` Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vishnuvardhan driver image
radhakrishna, vishnuvardhan

ಸಾಹಿತಿಗಳಿಗೆ ಮತ್ತು ಗಾಯಕರಿಗೆ ಹಾಗೂ ಇನ್ನಿತರೇ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಒಂದು ಸಣ್ಣ ಅಹಂ ಇರುತ್ತದೆ. ನೀವದನ್ನು ನಿರೀಕ್ಷೆ ಅಂತಾದರೂ ಕರೆಯಬಹುದು.ಯಾರಾದರೂ ಅವರನ್ನು ಗಮನಿಸುತ್ತಾ ಇರಬೇಕು.  ಕವಿ ಅಥವಾ ಲೇಖಕನಿಗೆ ತಾನು ಬರೆದದ್ದನ್ನು ಯಾರಾದರೂ ಓದಿ ಒಂದು ಫೋನ್ ಮಾಡಿದರೆ ಅಥವಾ ಪ್ರತಿಕ್ರಿಯೆ ರೂಪದಲ್ಲಿ ನಾಲ್ಕು ಸಾಲು ಗೀಚಿದರೆ ಅದೇನೋ ಖುಶಿ. ಗಾಯಕನಿಗೆ ತನ್ನ ಹಾಡಿಗೆ ನಾಲ್ಕು ಚಪ್ಪಾಳೆ ಬಿದ್ದರೆ ಅದೇನೋ ಸಮಾಧಾನ.ಭಾಷಣಕಾರನಿಗೆ ಹುರುಪು ಬರಬೇಕಾದರೆ ಸಭಾಂಗಣ ತುಂಬಿರಬೇಕು, ರೇಡಿಯೋ ಜಾಕಿಗೆ ಕಾಲ್ ಮೇಲೆ ಕಾಲ್ ಬಂದರಷ್ಟೇ ಮಾತು ಮುಂದುವರೆಸುವುದಕ್ಕೆ ಅದು ಟಾನಿಕ್ಕು, ಮಗುವಿಗೂ ಕೂಡಾ ತಾನು ಮಾಡುವ ಚೇಷ್ಟೆಗಳನ್ನು ಅಮ್ಮ ಗಮನಿಸಲಿ ಅನ್ನುವ ಆಸೆಯಿರುತ್ತದೆ. ಈ ಜಗತ್ತಲ್ಲಿ ಎಲ್ಲರಿಗೂ ಆಡಿಯನ್ಸ್ ಬೇಕು. ಬಹುಶಃ ಹಿಮಾಲಯದ ನೆತ್ತಿಯಲ್ಲಿ ಕುಳಿತ ಸರ್ವಸಂಗ ಪರಿತ್ಯಾಗಿ ಸಂತನನ್ನು ಹೊರತುಪಡಿಸಿ.  ಹಾಗಾಗಿ   ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ಅನ್ನುವುದು ನನ್ನ ಪ್ರಕಾರ ಒಂದು ಅಪ್ಪಟ ಸುಳ್ಳು. ‘ಹಾಡುವುದು ಅನಿವಾರ್ಯ ಕರ್ಮ ನನಗೆ’ಎಂದೇ ಆಗಿದ್ದರೆ ಆತ ಕಾಡಲ್ಲಿ ಹಾಡಬಹುದಾಗಿತ್ತು, ನೂರಾರು ಜನರ ಮುಂದೆ ಯಾಕೆ ಹಾಡುತ್ತಾನೆ ಅನ್ನುವುದು ನನ್ನ ಪ್ರಶ್ನೆ. (ಹಾಗಂತ ನಾನು ಆ ಪದ್ಯ ಬರೆದ ಕವಿಗೆ ಅಪಚಾರ ಮಾಡುತ್ತಿಲ್ಲ, ಯಾಕೆಂದರೆ ಆ ಸಾಲುಗಳನ್ನು ಬರೆದ ಸಂದರ್ಭ ಬೇರೆ, ಅದು ಧ್ವನಿಸುವ ಅರ್ಥವೂ ಬೇರೆ. ನನ್ನ ಅನುಕೂಲಕ್ಕಾಗಿ ಆ ಸಾಲುಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ ಅಷ್ಟೆ). ಎದೆ ತುಂಬಿ ಹಾಡುವವರನ್ನು ಕಿವಿಗೊಟ್ಟು ಕೇಳುವ ವರ್ಗ ಸರ್ವಕಾಲಕ್ಕೂ ಇರುತ್ತದೆ ಅನ್ನುವುದು ಚಿರಂತನ ಸತ್ಯ.

