` Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanath kumar image
sanath kumar

ಮೊನ್ನೆ ಅಪ್ಪನ ತಿಥಿಗೆ ಊರಿಗೆ ಹೋಗಿದ್ದೆ. ಕಾರ್ಯ ಮುಗಿಸಿ ಏಳುವ ಹೊತ್ತಿಗೆ ಗೆಳೆಯ ಕೆ.ಎಂ. ವೀರೇಶ್ ಅವರ ಎಸ್ಸೆಮ್ಮೆಸ್ಸು ಬಂತು. ಅದರಲ್ಲಿದ್ದದ್ದು ಒಂದೇ ವಾಕ್ಯಃ  Sanath kumar is expired.ಊಟಕ್ಕೆ ಬಾಳೆಯೆಲೆ ಹಾಕಿದ್ದರು. ಅಪ್ಪನ ತಿಥಿಯೂಟ ಮಾಡಲೇಬೇಕಾಗಿತ್ತು, ತಿಂದಿದ್ದು ಜೀರ್ಣವಾಗಲಿಲ್ಲ.ಉಂಡ  ತಿಥಿಯೂಟ ಅಪ್ಪನದ್ದೋ ಅಥವಾ ಗೆಳೆಯನದ್ದೋ ಅನ್ನುವ ಜಿಜ್ಞಾಸೆ ಪರಿಪರಿಯಾಗಿ ಕಾಡಿ ರಾತ್ರಿ ನಿದ್ದೆ ಬರಲಿಲ್ಲ. ಮಾರನೇ ದಿನ ಪತ್ರಿಕೆ ನೋಡಿದೆ. ‘ಚಿತ್ರ ನಿರ್ಮಾಪಕ ಸನತ್ ಕುಮಾರ್ ನಿಧನ, ಅವರು ಕರುಳುಬೇನೆಯಿಂದ ಬಳಲುತ್ತಿದ್ದರು, ಅವರು ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ’ಅನ್ನುವ ಸಿಂಗಲ್ ಕಾಲಂ ಸುದ್ದಿ ಪ್ರಕಟವಾಗಿತ್ತು. ‘ಚಿತ್ರಲೋಕ ಡಾಟ್ ಕಾಂ’ನಲ್ಲಿ ರಾಮಯ್ಯ ಅಸ್ಪತ್ರೆಯಲ್ಲಿ  ಸನತ್ ಪಾರ್ಥಿವ ಶರೀರದ ಮುಂದೆ ತಲೆತಗ್ಗಿಸಿ ನಿಂತ ಜಗ್ಗೇಶ್ ಫೋಟೋ. ಸನತ್ ಬದುಕಿದ್ದಾಗ ಅವನ ಮಾತಿಗೆ ಪಕ್ಕವಾದ್ಯ ನೀಡುತ್ತಿದ್ದ ಮಿಕ್ಕ ನೂರಾರು ಗೆಳೆಯರು ಎಲ್ಲಿ ಗಾಯಬ್ ಆದರೋ ಗೊತ್ತಾಗಲಿಲ್ಲ.

jaggesh last tribute to sanath kumar (pic k m veeresh)

ಬೆಂಗಳೂರಿಗೆ ಬಂದರೆ ಗೆಳೆಯರಿಂದ ನಾನಾ ಥರದ ಪ್ರತಿಕ್ರಿಯೆಗಳುಃ ‘ಹುಟ್ಟಿದೋರೆಲ್ಲ ಒಂದು ದಿನ ಸಾಯಲೇಬೇಕು’ಅನ್ನುವ ವೇದಾಂತದಿಂದ ಹಿಡಿದು, ‘ನಲ್ವತ್ತಮೂರು  ಏನು ಸಾಯೋ ವಯಸ್ಸೇ ಛೆಛೆ’ಅನ್ನುವ ಉದ್ಗಾರಗಳು. ‘ಸದ್ಯ, ಹೆಂಡ್ತಿ ಮಕ್ಕಳಿರಲಿಲ್ವಲ್ಲ ಅದೇ ಪುಣ್ಯ’ಅನ್ನುವ ಸಮಾಧಾನ, ‘ಕುಡೀಬೇಡ ಅಂದರೂ ಕೇಳಲಿಲ್ಲ, ಕುಡಿದು ಕುಡಿದೇ ಸತ್ತೋದ’ಅನ್ನೋ ಟೀಕೆಗಳು. ಸಾವಿನಲ್ಲೂ ಸತ್ಯದರ್ಶನ ಮಾಡಿಸುವ ಚಟ ಕೆಲವರಿಗೆ. ಇದನ್ನೆಲ್ಲಾ ಕೇಳಿ ಸನತ್ ಆತ್ಮ ಗಹಗಹಿಸಿ ನಕ್ಕಿರಬಹುದು. ಎಲ್ಲವನ್ನೂ ಲಘುವಾಗಿ ಪರಿಗಣಿಸುತ್ತಿದ್ದ ಸನತ್ ಸಾವನ್ನೂ ಉಡಾಫೆಯಿಂದಲೇ ನೋಡಿರಬಹುದು ಅನ್ನುವ ಅನುಮಾನ ನನ್ನದು.

ಚಿತ್ರ ನಿರ್ಮಾಪಕ ಅನ್ನುವ ಪಟ್ಟ ಸನತ್ ಗೆ ಹೊಂದಿಕೊಳ್ಳುವುದಿಲ್ಲ . ಅದಕ್ಕೂ ಮುಂಚೆ ಆತ ಪತ್ರಕರ್ತನಾಗಿದ್ದ. ಅಪ್ಪ ಬಿ.ವಿ. ವೈಕುಂಠರಾಜು ಮಗನಿಗೋಸ್ಕರವೇ ‘ರಾಜುಪತ್ರಿಕೆ’ಎಂಬ ಕ್ರೀಡಾ ಪತ್ರಿಕೆಯನ್ನು ಆರಂಭಿಸಿದ್ದರು. ಕ್ರಿಕೆಟ್ಟಿಗೇ ಮೀಸಲಾಗಿದ್ದ ಏಕೈಕ ಕನ್ನಡ ಪತ್ರಿಕೆಯದು. ಸನತ್ ಕೆಲವು ವರ್ಷ ಅದನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದ. ಆದರೆ ಒಂದು ಕಡೆ ನಿಲ್ಲದ ಜಂಗಮ ಮನಸ್ಸು ಆತನದ್ದು. ಪತ್ರಿಕೆಯನ್ನು ನಿಲ್ಲಿಸಿ ದೃಶ್ಯಮಾಧ್ಯಮಕ್ಕೆ ಬಂದ. ಒಂದಿಷ್ಟು ಡಾಕ್ಯುಮೆಂಟರಿಗಳನ್ನು ಮಾಡಿದ. ದಸರಾ ಬಗ್ಗೆ ಆತ ಮಾಡಿದ್ದ ಸಾಕ್ಷ್ಯ ಚಿತ್ರ ತುಂಬಾ ಚೆನ್ನಾಗಿತ್ತು. ಈ ಮಧ್ಯೆ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾದ, ಯಾವುದಕ್ಕೂ ಸಂಪೂರ್ಣವಾಗಿ ಕಮಿಟ್ ಆಗದೇ ಇರುವ ಸನತ್ ಸ್ವಭಾವಕ್ಕೆ ಸಾಂಸಾರಿಕ ಬದುಕು ತುಂಬಾ ದುಬಾರಿಯಾಯಿತೇನೋ. ಮದುವೆ ಮುರಿದುಬಿತ್ತು, ಬಹುಶಃ ಅಲ್ಲಿಂದಲೇ ಸನತ್ ವೈಯಕ್ತಿಕ ಬದುಕು ಕೆಳಗೆ ಜಾರುವುದಕ್ಕೆ ಶುರುವಾಯಿತು. ನಾನು ಆತನನ್ನು ಮೊದಲಬಾರಿ ಭೇಟಿಯಾದಾಗ ಆ ದೈತ್ಯದೇಹವನ್ನು ಕಂಡು ಬೆರಗಾಗಿದ್ದೆ. ಪತ್ರಕರ್ತರು ಬಾಡಿಬಿಲ್ಡರ್ ಗಳಂತೆ ಶೋಭಿಸುವುದು ಬಹಳ ಅಪರೂಪದ ಸಂಗತಿ. ಹರವಾದ ಎದೆ, ಹುರಿಗೊಂಡ ತೋಳುಗಳು, ಅಗಲಗಲ ಭುಜ, ಕಬ್ಬಿಣದ ತೊಲೆಗಳಂತಿದ್ದ ಕಾಲುಗಳು, ಭುಜ ಚುಂಬಿಸುವ ಕೇಶರಾಶಿ, ಆಗಾಗ ಮೀಸೆಯನ್ನು ಹುರಿಗೊಳಿಸುತ್ತಿದ್ದ ಬಲಗೈ...ಕೈಕುಲುಕಿದರೆ ನನ್ನ ಐದು ಬೆರಳುಗಳೂ ಒಂದಕ್ಕೊಂದು ಅಂಟಿಕೊಂಡಂಥ ಅನುಭವ. ಆತನನ್ನು ನೋಡಿದಾಗಲೆಲ್ಲಾ ನನಗೆ ನೆನಪಾಗುತ್ತಿದ್ದದ್ದು ಶ್ರೀಲಂಕಾದ ವೇಗದ ಬೌಲರ್ ದಿಲ್ಹಾರೋ ಫೆರ್ನಾಂಡೋ.

ಕನ್ನಡದಲ್ಲಿ ಮಾತಿಗಿಳಿದರೆ ಅಚ್ಚ ಮತ್ತು ಸ್ವಚ್ಛ ಕನ್ನಡ. ಇಂಗ್ಲಿಷಿನಲ್ಲಿ ಮಾತು ಶುರುಮಾಡಿದರೆ ಆಕ್ಸ್ ಫರ್ಡ್ ಲೆವೆಲ್ಲು. ಪ್ರೆಸ್ ಕ್ಲಬ್ಬಿಗೆ  ಸನತ್ ಬಂದಿಳಿಯುತ್ತಿದ್ದ ದೃಶ್ಯವೇ ಮನಮೋಹಕ. ಆತನ ಎಡಬಲದಲ್ಲಿ ಕಂಗೊಳಿಸುತ್ತಿದ್ದ ಹತ್ತಾರು ಜನ.  ಕೆಲವೊಮ್ಮೆ ಕೆಂಪುಮೂತಿಯ ಹೆಣ್ಮಕ್ಕಳು ಮತ್ತು ವಿದೇಶಿ ಗಂಡಸರು. ಸನತ್ ಬಗ್ಗೆ ಮಿಕ್ಕವರು ಅಸೂಯೆ ಪಡುವುದಕ್ಕೆ ಬೇರೆ ಕಾರಣ ಬೇಕಿರಲಿಲ್ಲ.  ಅದು ಸನತ್ ಲೈಫ್ ಸ್ಟೈಲು. ಮದುವೆಗೆ ಮುಂಚೆ ಮಲ್ಲೇಶ್ವರಂನಲ್ಲಿ ಒಂದು ಪುಟ್ಟ ರೂಮು, ಡಿವೋರ್ಸ್ ಆದ ನಂತರ ಒಂದಷ್ಟು ದಿನ ಬ್ರಿಗೇಡ್ ರಸ್ತೆ ಪಕ್ಕ ಅದ್ಯಾವುದೋ ಫ್ಲಾಟಲ್ಲಿ ಒಂಟಿ ಜೀವನ, ‘ಎದ್ದೇಳು ಮಂಜುನಾಥ’ಚಿತ್ರದ ಕೆಲಸ ಶುರುವಾಗುವ ಹೊತ್ತಿಗೆ ಕೋಣನಕುಂಟೆಯ ಆಚೆಯಿದ್ದ ಮನೆಗೆ ವರ್ಗವಾಗಿದ್ದ.  ಅದು ಕೂಡಾ ಸ್ನೇಹಿತರೇ ಕೊಡಿಸಿದ ಮನೆ. ಪ್ರೆಸ್ ಕ್ಲಬ್ಬಲ್ಲಿ ಕರುಳು ಸುಡುವ ತನಕ ಕುಡಿದು, ದಾರಿ ಖರ್ಚಿಗೆ ಅಂತ ಇನ್ನೊಂದಿಷ್ಟು ಶೀಷೆಗಳನ್ನು ಪಾರ್ಸೆಲ್ ಮಾಡಿ, ಕಾರಲ್ಲಿ ಕೋಣನಕುಂಟೆಯತ್ತ ಪಯಣ ಶುರುವಾಗುವ ಹೊತ್ತಿಗೆ ರಾತ್ರಿ 12 ಆಗುತ್ತಿತ್ತು. ಆ ಮನೆಗೆ ನಾನೂ ಒಮ್ಮೆ ಹೋಗಿದ್ದೆ. ಮನೆಯೊಳಗೇ ಒಂದು ಪ್ರೊಜೆಕ್ಟರ್ ಅಳವಡಿಸಿ, ಬಿಳಿಗೋಡೆಯನ್ನೇ ಪರದೆಯಾಗಿಸಿ ಮೇಲೆ ಸಿನಿಮಾ ನೋಡುವ ವ್ಯವಸ್ಥೆ ಮಾಡಿಕೊಂಡಿದ್ದು ಸನತ್ ಸೃಜನಶೀಲತೆಗೆ ಒಂದು ಉದಾಹರಣೆ.

jaggesh, sanathkumar during eddelu manjunath launch

‘ಎದ್ದೇಳು ಮಂಜುನಾಥ’ಚಿತ್ರ ಸನತ್ ಬದುಕಲ್ಲಿ ಒಂದು ದೊಡ್ಡ ತಿರುವು, ಆತ ಮುಗ್ಗರಿಸಿದ್ದೂ ಅದೇ ತಿರುವಲ್ಲಿರಬೇಕು. ಆ ಚಿತ್ರದ ಶೂಟಿಂಗ್ ಶುರುವಾಗುವುದಕ್ಕೆ ಮುಂಚೆ ಕಡಿಮೆಯೆಂದರೂ ಆರು ತಿಂಗಳು ಪ್ರೆಸ್ ಕ್ಲಬ್ಬಲ್ಲಿ ಅದರ ಕತೆ-ಚಿತ್ರಕತೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಚರ್ಚೆಯ ಅವಧಿ ಸಂಜೆ 6ರಿಂದ ಕ್ಲಬ್ಬು ಮುಚ್ಚುವ ತನಕ. ನಿರ್ದೇಶಕ ಗುರುಪ್ರಸಾದ್ ಮತ್ತು ಸನತ್ ಈ ಚರ್ಚೆಯ ಮುಖ್ಯ ಪಾತ್ರಧಾರಿಗಳು. ಮಿಕ್ಕ ಅತಿಥಿಪಾತ್ರಗಳು ಬಂದುಹೋಗಿ ಮಾಡುತ್ತಿದ್ದವು. ಸನತ್ ಒಳ್ಳೆಯ ಮಾತುಗಾರ, ಹಾಗಾಗಿ ಆತನಿಗೋಸ್ಕರ ಜೀವ ಅಲ್ಲದೇ ಇದ್ದರೂ ಮಾತು ಕೊಡುವ ಸ್ನೇಹಿತರ ದೊಡ್ಡ ಬಳಗವೇ ಇತ್ತು. ಆ ಪೈಕಿ ಕೆಲವರು ಸಿನಿಮಾಗೆ ಬಂಡವಾಳ ಹೂಡುವುದಕ್ಕೆ ಸಿದ್ಧರಾಗಿದ್ದರು. ಸನತ್ ನದ್ದು ಬರೀ ಮಾತಿನ ಬಂಡವಾಳ. ಗೆಳೆಯರ ಬಳಗದ ಪೈಕಿ ಒಬ್ಬ ಡಾಕ್ಟರ್ ಅಂತೂ ದುಡ್ಡಿನ ಚೀಲ ತೆಗೆದುಕೊಂಡೇ ಕ್ಲಬ್ಬಿಗೆ ಬರುತ್ತಿದ್ದರು, ಸನತ್ ಕೇಳಿದಾಕ್ಷಣ ನೋಟಿನ ಕಂತೆಗಳು ಟೇಬಲ್ ಮೇಲೆ ಉರುಳಾಡುತ್ತಿದ್ದವು, ಇನ್ನೊಬ್ಬರು ಮಂಡಿ ವ್ಯಾಪಾರಿ, ಮತ್ತೊಬ್ಬರು ಮನೆ ಕಟ್ಟುವ ಕಾಂಟ್ರಾಕ್ಟರ್. ಹೀಗೆ ಎದ್ದೇಳು ಮಂಜುನಾಥ ಚಿತ್ರ ಬಿಡುಗಡೆಗೆ ಮುಂಚೆಯೇ ಪ್ರೆಸ್ ಕ್ಲಬ್ಬಲ್ಲಿ ಹಿಟ್ ಆಗಿತ್ತು. ಕ್ಲಬ್ಬಿಗೆ ಒಳ್ಳೇ ಕಲೆಕ್ಷನ್.  ಅಲ್ಲಿನ ಬೇರರ್ ಗಳು ಹೇಳುವ ಮಾತನ್ನು ನಂಬುವುದಾದರೆ ಪ್ರತಿತಿಂಗಳು ಸನತ್ ಸಂದಾಯ ಮಾಡುತ್ತಿದ್ದ ಗುಂಡಿನ ಬಿಲ್  ಒಂದೂವರೆ ಲಕ್ಷ ದಾಟುತ್ತಿತ್ತು.  

ಕೊನೆಗೂ ಶೂಟಿಂಗ್ ಶುರುವಾಯಿತು, ಎಲ್ಲರೂ ಆಶ್ಚರ್ಯಪಡುವ ರೀತಿಯಲ್ಲಿ ಸಿನಿಮಾ ಹಿಟ್ ಆಯಿತು. ಗುರುಪ್ರಸಾದ್ ಸ್ಟಾರ್ ಡೈರೆಕ್ಟರ್ ಆದರು. ಆದರೆ ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ. ಚಿತ್ರಕ್ಕೆ ಬಂಡವಾಳ ಹೂಡಿದ ಸನತ್ ಗೆಳೆಯರು ತಮಗೆ ಮೋಸವಾಯಿತು ಅಂತ ರಾಗ ಹಾಡುವುದಕ್ಕೆ ಶುರುಮಾಡಿದರು, ಗುರುಪ್ರಸಾದ್ ಕೂಡಾ ಅವರ ಕಡೆಗೇ ನಿಂತರು. ಚಿತ್ರದಲ್ಲಿ ಅಂಥಾ ಲಾಭವೇನೂ ಬರಲಿಲ್ಲ , ಬದಲಾಗಿ ನಷ್ಟವೇ ಆಗಿದೆ ಅಂತ ಸನತ್ ಹೊಸಲೆಕ್ಕ ಕೊಡೋದಕ್ಕೆ ಶುರುಮಾಡಿದರು. ಜಗ್ಗೇಶ್ ಮಧ್ಯಸ್ತಿಕೆ ಮಾಡಿದರೂ ಜಗಳ ನಿಲ್ಲಲಿಲ್ಲ. ಸನತ್ ಏಕ್ ದಂ ಗೆಳೆಯರ ಕಣ್ಣಲ್ಲಿ ವಿಲನ್ ಆಗಿ ಕಂಗೊಳಿಸತೊಡಗಿದ. ಸಿನಿಮಾ ಹಿಟ್ ಆಯಿತೋ ಇಲ್ಲವೋ ಗೊತ್ತಿಲ್ಲ,  ಗೆಳೆತನವಂತೂ ಸತ್ತುಹೋಗಿತ್ತು.

guruprasad, sanath kumar

ಇದೇ ಟೈಮಲ್ಲಿ ಸನತ್ ತಾನು ಇನ್ನೊಂದು ಸಿನಿಮಾವನ್ನು ನಾನೇ ನಿರ್ದೇಶನ ಮಾಡುತ್ತೇನೆ ಅನ್ನತೊಡಗಿದ. ಅದ್ಯಾವ ಸಿನಿಮಾ ಅಂತ ಹುಡುಕುವುದಕ್ಕೆ ಹೊರಟಾಗ ನನಗೇ ಆಘಾತ ಕಾದಿತ್ತು.  ನಾನು ಹಿಂದೊಮ್ಮೆ ಎನ್. ಆರ್. ಶೆಟ್ಟಿ ಎಂಬ ನಿರ್ಮಾಪಕರಿಗೆ ಮಲೆಯಾಳಂನ ‘ಚಿಂತಾ ವಿಶಿಷ್ಟಾಯ ಶಾಮಲಾ’ಎಂಬ ಚಿತ್ರವನ್ನು ರೀಮೇಕು ಮಾಡಿ ಎಂಬ ಸಲಹೆ ಕೊಟ್ಟಿದ್ದೆ. ಬುದ್ದಿವಂತನಾದರೂ ತನ್ನ ಚಟಗಳು ಮತ್ತು ಬೇಜವಾಬ್ದಾರಿಯಿಂದಾಗಿ ಸಂಸಾರವನ್ನೇ ಬೀದಿಗೆ ತರುವ ಉಂಡಾಡಿಗಂಡನ ಕತೆಯದು. ಶ್ರೀನಿವಾಸನ್ ಎಂಬ ಹಾಸ್ಯನಟ ಮತ್ತು ಚಿತ್ರಕಥಾ ಲೇಖಕ ನಿರ್ದೇಶಿಸಿ, ನಟಿಸಿದ ಈ ಚಿತ್ರ ಕೇರಳದಲ್ಲಿ ಒಂದು ಕಾಲದಲ್ಲಿ ಕ್ರಾಂತಿಯನ್ನುಂಟು ಮಾಡಿತ್ತು. ಹೆಣ್ಮಕ್ಕಳು ತಮ್ಮ ಕುಡುಕ ಗಂಡಂದಿರನ್ನು ಒತ್ತಾಯದಿಂದ ಚಿತ್ರಮಂದಿರಕ್ಕೆ ಎಳಕೊಂಡು ಬರುತ್ತಿದ್ದರಂತೆ. ಶುಭಂ ಚಿತ್ರ ಮಾಡಿ ನಷ್ಟದಲ್ಲಿದ್ದ ಶೆಟ್ಟರಿಗೆ ಈ ಚಿತ್ರದಿಂದ ಅನುಕೂಲವಾಗಲಿ ಅನ್ನುವುದು ನನ್ನ ಉದ್ದೇಶವಾಗಿತ್ತು. ಅವರೊಮ್ಮೆ ಪ್ರೆಸ್ ಕ್ಲಬ್ಬಿಗೆ ಬಂದಾಗ ನಾನೇ ಸನತ್ ನ್ನು ಪರಿಚಯ ಮಾಡಿಕೊಟ್ಟಿದ್ದೆ. ಆಮೇಲೆ ಒಂದು ದಿನ ಅವರಿಬ್ಬರೂ ತಿರುವನಂತಪುರಕ್ಕೆ ಹೋಗಿ ಮೂಲಚಿತ್ರದ ಕತೆಗಾರ ಮತ್ತು ನಿರ್ದೇಶಕ ಶ್ರೀನಿವಾಸನ್ ಅವರನ್ನು ಭೇಟಿಯಾಗಿ ನಾಲ್ಕು ಲಕ್ಷಕ್ಕೆ ಚಿತ್ರದ ಹಕ್ಕು ಖರೀದಿಸಿ ತಂದಿದ್ದರು. ಶೆಟ್ಟರು ಅದ್ಯಾವುದೋ ಗಳಿಗೆಯಲ್ಲಿ ಆ ಹಕ್ಕನ್ನು ಸನತ್ ಗೆ ಕೊಟ್ಟಿದ್ದರು. ಇವೆಲ್ಲವೂ ನನಗೆ ಗೊತ್ತಾಗಿದ್ದು ತಡವಾಗಿ. ಆಗ ಮನಸ್ಸಿಗೆ ಪಿಚ್ಚೆನಿಸಿತ್ತು. ಆದರೆ ಸನತ್ ಆ ಚಿತ್ರವನ್ನು ನಿರ್ದೇಶಿಸುವ ಮೊದಲೇ ದುರಂತ ಸಂಭವಿಸಿತು. ಮಧುಮೇಹ ಕಾಯಿಲೆಯಿಂದಾಗಿ ಆತನ ಬಲಗಾಲನ್ನು ಕತ್ತರಿಸಬೇಕಾಯಿತು.

ಆ ಸುದ್ದಿ ಗೊತ್ತಾಗುತ್ತಿದ್ದಂತೆ ಆತನನ್ನು ನೋಡೋದಕ್ಕೆ ಆಸ್ಪತ್ರೆಗೆ ಹೋದೆ. ಈಗಷ್ಟೇ ಡಿಸ್ಟಾರ್ಜ್ ಆಗಿದ್ದಾರೆ ಅನ್ನುವ ಮಾಹಿತಿ ಸಿಕ್ಕಿತು. ಅಲ್ಲಿಂದ ಕ್ಲಬ್ಬಿಗೆ ಬಂದಾಗ ವಿಚಿತ್ರ ದೃಶ್ಯ ಕಾದಿತ್ತು. ಸನತ್ ಒಂದು ಕೈಯಲ್ಲಿ ಸಿಗರೇಟು ಮತ್ತು ಮತ್ತೊಂದು ಕೈಯಲ್ಲಿ ಗ್ಲಾಸ್  ಹಿಡಿದು ಏನೂ ಆಗಿಲ್ಲ ಅನ್ನೋ ಥರ ಕುಳಿತಿದ್ದ. ಕತ್ತರಿಸಿದ ಕಾಲನ್ನು ಯಾವುದೋ ಆಂಟಿಕ್ ಪೀಸ್ ತೋರಿಸುವ ಥರ ನನಗೆ ತೋರಿಸಿದ. ಮುಂದೇನು ಅಂದಾಗ ಪತ್ರಿಕೆ ಶುರು ಮಾಡುತ್ತೇನೆ ಅಂದ. ಈ ಹಿಂದೆ ಆತನಿಂದ ಮೋಸ ಹೋದೆ ಎಂದು ಗೋಳಾಡಿದ್ದ ವ್ಯಕ್ತಿಯೊಬ್ಬರು ಆತನ ಜೊತೆಗಿದ್ದು ಸೇವೆ ಮಾಡುತ್ತಿದ್ದರು.ಇದಕ್ಕಿಂತ ಮಾನವೀಯತೆ ಬೇಕಾಗಿಲ್ಲ.  ‘ನೀವಾದರೂ ಸನತ್ ಗೆ ಹೇಳಿ ಸ್ವಾಮಿ, ಆತ ಹೀಗೇ ಕುಡೀತಾ ಇದ್ದರೆ ಸತ್ತೋಗ್ತಾನೆ’ಅಂತ ಅವರೇ ಕೆಲವು ದಿನಗಳ ನಂತರ ನನಗೆ ಫೋನ್ ಮಾಡಿ ಹೇಳಿದ್ದರು. ಆದರೆ ಸನತ್ ಯಾರ ಮಾತು ಕೇಳುವವನಲ್ಲ ಅನ್ನೋದು ನನಗೆ ಗೊತ್ತಿತ್ತು. ಆಮೇಲೆ ಒಂದೆರಡು ಸಾರಿ ಕ್ಲಬ್ಬಲ್ಲಿ ನಾನು ಸನತ್ ನ್ನು ನೋಡಿದ್ದೆ, ಗುಂಪಿನ ನಡುವೆ ವೀಲ್ ಚೇರಲ್ಲಿ ಕುಳಿತು ದೊಡ್ಡ ಧ್ವನಿಯಲ್ಲಿ ಲೋಕದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ. ಕಳೆದು ಹೋದ ಕಾಲು ಮತ್ತು ಸರಿದುಹೋಗುತ್ತಿದ್ದ ಕಾಲದ ಪ್ರಜ್ಞೆಯೇ ಆತನಿಗಿರಲಿಲ್ಲ. ವಿಸ್ಕಿ, ಸಿಗರೇಟು, ಜೀವನೋತ್ಸಾಹ, ಹಾಸ್ಯಪ್ರಜ್ಞೆ, ಲೋಕಜ್ಞಾನ, ವ್ಯವಹಾರಶೀಲತೆ, ಆತ್ಮವಿಶ್ವಾಸ, ಇವೆಲ್ಲಾ ವಿರೋಧಾಭಾಸಗಳ ಒಟ್ಟಾರೆ ಮೊತ್ತದಂತಿದ್ದ ಸನತ್ ಯಾವತ್ತೂ ಆತ್ಮಾನುಕಂಪಕ್ಕೆ ಬಲಿಯಾಗಿದ್ದನ್ನು ನಾನು ಕಂಡಿಲ್ಲ. ಒಂಟಿಕಾಲು ಮತ್ತು ಒಂಟಿತನ ಆತನನ್ನು ಹತಾಶೆಯ ಅಂಚಿಗೆ ನೂಕಿದ್ದು ನಿಜವಾದರೂ ತನಗೇನೂ ಆಗಿಲ್ಲ ಅಂತ ನಟಿಸುವುದಕ್ಕೂ ಗಂಡೆದೆ ಬೇಕು. ಅದು ಮಿಕ್ಕವರ ಪಾಲಿಗೆ ಆತ್ಮವಂಚನೆಯಂತೆ ಕಂಡರೆ ಸನತ್ ತಪ್ಪಲ್ಲ. ಗೆಳೆಯ ಅಂತ ಒಬ್ಬನನ್ನು ಒಪ್ಪಿಕೊಂಡ ಮೇಲೆ ಆತನ ಬಲಹೀನತೆಗಳನ್ನೂ ಒಪ್ಪಿಕೊಳ್ಳಬೇಕು. ಅದೊಂದು ಪ್ಯಾಕೇಜ್ ಇದ್ದ ಹಾಗೆ.

ಪರ್ತಕರ್ತರು ಯಾವತ್ತೂ ಸಿನಿಮಾ ನಿರ್ಮಾಣಕ್ಕೆ ಕೈಹಾಕಬಾರದು ಅಂತ ನಿರ್ಮಾಪಕರೊಬ್ಬರು ಬಹಳ ಹಿಂದೆ ಹೇಳಿದ್ದರು. ಯಾಕೆಂದರೆ ಸಿನಿಮಾ ನಿರ್ಮಾಣ ಅನ್ನುವುದು ಸೃಜನಶೀಲತೆಗಿಂತ ಹೆಚ್ಚಾಗಿ ವ್ಯವಹಾರಜ್ಞಾನವನ್ನು ಬೇಡುತ್ತದೆ. ಸೆನ್ಸಿಟಿವ್ ಆಗಿರುವ ವ್ಯಕ್ತಿಗಳು ಇಲ್ಲಿ ಬಾಳಿಕೆ ಬರುವುದು ಕಷ್ಟ. ಒಬ್ಬ ಪತ್ರಕರ್ತರಾಗಿ ನಿಮ್ಮನ್ನು ಗೌರವಿಸುವ ನಟ-ನಟಿಯರು ನೀವು ನಿರ್ಮಾಪಕರಾದಾಗ ನೋಡುವ ರೀತಿಯೇ ಬೇರೆಯಾಗಿರುತ್ತದೆ.  ಹಲವು ವರ್ಷಗಳ ಹಿಂದೆ ಚಿತ್ರಲೇಖಾ ಪತ್ರಿಕೆ ನಡೆಸುತ್ತಿದ್ದ ರಾಮನ್ ಅವರು ಪಿಆರ್ ಓ ಸುಧೀಂದ್ರ ಮತ್ತು ಗೆಳೆಯರ ಜೊತೆ ಸೇರಿ ಒಲವಿನ ಉಡುಗೊರೆ ಎಂಬ ಸಿನಿಮಾ ನಿರ್ಮಿಸಿ ಸ್ವಲ್ಪ ಲಾಭ ಗಳಿಸಿದ್ದರು. ಮಿಕ್ಕ ಪತ್ರಕರ್ತರದ್ದು ಶೂನ್ಯ ಸಂಪಾದನೆ. ಆದರೆ ಸನತ್ ಈ ಮಾತನ್ನು ಸುಳ್ಳು ಮಾಡಿದ ಅನ್ನುವುದು ವಿಶೇಷ, ಜೊತೆಗೆ ಹೆಸರು ಕೆಡಿಸಿಕೊಂಡ ಅನ್ನುವುದು ಕೊಂಚ ಬೇಸರದ ಸಂಗತಿ.

ಸಿನಿಮಾ ಅನ್ನುವ ಅಫೀಮು ಆತನನ್ನು ಆಕ್ರಮಿಸಿಕೊಳ್ಳದೇ ಇದ್ದರೆ, ಪ್ರೆಸ್ ಕ್ಲಬ್ ಅನ್ನುವ ಮುಸ್ಸಂಜೆಯ ಸುಂದರಿ ಆತನನ್ನು ಮರುಳು ಮಾಡದೇ ಇದ್ದರೆ,  ಬದುಕು ಅನ್ನೋದು ಇಷ್ಟೊಂದು ಲೈಟಾದರೆ ಹೇಗೆ ಕಣಯ್ಯಾ ಎಂದು ಆತ ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದರೆ ಸನತ್ ಇನ್ನೂ ಹತ್ತಾರು ವರ್ಷ ನಮ್ಮೊಡನೆ ಇರುತ್ತಿದ್ದ. ಹಾಗೆಲ್ಲಾ ನನ್ನಷ್ಟಕ್ಕೇ ನಾನು ಅಂದುಕೊಳ್ಳುತ್ತಲೇ, ಸದಾ ಗುಡ್ ನೈಟ್ ಹೇಳುತ್ತಿದ್ದ ಗೆಳೆಯನಿಗೆ ಇವತ್ತು ಗುಡ್ ಬೈ ಹೇಳುತ್ತಿದ್ದೇನೆ.

Also See

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery