` Uma Column 52 - ಬಾ ಬಾರೋ ಬಾರೋ ರಣಧೀರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravichandran image
ravichandran

ಅಕಾಡೆಮಿ ಅಂದರೆ ಸಾಕು, ಜನ ಆಕಳಿಸುತ್ತಾರೆ. ಮೀಟಿಂಗುಗಳು, ಸೆಮಿನಾರುಗಳು, ಠರಾವುಗಳು, ಶಿಫಾರಸುಗಳು, ಮುಂತಾದ ಭಯಂಕರ ಬೋರು ಹೊಡೆಸುವ ಪದಗಳೆಲ್ಲವೂ ಆಕಾಡೆಮಿಯ ಸಖಿಯರು. ಅಕಾಡೆಮಿ ಮತ್ತು ನಿಗಮಗಳು ಅಂದರೆ ಸಚಿವಸ್ಥಾನದಿಂದ ವಂಚಿತರಾದ ಅತೃಪ್ತರನ್ನು ಸಂತೈಸುವುದಕ್ಕೆ ಸರ್ಕಾರ ರೂಪಿಸಿರುವ ಪುನರ್ವಸತಿ ಶಿಬಿರಗಳು ಅನ್ನುವುದು ಅಲಿಖಿತ ಸತ್ಯ.  ಸಾಹಿತ್ಯ ಮತ್ತು ಕಲೆಗೆ ಸಂಬಂಧಪಟ್ಟ ಅಕಾಡೆಮಿಗಳ ಅಧ್ಯಕ್ಷರ ವಿಷಯಕ್ಕೆ ಬಂದರೆ ಅಲ್ಲಿ ವಯಸ್ಕರು ಮತ್ತು ಮಾಜಿಗಳದ್ದೇ ಕಾರುಬಾರು. ಜಾತಿವಾರು, ಪ್ರಾದೇಶಿಕ ವಾರು, ಪಕ್ಷವಾರು ರಾಜಕೀಯಕ್ಕೆ ಫುಲ್ ಸ್ಕೋಪು. ಹಾಗಾಗಿ ಸಿನಿಮಾ ಅಕಾಡೆಮಿ ಅಸ್ತಿತ್ವಕ್ಕೆ ಬಂದಾಗ ಚಿತ್ರೋದ್ಯಮ ಮತ್ತು ಪ್ರೇಕ್ಷಕರು ಕೊಂಚ ಜೋರಾಗಿಯೇ ಆಕಳಿಸಿದ್ದರು. ಆದರೆ ಅವರು ನಿದ್ರೆಗೆ ಜಾರದಂತೆ ನೋಡಿಕೊಂಡಿದ್ದು ನಾಗಾಭರಣರ ಸಾಧನೆ. ಸಿನಿಮಾ ಸಾಧಕರ ಜೊತೆ ಪ್ರೇಕ್ಷಕರಿಗೆ ನೇರವಾಗಿ ಮಾತಾಡುವ ಅವಕಾಶವನ್ನು ಕಲ್ಪಿಸುವ ‘ಬೆಳ್ಳಿಹೆಜ್ಜೆ’, ರಾಜ್ಯದ ಪ್ರತಿಜಿಲ್ಲೆಗಳಲ್ಲೂ ಜಗತ್ತಿನ ಉತ್ಕೃಷ್ಟ ಚಿತ್ರಗಳ ಪ್ರದರ್ಶಿಸುವ ‘ಬೆಳ್ಳಿ ಮಂಡಲ’, ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಗ್ರಹಣ ಶಿಬಿರ ಮೊದಲಾದ ಹತ್ತಾರು ಕಲ್ಪನೆಗಳನ್ನು ಅವರು ಜಾರಿಗೆ ತಂದರು. ಭರಣರ ನಂತರ ಆ ಸ್ಥಾನಕ್ಕೆ ಬಂದ ತಾರಾ ಹೇಳಿಕೊಳ್ಳುವ ಸಾಧನೆಯನ್ನೇನೂ ಮಾಡಲಿಲ್ಲ.ಅವರ ಅವಧಿ ಮುಗಿಯುವ ಮೊದಲೇ ಬಿಜೆಪಿ ಸರ್ಕಾರ ಬಿದ್ದುಹೋಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂತು.  ಸರ್ಕಾರ ಬದಲಾದಾಗ ತಾರಾ ರಾಜಿನಾಮೆ ನೀಡಿದರು, ಕಳೆದ ಒಂದು ವರ್ಷದಿಂದ ಸಿನಿಮಾ ಅಕಾಡೆಮಿ ಅಧ್ಯಕ್ಷರ ಕುರ್ಚಿ ಖಾಲಿಯಾಗಿದೆ. ನಮ್ಮ ಚಿತ್ರೋದ್ಯಮದ ಬಗ್ಗೆ ಸರ್ಕಾರಕ್ಕಿರುವ ನಿಷ್ಕಾಳಜಿಗೆ ಇದೊಂದು ಉದಾಹರಣೆ ಅಷ್ಟೆ.

