` Uma Column 51 - ಕದಿಯೋದೇ ನಮ್ಮ ಬಿಸಿನೆಸ್ಸು... - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
powerstar, maanikya
puneeth rajkumar, sudeep

“ಇದು ರೀಮೇಕು ಚಿತ್ರವಾಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ” ರೀಮೇಕು ಚಿತ್ರಗಳು ಕನ್ನಡದ ಅಂಗಳಕ್ಕೆ ಕಾಲಿಟ್ಟ ದಿನದಿಂದ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ಇದೇ ಮಾತನ್ನು  ಹೇಳುತ್ತಿರುವುದನ್ನು ಓದಿ ಓದಿ ನಿಮ್ಮ ಕಣ್ಣು ಕುರುಡಾಗಿರಬಹುದು, ಕೇಳಿ ಕೇಳಿ ಸಿನಿಮಾ ಪತ್ರಕರ್ತರ ಕಿವಿ ಕಿವುಡಾಗಿರಬಹುದು. ಇದೊಂದು ರೀತಿಯಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಂತೆಅಥವಾ ರೀಮೇಕು ಮಾಡುತ್ತಿರುವ ಪಾಪಪ್ರಜ್ಞೆಯಿಂದ ಹೊರಬರುವುದಕ್ಕೆ ನಿರ್ಮಾಪಕ ಹುಡುಕಿಕೊಂಡಿರುವ ರಹದಾರಿಯಂತೆ ಕಾಣಿಸುತ್ತದೆ. ಸಿನಿಮಾ ನೋಡಿದ ನಂತರ ಅಲ್ಲಿ ಯಾವ ನೇಟಿವಿಟಿಯಾಗಲಿ, ಮಣ್ಣಿನ ವಾಸನೆಯಾಗಲಿ ಕಾಣುವುದಿಲ್ಲ. ಬದಲಾಗಿ ಮೂಲಚಿತ್ರದ ನೇಟಿವಿಟಿಯ ಘಾಟು ಡೆಟ್ಟಾಲ್ ಥರ ನಮ್ಮ ಪಂಚೇಂದ್ರಿಯಗಳನ್ನು ಆವರಿಸಿಕೊಳ್ಳುತ್ತದೆ. ವಿಷ್ಣುವರ್ಧನ್ ಅವರ ಹಗ್ಗದಂಥಾ ಮೀಸೆ, ತನ್ನ ಸ್ವಸ್ಥಾನದಿಂದ ಎದ್ದುಬಂದು ನಿಮ್ಮ ಕಣ್ಣಿಗೇ ಚುಚ್ಚುತ್ತದೆ,  ಇಂದಿನ ಹೈಸ್ಕೂಲ್ ಮಕ್ಕಳು ಕೂಡಾ ಮಾತುಮಾತಿಗೆ ‘ಮಚ್ಚಾ ಮಚ್ಚಾ’ಅನ್ನುವುದರ ಹಿಂದೆ ಇಂಥಾ ರೀಮೇಕು ಚಿತ್ರಗಳ ಕೊಡುಗೆ ಇದೆ. ನೇಟಿವಿಟಿ ಬದಲಾಯಿಸುವ ಭರವಸೆ ನೀಡಿದ ನಿರ್ದೇಶಕರು ಕೊನೆಗೆ ಬದಲಾಯಿಸಿದ್ದು ಕನ್ನಡದ ನೇಟಿವಿಟಿಯನ್ನು.

ರೀಮೇಕು ಬಗ್ಗೆ ಮಾತಾಡಿದರೆ ಇವನ್ಯಾರೋ ದ್ವಾಪರಯುಗಕ್ಕೆ ಸೇರಿದವನಿರಬೇಕು ಎಂದು ನೀವು ಭಾವಿಸುವ ಅಪಾಯ ಇದೆ ಎಂದು ಗೊತ್ತಿದ್ದರೂ ನಾನೀಗ ಈ ಇಶ್ಯೂವನ್ನು ಮತ್ತೆ ಕೆದಕುತ್ತಿರುವ ಹಿಂದೆ ಒಂದು ಉದಾತ್ತ ದ್ಯೇಯವಿದೆ. ಈ ವರ್ಷ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳಲ್ಲಿ ರೀಮೇಕು ಚಿತ್ರಗಳೇ ಜಾಸ್ತಿ ಯಶಸ್ಸು ಕಂಡಿವೆ ಎಂದು ಗೆಳೆಯರೊಬ್ಬರು ಹೇಳಿದರು. ಅದನ್ನು ಪರೀಕ್ಷಿಸಿಯೇ ಬಿಡೋಣ ಎಂದು ವೀರೇಶ್ ಅವರಿಂದ ಸಿನಿಮಾಗಳ ಪಟ್ಟಿ ತರಿಸಿಕೊಂಡೆ. ಬಿಡುಗಡೆಯಾಗಿರುವ ಎಂಭತ್ತು ಸಿನಿಮಾಗಳ ಪೈಕಿ ಇಪ್ಪತ್ತೆರಡು ಚಿತ್ರಗಳು ರೀಮೇಕ್ ಆಗಿದ್ದವು ಮತ್ತು ಸ್ಟಾರುಗಳೇ ಆ ಚಿತ್ರಗಳಲ್ಲಿ ನಟಿಸಿದ್ದರು. ಅದಕ್ಕಿಂತ ಗಾಬರಿಗೊಳಿಸಿದ ಸಂಗತಿಯೆಂದರೆ ಹಿಟ್ ಆಗಿರುವ ಎಂಟು ಚಿತ್ರಗಳಲ್ಲಿ ಆರು ಚಿತ್ರಗಳು ರೀಮೇಕು –ಚಂದ್ರಲೇಖಾ, ಒಗ್ಗರಣೆ, ದೃಶ್ಯ, ಮಾಣಿಕ್ಯ, ಅಧ್ಯಕ್ಷ, ಪವರ್. ಎರಡಷ್ಟೇ ಸ್ವಮೇಕು - ಉಗ್ರಂ, ಗಜಕೇಸರಿ. ಇದು ಖಂಡಿತಾ ಸಂಭ್ರಮಿಸುವ ಸಂಗತಿಯಲ್ಲ. ನಾವು ಖಾಲಿಯಾಗಿದ್ದೇವೆ ಅನ್ನುವುದಕ್ಕೆ ಸಂಕೇತ ಅಷ್ಟೆ.

sree murali, yash

ನಿರ್ಮಾಪಕರ ಕಣ್ಣಿಗೆ ರೀಮೇಕು ಅನ್ನುವುದು ಸೇಫ್ ಬೆಟ್, ನಿರ್ದೇಶಕರ ಪಾಲಿಗೆ ಶಾರ್ಟ್ ಕಟ್, ಪ್ರೇಕ್ಷಕನ ಪಾಲಿಗೆ ಅನಪೇಕ್ಷಿತ ಅತಿಥಿ. ಯಾವತ್ತಾದರೂ ಒಂದು ಶುಭದಿನ ಕನ್ನಡದ ಎಲ್ಲಾ ನಿರ್ಮಾಪಕರು ಒಟ್ಟಾಗಿ ನಾವು ಇವತ್ತಿಂದ ರೀಮೇಕು ಮಾಡುವುದಿಲ್ಲ ಎಂದು ಎದೆಮುಟ್ಟಿ ಆಣೆ ಮಾಡಿದರೆ, ಕನ್ನಡದಲ್ಲಿ ವರ್ಷಕ್ಕೆ ಐವತ್ತು ಸಿನಿಮಾಗಳೂ ತಯಾರಾಗುವುದು ಕಷ್ಟವಾದೀತು ( ಕನ್ನಡದ ಮಾರುಕಟ್ಟೆಗೆ ಬೇಕಾಗಿರುವುದೂ ಅಷ್ಟೇ ಸಂಖ್ಯೆಯ ಸಿನಿಮಾಗಳು ಅನ್ನುವುದು ಬೇರೆ ಮಾತು). ಹಾಗಾಗಿ ರೀಮೇಕು ಸಿನಿಮಾಗಳ ನಿರ್ಮಾಣದ ಹಿಂದೆ ಒಂದು ರಾಜಕೀಯ ಸದ್ದಿಲ್ಲದೇ ಕೆಲಸ ಮಾಡುತ್ತಿರುತ್ತದೆ. ಚಿತ್ರಗಳ ನಿರ್ಮಾಣ ಜಾಸ್ತಿಯಾದರೆ ಕಾರ್ಮಿಕನ ಕೈಗೆ ಜಾಸ್ತಿ ಕೆಲಸ ಸಿಗುತ್ತದೆ, ಥಿಯೇಟರುಗಳನ್ನು ತುಂಬುವುದಕ್ಕೆ ಜಾಸ್ತಿ ಸಿನಿಮಾಗಳೂ ಸಿಗುತ್ತವೆ, ಟೀವಿ ಚಾನೆಲ್ಲುಗಳಿಗೆ ಜಾಸ್ತಿ ಸಿನಿಮಾಗಳು ಸಿಗುತ್ತವೆ, ಪತ್ರಿಕೆಗಳಿಗೆ ಜಾಸ್ತಿ ಜಾಹಿರಾತು ಸಿಗುತ್ತದೆ. ಅದಕ್ಕೆ ಪ್ರತಿಯಾಗಿ ನಾವು ಕಳಕೊಳ್ಳುವುದೇನು? ಕನ್ನಡದ ಆತ್ಮಗೌರವ ತಾನೆ.ಹೋಗಲಿ ಬಿಡಿ, ಅದರಿಂದ ನಷ್ಟವೇನಿದೆ? ಬೇರೆ ಚಿತ್ರೋದ್ಯಮಗಳು ಕನ್ನಡ ಚಿತ್ರರಂಗವನ್ನು ರೀಮೇಕು ಇಂಡಸ್ಟ್ರಿ ಎಂದು ಗೇಲಿ ಮಾಡುತ್ತಾರೆ. ಮಾಡಲಿಬಿಡಿ, ಅದರಿಂದ ನಮಗೇನು ನಷ್ಟ? ನಮ್ಮಲ್ಲೇ ಇರುವ ಸೃಜನಶೀಲ ನಿರ್ದೇಶಕರು, ಕತೆಗಾರರು ಮೂಲೆಗುಂಪಾಗುತ್ತಾರೆ. ಆಗಲಿಬಿಡಿ, ಅಂಥವರ ಸಂಖ್ಯೆ ಎಷ್ಟಿದೆ? ಇಂಥಾ ಭಂಡ ಮತ್ತು ಮೊಂಡುವಾದವನ್ನು ಮಂಡಿಸುವ ನಟ, ನಿರ್ಮಾಪಕರ ಸಂಖ್ಯೆ ದಿನೇದಿನೇ ಜಾಸ್ತಿಯಾಗುತ್ತಿದೆ.

ಒಂದು ರೀಮೇಕು ಚಿತ್ರದ ಪತ್ರಿಕಾಗೋಷ್ಠಿಯ ಸಂಭ್ರಮವನ್ನು ಕೆಡಿಸಬೇಕು ಎಂದು ಒಬ್ಬ ಕಿಡಿಗೇಡಿ ಪತ್ರಕರ್ತ ಸಂಕಲ್ಪ ಮಾಡಿದರೆ ಆತ ಬೇರೇನೂ ಮಾಡಬೇಕಾಗಿಲ್ಲ. ‘ಯಾಕೆ ಸ್ವಾಮಿ ರಿಮೇಕು ಮಾಡ್ತಿದೀರಿ’ಎಂಬ ಪ್ರಶ್ನೆ ಒಗೆದರೆ ಸಾಕು. ನಿರ್ಮಾಪಕರ ಮುಖ ಕೆಂಪಗಾಗುತ್ತದೆ, ನಿರ್ದೇಶಕ ಕುಳಿತಲ್ಲೇ ಚಡಪಡಿಸುತ್ತಾನೆ, ನಾಯಕ ನಟ ಸಿರ್ರಂತ ರೇಗುತ್ತಾನೆ. ರೀಮೇಕಾದರೇನು, ಸ್ವಮೇಕಾದರೇನು ಒಳ್ಳೇ ಸಿನಿಮಾ ಮಾಡ್ತಿದೀವಲ್ಲ, ಅದೇ ತಾನೆ ಮುಖ್ಯ ಎಂಬ ಸಮರ್ಥನೆ ಕೇಳಿಬರುತ್ತದೆ. ಪುನೀತ್ ಹೇಳುತ್ತಾರೆಃ ‘ಕತೆ ಚೆನ್ನಾಗಿದ್ದರೆ ಮಾತ್ರ ನಾನು ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ. ಅದು ರೀಮೇಕೋ, ಸ್ವಮೇಕೋ ಅನ್ನುವುದು ನನಗೆ ಮುಖ್ಯವಾಗುವುದಿಲ್ಲ’. ಕತೆ ಚೆನ್ನಾಗಿದ್ದಕಾರಣಕ್ಕೇ ಅದು ಬೇರೆ ಭಾಷೆಯಲ್ಲಿ ಗೆದ್ದಿರುತ್ತದೆ ಅನ್ನುವುದು ಪುನೀತ್ ಅವರಿಗೂ ಗೊತ್ತು, ನಮಗೂ ಗೊತ್ತು. ಸುದೀಪ್ ಹೇಳುತ್ತಾರೆಃ ‘ನಾವು ಮಾಡುವ ರೀಮೇಕು ಮೂಲಚಿತ್ರಕ್ಕಿಂತ ಅದ್ದೂರಿಯಾಗಿರುತ್ತದೆ, ಅದಕ್ಕಿಂತ ಜಾಸ್ತಿ ದಿನ ಶೂಟಿಂಗ್ ಮಾಡುತ್ತೇವೆ, ಜಾಸ್ತಿ ಖರ್ಚು ಮಾಡುತ್ತೇವೆ’. ಒಟ್ಟಲ್ಲಿ ಕನ್ನಡ ಚಿತ್ರೋದ್ಯಮದ ಉಳಿವಿಗೆ ರೀಮೇಕು ಚಿತ್ರಗಳು ಅತ್ಯಗತ್ಯ ಎಂಬಲ್ಲಿಗೆ ಚರ್ಚೆ ಕೊನೆಗೊಳ್ಳುತ್ತದೆ. ಹಾಗಾಗಿ ಈಗಿನ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ರೀಮೇಕು ಬಗ್ಗೆ ಪ್ರಶ್ನೆ ಕೇಳುವುದಿಲ್ಲ. ಶಿವರಾಜ್ ಕುಮಾರ್ ಹೊರತಾಗಿ ಮಿಕ್ಕಾವ ನಾಯಕನಟರೂ ತಾನು ರೀಮೇಕಲ್ಲಿ ನಟಿಸುವುದಿಲ್ಲ ಎಂದು ಘೋಷಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ (ಇದೀಗ ಅವರೂ ಮನಸ್ಸು ಬದಲಾಯಿಸಿರುವ ಸುದ್ದಿ ಬಂದಿದೆ). ತನ್ನ ಹೊಚ್ಚಹೊಸ ಚಿಂತನೆಗಳಿಂದ ನಮ್ಮನ್ನು ದಂಗುಬಡಿಸಿದ್ದ ಉಪೇಂದ್ರರಂಥ ನಟ-ನಿರ್ದೇಶಕನೂ ನೋಡನೋಡುತ್ತಿದ್ದಂತೆ ರೀಮೇಕು ವ್ಯವಸ್ಥೆಯ ಒಂದು ಭಾಗವಾಗಿ ಹೋಗಿರುವ ದುರಂತ ನಮ್ಮನ್ನು ಕಾಡುವುದಿಲ್ಲ. ರೀಮೇಕು ಚಿತ್ರಗಳಿಗೂ ಸಬ್ಸಿಡಿ ಕೊಡಿ ಎಂದು ನಿರ್ಮಾಪಕರು ಸರ್ಕಾರವನ್ನು ಅಂಗಲಾಚಿದ ಸುದ್ದಿ ಓದಿಯೂ ನಮಗೆ ಅಸಹ್ಯವಾಗುವುದಿಲ್ಲ.

ನಾವೀಗ ನಕಲು ಮಾಲಲ್ಲಿ ಚೆನ್ನಾಗಿರುವುದನ್ನು ಆರಿಸಿಕೊಂಡು ಚಪ್ಪರಿಸುವುದನ್ನು ಕಲಿತಿದ್ದೇವೆ. ‘ದೃಶ್ಯ’ಚಿತ್ರದಲ್ಲಿ ರವಿಚಂದ್ರನ್ ಎಷ್ಟು ಸೊಗಸಾಗಿ ನಟಿಸಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ, ‘ಒಗ್ಗರಣೆ’ಯಲ್ಲಿಪ್ರಕಾಶ್ ರೈ ಅಭಿನಯಕೊಂಚ ಅತಿ ಎನಿಸಿದರೂ ನಕ್ಕು ನಲಿಯುತ್ತೇವೆ, ‘ಮಾಣಿಕ್ಯ’ಚಿತ್ರದಲ್ಲಿ ಸುದೀಪ್-ರವಿಚಂದ್ರನ್ ಕಾಂಬಿನೇಷನ್ ಎಷ್ಟು ಚೆನ್ನಾಗಿ ವರ್ಕೌಟ್ ಆಗಿದೆಯಲ್ವಾ ಎಂದು ಬೆರಗಾಗುತ್ತೇವೆ. ನಮ್ಮ ಸ್ಟಾರುಗಳೆಲ್ಲಾ ಪರಭಾಷಾ ಸ್ಟಾರುಗಳ ಮುಖವಾಡವನ್ನು ಮುಖಕ್ಕೆ ಮೆತ್ತಿಕೊಂಡು ನಮ್ಮ ಮುಂದೆ ಹಗಲುವೇಷಧಾರಿಗಳಂತೆ ಕುಣಿಯುತ್ತಿದ್ದಾರೆ, ನಾವು ತಾಳ ಹಾಕುತ್ತಿದ್ದೇವೆ. ‘ಉಳಿದವರು ಕಂಡಂತೆ’ಚಿತ್ರದಲ್ಲಿ ಕುಂದಾಪುರ ಕನ್ನಡವನ್ನು ಬಳಸಿದ ಬಗ್ಗೆ ನಾವು ತಕರಾರು ಮಾಡುತ್ತೇವೆ, ಆ ಪ್ರದೇಶದ ಭಾಷೆ ಯಾರಿಗೆ ಅರ್ಥ ಆಗುತ್ತೆ ಸ್ವಾಮೀ? ಆದರೆ ಮಚ್ಚಾ, ಚೂತಿಯಾ ಥರದ ಭಾಷೆಗಳು ಮಾತ್ರ ನಮಗೆ ಸುಲಭವಾಗಿ ಅರ್ಥ ಆಗುತ್ತದೆ.

ಒಂದು ರೀಮೇಕು ಚಿತ್ರ ಗೆದ್ದರೆ ನಿರ್ಮಾಪಕನಿಗೆ ಸಂತೋಷವಾಗುತ್ತದೆ, ನಿರ್ದೇಶಕನಿಗೆ ಇನ್ನೆರಡು ರೀಮೇಕು ಚಿತ್ರಗಳು ಸಿಗುತ್ತದೆ, ನಟನಿಗೆ ಸ್ಟಾರ್ ಪಟ್ಟವೇ ಒಲಿದುಬರಬಹುದು. ಆದರೆ ಅಪ್ಪಟ ಸಿನಿಮಾಪ್ರೇಮಿಗೆ ದುಃಖವಾಗುತ್ತದೆ. ನಮ್ಮ ಚಿತ್ರರಂಗದ ಬೌದ್ದಿಕ ದಿವಾಳಿತನ ಮತ್ತು ಪ್ರೇಕ್ಷಕರ ಅಸಹಾಯಕತೆಯನ್ನು ಈ ಯಶಸ್ಸು ಸೂಚಿಸುತ್ತದೆ ಎಂದು ಆತ ವಾದಿಸುತ್ತಾನೆ. ಮಿಕ್ಕವರು ಆತನ ವಾದ ಕೇಳಿ ಗಹಗಹಿಸಿ ನಗುತ್ತಾರೆ.

dr rajkumar, dr vishnuvardhan

ಕೆಲವು ವರ್ಷಗಳ ಹಿಂದೊಮ್ಮೆ ಸೂರಪ್ಪ ಬಾಬು ತಲೆಯಲ್ಲೊಂದು ಒಳ್ಳೇ ಐಡಿಯಾ ಮೊಳಕೆಯೊಡೆದಿತ್ತು. ‘ರಾಜ್ ಕುಮಾರ್ ನಟಿಸಿದ ಜನಪ್ರಿಯ ಚಿತ್ರಗಳನ್ನು ಮತ್ತೆ ರೀಮೇಕು ಮಾಡಿದರೆ ವರ್ಕೌಟ್ ಆಗಬಹುದಾ’ಎಂದು ನನ್ನಲ್ಲಿ ಒಂದು ದಿನ ಅವರು ಕೇಳಿದರು. ಅವರ ತಲೆಯಲ್ಲಿದ್ದ ಚಿತ್ರವೆಂದರೆ ‘ನಾನೊಬ್ಬ ಕಳ್ಳ’.  ಅದರಲ್ಲಿ ರಾಜ್ ಕುಮಾರ್ ನಟಿಸಿದ ಪಾತ್ರವನ್ನೇ ಈಗ ಪುನೀತ್ ಮಾಡಿದರೆ ಚೆನ್ನಾಗಿರುತ್ತದೆ ಅನ್ನೋದು ಅವರ ಯೋಚನೆಯಾಗಿತ್ತು. ನನಗೂ ಇದು ಇಷ್ಟವಾಗಿತ್ತು. ಯಾಕೆಂದರೆ ಪುನೀತ್ ಅವರಲ್ಲಿರುವ ಕಿಲಾಡಿತನಕ್ಕೆ ಆ ಪಾತ್ರ ಚೆನ್ನಾಗಿ ಹೊಂದಿಕೊಳ್ಳುತ್ತದೆ. ರಾಜ್ ಕುಮಾರ್ ಅವರ ‘ತ್ರಿಮೂರ್ತಿ’ಚಿತ್ರವನ್ನೂ ಪುನೀತ್ ಅವರ ನಾಯಕತ್ವದಲ್ಲೇ  ರೀಮೇಕು ಮಾಡಬಹುದು ಎಂದು ನಾನು ಹೇಳಿದ್ದ ನೆನಪು. ಅದ್ಯಾಕೋ ಬಾಬು ನಾನೊಬ್ಬ ಕಳ್ಳ ಚಿತ್ರವನ್ನು ರೀಮೇಕು ಮಾಡಲಿಲ್ಲ. ಆಮೇಲೆ ಹಿಂದಿ ಚಿತ್ರರಂಗದಲ್ಲಿ ಹಳೆಯ ಚಿತ್ರಗಳನ್ನು ರೀಮೇಕು ಮಾಡುವ ದೊಡ್ಡ ಟ್ರೆಂಡೇ ಸೃಷ್ಟಿಯಾಯಿತು. ಉದಾಹರಣೆಗೆ ಶೋಲೆ ಚಿತ್ರ ರೀಮೇಕಾಯಿತು.  ಇದೀಗ ‘ಖೂಬ್ ಸೂರತ್ ಚಿತ್ರವನ್ನು ರೀಮೇಕು ಮಾಡುತ್ತಿರುವ ಸುದ್ದಿ ಓದಿದೆ. ಅದಕ್ಕೆ ನಿರ್ದೇಶಕರು ನೀಡಿದ ಸಮರ್ಥನೆಯೂ ನನಗಿಷ್ಟ ಆಯಿತು.  ‘ಖೂಬ್ ಸೂರತ್’ಚಿತ್ರದಲ್ಲಿ ರೇಖಾ ಅದ್ಭುತವಾಗಿ ನಟಿಸಿದ್ದಾರೆ ಎಂಬ ಬಗ್ಗೆ ಎರಡು ಮಾತಿಲ್ಲ, ಈಗ ಅದೇ ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ಮತ್ತೊಬ್ಬ ನಟಿ ಮಾಡುವುದಕ್ಕೆ ಸಾಧ್ಯವಾಗುತ್ತೋ ಅನ್ನುವುದೂ ನನಗೆ ಗೊತ್ತಿಲ್ಲ. ಆದರೆ ಈಗ ಸಿನಿಮಾ ನೋಡುತ್ತಿರುವ ತಲೆಮಾರಿನವರಲ್ಲಿ ಎಷ್ಟು ಜನ ಖೂಬ್ ಸೂರತ್ ನೋಡಿದ್ದಾರೆ ಹೇಳಿ ನೋಡೋಣ?’.

ಇದೇ ಪ್ರಶ್ನೆಯನ್ನು ಕನ್ನಡ ಚಿತ್ರರಂಗದ ಇಂದಿನ ಸಂದರ್ಭಕ್ಕೂ ಅನ್ವಯಿಸಿಕೊಂಡರೆ ಚೆನ್ನಾಗಿರುತ್ತದೆ. ರಾಜ್, ವಿಷ್ಣುವರ್ಧನ್ ಅವರಂಥಾ ದೊಡ್ಡ ಕಲಾವಿದರು ನಟಿಸಿದ ಅದೆಷ್ಟೋ ಚಿತ್ರಗಳನ್ನು ಇಂದಿನ ಜನರೇಷನ್ನು ನೋಡಿಲ್ಲ. ಅದೇ ಚಿತ್ರಗಳನ್ನು ಈಗಿನ ಹುಡುಗರನ್ನು ನಾಯಕರನ್ನಾಗಿ ಇಟ್ಟುಕೊಂಡು ನಿರ್ಮಿಸಬಹುದು. ಹಾಗಂತ ಭೂತಯ್ಯನ ಮಗ, ಬಂಗಾರದ ಮನುಷ್ಯ ಚಿತ್ರಗಳನ್ನು ಮಾಡಿ ಎಂದು ನಾನು ಹೇಳುತ್ತಿಲ್ಲ. ಅವುಗಳ ಪಕ್ಕಾ ಹಳ್ಳಿ ಕತೆಗಳಾಗಿರುವುದರಿಂದ ಈಗಿನ ಹುಡುಗರಿಗೆ ರುಚಿಸದೇ ಇರಬಹುದು. ಆದರೆ ‘ಬಂಗಾರದ ಪಂಜರ’ಚಿತ್ರದಲ್ಲಿ ಹಳ್ಳಿಯಿಂದ ಪೇಟೆಗೆ ಬಂದು ಕಂಗಾಲಾಗುವ ಮುಗ್ಧ ಯುವಕನ ಕತೆ ಇಂದಿಗೂ ಪ್ರಸ್ತುತವಾಗಬಹುದು. ಥ್ರಿಲ್ಲರ್ ಬೇಕಾದರೆ ಭರಣರ ‘ಅನ್ವೇಷಣೆ’ಇದೆ. ‘ನಾಗರಹಾವಿ’ನ ಉಗ್ರಪ್ರೇಮಿ ರಾಮಾಚಾರಿಯ ಪಾತ್ರ ಯಶ್ ಅವರ ಇಮೇಜಿಗೆ ಸೊಗಸಾಗಿ ಹೊಂದಿಕೊಳ್ಳುತ್ತದೆ. ತಾಂತ್ರಿಕವಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದೀತು. ಉದಾಹರಣೆಗೆ ಆ ಕಾಲದಲ್ಲಿ ಮೊಬೈಲ್ ಫೋನ್, ಕಂಪ್ಯೂಟರ್ ಇರಲಿಲ್ಲ.

ನಮ್ಮದೇ ಚಿತ್ರಗಳನ್ನು ರೀಮೇಕು ಮಾಡುವುದರಿಂದ ನಮ್ಮ ಆತ್ಮಗೌರವವೂ ಉಳಿಯುತ್ತದೆ, ಹಳೆಯ ಕಾಲದ ಮೌಲ್ಯಗಳನ್ನು  ಈಗಿನ ಕಾಲಕ್ಕೆ ದಾಟಿಸಿದ ಕೀರ್ತಿಯೂ ನಿರ್ದೇಶಕನಿಗೆ ಸಲ್ಲುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ಶುದ್ಧ ಕನ್ನಡ ವಾತಾವರಣವನ್ನು ನಮ್ಮ ಸಿನಿಮಾಗಳಲ್ಲಿ ಕಟ್ಟಿಕೊಡುವ ಸತ್ಕಾರ್ಯವೂ ನಡೆಯುತ್ತದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಬೇಕು ಅಷ್ಟೆ.

Also See

Uma Column 50 - ನಟಿಯರೂ ಸೇಲೇಬಲ್!

Uma Column 49 - ಮಾರಿಬಿಡಿ!

Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ

Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery