` Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramya image
ramya

ರಮ್ಯ ಸೋತಿದ್ದು ಒಳ್ಳೇದಾಯಿತು. ಹಾಗಂದಾಕ್ಷಣ ರಮ್ಯನ ಅಭಿಮಾನಿಗಳು ರೋಷತಪ್ತರಾಗಬಹುದು ಅನ್ನುವ ಅರಿವು ನನಗಿದೆ. ಆದರೆ ನಾನು ಜೆಡಿಎಸ್ ಅಥವಾ ಬಿಜೆಪಿ ಪಕ್ಷದ ಬೆಂಬಲಿಗನಾಗಿ ಮಾತಾಡುತ್ತಿಲ್ಲ. ಒಬ್ಬ ಅಪ್ಪಟ ಸಿನಿಮಾ ಪ್ರೇಮಿಯಾಗಿ ಹೇಳುತ್ತಿದ್ದೇನೆ.  ಒಮ್ಮೆ ಎಡವುದರಿಂದ ಲಾಭವಿದೆ, ಯಾಕೆಂದರೆ ಮತ್ತೊಮ್ಮೆ ಎಡವುವ ಪ್ರಸಂಗ ಬಂದಾಗ ನಾವು ಎಚ್ಚರವಾಗಿರುತ್ತೇವೆ. ನಿಮಗೆ ನೆನಪಿರಬಹುದು,  ನಾವು ಚಿಕ್ಕವರಾಗಿದ್ದಾಗ ಎಡವಿಬಿದ್ದರೆ ಅಮ್ಮ ನಮ್ಮನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಿರಲಿಲ್ಲ, ಬದಲಾಗಿ ರಪ್ಪಂತ ಬೆನ್ನಿಗೊಂದು ಬಾರಿಸುತ್ತಿದ್ದಳು. ಬಿದ್ದಿದ್ದರಿಂದ ಆದ ಆಘಾತ ಏಟಿನಿಂದ ಹೊರಟುಹೋಗುತ್ತದೆ ಅನ್ನುವ ನಂಬಿಕೆ ಅವಳದು. ಈಗ ಯಾರಾದರೂ ಹಿರಿಯರು ರಮ್ಯನ ಬೆನ್ನಿಗೊಂದು ಗುದ್ದು ಹಾಕಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನನಗನಿಸುತ್ತಿದೆ. ಆಗ ಆಕೆ ಮತ್ತೆ ನಾರ್ಮಲ್ ಆಗಬಹುದು, ಸೋಲಿನ ಹತಾಶೆಯಿಂದ ಹೊರಬರಬಹುದು, ಮುಂದೇನು ಮಾಡಬೇಕು ಅನ್ನುವುದರ ಬಗ್ಗೆ ಸಾವಧಾನವಾಗಿ ಸಮಚಿತ್ತದಿಂದ ಯೋಚನೆ ಮಾಡಬಹುದು.

 ನಾನು ರಾಜಕೀಯದ ಕನ್ನಡಕ ಹಾಕಿಕೊಂಡು ಮಾತಾಡುತ್ತಿಲ್ಲ, ರಮ್ಯನಂಥ ನಟಿ ರಾಜಕೀಯದಲ್ಲೇ ತಲ್ಲೀನಳಾದರೆ ಕನ್ನಡ ಸಿನಿಮಾಗಳಿಗಾಗುವ ನಷ್ಟದ ಬಗ್ಗೆ ಯೋಚಿಸುತ್ತಿದ್ದೇನೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ರಮ್ಯಾಗೆ ಇದು ಒಳ್ಳೆಯ ಸಮಯ. ಸೋಲು ಅನ್ನುವುದು ವೈರಾಗ್ಯವನ್ನೂ ತರಬಹುದು, ಜ್ಞಾನೋದಯವನ್ನೂ ಉಂಟು ಮಾಡಬಹುದು. ರಮ್ಯನ ಆಯ್ಕೆ ಎರಡನೆಯದು ಆದರೆ ಚೆನ್ನ.  ಈ ರಾಜಕೀಯ ನನಗೆ ಹೇಳಿಮಾಡಿಸಿದ ಕ್ಷೇತ್ರವಲ್ಲ, ಇಲ್ಲಿಯ ಒಳಸುಳಿಗಳು ನನಗರ್ಥವಾಗುವುದಿಲ್ಲ. ಯಾಕೆಂದರೆ ನಾನೊಬ್ಬ ಕಲಾವಿದೆ.  ನನ್ನನ್ನು ಬೆಳೆಸಿದ್ದು, ಪೊರೆದದ್ದು ಮತ್ತು ಇಂಥಾದ್ದೊಂದು ಹೆಸರು ಖ್ಯಾತಿಯನ್ನು ತಂದುಕೊಟ್ಟಿದ್ದು ಚಿತ್ರರಂಗವೇ ಹೊರತು ರಾಜಕೀಯವಲ್ಲ ಅನ್ನುವ ಸರಳಸತ್ಯ ಆಕೆಗೆ ಹೊಳೆಯಲಿ ಅನ್ನುವುದು ನನ್ನಾಸೆ.

