Print 

User Rating: 0 / 5

Star inactiveStar inactiveStar inactiveStar inactiveStar inactive
 
kangalish image
100 days

ಮೊನ್ನೆ ‘ಔಟ್ ಲುಕ್’ ಪತ್ರಿಕೆಯಲ್ಲೊಂದು ಸ್ವಾರಸ್ಯಕರ ಲೇಖನ ಓದಿದೆ. ಮಲೆಯಾಳಂ ಚಿತ್ರಗಳಿಗೆ ಇಂಗ್ಲಿಷ್ ಶೀರ್ಷಿಕೆ ಇಡುವ ಬಗ್ಗೆ ಕೇರಳದಲ್ಲಿ ತಕರಾರು ಶುರುವಾಗಿದೆಯಂತೆ. ಮಲೆಯಾಳಂ ಚಿತ್ರಗಳ ಗುಣಮಟ್ಟವನ್ನು ಕಾಪಾಡುವ ಬಗ್ಗೆ  ಪ್ರಸಿದ್ಧ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ನೇತ್ವತ್ವದಲ್ಲಿ ಸರ್ಕಾರ ಒಂದು ಸಮಿತಿಯನ್ನು ನೇಮಕ ಮಾಡಿದ್ದು, ಆ ಸಮಿತಿ ತನ್ನ ವರದಿಯಲ್ಲಿ ಇಂಥಾ ಚಿತ್ರಗಳಿಗೆ ಸಬ್ಸಿಡಿ ನೀಡಬಾರದು ಎಂದು ಶಿಫಾರಸು ಮಾಡಿದೆಯಂತೆ. ಅಷ್ಟೇ ಇಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂಗ್ಲಿಷ್ ಟೈಟಲ್ ಹೊಂದಿರುವ ಚಿತ್ರಗಳನ್ನು ನಿಷೇಧಿಸಿದರೂ ತಪ್ಪಿಲ್ಲ ಎಂದಿದೆಯಂತೆ. ಮೂರು  ವರ್ಷಗಳ ಹಿಂದೆ ಕನ್ನಡದಲ್ಲೂ ಇಂಥಾದ್ದೇ ಒಂದು ವಿವಾದ ಹುಟ್ಟಿಕೊಂಡಿದ್ದು ನೆನಪಾಗಿ, ಮಲೆಯಾಳಿಗಳಲ್ಲೂ ನಮ್ಮ ಥರಾನೇ ಯೋಚಿಸುವವರು ಇದ್ದಾರಲ್ಲ ಅಂತ ಮನಸ್ಸಿಗೆ ಸಮಾಧಾನ ಆಯಿತು. ಆದರೆ ನಮ್ಮಲ್ಲಿ ಆ ನಿರ್ಧಾರ ಕೈಗೊಂಡಿದ್ದು ಫಿಲಂ ಚೇಂಬರ್ ( ಆಗ ಜಯಮಾಲಾ ಅಧ್ಯಕ್ಷರಾಗಿದ್ದರು ಎಂದು ನೆನಪು). ಆಗ ಹಲವು ನಿರ್ಮಾಪಕರು ಈ ನಡೆಯನ್ನು ವಿರೋಧಿಸಿದ್ದರು ಮತ್ತು ಆಮೇಲೆ ಆ ನಿಯಮ ಸಡಿಲವಾಗಿ ಹಲವಾರು ‘ಇಂಗ್ಲಿಷ್ ಚಿತ್ರ’ಗಳು ಕನ್ನಡದಲ್ಲಿ ತಯಾರಾದವು.