ಇದೀಗ ಇದ್ದಕ್ಕಿದ್ದ ಹಾಗೆ ಸಿನಿಮಾ ಅಕಾಡೆಮಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಸರ್ಕಾರ ಉತ್ಸಾಹ ತೋರುತ್ತಿರುವ ಹಿಂದೆ ಯಾವ ರಾಜಕೀಯ ಇದೆಯೋ ಗೊತ್ತಿಲ್ಲ, ಲಾಬಿಯಂತೂ ಶುರುವಾಗಿದೆ. ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾಗಿಯೇ ಬಿಟ್ಟರು ಎಂಬ ಸುದ್ದಿಯೂ ಹರಡಿತ್ತು. ಆ ಬಗ್ಗೆ ಅಧಿಕೃತ ಪ್ರಕಟಣೆ ಬಾರದೇ ಇರುವುದರಿಂದ ಇನ್ನೊಂದಿಬ್ಬರು ರೇಸಿಗೆ ಇಳಿದರು. ಅವರೇ ನಟಿ ಭಾವನಾ ಮತ್ತು ರಾಜೇಂದ್ರಸಿಂಗ್ ಬಾಬು. ಬಾಬು ಹಿಂದೆ ಕೆಲವು ನಿರ್ಮಾಪಕರಿದ್ದರೆ, ಭಾವನಾ ಹಿಂದೆ ಕಾಂಗ್ರೆಸ್ ಪಕ್ಷವಿದೆ, ಬರಗೂರು ಅವರ ಹಿಂದೆ ಸರ್ಕಾರಿ ಪ್ರಾಯೋಜಿತ ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಅನುಭವ ಇದೆ. ಆದರೆ ಸೀನಿಯಾರಿಟಿ ಆಗಲಿ, ಗ್ಲಾಮರ್ ಆಗಲಿ ಸಿನಿಮಾ ಅಕಾಡೆಮಿಯನ್ನು ಜೀವಂತವಾಗಿರಿಸುತ್ತದೆ ಅನ್ನುವ ನಂಬಿಕೆ ನನಗಂತೂ ಇಲ್ಲ.

ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಕ್ಷಣದಲ್ಲಿ ತೇಲಿಬಂದಿರುವ ಹೆಸರು ರವಿಚಂದ್ರನ್. ಇದು ಕಿವಿಗೆ ಹಿತ ಅನಿಸುವ ಸುದ್ದಿ. ತನ್ನ 54ನೆಯ ವಯಸ್ಸಲ್ಲೂ ಕನಸುಗಾರನ ಪಟ್ಟವನ್ನು ಬಿಟ್ಟುಕೊಡದ ರವಿಚಂದ್ರನ್ ಅವರ ಯೋಚನೆ-ಚಿಂತನೆಗಳೆರಡೂ ಸದಾ ತಾಜಾ. ಅಧಿಕಾರಕ್ಕಾಗಿ ಎಂದೂ ಹಪಹಪಿಸದ, ರಾಜಕೀಯದಿಂದ ಸದಾ ದೂರ ನಿಲ್ಲುವ, ಮಾತಿಗಿಂತ ಕೃತಿಯಲ್ಲೇ ಹೆಚ್ಚು ಸುಖ ಕಾಣುವ ಅವರ ಗುಣಗಳೇ ಅವರನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ನಿಮಗೆ ಗೊತ್ತಿದೆ,  ಕಲಾಂ ಅವರು ರಾಷ್ಟ್ರಪತಿಯಾಗುವ ತನಕ ಆ ಪದವಿ ರಬ್ಬರ್ ಸ್ಟಾಂಪ್ ಆಗಿತ್ತು, ಶೇಷನ್ ಚುನಾವಣಾ ಆಯೋಗದ ಮುಖ್ಯಸ್ಥರಾಗುವ ತನಕ ಅದು ನಿರ್ಜೀವ ಪದವಿಯಾಗಿತ್ತು, ಸಂತೋಷ್ ಹೆಗಡೆ ಲೋಕಾಯುಕ್ತರಾಗುವ ತನಕ ಆ ಪದವಿಯ ತಾಕತ್ತಿನ ಬಗ್ಗೆ ಜನರಿಗೆ ಗೊತ್ತೇ ಇರಲಿಲ್ಲ. ಕೆಲವು ವ್ಯಕ್ತಿಗಳು ಪದವಿಯ ಬಲದಿಂದ ಖ್ಯಾತರಾಗುತ್ತಾರೆ, ಕೆಲವು ಪದವಿಗಳು ಅವುಗಳನ್ನು ಅಲಂಕರಿಸುವವರಿಂದ ಪಾವನವಾಗುತ್ತವೆ. ಸಿನಿಮಾ ಅಕಾಡಮಿ ಜನರ ಗಮನಸೆಳೆಯಬೇಕಾದರೆ ರವಿಚಂದ್ರನ್ ಅವರಂಥಾ ಚಲನಶೀಲ ಮತ್ತು ಸೃಜನಶೀಲ ವ್ಯಕ್ತಿಗಳ ಅಗತ್ಯವಿದೆ. ಅವರು  ಎಲ್ಲೇ ಇದ್ದರೂ ಸುಮ್ಮನಿರುವವರಲ್ಲ. ಅವರನ್ನು ಒಂದು ನಿರ್ಜನ ದ್ವೀಪದಲ್ಲಿ ಬಿಟ್ಟುಬಂದರೂ ಅಲ್ಲಿ ತನ್ನಷ್ಚಕ್ಕೇ ಹಾಡುತ್ತಾ, ಅಲ್ಲಿ ಸಿಗುವ ಪರಿಕರಗಳಿಂದಲೇ ಒಂದು ಸುಂದರ ಅರಮನೆಯನ್ನು ಏಕಾಂಗಿಯಾಗಿ ಕಟ್ಟಬಲ್ಲ ಸಾಮರ್ಥ್ಯ ಮತ್ತು ಜೀವನೋತ್ಸಾಹ ಅವರಲ್ಲಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ He is a perfectionist.

 ravichandran document submitted to court

ಕೆರೆಯಲ್ಲಿ ಮೀನು ಹಿಡಿಯುವ ಪೈಕಿ ಅಲ್ಲ ಅವರು, ಅವರಿಗೆ ಸಮುದ್ರದ ಆಳದಲ್ಲಿ ಮುಳುಗಿ ಮುತ್ತುಗಳನ್ನು ಹುಡುಕುವ ತವಕ. ಅಕಾಡೆಮಿಗೆ ಇಂಥಾ ಮಹಾತ್ವಾಕಾಂಕ್ಷಿಗಳು ಬೇಕು. ಪೇಪರು, ಪೆನ್ನು, ಫೋನು, ಫೈಲುಗಳ ಜೊತೆ ಆಟವಾಡುತ್ತಾ ಛೇಂಬರಲ್ಲಿ ಸ್ಥಾವರವಾಗುವ ವ್ಯಕ್ತಿಗಳಿಗಿಂತ, ಛೇಂಬರ್ ನಿಂದ ಹೊರಬಂದು ಓಡಾಡುವ ಜಂಗಮರು ಬೇಕು. ರವಿಚಂದ್ರನ್ ಅವರಲ್ಲಿ ಈ ಗುಣಗಳಿವೆ. ಅವರು ನಾಯಕನೂ ಹೌದು, ನಿರ್ದೇಶಕನೂ ಹೌದು. ಈಶ್ವರಿಯಂಥ ಒಂದು ದೊಡ್ಡ ನಿರ್ಮಾಣ ಸಂಸ್ಥೆಯನ್ನು ಕೆಲವು ದಶಕಗಳ ಕಾಲ ನಡೆಸಿಕೊಂಡು ಬಂದ ಅನುಭವವೂ ಅವರಿಗಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ರವಿಚಂದ್ರನ್ ಏನೇ ಮಾಡಿದರೂ ಜನ ಅದನ್ನು ಕುತೂಹಲದಿಂದ ಗಮನಿಸುತ್ತಾರೆ. ಹಾಗಾಗಿ ಅದು ಸುದ್ದಿಯಾಗುತ್ತದೆ. ಭರಣರು ಅಕಾಡಮಿಯಲ್ಲಿದ್ದಾಗ ಒಳ್ಳೇ ಕೆಲಸ ಮಾಡಿದರೂ ಅವುಗಳಿಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲ ಅನ್ನುವುದನ್ನು ನಾವು ಗಮನಿಸಬೇಕು.

ರವಿಚಂದ್ರನ್ ಅವರ ಸಿನಿಮಾಸಕ್ತಿಗೆ ಮತ್ತು ಉದ್ಯಮವನ್ನು ಬೆಳೆಸಬೇಕು ಅನ್ನುವ ಕಾಳಜಿಗೆ ಉದಾಹರಣೆಯಾಗಿ ಹಳೆಯದೊಂದು ಪ್ರಸಂಗವನ್ನು ನೆನಪಿಸುತ್ತಿದ್ದೇನೆ. ಸುಮಾರು ಮೂವತ್ತೈದು ವರ್ಷದ ಹಿಂದೆ ಅಂದರೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ, ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಸರ್ಕಾರ 347 ಎಕರೆ ಜಾಗವನ್ನು ಮೀಸಲಾಗಿಟ್ಟಿತು. ಹೆಗಡೆಯವರ ಸಿನಿಮಾ ಪ್ರೀತಿಯನ್ನು ಮೆಚ್ಚಿಕೊಂಡ ಚಿತ್ರೋದ್ಯಮ ಚಪ್ಪಾಳೆ ತಟ್ಟಿತು,  ಆಮೇಲೆ ಗಡದ್ದಾಗಿ ನಿದ್ದೆ ಮಾಡಿತು. ರವಿಚಂದ್ರನ್ ಅವರೊಬ್ಬರೇ ಎಚ್ಚರವಾಗಿದ್ದರು. ತಮ್ಮ ಪಾಡಿಗೆ ಪಟ್ಟಾಗಿ ಕುಳಿತು  ಚಿತ್ರನಗರಿಯ ಒಂದು ನೀಲನಕ್ಷೆಯನ್ನು ಸಿದ್ಧಪಡಿಸಿದರು. ಅದು ಹಾಲಿವುಡ್ ಮಾದರಿಯಲ್ಲಿತ್ತು ಎಂದು ಯಾರೋ ಹೇಳಿದ ನೆನಪು. ಶಾಂತಿಕ್ರಾಂತಿ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರವಿಚಂದ್ರನ್  ಅದನ್ನು ರಾಮಕೃಷ್ಣ ಹೆಗಡೆಯವರ ಕೈಯಲ್ಲಿಟ್ಟರು, ಅದು ಫೈಲು ಸೇರಿತು. ಈ ಮಧ್ಯೆ ಹೆಗಡೆ ಅಧಿಕಾರ ಕಳೆದುಕೊಂಡರು. ರವಿಚಂದ್ರನ್ ತನ್ನ ಹಠ ಬಿಡಲಿಲ್ಲ, ದೇವೇಗೌಡರು ಮುಖ್ಯಮಂತ್ರಿಯಾದಾಗ ಮತ್ತೊಮ್ಮೆ ಸಿಪಾಯಿ ಚಿತ್ರದ ಮೂಹೂರ್ತ ಅದೇ ನೀಲನಕ್ಷೆಯನ್ನು ಅವರ ಕೈಗೆ ಕೊಟ್ಟರು.  ಗೌಡರು ನಸುನಕ್ಕು ಅದನ್ನು ಪಕ್ಕಕ್ಕಿಟ್ಟರು. ಆಮೇಲೆ ಅದ್ಯಾರು ಅಡ್ಡಗಾಲಿಟ್ಟರೋ ಏನೋ, ಒಬ್ಬ ಖಾಸಗಿ ವ್ಯಕ್ತಿ ಕೈಗೆ ಫಿಲಂಸಿಟಿಯಂಥಾ ಬೃಹತ್ ಯೋಜನೆಯನ್ನು ಒಪ್ಪಿಸುವುದು ಥರವಲ್ಲ ಎಂದು ಸರ್ಕಾರಕ್ಕೆ ಯಾರೋ ಕಿವಿಚುಚ್ಚಿದರಂತೆ. ಎಂಬಲ್ಲಿಗೆ ಚಿತ್ರನಗರಿ ಕನಸಾಗಿಯೇ ಉಳಿಯಿತು.

