` Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shruthi wedding, anu prabhakar wedding image
shruthi, anu prabhakar

‘ಸುಖಸಂಸಾರಕ್ಕಿರುವುದು ಒಂದೇ ಸೂತ್ರ. ಅದು ಏನೂಂತ ಗೊತ್ತಾದ ತಕ್ಷಣ ನಾನು ಇನ್ನೊಮ್ಮೆ ಮದುವೆಯಾಗುತ್ತೇನೆ’. ಹಾಗಂತ ಹೇಳಿದವನು ಹಾಲಿವುಡ್ ನ ಖ್ಯಾತ ನಟ ಕ್ಲೈಂಟ್ ಈಸ್ಟ್ ವುಡ್. ಹಾಲಿವುಡ್ ನಟನಟಿಯರಿಗೆ ಮದುವೆಯಾಗುವುದು ಮತ್ತು ವಿಚ್ಛೇದನ ನೀಡುವುದು ಬಹಳ ಇಷ್ಟದ ಹವ್ಯಾಸ. ‘ನಾನು ಮದುವೆಯಾಗ್ತಿದೀನಿ’ಅಂತ ಒಬ್ಬ ನಟ ಹೇಳಿದಾಕ್ಷಣ ‘ಡಿವೋರ್ಸ್ ಯಾವಾಗ’ಎಂದು ಮಾಧ್ಯಮದವರು ಕೇಳುವ ಪರಿಸ್ಥಿತಿ ಅಲ್ಲಿದೆ. ಬಾಲ್ ಪೆನ್ನಿನ ರೀಫಿಲ್ ಬದಲಾಯಿಸಿದಂತೆ ಅವರು ಸಂಗಾತಿಯನ್ನು ಬದಲಾಯಿಸುತ್ತಲೇ ಇರುತ್ತಾರೆ. ಕೊನೆಯ ರೀಫಿಲ್ ನ ಇಂಕು ಖಾಲಿಯಾಗುವ ಹೊತ್ತಿಗೆ ಹಾಸಿಗೆ ಹಿಡಿದಿರುತ್ತಾರೆ.   ಖ್ಯಾತ ನಟಿ ಎಲಿಜಬತ್ ಟೇಲರ್ ಒಟ್ಟು ಏಳು ಸಾರಿ ಮದುವೆಯಾಗಿದ್ದಳು, ಅದರರ್ಥ ಅಷ್ಟೇ ಸಾರಿ ಡಿವೋರ್ಸಿಯಾಗಿದ್ದಳು ಅಂತ. ನಟ ರಿಚರ್ಡ್ ಬರ್ಟನ್ ನನ್ನು ಆಕೆ ಎರಡು ಸಾರಿ ಮದುವೆಯಾಗಿದ್ದಳು, ಹಳೆಯ ಗಂಡನ ಪಾದವೇ ಗತಿ ಅನ್ನುವ ಕನ್ನಡದ ಗಾದೆಮಾತು ಹಾಲಿವುಡ್ಡಲ್ಲೂ ನಿಜವಾಗಿದ್ದು ಹಾಗೆ. ಆದರೆ ಎರಡನೇ ಬಾರಿಯೂ ಆ ಮದುವೆ ಮುರಿದುಬಿತ್ತು. ಲಾನಾ ಟರ್ನರ್ ಎಂಬ ಇನ್ನೊಬ್ಬ ನಟಿ ಎಂಟು ಸಲ ಮದುವೆಯಾಗಿದ್ದಳು. ಕೊನೆಯ ಮದುವೆಯೂ ಮುರಿದುಬಿದ್ದ ನಂತರ ಸುಸ್ತಾದ ಆಕೆ ಒಂದು ಹೇಳಿಕೆ ನೀಡಿದಳು “ಒಬ್ಬ ಗಂಡನಿಂದ ಏಳು ಮಕ್ಕಳು ಪಡೆಯಬೇಕು ಅನ್ನೋದು ನನ್ನ ಗುರಿಯಾಗಿತ್ತು. ಆದರೆ ಆಗಿದ್ದು ಮಾತ್ರ ಅದಕ್ಕೆ ತದ್ವಿರುದ್ಧ”. 

ನಮ್ಮ ನಟನಟಿಯರೂ ಈಗ ಹಾಲಿವುಡ್ ಮಂದಿಗೆ ಪೈಪೋಟಿ ನೀಡುತ್ತಿದ್ದಾರೆ, ಡಿವೋರ್ಸ್ ವಿಚಾರದಲ್ಲಿ. ಮಲೆಯಾಳಂ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಒಟ್ಟು 55 ಡಿವೋರ್ಸ್ ಪ್ರಕರಣಗಳು ದಾಖಲಾಗಿವೆ. ಮಲೆಯಾಳಂ ಚಿತ್ರಗಳು ಗುಣಮಟ್ಟದಲ್ಲಿ ಬೇರೆ ಚಿತ್ರರಂಗಗಳಿಗಿಂತ ಮುಂದಿರುವುದಕ್ಕೆ ಇದೇ ಕಾರಣವಾಗಿರಬಹುದೋ ಏನೋ!ಇಷ್ಟವಾಗದೇ ಇರುವ ದೃಶ್ಯವನ್ನು ಕಿತ್ತುಹಾಕಿದಂತೆ ಇಷ್ಟವಾಗದೇ ಇರುವ ಸಂಬಂಧವನ್ನೂ ಮುಲಾಜಿಲ್ಲದೇ ಮುರಿದುಕೊಳ್ಳುವ ನಿಷ್ಠುರತೆ ಅವರಲ್ಲಿದೆ. ಕಮ್ಯುನಿಸ್ಟರಿಗೆ ಇಂಥಾದ್ದೆಲ್ಲಾ ಇಷ್ಟ. ಅವರದ್ದು ಬೀದಿಯಲ್ಲೂ ಹೋರಾಟ, ಮನೆಯೊಳಗೂ ಹೋರಾಟ. ಹಿಂದಿ ಚಿತ್ರರಂಗದಲ್ಲೂ ತಿಂಗಳಿಗೊಂದರಂತೆ ವಿಚ್ಛೇದನಗಳು ನಡೆಯುತ್ತವೆ. ಮೊನ್ನೆ ಋತಿಕ್ ರೋಷನ್ ಮತ್ತೆ ಬ್ಯಾಚುಲರ್ ಆದ. ಕಾರಣಗಳು ಬೇಕಿಲ್ಲ. ಯಾಕೆಂದರೆ ಡಿವೋರ್ಸ್ ಅನ್ನುವುದು ಡಯಾಬಿಟೀಸ್ ಥರ ಶ್ರೀಮಂತರನ್ನು ಮತ್ತು ಸಿಲಬ್ರೆಟಿಗಳನ್ನು ಕಾಡುವ ಖಾಯಿಲೆ. ನಮ್ಮಂಥವರಿಗೆ ಮದುವೆ ಅನ್ನುವುದು ಆಧಾರ್ ಕಾರ್ಡ್ ಇದ್ದಹಾಗೆ. ಇಷ್ಟ ಇಲ್ಲದಿದ್ದರೂ ಜೇಬಲ್ಲಿಟ್ಟುಕೊಂಡೇ ಓಡಾಡಬೇಕು.

ತೆರೆಯ ಮೇಲೆ ಒಳ್ಳೆಯ ನಟ ಅನಿಸಿಕೊಂಡವರೆಲ್ಲಾ  ಮನೆಯಲ್ಲಿ ಒಳ್ಳೆಯ ಗಂಡ ಅಂತ ಅನಿಸಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಟಿಯರಿಗೂ ಇದೇ ಮಾತು ಅನ್ವಯ. ಅದರಲ್ಲೂ ಗಂಡಹೆಂಡತಿ ಇಬ್ಬರೂ ಸಿನಿಮಾದವರೇ ಆಗಿದ್ದರೆ ಮನೆಯೇ ಒಂದು ರಣರಂಗ. ಇದಕ್ಕೆ ಕನ್ನಡ ಚಿತ್ರರಂಗದಲ್ಲಿ ಅಪವಾದವಾಗಿದ್ದವರು ವಿಷ್ಣುವರ್ಧನ್ ಮತ್ತು ಭಾರತಿ. ಅವರಿಬ್ಬರೂ ಮದುವೆಯಾಗಿದ್ದರೂ ಸುಖವಾಗಿದ್ದರು. ಕಲ್ಯಾಣ್ ಕುಮಾರ್- ಶೈಲಶ್ರೀ ಜೋಡಿಯೂ ಹೀಗೇ ಇದ್ದರಂತೆ. ಇತ್ತೀಚಿನ ಉದಾಹರಣೆಯೆಂದರೆ ಮಾಲಾಶ್ರೀ-ರಾಮು.  ಮಿಕ್ಕಂತೆ ನಮ್ಮ ಮುಂದಿರುವ ಉದಾಹರಣೆಗಳೆಲ್ಲಾ ದುರಂತ ದಾಂಪತ್ಯದ್ದೇ. ಟೈಗರ್ ಪ್ರಭಾಕರ್ ನಾಲ್ಕು ಮದುವೆಯಾದರು, ಅವರ ಸಂಬಂಧ ಕಳಚಿಕೊಂಡ ಜಯಮಾಲಾ ಈಗ ಹೊಸ ಬದುಕು ಕಟ್ಟಿಕೊಂಡು ಆರಾಮಾಗಿದ್ದಾರೆ. ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ತನ್ನ ತಾಕತ್ತು ಅನ್ನುವುದು ಗಂಡಸಿನ ಅಹಂಕಾರ, ಹೆಣ್ಣಿನ ಮಟ್ಟಿಗೆ ಎರಡನೇ ಮದುವೆ ಅನಿವಾರ್ಯ ಮತ್ತು ಸಮಾಜದ ಕೆಟ್ಟಕುತೂಹಲದ ದೃಷ್ಟಿಯಂದ ಪಾರಾಗುವುದಕ್ಕೆ ಇರುವ ಲೈಸೆನ್ಸು.

ಇದ್ದಿದ್ದರಲ್ಲೇ ಸ್ವಲ್ಪ ಡೀಸೆಂಟಾಗಿ ಡಿವೋರ್ಸ್ ಪಡೆದುಕೊಂಡವರೆಂದರೆ ಸುಧಾರಾಣಿ. ಅವರ ಮೊದಲಪತಿ ಅಮೆರಿಕಾದಲ್ಲಿದ್ದಿದ್ದರಿಂದ ಈ ಬ್ರೇಕಪ್ ಹೆಚ್ಚು ಸಂಚಲನ ಮೂಡಿಸಲಿಲ್ಲ. ಅದನ್ನು ವೈಭವೀಕರಿಸುವುದಕ್ಕೆ ಆಗ ಟೀವಿ ಚಾನೆಲ್ಲುಗಳೂ ಇರಲಿಲ್ಲ. ಈಗ ಸುಧಾ ಇನ್ನೊಂದು ಮದುವೆಯಾಗಿ ಒಂದು ಮಗುವಿನ ತಾಯಾಗಿ ಸುಖಸಂಸಾರಿ. ಇನ್ನಷ್ಟು ಹಿಂದಕ್ಕೆ ಹೋದರೆ ಕಲ್ಪನಾ, ಆರತಿ ಅವರ ಮುರಿದುಬಿದ್ದ ಸಂಬಂಧಗಳ ಕತೆ ನೆನಪಾಗುತ್ತವೆ. ಆ ದುರಂತ ಕತೆಗಳು ಪಠ್ಯಪುಸ್ತಕವಾಗುವಷ್ಟು ವಿಸ್ತಾರವಾಗಿವೆ. ಅದನ್ನು ಓದಿ ಯಾರೂ ಅಳುವುದಿಲ್ಲ. ಸಿನಿಮಾದವರ ಸಂಸಾರದ ಕತೆಗಳೂ ಜನರ ಪಾಲಿಗೆ ಥೇಟು ಸಿನಿಮಾದಂತೆಯೇ.

shruthi marriage s mahender and chandrachud

ಇತ್ತೀಚಿನ ದಿನಗಳಲ್ಲಿ ಸುದ್ದಿಯಾದ ವಿಚ್ಛೇದನವೆಂದರೆ ಶ್ರುತಿ- ಮಹೇಂದರ್ ಅವರದು. ನನ್ನಂಥವರಿಗೆ ಸಾಕಷ್ಟು ಅಚ್ಚರಿ ಮೂಡಿಸಿದ ಸುದ್ದಿಯಿದು. ಯಾಕೆಂದರೆ ಇವರಿಬ್ಬರ ಪ್ರೇಮ ಉತ್ತುಂಗದಲ್ಲಿದ್ದಾಗ ಅದಕ್ಕೆ ನಾನೂ ಒಬ್ಬ ಸಾಕ್ಷಿಯಾಗಿದ್ದೆ. ಬಿ.ಸಿ.ಪಾಟೀಲರ ‘ಪ್ರೇಮಾಚಾರಿ’ಚಿತ್ರದ ಶೂಟಿಂಗ್ ಸಂದರ್ಭವದು. ‘ಲಂಕೇಶ್’ಚಿತ್ರ ಯಶಸ್ಸು ಕಂಡಿದ್ದರಿಂದ ಮಹೇಂದರ್ ಅವರನ್ನೇ ನಿರ್ದೇಶಕನ್ನಾಗಿಸಿಕೊಂಡು ಪಾಟೀಲರು ‘ಪ್ರೇಮಾಚಾರಿ’ಶುರು ಮಾಡಿದ್ದರು. ಆ ಹೊತ್ತಿಗೆ ಮಹೇಂದರ್ ‘ಪರವಶರಾಗಿದ್ದರಿಂದ’ಅವರು ಸಿನಿಮಾ ಶೂಟಿಂಗಿಗಿಂತ ಶ್ರುತಿ ಜೊತೆಗಿನ ಮೀಟಿಂಗ್ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಅದನ್ನು ನೋಡಿ ಪಾಟೀಲರ ಮೀಸೆ ಕೆಂಪಾಗಿತ್ತು ಎಂದು ನಾನೇ ‘ಚಿತ್ರಪ್ರಭ’ದಲ್ಲಿ ಬರೆದಿದ್ದೆ. ಪ್ರೇಮಾಚಾರಿ ಗೆಲ್ಲಲಿಲ್ಲ, ಶ್ರುತಿ-ಮಹೇಂದರ್ ಜೊತೆಯಾಗಿ ನಟಿಸಿದ ‘ಗಟ್ಟಿಮೇಳ’ಕೂಡಾ ಗೆಲ್ಲಲಿಲ್ಲ. ಅನಂತರದ ದಿನಗಳಲ್ಲಿ ರಾಜಕೀಯಕ್ಕೆ ಕಾಲಿಟ್ಟ ಮಹೇಂದರ್ ಅಲ್ಲಿಯೂ ಗೆಲ್ಲಲಿಲ್ಲ, ಇವೆಲ್ಲಾ ಸೋಲುಗಳು ಅವರಿಬ್ಬರ ದಾಂಪತ್ಯದ ಮೇಲೆಯೂ ಪರಿಣಾಮ ಬೀರಿತು. ವೈಯಕ್ತಿಕವಾಗಿ ತೀರಾ ಸಜ್ಜನರಾದ ಇಬ್ಬರೂ ಬೇರೆಬೇರೆಯಾದರು. ಮಹೇಂದರ್ ಮೌನವಾದರೆ, ಶ್ರುತಿ ಇನ್ನೊಂದು ಸಂಬಂಧದತ್ತ ಹೊರಳಿದರು, ಅಲ್ಲೂ ಜಾರಿದರು. ಗಂಡಹೆಂಡತಿಯೆಂದರೆ ಹೀಗಿರಬೇಕು ಎಂದು ಒಂದು ಕಾಲದಲ್ಲಿ ಚಿತ್ರರಂಗವೇ ಮೆಚ್ಚುಗೆಯಿಂದ ಆಡಿಕೊಳ್ಳುತ್ತಿದ್ದ ದಾಂಪತ್ಯ ಅವರಿಬ್ಬರದಾಗಿತ್ತು. ಈಗ ಇಬ್ಬರ ತೀರಗಳು ಬದಲಾಗಿವೆ. ಎಲ್ಲಾ ನೆನಪುಗಳೂ ಮಧುರವಾಗಿರುವುದಿಲ್ಲ.

ramya vasista, rajesh krishnan

ಗಾಯಕ ರಾಜೇಶ್ ಕೃಷ್ಣ ಮತ್ತು ರಮ್ಯ ವಸಿಷ್ಟ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಸಕಾರಣವಿತ್ತು. ರಾಜೇಶ್ ಗಂಡಸೇ ಅಲ್ಲ ಎಂದುಬಿಟ್ಟರು ರಮ್ಯ. ಎಂಬಲ್ಲಿಗೆ ರಾಜೇಶ್ ಮೂರು ಬಾರಿ ಡಿವೋರ್ಸ್ ಪಡೆದ ದಾಖಲೆ ವೀರನಾದರು. ಶ್ರುತಿ-ಚಂದ್ರಚೂಡ್ ಪರಿಣಯದ ನಂತರ ಚಾನೆಲ್ಲುಗಳಲ್ಲಿ ವಿಪರೀತ ಸದ್ದು  ಮಾಡಿದ ಗಂಡಹೆಂಡರ ಜಗಳವೆಂದರೆ ವಿಜಯ್ ಮತ್ತು ನಾಗರತ್ನ ಅವರದು. ವಿಚ್ಛೇದನಕ್ಕೋಸ್ಕರ ವಿಜಯ್ ಹಾಕಿದ ಅರ್ಜಿ ಇನ್ನೂ ಕೌಟುಂಬಿಕ ನ್ಯಾಯಾಲಯದಲ್ಲಿದೆ. ಚಾನೆಲ್ಲಲ್ಲಿ ಅವರ ಹೊಸಚಿತ್ರ ಶಿವಾಜಿನಗರದ ದೃಶ್ಯಗಳು ಪ್ರಸಾರವಾಗುತ್ತಿವೆ, ನಾಗರತ್ನ ಹೇಗಿದ್ದಾರೋ ಏನೋ.  ಇದೀಗ ಚಾಲ್ತಿಯಲ್ಲಿರುವ ಸುದ್ದಿಯೆಂದರೆ ಅನುಪ್ರಭಾಕರ್ ಡಿವೋರ್ಸ್ ಪ್ರಕರಣ. ಹನ್ನೆರಡು ವರ್ಷ ಬಾಳಿಕೆ ಬಂದ ದಾಂಪತ್ಯ ಈಗ್ಯಾಕೆ ಮುರಿದುಬಿತ್ತು ಅನ್ನೋದನ್ನು ಅವರಿಬ್ಬರೂ ಇನ್ನೂ ಹೇಳಿಲ್ಲ. ಕೃಷ್ಣಕುಮಾರ್ ಅವರನ್ನು ಮದುವೆಯಾಗುವ ಹೊತ್ತಿಗೆ ಅನುಪ್ರಭಾಕರ್ ಆಡಿದ ಮಾತು ನನಗೆ ನೆನಪಿದೆ. ಅನು ಜ್ವರ ಬಂದು ಆಸ್ಪತ್ರೆ ಸೇರಿದ್ದರು, ಆಗ ಕೃಷ್ಣಕುಮಾರ್ ಆಕೆಯನ್ನು ಉಪಚರಿಸಿದ ರೀತಿ ನೋಡಿ ಅನು ಖುಶಿಯಾದರಂತೆ. ಹೀಗೆ ಒಂದು ಮೆಚ್ಚುಗೆಯೇ ಪ್ರೀತಿಯಾಗಿ ಮದುವೆಯಲ್ಲಿ ಪರ್ಯವಸಾನವಾಯಿತು!ಅಕಾಲದಲ್ಲಿ ಹುಟ್ಟುವ ಪ್ರೀತಿ, ಸಿಂಪತಿ, ಬಹುಕಾಲ ಬಾಳಿಕೆ ಬರುವುದಿಲ್ಲ ಅನ್ನುವುದಕ್ಕೆ ಇವರಿಬ್ಬರೇ ಸಾಕ್ಷಿ. ಅಷ್ಟಕ್ಕೂ  ಒಬ್ಬ ನಟಿ ಮದುವೆಯಾಗುವುದು ಅಂದರೆ ವೃತ್ತಿಬದುಕಿನಿಂದ ಕಣ್ಮರೆಯಾಗುವುದು ಎಂದೇ ಅರ್ಥ. ಈ ಸತ್ಯ ಅನುಪ್ರಭಾಕರ್ ಅವರಿಗೆ ಆಗ ಗೊತ್ತಿರಲಿಲ್ಲವೋ ಏನೋ. ಆಕೆ ಒಳ್ಳೆಯ ನಟಿ ಎಂಬ ಬಗ್ಗೆ ಅನುಮಾನವಿಲ್ಲ, ಚಿಕ್ಕ ವಯಸ್ಸಲ್ಲೇ ಮದುವೆಯಾಗದೇ ಇದ್ದಿದ್ದರೆ ಇನ್ನಷ್ಟು ವರ್ಷ ಆಕೆ ಇದೇ ರಂಗದಲ್ಲಿ ಹೆಸರು ಮಾಡಬಹುದಾಗಿತ್ತು ಅನ್ನುವುದೂ ನಿಜಾನೇ. ಆದರೆ ಈಗ ಮತ್ತೆ ಹಳೆಯ ದಾರಿಯನ್ನೇ ಹೊಸದಾಗಿ ತುಳಿಯಬೇಕು. ಆದರೆ ವಯಸ್ಸು ಮೂವತ್ತಮೂರಾಗಿದೆ.

jayanthi

ನನ್ನ ಕಣ್ಣೆದೆರು ಈಗ ಕಾಣಿಸುತ್ತಿರುವುದು ಅನುಪ್ರಭಾಕರ್ ಅಥವಾ ಕೃಷ್ಣಕುಮಾರ್ ಅಲ್ಲ. ಜಯಂತಿ ಅವರೊಬ್ಬರೇ. ಬದುಕಿನುದ್ದಕ್ಕೂ ನೋವು ತಿಂದ ಜೀವವದು, ಆಕೆ ನಂಬಿದವರೆಲ್ಲರೂ ಮೋಸ ಮಾಡಿದವರು.  ಈಗ ಈ ಇಳಿವಯಸ್ಸಲ್ಲಿ ತನ್ನ ಮಗನ ಮುರಿದುಬಿದ್ದ ಸಂಸಾರದ ಕಳೇಬರ ನೋಡುತ್ತಾ ಕಾಲಕಳೆಯಬೇಕಾದ ಸ್ಥಿತಿ ಅವರಿಗೆ ಬರಬಾರದಾಗಿತ್ತು.

ಸಿನಿಮಾದವರ ದಾಂಪತ್ಯ ಯಾಕೆ ಬರ್ಖತ್ತಾಗುವುದಿಲ್ಲ?ತುಂಬಾ ಸರಳವಾಗಿ ಹೇಳಬೇಕಾದರೆ ಅವರು ಬಹಳ ಬೇಗ ಮುಗ್ಥತೆ ಮತ್ತು ಕುತೂಹಲವನ್ನು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಇಪ್ಪತ್ತೊಂದನೇ ವಯಸ್ಸಲ್ಲಿ ನಾಯಕಿಯಾಗುವ ಹುಡುಗಿ ಇಪ್ಪತ್ತೆಂಟನೇ ವಯಸ್ಸಿಗೇ ಹಣ, ಜನಪ್ರಿಯತೆ, ಸಾಂಗತ್ಯ, ಇವೆಲ್ಲವನ್ನೂ ನೋಡಿರುತ್ತಾಳೆ ಮತ್ತು ಅನುಭವಿಸಿರುತ್ತಾಳೆ. ದೇಶ ಸುತ್ತಿರುತ್ತಾಳೆ, ಸಾವಿರಾರು ಜನರ ಪರಿಚಯ ಆಗಿರುತ್ತದೆ, ಇಡೀ ದಿನ ಮನೆಯಾಚೆಯೇ ಇರುತ್ತಾಳೆ. ಇವೆಲ್ಲವೂ ಆಕೆಯನ್ನು ಬೇರೆಯೇ ರೀತಿಯಲ್ಲಿ ಪ್ರಬುದ್ಧಳನ್ನಾಗಿ ಮಾಡಿರುತ್ತದೆ. ಯಾವುದೂ ಅವಳಿಗೆ ಹೊಸದಲ್ಲ ಹಾಗೂ ಯಾವುದೂ ಅವಳನ್ನು ಎಕ್ಸೈಟ್ ಮಾಡುವುದಿಲ್ಲ. ತೆರೆಯಾಚೆಗೂ ಆಕೆಯ ಹಾವಭಾವ ಇನ್ಯಾರೋ ಬರೆದ ಸ್ಕ್ರಿಪ್ಟ್ ನಂತಿರುತ್ತದೆ. ಸಂಬಂಧಗಳು ಅನ್ನುವುದು ಆಕೆ ಅಥವಾ ಆತನ ಮಟ್ಟಿಗೆ ತಾವರೆಯ ಮೇಲಿನ ಬಿಂದುವಿನಂತೆ. ಹಾಗಾದಾಗ ಮದುವೆ ಅನ್ನುವುದು ಆಕೆಗೆ ಹೊಸದೇನನ್ನೂ ನೀಡುವುದಿಲ್ಲ. ವಾಸ್ತವದಲ್ಲಿ ಮದುವೆ ಅನ್ನುವುದು ಹೊಂದಾಣಿಕೆಯನ್ನು ಬೇಡುತ್ತದೆ, ಅಲ್ಲೊಂದು ಕಮಿಟ್ ಮೆಂಟ್ ಇರಬೇಕಾಗುತ್ತದೆ, ಅದನ್ನು ಗಂಡಹೆಂಡತಿ ಇಬ್ಬರೂ ಹಂಚಿಕೊಳ್ಳಬೇಕಾಗುತ್ತದೆ. ಕಮಿಟ್ ಮೆಂಟ್ ಅನ್ನುವ ಪದದೊಳಗೆ ಮನೆ, ಮಕ್ಕಳು, ಅವರಿಗೋಸ್ಕರ ಮೀಸಲಾಗಿಡುವ ಸಮಯ ಎಲ್ಲವೂ ಅಡಕವಾಗಿರುತ್ತದೆ. ಆಫೇರ್ ಅನ್ನುವುದು ದಿನಗಳಿಗೆ ಸಂಬಂಧಿಸಿದ್ದು, ಮದುವೆ ಅನ್ನುವುದು ಇಡೀ ಜನುಮಕ್ಕೆ ಸಂಬಂಧಿಸಿದ್ದು. ಸಿಲೆಬ್ರಟಿ ಸೋಲುವುದು ಇಲ್ಲೇ.

bhavya, om prakash

ಹಾಗಿದ್ದರೂ ಸಿನಿಮಾದವರು ಮದುವೆಯಾಗುತ್ತಾರೆ. ಯಾಕೆಂದರೆ ಅವರು ನಮ್ಮನಿಮ್ಮಂತೆ ಮನುಷ್ಯರು. ಅವರಿಗೂ ತಮ್ಮದೇ ಆದ ಸಂಸಾರವಿರಬೇಕು, ಮನೆ ಮಕ್ಕಳಿರಬೇಕು ಅನ್ನುವ ಆಸೆಯಿರುತ್ತದೆ. ಕೆಲವರು ಪ್ರೀತಿಸಿ ಮದುವೆಯಾಗುತ್ತಾರೆ, ಮಿಕ್ಕವರು ಯೋಚಿಸಿ ಮದುವೆಯಾಗುತ್ತಾರೆ. ಪ್ರೀತಿಸಿ ಮದುವೆಯಾಗುವವರ ಆಯ್ಕೆ ಹೆಚ್ಚಾಗಿ ಸಿನಿಮಾದವರೇ ಆಗಿರುತ್ತಾರೆ, ಯೋಚಿಸಿ ಮದುವೆಯಾಗುವವರು ಶ್ರೀಮಂತ ಉದ್ಯಮಿಯನ್ನೋ ರಾಜಕಾರಣಿಯನ್ನೋ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಆಮೇಲೆ ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ. ತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಅಂತ ಹಠ ಮಾಡಿದರೆ ಆ ಮದುವೆ ಮುರಿದುಹೋಗುವ ಸಾಧ್ಯತೆ ನೂರಕ್ಕೆ ತೊಂಭತ್ತೊಂಭತ್ತು ಪರ್ಸೆಂಟು. ನಿರ್ದೇಶಕ ಓಂ ಪ್ರಕಾಶ್ ರಾವ್ ಮೂರು ಮದುವೆಯಾಗಿದ್ದಾರೆ.

ನಟ-ನಟಿಯರು ಮದುವೆಯಾದರೆ ಸುದ್ದಿಯಾಗುತ್ತದೆ, ಟೀವಿ ಚಾನೆಲ್ಲುಗಳು ಕೆಲವು ಮದುವೆಗಳನ್ನು ನೇರಪ್ರಸಾರ ಮಾಡುವುದೂ ಉಂಟು. ಅದೇ ನಟ-ನಟಿ ಡಿವೋರ್ಸ್ ಪಡೆದರೆ ಅದಕ್ಕಿಂತ ದೊಡ್ಡ ಸುದ್ದಿಯಾಗುತ್ತದೆ. ಈ ಬಾರಿ ಟೀವಿ ಚಾನೆಲ್ಲುಗಳು ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿ ಡಿಸ್ಕಷನ್ ನಡೆಸುತ್ತವೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತವೆ. ವೀಕ್ಷಕರಿಗೆ ಮದುವೆಯೂ ಒಂದು ಮನರಂಜನೆ, ಡಿವೋರ್ಸ್ ಕೂಡಾ ಒಂದು ಮನರಂಜನೆ. “ನಾನು ಆವತ್ತೇ ಹೇಳಿಲ್ವಾ, ಅವರಿಬ್ಬರಿಗೆ ಸರಿಹೋಗೋ ಚಾನ್ಸೇ ಇಲ್ಲಾಂತ”ಎಂದು ಟೀವಿ ನೋಡುವ ಹೆಣ್ಮಗಳು ತಾನೆಂದೋ ನುಡಿದ ಭವಿಷ್ಯ ನಿಜವಾದ ಸಂಭ್ರಮದಲ್ಲಿ ಕೂಗುತ್ತಾಳೆ.

ಸಿನಿಮಾ ಅನ್ನುವುದು ಭ್ರಾಮಕ ಜಗತ್ತು. ಆದರೆ ಅದರಲ್ಲಿ ತಲ್ಲೀನರಾಗಿರುವ ನಟಿಗೆ ಅದು ಭಾವುಕ ಜಗತ್ತೂ ಆಗಿರಬಹುದು. ಆರಂಭದ ಉತ್ಸಾಹ, ಉನ್ಮಾದ, ಸಿಲೆಬ್ರೆಟಿಯೆಂಬ ಗೌರವಗಳನ್ನು ದಾಟಿದ ನಂತರ ಆಕೆಗೆ ಲೈಫಲ್ಲಿ ಸೆಟ್ಲ್ ಆಗೋಣ ಅಂತ ಅನಿಸುವುದಕ್ಕೆ ಶುರುವಾಗುತ್ತದೆ. ಯಾಕೆಂದರೆ ಚಿತ್ರರಂಗದಲ್ಲಿ ನಟಿಗೆ ನಿವೃತ್ತಿಯುಂಟು, ನಟನಿಗಿಲ್ಲ. ನಟಿ ಇಪ್ಪತ್ತೈದಕ್ಕೆ ವಯಸ್ಸಾದ ನಾಯಕಿಯಾಗುತ್ತಾಳೆ, ನಟ 50 ದಾಟಿದರೂ ಸೇಲೇಬಲ್ ಸ್ಟಾರ್ ಆಗಿರುತ್ತಾನೆ. ಆತನಿಗೆ ಸ್ಟಾರ್ ಪಟ್ಟ ಸಿಗುವುದೇ ನಲುವತ್ತು ದಾಟಿದ ನಂತರ. ಒಬ್ಬ ನಟಿ ಅಬ್ಬಬ್ಬಾ ಅಂದರೆ ಐದು ವರ್ಷ ಚಾಲ್ತಿಯಲ್ಲಿರಬಹುದು. ಆ ಕಾಲದಲ್ಲೇ ಆಕೆ ಜನಪ್ರಿಯತೆ ಮತ್ತು ಹಣ ಇವೆರಡನ್ನೂ ಸಂಪಾದಿಸಬೇಕು. ತನ್ನ ಕಾಲ ಮುಗಿಯುತ್ತಾ ಬಂತು ಅಂತ ಗೊತ್ತಾಗುತ್ತಿದ್ದಂತೆ ಮದುವೆಯಾಗಬೇಕು, ಇಲ್ಲಾಂದ್ರೆ ಟೀವೀ ಸೀರಿಯಲ್ಲುಗಳಲ್ಲಿ ಅಮ್ಮನೋ, ಅತ್ತಿಗೆಯೋ ಆಗಿ ಕಾಲಕಳೆಯಬೇಕು. ಅದು ಆಕೆಯ ಪಾಲಿಗೆ ಹಿಂಬಡ್ತಿ.

ಶ್ರೀದೇವಿಯಂಥ ಒಂದು ಕಾಲದ ಸಿಡಿಲತೊಡೆಯ ಸುಂದರಿ ತನ್ನಪ್ಪನ ವಯಸ್ಸಿನ ಬೋನಿಕಪೂರನನ್ನು ಮದುವೆಯಾದಾಗ ಎಲ್ಲರೂ ತ್ಚು ತ್ಚು ಅಂದರು. ಆಕೆಗೆ ಅವನಿಗಿಂತ ಸಾವಿರಪಟ್ಟು ಯೋಗ್ಯನಾದ ಗಂಡ ಸಿಗುತ್ತಿರಲಿಲ್ಲವಾ ಅಂತ ಕೊರಗಿದರು. ಆದರೆ ಆಕೆ ಲೆಕ್ಕಾಚಾರ ಹಾಕಿಯೇ ಮದುವೆಯಾಗಿದ್ದಳು. ಆಕೆಯ ಓರಗೆಯ ನಟಿಯರಾದ ಅಂಬಿಕಾ, ಸರಿತಾ, ಭಾನುಪ್ರಿಯಾ ಗೌತಮಿ ಇವರೆಲ್ಲರೂ ಎಡವಿದ್ದರು. ಅವರ್ಯಾರ ಮದುವೆಗಳೂ ಬರ್ಖತ್ತಾಗಲಿಲ್ಲ. ಜ್ಯೂಲಿ ಲಕ್ಷ್ಮಿ ಮೂರು ಸಾರಿ ಮದುವೆಯಾದರು, ಹಾಗಿದ್ದೂ ತನ್ನ ಘನತೆಯನ್ನು ಉಳಿಸಿಕೊಂಡರು. ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಳೆಯ ಗಂಡನನ್ನು ಜರೆಯುತ್ತಾ ಹೊಸ ಸಂಬಂಧಕ್ಕಾಗಿ ಹಾತೊರೆಯುವ ಮಂದಿ ಇಲ್ಲಿದ್ದಾರೆ, ಇನ್ನೊಮ್ಮೆ ಮದುವೆಯಾಗುವ ತಪ್ಪು ಮಾಡಲಾರೆ ಅನ್ನುತ್ತಾ ಆಧ್ಯಾತ್ಮದತ್ತ ಹೊರಳಿದವರೂ ಇದ್ದಾರೆ, ಗಂಡ ಮತ್ತೊಬ್ಬಳ ತೆಕ್ಕೆಯತ್ತ ಜಾರುತ್ತಿದ್ದಾನೆ ಅನ್ನುವ ಸುಳಿವು ಸಿಕ್ಕಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವ ಪುಷ್ಕರ್ ಗಳೂ ಇಲ್ಲಿದ್ದಾರೆ.

ಅಷ್ಟಕ್ಕೂ ವಿಚ್ಛೇದನ ಅನ್ನುವುದು ಬಿಡುಗಡೆಯೋ ಅಥವಾ ಹೊಸಬದುಕಿಗೆ ಮುನ್ನುಡಿಯೋ ಅನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಯಾವ ಸೆಲಬ್ರಟಿಗೂ ಸಾಧ್ಯವಾಗಿಲ್ಲ. ಬೇರೆಯವರು ಬರೆದ ಸ್ಕ್ರಿಪ್ಟ್ ಗೆ ನಟಿಸಿ ಅಭ್ಯಾಸವಾದವರಿಗೆ ತಮ್ಮ ಬದುಕಿನ ಸ್ಕ್ರಿಪ್ಟು ಬರೆಯುವುದಕ್ಕಾಗುವುದಿಲ್ಲ. ತೊರೆಯುವುದು ಅಂದರೆ ಮರೆಯುವುದು ಅಂತ ಅಂದುಕೊಂಡವರಿಗೆ ಬದುಕು ಸಲೀಸು.

Also See

Stars Wedding Images - View

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.