ಮಲೆಯಾಳಂ ಚಿತ್ರೋದ್ಯಮದಲ್ಲೂ ಹಲವಾರು ನಿರ್ದೇಶಕರು ಅಡೂರು ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಒಬ್ಬ ನಿರ್ದೇಶಕರ ವಾದ ನನಗಿಷ್ಟವಾಯಿತು. ‘ಇಂದಿನ ದಿನಗಳಲ್ಲಿ ನಮ್ಮ ಜನರು ಮಾತಾಡುವ ರೀತಿಯೇ ಹಾಗಿದೆ. ಅದು ಹೈಬ್ರಿಡ್ ಭಾಷೆ. ಅವರಿಗೆ ಶುದ್ಧ ಮಲೆಯಾಳಂ ಅರ್ಥವಾಗುವುದಿಲ್ಲ. ಹಾಗಾಗಿ ಟೈಟಲ್ ಅಷ್ಟೇ ಅಲ್ಲ, ಸಿನಿಮಾ ಡೈಲಾಗುಗಳಲ್ಲೂ ಇಂಗ್ಲಿಷ್ ಬಳಸುವುದು ತಪ್ಪೇನೂ ಅಲ್ಲ’. ಹೆಚ್ಚುಕಡಿಮೆ ಕನ್ನಡದ ಸ್ಥಿತಿಯೂ ಈಗ ಹಾಗೇ ಇದೆ.ರಾಜಕುಮಾರ್, ವಿಷ್ಣುವರ್ಧನ್ ಮೊದಲಾದ ಕಲಾವಿದರ ಚಿತ್ರಗಳನ್ನು ಆಸ್ವಾದಿಸುತ್ತಿದ್ದ ಒಂದು ತಲೆಮಾರು ನಮ್ಮ ಕಣ್ಣಮುಂದೆಯೇ ಕಣ್ಮರೆಯಾಗಿ ಹೋಗಿದೆ. ಈಗ ಸಿನಿಮಾ ನೋಡುವವರು ಇಂಗ್ಲಿಷ್ ಮೀಡಿಯಂನಲ್ಲಿ ಓದಿರುವ ಹುಡುಗರು ಅಥವಾ ತೀರಾ ಅನಕ್ಷರಸ್ಥರು. ಅವರಿಗೆ ಶುದ್ಧ ಕನ್ನಡ ಅರ್ಥವಾಗುವುದಿಲ್ಲ, ಆಡುಭಾಷೆಯಲ್ಲಿ ಬಳಸುವ ಕಂಗ್ಲಿಷ್ ಮಾದರಿಯೇ ಸುಲಭವಾಗಿ ಅರ್ಥವಾಗುತ್ತಿದೆ. ಮೊನ್ನೆ ದೇವನಹಳ್ಳಿಯ ರೈತನೊಬ್ಬ ತನ್ನ ಜೊತೆಗಿದ್ದವನ ಜೊತೆ ಮಾತಾಡುತ್ತಾ ಹೇಳಿದ ‘ಇಲ್ಲಿಂದ ಮಾರ್ಕೆಟ್ಟಿಗೆ ಹೋಗೋದಕ್ಕೆ ಮಿನಿಮಮ್ ಒನ್ ಅವರ್ ಆದ್ರೂ ಬೇಕಾಯ್ತದೆ. ರೋಡ್ ತುಂಬಾ ಖರಾಬ್ ಆಗಿದೆಕಣಣ್ಣ’.

 ಈ ಹಿಂದೆ ಸೀತಾರಾಮ ಕಾರಂತರ ‘ಚಂದ್ರಮುಖಿ ಪ್ರಾಣಸಖಿ’ಚಿತ್ರದ ಗೀತೆಯೊಂದರಲ್ಲಿ ಕವಿ ಕಲ್ಯಾಣ್ ‘ಪ್ರಫುಲ್ಲಿತ’ಅನ್ನುವ ಪದ ಬಳಸಿದ್ದರು. ಆ ಚಿತ್ರದ ನಾಯಕ ರಮೇಶ್ ಆ ಪದ ಕೇಳಿ ಎಷ್ಟು ಖುಶಿಯಾಗಿದ್ದರು ಅಂದರೆ ಪತ್ರಿಕಾಗೋಷ್ಠಿಗಳಲ್ಲಿ ‘ಪ್ರಫುಲ್ಲಿತ ಅನ್ನುವ ಪದವನ್ನು ನಮ್ಮ ಹಾಡುಗಳಲ್ಲಿ ಕೇಳಿ ಯಾವ ಕಾಲವಾಯಿತೋ ಏನೋ, ಕಲ್ಯಾಣ್ ಅವರಿಗೆ ಹೇಗೆ ಇಂಥಾದ್ದೆಲ್ಲಾ ಹೊಳೆಯುತ್ತದೆ’ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆದರೆ ‘ಪ್ರಫುಲ್ಲಿತ’ಸಾಮಾನ್ಯಪ್ರೇಕ್ಷಕನ ಕಿವಿಗೆ ಪಥ್ಯವಾಗಲಿಲ್ಲ, ನಾಲಿಗೆಯಲ್ಲಿ ಹೊರಳಲಿಲ್ಲ. ಸಿನಿಮಾದಲ್ಲಿ ಯಾವತ್ತೂ ವರ್ತಮಾನವೇ ಗೆಲ್ಲುವುದು, ಅಂದರೆ ಈ ದಿನಮಾನದಲ್ಲಿ ಜನರು ಆಡುವ ಭಾಷೆ ಮತ್ತು ಉಡುವ ವೇಷ. ಅದು ಕನ್ನಡದ್ದೋ, ತಮಿಳಿನದ್ದೋ ಅಥವಾ ಇಂಗ್ಲೀಷಿನದ್ದೋ ಅನ್ನುವುದರ ಬಗ್ಗೆ ಪ್ರೇಕ್ಷಕ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಕನ್ನಡ ಸಿನಿಮಾಗಳನ್ನು ಕನ್ನಡ ಸಾಹಿತ್ಯ ಪ್ರಕಾರದೊಳಗೆ ತರುವ ಪ್ರಯತ್ನವೇ ನಿರರ್ಥಕ. ಬರವಣಿಗೆಯ ಭಾಷೆಯೇ ಬೇರೆ, ಆಡುವ ಭಾಷೆಯೇ ಬೇರೆ. ಹಾಗಂತ ಭಾಷೆಯನ್ನು ಕೊಲ್ಲುವ ಬಗ್ಗೆ ನನ್ನ ವಿರೋಧವಿದೆ. ಅಲ್ಪ ಪ್ರಾಣ, ಮಹಾಪ್ರಾಣಗಳನ್ನು ನುಂಗುವ ಮಾಂಸಾಹಾರಿಗಳ ಬಗ್ಗೆ ನನಗೆ ಬೇಸರವಿದೆ.

ಕೆಲವೊಮ್ಮೆ ಶುದ್ಧ ಭಾಷೆ ಎಂಥಾ ತಮಾಷೆಗೆ ಈಡಾಗುತ್ತದೆ ಅನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ಪದಂ’ಅನ್ನುವ ನಟರೊಬ್ಬರು ನಮ್ಮ ನಡುವಿದ್ದಾರೆ. ಅವರು ಅಪ್ಪಿತಪ್ಪಿಯೂ ತಮ್ಮ ಮಾತಲ್ಲಿ ಆಂಗ್ಲ ಪದವನ್ನು ಬಳಸುವುದಿಲ್ಲ. ಇತ್ತೀಚೆಗೆ ಜಯನಗರದ ಹೋಟೆಲ್ಲೊಂದಕ್ಕೆ ಅವರು ಕಾಫಿ ಕುಡಿಯುವುದಕ್ಕೆ ಹೋಗಿದ್ದರಂತೆ. ಬಿಲ್ ಪಾವತಿ ಮಾಡಿ ಎದ್ದು ಬರುವಾಗ ಅವರ ಹಾದಿಗೆ ಅಡ್ಡವಾಗಿ ಕುಲೀನ ಮನೆತನಕ್ಕೆ ಸೇರಿದಂತೆ ಕಾಣಿಸುತ್ತಿದ್ದ ಸ್ತ್ರೀಯೊಬ್ಬರು  ನಿಂತಿದ್ದರಂತೆ. ಆ ನಟರು ಸ್ವಲ್ಪ ಹೊತ್ತು ಕಾದರು, ಮಹಿಳೆ ಗೋಡೆಯಂತೆ ಅಲ್ಲಾಡದೇ ನಿಂತೇ ಇದ್ದರು. ಕೊನೆಗೆ ನಮ್ಮ ಕನ್ನಡಪ್ರೇಮಿ ನಟರು ಮನವಿ ಮಾಡಿಕೊಂಡರು “ಹೇ ಮಾತೆ, ನಾನು ಮುಂದೆ ಸಾಗಬೇಕು.  ಕೊಂಚ ಸ್ಥಳಾವಕಾಶ ಮಾಡಿಕೊಡುತ್ತೀರಾ”. ಗಾಬರಿಯಾದ ಆಕೆ ಈ ಮನುಷ್ಯ ತನ್ನನ್ನು ಬೈಯತ್ತಿರಬೇಕು ಎಂದು ಅಪಾರ್ಥ ಮಾಡಿಕೊಂಡು ಹೋಟೆಲ್ ಮಾಲಿಕರನ್ನೇ ಕರೆದಳಂತೆ. ಅವರು ಓಡೋಡಿ ಬಂದು ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದರು. ಆ ನಟನನ್ನು ನೋಡಿದ ತಕ್ಷಣ ಅವರಿಗೆ ಎಲ್ಲವೂ ಅರ್ಥವಾಯಿತು.ಎಲ್ಲದರಲ್ಲೂ ಪರಿಪೂರ್ಣತೆಯನ್ನೇ ಬಯಸುವ ವ್ಯಕ್ತಿಗಳು ಹೇಗೆ ತಮಾಷೆಯ ವಸ್ತುವಾಗುತ್ತಾರೆ ಅನ್ನುವುದಕ್ಕೆ ಈ ಕತೆ ಹೇಳಬೇಕಾಯಿತು.

100 days

ನಮ್ಮ ಜನರು ಕಂಗ್ಲಿಷ್ ಪ್ರೇಮಿಗಳಾಗುವುದಕ್ಕೆ ಮಾಧ್ಯಮಗಳೂ ತಮ್ಮ ಕಾಣಿಕೆ ಸಲ್ಲಿಸುತ್ತಿವೆ.  ಯಶಸ್ವಿ ಸಿನಿಮಾ ಎಂಬ ಪದವನ್ನು ಯಾವ ಪತ್ರಿಕೆಯಾಗಲಿ ಅಥವಾ ಚಾನೆಲ್ಲಾಗಲಿ ಬಳಸುವುದಿಲ್ಲ, ಹಿಟ್ ಸಿನಿಮಾ ಅನ್ನುತ್ತಾರೆ. ಜನರಿಗೂ ಅದೇ ಅಭ್ಯಾಸವಾಗಿ ಹೋಗಿದೆ.  ಥಿಯೇಟರಿಂದ ಆಗಷ್ಟೇ ಸಿನಿಮಾ ನೋಡಿ ಹೊರಬರುತ್ತಿರುವ ಅನಕ್ಷರಸ್ಥ ಪಡ್ಡೆಯ ಮುಂದೆ ಕೆಮರಾ ಹಿಡಿದರೆ ಅವನು ‘ಫಿಲಂ ಸೂಪರ್’ಎಂದು ಹೆಬ್ಬರಳು ತೋರುತ್ತಾನೆ. ‘ಹಂಡ್ರೆಡ್ ಡೇಸ್ ಗ್ಯಾರಂಟಿ’ಎನ್ನುತ್ತಾನೆ. ‘ನೂರು ದಿನ ಪ್ರದರ್ಶನ ಕಾಣುವುದು ಖಚಿತ’ಎಂದು ಅದನ್ನೇ ಅನುವಾದಿಸಿದರೆ ಹೇಗಿರುತ್ತದೆ ಹೇಳಿ. ಹಾಗಾಗಿ ಈ ಕಾಲಕ್ಕೆ ಕೆ.ವಿ.ರಾಜು ಸಲ್ಲುವುದಿಲ್ಲ, ಭಟ್ಟರಂಥಾ ಕಂಗ್ಲಿಷ್ ಕವಿಗಳು ಮತ್ತು ಸಾಹಿತಿಗಳು ಸಲ್ಲುತ್ತಾರೆ. ಈ ಹಾಡು ನೋಡಿ:

ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ

ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ

ಅರ್ಧ ಟ್ಯಾಂಕ್ ಪೆಟ್ರೋಲಿತ್ತು ಬೈಕಿನಲಿ

ನೀ ಬಂದೆ ಸೈಡಿನಲಿ....

yogaraj bhat

ಈ ನಾಲ್ಕು ಸಾಲುಗಳಲ್ಲಿ ಆರು ಪದಗಳು ಇಂಗ್ಲಿಷಲ್ಲೇ ಇವೆ, ಆದರೂ ಈ ಹಾಡು ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತದೆ. ರೋಡ್ ಅನ್ನುವ ಬದಲು ರಸ್ತೆ ಎಂದು ಬಳಸಬಹುದಾಗಿತ್ತು, ಸೈಡ್ ಅನ್ನುವ ಬದಲು ಪಕ್ಕ ಅನ್ನಬಹುದಾಗಿತ್ತು. ಆದರೆ  ಆ ಪಂಚ್ ಸಿಗುವುದಿಲ್ಲ ಅನ್ನುವುದು ಭಟ್ಟರಿಗೆ ಗೊತ್ತಿದೆ. ಅವರದೇ ಇನ್ನೊಂದು ಹಾಡು ನೋಡಿಃ ‘ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫು..’ ಒಂದೇ ವಾಕ್ಯದಲ್ಲಿ ನಾಲ್ಕು ಇಂಗ್ಲಿಷ್ ಮತ್ತು ಎರಡೇ ಎರಡು ಕನ್ನಡಪದ. ಇದು ವರ್ಷದ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು.

ಹಾಗೆ ನೋಡಿದರೆ ಮಲೆಯಾಳಿಗಳು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೊಂಚ ವಿಪರೀತ ಅನ್ನುವಷ್ಟು ಮೋಹ ಬೆಳೆಸಿಕೊಂಡವರು. ಅವರು ಯಾವೂರಿಗೆ ಹೋದರೂ ಮಲೆಯಾಳಂ ಹೊರತಾಗಿ ಬೇರೆ ಭಾಷೆ ಮಾತಾಡುವುದಿಲ್ಲ. ಹಳೆಯ ಮಲೆಯಾಳಂ ಚಿತ್ರಗಳಲ್ಲಿ ಸಂಸ್ಕೃತಭೂಯಿಷ್ಟವಾದ ಮಲೆಯಾಳಂ ಭಾಷೆಯನ್ನೇ ಕಾಣಬಹುದು. ಎಂಟಿ. ವಾಸುದೇವನ್ ನಾಯರ್ ಅವರಂಥಾ ಪ್ರಸಿದ್ಧ ಕಾದಂಬರಿಕಾರರು ಸಿನಿಮಾ ಚಿತ್ರಕತೆಗಾರರಾಗಿ ಮತ್ತು ನಿರ್ದೇಶಕರಾಗಿ ಅಲ್ಲಿ ಗೆದ್ದಿದ್ದಾರೆ. ಅಂಥಾ ಮಲೆಯಾಳಿಗಳು ಕೂಡಾ ಈಗ ಬದಲಾಗಿದ್ದಾರೆ ಅಂದರೆ ಅಡೂರಿಗೆ ತಲೆಬಿಸಿಯಾಗದೇ ಇರುತ್ತಾ. ಅಂಕಿಅಂಶಗಳು ಹೇಳುವ ಪ್ರಕಾರ ಕಳೆದ ಐದು ವರ್ಷದಲ್ಲಿ ಮಲೆಯಾಳಂನಲ್ಲಿ ಬಿಡುಗಡೆಯಾದ 726 ಚಿತ್ರಗಳ ಪೈಕಿ 425 ಚಿತ್ರಗಳಿಗೆ ಇಂಗ್ಲಿಷ್ ಶೀರ್ಷಿಕೆಯನ್ನೇ ಬಳಸಲಾಗಿದೆ. ಉದಾಹರಣೆಗೆ - ರನ್ ಬೇಬಿ ರನ್, ಹೈಡ್ ಎನ್ ಸೀಕ್, ಬ್ಯಾಂಕಿಂಗ್ ಅವರ್ಸ್ 10 ಟು 4, ಆಂಗ್ರಿ ಬೇಬೀಸ್ ಇನ್ ಲವ್, ಫಿಲಿಪ್ಸ್ ಮಂಕಿ ಪೆನ್, ಲಾಸ್ಟ್ ಬೆಂಚ್, ಮ್ಯಾಡ್ ಡ್ಯಾಡ್, ಚೂಯಿಂಗ್ ಗಮ್, ಲೇಡೀಸ್ ಅಂಡ್ ಜಂಟಲ್ ಮ್ಯಾನ್, ಜಿಂಜರ್...

ಕೆಲವು ವರ್ಷಗಳ ಹಿಂದೆ ಪದ್ಮರಾಜನ್ ಎಂಬ ಸಾಹಿತಿ ಕಂ ನಿರ್ದೇಶಕರು ‘ದೇಶದಾನ ಕಿಳ್ಳಿ ಕರಯರಿಲ್ಲ’(ವಲಸೆ ಬಂದ ಹಕ್ಕಿಗಳು ಅಳುವುದಿಲ್ಲ) ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಸಲಿಂಗಕಾಮಿಗಳ ಸಮಸ್ಯೆಯನ್ನು ನಿರೂಪಿಸುವ ಚಿತ್ರಕ್ಕೆ ಅದಕ್ಕಿಂತ ಸೊಗಸಾದ ಶೀರ್ಷಿಕೆ ಇಡುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಈಗಿನ ನಿರ್ದೇಶಕರು ಕತೆಗೆ ತಕ್ಕ ಟೈಟಲ್ ಹುಡುಕುವುದಿಲ್ಲ, ಬದಲಾಗಿ ಟೈಟಲ್ಲಿಗೂ ಸಿನಿಮಾಗೂ ಸಂಬಂಧವಿಲ್ಲದೇ ಇದ್ದರೂ ಪರವಾಗಿಲ್ಲ, ಅದು ಕ್ಯಾಚಿಯಾಗಿರಬೇಕು ಎಂದು ಬಯಸುತ್ತಾರೆ. ಆದಕ್ಕೆ ಕಾರಣ ಈಗಿನ ನಿರ್ದೇಶಕರು ಮಾರ್ಕೆಟಿಂಗ್ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿದೆ. ಇಂಗ್ಲಿಷಲ್ಲಾದರೆ ಚುಟುಕಾಗಿರುವ ಟೈಟಲ್ ಸಿಗುತ್ತದೆ. ಪೋಸ್ಟರಿನಲ್ಲೂ ಅದು ಚೆನ್ನಾಗಿ ಕಾಣಿಸುತ್ತದೆ ಎಂಬ ಲೆಕ್ಕಾಚಾರ. ಆದರೆ ಅಡೂರ್ ಅಂಥವರು ಈ ವಾದ ಒಪ್ಪುವುದಿಲ್ಲ. ಈಗಿನ ಚಿತ್ರಕತೆಗಾರರಿಗೆ ತಮ್ಮ ಮಾತೃಭಾಷೆಯ ಜೊತೆ ಆಳವಾದ ಸಂಬಂಧವಿರುವುದಿಲ್ಲ, ಒಳ್ಳೆಯ ಓದು ಕೂಡಾ ಇರುವುದಿಲ್ಲ. ಆ ಕಾರಣಕ್ಕೆ ಅವರು ಇಂಗ್ಲಿಷ್ ಗೆ ಶರಣಾಗುತ್ತಿದ್ದಾರೆ ಅನ್ನುವುದು ಅವರ ಆಕ್ಷೇಪಣೆ.ಆದರೆ ಗ್ರಾಂಡ್ ಮಾಸ್ಟರ್ ಅನ್ನುವ ಟೈಟಲ್ಲಿಗೆ ಸೂಕ್ತ ಮಲೆಯಾಳಂ ಶೀರ್ಷಿಕೆ ಎಲ್ಲಿ ಸಿಗುತ್ತದೆ?

ಅಂತ್ಯವೇ ಇಲ್ಲದ ವಾದವಿದು. ಆದರೆ ವಾಸ್ತವಕ್ಕೆ ಬಂದರೆ ಶರಪಂಜರ, ಬೆಳ್ಳಿಮೋಡ, ನೀ ಬರೆದ ಕಾದಂಬರಿ, ಮಾನಸಸರೋವರ, ಸುಪ್ರಭಾತ, ನಮ್ಮೂರ ಮಂದಾರ ಹೂವೆ, ಮುಂಗಾರು ಮಳೆ,  ಇಂಥಾ ಸುಂದರ ಶೀರ್ಷಿಕೆಗಳು ಇನ್ನು ಮುಂದೆ ಕಾಣಿಸುವುದು ಕಷ್ಟವಾದೀತು. ಈಗೇನಿದ್ದರೂ ಅಣ್ಣಾ ಬಾಂಡ್, ಮೆಂಟಲ್ ಮಂಜ, ಡೆಡ್ಲಿ ಸೋಮಂದಿರ ಕಾಲ. ನಮ್ಮ ಕಾಲವೇ ಚೆನ್ನಾಗಿತ್ತು ಎಂದು ಕೊರಗುವ ಹಾಗಿಲ್ಲ, ಈಗಿನ ಕಾಲವೇ ಸರಿ ಎಂದು ಕರಗಬೇಕು.

‘ಗಂಡಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ’ಅನ್ನುವವರಿಗೆ ಇಲ್ಲಿ ಪ್ರವೇಶವಿಲ್ಲ. ಯಾಕೆಂದರೆ ಇದು ಕಂಗ್ಲಿಷ್ ಕ್ಲಬ್.

Also See

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.