Ego  ಅಥವಾ ಅಹಂ ವಿಚಾರ ಬಂದಾಗ ನಮ್ಮ ಸಿನಿಮಾ ಸ್ಟಾರ್ ಗಳಿಗೆ ಯಾರೂ ಪೈಪೋಟಿ ಕೊಡುವ ಹಾಗೇ ಇಲ್ಲ. ಡೈಲಾಗ್ ಬರೆದವರು ಯಾರೇ ಆಗಿರಬಹುದು, ಕುಣಿತ ಕಲಿಸಿದವರು ಇನ್ಯಾರೋ ಆಗಿರಬಹುದು, ಆತನ ಕಲ್ಲುಮುಖದಲ್ಲಿ ನವರಸಗಳನ್ನು ತುಂಬುವುದಕ್ಕೆ ಬೆವರು ಹರಿಸಿದವರು ಬೇರೆ ಯಾರೋ ಆಗಿರಬಹುದು. ಆದರೆ ಅವೆಲ್ಲದರ ಸಂಪೂರ್ಣ ಕ್ರೆಡಿಟ್ಟನ್ನು ತಾನೇ ತೆಗೆದುಕೊಳ್ಳುವ ವಿಚಿತ್ರ ತಳಿ ಇವನು. ತಾನೇನೇ ಮಾಡಿದರೂ ಪೊಗಳುವ ಅಭಿಮಾನಿಗಳಿದ್ದಾರೆ ಅನ್ನುವ ಭಂಡಧೈರ್ಯ ಆತನದ್ದು. ಅಭಿಮಾನ ಅನ್ನುವುದು ಸಂಪೂರ್ಣವಾಗಿ ದುರುಪಯೋಗವಾಗುತ್ತಿರುವ ಏಕೈಕ ರಂಗವೆಂದರೆ ಸಿನಿಮಾ.

ಈಗ ನನ್ನ ವಿಚಾರಕ್ಕೆ ಬರೋಣ. ನಾನು‘ಚಿತ್ರಲೋಕ’ದಲ್ಲಿಬರೆಯುವ ಅಂಕಣಗಳಿಗೂ ಒಂದಷ್ಟು ಪ್ರತಿಕ್ರಿಯೆಗಳು ಬರುತ್ತಿವೆ, ಇದು ನನ್ನ ಹುಮ್ಮಸ್ಸನ್ನು ಹೆಚ್ಚಿಸುತ್ತದೆ ಮತ್ತು ಬರೆಯುವ ಅನಿವಾರ್ಯ ಕರ್ಮಕ್ಕೆ ನನ್ನನ್ನು ಇನ್ನಷ್ಟು ಪಕ್ಕಾಗಿಸುತ್ತದೆ. ಮೊನ್ನೆ ಪ್ರಕಾಶ್ ಅನ್ನುವವರು ಮೇಲ್ ಮೂಲಕ ಬರೆದ ಪತ್ರದ ಸಾಲುಗಳು ಹೀಗಿದ್ದವುಃ

“ನಾನು ನಿಮ್ಮ ಉಮಾ ಕಾಲಂನ್ನು ತಪ್ಪದೇ ಓದುತ್ತಿದ್ದೇನೆ ಮತ್ತು ನಿಮ್ಮ ಬರಹಗಳ ಅಭಿಮಾನಿಯಾಗಿದ್ದೇನೆ. ಕಳೆದ ವಾರ ನೀವು ಬರೆದ ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು ಅನ್ನುವ ಲೇಖನವನ್ನು ಓದಿ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಪ್ರಕಾರ ಅದು ಕೇವಲ ಲೇಖನವಲ್ಲ, ಅದೊಂದು ಅನುಭವ. ನಾನು ಕೂಡಾ ಒಂದು ಕಾಲದಲ್ಲಿ ಇಂಥಾದ್ದೇ ಸಂಕಟ ಅನುಭವಿಸಿದ್ದೇನೆ, ಆದರೆ ಸಿನಿಮಾ ರಂಗದಲ್ಲಲ್ಲ.ಜಗತ್ತಿನ ಎಲ್ಲೆಡೆ ಹೆಚ್ಚಿನ ಬಾಸ್ ಗಳೂ ಹೀಗೇ ಇರುತ್ತಾರೆ. ನೀವು ಬರೆದ ಕಾಲಂ ಓದಿದದರೂ ಅವರು ಬದಲಾಗುವುದಿಲ್ಲ, ಹಾಗೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣ ಅವರಲ್ಲಿರುವುದಿಲ್ಲ. ಆದರೆ ಈ ಕಾಲಂನ್ನು ನೀವು ಬಹಳ ಹಿಂದೆಯೇ ಬರೆಯಬೇಕಾಗಿತ್ತು ಅನ್ನೋದು ನನ್ನ ಅನಿಸಿಕೆ. ನನ್ನ ಹಳೆಯ ದಿನಗಳನ್ನು ನೀವು ನೆನಪಿಸಿದ್ದೀರಾ. ಆದರೆ ಅದಕ್ಕೆ ನಾನು ಥಾಂಕ್ಸ್ ಹೇಳುವುದಿಲ್ಲ. ಯಾಕೆಂದರೆ ಆ ದಿನಗಳು ತುಂಬಾ ಯಾತನಾಮಯವಾಗಿದ್ದವು ಮತ್ತು ಅವುಗಳನ್ನು ನೆನಪಿಸಿಕೊಳ್ಳುವುದಕ್ಕೂ ನನಗಿಷ್ಟವಿಲ್ಲ”.

ಈ ಸಾಲುಗಳನ್ನು ಓದುತ್ತಿದ್ದಂತೆಯೇ ಯಾಕೋ ಮನಸ್ಸು ಕಲಕಿಹೋಯಿತು. ತಕ್ಷಣ ರಿಪ್ಲೈ ಮಾಡಿದೆ. “ಅಯ್ಯಾ ಗೆಳೆಯಾ, ನೀನು ಹೇಳಿದ ಹಾಗೆ ನಾನು ಆ ಕಾಲಂನಲ್ಲಿ ಬರೆದ ಪ್ರತಿಯೊಂದು ವಾಕ್ಯವೂ ನನ್ನ ಅನುಭವದಿಂದ ಜನ್ಮತಾಳಿದ್ದು ಹಾಗೂ ನೀನು ಬರೆದ ಪ್ರತಿಯೊಂದು ವಾಕ್ಯವೂ ಸತ್ಯವಾದದ್ದು.ನೀನು ನನಗೆ ಥಾಂಕ್ಸ್ ಹೇಳಬೇಕಾಗಿಲ್ಲ.ಆದರೆ ನಾನು ನಿನ್ನ ಕ್ಷಮೆ ಕೇಳುತ್ತಿದ್ದೇನೆ, ನಿನ್ನ ಹಳೆಯ ಗಾಯಗಳನ್ನು ಕೆದಕಿದ ತಪ್ಪಿಗೆ”.  

ತನ್ನ ಸೇವಕನ ನಿಯತ್ತನ್ನು ಅನುಮಾನಿಸಿದವನಿಗೆ ಅಥವಾ ಅವನಿಗೆ ಕಷ್ಟ ಕೊಟ್ಟವನಿಗೆ ತಾನು ಮಾಡಿದ ದ್ರೋಹ ಸಲೀಸಾಗಿ ಮರೆತುಹೋಗಿರುತ್ತದೆ. ಯಾಕೆಂದರೆ ಆತನ ಪಾಲಿಗೆ ಅದು ಜಗದ ನಿಯಮ. ಆತ ಸಾವಿರಾರು ಜನರ ಎದೆಯ ಮೇಲೆ ಕಾಲಿಟ್ಟುದುಡ್ಡು ಸಂಪಾದಿಸಿ, ಕೊನೆಗೆ ಅದರ ಹತ್ತು ಪರ್ಸೆಂಟನ್ನು ತಿರುಪತಿ ಹುಂಡಿಗೆ ಹಾಕಿ ಪಾಪವನ್ನು ತೊಳೆದುಕೊಳ್ಳುವವನು.ಪಶ್ಚಾತಾಪವಿಲ್ಲದ ಪ್ರಾಯಶ್ಚಿತ್ತಕ್ಕೆ ಯಾವ ಬೆಲೆಯಿದೆ ಅನ್ನುವ ಪ್ರಶ್ನೆಗೆ ಅವನಲ್ಲಿ ಉತ್ತರ ಇರುವುದಿಲ್ಲ.

