲ್ಲಿ ಕನ್ನಡ ಚಿತ್ರಳನ್ನು ನೋಡುತ್ತಿದ್ದೆ. ಇತ್ತೀಚೆಗೆ ಯಾವ ಚಾನೆಲ್ಲಲ್ಲೂ ನೋಡುವಂಥ ಸಿನಿಮಾಗಳೇ ಪ್ರಸಾರವಾಗುತ್ತಿಲ್ಲ. ಈ ಟೀವಿಯವರ ಬಳಿ ಹೊಸ ಸ್ಟಾಕ್ ಇಲ್ಲ, ಹಾಕಿದ್ದನ್ನೇ ಹಾಕುತ್ತಾರೆ. ಮಿಕ್ಕ ಚಾನೆಲ್ಲುಗಳಲ್ಲಿ ಹೊಸ ಚಿತ್ರಗಳು ಪ್ರಸಾರವಾದರೂ ಅವುಗಳಲ್ಲಿ ರೀಮೇಕೇ ಜಾಸ್ತಿ. ಅದು ಸಹಜ. ಯಾಕೆಂದರೆ ಇತ್ತೀಚೆಗೆ ಬರುತ್ತಿರುವ ಕನ್ನಡ ಚಿತ್ರಗಳಲ್ಲೂ ರೀಮೇಕಿನದ್ದೇ ಸಿಂಹಪಾಲು. ಈ ಕಿರಿಕಿರಿಯನ್ನು ತಾಳಲಾರದೇ ನಾನು ಮಲೆಯಾಳಂ ಚಾನೆಲ್ಲುಗಳಿಗೆ ಪಕ್ಷಾಂತರ ಮಾಡಬೇಕಾಯಿತು. ಈಗ ಅವುಗಳಿಗೇ ಅಡಿಕ್ಟ್ ಆಗಿದ್ದೇನೆ. ಹಾಗಂತ ಅಲ್ಲೂ ರೀಮೇಕು ಚಿತ್ರಗಳು ಬರುತ್ತಿಲ್ಲವೇ? ಹಾಗಂತ ನೀವು ಪಾಟಿಸವಾಲು ಹಾಕಬಹುದು. ನಿಜ, ಅಲ್ಲೂ ರೀಮೇಕು ಹಾವಳಿಯಿದೆ, ಅಷ್ಟೇಕೆ ಡಬ್ಬಿಂಗು ಚಿತ್ರಗಳೂ ಬರುತ್ತಿವೆ. ಆದರೆ ಕೇರಳದ ಖಡಕ್ ಚಾಯದಂತಿರುವ ತಾಜಾ ಮಲೆಯಾಳಂ ಸಿನಿಮಾಗಳ ಮುಂದೆ ಅವುಗಳ ಆಟ ನಡೆಯುವುದಿಲ್ಲ.

ಹಾಗೆ ನೋಡಿದರೆ ಮಲೆಯಾಳಂ ಚಿತ್ರಗಳ ಜೊತೆಗಿನ ನನ್ನ ನಂಟು ಬಹಳ ಹಳೆಯದು. ನನಗೆ ಸಿನಿಮಾ ಹುಚ್ಚು ಹಿಡಿಸಿದ್ದೇ ಮಲೆಯಾಳಂ ಚಿತ್ರಗಳು. ಅದರಲ್ಲೂ ಅಡೂರು, ಚಿದಂಬರಂ, ಜಾನ್ ಅಬ್ರಹಾಂ, ಐವಿ. ಶಶಿ, ಫಾಜಿಲ್ ಮೊದಲಾದವರ ರಿಯಲಿಸ್ಟಿಕ್ ಚಿತ್ರಗಳು ನನ್ನ ಮೇಲೆ ದಟ್ಟ ಪ್ರಭಾವ ಬೀರಿದವು. ಇದಲ್ಲದೇ ನಾನು ಮಲೆಯಾಳಂ ಚಿತ್ರ ನೋಡುವುದಕ್ಕೆ ಒಂದು ಐತಿಹಾಸಿಕ ಕಾರಣವೂ ಇದೆ. ನಾನು ಕೇರಳ-ಕರ್ನಾಟಕ ಗಡಿಪ್ರದೇಶದಿಂದ ಬಂದವನಾಗಿದ್ದರಿಂದ ನಮ್ಮೂರ ಪಕ್ಕ ಇದ್ದ ಟೆಂಟಿನಲ್ಲಿ ಮಲೆಯಾಳಂ ಚಿತ್ರಗಳೇ ಜಾಸ್ತಿ ಬಿಡುಗಡೆಯಾಗುತ್ತಿತ್ತು. ಮಧು, ಸೋಮನ್, ಜಯನ್. ಮೊದಲಾದ ಹೀರೋಗಳಿಗೆ ಆಗಲೇ ವಯಸ್ಸಾಗಿದ್ದರೂ ಅವರು ಸೂಪರ್ ಸ್ಟಾರ್ ಗಳಾಗಿದ್ದರು. ಆಮೇಲೆ ಮೋಹನ್ ಲಾಲ್ ಮತ್ತು ಮಮ್ಮೂಟ್ಟಿ ಪ್ರವೇಶವಾಯಿತು. ಆಗಿರಲಿಲ್ಲ. ಅನಂತರ ದಿನಗಳಲ್ಲಿ ಮೋಹನ್ ಲಾಲ್ ನನ್ನ ಫೇವರಿಟ್ ನಟ ಆಗಿಬಿಟ್ಟರು. ಈಗಲೂ ನನ್ನ ಗಾಢನಂಬಿಕೆಯೇನಂದರೆ ಇಡೀ ಭಾರತದಲ್ಲೇ ಮೋಹನ್ ಲಾಲ್ ನಂಥ ಸಹಜ ನಟನಿಲ್ಲ. IMBD (Internet Movie Database ) ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನ ಐವತ್ತು ಶ್ರೇಷ್ಠ ನಟರಲ್ಲಿ ಮೋಹನ್ ಲಾಲ್ ಹತ್ತನೆಯ ಸ್ಥಾನದಲ್ಲಿದ್ದಾರೆ.. ಅವರಾದ ಮೇಲೆ ಕಮಲಾಹಾಸನ್, ಮಮ್ಮೂಟ್ಟಿ, ನಸಿರುದ್ದೀಶ್ ಶಾ ಬರುತ್ತಾರೆ.

mammootty mohanlal during 100 years celebration

ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರು ಇಂದಿಗೂ ಕೇರಳದ ಸೂಪರ್ ಸ್ಟಾರುಗಳಾಗಿದ್ದರೂ ರಿಯಲಿಸ್ಟಿಕ್ ಚಿತ್ರಗಳಲ್ಲಿ ನಟಿಸುವುದಕ್ಕೆ ಅವರು ಹಿಂಜರಿಯುವುದಿಲ್ಲ. ಅಭಿಮಾನಿಗಳ ಒತ್ತಡಕ್ಕೆ ಮಣಿದು ತಮ್ಮ ಇಮೇಜಿಗೆ ಗಂಟುಬೀಳುವಂಥ ಆತ್ಮಘಾತುಕತನಕ್ಕೆ ಅವರು ಮುಂದಾಗುವುದಿಲ್ಲ. ನಿರ್ದೇಶಕ ಹೊಸಬನಾದರೂ ಕತೆ ಹಿಡಿಸಿದಲ್ಲಿ ಒಪ್ಪಿಕೊಳ್ಳುತ್ತಾರೆ. ಕನ್ನಡದ ಹುಡುಗ ಅಭಯ ಸಿಂಹನ ‘ಶಿಕಾರಿ’ ಚಿತ್ರದಲ್ಲಿ ಮಮ್ಮೂಟ್ಟಿ ನಟಿಸಿದ್ದೇ ಇದಕ್ಕೆ ಸಾಕ್ಷಿ. ಉದ್ಯಮದಲ್ಲಿ ತಮ್ಮ ಸ್ಥಾನ ಭದ್ರವಾಗಿಸಲು ರೀಮೇಕು ಚಿತ್ರಗಳಲ್ಲಿ ನಟಿಸುವ ಹಂಗು ಅವರಿಗಿಲ್ಲ. ಮಲೆಯಾಳಂ ಪ್ರೇಕ್ಷಕರೂ ಬುದ್ದಿವಂತರು. ಅವರು ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರ ಮೂಲಕವೇ ಮಲೆಯಾಳಂ ಚಿತ್ರಗಳನ್ನು ಗ್ರಹಿಸಿಕೊಳ್ಳುವ ಮತ್ತು ಮೆಚ್ಚಿಕೊಳ್ಳುವ ಚಟಕ್ಕೆ ಬಲಿಯಾಗಿಲ್ಲ. ದಿಲೀಪ್, ಜಯರಾಂ, ಪೃಥ್ವಿರಾಜ್ ಅವರಂಥ ಹೊಸ ಹೀರೋಗಳಿಗೂ ಅವಕಾಶ ನೀಡಿದ್ದಾರೆ.
ಇತ್ತೀಚೆಗೆ ಕನ್ನಡದಲ್ಲಿ ಬಂದ ದೃಶ್ಯ (ದೃಶ್ಯಂ), ಕ್ರೇಜಿಸ್ಟಾರ್ (ಟ್ರಾಫಿಕ್), ಒಗ್ಗರಣೆ ( ಸಾಲ್ಟ್ ಅಂಡ್ ಪೆಪ್ಪರ್ )- ಈ ಚಿತ್ರಗಳ ಮೂಲಚಿತ್ರಗಳ ನಿರ್ದೇಶಕರು ಹೊಸಬರೇ. ರಾಜೇಶ್ ಪಿಳ್ಳೆ, ರಂಜಿತ್, ಆಶಿಕ್ ಬಾಬು, ಸಲೀಮ್ ಅಹ್ಮದ್, ಇವರೆಲ್ಲ ಮಲೆಯಾಳಂ ನ್ಯೂ ಜನರೇಷನ್ ಸಿನಿಮಾದ ವಕ್ತಾರರು. ನೀವು ನೋಡಬಹುದಾದ ಕೆಲವು ಹೊಸ ಮಲೆಯಾಳಂ ಚಿತ್ರಗಳು ಇಲ್ಲಿವೆಃ ಸಿಟಿ ಆಫ್ ಗಾಡ್, ಚಪ್ಪಾ ಕುರಿಶು, ಬ್ಯೂಟಿಫುಲ್, ಫ್ರೈಡೇ, 22 ಫಿಮೇಲ್ ಕೊಟ್ಟಾಯಂ, ಸೆಕೆಂಡ್ ಶೋ, ಉಸ್ತಾದ್ ಹೋಟೆಲ್, ಮುಂಬೈ ಪೊಲೀಸ್, ನೀಲಾಕಾಶಂ ಪಚ್ಚಕಡಲ್, ಕಾಕ್ ಟೇಲ್, ಕೇರಳ ಕೆಫೆ, ಬೆಂಗಲೂರ್ ಡೇಸ್, 24 ನಾರ್ತ್ ಕದಂ, 5 ಸುಂದರಿಕ್ಕಳ್, ಕಿಳ್ಳಿ ಪೋಯ್, ಈ ಅದ್ಭುತ ಕಾಲತ್ತು, ಲೇಡೀಸ್ ಅಂಡ್ ಜಂಟಲ್ ಮ್ಯಾನ್, 101 ಚೋದ್ಯಂಗಳ್, ಗುರು, ಹೌ ಓಲ್ಡ್ ಆರ್ ಯು, ಕಾಮತ್ ಅಂಡ್ ಕಾಮತ್....

ತಮಾಷೆಯೆಂದರೆ ನನಗೆ ಮಲೆಯಾಳಿ ಭಾಷೆಯಲ್ಲಿ ಮಾತಾಡುವುದಕ್ಕೆ ಬರುವುದಿಲ್ಲ, ಆದರೆ ಅಲ್ಪಸ್ವಲ್ಪ ಅರ್ಥವಾಗುತ್ತದೆ. ಅಷ್ಟಕ್ಕೂ ಮಲೆಯಾಳಂ ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಭಾಷೆಯ ಹರಿಗೋಲು ಬೇಕಿಲ್ಲ. ಹಾಸ್ಯಚಿತ್ರಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಚಿತ್ರಗಳಲ್ಲೂ ದೃಶ್ಯಗಳಿಗೇ ಹೆಚ್ಚಿನ ಒತ್ತು. ಮಲೆಯಾಳಂ ಚಿತ್ರಗಳು ಯಾಕಿಷ್ಟ ಆಗುತ್ತವೆ ಅಂದರೆ ಅವರಿಗೆ ಬ್ಯಾಂಕಾಕ್ ಮೋಹವಿಲ್ಲ, ಅಲ್ಲಿಯೇ ಸಮುದ್ರವಿದೆ, ದೇವರು ಕರುಣಿಸಿದ ನಿಸರ್ಗದತ್ತ ಚೆಲುವಿದೆ, ಪುರಾತನ ಕಾಲದ ಬಾಜೀರ ಕಂಬದ ಮನೆಗಳಿವೆ, ತುಂಬಾ ಸರಳ ಕತೆಯನ್ನು ಸಂಕೀರ್ಣವಾಗಿಸುತ್ತಾ ಹೋಗುವ ಜಾಣ್ಮೆಯಿದೆ, ಮಲೆಯಾಳಿಗಳಿಗೆ ವಿಪರೀತ ಹಾಸ್ಯಪ್ರಜ್ಞೆಯಿದೆ, ಅದಕ್ಕೆ ವಿರುದ್ದವಾದ ಕಮ್ಯುನಿಸ್ಟ್ ಫಿಲಾಸಫಿಯನ್ನೂ ಚಿತ್ರದೊಳಗೆ ತರುವ ಬದ್ಧತೆಯೂ ಇದೆ, ಸಿನಿಮಾ ಅದ್ದೂರಿಯಾಗಿದ್ದರೆ ಜನ ನೋಡುತ್ತಾರೆ ಅನ್ನುವ ಭ್ರಮೆ ಅಲ್ಲಿನ ನಿರ್ಮಾಪಕರಿಗಿಲ್ಲ, ಇವೆಲ್ಲದರ ಜೊತೆಗೆ ಜಗತ್ತಿನಾದ್ಯಂತ ಹರಡಿರುವ ಮಲೆಯಾಳಿಗಳ ಶ್ರೀರಕ್ಷೆಯಂತೂ ಇದ್ದೇ ಇದೆ.

ಭಾಷಾ ಪ್ರೀತಿ ಮತ್ತು ಸಿನಿಮಾ ವ್ಯಾಮೋಹ- ಇವೆರಡೂ ಕೈಕೈ ಹಿಡಿದು ಸಾಗುವ ವಿಸ್ಮಯಕರ ಸಂಗತಿಯೊಂದು ಕೇರಳದಲ್ಲಿ ನಡೆಯುತ್ತಲಿದೆ. ಕನ್ನಡ ನಿರ್ದೇಶಕರು ಆಗಾಗ ಗಡಿಯಾಚೆ ಇಣುಕುವ ಹವ್ಯಾಸ ಬೆಳೆಸಿಕೊಂಡರೆ ಕನ್ನಡ ಚಿತ್ರರಂಗದ ಜೀವಕ್ಕೆ ಒಳ್ಳೆಯದು. ಅದರರ್ಥ ರೀಮೇಕು ಹಕ್ಕುಗಳನ್ನು ತೆಗೆದುಕೊಂಡು ಬನ್ನಿ ಎಂದಲ್ಲ.

Also See

Uma Column 52 - ಬಾ ಬಾರೋ ಬಾರೋ ರಣಧೀರ

Uma Column 51 - ಕದಿಯೋದೇ ನಮ್ಮ ಬಿಸಿನೆಸ್ಸು...

Uma Column 50 - ನಟಿಯರೂ ಸೇಲೇಬಲ್!

Uma Column 49 - ಮಾರಿಬಿಡಿ!

Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ

Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.
 

#

Tagaru Movie Gallery

Prema Baraha Success Meet Gallery