Print 

User Rating: 0 / 5

Star inactiveStar inactiveStar inactiveStar inactiveStar inactive
 
celebrity sons images
movie stars

ಎಂಬಲ್ಲಿಗೆ ಒಂದು ತಲೆಮಾರು ಮುಗಿದು, ಇನ್ನೊಂದು ತಲೆಮಾರು ಶುರುವಾಯಿತು ಅನ್ನುತ್ತೇವೆ. ಇಂಥಾ ಘಟನೆಗಳು ಸಾಮಾನ್ಯವಾಗಿ ಸಂಭವಿಸುವುದು ರಾಜಕೀಯ ಮತ್ತು ಸಿನಿಮಾ ರಂಗಗಳಲ್ಲಿ. ಕ್ರಿಕೆಟ್ಟಲ್ಲಿ ಇದು ಸಾಧ್ಯವಿಲ್ಲ. ತಂದೆ ಎಷ್ಟೇ ದೊಡ್ಡ ಆಟಗಾರನಾದರೂ ತನ್ನ ಮಗನನ್ನು ಹಾಕಿಕೊಂಡು ತಾನೇ ಒಂದು ತಂಡವನ್ನು ಕಟ್ಟುವ ಅವಕಾಶ ಆತನಿಗಿರುವುದಿಲ್ಲ. ಹಾಗಿದ್ದಿದ್ದರೆ ಗಾವಸ್ಕರ್ ಪುತ್ರ ರೋಹನ್ ದೊಡ್ಡ ಆಟಗಾರನಾಗಬೇಕಾಗಿತ್ತು. ಬ್ರಿಜೇಶ್ ಪಟೇಲ್ ಪುತ್ರ ಉದಿತ್ ಪಟೇಲ್ ಕೂಡಾ ಮಿಂಚಬೇಕಾಗಿತ್ತು. ಹಾಗಿದ್ದೂ ಅವರು ಅಲ್ಪಸ್ವಲ್ಪ ಪ್ರಭಾವ ಬೀರಿ ರಣಜಿ ಟ್ರೋಫಿ ತನಕ ತಮ್ಮ ಮಕ್ಕಳನ್ನು ಕೊಂಡೊಯ್ಯುತ್ತಾರೆ, ಅಲ್ಲಿಂದಾಚೆಗೆ ಪ್ರತಿಭೆಯೇ ಅವರನ್ನು ಪೊರೆಯಬೇಕು.

ರಾಜಕೀಯದಲ್ಲಿ ಅಪ್ಪನೇ ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ, ತನ್ನ ಕ್ಷೇತ್ರವನ್ನು ಮಗನಿಗೆ ಬಿಟ್ಚು ಕೊಡುತ್ತಾನೆ, ಪಕ್ಷದಲ್ಲಿ ತನಗಿರುವ ಪ್ರಭಾವವನ್ನು ಬಳಸಿಕೊಂಡು ಮಗನನ್ನು ಎತ್ತರಕ್ಕೆ ಬೆಳೆಸುತ್ತಾನೆ. ಸಿನಿಮಾದಲ್ಲಿ ತಂದೆಯೇ ನಿರ್ಮಾಪಕನಾಗಿ ಮಗನನ್ನು ನಾಯಕನ ಪಟ್ಟದಲ್ಲಿ ಕೂರಿಸುತ್ತಾನೆ. ಆತನಿಗೆ ಆ ಯೋಗ್ಯತೆ ಇದೆಯೋ ಇಲ್ಲವೋ ಅನ್ನುವುದು ಮುಖ್ಯವಾಗುವುದಿಲ್ಲ. ಉದಾಹರಣೆಗೆ ಎನ್ಟಿಆರ್ ಪುತ್ರ ಬಾಲಕೃಷ್ಣ ಒಬ್ಬ ಸ್ಟಾರ್ ಆಗಿ ಬೆಳೆದದ್ದು ಕೇವಲ ಅಪ್ಪನ ನಾಮದ ಬಲದಿಂದ.  ಈಗ ಜೂನಿಯರ್ ಎನ್ಟಿಆರ್ ಜಮಾನ.  ಆಂಧ್ರ ಮತ್ತು ತಮಿಳ್ನಾಡಿನ ಜನರು ತಮ್ಮ ಕಲಾಭಿರುಚಿಗಿಂತಲೂ ನಿಯತ್ತಿಗೆ ಹೆಸರುವಾಸಿ. ಅದು ರಾಜಕೀಯ ಇರಬಹುದು, ಸಿನಿಮಾವೇ ಇರಬಹುದು. ಅಪ್ಪನಿಗೆ ತೋರಿದ ನಿಷ್ಠೆಯನ್ನೇ ಮಗನಿಗೂ ತೋರುತ್ತಾರೆ. ಆ ಕಾರಣಕ್ಕೆ ತಾರಾ ಮಕ್ಕಳೇ ಅಲ್ಲಿಯ ಚಿತ್ರರಂಗವನ್ನು ಆಳುತ್ತಿದ್ದಾರೆ.

ಭಾರತದಲ್ಲಿ ಸಿನಿಮಾಕ್ಕೇ ಅರ್ಪಣೆಯಾದ ದೊಡ್ಡ ಕುಟಂಬವೆಂದರೆ ರಾಜ್ ಕಪೂರ್ ಅವರದು. ಪೃಥ್ವಿ ರಾಜ್ ಕಪೂರ್ ಅವರಿಂದ ಶುರುವಾಗುವ  ಈ ವಂಶಾವಳಿಯ ಪ್ರವರ ರಾಜ್ ಕಪೂರ್, ರಣಧೀರ್ ಕಪೂರ್, ಶಶಿಕಪೂರ್, ಶಮ್ಮಿ ಕಪೂರ್, ಋಷಿ ಕಪೂರ್,  ಕುನಾಲ್, ರಣಬೀರ್, ಸಂಜನಾ,  ಕರಿಷ್ಮಾ, ಕರೀನಾ, ಹೀಗೇ ಕೊನೆಯಿಲ್ಲದಂತೆ ಸಾಗುತ್ತಲೇ ಇದೆ. ತೆಲುಗಲ್ಲಿ ಅಕ್ಕಿನೇನಿ, ನಾಗಾರ್ಜುನ, ನಾಗಚೈತನ್ಯ – ಈ ಮೂರು ತಲೆಮಾರುಗಳೂ ಒಂದೇ ಚಿತ್ರದಲ್ಲಿ ನಟಿಸುತ್ತಾರೆ. ಕನ್ನಡದಲ್ಲಿ ರಾಜ್ ಕುಮಾರ್ ಮಕ್ಕಳು ತಂದೆಯ ನಾಮದ ಬಲ ಮತ್ತು ತಮ್ಮ ಸ್ವಯಂ ಪ್ರತಿಭೆ ಇವೆರಡನ್ನೂ ಬಳಸಿಕೊಂಡು ಬೆಳೆದು ನಿಲ್ಲುತ್ತಾರೆ. ಈಗ ಅಲ್ಲೂ ಮೂರನೇಯ ತಲೆಮಾರು ಪ್ರವೇಶವಾಗಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ನಾಯಕನಾಗುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್,  ಶಕ್ತಿಪ್ರಸಾದ್ ಪುತ್ರ ಅರ್ಜುನ್ ಸರ್ಜಾ ಮತ್ತು ಪುತ್ರಿಯ ಮಕ್ಕಳಾದ ಚಿರು ಹಾಗೂ ಧ್ರುವ, ಜಗ್ಗೇಶ್ ಮಗ ಗುರುರಾಜ, ರವಿಚಂದ್ರನ್ ಪುತ್ರ ಮನೋರಂಜನ್... ಹೀಗೆ ನೋಡನೋಡುತ್ತಿದ್ದಂತೆ ಎಲ್ಲಾ ತಾರಾಮಕ್ಕಳು ನಮ್ಮ ಸುತ್ತಮುತ್ತ ಎದ್ದುನಿಂತಿದ್ದಾರೆ. ‘ಎಷ್ಟೊಂದು ಜನ ಇಲ್ಲಿ, ಯಾರು ನಮ್ಮೋರು’ಎಂಬ ಪದ್ಯ ನೆನಪಾಗುವ ಹೊತ್ತು ಇದು.

ಪ್ರತಿಭೆ ಅನ್ನುವುದು ಜೀನ್ಸ್ ನಲ್ಲಿರುತ್ತಾ? ಅಪ್ಪ ಕಲಾವಿದನಾಗಿದ್ದರೆ ಅದೇ ಗುಣ ಅವನ ಮಗನ ರಕ್ತದಲ್ಲೂ ಹರಿಯುತ್ತಾ?  ಅಪ್ಪನನ್ನು ಆರಾಧಿಸುವ ಅಭಿಮಾನಿಗಳು ಮಗನನ್ನೂ ಅದೇ ಮಟ್ಟದಲ್ಲಿ ಆರಾಧಿಸುತ್ತಾರಾ? ರಾಜಕೀಯದಲ್ಲಿ ಇಂಥಾ ಪುತ್ರವ್ಯಾಮೋಹವನ್ನು ವಿರೋಧಿಸುವ ದೊಡ್ಡ ಗುಂಪೇ ಇದೆ. ಇದು ಕುಟುಂಬ ರಾಜಕಾರಣಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಮಿಕ್ಕವರು ಅವಕಾಶವಂಚಿತರಾಗುತ್ತಾರೆ ಅನ್ನುವುದು ಅವರ ವಾದ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಅನ್ನುವುದು ಕೆಲವೇ ಜನರ ಅದರಲ್ಲೂ ಒಂದು ಕುಟುಂಬದ ಸೊತ್ತಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಸ್ವಜನ ಪಕ್ಷಪಾತ ಮತ್ತು ಪಾಳೇಗಾರಿಕೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಸಿನಿಮಾದಲ್ಲಿ.....?

ಇಲ್ಲೊಂದು ಅನುಕೂಲವಿದೆ. ಜನರಿಗೆ ಆಯ್ಕೆ ಸ್ವಾತಂತ್ರ್ಯವಿದೆ.ನೀವು ಒಬ್ಬ ನಟನನ್ನು ಪ್ರೇಕ್ಷಕರ ಮೇಲೆ ಬಲವಂತದಿಂದ ಹೇರುವ ಹಾಗಿಲ್ಲ.  ಒಬ್ಬ ನಟನ ಹಿನ್ನೆಲೆ ಏನೇ ಇರಲಿ, ಆತನ ಚಿತ್ರ ಅಥವಾ ನಟನೆ ಕೆಟ್ಟದಾಗಿದ್ದರೆ ಜನರು  ತಿರಸ್ಕರಿಸಬಹುದು. ಕೆಲವೊಮ್ಮೆ ಈ ತಿರಸ್ಕಾರಕ್ಕೆ ನಿರ್ದಿಷ್ಟ ಕಾರಣಗಳೇ ಇರುವುದಿಲ್ಲ. ಉದಾಹರಣೆಗೆ ರಾಘವೇಂದ್ರ ರಾಜ್ ಕುಮಾರ್ ಅವರ ವೃತ್ತಿಯ ಗ್ರಾಫನ್ನೇ ನೋಡಿ. ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗದಂಥ ಚಿತ್ರಗಳಲ್ಲಿ ಅವರನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಆಮೇಲೆ ಇದ್ದಕ್ಕಿದ್ದ ಹಾಗೆ ಅವರನ್ನು ತಿರಸ್ಕರಿಸಿದರು. ಹಂಸಲೇಖಾ ಅವರ ಸಂಗೀತವನ್ನು ಇನ್ನಿಲ್ಲದಂತೆ ಮೆಚ್ಚಿಕೊಂಡ ಪ್ರೇಕ್ಷಕರು ಅವರ ಪುತ್ರನನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಇದನ್ನೇ ‘ಸನ್ ಸ್ಟ್ರೋಕ್’ಎಂದು ತಮಾಷೆಯಾಗಿ ಕರೆದುಕೊಳ್ಳುತ್ತಾ ಹಂಸಲೇಖಾ ತಮ್ಮ ಮನವನ್ನು ಸಂತೈಸಿಕೊಂಡರು. ಎಸ್. ನಾರಾಯಣ್ ಪುತ್ರನದ್ದೂ ಅದೇ ಕೇಸು. ಆತನ ಯಾವ ಚಿತ್ರಗಳೂ ಅವರೇಜ್ ಅನಿಸುವ ಮಟ್ಟಕ್ಕೂ ಯಶಸ್ಸು ಕಾಣಲಿಲ್ಲ. ಇದೇ ಕಾರಣಕ್ಕೆ ನಾರಾಯಣ್ ಆರ್ಥಿಕವಾಗಿ ಸಂಕಷ್ಟಕ್ಕೀಡಾದರು. ಮತ್ತೊಂದು ಸನ್ ಸ್ಟ್ರೋಕ್.

ಹಾಗೆ ನೋಡಿದರೆ ಇವರೆಲ್ಲರ ಪೈಕಿ ಅತ್ಯಂತ ನತದೃಷ್ಟನೆಂದರೆ ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿಯವರ ಪುತ್ರ ನವೀನ್ ಕೃಷ್ಣ. ಅಪ್ಪನ ಅಷ್ಟೂ ಪ್ರತಿಭೆಯನ್ನು ಅವಾಹಿಸಿಕೊಂಡಂತೆ ಕಾಣಿಸುವ ಇವರನ್ನು ಜನ ಯಾಕೆ ಇಂದಿಗೂ ಒಪ್ಪಿಕೊಳ್ಳಲಿಲ್ಲ ಅನ್ನುವುದು ಚಿದಂಬರ ರಹಸ್ಯ. ಟೈಮ್ ಚೆನ್ನಾಗಿಲ್ಲ, ನಸೀಬು ನೆಟ್ಟಗಿಲ್ಲ, ಇವೆಲ್ಲಾ ಕಾರಣಗಳು ಮೂಢನಂಬಿಕೆಗಳಷ್ಟೆ. ಎಲ್ಲಾ ನಟರು ಒಂದು ಬ್ರೇಕ್ ಗೆ ಕಾಯುತ್ತಾರೆ, ಅದು ಯಾವಾಗ ಸಂಭವಿಸುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಅಮಿತಾಬ್ ಸ್ಟಾರ್ ಆಗುವುದಕ್ಕೆ ಮುಂಚೆ ಒಂಬತ್ತು ತೋಪು ಚಿತ್ರಗಳಲ್ಲಿ ನಟಿಸಿದ್ದ. ಅಷ್ಟೇಕೆ ನಮ್ಮ ಚಿನ್ನೇಗೌಡರ ಪುತ್ರ ಮುರಳಿ ‘ಉಗ್ರಂ’ಬರುವ ತನಕ ಫ್ಲಾಪ್ ಸ್ಟಾರ್ ಎಂದೇ ಅನಿಸಿಕೊಂಡಿದ್ದರು. ಅದೇ ಅದೃಷ್ಟ ಅವರ ಅಣ್ಣ ವಿಜಯ ರಾಘವೇಂದ್ರ ಅವರಿಗಿನ್ನೂ ಒಲಿದಿಲ್ಲ.  ವಿಷ್ಣುವರ್ಧನ್ ಅಳಿಯ ಅನಿರುದ್ಧನಿಗಿರುವ ಹಾಸ್ಯ ಪ್ರಜ್ಞೆ ಮತ್ತು ಟೈಮಿಂಗ್,  ಮಿಕ್ಕ ನಾಯಕ ನಟರಿಗೆ ಹೋಲಿಸಿದಲ್ಲಿ ಬಹಳ ಅಪರೂಪವಾದದ್ದು. ಆದರೂ ಆತ ಗೆಲ್ಲಲಿಲ್ಲ.  ತಮಾಷೆಯೆಂದರೆ ಹಾಸ್ಯನಟನೆಂದೇ ಬ್ರಾಂಡ್ ಆಗಿದ್ದ ಶ್ರುತಿ ಸೋದರ ಶರಣ್ ಈಗ ಬೇಡಿಕೆಯಲ್ಲಿರುವ ನಾಯಕ ನಟ. ಕೋಮಲ್ ಅಂಥಾದ್ದೇ ಸಾಧನೆ ಮಾಡಿದರೂ ಮಾಮೂಲು ಕಮರ್ಷಿಯಲ್ ಹೀರೋ ಆಗುವ ಮೋಹಕ್ಕೆ ಬಿದ್ದು ದಾರಿ ತಪ್ಪಿದ ಮಗನಂತೆ ಕಾಣಿಸುತ್ತಿದ್ದಾರೆ.

yash, upendra, ganesh

ಒಂದು ಕಾಲದಲ್ಲಿ ಯಾವುದೇ ಗಾಡ್ ಫಾದರ್ ಹಂಗಿಲ್ಲದೇ, ಕೈಯಲ್ಲಿ ಕಾಸೂ ಇಲ್ಲದೇ ನಾಯಕ-ನಿರ್ದೇಶಕನಾಗಿ ಕ್ರಾಂತಿ ಮಾಡಿದವರು ಕಾಶಿನಾಥ್. ಅನಂತರ ಶಂಕರ್ ನಾಗ್ ಅದೇ ಮಟ್ಟದ ಸಾಧನೆ ಮಾಡಿದರು. ಈಗ ಇರುವವರೆಲ್ಲಾ ಯಾರ್ಯಾರದೋ ಸಂಬಂಧಿಕರೇ. ಹಾಗಾಗಿ ಅವರ ಬೆನ್ನ ಹಿಂದೊಂದು ನೆರಳು ಮತ್ತು ಆಸರೆ ಇದ್ದೇ ಇದೆ. ಆದರೆ ಸಿನಿಮಾ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆಯುವವರು ಯಾವತ್ತೂ ಝೀರೋದಿಂದ ಮೇಲೆ ಬಂದವರು. ಪ್ರತಿಭೆ, ಆತ್ಮವಿಶ್ವಾಸ, ಛಲ ಮತ್ತು ಭಂಡ ಧೈರ್ಯ ಇವಿದ್ದರಷ್ಟೇ ಅದು ಸಾಧ್ಯ. ಚಿಮ್ಮ ಹಲಗೆಯ ಸಹಾಯವಿದ್ದರೆ ಯಾರೂ ಬೇಕಾದರೂ ನೀರಿಗೆ ಡೈವ್ ಮಾಡಬಹುದು, ಸೊಂಟದ ಸುತ್ತ ರಬ್ಬರ್ ಟ್ಯೂಬ್ ಇದ್ದರೆ ಯಾರು ಬೇಕಾದರೂ ಈಸಬಹುದು. ಸದ್ಯಕ್ಕೆ  ಕನ್ನಡದ ಮುಂಚೂಣಿಯಲ್ಲಿರುವ ನಟರ ಪೈಕಿ ಯಾರ ನೆರಳೂ ಇಲ್ಲದೇ ಹೆಸರು ಮಾಡಿರುವವರೆಂದರೆ ಉಪೇಂದ್ರ, ಗಣೇಶ್, ಯಶ್.

ಇತ್ತೀಚೆಗೆ ಬರುತ್ತಿರುವ ತಾರಾ ಮಕ್ಕಳು ಅಥವಾ ಇನ್ನಿತರೇ ಹೊಸಮುಖಗಳಲ್ಲಿ ನನಗೆ ಕಾಣಿಸುತ್ತಿರುವ ಮುಖ್ಯ ಸಮಸ್ಯೆಯೆಂದರೆ ಭಾಷಾಶುದ್ಧಿ. ಯಾರ ನಾಲಗೆಯೂ ಸರಿಯಾಗಿ ಹೊರಳುವುದಿಲ್ಲ, ಆಗ ಭಾಷೆ ನರಳುತ್ತದೆ. ಮೊನ್ನೆ ಟೀವಿ ಚಾನೆಲ್ ಒಂದರಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಗೆ ಚಾನೆಲ್  ವರದಿಗಾರನ ಪ್ರಶ್ನೆ ಕೇಳುತ್ತಿದ್ದ. ನಿಮಗೆ ಈಜು ಗೊತ್ತಿದೆಯಾ?ಕುದುರೆ ಸವಾರಿ, ಡ್ಯಾನ್ಸು, ಫೈಟ್ ಗೊತ್ತಿದೆಯಾ? ಇದೇ ಥರದ ಬಹು ನಿರೀಕ್ಷಿತ ಪ್ರಶ್ನೆಗಳೇ.  ಮನೋರಂಜನ್ ತನಗೆ ಅದೆಲ್ಲವೂ ಗೊತ್ತಿದೆ ಮತ್ತು ಸಾಕಷ್ಟು ಪೂರ್ವಸಿದ್ಥತೆಯೊಂದಿಗೇ ನಾಯಕನಾಗುತ್ತಿದ್ದೇನೆ ಅನ್ನುವ ಥರ ಉತ್ತರಿಸುತ್ತಿದ್ದ. ಕನ್ನಡ ಭಾಷೆ ನೆಟ್ಟಗೆ ಮಾತಾಡುವುದಕ್ಕೆ ಬರುತ್ತಾ ಎಂದು ಈತನೂ ಕೇಳಲಿಲ್ಲ, ಆತನೂ ಹೇಳಲಿಲ್ಲ.

ನಾಯಕನಾಗುವುದಕ್ಕೆ ಡ್ಯಾನ್ಸು, ಕುದುರೆಸವಾರಿ, ಫೈಟ್ ಇವಿಷ್ಟರಲ್ಲಿ ತರಬೇತಿ ಪಡೆದರೆ ಸಾಕು ಅನ್ನುವ ಮನೋಭಾವ ಈಗಿನ ಜನರೇಷನ್ನಿನಲ್ಲಿ ಇರು ಹಾಗಿದೆ. ಹಾಗಾದಾಗ ತೆರೆಯ ಮೇಲೆ ಎಲ್ಲಾ ನಾಯಕರೂ ಒಂದೇ ಗೊಂಬೆಯ ಪಡಿಯಚ್ಚಿನಂತೆ ಕಾಣಿಸುತ್ತಾರೆ. ಡ್ಯಾನ್ಸು, ಕುದುರೆ ಸವಾರಿ ಹೇಳಿಕೊಡಬಹುದು. ಭಾವಾಭಿನಯವನ್ನು ಯಾರೂ ಹೇಳಿ ಕೊಡುವುದಕ್ಕಾಗುವುದಿಲ್ಲ, ಅದು ಜನ್ಮದತ್ತವಾಗಿ ಬಂದಿರಬೇಕು ಅಥವಾ ಸತತ ಅಭ್ಯಾಸದಿಂದ ಬಂದಿರಬೇಕು. ಹಾಗಾಗಬೇಕಾದರೆ ಅವರು ರಂಗಭೂಮಿಯಲ್ಲಿ ಪಳಗಿರಬೇಕು, ಯಾರಿಗಿದೆ ಆ ತಾಳ್ಮೆ?  ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಶ್ರೀನಿವಾಸ ಮೂರ್ತಿ, ಅಶ್ವತ್ಥ್ ಅವರ ಕನ್ನಡ ಉಚ್ಚಾರಣೆಯಲ್ಲಿದ್ದ ಸ್ಪಷ್ಟತೆ ಇಂದಿನವರಿಗೆ ಮಾದರಿಯಾಗಬೇಕು. ಭಾಷಾ ಸಮಸ್ಯೆಯಿಂದಾಗಿ ರವಿಚಂದ್ರನ್ ಈಗಲೂ ಎಷ್ಟೊಂದು ಒದ್ದಾಡುತ್ತಿದ್ದಾರೆ ಅನ್ನುವುದನ್ನು ಗಮನಿಸಬೇಕು. ಮೇಲೆ ಹೇಳಲಾದ ಮಹಾನುಭಾವರು ವೃತ್ತಿ ರಂಗಭೂಮಿಯಿಂದ ಬಂದವರು. ಆ ಕಾರಣಕ್ಕೇ ಸರಸ್ವತಿ ಅವರ ನಾಲಿಗೆಯಲ್ಲಿ ನರ್ತಿಸುತ್ತಿದ್ದಳು.  ಈಗಿನವರಿಗೆ ರಂಗಭೂಮಿಯತ್ತ ಹೊರಳಲು ಮತ್ತು ಅಲ್ಲಿ ದೇಹ –ನಾಲಿಗೆಯನ್ನು ದಂಡಿಸಿಕೊಳ್ಳಲು  ವ್ಯವಧಾನವಾಗಲಿ, ಸಮಯವಾಗಲಿ ಇರದೇ ಇದ್ದರೆ ಕನಿಷ್ಠ ಒಬ್ಬ ಕನ್ನಡ ಮೇಷ್ಟ್ರ ಬಳಿ ಕಲಿಯಬಹುದಲ್ವಾ?ಬಾಡಿ ಲಾಂಗ್ವೇಜ್ ಮತ್ತು ಲಾಂಗ್ವೇಜ್ ಇವರೆಡು ಸರಿಯಾಗಿದ್ದರಷ್ಟೇ ಒಬ್ಬ ನಟ ಪರಿಪಕ್ವ ಕಲಾವಿದನಾಗುವುದು. ಬಹುಶಃ ಈ ಕಾರಣಕ್ಕೇ ರಮ್ಯ ತನ್ನೊಂದು ಚಿತ್ರಕ್ಕೆ ತಾನೇ ಧ್ವನಿಯಾದರು. ಮಾಲಾಶ್ರೀ ಅವರೂ ತುಂಬಾ ತಡವಾಗಿ ಈ ಕೆಲಸ ಮಾಡಿದರು.

ತಾರಾ ಮಕ್ಕಳ ಬಗ್ಗೆ ಹೇಳುವುದಕ್ಕೆ ಹೊರಟವನು ಭಾಷಾಶುದ್ಧಿಯ ಬಗ್ಗೆ ಯಾಕೆ ಕೊರೀತಿದ್ದಾನೆ ಎಂದು ನಿಮಗೆ ಅನಿಸಬಹುದು. ನಾಮದ ಬಲದಿಂದ ಮಿಂಚುವುದಕ್ಕೆ ಹೊರಟವರು ಆ ನಾಮದ ಯಶಸ್ಸಿನ ಹಿಂದಿನ ಗುಟ್ಟನ್ನೂ ಅರ್ಥ ಮಾಡಿಕೊಳ್ಳಬೇಕು. ಅಪ್ಪನಿಗೆ ತಕ್ಕ ಮಗನಾಗಬೇಕಾದರೆ ಅಪ್ಪನ ಶ್ರಮ, ಭಾಷಾಸಂಪತ್ತನ್ನೂ ರೂಢಿಸಿಕೊಳ್ಳಬೇಕು. ಆಗಲೇ ಪ್ರೇಕ್ಷಕ ಅವರನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯ. ಬೇರೆ ಕಾರಣಕ್ಕೆ ಒಪ್ಪಿಕೊಂಡರೆ ಪ್ರೇಕ್ಷಕರ ಭಾಷೆಯೂ ಎಕ್ಕುಟ್ಟಿಹೋಗುತ್ತದೆ. ನಾವು ಈಗಾಗಲೇ ಆ ದುರಂತವನ್ನು ಕಾಣುತ್ತಿದ್ದೇವೆ.

Also See

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.