 ಆ ನೀಲನಕ್ಷೆಗೆ ಈಗ ಧೂಳು ಹಿಡಿದಿರಬಹುದು, ಆದರೆ ರವಿಚಂದ್ರನ್ ಅದರಿಂದೇನೂ ಹತಾಶರಾಗಲಿಲ್ಲ. ಮತ್ತೆ ಸಿನಿಮಾ ನಿರ್ದೇಶನ, ನಿರ್ಮಾಣ, ನಟನೆ ಎಂದು ಬಿಜಿಯಾದರು. ಈ ಮಧ್ಯೆ ಚಿತ್ರನಗರಿಗೆಂದು ಮೀಸಲಾಗಿಟ್ಟ ಜಾಗವನ್ನು ಸರ್ಕಾರ ತುಂಡುತುಂಡು ಮಾಡಿ ಚಲನಚಿತ್ರ ಸಂಸ್ಥೆಗೆ, ನೃತ್ಯಗ್ರಾಮಕ್ಕೆ, ಟೆಲಿವಿಷನ್ ಸಂಸ್ಥೆಗೆ ಅಂತ ಒಟ್ಟು ನಲುವತ್ತೈದು ಎಕರೆಯನ್ನು ದಾನ ಮಾಡಿತು. ಈಗ ಉಳಿದುಕೊಂಡಿರುವುದು 302 ಎಕರೆ. ಆ ಜಾಗದಲ್ಲಿ ಸೊಗಸಾದ ಹುಲ್ಲುಗಾವಲು ಇರುವುದರಿಂದ ಅದನ್ನು ಹಾಗೇ ಬಿಡುವುದು ವಾಸಿ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಸದ್ಯಕ್ಕೆ ಈ ಕೇಸ್ ನ್ಯಾಯಾಲಯದ ಮುಂದಿದೆ. ಒಟ್ಟಲ್ಲಿ ರಾಜ್ಯ ಸರ್ಕಾರ ಮತ್ತು ಕನ್ನಡ ಚಿತ್ರೋದ್ಯಮಗಳ ಅನಾಸಕ್ತಿಯಿಂದಾಗಿ ರಾಮೋಜಿ ಫಿಲಂ ಸಿಟಿ ಮಾದರಿಯ ಒಂದು ಫಿಲಂಸಿಟಿ ನಮ್ಮ ರಾಜ್ಯದಲ್ಲಿ ನಿರ್ಮಾಣವಾಗುವ ಅವಕಾಶ ನಿರ್ನಾಮವಾಗುವ ಹಂತ ತಲುಪಿದೆ.

ಇನ್ನೂ ಕಾಲಮಿಂಚಿಲ್ಲ. ರವಿಚಂದ್ರನ್ ಅವರನ್ನೇ ಸಿನಿಮಾ ಅಕಾಡೆಮಿ ಅಧ್ಯಕ್ಷರನ್ನಾಗಿಸಿ, ಫಿಲಂಸಿಟಿ ನಿರ್ಮಾಣದ ಜವಾಬ್ದಾರಿಯನ್ನು ಅಕಾಡೆಮಿಯ ತೆಕ್ಕೆಯೊಳಗೆ ಬರುವ ಹಾಗೆ ಸರ್ಕಾರ ವ್ಯವಸ್ಥೆ ಮಾಡಿದರೆ ಕನ್ನಡ ಚಿತ್ರೋದ್ಯಮಕ್ಕೆ ಬಹಳ ಉಪಕಾರವಾಗುತ್ತದೆ. ಕಾನೂನು ಈ ಬಗ್ಗೆ ಏನು ಹೇಳುತ್ತದೆಯೋ ಗೊತ್ತಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಅಕಾಡೆಮಿಯ ಯೋಜನೆಗಳು  ರಸಗ್ರಹಣ ಶಿಬಿರ, ಚಿತ್ರಪ್ರದರ್ಶನ, ಸೆಮಿನಾರುಗಳಿಗಷ್ಟೇ ಸೀಮಿತವಾಗಿರಬೇಕು ಎಂಬ ಮೂಢನಂಬಿಕೆಯಿಂದ ನಾವು ಹೊರಗೆ ಬರಬೇಕಾಗಿದೆ. ದಿಕ್ಕಿಲ್ಲದೇ ಸಾಗುತ್ತಿರುವ ಚಿತ್ರೋದ್ಯಮಕ್ಕೊಂದು ಗುರಿ ತೋರುವ ಕೆಲಸವನ್ನೂ ಅಕಾಡೆಮಿ ಮಾಡಬಹುದು. Infrastructure ಕಲ್ಪಿಸುವುದೂ ಕೂಡಾ ಅದರಲ್ಲಿ ಸೇರಿದೆ. ಚಿತ್ರನಗರಿ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದೀತು. ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗದ ಮರ್ಯಾದೆಗೆ ಈಗಾಗಲೇ ಸಾಕಷ್ಟು ಏಟಾಗಿದೆ. ಕನ್ನಡ ಚಿತ್ರರಂಗ ಎಂದರೆ  ರೀಮೇಕು, ಐಟಂಸಾಂಗು,  ಡಬ್ಬಿಂಗ್, ಪರದೇಶದಲ್ಲಿ ಶೂಟಿಂಗ್ ಅನ್ನುವಷ್ಟಕ್ಕೇ ಸೀಮಿತವಾಗಿದೆ. ಮಲ್ಟಿಪ್ಲೆಕ್ಸಿನಂಥಾ ಕ್ರಾಂತಿಯಿಂದ ಕನ್ನಡಕ್ಕೇನೂ ಲಾಭವಾಗಿಲ್ಲ.

ಇಂಥಾ ಸಂದರ್ಭದಲ್ಲಿ ರವಿಚಂದ್ರನ್ ಕನ್ನಡದ ಪಾಲಿಗೆ ಕಿಂದರಜೋಗಿಯಾಗಬಲ್ಲರೇ?ಆಗಬಹುದು ಅನ್ನುವುದು ನನ್ನ ಭಾವನೆ. ಯಾಕೆಂದರೆ ರವಿಚಂದ್ರನ್ ಈಗ ತಮ್ಮ ಅಹಂಬ್ರಹ್ಮಾಸ್ಮಿ ಧೋರಣೆಯಿಂದ ಹೊರಗೆ ಬಂದಿದ್ದಾರೆ. ಟೀಕೆಗಳನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸುತ್ತಿದ್ದಾರೆ, ಬೇರೆಯವರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿದ್ದಾರೆ. ಮಿದುವಾಗಿದ್ದಾರೆ, ಹದವಾಗಿದ್ದಾರೆ, ಮಾಗಿದ್ದಾರೆ.

ಅಕಾಡೆಮಿಗೆ ಇನ್ನೆಂಥವರು ಬೇಕು?

Also See

Uma Column 51 - ಕದಿಯೋದೇ ನಮ್ಮ ಬಿಸಿನೆಸ್ಸು...

Uma Column 50 - ನಟಿಯರೂ ಸೇಲೇಬಲ್!

Uma Column 49 - ಮಾರಿಬಿಡಿ!

Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ

Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Johnny Johnny Yes Papa Movie Gallery

Rightbanner02_statement_inside

Dalapathi Movie Gallery