Print 

User Rating: 0 / 5

Star inactiveStar inactiveStar inactiveStar inactiveStar inactive
 
raghuveer image
raghuveer

ಬಡವರ ಮನೆ ಹುಡುಗಿ, ಶ್ರೀಮಂತ ಹುಡುಗನನ್ನು ಪ್ರೀತಿ ಮಾಡುತ್ತಾಳೆ ಅಥವಾ ವೈಸ್ ವರ್ಸಾ, (ಹುಡುಗ-ಹುಡುಗಿ ಇಬ್ಬರೂ ಶ್ರೀಮಂತರಾಗಿದ್ದರೆ ಕತೆಯಲ್ಲಿ ಸೆಂಟಿಮೆಂಟು ಇರುವುದಿಲ್ಲ),  ಇಬ್ಬರೂ ಹಾಡಿ ಕುಣಿದಾಡುತ್ತಾರೆ, ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಾರೆ, ಮಧ್ಯೆ ಮಧ್ಯೆ ಸಮರ್ಪಯಾಮಿ ಅಂತ ಬರುವ ಖಳನನ್ನು ನಾಯಕ ಸದೆಬಡಿಯುತ್ತಾನೆ. ಈಗ ಮಧ್ಯಂತರ. ಅವರಿಬ್ಬರ ಪ್ರೀತಿಗೆ ಅಪ್ಪ ಒಪ್ಪುವುದಿಲ್ಲ, ಅಮ್ಮ ಇಮೋಷನಲ್ ಬ್ಲಾಕ್ ಮೇಲ್ ಮಾಡುತ್ತಾಳೆ, ಹುಡುಗ ಗಡ್ಡಬಿಟ್ಟು ಕೈಯಲ್ಲಿ ಬಾಟಲ್ ಹಿಡಿದು ಒಂದು ಪ್ಯಾಥೋ ಹಾಡುತ್ತಾನೆ, ಕೊನೆಗೆ ಅವರಿಬ್ಬರೂ ವಿಧಿಯಿಲ್ಲದೇ ಮನೆಬಿಟ್ಟು ಓಡಿಹೋಗುತ್ತಾರೆ, ಒಂದೋ ಸಮುದ್ರಕ್ಕೆ ಹಾರಿ ಸಾಯುತ್ತಾರೆ ಅಥವಾ ಯಾವುದೋ ಊರಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ. ಇಲ್ಲಿಗೆ ಶುಭಂ.

ಹಳೇ ಸಿನಿಮಾ ಕತೆಗಳು ಇದ್ದಿದ್ದು ಹಾಗೇ.ಪ್ರೇಮಿಗಳು ಮದುವೆ ಆದಮೇಲೆ ಏನಾಯಿತು ಅಂತ ಯಾವ ಸಿನಿಮಾಗಳೂ ಹೇಳುತ್ತಿರಲಿಲ್ಲ. ಆದರೆ ರಘುವೀರ್ ಬದುಕು ಅದನ್ನು ಹೇಳುತ್ತದೆ, ಸಾವು ಕೂಡಾ ಅದನ್ನೇ ಹೇಳುತ್ತದೆ. ಇಲ್ಲೂ ಖಳರಿದ್ದರು, ರಘುವೀರ್ ಒಳಗೇ  ಅಗೋಚರ ಖಳರೂ ಇದ್ದರು. ಆತನನ್ನು ಹರಿದು ಮುಕ್ಕಿದ ವ್ಯಸನಗಳು, ಹತಾಶೆಗಳು, ಈಡೇರದ ಹಂಬಲಗಳು, ಅರ್ಧಕ್ಕೇ ಸತ್ತುಹೋದ ಕನಸುಗಳು,  ಇವೆಲ್ಲವನ್ನು ಏನೂಂತ ಕರೀತೀರಿ?

ಇದು ಸಿನಿಮಾಗೆ ಹೇಳಿ ಮಾಡಿಸಿದ ವಸ್ತು ಎಂದು ಯಾರಾದರೂ ಹೇಳಬಹುದು, ಬೇರೆ ಯಾರಿಗ್ಯಾಕೆ, ಸ್ವತಃ ರಘುವೀರನಿಗೇ ತನ್ನ ಬದುಕಿನ ಕತೆಯನ್ನು ಸಿನಿಮಾ ಮಾಡುವ ಆಸೆಯಿತ್ತು. ‘ಈ ಪ್ರೀತಿ ಯಾರಿಗೋಸ್ಕರ’ಅನ್ನುವ ಟೈಟಲ್ ಇಟ್ಟುಕೊಂಡು ಶೂಟಿಂಗಿಗೆ ಹೊರಟಿದ್ದರು ಕೂಡಾ.  ಆದರೆ ರಘುವೀರ್ ಬದುಕನ್ನು ಒನ್ ಲೈನಿಗೆ ಇಳಿಸಿದರೆ ಅದು ಮಾಮೂಲು ಲವ್ ಸ್ಟೋರಿಯೇ ಆಗುತ್ತದೆ. ಒಬ್ಬ ಜನಪ್ರಿಯ ನಟ ಮತ್ತು ಜನಪ್ರಿಯ ನಟಿ.  ಅಪ್ಪ ಅಮ್ಮನ ಇಷ್ಟಕ್ಕೆ ವಿರುದ್ಧವಾಗಿ ಅವರು ಮದುವೆಯಾಗುತ್ತಾರೆ, ಅಪ್ಪನಿಗೆ ಸಿಟ್ಟು ಬಂದು ಮಗನನ್ನು ಮನೆಯಾಚೆ ಹಾಕುತ್ತಾರೆ, ಗಂಡಹೆಂಡತಿ ಇಬ್ಬರೂ ಪರವೂರಲ್ಲಿ ಬದುಕು ಕಟ್ಟಿಕೊಳ್ಳವುದಕ್ಕೆ ಹೆಣಗುತ್ತಾರೆ, ಈ ಪ್ರೊಸೆಸ್ಸಲ್ಲಿ ಗಂಡಹೆಂಡತಿ ನಡುವೆ ಮನಸ್ತಾಪ ತಲೆದೋರುತ್ತದೆ. ಆಕೆಗೆ ಹುಟ್ಟಿದಾರಭ್ಯ ಇದ್ದ ರೋಗವೇ ನೆಪವಾಗಿ ತೀರಿಕೊಳ್ಳುತ್ತಾಳೆ, ಅದಕ್ಕೂ ಮುಂಚೆ ಈತ ವಾಪಸ್ ಊರಿಗೆ ಬಂದು ಅಪ್ಪನ ಮಾತಿನಂತೆ ಸಂಬಂಧಿಕರ ಹುಡುಗಿಯನ್ನೇ ಮದುವೆಯಾಗುತ್ತಾನೆ,  ಆ ಹೊತ್ತಿಗೆ ಆತನ ಜನಪ್ರಿಯತೆ ಪಾತಾಳಕ್ಕೆ ಜಾರಿರುತ್ತದೆ, ಮಾಡುವುದಕ್ಕೆ ಕೆಲಸ ಇರುವುದಿಲ್ಲ, ಕುಡಿತಕ್ಕೆ ದಾಸನಾಗುತ್ತಾನೆ, ಕಂಪನಿ ಕೊಡುವುದಕ್ಕೆ ಗೆಳೆಯರಿರುತ್ತಾರೆ. ಕೊನೆಗೊಂದು ದಿನ ಆತನೂ ಸಾಯುತ್ತಾನೆ. ಹೀಗೆ ಎರಡು ಜೀವಗಳ ಹುಟ್ಟು ಸಾವಿನಲ್ಲಿ ಧನ್ಯತೆ ಪಡೆಯುತ್ತದೆ. ಇದರಲ್ಲಿ ಹೊಸದೇನಿದೆ ಹೇಳಿ?

ಹಾಗಾದರೆ ರಘುವೀರನನ್ನು ಕೊಂದಿದ್ದು ಯಾರು?ಮನೆಯಿಂದಾಚೆ ದೂಡಿದ ಅಪ್ಪನ ಕೋಪವೋ,  ಕಳೆದು ಹೋದ ಜನಪ್ರಿಯತೆಯೋ, ಮೊದಲ ಪತ್ನಿಯೊಂದಿಗಿನ ಮನಸ್ತಾಪವೋ,  ತೀರಿಕೊಂಡ ಆಕೆಯ ನೆನಪೋ, ಕುಡಿತವೆಂಬ ಶತ್ರುವೋ ಅಥವಾ ತಾನೇರ ಬೇಕಾದ ಎತ್ತರಕ್ಕೆ ಏರಲಿಲ್ಲ ಅನ್ನುವ ಹತಾಶೆಯೋ?ಎಲ್ಲವೂ ಹೌದು. ಪ್ರೀತಿ ವೈಫಲ್ಯದಿಂದ ದುಃಖ, ವೃತ್ತಿವೈಫಲ್ಯದಿಂದ ಹತಾಶೆ, ಅದರಿಂದ ಹೊರಬರುವುದಕ್ಕೆ  ಕುಡಿತ,  ಹೀಗೇ ನಸೀಬು ನೆಟ್ಟಗಿಲ್ಲದ ವ್ಯಕ್ತಿ ಹಂತಹಂತವಾಗಿ ಜಾರುತ್ತಾ ಹೋಗುತ್ತಾನೆ. ಇದೊಂದು ಸರಪಳಿ.  ಅದರಲ್ಲೂ ಆತ ಸಿನಿಮಾ ನಟನಾಗಿದ್ದರೆ ಈ ಪತನಕ್ಕೆ ಇನ್ನಷ್ಟು ವೇಗ ದಕ್ಕುತ್ತದೆ. ಕೊನೆಗೆ ಆತ ತೀರಿಕೊಂಡಾಗ ಆತನ ಜೊತೆಗಿದ್ದವರೇ ಹೇಳುತ್ತಾರೆ, ಇದು ಸ್ವಯಂಕೃತಾಪರಾಧ.  ಹಾಗೆ ನೋಡುತ್ತಾ ಹೋದರೆ ನಾವು ಕಂಡ ಸಾವುಗಳೆಲ್ಲವೂ ಸ್ವಯಂಕೃತಾಪರಾಧಗಳೇ. ಯಾವುದೋ ಖಾಯಿಲೆಗೆ ಬಲಿಯಾಗಿ ಒಬ್ಬ ಸತ್ತರೆ, ಆತ ತನ್ನ ಆರೋಗ್ಯ ಚೆನ್ನಾಗಿ ನೋಡಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ ಅನ್ನುತ್ತೇವೆ. ಸಂಸಾರ ನಿಭಾಯಿಸುವುದಕ್ಕೆ ಸಾಲ ಮಾಡಿ, ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರೆ ಆತ ಸಾಲ ಮಾಡುವ ಅಗತ್ಯವಾದರೂ ಏನಿತ್ತು ಅನ್ನುತ್ತೇವೆ, ಅಪಘಾತದಲ್ಲಿ ಸತ್ತರೆ ಆತ ಅಷ್ಟೊಂದು ಸ್ಪೀಡಾಗಿ ಗಾಡಿ ಓಡಿಸಿದರೆ ಇನ್ನೇನಾಗುತ್ತೆ ಅನ್ನುತ್ತೇವೆ. ಸತ್ತುಹೋದವನ ಹೆಣದ ಮೇಲೆ ಎಷ್ಟು ಆರೋಪಗಳ ಮೂಟೆಯನ್ನಾದರೂ ಹೊರೆಸಬಹುದು. ಯಾಕೆಂದರೆ ಸಮಜಾಯಿಷಿ ಹೇಳುವುದಕ್ಕೆ ಆತ ಇರುವುದಿಲ್ಲವಲ್ಲ.ರಘುವೀರ್ ಸ್ವಯಂಕೃತಾಪರಾಧದಿಂದಲೇ ತೀರಿಕೊಂಡರು ಎಂದೇ ಅಂದುಕೊಳ್ಳೋಣ, ಆದರೆ ಆತ ಅಪರಾಧ ಮಾಡುವಾಗ ಸ್ನೇಹಿತರು ಅನಿಸಿಕೊಂಡವರು ಅದನ್ನು ತಡೆಯಬಹುದಾಗಿತ್ತಲ್ವಾ, ಅವನ ಮನಸ್ಸಲ್ಲೇನಿದೆ ಅಂತ ಒಂದು ಸಾರಿ ಇಣುಕಿನೋಡಬಹುದಾಗಿತ್ತಲ್ವಾ, ಆತನ ಸಂಕಟಕ್ಕೆ ಹೆಗಲುಕೊಡಬಹುದಾಗಿತ್ತಲ್ವಾ. ಹಾಗಂತ ಹೇಳಿದರೆ ಅದಕ್ಕೂ ಒಂದು ಉತ್ತರ ಸಿದ್ಧವಾಗಿರುತ್ತದೆ, “ಅಯ್ಯೋ ಹೋಗಿ ಸರ್, ನಮ್ಮ ಮಾತೆಲ್ಲಿ ಕೇಳ್ತಾನೆ ಅವನು. ಏನಾದ್ರೂ ಬುದ್ದಿ ಹೇಳೋದಕ್ಕೆ ಹೋದ್ರೆ ನಮಗೇ ತಿರುಗಿಬೀಳ್ತಿದ್ದ”.

ಆದರೆ ನಾನು ಕಂಡ ಹಾಗೆ ರಘುವೀರ್ ಹಾಗಿರಲಿಲ್ಲ. ಆತ ತನ್ನ ವೃತ್ತಿಬದುಕಲ್ಲಿ ಏರುದಾರಿಯಲ್ಲಿದ್ದಾಗ ಆತನ ನಡವಳಿಕೆಯನ್ನು ನಾನು ಹತ್ತಿರದಿಂದ ಗಮನಿಸಿದ್ದೆ. ಶ್ರೀಮಂತರ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ಚಿತ್ರವಿಚಿತ್ರ ಶೋಕಿಗಳಾವುವೂ ಆತಗಿರಲಿಲ್ಲ. ನಿಮಗೆ ಗೊತ್ತಿದೆಯೋ ಇಲ್ಲವೋ, ರಘುವೀರ್ ಅಪ್ಪ ಒಂದು ಕಾಲದಲ್ಲಿ ಬೆಂಗಳೂರಿನ ಖ್ಯಾತ ಕಂಟ್ರಾಕ್ಟರ್ ಆಗಿದ್ದರು. ಚೌಡಯ್ಯ ಸಭಾಂಗಣವನ್ನು ಕಟ್ಟಿಸಿದ್ದು ಅವರೇ ಎಂದು ರಘುವೀರ್ ಹೇಳಿದ ನೆನಪು. ಮಗ ಸಿನಿಮಾ ನಟನಾಗುವುದಕ್ಕೆ ಅವರದ್ದೇನೂ ತಕರಾರಿರರಲಿಲ್ಲ, ಆದರೆ ಮಗ, ಸಿನಿಮಾ ನಟಿಯನ್ನು ಮದುವೆಯಾಗುವುದಕ್ಕೆ ಒಪ್ಪಿಗೆಯಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ರಘುವೀರ್ ತನ್ನ ಅಕ್ಕನ ಮಗಳನ್ನು ಮದುವೆಯಾಗಬೇಕು ಅನ್ನುವುದು ಬಹಳ ಮೊದಲೇ ನಿಶ್ಚಿತವಾಗಿತ್ತು.

ರಘುವೀರ್ ದುರಂತ  ಬದುಕಿನ ಮೊದಲ ಪುಟ ಶುರುವಾಗುವುದೇ ಅಲ್ಲಿಂದ.

raghuveer, sindhu in shrungara kavya

ಶೃಂಗಾರಕಾವ್ಯ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಾಯಕಿ ಸಿಂಧುವನ್ನು  ರಘುವೀರ್ ಇಷ್ಟಪಟ್ಟರು. ಅಷ್ಟಕ್ಕೇ ಅವರ ತಂದೆ ಸಿಟ್ಟಾಗಿ ಮಗನನ್ನು ಮನೆಯಿಂದಾಚೆ ಕಳಿಸಿದರು.  ಗಂಡಹೆಂಡತಿ ಚೆನ್ನೈಯಲ್ಲಿ ಸಂಸಾರ ಹೂಡಿದರು. ಅಷ್ಟರಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು.  ಸಿಂಧುವನ್ನು ಕರೆದುಕೊಂಡು ಬೆಂಗಳೂರಿಗೆ ಬರಬೇಕು ಮತ್ತು ತನ್ನ ವೃತ್ತಿಜೀವನವನ್ನು ಮುಂದುವರಿಸಬೇಕು ಅನ್ನುವುದು ರಘು ಆಸೆಯಾಗಿತ್ತು. ಆಕೆಗೆ ಚೆನ್ನೈ ಬಿಟ್ಟು ಬರುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಈ ಮಧ್ಯೆ ಒಬ್ಬ ಮಗಳು ಹುಟ್ಟಿದಳು. ಗಂಡಹೆಂಡತಿ ಬೇರೆಬೇರೆಯಾದರು.

ಈ ಮದುವೆ ಮುರಿದುಬಿದ್ದ ಮೇಲೆ ರಘು ಬೆಂಗಳೂರಿಗೆ ಬಂದು ಅಪ್ಪನ ಜೊತೆ ರಾಜಿಯಾದರು, ಅಕ್ಕನ ಮಗಳನ್ನೇ ಮದುವೆಯಾದರು. ಅಲ್ಲಿ ಸಿಂಧು ಅಸ್ತಮಾ ರೋಗ ಉಲ್ಬಣಿಸಿ ತೀರಿಕೊಂಡಳು. ಆ ಪಾಪಪ್ರಜ್ಞೆ, ಜೊತೆಗೆ ಸಾಲುಸಾಲಾಗಿ ಸೋಲುತ್ತಿದ್ದ ಸಿನಿಮಾಗಳು, ಇವೆರಡೂ ಸೇರಿಕೊಂಡು ರಘುವೀರ್ ಹಣ್ಣಾಗಿ ಹೋದರು. ಚೈತ್ರದ ಪ್ರೇಮಾಂಜಲಿ ಮತ್ತು ಶೃಂಗಾರಕಾವ್ಯದ ನಂತರ ಅವರ ಯಾವ ಚಿತ್ರಗಳೂ ಗೆಲ್ಲಲಿಲ್ಲ. ಅದ್ಯಾಕೋ ಎಸ್.ನಾರಾಯಣ್ ವಿರುದ್ಧ ರಘುವೀರ್ ವಿಪರೀತ ಸಿಟ್ಟಾಗಿದ್ದರು. ಯಾರೇ ಪತ್ರಕರ್ತರು ಭೇಟಿಯಾದರೂ ನಾರಾಯಣ್ ಅವರನ್ನು ವಾಚಾಮಗೋಚರ ಬೈಯ್ಯುತ್ತಿದ್ದರು.

raghuveer, sindhu in thungabhadra movie

ನಂಬಿದ ಸಿನಿಮಾ ವೃತ್ತಿ ಕೈಹಿಡಿಯದೇ ಇದ್ದಾಗ ವಿಪರೀತ ಹತಾಶೆ ಮತ್ತು ಗೊಂದಲಕ್ಕೊಳಗಾದ ರಘು, ತನ್ನ ತಂದೆಯ ಥರ ಬಿಲ್ಡರ್ ಆಗುವುದಕ್ಕೆ ಹೊರಟರು. ಆದರೂ ಒಳಗೊಳಗೆ ಹೀರೋ ಆಗುವ ಆಸೆ, ಹಾಗೆ ಶುರುವಾಗಿದ್ದು ‘ಮುಗಿಲ ಚುಂಬನ’. ಯಾರೋ ನಿರ್ದೇಶಿಸಬೇಕಾಗಿದ್ದ ಚಿತ್ರವನ್ನು ರಘುವೀರ್ ಅವರೇ ನಿರ್ದೇಶಿಸಬೇಕಾದ ಸಂದರ್ಭ ಬಂತು. ಹಣಕಾಸಿನ ತೊಂದರೆಯಿಂದ ಚಿತ್ರದ ಶೂಟಿಂಗ್ ತಡವಾಯಿತು, ಕೊನೆಗೂ ಆ ಚಿತ್ರ ಬಿಡುಗಡೆಯಾಯಿತೋ ಇಲ್ಲವೋ ಗೊತ್ತಿಲ್ಲ. ಅದರ ಬಿಡುಗಡೆಗೋಸ್ಕರ ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಅವರು ಆಗಾಗ ಹೇಳುತ್ತಿದ್ದರು. ಪತ್ರಕರ್ತರು ನಗಬೇಕೋ ಅಳಬೇಕೋ ಅನ್ನುವುದು ಗೊತ್ತಾಗದೆ ಸುಮ್ಮನಿರುತ್ತಿದ್ದರು. ಯಾಕೆಂದರೆ ರಘುವೀರ್ ಇತಿಹಾಸದ ಪುಟಗಳಿಗೆ ಸೇರಿ ಬಹಳ ವರ್ಷಗಳೇ ಆಗಿದ್ದವು. ಒಬ್ಬ ನಟ ಒಂದು ವರ್ಷ ಮುಖ ತೋರಿಸಿದೇ ಇದ್ದರೆ ಮರೆತುಬಿಡುವ ಪ್ರೇಕ್ಷಕರು, ಹತ್ತು ವರ್ಷ ನಾಪತ್ತೆಯಾಗಿದ್ದ ರಘುವೀರನನ್ನು ಹೇಗೆ ನೆನಪಲ್ಲಿಟ್ಟುಕೊಂಡಾರು?

ಕೈಕೊಟ್ಟ ಸಿನಿಮಾ, ಕೈಹಿಡಿಯದ ಬಿಸಿನೆಸ್ಸು, ಕಳಕೊಂಡ ಹೆಂಡತಿಯ ನೆನಪು, ಇವೆಲ್ಲವೂ ಸೇರಿಕೊಂಡು ರಘುವೀರನನ್ನು ಕುಡಿತದ ಕಡೆ ದೂಡಿದವು. ಬಿಟಿಎಂ ಲೇ ಔಟಲ್ಲಿದ್ದ ತನ್ನ ಮನೆಯಲ್ಲೇ ಸದಾಕಾಲ ಕುಡಿಯುತ್ತಾ ಕುಳಿತಿರುತ್ತಿದ್ದ ರಘುವೀರ್ ಚಿತ್ರೋದ್ಯಮದಿಂದ ಮತ್ತು ವಾಸ್ತವದಿಂದ ಬಹಳ ದೂರ ಹೊರಟುಹೋಗಿದ್ದರು. ಈ ಮಧ್ಯೆ ಅದ್ಯಾರದೋ ಪಿತೂರಿಯಿಂದ ಮೈಸೂರಲ್ಲಿ ವೇಶ್ಯೆಯೊಬ್ಬಳ ಜೊತೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು ಅವರ ಬದುಕಿಗೆ ಹೊಡೆದ ಕೊನೆಯ ಮೊಳೆಯಾಯಿತು.

ನಾನು 22 ವರ್ಷದ ಹಿಂದೆ ಕಂಡ ರಘುವೀರ್ ತೀರಾ ಮುಗ್ಧನಾಗಿದ್ದ. ಆತನ ಕನ್ನಡವೂ ಕೊಂಚ ವಿಚಿತ್ರವಾಗಿತ್ತು. ಅದಕ್ಕೆ ಆತನೇ ಕೊಡುತ್ತಿದ್ದ ಕಾರಣವೂ ತಮಾಷೆಯಾಗಿತ್ತು. “ನಾವು ತಿಗಳರು ಸಾರ್, ಅದಕ್ಕೆ ನಮ್ಮ ನಾಲಿಗೆ ಸರಿಯಾಗಿ ಹೊರಳುವುದಿಲ್ಲ”.  ಇದೇ ಮಾತನ್ನು ಆತನ ಬಗ್ಗೆ ಇನ್ನೊಬ್ಬರು ಹೇಳಿದ್ದರೆ ಅದು ಹಿಂದುಳಿದವರ ಮೇಲಿನ ದೌರ್ಜನ್ಯ ಆಗಿರುತ್ತಿತ್ತೇನೋ. ಆದರೆ ರಘುವೀರ್ ಮಾತಲ್ಲಿ ತಾನು ತಿಗಳರವನು ಅನ್ನುವಾಗ ಹೆಮ್ಮೆಯಾಗಲಿ, ವಿಷಾದವಾಗಲಿ ಎರಡೂ ಇರಲಿಲ್ಲ. ತನ್ನ ಕನ್ನಡ ಅಷ್ಟಕಷ್ಟೇ ಅನ್ನುವುದನ್ನು ಒಂದು ಸರಳ ಹೇಳಿಕೆಯ ಥರವೇ ಆತ ಹೇಳಿದ್ದ. ಆ ಬಗ್ಗೆ ನಾಚಿಕೆಯಾಗಲಿ, ನಾಟಕವಾಗಲಿ ಇರಲಿಲ್ಲ.

ರಘುವೀರ್ ಅಂಥಾ ಸ್ಪುರದ್ರೂಪಿಯಾಗಿರಲಿಲ್ಲ, ಇತ್ತೀಚೆಗಂತೂ ಆತನ ಮುಖದಲ್ಲಿ ವಯಸ್ಸಿಗೆ ಮೀರಿದ ಮುದಿತನ ಕಾಣಿಸುತ್ತಿತ್ತು.  ಆತ ಒಳ್ಳೆಯ ನಟನೂ ಆಗಿರಲಿಲ್ಲ, ಕುಣಿತ-ಹೊಡೆದಾಟಗಳಲ್ಲಿ ತಕ್ಕಮಟ್ಟಿಗೆ ನಿಪುಣತೆಯನ್ನು ಹೊಂದಿದ್ದ. ಅಷ್ಟಕ್ಕೂ 

‘ಚೈತ್ರದ ಪ್ರೇಮಾಂಜಲಿ’ಚಿತ್ರ ಹಿಟ್ ಆಗಿದ್ದು ರಘುವೀರ್ ನಟನೆಯಿಂದಾಗಲಿ, ನಾರಾಯಣ್ ನಿರ್ದೇಶನದಿಂದಾಗಲಿ ಅಲ್ಲ. ಆ ಚಿತ್ರದ ನಿಜವಾದ ನಾಯಕ ಹಂಸಲೇಖಾ. ಪ್ರೇಮಲೋಕದ ನಂತರ ಅಂಥಾದ್ದೊಂದು ಸಂಗೀತದ ಘಮವಿರುವ ಚಿತ್ರ ಕನ್ನಡದಲ್ಲಿ ಬಂದೇ ಇರಲಿಲ್ಲ. ‘ಪ್ರೇಮಲೋಕ’ದಲ್ಲಿಹೊಸಪ್ರಯೋಗಗಳಿದ್ದರೆ, ‘ಚೈತ್ರದ ಪ್ರೇಮಾಂಜಲಿ’ಯಲ್ಲಿಇದ್ದಿದ್ದು ಕೇವಲ ಮಾಧುರ್ಯ. ಎಸ್. ನಾರಾಯಣ್ ಅವರ ವೃತ್ತಿಬದುಕಿನ ಮೊದಲ ಮತ್ತು ಕೊನೆಯ ಅತ್ಯುತ್ತಮ ಚಿತ್ರ ಚೈತ್ರದ ಪ್ರೇಮಾಂಜಲಿ ಎಂದು ನಾನಿಂದಿಗೂ ನಂಬಿದ್ದೇನೆ, ಅದೇ ಮಾತು ರಘುವೀರ್ ಗೂ ಅನ್ವಯವಾಗುತ್ತದೆ.  

ನಾನು ಕಳೆದ ಕೆಲವು ವರ್ಷಗಳಿಂದ ರಘುವೀರನನ್ನು ನೋಡಿರಲಿಲ್ಲ. ಆದರೆ ಹೇಗಿದ್ದಾತ ಹೇಗಾಗಿ ಹೋದ ಅನ್ನುವುದನ್ನು ಒಂದು ಸಾರಿ ಪತ್ರಕರ್ತ ವಿಕಾಸ್ ನನಗೆ ವಿವರಿಸಿದ್ದರು.  ಎರಡು ವರ್ಷದ ಹಿಂದೆ ಸುವರ್ಣ ನ್ಯೂಸ್ ನಲ್ಲಿ ‘ಔಟ್ ಆಫ್ ಫೋಕಸ್’ಅನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಗೌರೀಶ್ ಅಕ್ಕಿಯವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮಕ್ಕೆ  ಸ್ಕ್ರಿಪ್ಟ್ ಬರೆಯುವ ಕೆಲಸ ವಿಕಾಸ್ ನೇಗಿಲೋಣಿ ಅವರದು. ಆ ಹೊತ್ತಿಗೆ ರಘುವೀರ್ ಔಟ್ ಆಫ್ ಫೋಕಸ್ ಆಗಿ ಹತ್ತು ವರ್ಷವೇ ಆಗಿತ್ತು. ಅವರನ್ನು ಭೇಟಿಯಾಗುವುದಕ್ಕೆ ಕೆಮರಾಮನ್ ಸಮೇತ ವಿಕಾಸ್ ಆತನ ಮನೆಗೆ ಹೋಗಿದ್ದರಂತೆ. ಮುಂದಿನ ವಿವರ ವಿಕಾಸ್ ಹೇಳಿದ ಪ್ರಕಾರ ಹೀಗಿದೆಃ

“ನಾನು ಅವರ ಮನೆಗೆ ಹೋದಾಗ ಮನೆತುಂಬಾ ಆತನ ಸ್ನೇಹಿತರಿದ್ದರು.. ಅವರೆಲ್ಲರೂ ಕುಡಿಯೋದಕ್ಕೆ ಕಾಯುತ್ತಿದ್ದರು. ಇನ್ನೂ ಸೂರ್ಯ ಮುಳುಗಿರಲಿಲ್ಲ. ಆದರೂ ಆತನಿಗೆ ಸಂದರ್ಶನಕ್ಕಿಂತ ಕುಡಿತವೇ ಮುಖ್ಯವಾಗಿತ್ತು, ಗೆಳೆಯರಿಗೂ ಅಷ್ಟೆ. ಇನ್ನೇನು ಆರು ಗಂಟೆಯಾಯಿತು ಅನ್ನೋವಾಗ ರಘುವೀರ್ ಎದ್ದುನಿಂತರು. ಗೆಳೆಯರ ಜೊತೆ ಮನೆಯ ಮೇಲೆ ಹೊರಟೇ ಹೋದರು. ನಾವು ಹೊರಗೆ ಬರುವಾಗ ಮಹಡಿಯಲ್ಲಿ ಬಾಟಲ್ ಓಪನ್ ಆದ ಸದ್ದು ಕೇಳಿಸಿತು, ಅದರ ಬೆನ್ನಿಗೆ ಗೆಳೆಯರ ಕೇಕೆ. ಈ ಮಧ್ಯೆ

ಸಂದರ್ಶನದುದ್ದಕ್ಕೂ ಎಸ್. ನಾರಾಯಣ್ ಮೇಲೆ ರಘುವೀರ್ ಹರಿಹಾಯ್ದರು. ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ನಾರಾಯಣ್ ಅವರನ್ನು ನಿರ್ದೇಶಕ ಮಾಡಿದ್ದು ನಾನೇ. ಆದರೆ ಆತನೇ ನನಗೆ ಮೋಸ ಮಾಡಿದ ಅನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು”.

ನಾನು ಮೊದಲು ಹೇಳಿದ ಹಾಗೆ ಪ್ರೇಮಕತೆಗಳು ಯಾವತ್ತೂ ಬದಲಾಗುವುದಿಲ್ಲ, ನಟನಟಿಯರಷ್ಟೇ ಬದಲಾಗುತ್ತಾರೆ. ಕೆಲವು ಪ್ರೇಮಕತೆಗಳು ದುರಂತ ಕಾಣುತ್ತವೆ, ಕೆಲವು ಸುಖಾಂತ ಕಾಣುತ್ತವೆ. ಚಿತ್ರೋದ್ಯಮ ಗೆದ್ದವರ ಕತೆಗಳನ್ನಷ್ಟೇ ಕೇಳುತ್ತದೆ, ಸೋತವರು ಹೀಗೆ ನಾಲ್ಕು ಪ್ಯಾರಾಗಳಲ್ಲಿ ಬಂದುಹೋಗಿ ಇನ್ನೊಂದು ತಿಂಗಳಲ್ಲಿ ಮರೆತುಹೋಗುತ್ತಾರೆ.ನವೀನ್ ಯಾಲಂಕಿ ಎಂಬ ನಟ ತೀರಿಕೊಂಡದ್ದು ಜನರಿಗೆ ಗೊತ್ತಾಗಿದ್ದು ಕನ್ನಡಪ್ರಭದಲ್ಲಿ ಪ್ರಕಟವಾದ ಪುಟ್ಟ ಜಾಹಿರಾತು ನೋಡಿದ ನಂತರ.

ಗೋಡೆ ಮೇಲಿರುವ ಫೋಟೋದ ಬೆಲೆ ಗೊತ್ತಿರುವುದು ಆ ವ್ಯಕ್ತಿಯ ಅಪ್ಪ ಅಮ್ಮನಿಗೆ ಮತ್ತು ಮಕ್ಕಳಿಗೆ ಮಾತ್ರ.

Also See

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.