Print 

User Rating: 0 / 5

Star inactiveStar inactiveStar inactiveStar inactiveStar inactive
 
maanikya image
sudeep, ravichandran

ನಾನು ಅಂಕಿಅಂಶಗಳನ್ನು ಇಷ್ಟಪಡುವ ಮನುಷ್ಯ ಅಲ್ಲ. ನೀವು ಹುಟ್ಟಿದ ದಿನಾಂಕ ಹೇಳಿ ಎಂದು ಯಾರಾದರೂ ಥಟ್ಟನೆ  ಕೇಳಿದರೆ ಸ್ವಲ್ಪ ಹೊತ್ತು ತಡಬಡಾಯಿಸುತ್ತೇನೆ. ಹಾಗಂತ ನಾನು ತೀರಾ ಮರೆಗುಳಿಯೇನೂ ಅಲ್ಲ.  ನನಗಿಷ್ಟವಾದ ಹಾಡು, ನನಗಿಷ್ಟವಾದ ಸಿನಿಮಾ, ನನಗಿಷ್ಟವಾದ ನಟನ ಹಾವಭಾವಗಳು ಇವೆಲ್ಲವೂ ಭಾವಕೋಶದಲ್ಲಿ ಭದ್ರವಾಗಿರುತ್ತದೆ.  ಆದರೆ ಕೆಲವರಿಗೆ ಅಂಕಿಅಂಶಗಳ ಶೋಕಿ. ಜನ್ಮದಿನವಷ್ಟೇ ಅಲ್ಲ, ಯಾವುದೋ ಜಮಾನದಲ್ಲಿ ಅವರಿಗೊಂದು ಪುಟ್ಟ ಅಪಘಾತವಾದ ಇಸ್ವಿ, ದಿನ, ದಿನಾಂಕ ಇವೆಲ್ಲವನ್ನೂ ಕರಾರುವಕ್ಕಾಗಿ ಹೇಳುತ್ತಾರೆ. ಇದನ್ನಾದರೂ ಸಹಿಸಿಕೊಳ್ಳಬಹುದು. ಆದರೆ ಅವರ ಅಂಕಿಅಂಶ ಪ್ರೇಮ ಎಷ್ಟೊಂದು ಉಗ್ರವಾಗಿರುತ್ತದೆ ಅಂದರೆ  ಅವರ ಮುಂದೆ ನೀವು ಕ್ಯಾಶುವಲ್ ಆಗಿ ಏನನ್ನೂ ಮಾತಾಡುವ ಹಾಗಿಲ್ಲ, ತಕ್ಷಣ ತಿದ್ದುಪಡಿ ಹಾಕುತ್ತಾರೆ. ಉದಾಹರಣೆಗೆ ಯಾವುದೋ ಮಾತಿನ ಮಧ್ಯೆ,  ಇಂಡಿಯಾ-ಪಾಕಿಸ್ತಾನ ಮ್ಯಾಚಿಗೆ ಅಂದಾಜು ಐವತ್ತು ಸಾವಿರ ಜನ ಸೇರಿದ್ದರು ಅಂದರೆ ಸಾಕು, ಅದು ಐವತ್ತಲ್ಲ, ನಲುವತ್ತೊಂಬತ್ತು ಸಾವಿರದ ಏಳುನೂರ ಇಪ್ಪತ್ತೆರಡು ಅಂತ ಲೆಕ್ಕ ಕೊಡುತ್ತಾರೆ. ಶಕುಂತಳಾದೇವಿಯ ಸಂಬಂಧಿಕರು ಇವರು.  ಸಚಿನ್ ತೆಂಡುಲ್ಕರ್ ಅಂದ ತಕ್ಷಣ ಆತ ಆಡಿದ ಒಟ್ಟಾರೆ ಮ್ಯಾಚುಗಳು, ಆ ಪೈಕಿ ಒನ್ ಡೇ ಮ್ಯಾಚೆಷ್ಟು, ಟೆಸ್ಟುಗಳೆಷ್ಟು, ವಿದೇಶಿ ನೆಲದಲ್ಲಿ ಆತ ಹೊಡೆದ ಸೆಂಚುರಿಗಳ ಲೆಕ್ಕ, ಬೌಂಡರಿಗಳು, ಸಿಕ್ಸರುಗಳು, ಆತನ ಮಗನ ವಯಸ್ಸು,   ಪ್ರತಿಯೊಂದನ್ನೂ ಕೊಂಚವೂ ತಡವರಿಸದೆ ಗಿಳಿಪಾಠದ ಥರ  ಒಪ್ಪಿಸಿಬಿಡುತ್ತಾರೆ. ಸಚಿನ್ ಮೊದಲಬಾರಿ ಆಸ್ಟ್ರೇಲಿಯಾಗೆ ಹೋದಾಗ ಯಾವ ಬಣ್ಣದ ಟೀ ಶರ್ಟ್ ಹಾಕಿಕೊಂಡಿದ್ದ ಅನ್ನುವುದನ್ನೂ ಬೇಕಾದರೆ ಹೇಳಿಬಿಡುತ್ತಾರೆ.

ಸಿನಿಮಾದಲ್ಲೂ ಇಂಥಾ ಅಂಕಿಅಂಶಗಳ ಪ್ರೇಮಿಗಳಿರುತ್ತಾರೆ. ಅದರಲ್ಲೂ ಸ್ಟಾರ್ ಗಳ ಅಭಿಮಾನಿಗಳಿಗೆ ತಮ್ಮ ಗುರು ನಟಿಸಿದ ಎಲ್ಲಾ ಚಿತ್ರಗಳ ಹೆಸರುಗಳಿಂದ ಹಿಡಿದು, ಆ ಚಿತ್ರದಲ್ಲಿ ಆತ ಹಾಕಿದ ಡ್ರೆಸ್ಸು,  ನಟಿಸಿದ ನಾಯಕಿಯರ ಹೆಸರು,  ಹಾಡುಗಳು, ಫೈಟುಗಳು ಚಿತ್ರೀಕರಣಕೊಂಡ ಜಾಗ ಇವೆಲ್ಲವೂ ಕಂಠಪಾಠ. ಐಎಎಸ್  ಪರೀಕ್ಷೆಗೆ ಬರೆಯುವ ಥರ ಇವೆಲ್ಲವನ್ನೂ ಅವರು ತಮ್ಮ ಮನಸ್ಸಲ್ಲಿ ಬರೆದಿಟ್ಟುಕೊಂಡಿರುತ್ತಾರೆ. ಸಿನಿಮಾ ಪತ್ರಕರ್ತರಲ್ಲೂ ಅಂಕಿಅಂಶ ಪ್ರಿಯರಿರುತ್ತಾರೆ. ಒಮ್ಮೆ ಹಿರಿಯ ಪತ್ರಕರ್ತರೊಬ್ಬರು ನಿರ್ಮಾಪಕರೊಬ್ಬರ ಬಳಿ “ನಿಮ್ಮ ಚಿತ್ರಕ್ಕೆ ಎಷ್ಟು ಅಡಿ ಫಿಲಂ ಶೂಟ್ ಮಾಡಿದ್ದೀರಾ”ಎಂಬ ಪ್ರಶ್ನೆ ಕೇಳಿದ್ದರು. ಆ ನಿರ್ಮಾಪಕ ತಬ್ಬಿಬ್ಬಾಗುತ್ತಾನೆ ಅಂತ ನಾನಂದುಕೊಂಡಿದ್ದೆ. ಆದರೆ ಆತ ಏನೂ ಬೇಸರ ಮಾಡಿಕೊಳ್ಳಲಿಲ್ಲ. ಖರ್ಚಾದ ಫಿಲಂ, ವೇಸ್ಟೇಜು, ಇತ್ಯಾದಿಗಳ ಬಗ್ಗೆ ಕಾಲುಗಂಟೆ ಮಾತಾಡಿದ. ಒಂದು ಸಿನಿಮಾಗೆ ಖರ್ಚಾಗಿರುವ ಫಿಲಂ ಅಡಿಗಳನ್ನು, ಮೀಟರುಗಳನ್ನು  ಕಟ್ಟಿಕೊಂಡು ಓದುಗರಿಗೆ ಏನಾಗಬೇಕು? ಪತ್ರಿಕಾಗೋಷ್ಠಿಗಳಲ್ಲಿ ಈ ರೀತಿಯ ಕೆಲವು ಬಹುನಿರೀಕ್ಷಿತ ಸ್ಟಾಂಡರ್ಡ್ ಅನ್ನಬಹುದಾದ ಪ್ರಶ್ನೆಗಳು ಬಂದುಹೋಗುತ್ತಿರುತ್ತವೆ.  ನಿರ್ಮಾಪಕ ಅಥವಾ ನಿರ್ದೇಶಕರಲ್ಲೂ ಅದೇ ರೀತಿಯ ಸ್ಟಾಂಡರ್ಡ್ ಉತ್ತರಗಳಿರುತ್ತವೆ. ಹೊಸ ನಾಯಕಿಯೊಬ್ಬಳನ್ನು ಈ ಚಿತ್ರದಲ್ಲಿ ನಿಂಗೇನು ಪಾತ್ರ ಅಂತ ಕೇಳಿನೋಡಿ. “ಇದೊಂದು ರೀತಿಯ ಬಬ್ಲಿ ಬಬ್ಲಿ ಕ್ಯಾರೆಕ್ಟರ್”ಎಂದಾಕೆ ಹೇಳದೇ ಇದ್ದರೆ ಬೆಂಗಳೂರಲ್ಲಿ ಮಳೆಯಾಗುತ್ತದೆ!

ನನ್ನ ಇಷ್ಟಾನಿಷ್ಟಗಳು ಏನೇ ಇರಲಿ, ಈಗ ನಡೀತಾ ಇರುವುದು ಅಂಕಿಅಂಶಗಳ ಕಾಲ. ‘ಬಂಗಾರದ ಮನುಷ್ಯ’ಚಿತ್ರ ಬಿಡುಗಡೆಯಾದಾಗ ಜನ ಮೊದಲು ಮಾತಾಡಿಕೊಂಡದ್ದು ಚಿತ್ರದ ಕಂಟೆಂಟ್ ಬಗ್ಗೆ, ನಾಯಕನ ತ್ಯಾಗದ ಬಗ್ಗೆ. ಆಮೇಲೆ ರಾಜ್ ಕುಮಾರ್ ಅಭಿನಯ, ಸಿದ್ದಲಿಂಗಯ್ಯನವರ ನಿರ್ದೇಶನ,  ಹಾಡುಗಳು, ಲೊಕೇಷನ್ ಇತ್ಯಾದಿ ಸಂಗತಿಗಳು ಪ್ರಶಂಸೆಗೆ ಪಾತ್ರವಾದವು. ಈಗ ಚಿತ್ರದ ಕಥಾವಸ್ತು ಮತ್ತು ಅದರ ಮೌಲ್ಯದ ಬಗ್ಗೆ ಯಾರೂ ಮಾತಾಡುವುದಿಲ್ಲ. ಚಿತ್ರದ ನಾಯಕ ಯಾರು ಅನ್ನುವುದು ಮುಖ್ಯವಾಗುತ್ತದೆ, ಅನಂತರ ಚಿತ್ರದಲ್ಲಿರುವ ಹೊಡೆದಾಟಗಳು, ಐಟಂ ಸಾಂಗು, ಫಾರಿನ್ ಲೊಕೇಷನ್ ಬಗ್ಗೆ ಚರ್ಚೆಯಾಗುತ್ತದೆ. ಕತೆ ಹೇಗಿದ್ದರೂ ನಡೀತದೆ. ಇಂದಿನ ಸಿನಿಮಾಗಳನ್ನು ಅರಮನೆ ಮೈದಾನದಲ್ಲಿ ನಡೆಯುವ ಶ್ರೀಮಂತರ ಮದುವೆಗೆ ಹೋಲಿಸಬಹುದು. ಹುಡುಗ-ಹುಡುಗಿ ಜೋಡಿ ಚೆನ್ನಾಗಿದೆಯಾ ಅನ್ನುವುದಕ್ಕಿಂತ ಹುಡುಗಿ ಕಡೆಯವರು ಎಷ್ಟು ಖರ್ಚು ಮಾಡಿದ್ದಾರೆ ಅನ್ನುವುದನ್ನೇ ಜನ ಮಾತಾಡಿಕೊಳ್ಳುವುದು.  

ಎಲ್ಲವೂ ವ್ಯಾಪಾರದ ಚೌಕಟ್ಟಿನೊಳಗೇ ನಡೆಯುವ ಈ ದಿನಗಳಲ್ಲಿ, ಹೊಸಚಿತ್ರವೊಂದು ಬಿಡುಗಡೆಯಾಗುವ ಮುನ್ನ ಇಂಥಾ ಆಂಕಿಅಂಶಗಳು ಪ್ರೇಕ್ಷಕರ ಕುತೂಹಲಕ್ಕೆ ಒಗ್ಗರಣೆ ಹಾಕುವುದಂತೂ ನಿಜ.   ಕಮರ್ಷಿಯಲ್ ಚಿತ್ರವೊಂದು ಪ್ರೇಕ್ಷಕನ ಮನಸ್ಸಲ್ಲಿ ಬೆಳೆಯುತ್ತಾ, ಬೃಹದಾಕಾರ ತಾಳುವುದಕ್ಕೆ ಇಂಥಾ statistics ಸಹಾಯ ಮಾಡುತ್ತವೆ. ಇದೊಂದು ಥರ ಅಕ್ಕಪಕ್ಕದ ಮನೆ ಹೆಣ್ಮಕ್ಕಳು ಗೋಡೆಪಕ್ಕ ನಿಂತುಕೊಂಡು ಗಾಸಿಪ್ ಮಾಡಿದ ಹಾಗೆ. ಚಿತ್ರವೊಂದರ ಹಾಡಿಗೆ ಐವತ್ತು ಲಕ್ಷ ಖರ್ಚಾಯಿತಂತೆ ಅನ್ನುವ ಸುದ್ದಿ, ಬಾಯಿಂದ ಬಾಯಿಗೆ ಹರಡುವ ಹೊತ್ತಲ್ಲಿ ಎಪ್ಪತ್ತೈದು ಲಕ್ಷ ತಲುಪಿರುತ್ತದೆ. ಹೀರೋ ಹೊಡೆದಾಡುವಾಗ ಬೆರಳಿಗೆ ಏಟು ಮಾಡಿಕೊಂಡರೆ, ಕೈಯೇ ಮುರಿದುಹೋಯಿತಂತೆ, ಆದರೂ ಅದೇ ಕೈಗೆ ಬಟ್ಟೆಸುತ್ತಿಕೊಂಡೇ ಆತ ಶೂಟಿಂಗಲ್ಲಿ ಪಾಲ್ಗೊಂಡನಂತೆ ಅನ್ನುವ ಸುದ್ದಿ ಪ್ರಚಾರವಾಗುತ್ತದೆ.

ಚಿತ್ರದ ಯಶಸ್ಸಿಗೆ ಇವೆಲ್ಲವೂ ಪೂರಕವಾಗಿ ದುಡಿಯುವ ಸಂಗತಿಗಳು. ನಾವು ಗುಣಮಟ್ಟದ ಬಗ್ಗೆ ಏನೇ ಚರ್ಚೆ ಮಾಡಿದರೂ ಚಿತ್ರವೊಂದರ ಯಶಸ್ಸು ನಿರ್ಧಾರವಾಗುವುದು ಅದರ ಗಳಿಕೆಯಿಂದಲೇ. ಮೊದಲಾಗಿದ್ದರೆ ಚಿತ್ರ ನೂರು ದಿನ ಓಡಿದರಷ್ಟೇ ಹಿಟ್ ಅನ್ನುವ ಸರ್ಟಿಫಿಕೇಟ್ ಪಡೆಯುತ್ತಿತ್ತು. ಈಗ ಇಪ್ಪತ್ತೈದು ದಿನ ಓಡಿದರೂ ಸಾಕು ನಿರ್ಮಾಪಕ ಖುಶಿಯಾಗಿರುತ್ತಾನೆ. ಯಾಕೆಂದರೆ ಅದು ಇನ್ನೂರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗಿರುತ್ತದೆ ಹಾಗೂ ಒಬ್ಬ ಜನಪ್ರಿಯ ಸ್ಟಾರ್ ಆ ಚಿತ್ರದಲ್ಲಿ ನಡೆಸಿದರಷ್ಟೇ ಅದು ಸಾಧ್ಯ. ‘ಮಾಣಿಕ್ಯ’ಚಿತ್ರಕ್ಕೆ ಸಂಬಂಧಪಟ್ಟ ಅಂಕಿಅಂಶಗಳನ್ನು ನೋಡುತ್ತಿರುವ ಹೊತ್ತಲ್ಲಿ ಇವೆಲ್ಲ ನೆನಪಾಯಿತು. ನೀವು ಕೂಡಾ ಒಂದ್ಸಾರಿ ಈ ವಿವರಗಳ ಕಡೆ ಕಣ್ಣುಹಾಯಿಸಿ, ಇಟ್ಸ್ ವೆರಿ ಇಂಟೆರೆಸ್ಟಿಂಗ್.

ಮಾಣಿಕ್ಯಕ್ಕೆ ಸಂಬಂಧಪಟ್ಟ ಹಾಗೆ ಈ ವಿವರಗಳನ್ನು ಒಂದು ಸಾರಿ ಓದಿನೋಡಿಃ

·         ಮಾಣಿಕ್ಯ ಚಿತ್ರಕ್ಕೆ ಒಟ್ಟಾರೆ 135 ದಿನ ಶೂಟಿಂಗ್ ನಡೆದಿದೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆ.

·         ಇದರ ಡಬ್ಬಿಂಗ್ ಹಕ್ಕು ಹಿಂದಿಗೆ 1.5 ಕೋಟಿಗೆ ಮಾರಾಟವಾಗಿದೆ. ಇದೂ ಒಂದು ದಾಖಲೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮಿಳು, ತೆಲುಗು, ಮಲೆಯಾಳಂ ಡಬ್ಬಿಂಗ್ ಹಕ್ಕು 75 ಲಕ್ಷಕ್ಕೆ ಮಾರಾಟವಾಗಿದೆ. ಇದು ತೆಲುಗಿನ ಮಿರ್ಚಿಯ ರೀಮೇಕ್ ಆಗಿದ್ದರೂ ಅಲ್ಲಿಗೆ ಡಬ್ ಆಗುತ್ತಿರುವುದು ಸೋಜಿಗದ ಸಂಗತಿಯೇ ಸರಿ.

·         ಇದರ ಬೇರೆಬೇರೆ ಹಕ್ಕುಗಳ ಮಾರಾಟದಿಂದ ಗಳಿಕೆಯಾದ ಮೊತ್ತ 8.5 ಕೋಟಿ. ಇದರಲ್ಲಿ ಸ್ಯಾಟಲೈಟ್ ಹಕ್ಕಿನ ಮಾರಾಟದಿಂದಲೇ 5.5 ಕೋಟಿ ಸಿಕ್ಕಿದೆ. ಇದು ಕೂಡಾ....

·         ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ 25 ಲಕ್ಷಕ್ಕೆ ಖರೀದಿಸಿದೆ.

·         ಚಿತ್ರ 300 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಂದಿನಂತೆ ಮತ್ತೊಂದು ದಾಖಲೆ. ಸಂಗೊಳ್ಳಿ ರಾಯಣ್ಣನ ಹೊರತಾಗಿ ಕನ್ನಡದಲ್ಲಿ ತಯಾರಾದ ಅತ್ಯಂತ ದುಬಾರಿ ಚಿತ್ರವಿದು. ಒಟ್ಟಾರೆ ಬಜೆಟ್ 18 ಕೋಟಿ ಅಂತೆ.

·         ಚಿತ್ರದ ಮೊದಲ ದಿನದ ನಿರ್ಮಾಪಕರಿಗೆ ಸಿಕ್ಕಿದ ಶೇರು ಮೊತ್ತ 3 ಕೋಟಿ. ಒಟ್ಟು ಐದು ಲಕ್ಷ ಜನ ಸಿನಿಮಾ ನೋಡಿದ್ದಾರೆ.

·         ಚಿತ್ರದ ಒಟ್ಟಾರೆ ಅವಧಿ (ಎರಡು ಮುಕ್ಕಾಲು ಗಂಟೆ) ಯಲ್ಲಿ 56 ನಿಮಿಷ ಗ್ರಾಫಿಕ್ಸ್ ಇದೆ.

·         ಹೈದರಾಬಾದ್, ಬೆಂಗಳೂರು, ಬ್ಯಾಂಕಾಕಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಸಲುವಾಗಿಯೇ ವಿದೇಶೀ ರಸ್ತೆಯ ಸೆಟ್ ಹಾಕಲಾಗಿತ್ತು.

·         ತಾರಾಗಣ ಎಂಬ ಪದವನ್ನು ಅಕ್ಷರಶಃ ನಿಜ ಮಾಡಿದ ಚಿತ್ರವಿದು. ಸುದೀಪ್, ರವಿಚಂದ್ರನ್, ರಮ್ಯ ಕೃಷ್ಣ, ರವಿಶಂಕರ್, ನಾಗಶೇಖರ್, ಸಾಧು ಕೋಕಿಲ, ಸೇರಿದಂತೆ ಒಟ್ಟು ನೂರು ಕಲಾವಿದರು ಚಿತ್ರದಲ್ಲಿದ್ದಾರೆ.

ಈ ಅಂಕಿಗಳು ಮತ್ತು ಅಂಶಗಳು ಒಬ್ಬ ಸಾಮಾನ್ಯ ಪ್ರೇಕ್ಷಕನನ್ನು ಸಿನಿಮಾ ನೋಡುವುದಕ್ಕೆ tempt ಮಾಡದೇ ಇರುತ್ತದೆಯೇ. ಡಿಸೆಂಬರ್ 1 ಚಿತ್ರ ಎಷ್ಟೇ ಚೆನ್ನಾಗಿರಲಿ, ಅದಕ್ಕೆ ಎಷ್ಟೇ ಒಳ್ಳೆಯ ವಿಮರ್ಶೆ ಬರಲಿ, ಪ್ರೇಕ್ಷಕರ  ವೀಕೆಂಡ್ ಆಯ್ಕೆ ಮಾಣಿಕ್ಯನೇ ಆಗಿರುತ್ತದೆ. ಯಾಕೆಂದರೆ ಅಲ್ಲಿ ಸುದೀಪ್ ಎಂಬ ಬ್ರಾಂಡ್ ಇದೆ. ನಾವೆಲ್ಲರೂ ಬ್ರಾಂಡೆಡ್ ವಸ್ತುಗಳ ಕಡೆ ವ್ಯಾಮೋಹಿತರಾಗುವವರು. ಕಪಾಟು ಅಂದರೆ ಗೋದ್ರೆಜ್, ಶೂ ಅಂದರೆ ಬಾಟಾ, ಶರ್ಟು ಅಂದರೆ ಪೀಟರ್ ಇಂಗ್ಲೆಂಡು, ಜೀನ್ಸು ಅಂದರೆ ಲೆವಿಸ್....ಇದಕ್ಕಿಂತ ಕಡಿಮೆ ರೇಟಿಗೆ ಅಷ್ಟೇ ಒಳ್ಳೆಯ ಗುಣಮಟ್ಟ ಇರುವ ವಸ್ತುಗಳು ಕೈಗೆ ಸಿಗುವಂತಿದ್ದರೂ ನಾವು ಅದನ್ನು ಮುಟ್ಟುವುದಿಲ್ಲ. ಅದೇ ರೀತಿ ನಮ್ಮ ಸ್ಟಾರುಗಳು ಬಡವರ ಬ್ರಾಂಡುಗಳು, ಐ ಮೀನ್ ಮಾಣಿಕ್ಯಗಳು. ಚಿತ್ರ ರೀಮೇಕೋ ಸ್ವಮೇಕೋ ಅನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ, ಬ್ರಾಂಡೆಡ್ ಅನ್ನುವುದಷ್ಟೇ ಮುಖ್ಯ.

ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್ ಒಂದು ಇಂಟರೆಸ್ಟಿಂಗ್ ಅಂಶವನ್ನು ಗುರುತಿಸಿದ್ದಾರೆ. ಲೂಸಿಯಾ ಚಿತ್ರವನ್ನು ನೂರು ದಿನಗಳಲ್ಲಿ ನೋಡಿದಷ್ಟು ಜನ ಮಾಣಿಕ್ಯ ಚಿತ್ರವನ್ನು ಒಂದೇ ದಿನದಲ್ಲಿ ನೋಡಿದ್ದಾರಂತೆ. ಮಾಣಿಕ್ಯದಂಥ ಕಮರ್ಷಿಯಲ್ ಚಿತ್ರಗಳಿಗೆ ಇರುವ ಅನುಕೂಲ ಇದೇ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆಯೋ ಅಥವಾ ಇಲ್ಲವೋ ಎನ್ನುವುದು ನಿರ್ಧಾರವಾಗುವುದಕ್ಕೆ ಮುಂಚೆಯೇ ಚಿತ್ರದ ಅರ್ಧ ಬಜೆಟ್ಟು ವಾಪಸಾಗಿರುತ್ತದೆ. ನಿರ್ಮಾಪಕ ತೆಗೆದುಕೊಳ್ಳುವ ರಿಸ್ಕು, ನಾಯಕ ನಟನ ಇಮೇಜಿನ ಜೊತೆ ಹೊಂದಾಣಿಕೆಯಾದರೆ ಗೆಲುವು ಖಾತ್ರಿ. ಈ ಲೆಕ್ಕಾಚಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಸುದೀಪ್ ಸೇಫ್ ಬೆಟ್ ಅನ್ನುವುದು ರುಜುವಾತಾಗಿದೆ. ಯಾಕೆಂದರೆ ಅಂಕಿಅಂಶಗಳು ಅದನ್ನೇ ಹೇಳುತ್ತಿವೆ.

ಸುದೀಪ್ ಸಂಭಾವನೆ ಬಗ್ಗೆ ಮೊನ್ನೆ ಒಂದು ಸುದ್ದಿ ಓದಿದೆ. ತೆಲುಗು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಅವರು ಆರೂವರೆ ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಇಪ್ಪತ್ತು ವರ್ಷದ ಹಿಂದಿನ ಘಟನೆಯೊಂದು ನೆನಪಾಯಿತು, ಹುಚ್ಚ ಚಿತ್ರ ಹಿಟ್ ಆದ ಬೆನ್ನಿಗೇ ಸುದೀಪ್ ತಮ್ಮ ಸಂಭಾವನೆಯನ್ನು ಹತ್ತು ಲಕ್ಷಕ್ಕೆ ಏರಿಸಿದ್ದಾರೆ ಎಂಬ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ‘ನನ್ನ ರೇಟನ್ನು ನಾನು ನಿರ್ಧರಿಸುವುದಿಲ್ಲ, ಅದನ್ನು ಮಾರ್ಕೆಟ್ಟು ನಿರ್ಧರಿಸುತ್ತದೆ. ಯಾರಿಗೆ ಸುದೀಪ್ ಅವರೇ ಬೇಕು ಅನಿಸುತ್ತದೋ ಅವರು ಕೊಡುತ್ತಾರೆ. ಅದು ಹತ್ತು ಲಕ್ಷವೋ, ಇಪ್ಪತ್ತು ಲಕ್ಷವೋ ಅನ್ನುವುದು ಮುಖ್ಯ ಅಲ್ಲ’ಎಂದು ಸುದೀಪ್ ಪ್ರತಿಕ್ರಿಯೆ ನೀಡಿದ್ದರು.

ಕಾಲ ಸರಿದಂತೆ ಕೆಲವರು ಬೆಲೆ ಕಳೆದುಕೊಳ್ಳುತ್ತಾರೆ, ಕೆಲವರು ಬೆಲೆ ಏರಿಸುತ್ತಾರೆ, ಇನ್ನೂ ಕೆಲವರು ಬೆಲೆಬಾಳುತ್ತಾರೆ. ಸರಿದುಹೋದ ಕಾಲದಲ್ಲಿ ಅವರ ನಡಿಗೆ ಮತ್ತು ನಡತೆ ಹೇಗಿತ್ತು ಅನ್ನುವುದೇ ಈ ಮೂರನ್ನೂ ನಿರ್ಧರಿಸುತ್ತದೆ.

Also See

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.