` Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
udaya marakini, ravi belagere image
udaya marakini, ravi belagere

ನಾನು ಮತ್ತು ರವಿಬೆಳಗರೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿ  ಕೆಲಸ ಮಾಡುತ್ತಿದ್ದಾಗ ಅಲ್ಲೊಬ್ಬ ಹಿರಿಯ ಪತ್ರಕರ್ತರಿದ್ದರು. ಹಲವಾರು ವರ್ಷಗಳಿಂದ ಡೆಸ್ಕ್ ನಲ್ಲಿ ಸಬ್ ಎಡಿಟರ್ ಆಗಿ ಕೆಲಸ ಮಾಡಿ, ಸೀನಿಯರ್ ಸಬ್ ಎಡಿಟರ್ ಆಗಿ ಪ್ರಮೋಷನ್ ಪಡೆದುಕೊಂಡಿದ್ದರು. ಅವರು ಬರೆದ ಯಾವ ಕಾಪಿಯೂ ನೇರವಾಗಿ ಪ್ರಿಂಟಿಗೆ ಹೋಗುವಂತಿರಲಿಲ್ಲ, ನಾಲ್ಕೈದು ಉಪಸಂಪಾದಕರು ಕೈ ಆಡಿಸಿದ ನಂತರವೇ ಅದು ಪೇಜಿಗೆ ಹೋಗುವುದಕ್ಕೆ ಅರ್ಹವಾಗುತ್ತಿತ್ತು. ಕೆಲವೊಮ್ಮೆ ನೇರವಾಗಿ ಕಸದಬುಟ್ಟಿ ಸೇರಿ ದೈವಾಧೀನವಾಗುತ್ತಿತ್ತು. ಹಾಗಿದ್ದರೂ ಅವರು ಹಲವಾರು ವರ್ಷ ಅದೇ ಸಂಸ್ಥೆಯಲ್ಲಿ ಬಾಳಿಕೆ ಬಂದಿದ್ದರು ಹಾಗೂ ಕಚೇರಿಯಲ್ಲಿ ಸದಾ ಬಿಜಿಯಾಗಿರುತ್ತಿದ್ದರು. ಯಾಕೆಂದರೆ ಅವರು ನಮ್ಮ ಕಚೇರಿಯ ಅಧಿಕೃತ ಜ್ಯೋತಿಷಿಯಾಗಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುವವರ ಸ್ಥಿತಿ ಸದಾ ಕತ್ತಿ ಮೇಲಿನ ನಡಿಗೆಯಾಗಿದ್ದರಿಂದ ಯಾರು ಯಾವಾಗ ಬೇಕಾದರೂ ಕೆಲಸ ಕಳಕೊಳ್ಳಬಹುದಾದ ಅವಕಾಶ ಅಲ್ಲಿತ್ತು, ಇಂದು ಬೆಂಗಳೂರಲ್ಲಿದ್ದವರು ನಾಳೆ ಹುಬ್ಬಳ್ಳಿಗೆ ವರ್ಗವಾಗುತ್ತಿದ್ದರು, ಇವತ್ತು ಸಂಪಾದಕೀಯ ವಿಭಾಗದಲ್ಲಿದ್ದವರು ನಾಳೆ ಅಕೌಂಟ್ಸ್ ವಿಭಾಗದಲ್ಲಿರುತ್ತಿದ್ದರು. ಹಾಗಾಗಿ ಎಲ್ಲರಿಗೂ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುವ ಕುತೂಹಲ. ಈ ಕಾರಣದಿಂದಾಗಿ ನಮ್ಮ ಸೀನಿಯರ್ ಸಬ್ ಎಡಿಟರ್ ಕಂ ಜ್ಯೋತಿಷಿಗೆ ಕೈತುಂಬಾ ಕೆಲಸ. ಅವರೇ ಹೇಳಿಕೊಳ್ಳುವ ಪ್ರಕಾರ ಅವರಿಗೆ ಹಸ್ತಸಾಮುದ್ರಿಕೆ ಗೊತ್ತಿತ್ತು, ಮುಖ ನೋಡಿ ಭವಿಷ್ಯ ಹೇಳುವುದಕ್ಕೂ ಬರುತ್ತಿತ್ತು. ಅವರು ಹೇಳಿದ ಭವಿಷ್ಯ ಯಾವತ್ತೂ ನಿಜವಾಗದೇ ಇದ್ದರೂಬಿಸಿನೆಸ್ಸು ಚೆನ್ನಾಗಿಯೇ ನಡೆಯುತ್ತಿತ್ತು. ಕೆಲವೊಮ್ಮೆ ಹೊರಗಿನ ಜನರೂ ಕಚೇರಿಗೆ ಬಂದು ತಮ್ಮ ವಾರಭವಿಷ್ಯವನ್ನು ತಿಳಿದುಕೊಂಡು ಹೋಗುತ್ತಿದ್ದರು.

ಸಂ.ಕ. ಸಂಪಾದಕ ಕೆ. ಶಾಮರಾಯರಿಗೆ ಆ ವ್ಯಕ್ತಿಯನ್ನು ಕಂಡರೆ ವಿಪರೀತ ಸಿಟ್ಟು. ಹಾಗಂತ ಅವರನ್ನು ಕೆಲಸದಿಂದ ಕಿತ್ತುಹಾಕುವ ಹಾಗಿರಲಿಲ್ಲ. ರಿಟೈರ್ ಆಗುವ ತನಕ ಅವರನ್ನು ಇಟ್ಟುಕೊಳ್ಳಲೇಬೇಕಾಗಿತ್ತು. ಆದರೆ ಬೇರೆ ರೀತಿಯಲ್ಲಿ ಕಾಟ ಕೊಡಬಹುದಲ್ವಾ. ಹಾಗಾಗಿ ಹೇಗಾದರೂ ಮಾಡಿ ಅವರಿಗೆ ತೊಂದರೆ ಕೊಡಬೇಕು ಅಂತ ಮ್ಯಾಗಜಿನ್ ವಿಭಾಗಕ್ಕೆ ಅವರನ್ನು ವರ್ಗಾಯಿಸಿದರು. ಅಲ್ಲಿದ್ದದ್ದು ನಾನು ಮತ್ತು ರವಿ. ಅವರು ನಮ್ಮ ವಿಭಾಗಕ್ಕೆ ಬಂದ ತಪ್ಪಿಗೆ ಏನಾದರೂ ಕೆಲಸ ಕೊಡಲೇಬೇಕಾಗಿತ್ತು. ‘ಅಮಿತಾಬ್ ಬಚ್ಚನ್ ಬಗ್ಗೆ ಒಂದು ಲೇಖನ ಬರೀರಿ ಸರ್’ಅಂತ ರವಿ ಬೆಳಗೆರೆ ಒಂದು ದಿನ ಐಡಿಯಾ ಕೊಟ್ಟರು. ಸರಿ, ಸದ್ರಿ ಸೀನಿಯರ್ ಪತ್ರಕರ್ತರು ಒಂದು ಪುಟದ ಲೇಖನ ಬರೆದರು. ಅದರ ಆರಂಭ ಹೀಗಿತ್ತುಃ

“ಹಿಂದಿ ಚಿತ್ರರಂಗದಲ್ಲಿ ಅಮಿತಾಬ ಬಚ್ಚನ್ ಎಂಬ ನಟನಿದ್ದಾನೆ. ಜನರೆಲ್ಲರೂ ಅವನನ್ನು ಲಾಂಬೂ ಲಾಂಬೂ ಎಂದು ಕರೆಯುತ್ತಾರೆ. ಅವನು ಆರಡಿ ನಾಲ್ಕಿಂಚು ಎತ್ತರವಿದ್ದಾನೆ ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾನೆ. ಅವನ ತಂದೆಯ ಹೆಸರು ಹರಿವಂಶ ರಾಯ್ ಬಚ್ಚನ್. ಹೆಂಡತಿಯ ಹೆಸರು ಜಯಾಬಾಧುರಿ....ಚಿತ್ರರಂಗದಲ್ಲಿ ಅಮಿತಾಬನಿಗೆ ಒಳ್ಳೆಯ ಭವಿಷ್ಯವಿದೆ, ಅವನು ನಟಿಸುವ ಚಿತ್ರಗಳು ಗೆಲ್ಲುವ ಲಕ್ಷಣಗಳಿವೆ...”

ಹೀಗೆ ಅಮಿತಾಬ್ ಬಚ್ಚನ್ ಬಯೋಡೇಟ ಮತ್ತು ಭವಿಷ್ಯವನ್ನು ಬರೆದು ನಮ್ಮ ಕೈಗಿತ್ತರು. ನಾನು ಮತ್ತು ರವಿ ಬಿಕ್ಕಿ ಬಿಕ್ಕಿ ನಕ್ಕೆವು. ಇನ್ನೇನೂ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಅದೇ ಅವರು ಬರೆದ ಮೊದಲ ಮತ್ತು ಕೊನೆಯ ಲೇಖನ. ಅದೆಷ್ಟೋ ವರ್ಷಗಳ ನಂತರ ಅವರು ನಿವೃತ್ತರಾದರು. ಅದಾಗಿ ಒಂದು ಶುಕ್ರವಾರ ರಾತ್ರಿ ಸಿನಿಮಾ ಪಾರ್ಟಿಯೊಂದರಲ್ಲಿ ನನಗೆ ಆ ವ್ಯಕ್ತಿಯ ದರ್ಶನವಾಯಿತು. ಗುಂಡು, ಸಿಗರೇಟನ್ನು ನೋಡಿದರೇ ಮೂರ್ಛೆ ಹೋಗುತ್ತಿದ್ದ ಅವರನ್ನು ಆ ಜಾಗದಲ್ಲಿ ನೋಡಿ ನನಗೆ ಆಘಾತವಾಯಿತು. ಏನ್ಸಾರ್ ನೀವಿಲ್ಲಿ ಅಂತ ಕೇಳಿದೆ. ಆ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ, ಅವರ ಪಕ್ಕದಲ್ಲಿದ್ದ ನಿರ್ಮಾಪಕನೇ ಉತ್ತರ ನೀಡಿದರು. “ಇವರು ನಮ್ಮ ಹಿತೈಷಿಗಳು, ನಮ್ಮನೆಯಲ್ಲಿ ಏನೇ ಶುಭಕಾರ್ಯ ನಡೆಯುವಾಗಲೂ ನಾನು ಇವರನ್ನೊಂದು ಮಾತು ಕೇಳಿಯೇ ಮುಂದುವರಿಯುತ್ತೇನೆ. ಈ ಸಿನಿಮಾ ಮಾಡಿದರೆ ಒಳ್ಳೆಯದಾಗುತ್ತದೆ ಅಂತ ಇವರು ಭವಿಷ್ಯ ಹೇಳಿದ್ದಾರೆ”ಅಂದುಬಿಟ್ಟರು. ಈ ಸಿನಿಮಾದ ಶೂಟಿಂಗ್ ಅರ್ಧಕ್ಕೇ ನಿಂತುಹೋಯಿತು.

ನಾನು ಈ ಕತೆ ಹೇಳುವುದಕ್ಕೆ ಒಂದು ಕಾರಣವಿದೆ. ಆ ಕಾಲದಲ್ಲಿ ಕೆಲಸಕ್ಕೆ ಬಾರದ ಪತ್ರಕರ್ತ ಅಥವಾ ಹೊಸದಾಗಿ ಕೆಲಸಕ್ಕೆ ಸೇರಿದ ಎಳಸು ಪತ್ರಕರ್ತರನ್ನು ಸಿನಿಮಾ ಅಥವಾ ಮ್ಯಾಗಜಿನ್ ವಿಭಾಗಕ್ಕೆ ಎಸೆಯಲಾಗುತ್ತಿತ್ತು. ಅವರು ಸಿನಿಮಾ ಮುಹೂರ್ತಗಳಿಗೆ ಮತ್ತು ಪಾರ್ಟಿಗಳಿಗೆ ಹೋಗುತ್ತಾ, ಸ್ಟಾರ್ ಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾ ತಮ್ಮ ವೃತ್ತಿಯನ್ನು ಪಾವನಗೊಳಿಸುತ್ತಿದ್ದರು. ಒಂದಕ್ಷರ ಬರೆಯುತ್ತಿರಲಿಲ್ಲ, ಬದಲಾಗಿ ಸಿನಿಮಾ ಪಿಆರ್ ಓಗಳು ಕಳಿಸಿಕೊಡುತ್ತಿದ್ದ ಸುದ್ದಿಗಳನ್ನೇ ಪ್ರಿಂಟ್ ಮಾಡುತ್ತಿದ್ದರು.   ಇತ್ತೀಚಿನ ವರ್ಷಗಳಲ್ಲಿ ಈ ದೃಶ್ಯ ಬದಲಾಗಿದೆ. ಆಕರ್ಷಕವಾಗಿ ಬರೆಯುವ ಸಿನಿಮಾ ಪತ್ರಕರ್ತರು ನಮ್ಮ ನಡುವಿದ್ದಾರೆ, ಬೇಂದ್ರೆ, ಅಡಿಗರ ಕಾವ್ಯ, ತೇಜಸ್ವಿಯ ಗದ್ಯವನ್ನು ಓದಿಕೊಂಡಿರುವ ಬುದ್ದಿವಂತರು ವಿಮರ್ಶೆಗಳನ್ನು ಬರೆಯುತ್ತಿದ್ದಾರೆ. ಹಾಗೆ ನೋಡಿದರೆ ದಿನಪತ್ರಿಕೆಗಳಲ್ಲಿ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆಯುವ ಅವಕಾಶ ಮತ್ತು ಸ್ವಾತಂತ್ರ್ಯ ಇರುವುದು ಸಿನಿಮಾ ಪತ್ರಕರ್ತನಿಗೊಬ್ಬನಿಗೇ. ಪತ್ರಿಕೆಯಲ್ಲಿ ಆತನ ಬೈಲೈನುಗಳು ಪದೇಪದೇ ಕಾಣಿಸಿಕೊಳ್ಳುವುದರಿಂದ ಸಿನಿಮಾನಟರ ಥರಾನೇ ಆತನಿಗೂ ಒಂದಿಷ್ಟು ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. ಹೀಗೆ ಬೆಳೆಯುವ ಸಂಪರ್ಕದಿಂದಾಗಿ ಮುಂದೊಂದು ದಿನ  ಆತ ಡೈಲಾಗ್ ರೈಟರ್ ಆಗಬಹುದು, ಸಿನಿಮಾ ಕವಿಯಾಗಬಹುದು. ಆದರೆ ಗೌರವದ ವಿಚಾರ ಬಂದಾಗ ಆತ ಸಮಾಜದ ಅತ್ಯಂತ ಕೆಳವರ್ಗದಿಂದ ಬಂದ ದೀನನೇ. ಯಾರೂ ಆತನನ್ನು ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ. ಪತ್ರಿಕೋದ್ಯಮದ ಮುಖ್ಯವಾಹಿನಿಯಲ್ಲಿ ಆತನಿಗೆ ಮರ್ಯಾದೆ ಇರುವುದಿಲ್ಲ.

film journalists balaga

ಇವೆಲ್ಲವನ್ನೂ ನಾನು ಅನುಭವಿಸಿರುವುದರಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ಈ ಸಲದ ಮಾಧ್ಯಮ ಅಕಾಡಮಿಯ ಪ್ರಶಸ್ತಿ ಪಟ್ಟಿಯನ್ನು ನೋಡಿದಾಗ ಇವೆಲ್ಲ ನೆನಪಾಯಿತು. ಪತ್ರಿಕೆಯ ಸರ್ಕುಲೇಷನ್ ಹೆಚ್ಚಿಸುವುದಕ್ಕೆ ಸಿನಿಮಾ ಪತ್ರಕರ್ತ ಬೇಕು, ಪ್ರೆಸ್ ಕ್ಲಬ್ಬಲ್ಲೋ ಅಥವಾ ಇನ್ಯಾವುದೋ ಸಮಾರಂಭಗಳಿಗೋ ನಟನಟಿಯರನ್ನು ಕರೆಸುವುದಕ್ಕೆ ಸಿನಿಮಾ ಪತ್ರಕರ್ತ ಬೇಕು, ಆದರೆ ಪ್ರಶಸ್ತಿ ನೀಡುವಾಗ ಆತ ನೆನಪಾಗುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿಯಲ್ಲಾಗಲಿ, ಪತ್ರಕರ್ತರ ಸಂಘ ನೀಡುವ ಪ್ರಶಸ್ತಿಯಲ್ಲಾಗಲಿ ಬೇರೆಲ್ಲಾ ವಿಭಾಗದವರಿಗೆ ಮೀಸಲಾತಿ ಇದೆ. ಸಿನಿಮಾದವರಿಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟಿಸೋಣ ಅಂದರೆ ಸಿನಿಮಾ ಪತ್ರಕರ್ತರಲ್ಲಿ ಒಗ್ಗಟ್ಟಿಲ್ಲ.  ಕೆಲವು ವರ್ಷಗಳ ಹಿಂದೆ ಚಲನಚಿತ್ರ ಪತ್ರಕರ್ತರ ಪರಿಷತ್ ಎಂಬ ಸಿನಿಮಾ ಪತ್ರಕರ್ತರ ಸಂಘಟನೆ ಕ್ರಿಯಾಶೀಲವಾಗಿತ್ತು. ಆದರೆ ಹಿರಿಯ ಮತ್ತು ಕಿರಿಯರ ಜಗಳದಿಂದಾಗಿ ಪತ್ರಕರ್ತರ ವೇದಿಕೆ ಎಂಬ ಇನ್ನೊಂದು ಪರ್ಯಾಯ ಸಂಘಟನೆ ಹುಟ್ಟಿಕೊಂಡಿತು, ಅದೂ ಅಕಾಲ ಸಾವನ್ನಪ್ಪಿದ ನಂತರ ‘ಬಳಗ’ಶುರುವಾಯಿತು, ಈಗ ಯಾವುದೂ ಸಕ್ರಿಯವಾಗಿಲ್ಲ.

ಮಾಧ್ಯಮ ಅಕಾಡಮಿ ಕೆಲವು ವರ್ಷಗಳಿಂದ ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಪಾಲಿಸುತ್ತಾ ಬರುತ್ತಿದೆ. ಆದರೆ ಸಿನಿಮಾ ಪತ್ರಕರ್ತ ಎಂದೇ ಗುರುತಿಸಿಕೊಂಡಿರುವ ಯಾರಿಗೂ ಇಲ್ಲಿತನಕ ಪ್ರಶಸ್ತಿ ಸಿಕ್ಕಿಲ್ಲ. ಅಪ್ಪಿತಪ್ಪಿ ಸಿಕ್ಕಿದ್ದರೂ ಅದು ಬೇರೆಯೇ ಕಾರಣಕ್ಕೆ.  ಉದಾಹರಣೆಗೆ ಈ ಸಾರಿ ಪ್ರಶಸ್ತಿ ಪಟ್ಟಿಯಲ್ಲಿ  ಸದಾಶಿವ ಶೆಣೈ ಅವರ ಹೆಸರಿದೆ. ಆದರೆ ಅವರಿಗೆ ಆ ಪುರಸ್ಕಾರ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ಕೋಟಾದಡಿಯಲ್ಲಿ. ಎರಡು ವರ್ಷದ ಹಿಂದೆ ಸಿ. ಸೀತಾರಾಮ್ ಅವರಿಗೆ ಮಾಧ್ಯಮ ಪುರಸ್ಕಾರ ಸಿಕ್ಕಿತು. ಆ ಹೊತ್ತಿಗೆ ಅವರು ಕನ್ನಡಪ್ರಭದಿಂದ ನಿವೃತ್ತರಾಗಿ ನಾಲ್ಕು ವರ್ಷಗಳಾಗಿದ್ದವು. ಹಾಗೆ ನೋಡಿದರೆ ಸೀತಾರಾಮ್ ಕೇವಲ ಸಿನಿಮಾ ಪತ್ರಕರ್ತರಾಗಿರಲಿಲ್ಲ. ವಿಜ್ಞಾನ, ಸಾಹಿತ್ಯ, ಪುಸ್ತಕವಿಮರ್ಶೆ, ಪ್ರವಾಸ ಸಾಹಿತ್ಯ, ಪುರಾಣ ಕತೆಗಳಲ್ಲಿ ಲೈಂಗಿಕತೆ, ಹೀಗೆ ಹತ್ತಾರು ವಿಷಯಗಳ ಬಗ್ಗೆ ಪ್ರಬುದ್ಧವಾಗಿ ಬರೆಯಬಲ್ಲವರಾಗಿದ್ದರು. ಅವರ ಬರೆದ ಹಲವಾರು ಪುಸ್ತಕಗಳು ಜನಪ್ರಿಯವಾಗಿದ್ದವು. ಆದರೂ ಅವರನ್ನು ತೀರಾ ತಡವಾಗಿ ಮಾಧ್ಯಮ ಅಕಾಡಮಿ ಗುರುತಿಸಿತು. ಈ ಬಾರಿಯ ಪಟ್ಟಿಯಲ್ಲಿ ಹಲವಾರು ಅಪರಿಚಿತ ಹೆಸರುಗಳಿವೆ, ನಿನ್ನೆಮೊನ್ನೆ ಬಂದವರ ಹೆಸರುಗಳಿವೆ. ಎಲ್ಲಾ ಪತ್ರಿಕೆಗಳನ್ನು ಮತ್ತು ಜಿಲ್ಲೆಗಳ ವರದಿಗಾರರನ್ನು ಮೆಚ್ಚಿಸಬೇಕು ಅನ್ನೋ ಕಾರಣಕ್ಕೆ ಮೀಸಲಾತಿ ನಿಯಮವನ್ನು ಅನುಸರಿಸಲಾಗಿದೆ. ಕೆಲವರು ಒಂದು ಪತ್ರಿಕೆಯಲ್ಲಿ ತಾವು ಪಡೆದುಕೊಂಡಿರುವ ಸ್ಥಾನಮಾನದ ಕಾರಣದಿಂದಾಗಿಯೇ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಇಂಥಾ ಅಪಸವ್ಯಗಳು ಮಾಮೂಲು. ಆದರೆ ಪತ್ರಕರ್ತರೇ ಸಮಿತಿಯಲ್ಲಿರುವ ಮಾಧ್ಯಮ ಅಕಾಡಮಿ ಕೂಡಾ ಇಂಥಾ ಅದ್ವಾನಗಳನ್ನು ಎಸಗುತ್ತದೆ ಅಂದರೆ ಅದಕ್ಕಿಂತ ನಾಚಿಕೆಯ ವಿಷಯ ಇನ್ನೇನಿದೆ

ಪ್ರಶಸ್ತಿ ಸಲುವಾಗಿಯೇ ಹುಟ್ಟಿದ್ದಾರೇನೋ ಅನಿಸುವಂಥಾ ಮಹನೀಯರು ನಮ್ಮ ನಡುವಿದ್ದಾರೆ, ಒಂದು ಬಾರಿ ಪ್ರಶಸ್ತಿ ಸಿಕ್ಕರೆ ಅವರ ಆತ್ಮಕ್ಕೆ ತೃಪ್ತಿಯಾಗುವುದಿಲ್ಲ, ಸರ್ಕಾರದ ಇನ್ನಾವುದಾದರೂ ಒಂದು ಕಮಿಟಿಯಲ್ಲಿ ಅಧ್ಯಕ್ಷಗಿರಿಯನ್ನೋ ಸದಸ್ಯತ್ವವನ್ನೋ ಗಿಟ್ಟಿಸಿಕೊಳ್ಳುವತ್ತ ಅವರ ಹೋರಾಟ ಮುಂದುವರಿಯುತ್ತದೆ. ಅದನ್ನೇ ಒಂದು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ಅವರು ಮೆರೆದಾಡುತ್ತಾರೆ. ಪತ್ರಕರ್ತರೂ ಇದೇ ಹಾದಿಯಲ್ಲಿದ್ದಾರೆ.  ಪ್ರೆಸ್ ಕ್ಲಬ್ ಚುನಾವಣೆ ಅನ್ನುವುದು ಕೂಡಾ ಈಗ ಒಕ್ಕಲಿಗರ ಸಂಘದ ಚುನಾವಣೆಯನ್ನು ಮೀರಿಸುವ ರೀತಿಯಲ್ಲಿ ನಡೆಯುತ್ತದೆ. ಮನವಿ ಪತ್ರಗಳು, ಪೋಸ್ಟರುಗಳು, ಈಮೇಲ್ ಗಳು, ಎಸ್ಸೆಮ್ಮೆಸ್ಸುಗಳು, ಮನೆಮನೆಗೆ ಪತ್ರಗಳು, ಹೀಗೆ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತದೆ. ಗೆದ್ದ ನಂತರ ಅವರು ಪ್ರೆಸ್ ಕ್ಲಬ್ ಆವರಣದಿಂದ ನಾಪತ್ತೆಯಾಗುತ್ತಾರೆ. 

ರಾಜ್ಯ ಸರ್ಕಾರವೂ ಪ್ರತಿವರ್ಷ ಅಸಂಖ್ಯ ಪ್ರಶಸ್ತಿಗಳನ್ನು ನೀಡುತ್ತದೆ. ಗುಬ್ಬಿ ವೀರಣ್ಣ ಪ್ರಶಸ್ತಿ, ಬಸವ ಪುರಸ್ಕಾರ, ಪುರಂದರ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ಶಾಂತಲಾ ನಾಟ್ಯ ಪ್ರಶಸ್ತಿ,  ವೆಂಕಟಪ್ಪ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ. ರಾಜ್ಯೋತ್ಸವ ಪ್ರಶಸ್ತಿ,  ಚಲನಚಿತ್ರ ಪ್ರಶಸ್ತಿ, ಹೀಗೇ. ಇವೆಲ್ಲಾ ಪ್ರಶಸ್ತಿಗಳಿಗೂ ನಗದು ಬಹುಮಾನವಿದೆ. ಹಾಗಾದಾಗ ಲಾಬಿ ನಡೆಯುವುದು ಸಹಜ. ರಾಜಕೀಯ ಕನೆಕ್ಷನ್ ಯಾರಿಗೆ ಚೆನ್ನಾಗಿದೆಯೋ ಆತ ಪ್ರಶಸ್ತಿ ವಿಜೇತನಾಗುತ್ತಾನೆ. ತನ್ನ ಪಾಡಿಗೆ ಕೆಲಸ ಮಾಡುವ ಸಾಧಕ ಮೂಲೆಗುಂಪಾಗುತ್ತಾನೆ.

ಅನಂತಮೂರ್ತಿಯವರಿಗೆ ಬಸವಪ್ರಶಸ್ತಿ ಸಿಕ್ಕಿದಾಗ ಅವರು ವಚನಸಾಹಿತ್ಯಕ್ಕೆ ಏನು ಕಾಣಿಕೆ ಕೊಟ್ಟಿದ್ದಾರೆ ಅಂತ ಕೆಲವರು ಪ್ರಶ್ನಿಸಿದರು. ಈ ಬಾರಿ ಮಾಧ್ಯಮ ಅಕಾಡಮಿಯ ಪ್ರಶಸ್ತಿ ಪಟ್ಟಿಯಲ್ಲಿರುವ ಮೂವತ್ತು ಹೆಸರುಗಳಲ್ಲಿ ಕೆಲವರ ಬಗ್ಗೆ ಇದೇ ರೀತಿಯ ಪ್ರಶ್ನೆಯನ್ನು ಕೇಳಬಹುದು. ಅಕಾಡಮಿಯ ಅಧ್ಯಕ್ಷರು ಉತ್ತರಿಸುತ್ತಾರಾ?

ಮತ್ತೆ ಮೂಲಪ್ರಶ್ನೆಗೆ ಬರುವುದಾದರೆ ಸಿನಿಮಾ ಪತ್ರಕರ್ತರು ಪ್ರಶಸ್ತಿಗೆ ಅರ್ಹರಾಗದೇ ಇರುವಂಥಾ ಯಾವ ಅಪರಾಧ ಮಾಡಿದ್ದಾರೆ. ಅವರು ಮಾಡುತ್ತಿರುವುದು ಪತ್ರಿಕೋದ್ಯಮವೇ ಅಲ್ಲ ಅನ್ನುವುದು ಅಕಾಡಮಿ ಅಥವಾ ಸರ್ಕಾರದ ಅಭಿಪ್ರಾಯವಾಗಿದ್ದರೆ ಅದನ್ನು ಪ್ರಶಸ್ತಿ ನಿಯಮದ ಕೆಳಗೆ ಸ್ಪಷ್ಟವಾಗಿ ನಮೂದಿಸಲಿ. ರಾಜಕಾರಣಿಗಳು ಪತ್ರಿಕಾಗೋಷ್ಠಿಗಳಲ್ಲಿ ಹೇಳಿದ್ದನ್ನೇ ‘ಅವರು ಹೇಳಿದರು, ತಿಳಿಸಿದರು’ಅಂತ ವರ್ಷಗಟ್ಟಲೆಯಿಂದ ಬರೆಯುತ್ತಾ ಬಂದಿರುವವರೇ ಒಳ್ಳೆಯ ವರದಿಗಾರರು ಅನ್ನುವುದಾದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ತೀರ್ಪನ್ನು ಬರೆದುಕೊಳ್ಳುವ ಗುಮಾಸ್ತರನ್ನೂ ಪ್ರಶಸ್ತಿಗೆ ಪರಿಗಣಿಸಬೇಕಾಗುತ್ತದೆ.

ಅಷ್ಟಕ್ಕೂ ಒಂದು ಪ್ರಶಸ್ತಿಗೆ ಯಾಕಿಷ್ಟೊಂದೆಲ್ಲಾ ರಾಮಾಯಣ ಎಂದು ನೀವಂದುಕೊಳ್ಳಬಹುದು. ಯಾರೋ ಒಬ್ಬರಿಗೆ ಪ್ರಶಸ್ತಿ ಸಿಕ್ಕರೆ ಓದುಗರ ಪಾಲಿಗೆ ಅದು ಒಂದು ದಿನದ ಸುದ್ದಿ. ಆದರೆ ಪಡೆದುಕೊಂಡವರಿಗೆ ಅದರ ಲಾಭ ಜೀವನಪರ್ಯಂತ ಸಿಗುತ್ತಲೇ ಇರುತ್ತದೆ. ಯಾಕೆಂದರೆ ನಾನು ಪ್ರಶಸ್ತಿ ವಿಜೇತ ಅಂತ ಅವರು ಸೈಟಿಗೆ ಅರ್ಜಿ ಹಾಕುತ್ತಾರೆ, ನಾಳೆ ಆ ಸೈಟಲ್ಲೊಂದು ಮನೆಕಟ್ಟಬಹುದು ಅಥವಾ ದುಪ್ಪಟ್ಟು ರೇಟಿಗೆ ಮಾರಾಟ ಮಾಡಬಹುದು. ಪತ್ರಕರ್ತರು ಬಡವರೂ ಮತ್ತು ಪ್ರಾಮಾಣಿಕರೂ ಆಗಿರಬೇಕು ಅನ್ನುವ ನಿಯಮ ಈ ಕಾಲಕ್ಕೆ ಹೊಂದಿಕೊಳ್ಲುವುದಿಲ್ಲ.

ಇಲ್ಲೂ ಷರತ್ತುಗಳು ಅನ್ವಯವಾಗುತ್ತವೆ.

Also See

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery