Print 

User Rating: 0 / 5

Star inactiveStar inactiveStar inactiveStar inactiveStar inactive
 
100 days shield image
shabdavedi 100 days

‘ನಮ್ಮ ಚಿತ್ರ ಇದೇ ಶುಕ್ರವಾರಕ್ಕೆ ಶತದಿನೋತ್ಸವ ಆಚರಿಸುತ್ತಿದೆ. ಈ ಪ್ರಯುಕ್ತ ಮುಂದಿನ ಭಾನುವಾರ ಒಂದು ಸಮಾರಂಭ ಇಟ್ಟುಕೊಂಡಿದ್ದೇವೆ. ತಾವು ಬಂದು ನಮ್ಮ ಸಂತೋಷದಲ್ಲಿ ಪಾಲ್ಗೊಳ್ಳಬೇಕು...’

ಇಂಥಾದ್ದೊಂದು ಆಮಂತ್ರಣ ಪತ್ರ ನೋಡಿ ಯಾವ ಕಾಲವಾಯಿತೋ ಏನೋ.ಅಶೋಕ ಹೋಟೆಲಲ್ಲೋ, ಚೌಡಯ್ಯ ಸಭಾಂಗಣದಲ್ಲೋ ಈ ಶತದಿನೋತ್ಸವ ಸಮಾರಂಭ ನಡೆಯುತ್ತಿತ್ತು.ಚಿತ್ರದ ನಾಯಕನಿಂದ ಹಿಡಿದು ವಾಹನ ಚಾಲಕರ ತನಕ ಪ್ರತಿಯೊಬ್ಬರೂ ವೇದಿಕೆ ಏರಿ ಗಣ್ಯ ಅತಿಥಿಗಳಿಂದ ಫಲಕ ಸ್ವೀಕರಿಸಿ, ಅವರ ಪಕ್ಕದಲ್ಲಿ ನಿಂತು ಫೋಟೋಗೆ ಫೋಸ್ ಕೊಟ್ಟು ಪುಳಕಿತರಾಗುತ್ತಿದ್ದರು. ಚಿತ್ರದ ಯಶಸ್ಸಿಗೆ ದುಡಿದ ಪ್ರತಿಯೊಬ್ಬರನ್ನೂ ನೆನೆಯಲಾಗುತ್ತಿತ್ತು. ಕೊನೆಗೆ ಭರ್ಜರಿ ಭೋಜನದೊಂದಿಗೆ ಸಮಾರಂಭ ಮುಕ್ತಾಯವಾಗುತ್ತಿತ್ತು.

100 days mementos of simhadri simha, cheluvina chithara

ಅಲ್ಲಿ ನೀಡಿದ ಫಲಕ ಬೆಳ್ಳಿಯದ್ದಿರಬಹುದು, ಗಂಧದೆಣ್ಣೆ ಲೇಪಿತ ಮರದ್ದೇ ಇರಬಹುದು. ಅದನ್ನು ಪಡೆದುಕೊಂಡವರಿಗೆ ಅದೊಂದು ಬೆಲೆಕಟ್ಟಲಾಗದ ಉಡುಗೊರೆ. ಆ ಫಲಕವನ್ನು ಅವರು ತಮ್ಮ ಮನೆಯ ಶೋಕೇಸಲ್ಲಿ ಎದ್ದುಕಾಣುವಂತೆ ಜೋಡಿಸಿಡುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಅದನ್ನು ತೋರಿಸಿ ಸಂಭ್ರಮಿಸುತ್ತಾರೆ, ಆ ಚಿತ್ರದ ಶೂಟಿಂಗಿನಲ್ಲಾದ ರಸಘಳಿಗೆಗಳನ್ನು ವಿವರಿಸುತ್ತಾರೆ.  ಇಂದಿಗೂನೀವು ಹಿರಿಯ ಕಲಾವಿದರು ಅಥವಾ ತಂತ್ರಜ್ಞರ ಮನೆಗೆ ಹೋದರೆ ಶೋಕೇಸಲ್ಲಿ ಅವರಿಗೆ ಸಿಕ್ಕಿದ ಹತ್ತಾರು ಶೀಲ್ಡುಗಳನ್ನುನೋಡುವುದಕ್ಕೆ ಸಾಧ್ಯ. ಇತ್ತೀಚೆಗೆ ಬಂದ ಕಲಾವಿದರ ಮನೆಯ ಶೋಕೇಸುಗಳಲ್ಲಿ ಅಂಥಾ ಯಾವುದೇ ಫಲಕಗಳಿರುವುದಿಲ್ಲ, ಬದಲಾಗಿ ಅವರ ಅಭಿಮಾನಿಗಳೇ ನೀಡಿದ ಶೀಲ್ಡುಗಳಿರುತ್ತವೆ. ಹೀಗೆ ಒಂದು ಸಂಭ್ರಮ ಅಸುನೀಗಿದ್ದಕ್ಕೆ ಕಾರಣವಾದರೂ ಏನು?

lokesh, udaya marakini during mungarina minchu 100 days celebration

ಮೊದಲನೆಯದಾಗಿ ಈಗ ಕನ್ನಡ ಚಿತ್ರಗಳು ಶತದಿನ ಕಾಣುವುದೇ ಒಂದು ಅಪರೂಪದ ಸಂಗತಿಯಾಗಿದೆ. ಶತದಿನೋತ್ಸವ ಆಚರಿಸಿದ ಕೊನೆಯ ಕನ್ನಡ ಚಿತ್ರದ ಹೆಸರು ಹೇಳಿ ಎಂದು ಯಾವುದಾದರೂ ಚಾನೆಲ್ಲು ಸ್ಪರ್ಧೆಯನ್ನಿಟ್ಟರೆ ಸರಿ ಉತ್ತರ ಹೇಳುವವರು ಯಾರೂ ಇರಲಿಕ್ಕಿಲ್ಲ. ಅಪ್ಪಿತಪ್ಪಿ ಒಂದು ಚಿತ್ರ ನೂರು ದಿನಗಳ ಪ್ರದರ್ಶನ ಕಂಡರೂ ಶತದಿನೋತ್ಸವ ಆಚರಿಸುವುದಕ್ಕೆ ನಿರ್ಮಾಪಕನಿಗೆ ಆಸಕ್ತಿಯಿರುವುದಿಲ್ಲ. ಯಾಕೆ ಸುಮ್ಮನೆ ವೃಥಾ ಖರ್ಚು, ಲಕ್ಷ ರುಪಾಯಿ ಖರ್ಚು ಮಾಡಿ ಕಾರ್ಯಕ್ರಮ ನಡೆಸಿದರೆ ನಮಗೇನು ಲಾಭ ಅನ್ನುವ ಧೋರಣೆ.ಅವರಿಗೆ ನಾನು ಹೇಳುವುದು ಇಷ್ಟೆಃ ಇಲ್ಲಿರುವುದು ಲಾಭನಷ್ಟದ ಪ್ರಶ್ನೆ ಅಲ್ಲ, ಒಂದು ಯಶಸ್ಸನ್ನು ಇಡೀ ತಂಡದ ಜೊತೆ ಹಂಚಿಕೊಂಡು ಸಂಭ್ರಮಿಸುವುದರಲ್ಲೂ ಒಂದು ಸುಖ ಇದೆ. ಆ ಮೂಲಕ ನಾವೆಲ್ಲರೂ ಈ ಯಶಸ್ಸಲ್ಲಿ ಪಾಲುದಾರರು ಅನ್ನುವ ಭಾವನೆ ಚಿತ್ರತಂಡದಲ್ಲಿ ಮೂಡುತ್ತದೆ.

ಹಾಗಿದ್ದೂ ಭಾವನೆಗಳ ಬಗ್ಗೆ ಮಾತಾಡುವ ಸಮಯ ಅಲ್ಲ ಇದು.ಸದ್ಭಾವನೆಯ ಜಾಗವನ್ನು ಸಂಭಾವನೆ ಆಕ್ರಮಿಸಿದೆ.ನಿರ್ಮಾಪಕ, ನಿರ್ದೇಶಕ, ನಾಯಕ, ಎಲ್ಲರೂ ಇಕಾನಮಿಕ್ಸ್ ನ ಹಿಂದೆ ಬಿದ್ದಿದ್ದಾರೆ. ಚಿತ್ರ ಚೆನ್ನಾಗಿದೆ ಅನ್ನುವ ಅಭಿಪ್ರಾಯಕ್ಕಿಂತ ಕಲೆಕ್ಷನ್ ಚೆನ್ನಾಗಿದೆ ಅನ್ನುವ ಮಾತೇ ಎಲ್ಲರ ಕಿವಿಗಳಿಗೂ ಹಿತವಾಗಿ ಕೇಳಿಸುತ್ತದೆ. ಈ ಹೀರೋ ಈ ಕಥೆಗೆ ಹೊಂದಿಕೊಳ್ಳುತ್ತಾನೆ ಅನ್ನುವುದಕ್ಕಿಂತ, ಈ ಹೀರೋನನ್ನು ಹಾಕಿಕೊಂಡರೆ ಬೆಂಗಳೂರಲ್ಲಿ ಎಷ್ಟು ಕಲೆಕ್ಷನ್ ಆಗುತ್ತದೆ, ಮೈಸೂರು ಹಾಗೂ ಉತ್ತರ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗುತ್ತದೆ ಅನ್ನುವ ಲೆಕ್ಕಾಚಾರವೇ ನಿರ್ಮಾಪಕನಿಗೆ ಮುಖ್ಯ ಆಗಿದೆ. ಒಬ್ಬ ನಟ, ಒಳ್ಳೆಯ ನಟನೋ ಅಥವಾ ಕೆಟ್ಟನಟನೋ ಅನ್ನುವುದು ಆತನಿಗೆ ನೀಡಲಾಗುವ ಸಂಭಾವನೆ ಮೇಲೆ ನಿರ್ಧಾರವಾಗುತ್ತದೆ.

ಹತ್ತು ವರ್ಷದ ಹಿಂದೆ ಬೆಂಗಳೂರಿನ ರಸ್ತೆಬದಿಯ ಗೋಡೆಗಳಲ್ಲಿ ಅಮೋಘ ನೂರನೇ ದಿನ ಅನ್ನುವ ಪೋಸ್ಟರ್ ರಾರಾಜಿಸುತ್ತಿತ್ತು. ಐವತ್ತನೇ ದಿನದತ್ತ ಅನ್ನುವುದಂತೂ ಮಾಮೂಲು. ಈಗ ಭರ್ಜರಿ ಎರಡನೇ ವಾರ, ಅಮೋಘ ಇಪ್ಪತ್ತೈದನೇ ದಿನ ಅನ್ನುವ ಪೋಸ್ಟರುಗಳು ಕಾಣಿಸುತ್ತಿವೆ. ಅದರರ್ಥ ಚಿತ್ರ ಯಶಸ್ವಿಯಾಗಲಿಲ್ಲ ಅಂತಾನಾ?

r chandru, upendra, gurukiran

“ನಮ್ಮ ಪಿಕ್ಟರು ಹೊಸ ರೆಕಾರ್ಡ್ ಮಾಡಿದೆ. ಮೊದಲ ದಿನದ ಕಲೆಕ್ಷನ್ನೇ ಮೂರೂವರೆ ಕೋಟಿ. ಎರಡನೇ ದಿನ ಎರಡೂವರೆ, ಭಾನುವಾರ ಮತ್ತೆ ಮೂರೂವರೆ ಕೋಟಿ...”

ಹೀಗೆ ನಿರ್ದೇಶಕರೊಬ್ಬರು ಚಾನೆಲ್ ಒಂದರಲ್ಲಿ ತನ್ನ ಚಿತ್ರದ ಗೆಲುವಿನ ಅಂಕಿಅಂಶಗಳನ್ನು ನೀಡುತ್ತಿದ್ದುದನ್ನು ಮೊನ್ನೆ ನೋಡಿದೆ. ಚಾನೆಲ್ ಆಂಕರ್ ಬೆಕ್ಕಸ ಬೆರಗಾದವರಂತೆ ನಟಿಸುತ್ತಾ “ಐಸೀ, ಇದು ಹೇಗೆ ಸಾಧ್ಯ ಆಯಿತು”ಎಂಬ ಪ್ರಶ್ನೆ ಕೇಳಿದರು.

“ಯಾಕೆಂದರೆ ನಮ್ ಪಿಕ್ಚರು ರಿಲೀಸ್ ಆದ ದಿನ ಪರಭಾಷಾ ಚಿತ್ರಗಳು ಯಾವುದೂ ರಿಲೀಸ್ ಆಗಿರಲಿಲ್ಲ. ಎರಡನೆಯದಾಗಿ ಚಿತ್ರಕ್ಕೆ ನೆಗೆಟಿವ್ ರಿವ್ಯೂ ಬರಲಿಲ್ಲ, ಅದರ ಜೊತೆಗೆ ಪ್ರಚಾರ ಚೆನ್ನಾಗಿ ಮಾಡಿದ್ವಿ, ಎಲ್ಲಾ ಕಡೆ ಜಾಹಿರಾತು ಕೊಟ್ಟಿದ್ವಿ....”

rajkumar during eradu kanasu 100 days function

ನಿರ್ದೇಶಕರು ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರು. ಅವರ ಮುಗ್ಧತೆ ಮತ್ತು ಪ್ರಾಮಾಣಿಕತೆ ನನಗಿಷ್ಟ ಆಯಿತು. ಯಾಕೆಂದರೆ ಎಲ್ಲೂ ಅವರು ತಮ್ಮ ಚಿತ್ರ ಚೆನ್ನಾಗಿದೆ ಮತ್ತು ಆ ಕಾರಣಕ್ಕೆ ಕಲೆಕ್ಷನ್ ಚೆನ್ನಾಗಿದೆ ಅಂತ ಹೇಳಲೇ ಇಲ್ಲ!ಪರಭಾಷಾ ಚಿತ್ರದ ಪೈಪೋಟಿ ಇಲ್ಲದೇ ಇದ್ದರೆ ಮಾತ್ರ ಕನ್ನಡ ಚಿತ್ರ ಗೆಲ್ಲುತ್ತದೆ ಅನ್ನುವ ಇನ್ನೊಂದು ಸತ್ಯವನ್ನೂ ಹೇಳಿದರು. ಜೊತೆಗೆ ಈಗಿನ ಕಾಲದಲ್ಲಿ ಚಿತ್ರ ಗೆಲ್ಲುವುದಕ್ಕೆ ಕಂಟೆಂಟಿಗಿಂತ ಮುಖ್ಯವಾಗಿ  ಪ್ರಚಾರವೇ ಕಾರಣವಾಗುತ್ತದೆ ಅನ್ನುವ ಮತ್ತೊಂದು ರಹಸ್ಯವನ್ನೂ ಬಯಲು ಮಾಡಿದರು.

ಪತ್ರಿಕಾಗೋಷ್ಠಿಗಳಲ್ಲಿ ನಿರ್ಮಾಪಕ ಮುಖದಲ್ಲಿ ನಗು ತುಳುಕಿಸುತ್ತಾ ಹೇಳುತ್ತಾನೆಃ  “ಎರಡನೇ ವಾರಕ್ಕೆ ನಾವು ಸೇಫ್ ಆಗಿಬಿಟ್ವಿ. ಚಿತ್ರಕ್ಕೆ ಹಾಕಿದ ಬಜೆಟ್ ವಾಪಸ್ ಬಂದಿದೆ. ಟೀವಿ ರೈಟ್ಸ್ ಕೂಡಾ ಒಳ್ಳೇ ರೇಟಿಗೆ ಸೇಲ್ ಆಗಿರುವುದರಿಂದ ನಮಗ್ಯಾವ ಚಿಂತೆಯೂ ಇಲ್ಲ. ಇನ್ನು ಬರುವುದೆಲ್ಲಾ ಬೋನಸ್....”

ನಿಮಗೆ ನೆನಪಿರಬಹುದು, ‘ಮುಂಗಾರು ಮಳೆ’  ವರ್ಷಪೂರ್ತಿ ಓಡಿದರೂ ಮಾಡಿದ್ದು ಹದಿನಾರು ಕೋಟಿ ರುಪಾಯಿ ಬಿಸಿನೆಸ್ಸು (ಲಾಭ ಅಲ್ಲ ನೆನಪಿರಲಿ). ಆದರೆ ಈಗ ಬರುವ ಚಿತ್ರಗಳು ಒಂದೇ ವಾರದಲ್ಲಿ ಎಂಟು ಕೋಟಿ ವ್ಯಾಪಾರ ಮಾಡುತ್ತಿವೆ. ಇದು ನಿಜಾನಾ ಸುಳ್ಳಾ?

rg vijayasarathi

ಇಂಥಾ ಸಂದರ್ಭದಲ್ಲಿ ನನಗೆಪತ್ರಕತ್ರ ವಿಜಯಸಾರಥಿ ನೆನಪಾಗುತ್ತಾರೆ. ಸುಮಾರು ವರ್ಷದ ಹಿಂದೆ ತೀರಿಕೊಂಡ ವಿಜಯಸಾರಥಿ ಕನ್ನಡ ಚಿತ್ರರಂಗದ ಮಟ್ಟಿಗೆ ಸ್ಕೋರರ್ ಥರ ಇದ್ದರು. ಪತ್ರಿಕಾಗೋಷ್ಠಿಯಲ್ಲಿ ಯಾವ ನಿರ್ಮಾಪಕರೂ ಸುಳ್ಳು ಲೆಕ್ಕಾಚಾರ ಕೊಡುವ ಹಾಗೇ ಇರಲಿಲ್ಲ. ಅವರು ತಪ್ಪು ಹೇಳಿದಾಕ್ಷಣ ವಿಜಯಸಾರಥಿ ಜೇಬಿಂದ ಚೀಟಿ ಹೊರಬರುತ್ತಿತ್ತು. ಅದೇ ಡಿಸಿಆರ್ (daily collection report). ಚಿತ್ರವೊಂದರ ಪ್ರತಿದಿನದ ಗಳಿಕೆಯನ್ನು ಡೀಸಿಆರ್ ಎಂದು ಕರೆಯುತ್ತಾರೆ. ಇದನ್ನು ಆಯಾ ಚಿತ್ರಮಂದಿರದ ಮಾಲಿಕರು ಸದ್ರಿ ಚಿತ್ರದ ನಿರ್ಮಾಪಕರಿಗೆ ಕೊಡಬೇಕಾಗುತ್ತದೆ. ಅದ್ಯಾವ ಮಾಯಕದಲ್ಲೋ ವಿಜಯಸಾರಥಿ ಅದನ್ನು ಸಂಪಾದಿಸುತ್ತಿದ್ದರು.ಯಾವುದೋ ಒಂದು ಸಿನಿಮಾ ಮೂರು ಕೋಟಿ ಲಾಭ ಮಾಡಿದೆಯಂತೆ ಅಂತ ನಾವು ಹೇಳಿದಾಕ್ಷಣ ಸಾರಥಿ “ನೋ ಚಾನ್ಸ್ ಆ ಚಿತ್ರ  ಬರೀ ಒಂದೂವರೆ ಕೋಟಿ ಲಾಭ ಮಾಡಿದೆ”ಎನ್ನುತ್ತಾ ಬಂಡವಾಳ ಬಯಲು ಮಾಡುತ್ತಿದ್ದರು.

ವಿಜಯಸಾರಥಿ ಜೊತೆಗೆ ಯಾರೂ ಅಂದಾಜು ಲೆಕ್ಕಾಚಾರದ ಮೇಲೆ ಮಾತಾಡುವ ಹಾಗೇ ಇರಲಿಲ್ಲ. ಯಾವುದೋ ಒಂದು ಪಿಕ್ಚರ್ ತೋಪು ಎಂದು ನೀವೇನಾದರೂ ಅಂದುಬಿಟ್ಟರೆ ಅವರು ಅಂಕಿಅಂಶ ಸಮೇತ ಅದು ಹಿಟ್ ಎಂದು ಸಾಬೀತು ಮಾಡುತ್ತಿದ್ದರು. ಇಂಗ್ಲಿಷ್ ಭಾಷೆ ಮೇಲೆ ಒಳ್ಲೆಯ ಪ್ರಭುತ್ವ ಹೊಂದಿದ್ದರಿಂದ ಪರರಾಜ್ಯಗಳಿಂದ ಯಾವ ಕಲಾವಿದರೂ ಬಂದರೂ ವಿಜಯಸಾರಥಿ ನಮ್ಮೆಲ್ಲರಿಗಿಂತ ಜಾಸ್ತಿ ಮಿಂಚುತ್ತಿದ್ದರು. ಅವರ ಹಾಸ್ಯಪ್ರಜ್ಞೆಗೆ ವಿಷ್ಣುವರ್ಧನ್ ಅವರೇ ಬೆರಗಾಗುತ್ತಿದ್ದರು.ನಮಗಿಂತ ಸೀನಿಯರ್ ಆಗಿದ್ದರೂವಿಜಿ ಜೊತೆ ಜಗಳ ಆಡಬಹುದಾಗಿತ್ತು, ಮಾರನೇ ದಿನ ಅವರು ಆ ಜಗಳವನ್ನು ಮರೆತು ಹೆಗಲ ಮೇಲೆ ಕೈಹಾಕಿ ಮಾತಾಡಿಸುತ್ತಿದ್ದರು.ಅದರಲ್ಲೂ ಚಲನಚಿತ್ರ ಪತ್ರಿಕೋದ್ಯಮ ಮತ್ತು ಚಿತ್ರೋದ್ಯಮದ ಇತಿಹಾಸದಲ್ಲಿ ಎ.ಎಸ್. ಮೂರ್ತಿ ಮತ್ತು ವಿಜಯಸಾರಥಿ ಅವರಿಬ್ಬರ ನಡುವಿನ ಜಗಳಕ್ಕೆ ವಿಶೇಷ ಸ್ಥಾನಮಾನವಿದೆ. ಪತ್ರಿಕಾಗೋಷ್ಠಿಯಲ್ಲಿ ಸಾರಥಿ ಏನೇ ಪ್ರಶ್ನೆ ಕೇಳಿದರೂ ಮೂರ್ತಿ ಕಾಲೆಳೆಯುತ್ತಿದ್ದರು, ಕೆಲವೊಮ್ಮೆ ಅದು ವಿಕೋಪಕ್ಕೆ ಹೋಗುತ್ತಿತ್ತು. ಸಾರಥಿ ಅವರುತಮಗೆ  ಪಾತ್ರ ಕೊಟ್ಟ ನಿರ್ಮಾಪಕರಿಗೆ ಅವರ ಪ್ರಶ್ನೆಯನ್ನೇ ಕೇಳುವುದಿಲ್ಲ ಅನ್ನುವುದು ಮೂರ್ತಿ ಅವರ ಆರೋಪವಾಗಿತ್ತು. ಸಾರಥಿ ಅವರಲ್ಲಿದ್ದ ಎರಡು ಬಲಹೀನತೆಗಳಂದರೆ ನಟಿಸುವ ಹುಚ್ಚು ಮತ್ತು ತಿನ್ನುವ ಚಟ. ನೂರಕ್ಕೂ ಹೆಚ್ಚು ಕೇಜಿ ತೂಗುತ್ತಿದ್ದ ಆ ಜೀವದ ಚಟುವಟಿಕೆ ಮಾತ್ರ ಚಕಿತಗೊಳಿಸುವಂಥಾದ್ದು.ಮಾತಿಗೆ ನಿಂತರೆ ಲಾಯರ್,  ಕುಣಿತಕ್ಕೆ ನಿಂತರೆ ಥೇಟು ಶಮ್ಮಿಕಪೂರ್.

ಆದರೆ ಅವರಿಗೆವಿಪರೀತ ಮರೆವು. ಅದರಿಂದಾಗಿ ಅವರಿಗೆ ಅರಿವಿಲ್ಲದಂತೆಯೇ ಕೆಲವು ಹಾಸ್ಯಪ್ರಸಂಗಗಳು ಸಂಭವಿಸುತ್ತಿದ್ದವು. ಅದಕ್ಕೊಂದು ಉದಾಹರಣೆ ಇಲ್ಲಿದೆಃ ಅವರು ಕಾರು ಖರೀದಿಸಿದ ಹೊಸದರಲ್ಲಿ ಕೆಲವು ಪತ್ರಕರ್ತ ಮಿತ್ರರನ್ನು ಕಾರಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ಕರಕೊಂಡು ಹೋದರು.ದಾರಿಯುದ್ದಕ್ಕೂ ಹಿಂದೆ ತಿರುಗಿ ಮಾತಾಡುತ್ತಾ ಕಾರು ಚಲಾಯಿಸುತ್ತಿದ್ದರು.ಹಿಂದಿನ ಸೀಟಲ್ಲಿದ್ದವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು.  ಕೊನೆಗೂ ಕಾರು ಅವರ ಮನೆ ತಲುಪಿತು, ಮನೆ ಕಂಪೌಂಡಿಗೆ ಡಿಕ್ಕಿ ಹೊಡೆಯುವ ಮೂಲಕ. ಹಾಂ. ನಮ್ಮನೆ ಬಂತು ಅಂದರಂತೆ ಸಾರಥಿ.

ಈಗ ವಿಜಯಸಾರಥಿ ಇಲ್ಲ, ಹಾಗಾಗಿ ನಿರ್ಮಾಪಕರು ಮತ್ತು ನಿರ್ದೇಶಕರು ತಮಗಿಷ್ಟ ಬಂದಂತೆ ಕಲೆಕ್ಷನ್ ರಿಪೋರ್ಟು ನೀಡುತ್ತಿದ್ದಾರೆ. ಜನಕನ ಆಸ್ಥಾನದಲ್ಲಿ ಶ್ರೀರಾಮ ಶಿವಧನುಸ್ಸನ್ನು ಮುರಿದ ಹಾಗೆ, ನಮ್ಮ ಸಿನಿಮಾಗಳು ದಾಖಲೆಗಳನ್ನು ಮುರಿಯುವ ಸದ್ದು ಕೇಳಿಸುತ್ತಿವೆ.  ಹಳೇ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆಯುವುದಕ್ಕೆ ಪುರುಸೊತ್ತಿಲ್ಲ. ಯಾಕೆಂದರೆ ಇನ್ಯಾವುದೋ ಚಿತ್ರ ಒಂದೇ ದಿನದಲ್ಲಿ ಅದೆಷ್ಟೋ ಕೋಟಿ ಸಂಪಾದನೆ ಇನ್ನೊಂದು ದಾಖಲೆ ಮಾಡಿರುತ್ತದೆ. ಸದ್ಯಕ್ಕೆ ‘ಬ್ರಹ್ಮ’ಚಿತ್ರ ಮೂರು ದಿನಗಳಲ್ಲಿ ಆರು ಕೋಟಿ ಗಳಿಸಿ ದಾಖಲೆ ಮಾಡಿದ್ದಾಗಿದೆ. ಆಮೇಲೇನಾಯಿತೋ ಗೊತ್ತಿಲ್ಲ. ಕೆಲವೇ ದಿನಗಳ ಹಿಂದೆ ‘ನಿನ್ನಿಂದಲೇ’ಚಿತ್ರದ ಟೀವಿ ರೈಟ್ಸ್ ಆರೂವರೆ ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿದೆ ಅಂತ ಸುದ್ದಿಯಾಗಿತ್ತು. ಆದರೆ ಅದು ಆರೂವರೆ ಅಲ್ಲ, ಬರೀ ಮೂರೂವರೆ ಅಂತ ನಿರ್ದೇಶಕ ಬಿ.ಸುರೇಶ್ ಸಮಾರಂಭವೊಂದರಲ್ಲಿ ಕರೆಕ್ಷನ್ ಹಾಕಿದ್ದರು.

darshan

ದಾಖಲೆ ಮುರಿತ ಚಿತ್ರದ ಗಳಿಕೆಗಷ್ಟೇ ಸೀಮಿತವಾಗಬೇಕು ಅಂದೇನಿಲ್ಲ. ಯಶ್ ನಾಯಕನಾಗಿದ್ದ ‘ಗೂಗ್ಲಿ’ಚಿತ್ರ ರಾಜ್ಯಾದ್ಯಂತ 125 ಥಿಯೇಟರುಗಳಲ್ಲಿ ಬಿಡುಗಡೆಯಾಗಿತ್ತು. ಯಶ್ ವೃತ್ತಿಜೀವನದಲ್ಲಿ ಅದೊಂದು ದಾಖಲೆ ಎಂದರು ನಿರ್ಮಾಪಕರು. ದರ್ಶನ್ ನಾಯಕನಾಗಿದ್ದ ‘ಬುಲ್ ಬುಲ್’ಚಿತ್ರ 99 ಪರದೆಗಳಲ್ಲಿ (ಥಿಯೇಟರ್ ನಲ್ಲಲ್ಲ) 50 ದಿನ ಪೂರೈಸಿದ್ದೊಂದು ದಾಖಲೆ. ಆ ಮೂಲಕ ಅದು ದರ್ಶನ್ ಅವರದ್ದೇ ‘ಸಾರಥಿ’ಚಿತ್ರದ ದಾಖಲೆಯನ್ನು ಮುರಿದಿತ್ತು. ಸುದೀಪ್ ನಾಯಕತ್ವದ ‘ಬಚ್ಚನ್’190 ಚಿತ್ರಮಂದಿರಗಳಲ್ಲಿ ತೆರೆಕಾಣುವ ಮೂಲಕ ಹೊಸ ದಾಖಲೆ ಸ್ಥಾಪಿಸಿತ್ತು. ಅದನ್ನು ಮುರಿದದ್ದು ಶಿವರಾಜ್ ಕುಮಾರ್ ಅವರ ‘ಶಿವ’ಚಿತ್ರ. ಅದು 230 ಚಿತ್ರಮಂದಿರಗಳಲ್ಲಿ ರಿಲೀಸ್ ಆಯಿತು.

ನಾನ್ ಸ್ಟಾರ್ ಕೆಟಗರಿ ಅಂತ ಇನ್ನೊಂದು ವಿಭಾಗವಿದೆ. ಅಲ್ಲಿ ದಾಖಲೆ ಸ್ಥಾಪಿಸಿದವರು ಕೋಮಲ್ . ಅವರ ‘ಗೋವಿಂದಾಯ ನಮಃ’6 ಕೋಟಿ ಗಳಿಸಿದ್ದು ದಾಖಲೆ. ಮಾಸ್ಟರ್ ಕಿಷನ್ ನಟಿಸಿದ ‘ಟೀನೇಜ್’ಚಿತ್ರ ಯಾವ ದಾಖಲೆಯನ್ನೂ ಮಾಡಲಿಲ್ವಲ್ಲ ಎಂದು ಪತ್ರಕರ್ತರು ಕೊರಗಿದಾಗ ನಿರ್ಮಾಪಕ ಶ್ರೀಕಾಂತ್ ಹೇಳಿದರಂತೆ. ‘ನೀರಿನಡಿಯಲ್ಲಿ ನಾವೊಂದು ಹಾಡು ಚಿತ್ರೀಕರಿಸಿದ್ದೇವೆ. ಅದು ಕನ್ನಡದ ಮಟ್ಟಿಗೆ ದಾಖಲೆ’.

ಈ ದಾಖಲೆ ವೀರರನ್ನು ನೋಡಿದಾಗ ನನಗೆ ಸುನಿಲ್ ಗಾವಸ್ಕರ್ ನೆನಪಾಗುತ್ತಾರೆ, ಅವರು ಇಡೀ ದಿನ ಆಡಿ 36 ರನ್ ಹೊಡೆದು ದಾಖಲೆ ಸೃಷ್ಟಿಸಿದ್ದರು. ಅದೇ ರೀತಿ ಸಿನಿಮಾವೊಂದು ಇನ್ನೂರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದಾಗ ಗಳಿಕೆಯಲ್ಲಿ ಹೆಚ್ಚುವರಿ ಕಾಣಿಸುವುದು ಸಹಜ. ಮುಂದೇನಾಯಿತು ಅನ್ನೋದನ್ನು ಯಾರೂ ಹೇಳುವುದಿಲ್ಲ. ನಾವು ಕೇಳುವ ಹೊತ್ತಿಗೆ ಅದು ಟೀವಿಯಲ್ಲಿ ಪ್ರತ್ಯಕ್ಷ ಆಗಿರುತ್ತದೆ.

ಹೀಗೆ ನಿಜವಾದ ಗೆಲುವಿಗೆ ಯೋಗ್ಯವಲ್ಲದ ಕೆಲವು ಚಿತ್ರಗಳು ಕೂಡಾ ಇಂಥಾ ಶಾರ್ಟ್ ಕಟ್ ಗಳ ಮೂಲಕ ಹಿಟ್ ಆಗುತ್ತವೆ. ಇಂಥಾ ಕೆಟ್ಟ ಚಿತ್ರ ಹೇಗೆ ಹಿಟ್ ಆಯಿತು ಅಂತ ಲೆಕ್ಕಾಚಾರ ಅರಿಯದ ಮುಗ್ಧ ಪ್ರೇಕ್ಷಕ ತಲೆಯನ್ನು ಪರಪರ ಅಂತ ಕೆರೆದುಕೊಂಡು ಸುಮ್ಮನಾಗುತ್ತಾನೆ.

Also See

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.