ramya, ambareesh

ರಮ್ಯ ಹಾಗೆಲ್ಲಾ ಬೇರೆಯವರ ಮಾತು ಕೇಳುವ ಹುಡುಗಿಯಲ್ಲ ಅನ್ನುವುದೂ ನನಗೆ ಗೊತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರೊಂದಿಗೆ ಸತತ ಸಂಪರ್ಕದಲ್ಲಿರು ಎಂದು ಅಂಬರೀಶ್ ಕಿವಿಮಾತು ಹೇಳಿದ್ದಕ್ಕೆ    “ನಾನು ನನ್ನ ಕ್ಷೇತ್ರದ ಜನರೊಂದಿಗೆ ಫೇಸ್ಬುಕ್, ಟ್ವೀಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸಂಪರ್ಕದಲ್ಲಿದ್ದೇನೆ..”ಎಂದಾಕೆ ಟ್ವೀಟ್ ಮಾಡಿದ್ದರು.ಅದಕ್ಕೆ ಪ್ರತಿಯಾಗಿ “ಮಂಡ್ಯ ಜನರಿಗೆ ಫೇಸ್ಬುಕ್, ಟ್ವೀಟರುಗಳ ಕುರಿತು ತಿಳುವಳಿಕೆ ಇಲ್ಲ. ಹಳ್ಳಿಹಳ್ಳಿಗಳಿಗೂ ಹೋಗಿ ಜನರ ಕಷ್ಟಸುಖಗಳನ್ನು ಕೇಳು ಎಂದಿದ್ದೆ”ಎಂದು ಅಂಬಿ ಲೈಟಾಗಿ ಕಾಲೆಳೆದಿದ್ದರು. ಆದರೆ ರಮ್ಯ ಟ್ಟೀಟರನ್ನು ಬಿಡಲಿಲ್ಲ. ಫಲಿತಾಂಶ ಪ್ರಕಟವಾಗುವುದಕ್ಕೆ ಹಿಂದಿನ ದಿನವೂ ರಮ್ಯ ಟ್ವೀಟ್ ಮಾಡಿದ್ದರು. “ಮಂಡ್ಯದಲ್ಲಿ ಫಲಿತಾಂಶ ಏನೇ ಬರಲಿ, ನಾನು ಅದರಿಂದ ಮನಸ್ಸು ಕೆಡಿಸಿಕೊಳ್ಳುವುದಿಲ್ಲ ಮತ್ತು ಮಂಡ್ಯದ ಮಗಳಾಗಿಯೇ ಉಳಿಯುತ್ತೇನೆ. ಗೆದ್ದರೆ ಜನಸೇವೆ, ಸೋತರೂ ಜನಸೇವೆ.ಬದುಕು ಅನ್ನೋದು ಬಹಳ ಚಿಕ್ಕದು, ನಾವು ಅದನ್ನು ಸಿಹಿಯಾಗಿಸಬೇಕು”ಎಂದು ಬರೆದಿದ್ದರು.

ramya

ಅಂದರೆ ರಮ್ಯನಿಗೆ ತಾನು ಸೋಲುತ್ತೇನೆ ಅನ್ನುವ ಅನುಮಾನ ಕಾಡಿತ್ತಾ?  ಕಾಂಗ್ರೆಸ್ ಪಕ್ಷದವರಿಗಂತೂ ಅದು ಬಹಳ ಮೊದಲೇ ಕಾಡಿತ್ತು. ಪಕ್ಷದ ಒಳಜಗಳ, ಅಂಬರೀಶ್ ವಿರುದ್ಧ ರಮ್ಯ ಮಾತಾಡುತ್ತಿದ್ದಾರೆ ಅನ್ನುವ ಆರೋಪ, ರಾಹುಲ್ ಗಾಂಧಿ ಜೊತೆ ನೇರಸಂಪರ್ಕ ಇಟ್ಟುಕೊಂಡಿದ್ದಾಳೆ ಅನ್ನುವ ಅಸಮಾಧಾನ, ಇವೆಲ್ಲವೂ ಸೇರಿಕೊಂಡು ರಮ್ಯ ಸೋಲಿಗೆ ದುಹದವಾದ ವೇದಿಕೆಯನ್ನು ಸೃಷ್ಟಿ ಮಾಡಿದ್ದವು. ಇಂಥಾದ್ದೆಲ್ಲಾ ರಾಜಕೀಯದಲ್ಲಿ ನಡೆಯುತ್ತದೆ. ಕಿರಿಯರು ತಮ್ಮ ಮಾತು ಕೇಳಿಕೊಂಡು ಬಿದ್ದಿರಬೇಕು ಅಂತ ಹಿರಿಯರು ಬಯಸುತ್ತಾರೆ. ಹಿರಿಯರ ಕಾಲ ಆಗಿಹೋಯಿತು, ಇನ್ನೂ ಯಾಕೆ ಅವರಿಗೆ ಮಣೆ ಹಾಕಬೇಕು ಅಂತ ಕಿರಿಯರು ಸವಾಲು ಹಾಕುತ್ತಾರೆ. ಇಂಥಾ ಒಳಜಗಳದಲ್ಲಿ ಈಗಷ್ಟೇ ರಾಜಕೀಯದ ಅಂಗಳಕ್ಕೆ ಕಾಲಿಟ್ಟ ರಮ್ಯನೆಂಬ ಕೂಸು ಬಡವಾಗುತ್ತದೆ. ರಮ್ಯ ಹೇಳಿದ ಹಾಗೆ ಬದುಕು ಚಿಕ್ಕದು ನಿಜ, ಆದರೆ ಬದುಕು ಚಿಕ್ಕದಾಗಿರುವುದಕ್ಕೇ ಅವಮಾನ ಮತ್ತು ಸೋಲುಗಳು ದೊಡ್ಡದಾಗಿ ಕಾಣಿಸುತ್ತವೆ. ಒಮ್ಮೆ ಉತ್ತುಂಗಕ್ಕೇರಿ, ಮರುಕ್ಷಣ ಕೆಳಗೆ ಬಿದ್ದವರ ಮೇಲೆ ಕಲ್ಲುಗಳು ಬೀಳುತ್ತವೆ. ಉದಾಹರಣೆಗೆ ರಮ್ಯ ಸೋತಾಕ್ಷಣ ಜಗ್ಗೇಶ್ ಟ್ವೀಟ್ ಮಾಡುತ್ತಾರೆ. “ಚುನಾವಣೆಯಲ್ಲಿ ಗೆದ್ದಾಗ ಸಿನಿಮಾವನ್ನು ಡಿಗ್ರೇಡ್ ಮಾಡಿ, ಸೋತಾಗ ಮತ್ತೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ನಟಿಸುವೆ ಅನ್ನುವ ಸಮಯಸಾಧಕರಿಗೆ ಏನು ಕರೆಯಬೇಕು?”. ನೀರುದೋಸೆ ಚಿತ್ರಕ್ಕೆ ರಮ್ಯ ಕೈಕೊಟ್ಟ ಸಿಟ್ಟು ಈ ಮೂಲಕ ಹೊರಬರುತ್ತದೆ. ನೀರು ದೋಸೆ ಚಿತ್ರದ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ರಮ್ಯ ಬಗ್ಗೆ ಯಾವುದೇ ಟೀಕೆ ಮಾಡದೇ ಸುಮ್ಮನಿರುವಾಗ ಜಗ್ಗೇಶ್ ಯಾಕೆ ಕಾಲೆಳೆಯುತ್ತಾರೆ?  ತನ್ನೊಂದಿಗೆ ರಮ್ಯ ನಟಿಸುವುದಕ್ಕೆ ಒಪ್ಪಿಕೊಳ್ಳಲಿಲ್ಲ ಅನ್ನುವ complex ಇರಬಹುದಾ?ರಮ್ಯ ತನ್ನ ಟ್ವೀಟರಿಗೆ ಪ್ರತಿಕ್ರಿಯೆ ನೀಡದೇ ಇದ್ದಾಗ ಜಗ್ಗೇಶ್ ಮತ್ತೆಮತ್ತೆ ಟ್ವೀಟ್ ಮಾಡುತ್ತಾರೆ.ಇನ್ಯಾರೋ ತಲೆಕೆಟ್ಟ ಅಭಿಮಾನಿಯೊಬ್ಬ ರಮ್ಯನ ಸೋಲಿಗೇ ಅಂಬರೀಶ್ ಅವರೇ ಕಾರಣ ಎಂದು ದೊಡ್ಡದೊಂದು ಪತ್ರ ಬರೆದು, ಅದನ್ನೇ ಪೋಸ್ಟರ್ ಥರ ಗೋಡೆಗೆ ಅಂಟಿಸುತ್ತಾನೆ.

ಎಲ್ಲಿಯ ರಮ್ಯ, ಎಲ್ಲಿಯ ಅಂಬರೀಶ್, ಎಲ್ಲಿಯ ಜಗ್ಗೇಶ್?ಯಾರು ಯಾರಿಗೆ ಪ್ರತಿಸ್ಪರ್ಧಿ? ರಮ್ಯನ ವಯಸ್ಸೇನು, ಅವರಿಬ್ಬರ ವಯಸ್ಸೇನು?ಅಭಿಮಾನವೆಂಬ ಹುಚ್ಚುಕುದುರೆಯೇರಿದವರು ಇವೆಲ್ಲದರ ಬಗ್ಗೆ ಯೋಚನೆ ಮಾಡುವುದಿಲ್ಲ. ಮತದಾರನ ಮನಸ್ಸು ಸದಾ ಗೊಂದಲದ ಗೂಡು, ತಾನು ಒಮ್ಮೆ ಗೆಲ್ಲಿಸಿದವರನ್ನೇ ಒಂದು ವರ್ಷದ ಅಂತರದಲ್ಲಿ ಆತ ಸೋಲಿಸುತ್ತಾನೆ.  ಅಭಿಮಾನ ಅನ್ನುವುದು ಅಷ್ಟೊಂದು ಕ್ಷಣಿಕವಾ ಅಥವಾ ಒಂದೇ ವರ್ಷದಲ್ಲಿ ಒಬ್ಬ ವ್ಯಕ್ತಿಯನ್ನು ನಾಲಾಯಕ್ಕು ಅನ್ನುವ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯವಾ?ರಮ್ಯನಿಗೂ ಇಂಥಾದ್ದೆಲ್ಲಾ ಪ್ರಶ್ನೆಗಳು ಕಾಡಿರಬಹುದು. ಸಿನಿಮಾದಲ್ಲಿ ಹಾಗಾಗುವುದಿಲ್ಲ, ಒಮ್ಮೆ ಮೆಚ್ಚಿಕೊಂಡರೆ ಮುಗಿಯಿತು, ಐದು ವರ್ಷಕ್ಕೆ ಆ ಅಭಿಮಾನ ಸೇಫ್ ಆಗಿರುತ್ತದೆ. ರಮ್ಯ ಐದು ವರ್ಷಕ್ಕಿಂತಲೂ ಹೆಚ್ಚು ನಂಬರ್ ಒನ್ ನಟಿಯಾಗಿದ್ದವರು, ಕನ್ನಡದ ಮಿಕ್ಕೆಲ್ಲ ನಟಿಯರಿಗಿಂತ ಜಾಸ್ತಿ ಸಂಭಾವನೆ ಪಡೆಯುತ್ತಿದ್ದವರು. ತನ್ನೊಂದಿಗೆ ನಟಿಸುತ್ತಿದ್ದ ಹೀರೋಗಳನ್ನೇ ಲೆಕ್ಕಕ್ಕಿಲ್ಲ ಅನ್ನುವಂತೆ ಟ್ರೀಟ್ ಮಾಡುತ್ತಿದ್ದವರು. ಹಠಮಾರಿ ಆದರೂ ಒಳ್ಳೆಯ ನಟಿ ಅನ್ನುವ ಹೆಸರು ಪಡೆದವರು.

ನಾನು ಲೆಕ್ಕದಲ್ಲಿ ವೀಕು, ಹಾಗಾಗಿ ಕನ್ನಡದಲ್ಲಿ ಅಥವಾ ತಮಿಳಿನಲ್ಲಿ ರಮ್ಯ ನಟಿಸಿದ ಚಿತ್ರಗಳ ಸಂಖ್ಯೆ ನನಗೆ ನೆನಪಿಲ್ಲ. ಅದರ ಅಗತ್ಯವೂ ಇಲ್ಲ. ಒಂದು ಅಗುಳನ್ನು ಹಿಸುಕಿ ನೋಡಿ ಅನ್ನ ಬೆಂದಿದೆಯಾ ಎಂದು ಅರಿತುಕೊಳ್ಳುವಂತೆ,  ಒಂದೊಳ್ಳೇ ಚಿತ್ರ ಅಥವಾ ಪಾತ್ರವನ್ನು ನೋಡಿದರೆ ಒಬ್ಬ ನಟ ಅಥವಾ ನಟಿಯ ಜಾತಕ ಹೇಳಿಬಿಡಬಹುದು. ಅದೇನೂ ಅಂಥಾ ಬ್ರಹ್ಮವಿದ್ಯೆಯಲ್ಲ.  ರಮ್ಯನ ಮೊದಲ ಚಿತ್ರ ‘ಅಭಿ’ ಈಗಿನ ಸಂದರ್ಭದಲ್ಲಿ ನಗಣ್ಯವಾಗಿ ಕಾಣಿಸಬಹುದು. ಯಾಕೆಂದರೆ ಹದಿನೆಂಟರ ಏರುಜವ್ವನೆ ತನ್ನ ಮೊದಲ ಚಿತ್ರದಲ್ಲಿ ಹೇಗೆ ಕಾಣಿಸಬೇಕೋ ಹಾಗೇ ರಮ್ಯ ಕಾಣಿಸಿಕೊಂಡಿದ್ದರು. ಹಾಡು, ಕುಣಿತ, ರುಚಿಗೆ ತಕ್ಕಷ್ಟು ಕಣ್ಣೀರು, ಇದರಿಂದಾಚೆಗೆ ಅಲ್ಲಿ ಅವಕಾಶವಿರಲಿಲ್ಲ.  ಆದರೆ ‘ಅಮೃತಧಾರೆ’ಚಿತ್ರದಲ್ಲಿ ರಮ್ಯ ನನ್ನನ್ನು ಚಕಿತಗೊಳಿಸಿದ್ದರು. ಮಾತಿನ ಹಳಿಯ ಮೇಲೆಯೇ ಚಿತ್ರವನ್ನು ನಿರೂಪಿಸುತ್ತಾ ಹೋಗುವ ಚಟವುಳ್ಳ ನಾಗತಿಹಳ್ಳಿ ಅವರಂಥಾ ನಿರ್ದೇಶಕರ ಚಿತ್ರದಲ್ಲಿ ಈಕೆ ಮಾತಿನ ಟೊಳ್ಳುತನವನ್ನು ದಾಟಿ, ಕಣ್ಣು ಮತ್ತು ಆಂಗಿಕ ಹಾವಭಾವಗಳ ಅತಿ ಸೂಕ್ಷ್ಮ ಅಭಿವ್ಯಕ್ತಿಯಿಂದ ತನ್ನ ಪಾತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದರು. ಹಾಗೆ ನೋಡಿದರೆ ಅಮೃತಧಾರೆ ಅಂಥಾ ಅದ್ಭುತ ಕತೆಯನ್ನು ಹೊಂದಿರುವ ಚಿತ್ರವಾಗಿರಲಿಲ್ಲ, ಯಥಾಪ್ರಕಾರ ನಾಯಕನಿಗೆ ಕ್ಯಾನ್ಸರ್ ಬಂದು, ಆತ ತ್ಯಾಗಮಯಿಯಾಗುವುದಕ್ಕೆ ಒದ್ದಾಡುವ ಕತೆಯುಳ್ಳ ಚಿತ್ರ.  ರಮ್ಯನನ್ನು ಮೈನಸ್ ಮಾಡಿದರೆ ಆ ಚಿತ್ರ ಹೇಗಿರುತ್ತದೆ ಅನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ.

ಸಿದ್ಲಿಂಗು ಎಂಬ ಚಿತ್ರದಲ್ಲೂ ರಮ್ಯ ಅಂಥಾದ್ದೇ ಒಂದು ಮೆಚ್ಯೂರ್ಡ್ ಪಾತ್ರ ಮಾಡಿದ್ದರು. ತೀರಾ ಕಾಶ್ಯುವಲ್ ಆಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದರು. ವೃತ್ತಿಪರ ನಟಿಯಾಗಿ ಎಂಥಾ ಪಾತ್ರಗಳ ಒಳಗೂ ಸಲೀಸಾಗಿ ತೂರುವ ಈಕೆ, ವೈಯಕ್ತಿಕ ಬದುಕಲ್ಲಿ ತೋರುವ ಅರೋಗೆನ್ಸ್ ಕೂಡಾ ಕೆಲವೊಮ್ಮೆ ಇಷ್ಟವಾಗುತ್ತದೆ. ತನ್ನ ವಿರುದ್ದ ವಿವಾದಗಳ ಬೇಲಿ ಸುತ್ತಿಕೊಂಡಾಗಲೆಲ್ಲಾ ರಮ್ಯ ಗಟ್ಟಿಯಾಗುತ್ತಾರೆ. ತನಗನಿಸಿದ್ದನ್ನು ಯಾರ ಮುಲಾಜೂ ಇಲ್ಲದೇ ಗಟ್ಟಿಯಾಗಿ ಹೇಳಿದ್ದಾರೆ ಕೂಡಾ. ಚಿತ್ರೋದ್ಯಮ ಅನ್ನುವುದು ಗಂಡುಪಾಳ್ಯಕ್ಕಷ್ಟೇ ಮೀಸಲು ಅನ್ನುವ ಕಲ್ಪನೆಯನ್ನು ಮುರಿದ ಹುಡುಗಿಯೀಕೆ. ಊಟಿಯಲ್ಲಿ ತನ್ನ ಬಾಲ್ಯವನ್ನು ಕಳೆದು, ಅನಂತರ ಸೇಂಟ್ ಜಾಸೆಫ್ ಕಾಲೇಜಿನಲ್ಲಿ ಓದಿದ ಹುಡುಗಿಗೆ ಆರಂಭದಿಂದಲೂ ಕನ್ನಡದ ಸಂಪರ್ಕ ಕಡಿಮೆಯೇ . ಆದರೆ ಆಕೆ ಮಾತಾಡುವುದಕ್ಕೆ ಹೊರಟರೆ ಸೊಗಸಾದ ಕನ್ನಡ ಮಾತಾಡುತ್ತಾರೆ, ಎಲ್ಲಾ ತಡವರಿಸುವುದಿಲ್ಲ..

ಹಾಗಿದ್ದೂ ಮಂಡ್ಯದಲ್ಲಿ ರಮ್ಯ ಚುನಾವಣೆಗೆ ನಿಲ್ಲುವುದು, ಪ್ರಚಾರ ಮಾಡುವುದು, ಗೆಲ್ಲುವುದು ಅಥವಾ ಸೋಲುವುದು ಇವೆಲ್ಲವೂ ನನಗೆ ರಾಂಗ್ ಜಾಯಿನ್ ಥರ ಕಾಣಿಸುತ್ತದೆ. ರಮ್ಯನಂಥ ಸಾಫಿಸ್ಟಿಕೇಟೆಡ್ ಹುಡುಗಿ. ಮಂಡ್ಯದ ಒರಟು ಜನರ ಮಧ್ಯೆ ಓಡಾಡುವ ವೈಚಿತ್ರ್ಯ ಬಿಳಿಹೆಂಡ್ತಿ ಚಿತ್ರವನ್ನು ನೆನಪಿಸುತ್ತದೆ. ಪುಡಾರಿಗಳು, ಪುಡಿ ರಾಜಕಾರಣಿಗಳು, ಅವರು ಬಳಸುವ ಭಾಷೆ, ಇವೆಲ್ಲವನ್ನೂ ಈ ಹುಡುಗಿ ಹೇಗೆ ನಿಭಾಯಿಸುವುದಕ್ಕೆ ಸಾಧ್ಯವಾಯಿತು?ಆದರೂ ರಮ್ಯ ಕಣ್ಣೀರ ಹಾಕಿದರು, ತಾನು ಮಂಡ್ಯದ ಮಗಳು ಅನ್ನುವ ಕ್ಲೀಷೆಯನ್ನು ಬಳಸಿದರು. ಇವೆಲ್ಲವೂ ಕೃತಕವಾಗಿಯೇ ಇತ್ತು, ಸಿನಿಮಾದಲ್ಲಿ ಆಕೆ ತೋರಿದ ಸಹಜನಟನೆ ಅಸಲಿ ಬದುಕಲ್ಲಿ ಕಾಣಿಸಲಿಲ್ಲ. ಸೆಟ್ಟಿನಿಂದೀಚೆ ಬಂದರೆ ಆಕೆಯ ವ್ಯಕ್ತಿತ್ವ ವಿರೋಧಾಭಾಸಗಳ ಸಂಗಮ. ಒಮ್ಮೆ ತೀರಾ ಬಾಲಿಶವಾಗಿ, ಮತ್ತೊಮ್ಮೆ ವಿಪರೀತ ಪ್ರಬುದ್ಧೆಯಂತೆ ಮಾತಾಡುವ ಈಕೆ ಚಿತ್ರೋದ್ಯಮದ ಪಾಲಿಗೆ ಬಗೆಹರಿಯದ ಒಗಟು.

jaggesh, ramya

ಜಗ್ಗೇಶ್ ಟ್ವೀಟ್ ಮಾಡುವುದು, ಇನ್ಯಾರೋ ಜಗಳಕ್ಕಿಳಿಯುವುದು, ನೀರುದೋಸೆ ಮತ್ತೆ ಗಟ್ಟಿಯಾಗುವುದು ಇವೆಲ್ಲವೂ ಇದ್ದಿದ್ದೇ. ಆದರೆ ರಮ್ಯಾ ನಟಿಸಬೇಕು.  ಕನ್ನಡ ಕಂಡ ಶ್ರೇಷ್ಠನಟಿಯರಲ್ಲಿ ಆಕೆಯೂ ಒಬ್ಬಳು. ಹಿಂದಿಯಲ್ಲಿ ಕಂಗನಾರಾವತ್ ಎಂಬ ಬೊಂಬೆ ‘ಕ್ವೀನ್’ಚಿತ್ರದಲ್ಲಿ ನಟಿಸಿದ್ದನ್ನು ನೋಡಿದ ಮೇಲೆ ನನ್ನ ಅನಿಸಿಕೆ ಗಟ್ಟಿಯಾಗುತ್ತಿದೆ. ರಮ್ಯಂಗೂ ಅಂಥಾದ್ದೇ ಶಕ್ತಿಯಿದೆ. 33ರ ವಯಸ್ಸು ಆಕೆಯ ಮುಂದೆ ಇಂಥಾ ಹತ್ತಾರು ಪ್ರಬುದ್ಧ ಪಾತ್ರಗಳನ್ನು ನಿರ್ವಹಿಸಬಲ್ಲ ಸಾಧ್ಯತೆಗಳನ್ನು  ಹರಡಿದೆ. ಇನ್ನೊಂದು ಚುನಾವಣೆಗೆ ಕಾದುಕುಳಿತರೆ ಆಕೆಗೆ 38 ಆಗುತ್ತದೆ. ಅದರೊಳಗೆ ಒಂದಿಷ್ಟು ಒಳ್ಳೇ ಪಾತ್ರಗಳನ್ನು ಮಾಡೋಣ ಎಂಬಾಸೆ ಆಕೆಗೆ ಬಂದಿದ್ದರೆ ಅದನ್ನು ಸ್ವಾಗತಿಸೋಣವಂತೆ.

ಇದನ್ನೆಲ್ಲಾ ಬರೆಯುವ ಹೊತ್ತಿಗೆ ನಾನು ರಮ್ಯ ಪರ ವಕಾಲತ್ತು ಮಾಡುತ್ತಿದ್ದೇನೆ ಎಂದು ನಿಮಗನಿಸುವ ಅಪಾಯ ಇರುವುದರಿಂದ ಹಳೆಯದೊಂದು ಘಟನೆಯನ್ನು ನೆನಪಿಸುತ್ತಾ ಅಂಕಣ ಮುಗಿಸುತ್ತೇನೆ. ನಾನು ಕನ್ನಡಪ್ರಭದಲ್ಲಿದ್ದಾಗ, ರಮ್ಯ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದರು. ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾನು ಕರ್ನಾಟಕದ ಮಾಜಿಮುಖ್ಯಮಂತ್ರಿಯ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆ ಮುಖ್ಯಮಂತ್ರಿಯ ಹೆಸರನ್ನೂ ಉಲ್ಲೇಖಿಸಿದ್ದರು.  ಅದು ತಮಿಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅದೇ ಸುದ್ದಿಯನ್ನು ನಾನು ಕನ್ನಡಪ್ರಭದಲ್ಲಿ ಬರೆದಿದ್ದೆ. ಆಗ ರಮ್ಯ ಕಚೇರಿಗೆ ಬಂದು ಸಂಪಾದಕರೊಂದಿಗೆ ಜಗಳ ಆಡಿದ್ದರು, ನನ್ನ ವಿರುದ್ಧ ದೂರು ಒಪ್ಪಿಸಿದ್ದರು. ಆದರೆ ರಮ್ಯನ ಸ್ವಭಾವ ನನಗೆ ಮೊದಲೇ ಗೊತ್ತಿದ್ದರಿಂದ ಆ ತಮಿಳು ಪತ್ರಿಕೆಗಳ ತುಣುಕುಗಳನ್ನು ಮೊದಲೇ ತರಿಸಿ ಇಟ್ಟುಕೊಂಡಿದ್ದೆ. ಅವುಗಳನ್ನು ನೋಡಿದ ಮೇಲೆ ರಮ್ಯ ಮಾತಾಡಲಿಲ್ಲ. ಅಮೃತಧಾರೆ ಚಿತ್ರ ಬಿಡುಗಡೆಯಾದಾಗ ಇದೇ ಹುಡುಗಿ ಎಸ್ಸೆಮ್ಮೆಸ್ಸು ಮಾಡಿ ನನ್ನ ಅಭಿಪ್ರಾಯ ಕೇಳಿದ್ದರು, ವಿಮರ್ಶೆ ಪ್ರಕಟವಾದ ನಂತರ ಒಂದು ಫರ್ಲಾಂಗು ಉದ್ದದ ಎಸ್ಸೆಮ್ಮಸ್ಸು ಕೂಡಾ ಕಳಿಸಿದ್ದರು.

ಆಕೆ ದುರಹಂಕಾರಿ, ತನ್ನನ್ನು ಬೆಳೆಸಿದ ಉದ್ಯಮವನ್ನೇ ಧಿಕ್ಕರಿಸಿದಳು ಎಂದೆಲ್ಲಾ ಆರೋಪ ಮಾಡುವ ಮುಂಚೆ ಒಂದು ಸಾರಿ ರಮ್ಯನ ಹಿನ್ನೆಲೆಯನ್ನು ನಾವು ನೋಡಬೇಕು. ಚಿಕ್ಕ ವಯಸ್ಸಲ್ಲೇ ಪೋಷಕರಿಂದ ದೂರವಾಗಿ ಎಲ್ಲೋ ಬೆಳೆದು, ಇನ್ನೆಲ್ಲೋ ಕಾಲೇಜು ಓದಿ, ಪಂಚತಾರಾ ಹೋಟೆಲ್ಲನ್ನೇ ಮನೆಯಾಗಿಸಿಕೊಂಡು ಒಂಟಿತನವನ್ನೇ ಸಂಗಾತಿಯನ್ನಾಗಿ ಒಪ್ಪಿಕೊಂಡು ಬೆಳೆದ ಹುಡುಗಿಯೊಬ್ಬಳ ಮನಃಸ್ಥಿತಿ ಹೇಗಿರುತ್ತದೆ ಅನ್ನೋದನ್ನು ಯೋಚನೆ ಮಾಡಬೇಕು. ರಮ್ಯನ ಸೋಲನ್ನು ಸಂತೋಷದಿಂದ ಅನುಭವಿಸುತ್ತಿರುವವರಿಗೆ ಇದು ನನ್ನ ಸಲಹೆ.

Also See

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.