ನೀವು ಪುಸ್ತಕಪ್ರೇಮಿಗಳಾಗಿದ್ದರೆ ‘ಪ್ಯಾಪಿಲೋನ್’ಎಂಬ ಬಯಾಗ್ರಫಿಯನ್ನು ಖಂಡಿತಾ ಓದಿರುತ್ತೀರಿ. ತಾನು ಮಾಡದೇ ಇರುವ ತಪ್ಪಿಗೆ ಕೊಲೆಗಾರ ಅನ್ನುವ ಹಣೆಪಟ್ಟಿ ಧರಿಸಿಕೊಂಡು ಅಜನ್ಮ ಕಾರಾಗೃಹವಾಸಕ್ಕೆ ಗುರಿಯಾಗುವ ಒಬ್ಬ ವ್ಯಕ್ತಿಯ ಜೀವನಚಿತ್ರವಿದು. ಪ್ಯಾಪಿಲೋನ್ ಒಳಗೊಬ್ಬ ಸಾಹಸಿಯಿದ್ದಾನೆ, ತನ್ನನ್ನು ಜಗತ್ತಿನ ಯಾವ ಜೈಲಲ್ಲಿ ಕೂಡಿಹಾಕಿದರೂ ಆತ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ ಮತ್ತುಪ್ರತಿಸಲ ಆ ಪ್ರಯತ್ನದಲ್ಲಿ ಸೋಲುತ್ತಾನೆ. ಹಾಗಿದ್ದರೂ ಸ್ವಾತಂತ್ರ್ಯಕ್ಕೋಸ್ಕರ ಅವನು ಮನಸ್ಸು ಸದಾ ಹಪಹಪಿಸುತ್ತಲೇ ಇರುತ್ತದೆ. ಹಾಗಾಗಿ ತನ್ನ ಹದಿನಾರು ವರ್ಷಗಳ ಸೆರೆಮನೆ ವಾಸದಲ್ಲಿ ಕಡಿಮೆಯೆಂದರೂ ಹದಿನೈದು ಬಾರಿ ಆತ ಎಸ್ಕೇಪ್ ಆಗುವುದಕ್ಕೆ ನೋಡುತ್ತಾನೆ. ಕೊನೆಗೂ ಆತ ಬಿಡುಗಡೆಯಾಗುವುದು ಕಾನೂನು ಬದ್ಧವಾಗಿಯೇ. ವಿಶೇಷವೆಂದರೆ ಇಷ್ಟೆಲ್ಲಾ ತಪ್ಪುಗಳನ್ನು ಮಾಡಿದರೂ ಪ್ಯಾಪಿಲೋನ್ ನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಟು. ಪರಮ ಪಾತಕಿಗಳೂ ಆತನನ್ನು ಗೌರವದಿಂದ ಕಾಣುತ್ತಾರೆ, ಪರಮಕ್ರೂರಿ ಅಧಿಕಾರಿಗಳೂ ಈತನನ್ನು ಇಷ್ಟಪಡುತ್ತಾರೆ. ಅದಕ್ಕೆ ಕಾರಣ ಆತನ ನೇರವಂತಿಕೆ ಮತ್ತು ಸತ್ಯವನ್ನೇ ಹೇಳುವ ಸ್ವಭಾವ. ಒಂದು ಕಡೆ ಪ್ಯಾಪಿಲೋನ್ ಹೇಳುತ್ತಾನೆಃ

“ಜೀವನದಲ್ಲಿ ಪಡಬಾರದ ಕಷ್ಟಗಳನ್ನು ದಾಟಿಬಂದ ಮನುಷ್ಯನಷ್ಟೇ ಹೃದಯವಂತನಾಗುವುದಕ್ಕೆ ಸಾಧ್ಯ. ಅವನಿಂದ ಇನ್ನೊಬ್ಬ ದೀನನಿಗೆ ಯಾವತ್ತೂ ಅನ್ಯಾಯ ಆಗುವುದಿಲ್ಲ. ಅವನಿಂದ ಉಪಕೃರಾಗುವವರು ಕಳ್ಳರೇ ಇರಬಹುದು, ಪರಮಪಾಪಿಗಳೇ ಇರಬಹುದು. ಆದರೆ ಆತ ಮಾತ್ರ ಅವರನ್ನು ಮನುಷ್ಯರಂತೆ ಕಾಣುತ್ತಾನೆ. ”.

ಎಲ್ಲರೂ ಪ್ಯಾಪಿಲಾನ್ ಗಳಾಗುವುದಕ್ಕೆ ಸಾಧ್ಯವಿಲ್ಲ. ಎಲ್ಲರೂ ಒಳ್ಳೇ ಬಾಸ್ ಗಳಾಗುವುದಕ್ಕೂ ಸಾಧ್ಯವಿಲ್ಲ. ಕಷ್ಟದ ಮೆಟ್ಟಲೇರಿ ಯಶಸ್ಸಿನ ತಾರಸಿಯಲ್ಲಿ ಕುಳಿತವನಿಗಷ್ಟೇ ಬೇರೊಬ್ಬರ ಕಷ್ಟ ಅರ್ಥ ಆಗುತ್ತದೆ. ಅಂಥವರಷ್ಟೇ ತಮ್ಮ ಮನೆಯಾಳುಗಳನ್ನು, ಡ್ರೈವರುಗಳನ್ನು, ಮನುಷ್ಯರ ಥರ ನೋಡುತ್ತಾರೆ. ಉದಾಹರಣೆಗೆ ರಾಜ್ ಕುಮಾರ್ ಅವರನ್ನು ಜನ ಅಣ್ಣಾವ್ರು ಅಂತ ಕರೆಯುತ್ತಿದ್ದರು. ವಿಷ್ಣುವರ್ಧನ್ ಕೂಡಾ ಅವರ ಅಭಿಮಾನಿಗಳು ಮತ್ತು ಮನೆಕೆಲಸದವರ ಪಾಲಿಗೆ ಅಣ್ಣ ಆಗಿದ್ದರು.ವಿಷ್ಣು ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಂ ಹುಡುಗನನ್ನು ಅವರು ಸ್ವಂತ ಮಗನಂತೆ ಸಾಕಿದ್ದರು.  ಅಣ್ಣಾ ಅನ್ನುವ ಎರಡಕ್ಷರ ಬಹಳ ಅಪ್ಯಾಯಮಾನವಾದದ್ದು. ಹಾಗನ್ನುವ ಮೂಲಕ ನೀವು ಆತನ ಮೇಲೆ ನಿಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ಒಂದು ಜವಾಬ್ದಾರಿಯನ್ನೂ ಹೊರೆಸುತ್ತಿದ್ದೀರಿ. ಅಣ್ಣಾ ಯಾವತ್ತು ತಮ್ಮ ಅಥವಾ ತಂಗಿಯ ಕೈಬಿಡಲಾರ, ಆತನ ನೆರಳಲ್ಲಿದ್ದರೆ ನೀವೊಂದು ಸುರಕ್ಷಿತ ವಲಯದಲ್ಲಿದ್ದೀರಿ ಅನ್ನೋ ಭಾವನೆ ಸದಾಕಾಲ ನಿಮ್ಮೊಳಗೆ ಇರುತ್ತದೆ.

rajkumar, vishnuvardhan

ಹದಿನೈದು ವರ್ಷದ ಹಿಂದೆ ನಮ್ಮ ನಾಯಕ ನಟರನ್ನು ಪ್ರೇಕ್ಷಕರು ಯಾವತ್ತೂ ಏಕವಚನದಲ್ಲಿ ಕರೆಯುತ್ತಿರಲಿಲ್ಲ. ಅಣ್ಣಾವ್ರು ಅದ್ಭುತವಾಗಿ ನಟಿಸಿದ್ದಾರೆ, ಸೆಂಟಿಮೆಂಟು ಸೀನುಗಳಲ್ಲಿ ವಿಷ್ಣು ಸಾರ್ ಅವರನ್ನು ಮೀರಿಸಿದವರಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ ಈಗ ಮೆಚ್ಚುಗೆಯನ್ನು ವ್ಯಕ್ತಪಡಿಸುವುದಕ್ಕೆ ಬಳಸುವ ಭಾಷೆಯ ವರಸೆಯೇ ಬದಲಾಗಿದೆ.  “ನಮ್ ಗುರು ಸಕತ್ತಾಗಿ ಫೈಟ್ ಮಾಡ್ತಾನೆ, ನಮ್ ಬಾಸ್ ಸೂಪರ್ರಾಗಿ ಕುಣೀತಾನೆ....”. ಅದು ಪ್ರೀತಿಯೋ, ಸಲುಗೆಯೋ, ಒಂದೂ ಅರ್ಥವಾಗುವುದಿಲ್ಲ.

 ತಮಾಷೆಯಂದರೆ ಬಾಸ್ ಅನ್ನುವ ಪದಕ್ಕೆ ತೆರೆಯೀಚೆಗೆ ಮತ್ತು ತೆರೆಯಮೇಲೆ ಬೇರೆಬೇರೆ ಅರ್ಥಗಳಿವೆ. ಸಾಮಾನ್ಯವಾಗಿ ನಮ್ಮ ಕಮರ್ಷಿಯಲ್ ಚಿತ್ರಗಳಲ್ಲಿ ಬಾಸ್ ಅನ್ನುವ ಅಭಿದಾನವನ್ನು ಹೊಂದಿದವನು  ಖಳನಾಯಕನಾಗಿರುತ್ತಾನೆ. ಅವನನ್ನು ಸುತ್ತುವರಿದಿರುವ ಕಾಂಜಿಪೀಂಜಿರೌಡಿಗಳು ಆತನನ್ನು ಬಾಸ್ ಅಂತ ಕರೆಯುತ್ತಾರೆ. ರಾಜಕೀಯ ಪುಢಾರಿ, ಭೂಗತಜಗತ್ತಿನ ದೊರೆ, ಇವರೆಲ್ಲರೂ ಬಾಸ್ ಗಳು. ತೆರೆಯೀಚೆಗೆ ಬಂದರೆ ತುತ್ತು ಹಾಕುವ ಯಜಮಾನ ಬಾಸ್ ಆಗುತ್ತಾನೆ. ಗುಂಡು ಪಾರ್ಟಿಗಳಲ್ಲಿ ಪತ್ರಕರ್ತರನ್ನೂ ನಿರ್ಮಾಪಕರು ಬಾಸ್ ಅಂತ ಕರೆಯುವುದುಂಟು.

ನನಗೆ ಗೊತ್ತಿರುವ ಹಾಗೆ ರಾಜ್ ಕುಮಾರ್ ಅವರನ್ನು ಯಾರೂ ಬಾಸ್ ಅಂತ ಕರೆಯುತ್ತಿರಲಿಲ್ಲ. ಅವರೇನಿದ್ದರೂ ಅಣ್ಣಾವ್ರು.. ಆದರೆ ಈಗಿನ ನಾಯಕರು ಯಾರೂ ಅಣ್ಣಂದಿರಲ್ಲ, ಅವರೇನಿದ್ದರೂ ಬಾಸ್ ಗಳು. ಅಭಿಮಾನಿಗಳೂ ಹಾಗೇ ಕರೆಯುತ್ತಾರೆ, ಅವರ ಕೈಕೆಳಗೆ ದುಡಿಯುವವರೂ ಹಾಗೇ ಕರೆಯುತ್ತಾರೆ. ಬಾಸ್ ಅನ್ನುವ ಪದ ದರ್ಪಕ್ಕೆ, ಅಧಿಕಾರಕ್ಕೆ ಸಂಕೇತವಾಗಿ ಕಾಣುತ್ತದೆಯೇ ಹೊರತಾಗಿ ಅಲ್ಲಿ ಸಂಬಂಧಗಳ ಕುರುಹು ಇರುವುದಿಲ್ಲ. ಬೈಯೋನೇ ಬಾಸ್. ಮಾತು ಮಾತಿಗೂ ಗುರ್ ಅನ್ನೋನೇ ಗುರು. ಗುರು ಹೇಗಿರುತ್ತಾನೋ ಶಿಷ್ಯಂದಿರೂ ಹಾಗೇ ಇರುತ್ತಾರೆ. ಅವರ ಆಚಾರವಿಚಾರ, ಸಂಸ್ಕಾರ ಎಲ್ಲವೂ ಬಾಸ್ ನ ಪಡಿಯಚ್ಚು.

bul bul producer kaviraj

ಈಗಿನ ಬಾಸ್ ಗಳು ಹಳೇ ಕಾಲದ ಅಣ್ಣಂದಿರ ಥರ ಕಲಾಸೇವೆ, ನಿರ್ಮಾಪಕರೇ ಅನ್ನದಾತರು ಅನ್ನುವ ಮಾತುಗಳನ್ನಾಡುವುದಿಲ್ಲ. ನಟನೆ ಅನ್ನುವುದು ಅವರ ಪಾಲಿಗೆ ಬಿಸಿನೆಸ್ಸು.ಅದರಲ್ಲಿ ಬಂದ ದುಡ್ಡನ್ನು ಅವರು ಸೈಟು, ಬಂಗಲೆ, ತೋಟದ ಮನೆಯ ಬಂಡವಾಳ ಹೂಡುತ್ತಾರೆ.  ಸಂತೋಷದ ಸಂಗತಿ ಅಂದರೆ ಇಂಥಾ ಬಾಸ್ ಗಳ ಅಬ್ಬರದ ನಡುವೆ ಕೆಲವು ಕವಿಗಳೂ, ಸಂಗೀತ ನಿರ್ದೇಶಕರೂ ಹಣದ ಮುಖ ನೋಡುವಂತಾಗಿದೆ. ಉದಾಹರಣೆಗೆ ಕವಿರಾಜ್.  ತೀರ್ಥಹಳ್ಳಿಯಿಂದ ಬಂದ ಈ ಮೆಲುಮಾತಿನ ಹುಡುಗ ಬುಲ್ ಬುಲ್ ಚಿತ್ರದಲ್ಲಿ ಪಾಲುಗಾರನಾಗಿದ್ದ. ಚಿತ್ರ ಯಶಸ್ಸು ಕಂಡಿದ್ದರಿಂದ ಕವಿರಾಜ್ ಗೆ ಒಟ್ಟಾರೆ ಲಾಭದಲ್ಲಿ ಎರಡುಕೋಟಿ ರುಪಾಯಿ ಸಿಕ್ಕಿತು. ತಕ್ಷಣ ಹಿಂದೆಂದೂ ಕಂಡು ಕೇಳರಿಯದ ಸಂಬಂಧಿಕರೂ, ಗೆಳೆಯರೂ ಹುಟ್ಟಿಕೊಂಡು ಹಗಲುರಾತ್ರಿ ಫೋನ್ ಮಾಡಿ ಹಣಕ್ಕಾಗಿ ಪೀಡಿಸಿದರಂತೆ. ಕವಿರಾಜ್ ಅವರನ್ನೆಲ್ಲಾ ಹೇಗೆ ಸಾಗಹಾಕಿದರೋ ಗೊತ್ತಿಲ್ಲ, ಆದರೆ ಬೆಂಗಳೂರಲ್ಲೊಂದು ಸೈಟು ತೆಗೆದುಕೊಂಡಿದ್ದೇನೆ ಅಂದರು. ಕವಿಗಳೂ ಕೂಡಾ ವ್ಯವಹಾರಶೀಲರಾಗುವ ವರ್ತಮಾನವನ್ನು ಕಂಡು ಅಚ್ಚರಿ ಮತ್ತು ಸಂತೋಷವಾಯಿತು. ಸರಸ್ವತಿ ಮತ್ತು ಲಕ್ಷ್ಮಿ ಒಂದು ಕಡೆ ಇರುವುದಕ್ಕೆ ಸಾಧ್ಯವಿಲ್ಲ ಅನ್ನುವುದು ವಾಡಿಕೆಯ ಮಾತು. ಕವಿರಾಜ್ ಅದನ್ನು ಸುಳ್ಳು ಮಾಡಿದ್ದಾರೆ. ಆದರೆ ಲಕ್ಷ್ಮಿಯಿಟ್ಟ ಹಾವಳಿಗೆ ಸರಸ್ವತಿ ನಾಪತ್ತೆಯಾಗದೇ ಇದ್ದರೆ ಸಾಕು.

Also See

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery