` Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ... - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tourist hotel image
hotel tourist

ಆನಂದರಾವ್ ಸರ್ಕಲ್ ಒಂದು ಕಾಲಕ್ಕೆ ಬೆಂಗಳೂರಿನ ಅತಿದೊಡ್ಡ ವೃತ್ತ. ಪಂಚರಸ್ತೆಗಳು ಕೂಡುವ ವಿಶೇಷ ಜಾಗವದು.  ಬಹಳಷ್ಟು ಬಿಟಿಎಸ್ ಚಾಲಕರು ಅಲ್ಲಿ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಾ ಕಾಯುತ್ತಲೇ ತಮ್ಮ ಯೌವನವನ್ನು ಕಳಕೊಂಡು ವೃದ್ಧಾಪ್ಯದತ್ತ ಹೊರಳಿರಬಹುದೇನೋ! ಆನಂದರಾವ್ ಸರ್ಕಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಅರ್ಧ ಪರ್ಲಾಂಗು ದೂರವಿದ್ದರೂ ಬಸ್ ತಲುಪುವುದಕ್ಕೆ ಅರ್ಧ ಗಂಟೆಯೇ ಬೇಕಾಗುತ್ತಿತ್ತು. ಹಾಗಾಗಿ ಬಸ್ಸಲ್ಲಿದ್ದ ಪ್ರಯಾಣಿಕರು ಅನಿವಾರ್ಯವಾಗಿ  ಸರ್ಕಲ್ಲಿನ ಅಕ್ಕಪಕ್ಕ ಇರುವ ಕಟ್ಟಡಗಳ ಸೊಗಸು ನೋಡುತ್ತಾ, ಅವುಗಳ ಹೆಸರುಗಳನ್ನು ಮನನ ಮಾಡುತ್ತಾ ಕಾಲತಳ್ಳುತ್ತಿದ್ದರು.  ರಸ್ತೆಯ ಒಂದೇ ಬದಿಗೆ ರಾಜಮಹಲ್, ಸಂಗೀತಾ, ಶೀತಲ್, ಸುಪ್ರಭಾತ, ದ್ವಾರಕ ದಂಥ ಹಳೇ ಕಾಲದ ಹತ್ತಾರು ವಸತಿ ಗೃಹಗಳಿದ್ದವು ಮತ್ತು ಈಗಲೂ ಇವೆ. ಅನತಿ ದೂರದಲ್ಲಿ ಟೂರಿಸ್ಟ್ ಎಂಬ ಪುರಾತನಕಾಲದ ಬೋರ್ಡಿಂಗ್ ಅಂಡ್ ಲಾಡ್ಜಿಂಗ್. ಆನಂದರಾವ್ ಸರ್ಕಲ್ ಈಗ ತನ್ನ ಸ್ವರೂಪ ಕಳಕೊಂಡಿದ್ದರೂ ಟೂರಿಸ್ಟ್ ಮಾತ್ರ ಹಾಗೆಯೇ ಇದೆ. ಅಲ್ಲಿಗೆ ಬರುವ ಟೂರಿಸ್ಟುಗಳೂ ಬದಲಾಗಿಲ್ಲ.  ಅದೇ ಹಳೇ ಕಾಲದ ಬೋರ್ಡು, ಪ್ರವೇಶದ್ವಾರದ ಪಕ್ಕದಲ್ಲೇ ಒಂದು ಬೀಡಾಬೀಡಿ ಅಂಗಡಿ, ಒಳಹೊಕ್ಕರೆ ತೊಟ್ಟಿಮನೆಗಳಲ್ಲಿರುವಂತೆ ಆಯತಾಕಾರದ ದೊಡ್ಡ ಪ್ರಾಂಗಣ, ಅದರ ನಾಲ್ಕೂ ಕಡೆ  ಕುಳಿತುಕೊಳ್ಳುವುದಕ್ಕೆ ಜಗಲಿ. ಆನಂದರಾವ್ ಸರ್ಕಲ್ಲಿನ ಪ್ಲೈ ಓವರ್ ಮೇಲೆ ಬಸ್ಸು ಹಾದುಹೋಗುವಾಗ ಬಲಗಡೆಗೆ ತಿರುಗಿ ನೋಡಿದರೆ ಈಗಲೂ ನನ್ನ ಕಣ್ಣಿಗೆ ಟೂರಿಸ್ಟ್ ಕಾಣುತ್ತದೆ. ಆ ಪಕ್ಷಿನೋಟದ ಬೆನ್ನಿಗೇ ಹಳೇ ನೆನಪುಗಳೆಲ್ಲವೂ ಒಂದರ ಹಿಂದೊಂದರಂತೆ ಬಿಳಿಮೋಡಗಳೋಪಾದಿಯಲ್ಲಿ ಸರಿದಾಡುತ್ತವೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಟೂರಿಸ್ಟ್ ಹೋಟೆಲ್ ಗೆ ಬಹುಮುಖ್ಯ ಪಾತ್ರವಿದೆ.  ಹಲವಾರು ನಿರ್ಮಾಪಕರು ಈ ಹೋಟೆಲ್ಲನ್ನೇ ತಮ್ಮ ಮನೆ ಮಾಡಿಕೊಂಡಿದ್ದರು (ಹಿರಿಯ ನಿರ್ಮಾಪಕ ಅಂಕಲಗಿ ಕೂಡಾ ಈ ಪೈಕಿ ಒಬ್ಬರಾಗಿದ್ದರು). ಅದಕ್ಕೆ ಕಾರಣ ಆ ಲಾಡ್ಜಿಂಗು ಗಾಂಧಿನಗರದ ಹೃದಯಭಾಗದಲ್ಲಿರುವುದು ಮತ್ತು ರೂಮು ಬಾಡಿಗೆ ಕೂಡಾ ಕಡಿಮೆಯಾಗಿರುವುದು. ವಿಧಾನಸೌಧಕ್ಕೂ ಈ ಹೋಟೆಲ್ಲು ಹತ್ತಿರವಿರುವುದರಿಂದ ಉತ್ತರಕರ್ನಾಟಕದಿಂದ ಬರುವ ಖಾದಿ ಜುಬ್ಬಾ, ಬಿಳಿಟೋಪಿ ಧರಿಸಿದ ರಾಜಕಾರಣಿಗಳಿಗೂ ಇದು ಪ್ರಿಯವಾದ ಜಾಗವಾಗಿತ್ತು.  ಮಿಕ್ಕೆಲ್ಲಾ ವಸತಿ ಗೃಹಗಳಲ್ಲಿ ಗ್ರಾಹಕರು ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾದರೆ, ಟೂರಿಸ್ಟ್ ನ ಕೆಲವು ಕಾಯಂ ಅತಿಥಿಗಳು ತಿಂಗಳಿಗಿಷ್ಟು ಅಂತ ಕೊಡುತ್ತಿದ್ದರು. ಮಾಲಿಕರಿಗೆ ಇದು ದೊಡ್ಡ ತಲೆನೋವೇ ಆಗಿದ್ದರೂ, ಆ ಅತಿಥಿಗಳನ್ನು ಜಾಗ ಖಾಲಿ ಮಾಡಿಸುವುದಕ್ಕಾಗದೇ, ಬಾಡಿಗೆಯನ್ನೂ ಏರಿಸುವುದಕ್ಕಾಗದೇ ಅವರು ಒದ್ದಾಡುತ್ತಿದ್ದರು. ಸಿನಿಮಾ ಪತ್ರಕರ್ತರಿಗೆ ಇದುವೇ ಕಾಯಂ ನಿಲ್ದಾಣ. ಯಾಕೆಂದರೆ ಕನ್ನಡ ಚಿತ್ರಗಳ ಶೂಟಿಂಗ್ ಎಲ್ಲೇ ನಡೆಯುತ್ತಿದ್ದರೂ ಪಿಕ್ ಅಪ್ ಪಾಯಿಂಟು ಟೂರಿಸ್ಟ್ ಹೋಟೆಲ್ಲೇ ಆಗಿತ್ತು. ಕಂಠೀರವ, ಅಭಿಮಾನ್ ಸ್ಟುಡಿಯೋ, ಚಾಮುಂಡೇಶ್ವರಿ ಸ್ಟುಡಿಯೋ, ಅಬ್ಬಾಯಿ ನಾಯ್ಡು ಸ್ಟುಡಿಯೋ ಇವೆಲ್ಲ ಕಡೆಗಳಿಗೂ ನಾವು ಟೂರಿಸ್ಟ್ ನಿಂದಲೇ ಹೋಗುತ್ತಿದ್ದೆವು. ಚಿಕ್ಕಮಗಳೂರು, ಮೈಸೂರು, ತೀರ್ಥಹಳ್ಳಿ, ಮುಂತಾದ ಪರವೂರುಗಳಲ್ಲಿ ಶೂಟಿಂಗ್ ವರದಿ ಮಾಡುವುದಕ್ಕೆ ಹೋಗುವಾಗಲೂ ಟೂರಿಸ್ಟೇ ಸ್ಟಾರ್ಟಿಂಗ್ ಪಾಯಿಂಟಾಗಿತ್ತು.  ಒಂದು ಹಳೇ ಕಾಲದ ಮೆಟಡಾರ್, ಕೆಲವೊಮ್ಮೆ ಶೂಟಿಂಗ್ ಜಾಗಕ್ಕೆ ಊಟತಿಂಡಿ ಸಾಗಿಸುವುದಕ್ಕೆ ಮೀಸಲಾಗಿದ್ದ ವ್ಯಾನುಗಳಲ್ಲೇ ಪತ್ರಕರ್ತರನ್ನೂ ಒಯ್ಯಲಾಗುತ್ತಿತ್ತು. ಅಲ್ಲಾಡುವ ಬಾಗಿಲುಗಳು, ಹರಿದುಹೋದ ಸೀಟುಗಳು, ಕಿರ್ರೋ ಎಂದು ಕಿರುಚುವ ಎಂಜಿನ್ನು...ವಯಸ್ಸಾದ ಪತ್ರಕರ್ತರಿಗಂತೂ ಇದೊಂದು ಘೋರ ಶಿಕ್ಷೆಯೇ ಆಗಿತ್ತು. ಆದರೆ ಆಗಿನ ಕಾಲದ ಪತ್ರಕರ್ತರಲ್ಲಿ ಸ್ವಂತ ವಾಹನಗಳನ್ನಿಟ್ಟುಕೊಂಡವರು ತೀರಾ ಕಡಿಮೆ ಇದ್ದುದರಿಂದ, ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಪಕರೂ ಕಡಿಮೆ ಇದ್ದಿದ್ದರಿಂದ ನಾವು ಈ ಮುದಿವ್ಯಾನಲ್ಲೇ ಹೋಗುವುದು ಅನಿವಾರ್ಯವಾಗಿತ್ತು.

dv sudheendra, udaya marakini

ಆಗ ಸಿನಿಮಾ ಮುಹೂರ್ತದ ಆಹ್ವಾನಪತ್ರಿಕೆಗಳಲ್ಲಿ ಕಡ್ಡಾಯವಾಗಿರುತ್ತಿದ್ದ ಒಂದು ವಾಕ್ಯವೆಂದರೆ ಟೂರಿಸ್ಟ್ ಹೋಟೆಲ್ಲಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಪತ್ರಿಕಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ ಅವರಿಗೂ ಅಲ್ಲೊಂದು ರೂಮು ಇತ್ತು. ಆದರೆ ಅದು ಅವರ ಹೆಸರಲ್ಲಿರಲಿಲ್ಲ, ನಿರ್ಮಾಪಕರೊಬ್ಬರು ಆ ರೂಮನ್ನು ಬಳಸಿಕೊಳ್ಳುವುದಕ್ಕೆ ಅವರಿಗೆ ಅನುಮತಿ ನೀಡಿದ್ದರು. ಆ ಸಿಂಗಲ್ ರೂಮು ಎಷ್ಟು ಕಿರಿದಾಗಿತ್ತೆಂದರೆ ಒಂದು ಮಂಚ, ಟೇಬಲ್ಲು ಮತ್ತು ಕುರ್ಚಿಗಷ್ಟೇ ಅಲ್ಲಿ ಜಾಗವಿತ್ತು. ಸುಧೀಂದ್ರರಂಥ ದಢೂತಿ ಆಸಾಮಿ ಕೋಣೆಯೊಳಗೆ ಹೋದರೆ ವಾಪಸು ಬರುವುದಕ್ಕೆ ಹರಸಾಹಸ ಪಡಬೇಕಾಗಿತ್ತು. ಹಾಗಾಗಿ ಸುಧೀಂದ್ರ ಸದಾ ರೂಮು ಹೊರಗೇ ಇರುತ್ತಿದ್ದರು. ಅವರ ಸುತ್ತ ಜಗಲಿಯಲ್ಲಿ ಅಡ್ಡಾದಿಡ್ಡಿಯಾಗಿ ಕುಳಿತ ನಮ್ಮಂಥ ಕಿರಿಯ ಪತ್ರಕರ್ತರ ಗುಂಪು. ಸಿನಿಮಾ ಸೆಟ್ ಗೆ ನಮ್ಮನ್ನು ಕರೆದೊಯ್ಯಬೇಕಾಗಿರುವ ಮುದಿಗಾಡಿಯ ಆಗಮನಕ್ಕಾಗಿ ಕಾಯುತ್ತಾ ಕುಳಿತಿರುವ ಹೊತ್ತಲ್ಲಿ ಸುಧೀಂದ್ರ ಚಿತ್ರರಂಗದ ಮಹನೀಯರು ಮತ್ತು ಮಹಿಳೆಯರ ಬಗ್ಗೆ ರೋಚಕ ಕತೆಗಳನ್ನು ಹೇಳುತ್ತಿದ್ದರು. ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿದ್ದರಿಂದ ನಮಗೆ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲ. ಸಂಜೆ ಏನೂ ಕೆಲಸ ಇಲ್ಲದಿದ್ದಾಗ ನಾವೆಲ್ಲ ಮತ್ತೆ ಟೂರಿಸ್ಟ್ ಹೋಟೆಲ್ಲಿಗೆ ಹೋಗಿ ಏನಾದರೂ ಸುದ್ದಿ ಸಿಗುತ್ತದೆಯೋ ಎಂದು ತಡಕಾಡುತ್ತಿದ್ದೆವು. ಆಗ ಇನ್ನೊಂದಿಷ್ಟು ಸಿನಿಮಾ ಮಂದಿ ಅಲ್ಲಿ ಸಿಗುತ್ತಿದ್ದರು.  ಚಿತ್ರರಂಗಕ್ಕೆ ಸಂಬಂಧಿಸಿದ ಸಮಸ್ತ ಗಾಸಿಪ್ಪುಗಳು ಸೃಷ್ಟಿಯಾಗುತ್ತಿದ್ದ ಜಾಗವದು. ಖ್ಯಾತ ನಟರೊಬ್ಬರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು ಆಮೇಲೆ ಅಲ್ಲಿಂದ ನಿವೃತ್ತರಾದ ವ್ಯಕ್ತಿಯೊಬ್ಬರು ಆ ನಟರ ಮನೆಯಲ್ಲಿ ನಡೆಯುತ್ತಿದ್ದ ಅವಾಂತರಗಳನ್ನು ಒಂದಿಷ್ಟು ಮಸಾಲೆ ಬೆರೆಸಿ ಹೇಳುತ್ತಾ ನಮ್ಮನ್ನು ಸಿಕ್ಕಾಪಟ್ಟೆ ರಂಜಿಸುತ್ತಿದ್ದರು. ಎಲ್ಲಾ ಕತೆ ಹೇಳಿದ ನಂತರ ದಯವಿಟ್ಟು ಬರೀಬೇಡಿ ಮಾರಾಯ್ರೇ, ನಾನೇ ಹೇಳಿದ್ದು ಅಂತ ಗೊತ್ತಾದ್ರೆ ನನ್ನನ್ನು ಸಾಯಿಸಿಬಿಟ್ಟಾರು ಅಷ್ಟೆ ಅನ್ನುತ್ತಿದ್ದರು. ನಮಗೆ ಬರೆಯುವಂಥಾ ದೊಡ್ಡ ಪತ್ರಿಕೆಗಳಿರಲಿಲ್ಲ ಅನ್ನುವ ರಹಸ್ಯ ಅವರಿಗೆ ಗೊತ್ತಿರಲಿಲ್ಲ.

ಅನಂತರದ ವರ್ಷಗಳಲ್ಲಿ ಚಿತ್ರರಂಗ ಬೆಳೆಯುತ್ತಿದ್ದ ವೇಗಕ್ಕೆ  ಟೂರಿಸ್ಟ್ ಹೋಟೆಲ್ಲು ಬೆಳೆಯಲಿಲ್ಲ ಅದೇನಿದ್ದರೂ ಬರೀ ಪಿಕಪ್ ಮತ್ತು ಡ್ರಾಪ್ ಗೆ ಅಷ್ಟೇ ಮೀಸಲಾಗಿತ್ತೇ ಹೊರತಾಗಿ ತಿಂಡಿ, ಕಾಫಿಗೆ ನಾವು ಸಿನಿಮಾ ಸೆಟ್ಟುಗಳನ್ನೇ ಅವಲಂಬಿಸಬೇಕಾಗಿತ್ತು. ಪತ್ರಿಕಾಗೋಷ್ಠಿ ಮತ್ತು ಸಂತೋಷಕೂಟಕ್ಕೂ ಅಲ್ಲಿ ಜಾಗವಿರಲಿಲ್ಲ. ಹಾಗಾಗಿ ಪತ್ರಕರ್ತರನ್ನು ಕೂಡಿ ಹಾಕುವುದಕ್ಕೆ ನಿರ್ಮಾಪಕರು  ಇನ್ನೊಂದು ಜಾಗ ಹುಡುಕುವುದು ಅನಿವಾರ್ಯವಾಯಿತು. ಆಗ ಬೆಳಕಿಗೆ ಬಂದಿದ್ದು ಕನಿಷ್ಕಾ ಹೋಟೆಲ್.   ಆ ಕಾಲಕ್ಕೆ ಕೆಲವು ಪತ್ರಕರ್ತರು ದ್ವಿಚಕ್ರ ವಾಹನಗಳ ಅಧಿಪತಿಯಾಗಿದ್ದರು. ಬೈಕನ್ನು ಕನಿಷ್ಕದ ಅಂಗಳದಲ್ಲಿ ಪಾರ್ಕ್ ಮಾಡಿ ಅಲ್ಲಿಂದ ನಿರ್ಮಾಪಕರು ಕಳಿಸಿದ ಗಾಡಿಯಲ್ಲಿ ಶೂಟಿಂಗ್ ಜಾಗಕ್ಕೆ ತೆರಳುವುದು, ಸಂಜೆ ಶೂಟಿಂಗ್ ಮುಗಿಸಿ ಮತ್ತೆ ಕನಿಷ್ಕಕ್ಕೆ ಬರುವುದು. ಬೆಳಗಿನ ಉಪಾಹಾರ ಸಾಮಾನ್ಯವಾಗಿ ಕನಿಷ್ಕದಲ್ಲೇ ಮುಗಿದುಹೋಗುತ್ತಿತ್ತು. ಇಡ್ಲಿ ವಡೆ ಮತ್ತು ದೋಸೆ. ದುಬಾರಿಯಾಗಿದ್ದ ಜ್ಯೂಸ್ ಗೆ ಆರ್ಡರ್ ಮಾಡಿ ಪಿ.ಆರ್.ಓಗಳ ಕಣ್ಣು ಕೆಂಪಗಾಗಿಸುವ ಪತ್ರಕರ್ತರೂ ಇದ್ದರು. ಕನಿಷ್ಕ ಬರೀ  ಪತ್ರಕರ್ತರ ಅಡ್ಡಾ ಅಷ್ಟೇ ಆಗಿರಲಿಲ್ಲ. ಮುಂದೊಂದು ದಿನ ನಟರಾಗುವ, ನಿರ್ದೇಶಕರಾಗುವ ಕನಸು ಕಾಣುತ್ತಿದ್ದ ನಿರುದ್ಯೋಗಿ ಯುವಕರ ಪಡೆಯೂ ಅಲ್ಲೇ ಇರುತ್ತಿತ್ತು. ಒಂದು ಬೈಟೂ ಕಾಫಿ ಹೇಳಿ ನಾಲ್ಕು ಗಂಟೆಗಳ ಕಾಲ ಮಾತಾಡಿ, ಹತ್ತು ಸಿಗರೇಟು ಸುಟ್ಟು ಅವರೆಲ್ಲಾ ಮನೆಗೆ ಹೋಗುತ್ತಿದ್ದರು. ಈ ಸಿನಿಮಾ ಮಂದಿಯನ್ನು ನಂಬಿದರೆ ಹೋಟೆಲ್ಲು ಮುಚ್ಚಲೇಬೇಕಾಗುವುದು ನಿಶ್ಚಿತ ಎಂದು ತೀರ್ಮಾನಿಸಿದ ಮಾಲಿಕರು ನೋ ಸ್ಮೋಕಿಂಗ್ ಬೋರ್ಡ್ ಹಾಕಿದರು, ಸಿನಿಮಾದವರು ಕಾಫಿ ಲೋಟ ಹಿಡಿದುಕೊಂಡು ಹೊರಗೆ ನಿಂತು ಸಿಗರೇಟು ಸೇದುವುದಕ್ಕೆ ಶುರು ಮಾಡಿದರು. ಮಾಲಿಕರು ಕಾಫಿ ರೇಟನ್ನು ದುಪ್ಪಟ್ಟು ಮಾಡಿದರು, ಇದು ಸ್ವಲ್ಪ ಮಟ್ಟಿಗೆ ವರ್ಕೌಟ್ ಆಯಿತು.

ಕನಿಷ್ಕ ಹೋಟೆಲ್ಲಿನ ಮೆನೇಜರ್ ಜೊತೆ ಜಗಳ ಆಡಿ, ಆಮೇಲೆ ಸೇಡು ತೀರಿಸಿಕೊಂಡ ಹಾಸ್ಯನಟನೊಬ್ಬನ ಕತೆಯನ್ನು ನೀವು ಕೇಳಲೇಬೇಕು. ಆತ ಒಂದೆರಡು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದ್ದ. ನಾಯಕಿಯ ಗೆಳತಿಯನ್ನು ರೇಗಿಸಿ, ಅವಳಿಂದ ಚಪ್ಪಲಿಯೇಟು ತಿನ್ನುವಂಥ ಪಾತ್ರಗಳು. ಆದರೆ ಕನಿಷ್ಕ ಹೋಟೆಲ್ಲಿನ ಮಾಣಿಗಳು ಅವನನ್ನು ನಟ ಎಂದು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಹಾಗಾಗಿ ಒಂದೆರಡು ಬಾರಿ ಅವರಿಂದ ಅವಮಾನಿತನಾಗಿದ್ದ ಆತ ಒಂದು ಶಪಥ ಮಾಡಿದ್ದನಂತೆ, “ಒಂದಲ್ಲ ಒಂದು ದಿನ ಈ ಹೋಟೆಲ್ಲಿನ ಗಲ್ಲಾದ ಮೇಲೆ ಕುಳಿತು ನಿಮ್ಮೆಲ್ಲರನ್ನೂ ವಿಚಾರಿಸಿಕೊಳ್ಳುತ್ತೇನೆ”ಎಂದು. ಅಂಥಾ ಶುಭದಿನ ಬಂದೇ ಬಂತು. ಚಿತ್ರವೊಂದರ ಶೂಟಿಂಗಿಗಾಗಿ ಕನಿಷ್ಕ ಹೋಟೆಲ್ಲನ್ನು ನಿರ್ಮಾಪಕರು ಎರಡು ಗಂಟೆಗಳ ಮಟ್ಟಿಗೆ ಬಾಡಿಗೆಗೆ ಪಡೆದುಕೊಂಡಿದ್ದರು. ಆ ದೃಶ್ಯದಲ್ಲಿ ನಮ್ಮ ಉದಯೋನ್ಮುಖ ಹಾಸ್ಯನಟನಿಗೆ ಮೆನೇಜರ್ ಪಾತ್ರವಿತ್ತು. ಈ ಸದವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಆತ ಗಲ್ಲಾದ ಮೇಲೆ ಕುಳಿತು, ತನ್ನ ಎರಡೂ ಕಾಲುಗಳನ್ನು ಮೇಜಿನ ಮೇಲೆ ಚಾಚಿ ಎಲ್ಲಾ ಮಾಣಿಗಳನ್ನು ಗೋಳುಹೊಯ್ಕಂಡನಂತೆ.

ಕನಿಷ್ಕದಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆಯಿತ್ತು, ಪರರಾಜ್ಯದಿಂದ ಬರುವ ನಾಯಕಿಯರು ಅಲ್ಲೇ ಉಳಿದುಕೊಳ್ಲುತ್ತಿದ್ದರು. ಬೆಳ್ಳಂಬೆಳಿಗ್ಗೆ ತಿಂಡಿಗೆ ಬರುತ್ತಿದ್ದ ಅವರ ಮೇಕಪ್ಪಿಲ್ಲದ ಮುಖಗಳನ್ನು ನೋಡಿ ನಾವು ಆಶ್ಚರ್ಯಚಕಿತರಾಗುತ್ತಿದ್ದೆವು. ನಾವು ಪತ್ರಕರ್ತರು ಅನ್ನುವುದು ಅವರಿಗೆ ಗೊತ್ತಿರುತ್ತಿದ್ದರೆ ಮೇಕಪ್ಪು ಸಮೇತವೇ ತಿಂಡಿಗೆ ಬರುತ್ತಿದ್ದರೋ ಏನೋ ಪಾಪ. ಕನಿಷ್ಕದಲ್ಲಿ ಎಲ್ಲವೂ ಚೆನ್ನಾಗಿದ್ದರೂ ಮಾಲಿಕರಿಗೆ ಸಿನಿಮಾ ಹೋಟೆಲ್ ಅನ್ನುವ ಬಿರುದಿನಿಂದ ಪಾರಾಗಬೇಕಾಗಿತ್ತು, ಕಡಿಮೆ ಹೊತ್ತು ಕುಳಿತು ಜಾಸ್ತಿ ಬಿಲ್ ಮಾಡುವ ಗ್ರಾಹಕರಿಂದಲೇ ಹೋಟೆಲ್ ಲಾಭದಾಯಕವಾಗಿ ನಡೆಯುವುದಕ್ಕೆ ಸಾಧ್ಯ ಅಲ್ಲವೇ. ಅದಕ್ಕೂ ಕಾಲ ಕೂಡಿ ಬಂತು. ಒನ್ ಫೈನ್ ಡೇ, ಚಿತ್ರರಂಗದ ಅಡ್ಡಾ ಗ್ರೀನ್ ಹೌಸ್ ಎಂಬ ಇನ್ನೊಂದು ಹೋಟೆಲ್ಲಿಗೆ ವರ್ಗವಾಯಿತು. ಇಲ್ಲಿದ್ದ ಅನುಕೂಲವೆಂದರೆ ಪಿಕ್ ಅಪ್ ಪಾಯಿಂಟು ಜೊತೆಗೆ, ಪ್ರೆಸ್ ಮೀಟ್ ಮತ್ತು ಪಾನಗೋಷ್ಠಿ ಮಾಡುವುದಕ್ಕೂ ಜಾಗವಿತ್ತು. ಹಾಗಾಗಿ ಬೆಳಿಗ್ಗೆ ಶೂಟಿಂಗ್ ಮುಗಿಸಿಕೊಂಡು, ಮಧ್ಯಾಹ್ನ ಯಾವುದೋ ಸಿನಿಮಾ ನೋಡಿ, ಸಂಜೆ ಪಾರ್ಟಿಗೆ ಬರುವುದಕ್ಕೆ ಇದು ಪ್ರಶಸ್ತ ಜಾಗವಾಯಿತು.

ಇಂದಿಗೂ ಸಿನಿಮಾ ಸಂಬಂಧಪಟ್ಟ ಹೆಚ್ಚಿನ ಪ್ರೆಸ್ ಮೀಟುಗಳು, ಪಾರ್ಟಿಗಳು ಗ್ರೀನ್ ಹೌಸ್ ನಲ್ಲೇ ನಡೆಯುತ್ತದೆ. ಐದಾರು ವರ್ಷಗಳ ಕೆಳಗೆ ಗ್ರೀನ್ ಹೌಸ್ ಎಷ್ಟು ಬಿಜಿಯಾಗಿತ್ತೆಂದರೆ ವಾರದಲ್ಲಿ ಐದು ದಿನವೂ ಅಲ್ಲಿ ಸಿನಿಮಾ ಪಾರ್ಟಿಗಳು ನಡೆಯುತ್ತಿದ್ದವು. ಸಂಜೆ ಕಚೇರಿ ಮುಗಿದ ತಕ್ಷಣ ಮನೆಗೆ ಹೋಗುವಷ್ಟೇ ಸಲೀಸಾಗಿ ಪತ್ರಕರ್ತರು ಗ್ರೀನ್ ಹೌಸ್ ಗೆ ಭೇಟಿ ನೀಡುತ್ತಿದ್ದರು. ಅಲ್ಲಿನ ಅಂಡರ್  ಗ್ರೌಂಡ್ ಫ್ಲೋರ್  ಹೆಚ್ಚುಕಮ್ಮಿ ಸಿನಿಮಾ ಕಾರ್ಯಕ್ರಮಗಳಿಗೇ ಮೀಸಲಾಗಿತ್ತು. ಅಲ್ಲಿ ನಮ್ಮನ್ನು ಉಪಚರಿಸುತ್ತಿದ್ದ ಬೇರರ್ ಗಳಿಗೆ ಯಾರ್ಯಾರ ಬ್ರಾಂಡ್ ಯಾವುದು ಅನ್ನುವುದು ಕಂಠಪಾಟವಾಗಿ ಹೋಗಿತ್ತು. ಇಂತಿಂಥವರು ಇಷ್ಟೇ ಪೆಗ್ ಕುಡೀತಾರೆ ಮತ್ತು ಇಷ್ಟೇ ಹೊತ್ತಿಗೆ ಎದ್ದೇಳುತ್ತಾರೆ ಮತ್ತು ಕುಡಿತ ಜಾಸ್ತಿಯಾದಾಗ ಯಾವ್ಯಾವ ಪದಗಳನ್ನಾಡುತ್ತಾರೆ ಅನ್ನುವುದು ಕೂಡಾ ಅವರಿಗೆ ಗೊತ್ತಿತ್ತು. ಹಾಗಾಗಿ ಅರ್ಡರ್ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಚಿತ್ರರಂಗದ ಹಲವಾರು ಜಗಳಗಳು, ವಾದವಿವಾದಗಳಿಗೆ ಸಾಕ್ಷಿಯಾದ ಖ್ಯಾತಿ ಗ್ರೀನ್ ಹೌಸ್ ಗೇ ಸಲ್ಲುತ್ತದೆ. 

ಈ ಮಧ್ಯೆ ಕೆಲವು ಪರಭಾಷಾ ನಿರ್ಮಾಪಕರು ತಮ್ಮ ಲೆವೆಲ್ ತೋರಿಸುವುದಕ್ಕೆ ವಿಂಡ್ಸರ್ ಮ್ಯಾನರ್, ಬೆಲ್, ಅಶೋಕದಂಥಾ ದೊಡ್ಡ ಹೋಟೆಲ್ಲುಗಳಲ್ಲಿ ಪಾರ್ಟಿ ಕೊಡುವುದೂ ಇತ್ತು. ಕಮಲಾಹಾಸನ್ ರಾಮಶಾಮಭಾಮ ಚಿತ್ರದ ಬಿಡುಗಡೆಗೆ ಮುನ್ನ ಹಾಲಿಡೇ ಇನ್ ಹೋಟೆಲಲ್ಲಿ ಇಟ್ಟುಕೊಂಡಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಹಿರಿಯ ಪತ್ರಕರ್ತರೊಬ್ಬರು ತನಗೆ ಕೋಡೆಸ್ ರಮ್ಮೇ ಬೇಕು ಅಂತ ಗಲಾಟೆ ಮಾಡಿದ್ದರು. ಆ ಬ್ರಾಂಡನ್ನೇ ಹೊಂದಿರದ ಆ ಫೈವ್ ಸ್ಟಾರ್ ಹೋಟೆಲ್ಲಿನವರು ಹೊರಗಿಂದ ಅದನ್ನು ತರಿಸಿ ಕೊಟ್ಟಿದ್ದರು.

ಹದಿನೈದು ವರ್ಷಗಳ ಹಿಂದೆ ಸಿನಿಮಾ ಪಾರ್ಟಿಗಳು ಮುಗಿದ ಬಳಿಕ ಪತ್ರಕರ್ತರನ್ನು ಅವರವರ ಮನೆಗೆ ಸುರಕ್ಷಿತವಾಗಿ ಸೇರಿಸುವುದಕ್ಕೆ ವಾಹನ ವ್ಯವಸ್ಥೆಯಿತ್ತು. ಈಗ ಅದು ನಿಂತುಹೋಗಿದೆ, ಯಾಕೆಂದರೆ ಎಲ್ಲಾ ಪತ್ರಕರ್ತರ ಬಳಿ ವಾಹನಗಳಿವೆ. ಬೆಂಗಳೂರಿನ ಪೊಲೀಸರು ಪತ್ರಕರ್ತರನ್ನು ಕೂಡಾ ಹುಲುಮಾನವರ ಲೆಕ್ಕಕ್ಕೆ ಸೇರಿಸಿ, ಡ್ರಂಕ್ ಅಂಡ್ ಡ್ರೈವ್ ಕೇಸಲ್ಲಿ ಫಿಟ್ ಮಾಡುವುದಕ್ಕೆ ಶುರು ಮಾಡಿದ ಮೇಲೆ ರಾತ್ರಿ ಗೋಷ್ಠಿಗಳೂ ಕಡಿಮೆಯಾಗಿದೆ ಎಂದು ಮೊನ್ನೆ ಪತ್ರಿಕಾ ಪ್ರಚಾರಕರ್ತ ವೆಂಕಟೇಶ್ ಹೇಳಿದರು. ಇದರಿಂದಾಗಿ ಹಲವಾರು ಪತ್ರಕರ್ತರ ಆರೋಗ್ಯ ಮತ್ತು ಖಾಸಗಿ ಬದುಕು ಸುಧಾರಿಸಿರಬಹುದು. ಆದರೆ ಆ ಪಾರ್ಟಿಗಳಲ್ಲಿ ಸಿಗುವ ರೋಚಕ  ಅನುಭವಗಳಿಂದ ಇಂದಿನ ಪತ್ರಕರ್ತರು ವಂಚಿತರಾಗುತ್ತಿರುವ ಬಗ್ಗೆ ನನಗೆ ವಿಷಾದವಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರನ್ನು ಸಾಕ್ಷಾತ್ ದೇವರು ಎಂದೇ ಕರೆಯುವ ನಿರ್ದೇಶಕ, ಗೋಷ್ಠಿ ಮುಗಿದ ನಂತರ ಪಾರ್ಟಿ ಶುರುವಾಗಿ ನಾಲ್ಕನೇ ಪೆಗ್ಗು ಒಳಗಿಳಿಯುತ್ತಿದ್ದಂತೆಯೇ ನಿರ್ಮಾಪಕರ ತಂದೆತಾಯಿಯ ಅಂಗೋಪಾಂಗಗಳ ಬಗ್ಗೆ ವಾಚಾಮಗೋಚರವಾಗಿ ಬೈದಾಡುವುದನ್ನು ನಾನು ಕಂಡಿದ್ದೇನೆ. ಇಂಥಾ ತಮಾಷೆಗಳ ಬಗ್ಗೆ ಇದೇ ಅಂಕಣದಲ್ಲಿ ಇನ್ಯಾವತ್ತಾದರೂ ಬರೆದೇನು. 

ಒಂದು ತಿಂಗಳ ಹಿಂದೆ ಗೆಳೆಯರ ಜೊತೆ ಹಾಗೇ ಸುಮ್ಮನೆ ಗ್ರೀನ್ ಹೌಸ್ ಗೆ ಹೋಗಿದ್ದೆ. ಒಂದು ಕಾಲದಲ್ಲಿ ನನ್ನನ್ನು ಅವರ ಮನೆಯವನಂತೆಯೇ ಉಪಚರಿಸುತ್ತಿದ್ದ ಮೆನೇಜರು ಮತ್ತು ಬೇರರುಗಳು ಆನಂದತುಂದಿಲರಾಗಿ ಯೋಗಕ್ಷೇಮ ವಿಚಾರಿಸಿಕೊಂಡರು. ನೀವಿರುವಾಗ ಇದ್ದ ಪರಿಸ್ಥಿತಿ ಈಗಿಲ್ಲ ಸರ್ ಅಂತ ಬೇಜಾರು ಮಾಡಿಕೊಳ್ಳುತ್ತಾ ನನ್ನನ್ನು ದಿವಂಗತನ ಪಟ್ಟಕ್ಕೇರಿಸಿದರು. ನನ್ನ ಪುಣ್ಯಕ್ಕೆ ಆವತ್ತು ಅಲ್ಲಿ ಯಾವ ಪಾರ್ಟಿಯೂ ಇರಲಿಲ್ಲ, ಅಂಡರ್ ಗ್ರೌಂಡ್ ಬಿಕೋ ಅನ್ನುತ್ತಿತ್ತು. ಯಾಕೋ ಕಳೆದ ಮೂರು ವರ್ಷಗಳಲ್ಲಿ ತೀರಿಕೊಂಡ ಪಿ.ಆರ್.ಓ ಸುಧೀಂದ್ರ, ಹಿರಿಯ ಪತ್ರಕರ್ತರಾದ ವಿ.ಎನ್.ಸುಬ್ಬರಾವ್, ಎ.ಎಸ್. ಮೂರ್ತಿ, ವಿಜಯಸಾರಥಿ, ಪಿ.ಜಿ.ಶ್ರೀನಿವಾಸ ಮೂರ್ತಿ ಇವರೆಲ್ಲರೂ ಕಣ್ಣ ಮುಂದೆ ಬಂದು ಹೋದರು.

ಕಾಲ ಸರಿಯುವುದಿಲ್ಲ, ನಾವು ಸರಿಯುತ್ತಿದ್ದೇವೆ ಅಷ್ಟೆ ಎಂದು ಯಾರೋ ಹೇಳಿದ ಮಾತು ನೆನಪಾಯಿತು.

Also See

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery