` Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು... - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravichandran image
ravichandran (pic K M Veeresh)

‘ನಮ್ಮೊಳಗೊಬ್ಬ ನಾಜೂಕಯ್ಯ’ನಾಟಕದ ಬಗ್ಗೆ ಬರೆಯುತ್ತಾ ಜೋಗಿ ಅವರು ರವಿಚಂದ್ರನ್ ಅವರನ್ನೂ ಆ ಲೇಖನದೊಳಗೆ ಎಳೆದು ತಂದಿದ್ದಾರೆ. ನನ್ನನ್ನು ಬಹಳ ವರ್ಷದಿಂದ ಕಾಡುತ್ತಿದ್ದ ಪ್ರಶ್ನೆಯನ್ನು ಜೋಗಿ ಅವರೂ ಕೇಳಿದ್ದಾರೆ. “ಮೊನ್ನೆ ರವಿಚಂದ್ರನ್ ಮಾತಾಡುತ್ತಾ ‘ಪತ್ರಕರ್ತರು ಎದುರು ಸಿಕ್ಕಾಗ ಸಿನಿಮಾ ಚೆನ್ನಾಗಿದೆ ಅನ್ನುತ್ತಾರೆ. ಬರೆಯುವ ಹೊತ್ತಿಗೆ ಅಂಥಾ ಮಾತುಗಳನ್ನು ಬರೆಯುವುದಿಲ್ಲ’ಅಂದರು. ವಿಮರ್ಶೆ ಎಂಬುದು ಒಂದು ಶಾಸ್ತ್ರ ಎಂದು ಗೊತ್ತಿಲ್ಲದ, ಅದು ಕೂಡಾ ಜಾಹಿರಾತು ಎಂದು ಭಾವಿಸಿಕೊಂಡಾಗ ಮಾತ್ರ ಇಂಥಾ ಮಾತುಗಳನ್ನು ಆಡಲು ಸಾಧ್ಯ. ಪುಸ್ತಕ ಬಿಡುಗಡೆಗೆ ಬಂದ ಅತಿಥಿ ಕೃತಿಯ ಒಳ್ಳೆಯ ಅಂಶಗಳ ಬಗ್ಗೆ ಮಾತಾಡುತ್ತಾನೆಯೇ ಹೊರತು ಅದರ ವಿಮರ್ಶೆ ಮಾಡುವುದಕ್ಕೆ ಹೋಗುವುದಿಲ್ಲ. ಎದುರುದುರೇ ಸಿಕ್ಕಿ ಹೇಗಿದೆ ಸಿನಿಮಾ ಅಂದಾಗ ಪರವಾಗಿಲ್ಲ ಚೆನ್ನಾಗಿದೆ ಅಂತ ಹೇಳುವುದು ಸೌಜನ್ಯ. ಆದರೆ ವಿಮರ್ಶಕನಾಗಿ ಬರೆಯಲು ಕುಳಿತಾಗ ಸಜ್ಜನಿಕೆ ಜಾಗವನ್ನು ಜವಾಬ್ದಾರಿ ಆವರಿಸಿಕೊಳ್ಳುತ್ತದೆ. ವಿಮರ್ಶಕ ಒಂದು ಓದುಗ ಸಮೂಹಕ್ಕೆ ಉತ್ತರದಾಯಿಯಾಗಿರುತ್ತಾನೆ ಎಂಬುದನ್ನು ಸಿನಿಮಾ ಮಾಡುವವರು ಅರ್ಥ ಮಾಡಿಕೊಳ್ಳುವುದಿಲ್ಲ....”

ravichandran (pic K M Veeresh

ಜೋಗಿ ಅಭಿಪ್ರಾಯಕ್ಕೆ ನನ್ನ ನೂರು ಲೈಕ್ಸ್ ಇವೆ. ವಿಮರ್ಶಕನ ಜವಾಬ್ದಾರಿ ಮತ್ತು ರವಿಚಂದ್ರನ್ ಅವರ ಹತಾಶೆ ಇವೆರಡನ್ನೂ ಎರಡೇ ವಾಕ್ಯಗಳಲ್ಲಿ ಜೋಗಿ ಸಮರ್ಪಕವಾಗಿ ಸೆರೆಹಿಡಿದಿದ್ದಾರೆ. ಸಜ್ಜನಿಕೆ ಅನ್ನುವುದು ಒಂದು ಮೌಲ್ಯ, ಅದರಿಂದ ಹೊರತಾಗಿರುವುದಕ್ಕೆ ಪತ್ರಕರ್ತರೇನೂ ದೇವರಲ್ಲ. ಸಿನಿಮಾ ಮಾಡುವುದು ಅಂದರೆ ಒಂದು ಹೊಸ ಮನೆಯನ್ನು ಕಟ್ಚಿದ ಹಾಗೆ. ಅದರ ಗೃಹಪ್ರವೇಶಕ್ಕೆ ನೀವು ನೆಂಟರಿಷ್ಟರನ್ನು ಆಹ್ವಾನಿಸುತ್ತೀರಿ. ಬಂದವರೆಲ್ಲರೂ ಮನೆ ಚೆನ್ನಾಗಿದೆ ಎಂದೇ ಹೇಳುತ್ತಾರೆ. ಅದಾಗಿ ಒಂದು ತಿಂಗಳ ನಂತರ ಒಂದೊಂದೇ ಕಾಮೆಂಟು ನಿಮ್ಮ ಕಿವಿಗೆ ಬೀಳುವುದಕ್ಕೆ ಶುರುವಾಗುತ್ತದೆ. ಅಡುಗೆ ಮನೆ ಇನ್ನೂ ಸ್ವಲ್ಪ ವಿಶಾಲವಾಗಿರಬೇಕಾಗಿತ್ತು, ಮನೆ ಮುಂದೆ ತೋಟಕ್ಕೆ ಸ್ವಲ್ಪ ಜಾಗ ಮೀಸಲಾಗಿಡಬಹುದಾಗಿತ್ತು, ಗೋಡೆಗೆ ಅಷ್ಟೊಂದು ಕಡುಬಣ್ಣದ ಪೇಂಟ್ ಬೇಕಿರಲಿಲ್ಲ, ವಾಸ್ತು ಪ್ರಕಾರ ಮನೆ ಕಟ್ಟಿಲ್ಲ... ಹೀಗೇ. ಅಷ್ಟೇಕೆ, ಆ ಮನೇಲಿ ವಾಸ ಮಾಡುವುದಕ್ಕೆ ಶುರು ಮಾಡಿದ ನಂತರ ನಿಮಗೇ ಮನೆಯ ಅನನುಕೂಲಗಳು ಒಂದೊಂದಾಗಿ ಪತ್ತೆಯಾಗುತ್ತವೆ. ಸಾಧ್ಯವಾದರೆ ಅದನ್ನು ರಿಪೇರಿ ಮಾಡುವುದಕ್ಕೆ ಪ್ರಯತ್ನ ಮಾಡಬೇಕೇ ಹೊರತಾಗಿ ಮನೆಯ ಬಗ್ಗೆ ಟೀಕಿಸಿದವರ ಮೇಲೆ ಹರಿಹಾಯುವುದರಿಂದ ಏನೂ ಉಪಯೋಗವಾಗುವುದಿಲ್ಲ.

 ಕ್ರೇಜಿಸ್ಟಾರ್ ಚಿತ್ರದ ಪ್ರಿವ್ಯೂಗೆ ಇಡೀ ಕನ್ನಡ ಚಿತ್ರೋದ್ಯಮವನ್ನೇ ರವಿಚಂದ್ರನ್ ಆಹ್ವಾನಿಸಿದ್ದರಲ್ಲ, ಅವರಲ್ಲಿ ಒಬ್ಬರಾದರೂ ಚಿತ್ರದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ವರದಿಯಾಗಿದೆಯಾ?ಎಲ್ಲರೂ ಚೆನ್ನಾಗಿದೆ ಎಂದೇ ಹೇಳಿದರು.ಪತ್ರಕರ್ತರು ಹೇಳಿದ್ದೂ ಅದನ್ನೇ, ಆದರೆ ಬರೆದಿದ್ದು ಇನ್ನೊಂದು. ಯಾಕೆಂದರೆ ಅದು ಅವರ ಕರ್ತವ್ಯ, ಜವಾಬ್ದಾರಿ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದ ಸಂಗತಿ. ರವಿಚಂದ್ರನ್ ಅವರಿಗೆ ಖುಶಿಯಾಗಲಿ ಅಂತ ಚಿತ್ರದ ಬಗ್ಗೆ ಹೊಗಳಿದರೆ ಓದುಗರಿಂದ ಉಗಿಸಿಕೊಳ್ಳಬೇಕಾಗುತ್ತದೆ ಮತ್ತು ಅಂಥಾ ವಿಮರ್ಶೆ ಬರೆದ ಪತ್ರಕರ್ತನ ಪ್ರಾಮಾಣಿಕತೆಯನ್ನೇ ಓದುಗ ಸಂಶಯದಿಂದ ನೋಡುತ್ತಾನೆ.

ಮಾತು ಮತ್ತೆ ಕೃತಿ ಒಂದೇ ಆಗಿರಬೇಕು ಅನ್ನುವ ನಿಯಮ ಅನ್ವಯ ಆಗುವುದು ಒಬ್ಬ ರಾಜಕಾರಣಿಗೆ. ಒಬ್ಬ ಸಮಾಜಸೇವಕನಿಂದ, ಸಿಲಬ್ರೆಟಿಯಿಂದಲೂ ಜನರು ಅದನ್ನೇ ಅಪೇಕ್ಷಿಸುತ್ತಾರೆ.   ಒಂದು ಮಗು ತನ್ನ ಅಪ್ಪ ಅಮ್ಮನಿಂದ ನಿರೀಕ್ಷೆ ಮಾಡುವುದೂ ಅದನ್ನೇ.  ಪತ್ರಕರ್ತ ಯಾವತ್ತೂ ಮಾತನ್ನು ನೆಚ್ಚಿಕೊಂಡು ಕೆಲಸ ಮಾಡುವುದಿಲ್ಲ, ಆಶ್ವಾಸನೆ ಕೊಡುವುದು ಆತನ ಕೆಲಸವಲ್ಲ, ಹಾಗಂತ ಆತ ಯಾರೋ ಹೇಳಿದ್ದನ್ನು ಯಥಾವತ್ತಾಗಿ ಬರೆಯುವ ಸ್ಟೆನೋ ಕೂಡಾ ಅಲ್ಲ. ಆತ ಮಾತಾಡಿಸಬೇಕು, ಜಾಸ್ತಿ ಮಾತಾಡಬಾರದು. ಆತನಲ್ಲಿ ಪ್ರಶ್ನೆಗಳಿರಬೇಕು, ಅನುಮಾನಗಳಿರಬೇಕು, ಅವುಗಳಿಗೆ ಉತ್ತರ ಹುಡುಕುವ ಕುತೂಹಲ ಇರಬೇಕು, ಅದನ್ನು ಓದುಗರಿಗೆ ಅರ್ಥವಾಗುವಂತೆ ದಾಟಿಸುವ ನಿಪುಣತೆ ಇರಬೇಕು. ಆಗಲೇ ಆತನ ಬರೆವಣಿಗೆಗೆ ಪರಿಪೂರ್ಣತೆ ಬರುವುದು.

ಉದಾಹರಣೆಗೆ ರವಿಚಂದ್ರನ್ ಆಡಿದ ಮಾತುಗಳನ್ನೇ ಮತ್ತೊಮ್ಮೆ ಓದಿನೋಡಿ. ಅವರೆಲ್ಲೋ ಗೊಂದಲಕ್ಕೊಳಗಾಗಿದ್ದಾರೆ ಎಂದು ನಿಮಗನಿಸುವುದಿಲ್ಲವೇ?ವರದಿ ಮತ್ತು ವಿಮರ್ಶೆಯ ನಡುವಿರುವ ವ್ಯತ್ಯಾಸವನ್ನು ಅವರು ಗುರುತಿಸುವುದರಲ್ಲಿ ಸೋತಿದ್ದಾರೆಯೇ?ಏಕಾಂಗಿ ಚಿತ್ರ ಸೋತುಹೋದಾಗಲೂ ಅವರು ಇದೇ ಧಾಟಿಯಲ್ಲಿ ಮಾತಾಡಿದ್ದು ಅವರಿಗೆ ಮರೆತುಹೋಗಿದೆಯಾ?

 ನಾನು ರವಿಚಂದ್ರನ್ ಅವರಿಗೆ ಹೇಳುತ್ತೇನೆ. ಪತ್ರಕರ್ತನ ಮಾತನ್ನು ನಂಬಬೇಡಿ, ಅವನ ಬರವಣಿಗೆಯನ್ನು ನಂಬಿ. ಯಾಕೆಂದರೆ ಅವನು ಬರೆಯುವುದು ತನ್ನ ಓದುಗರಿಗಾಗಿ. ನಿಮ್ಮ ಬಗ್ಗೆ ಆತನಿಗೆ ಪ್ರೀತಿ ಇದೆ,ನಿಮ್ಮ ವ್ಯಕ್ತಿತ್ವದ ಬಗ್ಗೆ  ಗೌರವ ಇದೆ. ನಿಮ್ಮ ಸಾಹಸಗಳನ್ನು ಆತ ಸದಾ ಬೆರಗುಗಣ್ಣಿಂದಲೇ ನೋಡುತ್ತಾನೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸಿನಿಮಾವನ್ನು ನಿಮ್ಮಷ್ಟು ಅಗಾಧವಾಗಿ ಮೋಹಿಸುವವರನ್ನು ಆತ ಕಂಡಿಲ್ಲ. ಒಬ್ಬ ತಂತ್ರಜ್ಞನಾಗಿ ನಿಮ್ಮ ಎತ್ತರಕ್ಕೆ ಏರಿದ ನಿರ್ದೇಶಕರು  ಬಹಳ ಕಡಿಮೆ ಎಂದಾತ ಆಣೆ ಮಾಡಿ ಹೇಳುತ್ತಾನೆ. ಹಾಗಂತ ನಿಮ್ಮನ್ನು ಒಬ್ಬ ಅದ್ಭುತ ನಟ ಎಂದು ಆತ ಓದುಗರ ಮುಂದೆ ಸುಳ್ಳು ಹೇಳುವುದಕ್ಕಾಗುವುದಿಲ್ಲ. ಪ್ರೀತಿವಿಶ್ವಾಸ ಅನ್ನುವುದು ವೈಯಕ್ತಿಕ, ಬದ್ಧತೆ ಅನ್ನುವುದು ಸಾರ್ವಜನಿಕ. ಅದನ್ನೇ ಜೋಗಿ ಉತ್ತರದಾಯಿತ್ವ (Accountabilty) ಅಂದಿದ್ದು.

ramakrishna actor ravichandran, balu muttaiah, jaggesh, saiprakash (pic k m veeresh)

ಇದನ್ನೊಂದು ಉದಾಹರಣೆ ಮೂಲಕ ವಿವರಿಸುತ್ತೇನೆ. ‘ಅಪ್ತಮಿತ್ರ’ಕ್ಕೆ ಬಂಡವಾಳ ಹೂಡಿದ ಮಹನೀಯರೊಬ್ಬರು ಆಮೇಲೆ ತಾವೇ ನಿರ್ಮಾಪಕರಾಗಿ ‘ರಾಮಕೃಷ್ಣ’ಎಂಬ ಚಿತ್ರ ನಿರ್ಮಿಸಿದರು. ಆ ಚಿತ್ರ ಸಾಕಷ್ಟು ಕೆಟ್ಟದಾಗಿತ್ತು ಮತ್ತು ಅದು ಚೆನ್ನಾಗಿಲ್ಲ ಎಂದೇ ಕನ್ನಡಪ್ರಭದಲ್ಲಿ ವಿಮರ್ಶೆ ಬಂತು. ಅದಾಗಿ ಎರಡು ದಿನಗಳ ನಂತರ ಆ ವ್ಯಕ್ತಿ ಇನ್ನೊಂದು ಪಾರ್ಟಿಯಲ್ಲಿ ಭೇಟಿಯಾದರು.  ನನ್ನನ್ನು ಕಂಡವರೇ “ಅಲ್ಲಾ ಸ್ವಾಮಿ, ನಿಮ್ಮ ಸಂಸ್ಥಾನಕ್ಕೆ (ಕಂಪನಿಗೆ) ಜಾಹಿರಾತು ರೂಪದಲ್ಲಿ ಲಕ್ಷಾಂತರ ರುಪಾಯಿ ಕೊಟ್ಟಿದ್ದೇನೆ. ಆದರೂ ನನ್ನ ಚಿತ್ರದ ಬಗ್ಗೆ ಕೆಟ್ಟದಾಗಿ ಬರೆದಿದ್ದೀರಲ್ಲ ಇದು ನ್ಯಾಯಾನಾ”ಅಂದರು. “ನೀವು ಯಾರಿಗೆ ಜಾಹಿರಾತು ಕೊಟ್ಟಿದ್ದೀರೋ ಅವರನ್ನೇ ಈ ಪ್ರಶ್ನೆ ಕೇಳಿ”ಅಂದೆ. ಆದರೆ ಆ ಮನುಷ್ಯ ಅಹಂಕಾರಿಯಾಗಿರಲಿಲ್ಲ,  ಎಷ್ಟು ಮುಗ್ಧನಾಗಿದ್ದ ಅಂದರೆ ಜಾಹಿರಾತು ಕೊಡುವುದು ಅಂದರೆ ತನ್ನ ಚಿತ್ರವನ್ನು ಹೊಗಳುವುದಕ್ಕಾಗಿ ಕೊಡುವ ಮೊತ್ತ ಎಂದೇ ಭಾವಿಸಿದ್ದ. ಅಂಥೋರ ಜೊತೆ ಜಗಳ ಆಡಿ ಸುಖವಿಲ್ಲ ಅಂತ ಆಮೇಲೆ ಗೊತ್ತಾಯಿತು. ಇಂಥಾ ಅಜ್ಞಾನಿಗಳಿಗೆ ಕ್ಷಮೆ ಇರಬಹುದು, ಆದರೆ ರವಿಚಂದ್ರನ್..?

yekangi

ಇದೇ ರವಿಚಂದ್ರನ್ ‘ಏಕಾಂಗಿ’ಚಿತ್ರ ಸೋತಾಗ ಪ್ರೇಕ್ಷಕರ ಕಡೆ ಬೆರಳು ತೋರಿಸಿದ್ದರು. ಅದಕ್ಕೆ ಪ್ರಶಸ್ತಿಗಳು ಬಂದಾಗ ನಾನೀ ಪ್ರಶಸ್ತಿಗಳನ್ನು ಕೊಂಡುಕೊಂಡೆ ಎಂದು ತಮಾಷೆ ಮಾಡಿದ್ದರು. ಈಗ ತಾನು ಮತ್ತೆ ಕ್ರೇಜಿ ಸ್ಟಾರ್ ಆಗಿಯೇ ಮುಂದುವರಿಯುತ್ತೇನೆ ಅಂತಿದ್ದಾರೆ. ವಯಸ್ಸಾದ ನಂತರ ಶ್ರೀನಾಥ್ ಅವರಿಗೇ ಪ್ರಣಯರಾಜ ಅನ್ನುವ ಬಿರುದು ರೇಜಿಗೆ ಮೂಡಿಸೋದಕ್ಕೆ ಶುರುವಾಗಿತ್ತು. ಸಮಾರಂಭವೊಂದರಲ್ಲಿ ನಿರೂಪಕರೊಬ್ಬರು ಪ್ರಣಯರಾಜ ಎಂದು ಕರೆದಾಗ ‘ಎಂಎಲ್ಸಿ ಎಂದು ಕರೀರ್ರೀ’ಎಂದು ಅವರೇ ದಬಾಯಿಸಿದ್ದರು. ಕೆಲವು ಬಿರುದುಗಳಿಗೆ ಕಾಲಕಳೆದಂತೆ ಮುಪ್ಪು ಆವರಿಸಿಕೊಳ್ಲುತ್ತದೆ, ಅದು ಆಯಾ ನಟನ  ವಯಸ್ಸಿಗೆ ಹೊಂದಿಕೆಯಾಗುವುದಿಲ್ಲ, ಆದರೂ ‘ನಾನಿನ್ನು ಮುಂದೆ ಕ್ರೇಜಿ ಸ್ಟಾರ್ ಆಗಿಯೇ ಕಾಣಿಸಿಕೊಳ್ಳುತ್ತೇನೆ, ರವಿಚಂದ್ರನ್ ಆಗಿ ಅಲ್ಲ’ಎಂದು ರವಿ ಹೇಳಿದ್ದಾರೆ. ಅದು ಅವರ ಇಷ್ಟಕ್ಕೆ ಬಿಟ್ಟಿದ್ದು.

ರವಿಚಂದ್ರನ್ ಅವರಿಗೆ ಈಗಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ, ಆದರೆ ಅವರು ರವಿಚಂದ್ರನ್ ಅವರನ್ನು ಒಬ್ಬ  ನಟನಾಗಿ ಆರಾಧಿಸುತ್ತಿದ್ದಾರೆಯೇ, ತಂತ್ರಜ್ಞನಾಗಿಯೋ ಅಥವಾ ಒಬ್ಬ ನೇರನುಡಿಯ ವ್ಯಕ್ತಿಯಾಗಿಯೋ ಅನ್ನುವುದು ಗೊತ್ತಿಲ್ಲ. ಅಭಿಮಾನಿಗಳು ತಮ್ಮನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ರವಿಚಂದ್ರನ್ ಅವರಿಗೇ ತನ್ನ ಬಗ್ಗೆ ಪ್ರೀತಿಯಿದೆ. ತಪ್ಪಿಲ್ಲ. ಆದರೆ ಅದು ಕನ್ನಡಿಯನ್ನು ಮೋಹಿಸುವ ಆತ್ಮರತಿಯಾಗುವ ಹಂತಕ್ಕೆ ತಲುಪಿದಾಗ ತನ್ನ ಆತ್ಮಕಥಾನಕವನ್ನೇ ಸಿನಿಮಾ ಮಾಡಿದರೆ ಹೇಗೆ ಅನ್ನುವ ಯೋಚನೆ ಬರುತ್ತದೆ, ಅದನ್ನು ಪ್ರೇಕ್ಷಕರು ಮೆಚ್ಚೇ ಮೆಚ್ಚುತ್ತಾರೆ ಅನ್ನುವ ಅತಿಯಾದ ವಿಶ್ವಾಸ, ಕೊನೆಗೆ ಸೋತಾಗ ಒಂದು ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸಲಿಲ್ಲ, ಪತ್ರಕರ್ತರು ಸಪೋರ್ಟ್ ಮಾಡಲಿಲ್ಲ ಅನ್ನುವ ಆರೋಪವೂ ಬರುತ್ತದೆ.

ನೀವು ‘ಗಾಂಧಿ’ಚಿತ್ರವನ್ನು ನೋಡಿದ್ದರೆ ಅದೆಲ್ಲೂ ಡಾಕ್ಯುಮೆಂಟರಿ ಥರ ಅನಿಸುವುದೇ ಇಲ್ಲ. ನೈಜ ಘಟನೆಗಳನ್ನು ಸಿನಿಮಾದ ಚೌಕಟ್ಟೊಳಗೆ ತಂದು ಅದು ಕತೆಯಾಗಿಯೂ ಮತ್ತು ಜೀವನಕತೆಯಾಗಿಯೂ ಪ್ರೇಕ್ಷಕರನ್ನು ತಲುಪುವಂತೆ ಮಾಡುವುದು ಒಂದು ಕಲೆಗಾರಿಕೆ.  ರವಿಚಂದ್ರನ್ ಕಣ್ಸೆಳೆಯುವ ದೃಶ್ಯಗಳನ್ನು ಸಂಯೋಜಿಸಬಲ್ಲರು, ಪ್ರತಿ ಫ್ರೇಮನ್ನೂ ಕ್ಯಾಲೆಂಡರ್ ಥರ ಸಿಂಗರಿಸಬಲ್ಲರು. ಆದರೆ ಆತ್ಮ ಅಂತ ಒಂದಿದೆಯಲ್ವಾ. ಅದುವೇ ಮಿಸ್ ಆದಾಗ ಇಡೀ ಚಿತ್ರ ಕೇವಲ ಕ್ಯಾಲೆಂಡರ್ ಆಗಿಯೇ ಉಳಿಯುತ್ತದೆ.

ರವಿಚಂದ್ರನ್ ಎಲ್ಲರಿಗಿಂತ ಭಿನ್ನ, ನಿಜ. ರವಿಚಂದ್ರನ್ ತುಂಬಾ ನೇರ. ನಿಜ. ರವಿಚಂದ್ರನ್ ಖಡಕ್ಕಾಗಿ ಮಾತಾಡುವ ನಿಷ್ಠುರವಾದಿ, ಅದೂ ನಿಜ. ಹಾಗಂತ ಎಲ್ಲರೂ ಹಾಗಿರುವುದಕ್ಕೆ ಸಾಧ್ಯವಿಲ್ಲ. ಅಂಥಾದ್ದೊಂದು ನಿರೀಕ್ಷೆಯನ್ನು ರವಿಚಂದ್ರನ್ ಕೂಡಾ ಇಟ್ಟುಕೊಳ್ಳಬಾರದು.  ಎಲ್ಲರೂ ಅವರ ಥರಾನೇ ಆಗಿ ಬಿಟ್ಟರೆ ರವಿಚಂದ್ರನ್ ಎಲ್ಲರಿಗಿಂತ ಡಿಫರೆಂಟು ಅನಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ರವಿಚಂದ್ರನ್ ಅವರನ್ನು ಬಹಳ ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ಅವರ ಮಾತಲ್ಲಿ ಕಪಟವಿಲ್ಲ, ಮುಚ್ಚುಮರೆಯಿಲ್ಲ. ಆದರೆ ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಾಗಲಿ, ತಾಳ್ಮೆಯಾಗಲಿ ಕೂಡಾ ಅವರಲ್ಲಿಲ್ಲ. ಅವರು ಒಳ್ಳೆಯ ಮಾತುಗಾರ, ಅವರ ಒನ್ ಲೈನ್ ಪಂಚ್ ಗಳು ಮತ್ತೆಮತ್ತೆ ಕೇಳುವಷ್ಟು ಸೊಗಸಾಗಿರುತ್ತದೆ. ಆದರೆ ಅದು ಬರೆವಣಿಗೆಯಾಗಲಾರದು, ಸಿನಿಮಾ ಹಾಡಿನ ಸಾಹಿತ್ಯವೂ ಆಗಲಾರದು. ಹಾಗಂತ ರವಿಚಂದ್ರನ್ ಡೈಲಾಗು ಬರೆಯುವ ಬಗ್ಗೆ ಆಗಲಿ, ಹಾಡು-ಸಂಗೀತ ನೀಡುವ ಬಗ್ಗೆಯಾಗಲಿ ಯಾರ ಆಕ್ಷೇಪಣೆಯೂ ಇಲ್ಲ. ಇಂಥಾ ಪ್ರಯೋಗಗಳು ಅವರ ಪಾಲಿಗೇ ದುಬಾರಿಯಾಗುತ್ತಿರುವ ಬಗ್ಗೆ ಅಷ್ಟೇ ನಮಗೆ ಕಳವಳ ಇರುವುದು. 

yekangi actor ravichandran

‘ನನ್ನ ಬರೆವಣಿಗೆಯನ್ನು ನೀವು ಗುರುತಿಸಬೇಕಿತ್ತು, ನೀವು ನೋಡೋ ರೀತಿ, ಬರೆಯೋ ವಿಮರ್ಶೆ ಬದಲಾಗಬೇಕು’ಎಂದು ರವಿಚಂದ್ರನ್ ಹೇಳುತ್ತಾರೆ. ಅದರ ಬೆನ್ನಿಗೇ ‘ನಾನು ಯಾವ ವಿಮರ್ಶೆಗಳನ್ನೂ ಓದೋಲ್ಲ, ನನ್ನ ಬಗ್ಗೆ ಚೆನ್ನಾಗಿ ಬರೀರಿ ಸ್ವಾಮಿ ಅಂತಾನೂ ಕೇಳೋಲ್ಲ’ಅಂತಾನೂ ಹೇಳುತ್ತಾರೆ. ‘ಕ್ರೇಜಿ ಸ್ಟಾರ್’ಚಿತ್ರದ ಪೂರ್ವಾರ್ಧ ಮತ್ತು ಉತ್ತರಾರ್ಧಗಳ ನಡುವಿರುವಷ್ಟೇ ಅಂತರ ಅವರ ಮಾತುಗಳಲ್ಲೂ ಇವೆ. ಮಾತಾಡುತ್ತಿರುವವರು ರವಿಚಂದ್ರನ್ ಆಗಿರುವುದರಿಂದ ನಾವು ಉಪೇಕ್ಷೆ ಮಾಡುವ ಹಾಗಿಲ್ಲ. ವೃತ್ತಿಬದುಕಿನ ಕಷ್ಟನಷ್ಟಗಳು ಅವರನ್ನು ಒಬ್ಬ ಪ್ರಬುದ್ಧ ವ್ಯಕ್ತಿಯನ್ನಾಗಿಸಿವೆ. ಆ ಪ್ರಬುದ್ಧತೆ ಅವರ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ದಿನ ಬರಲಿ, ಅವರಿಗೆ ಒಲಿದಿರುವ ತಂತ್ರಜ್ಞಾನವೇ ಅವರಿಗೆ ಮುಳುವಾಗದೇ ಇರಲಿ.

ಹಾಗೂ ಅವರು ಕ್ರೇಜಿ ಸ್ಟಾರ್ ಆಗದೇ ರವಿಚಂದ್ರನ್ ಆಗಿಯೇ ಇನ್ನಷ್ಟು ವರ್ಷ ನಮ್ಮನ್ನು ರಂಜಿಸುತ್ತಾ, ಮಾತಲ್ಲೇ ದಂಡಿಸುತ್ತಾ ಇರಲಿ. ಕನ್ನಡ ಚಿತ್ರೋದ್ಯಮದ ಆರೋಗ್ಯ ಚೆನ್ನಾಗಿರಬೇಕಾದರೆ ಇಂಥಾ ನಿಷ್ಠುರವಾದಿಗಳೂ, ಸಿನಿಮಾ ಕಡುಮೋಹಿಗಳೂ ನಮ್ಮ ನಡುವಿರಬೇಕು.

Also See

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery