ಸಿಲ್ಕ್ ಸ್ಮಿತಾಗೆ ಒಂದೇ ಒಂದ್ ಅವಾರ್ಡ್ ಬರಲಿಲ್ಲ . ಸಿಲ್ಕ್ ಸ್ಮಿತಾಳ ಪಾತ್ರ ಮಾಡಿದವಳಿಗೆ ಪದ್ಮಶ್ರೀ..!
ಫೇಸ್ ಬುಕ್ಕಲ್ಲಿ ಇಂಥಾದ್ದೊಂದು ಕಾಮೆಂಟು ಮಾಡಿದವರು ‘ಫೇಸ್ ಬುಕ್ ಸ್ಟಾರ್’ನವೀನ್ ಸಾಗರ್. ಹಾಸ್ಯ, ವ್ಯಂಗ್ಯ ಮತ್ತು ವಿಷಾದ – ಈ ಮೂರು ಭಾವಗಳನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ನವೀನ್ ಪ್ರತಿಭೆಯನ್ನು ಮೆಚ್ಚಿಕೊಳ್ಳಲೇಬೇಕು. ಈ ಕಾಮೆಂಟು ಇನ್ನೊಂದು ಸ್ವಾರಸ್ಯಕರ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ. ಕೇಂದ್ರ ಸರ್ಕಾರ ಪದ್ಮಶ್ರೀಯಂಥಾ ಪ್ರಶಸ್ತಿಯನ್ನು ನೀಡುವುದು ಒಬ್ಬ ನಟ ಅಥವಾ ನಟಿಯ ಒಟ್ಟಾರೆ ಪ್ರತಿಭೆಗೋ ಅಥವಾ ಆತ ನಿರ್ವಹಿಸಿದ ಒಂದು ಪಾತ್ರಕ್ಕೋ. ವಿದ್ಯಾಬಾಲನ್ ಅವರಿಗೆ ‘ಡರ್ಟಿ ಪಿಕ್ಚರ್’ಚಿತ್ರದ ನಟನೆಗಾಗಿ ಪದ್ಮಶ್ರೀ ನೀಡಲಾಗಿದೆ ಎಂದೇನೂ ಆಯ್ಕೆ ಸಮಿತಿ ಘೋಷಿಸಿಲ್ಲ, ಅದೇ ರೀತಿ ಅವರ ಜೀವಮಾನದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನಾವು ಅಂದುಕೊಳ್ಳುವ ಹಾಗೂ ಇಲ್ಲ. ಯಾಕೆಂದರೆ ಈಕೆ ನಿನ್ನೆಮೊನ್ನೆ ಉದ್ಭವವಾದ ನಟಿ.
ಇದೇ ‘ಡರ್ಟಿ ಪಿಕ್ಚರ್’ಚಿತ್ರದ ನಟನೆಗೆ ಫಿಲಂಫೇರ್ ಅಥವಾ ಇನ್ನಾವುದೇ ಖಾಸಗಿ ಪ್ರಶಸ್ತಿಗೆ ವಿದ್ಯಾ ಬಾಲನ್ ಭಾಜನರಾಗಿದ್ದರೆ ನಮ್ಮದೇನೂ ತಕರಾರು ಇರುತ್ತಿರಲಿಲ್ಲ. ಯಾಕೆಂದರೆ ಜನಪ್ರಿಯತೆಯನ್ನೇ ಮಾನದಂಡವಾಗಿಸಿಕೊಂಡು ನಿರ್ಧಾರವಾಗುವ ಪ್ರಶಸ್ತಿಗಳವು. ಪದ್ಮಶ್ರೀ ಅಂಥಾ ಪ್ರಶಸ್ತಿಯಲ್ಲ, ಅದಕ್ಕೊಂದು ವಿಶೇಷ ಮೌಲ್ಯವಿದೆ, ಪಾವಿತ್ರ್ಯವೂ ಇದೆ, ಕೇಂದ್ರಸರ್ಕಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಮೂರು ಅತ್ಯುನ್ನತ ಪ್ರಶಸ್ತಿಗಳಲ್ಲಿ ಅದೂ ಒಂದು. ಗುಂಪಿನಲ್ಲಿ ಯಾವುದೋ ಮುಖ ಚಂದ ಕಾಣಿಸಿತು ಅಂದಾಕ್ಷಣ ಅದನ್ನು ಕರೆದು ಆ ಮುಖಕ್ಕೆ ಪದ್ಮಶ್ರೀ ಲೇಬಲ್ ಹಚ್ಚುವ ಹಾಗಿಲ್ಲ. ತಾರ್ಕಿಕವಾಗಿ ವಾದಿಸುವುದಾದರೆ ವಿದ್ಯಾ ಬಾಲನ್ ಗೆ ಪದ್ಮಶ್ರೀ ಸಿಗುತ್ತದೆ ಅನ್ನೋ ಹಾಗಾದರೆ ಸಿಲ್ಕ್ ಸ್ಮಿತಾಗೂ ಈ ಪ್ರಶಸ್ತಿ ಆಕೆ ಬದುಕಿರುವಾಗ ಸಿಗಬೇಕಾಗಿತ್ತು.
ಭಾರತದ ಪ್ರಜೆಗಳ ಕರ್ಮ ನೋಡಿಃ ವಿದ್ಯಾಬಾಲನ್ ಅಂದಕೂಡಲೇ ರಸಿಕರಿಗೆ ಆಕೆಯ ಹೊಕ್ಕಳ ಗುಳಿ ಅಥವಾ ಎದೆಯ ಸೀಳು ಕಣ್ಣ ಮುಂದೆ ಬರುತ್ತಿತ್ತು, ಇನ್ನು ಮುಂದೆ ಅದರ ಜೊತೆಗೇ ಪದ್ಮಶ್ರೀ ಅನ್ನುವ ಪದವಿಯೂ ನೆನಪಾಗಬೇಕು. ಯಾವುದೋ ಬಾರ್ ಅಂಡ್ ರೆಸ್ಟಾರೆಂಟಿಗೆ ಮಹಾತ್ಮನ ಹೆಸರಿಟ್ಟ ಹಾಗೆ.
ನವೀನ್ ಸಾಗರ್ ಬರೆದ ಕಾಮೆಂಟು ಬೆನ್ನಿಗೇ ‘ಮಿರರ್’ಪತ್ರಿಕೆಯಲ್ಲಿ ಪದ್ಮಪ್ರಶಸ್ತಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಯಗಳ ಬಗ್ಗೆ ಮಿತ್ರ ಶ್ಯಾಮ್ ಬರೆದ ಮತ್ತೊಂದು ಲೇಖನ ಓದಿದೆ. ‘ಛೆ, ನಾನು ಹೇಳಬೇಕಾಗಿರುವುದನ್ನೆಲ್ಲಾ ಈ ಮನುಷ್ಯನೇ ಬರೆದುಬಿಟ್ಟನಲ್ಲಾ’ಎಂದು ಕೋಪವೂ ಬಂತು. ಹಾಗಾಗಿ ಶ್ಯಾಮ್ ಲೇಖನವನ್ನು ಕನ್ನಡೀಕರಿಸುತ್ತಲೇ ಈ ಲೇಖನವನ್ನು ಬರೆಯುತ್ತಿದ್ದೇನೆ, ಡಬ್ಬಿಂಗ್ ಪ್ರೇಮಿಗಳಾದರೂ ಇದನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಸಣ್ಣ ಭರವಸೆಯೊಂದಿಗೆ!
ಇದೇ ಅಂಕಣದಲ್ಲಿ ನಾನು ಹಿಂದೊಮ್ಮೆ ‘ಪ್ರಶಸ್ತಿಗಳು ಮಾರಾಟಕ್ಕಿವೆ’ಎಂಬ ಲೇಖನ ಬರೆದಿದ್ದೆ. ಅದರಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಹಂಚಿಕೆಯಲ್ಲಾಗುವ ವ್ಯವಹಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಈಗ ನೋಡಿದರೆ ಪದ್ಮಪ್ರಶಸ್ತಿಗಳೂ ಅದಕ್ಕಿಂತ ಏನೂ ಭಿನ್ನವಾಗಿಲ್ಲ ಅನ್ನುವುದು ರುಜುವಾತಾಗಿದೆ. ಅಷ್ಟಕ್ಕೂ ಪದ್ಮಪ್ರಶಸ್ತಿಗಳ ಆಯ್ಕೆಗೆ ಕೇಂದ್ರಸರ್ಕಾರ ಅನುಸರಿಸುತ್ತಿರುವ ಮಾನದಂಡವೇನು?
ಕಲೆ, ಶಿಕ್ಷಣ, ಉದ್ಯಮ, ವಿಜ್ಞಾನ, ಕ್ರೀಡೆ, ವೈದ್ಯಲೋಕ, ಸಾಮಾಜಿಕ ಸೇವೆ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಬೇಕು ಅನ್ನುವುದು ನಿಯಮ. ಹಾಗಿದ್ದರೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಈ ಮೂರು ಪ್ರಶಸ್ತಿಗಳ ನಡುವಿರುವ ವ್ಯತ್ಯಾಸವೇನು?ಮೇಲೆ ಹೇಳಲಾದ ಯಾವುದೇ ಒಂದು ಕ್ಷೇತ್ರದಲ್ಲಿ ವಿಶಿಷ್ಟ ಸೇವೆ (distinguishedservice) ಸಲ್ಲಿಸಿದವರಿಗೆ ಪದ್ಮಶ್ರೀ, ಉನ್ನತ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದ್ಮಭೂಷಣ ಮತ್ತು ಅಪರೂಪದ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಂದರೆ ಈ ಮೂರು ಪ್ರಶಸ್ತಿಗಳ ನಡುವೆ ಅಂಥಾದ್ದೇನೂ ವ್ಯತ್ಯಾಸ ಕಾಣಿಸುವುದಿಲ್ಲ. ಇದೊಂದು ರೀತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಬಡ್ತಿ ನೀಡಿದಂತೆ. ಪೇದೆ, ಸಬ್ ಇನ್ ಸ್ಪೆಕ್ಟರ್ ಮತ್ತು ಇನ್ ಸ್ಪೆಕ್ಟರ್ ಥರ. ಕಮಿಷನರ್ ಪದವಿಯನ್ನು ಭಾರತ ರತ್ನ ಪುರಸ್ಕಾರಕ್ಕೆ ಹೋಲಿಸಬಹುದೇನೋ..
ಪದ್ಮಪುರಸ್ಕಾರಗಳ ಆಯ್ಕೆ ಸಮಿತಿಯಲ್ಲಿ ಯಾರ್ಯಾರಿರುತ್ತಾರೆ? ಕ್ಯಾಬಿನೆಟ್ ಕಾರ್ಯದರ್ಶಿಯ ನಾಯಕತ್ವದಲ್ಲಿ ರಾಷ್ಟ್ರಪತಿಗಳ ಕಾರ್ಯದರ್ಶಿ ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಸಮಿತಿಯಲ್ಲಿರುತ್ತಾರೆ. ಎಲ್ಲಾ ರಾಜ್ಯಗಳಿಂದ ಬಂದ 500 ಜನರ ಹೆಸರುಗಳು ಅವರ ಮುಂದಿರುತ್ತದೆ, ಆ ಪೈಕಿ 150 ಜನರ ಹೆಸರನ್ನು ಅಂತಿಮಗೊಳಿಸಿ ಪ್ರಧಾನಿಯ ಮುಂದಿಡಲಾಗುತ್ತದೆ. ರಾಷ್ಟ್ರಪತಿಗಳಿಗೂ ಹಸ್ತಕ್ಷೇಪ ಮಾಡುವುದಕ್ಕೆ ಅಧಿಕಾರವಿದೆ. ಇಷ್ಟೆಲ್ಲಾ ಆಗಿಯೂ ವಿದ್ಯಾಬಾಲನ್ ಗೆ ಪದ್ಮಶ್ರೀ ಸಿಗುತ್ತದೆ ಅನ್ನುವುದು ಪವಾಡವಲ್ಲದೇ ಇನ್ನೇನು.
ಸೇವೆ ಅನ್ನುವುದು ನಿರಂತರ ಆಗಿರುವುದರಿಂದ ನಿನ್ನೆ ಪದ್ಮಶ್ರೀ ಪಡೆದವನು ನಾಳೆ ಪದ್ಮಭೂಷಣ ಪಡೆಯಬಹುದು, ನಾಡಿದ್ದು ಪದ್ಮವಿಭೂಷಣನೂ ಆಗಬಹುದು. ಗುಮಾಸ್ತನಾಗಿ ಸರ್ಕಾರಿ ಕೆಲಸಕ್ಕೆ ಸೇರಿದವನು ಆಫೀಸರ್ ಆಗಿ ನಿವೃತ್ತನಾಗುವ ಥರ. ಕೆಲವೊಮ್ಮೆ ಪ್ರತಿಭೆಗಿಂತ ವಯಸ್ಸು ಮತ್ತು ಅನುಭವವೇ ಮಾನದಂಡವಾಗುವುದೂ ಉಂಟು. ಅಫ್ ಕೋರ್ಸ್, ಅಧಿಕಾರದಲ್ಲಿರುವ ಪಕ್ಷಕ್ಕೆ ಹತ್ತಿರವಾಗಿರುವವರಿಗೆ ಇದ್ಯಾವುದೂ ಅನ್ವಯವಾಗುವುದಿಲ್ಲ.
ಉದಾಹರಣೆಗೆ ಅಮಿತಾಬ್ ಬಚ್ಚನ್ ಅವರಿಗೆ 2001ನೇ ಇಸ್ವಿಯಲ್ಲೇ ಪದ್ಮಭೂಷಣ ಪುರಸ್ಕಾರ ನೀಡಲಾಯಿತು. ಆಗ ಅವರಿಗೆ ಹಿಂದಿ ಚಿತ್ರರಂಗದಲ್ಲಿ 31 ವರ್ಷ ಸರ್ವೀಸಾಗಿತ್ತು, ಒಂದೇ ಒಂದು ರಾಷ್ಟ್ರ ಪ್ರಶಸ್ತಿ ಅವರಿಗೆ ಸಿಕ್ಕಿತ್ತು. ಕಮಲಾಹಾಸನ್ ಅವರಿಗೆ 2014ರಲ್ಲಿ ಅಂದರೆ ಈ ವರ್ಷ ಪದ್ಮಭೂಷಣ ಪುರಸ್ಕಾರ ನೀಡಲಾಗಿದೆ. ಅವರದು 55 ವರ್ಷಗಳ ಸುದೀರ್ಘ ನಟನಾ ಬದುಕು, ಪಂಚಭಾಷಾ ನಟ, ನಿರ್ಮಾಪಕ ಮತ್ತು ನಿರ್ದೇಶಕ ಎಂಬ ಹೆಗ್ಗಳಿಕೆಯೂ ಜೊತೆಗಿದೆ. 4 ಬಾರಿ ರಾಷ್ಟ್ರಪ್ರಶಸ್ತಿ, 16 ಬಾರಿ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದಾರೆ. ಹಾಗಿದ್ದೂ ಅಮಿತಾಬನಿಗೆ ಪದ್ಮಭೂಷಣ ದೊರಕಿದ 12 ವರ್ಷದ ನಂತರ ಕಮಲಾಹಾಸನ್ ಗೆ ಅದೇ ಪುರಸ್ಕಾರ ಸಿಗುತ್ತದೆ. ಪಾಪ, ಇಲ್ಲಿತನಕ ಕಮಲಾಹಾಸನ್, ತನಗಿಂತ ಎಲ್ಲಾ ರೀತಿಯಲ್ಲೂ ಕಿರಿಯರಾದ ಸೈಫ್ ಆಲಿ ಖಾನ್, ಅಕ್ಷಯ ಕುಮಾರ್ ಥರದ ನಟರ ಜೊತೆ ಪದ್ಮಶ್ರೀ ಪ್ರಶಸ್ತಿಯನ್ನು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಇದರ ಅರ್ಥ ಏನು?ದಕ್ಷಿಣ ಭಾರತದವರಿಗೆ ಪದ್ಮಪುರಸ್ಕಾರಗಳ ಹಂಚಿಕೆಯಲ್ಲಿ ಅನ್ಯಾಯ ಆಗುತ್ತಿದೆ ಎಂದೇ ಅಥವಾ ರಾಜಕೀಯ ಕಾರಣಗಳಿಗೋಸ್ಕರ ಈ ಪ್ರಶಸ್ತಿಗಳು ಬಿಕರಿ ಆಗುತ್ತಿವೆ ಎಂದೇ? ಕೇಂದ್ರಸರ್ಕಾರವೇಉತ್ತರ ಹೇಳಬೇಕು. ಅಮಿತಾಬ್ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಪ್ತರಾಗಿದ್ದರು ಅನ್ನುವುದು ಬಾಟಮ್ ಲೈನ್.
ಕಳೆದ ಐದು ವರ್ಷಗಳಲ್ಲಿ ಸರ್ಕಾರ ಒಟ್ಟು 38 ಜನರಿಗೆ ಪದ್ಮವಿಭೂಷಣ ಪ್ರಶಸ್ತಿ, 155 ಜನರಿಗೆ ಪದ್ಮಭೂಷಣ ಮತ್ತು 416 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಗೊತ್ತಿದ್ದವರು, ಎಲ್ಲೋ ಹೆಸರು ಕೇಳಿದ ಹಾಗಿದೆ ಅನ್ನುವವರು ಮತ್ತು ತೀರಾ ಅಪರಿಚಿತರು ಅಂತ ಪ್ರಶಸ್ತಿ ವಿಜೇತರನ್ನು ಮೂರು ವಿಭಾಗಗಳಲ್ಲಿ ಕೂರಿಸಬಹುದು. ಸಿನಿಮಾದವರೇ ಯಾಕೆ ಪದ್ಮಪುರಸ್ಕಾರ ಪಡೆಯುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಅನ್ನುವುದು ಚಿದಂಬರ ರಹಸ್ಯವೇನಲ್ಲ. ಅವರಿಗೆ ಪ್ರಶಸ್ತಿ ಕೊಟ್ಟರೆ ಅವರ ಹಿಂದಿರುವ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಸಂಪಾದಿಸಬಹುದು ಮತ್ತು ಅವರೆಲ್ಲಾ ವೋಟ್ ಬ್ಯಾಂಕುಗಳಾಗಿ ಪರಿವರ್ತಿತರಾಗಬಹುದು ಅನ್ನೋ ಲೆಕ್ಕಾಚಾರ ಇದರ ಹಿಂದಿದೆ. ಹಾಗಂತ ತೋಟತಾರಿಣಿಗಾಗಲಿ, ಕಮಲ ಹಾಸನ್ ಅವರಿಗಾಗಲೀ ಈ ಪ್ರಶಸ್ತಿ ಬಂದಾಗ ನಾವು ಯಾರೂ ಬೇಜಾರು ಮಾಡಿಕೊಳ್ಳುವುದಿಲ್ಲ. ಯೋಗ್ಯರಿಗೆ ಕೊಟ್ಟಿದ್ದಾರೆ ಅಂತ ಸಂತೋಷಪಡುತ್ತೇವೆ. ಆದರೆ ಸೈಫ್ ಆಲಿ ಖಾನ್ ನಂಥಾ ಒಬ್ಬ ಆರ್ಡಿನರಿ ನಟನಿಗೆ ಪದ್ಮಶ್ರೀ ಬಂದಾಗ ಹೊಟ್ಟೆ ಉರಿಯೋದಿಲ್ವಾ? ರೇಖಾಳಂಥಾ ಹಿರಿಯ ಪ್ರಬುದ್ಧ ನಟಿಯೊಂದಿಗೇ ಈ ಕಮರ್ಷಿಯಲ್ ನಟ ಪ್ರಶಸ್ತಿ ಪಡೆಯುತ್ತಾನೆ ಅನ್ನುವುದು ನಾಚಿಕೆಗೇಡಿನ ಸಂಗತಿ. ಇಲ್ಲಿತನಕ ಒಂದೇ ಒಂದು ಅರ್ಥಪೂರ್ಣ ಚಿತ್ರದಲ್ಲಿ ಈತ ನಟಿಸಿಲ್ಲ. ಕರೀನಾ ಕಪೂರ್ ಜೊತೆಗಿನ ಆತನ ಅಫೇರ್ ಹಾಗೂ ಅವರಿಬ್ಬರೂ ಸಾರ್ವಜನಿಕಸ್ಥಳಗಳಲ್ಲಿ ಆಡಿದ ಹುಚ್ಚಾಟಗಳನ್ನು ಮೆಚ್ಚಿ ಕೇಂದ್ರಸರ್ಕಾರ ಈ ಪ್ರಶಸ್ತಿ ನೀಡಿರಬಹುದೇನೋ!
ಅಂದಹಾಗೆ ಸೈಫ್ ತಂದೆ ಹಾಗೂ ಕ್ರಿಕೆಟಿಗ ಮನ್ಸೂರ್ ಆಲಿಖಾನ್ ಪಟೌಡಿ ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು (1967), ಅನಂತರ ಇದೇ ಪಟೌಡಿ ಕರಿಚಿಗರೆಗಳ ಬೇಟೆಯಾಡಿದ ಆರೋಪದಲ್ಲಿ ಸಿಲುಕಿದ್ದರು. ಅವರ ವಿರುದ್ಧ ಕೇಸ್ ಕೂಡಾ ದಾಖಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅವರಿಗೆ ಕೊಟ್ಟ ಪ್ರಶಸ್ತಿಯನ್ನು ವಾಪಸ್ ಪಡೆಯುವ ಬಗ್ಗೆ ಚಕಾರವೆತ್ತಲಿಲ್ಲ. ಈಗ ಮರಿ ನವಾಬನ ಸರದಿ. ನಾಳೆ ಇರ್ಮಾನ್ ಖಾನ್ ಎಂಬ ಚೋಟುದ್ದ ನಟನಿಗೂ ಪದ್ಮಶ್ರೀ ಸಿಕ್ಕಲ್ಲಿ ನಾವು ಆಶ್ಚರ್ಯ ಪಡಬೇಕಾಗಿಲ್ಲ. ಪದ್ಮಪುರಸ್ಕಾರ ಪ್ರಶಸ್ತಿಗಳ ಪಟ್ಟಿಯಲ್ಲಿ ಹಿಂದಿ ಚಿತ್ರರಂಗದವರ ದರ್ಬಾರು ಹೇಗಿದೆ ಅಂದರೆ ಕಳೆದ ಮೂರು ವರ್ಷದಲ್ಲಿ ಸೈಫ್ ಆಲಿ ಖಾನ್, ಇರ್ಫಾನ್ ಖಾನ್, ಕಾಜಲ್, ಪ್ರಿಯದರ್ಶನ್, ಶ್ರೀದೇವಿ ಮೊದಲಾದವರಿಗೆ ಪದ್ಮಶ್ರೀ ಸಿಕ್ಕಿದೆ. ಕನ್ನಡದ ಒಬ್ಬನೇ ಒಬ್ಬ ನಟನಿಗಾಗಲೇ, ನಟಿಗಾಗಲೀ ಈ ಭಾಗ್ಯ ಸಿಕ್ಕಿಲ್ಲ. ಸೈಫ್ ಆಲಿ ಖಾನ್ ನ್ನು ಅದ್ಭುತ ನಟ ಎಂದು ಕೇಂದ್ರ ಸರ್ಕಾರ ಪರಿಗಣಿಸುವುದಾದಲ್ಲಿ ನಮ್ಮವರೇ ಆದ ಶಿವರಾಜ್ ಕುಮಾರ್, ರವಿಚಂದ್ರನ್ ಅವರೇನು ತಪ್ಪು ಮಾಡಿದ್ದಾರೆ? ಅಥವಾ ನಮ್ಮ ರಾಜ್ಯ ಸರ್ಕಾರವೇ ಅವರ ಹೆಸರುಗಳನ್ನು ಶಿಫಾರಸು ಮಾಡಿಲ್ಲವಾ?
ಹಿರಿತನದ ಪ್ರಶ್ನೆ ಬಂದಾಗ ವಿಷ್ಣುವರ್ಧನ್ ನೆನಪಾಗುತ್ತಾರೆ. ನಿಜಕ್ಕೂ ಪದ್ಮಭೂಷಣ ಪ್ರಶಸ್ತಿಗೇ ಯೋಗ್ಯರಾದವರು ಅವರು. ಆದರೆ ಅವರಿಗೆ ಪದ್ಮಶ್ರೀ ಕೂಡಾ ಸಿಗಲಿಲ್ಲ. ಈಗ ಭಾರತಿ ವಿಷ್ಣುವರ್ಧನ್ ಅವರನ್ನು ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ಅವಮಾನಿಸುತ್ತಿದೆ. ಈ ಬಾರಿ ರಾಜ್ಯ ಸರ್ಕಾರ ಭಾರತಿ ಹೆಸರನ್ನು ಪದ್ಮಶ್ರೀಗಾಗಿ ಶಿಫಾರಸು ಮಾಡಿತ್ತು. ಆದರೆ ಆಯ್ಕೆಸಮಿತಿ ಕುರುಡಾಗಿತ್ತು. ಡಬ್ಬಿಂಗ್ ಗಲಾಟೆಯಲ್ಲಿ ಮುಳುಗಿರುವ ಚಿತ್ರೋದ್ಯಮಕ್ಕಾಗಲಿ, ಫೇಸ್ ಬುಕ್ ಧೀರರಿಗಾಗಲಿ ಇದು ದೊಡ್ಡ ಸಂಗತಿ ಅನಿಸಲೇ ಇಲ್ಲ. ಹಾಗೆ ನೋಡಿದರೆ ಪದ್ಮಪುರಸ್ಕಾರಗಳನ್ನು ಪಡೆಯುವಲ್ಲಿ ಅತ್ಯಂತ ನಿರಾಶಾದಾಯಕ ಸಾಧನೆ ಕರ್ನಾಟಕದ್ದು. ಹಾಗಂದ ಮಾತ್ರಕ್ಕೆ ಕನ್ನಡಿಗರು ಯಾವ ಕ್ಷೇತ್ರದಲ್ಲೂ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ ಎಂದು ಅರ್ಥವೇ?ಕಳೆದ 5 ವರ್ಷಗಳಲ್ಲಿ ರಾಜ್ಯ ಸರ್ಕಾರ 158 ಜನರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಕೇಂದ್ರಸರ್ಕಾರ ರೂಪಿಸಿದ್ದ ಆಯ್ಕೆ ಸಮಿತಿ ಕೇವಲ ಹತ್ತು ಜನರನ್ನಷ್ಟೇ ಪರಿಗಣಿಸಿ, ಮಿಕ್ಕವರನ್ನು ತನ್ನಿಷ್ಟಕ್ಕೆ ಬಂದಂತೆ ಆಯ್ಕೆ ಮಾಡಿತ್ತು. ಕೆಲವರ ಹೆಸರುಗಳನ್ನು ಸತತವಾಗಿ ಶಿಫಾರಸು ಮಾಡಿದರೂ ಕೇಂದ್ರ ಸಮಿತಿ ಜಾಣಕುರುಡನ್ನು ಪ್ರದರ್ಶಿಸಿತ್ತು. ಈ ವರ್ಷ 6 ಕನ್ನಡಿಗರಿಗೆ ಪದ್ಮ ಪುರಸ್ಕಾರ ಸಿಕ್ಕಿದ್ದರೂ ಈ ಪೈಕಿ ರಾಜ್ಯ ಸರ್ಕಾರ ಶಿಫಾರಸು ಮಾಡಿದ ಒಂದೇ ಒಂದು ಹೆಸರು ಪಟ್ಟಿಯಲ್ಲಿಲ್ಲ. ಕಳೆದ 5 ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು ಅನ್ನುವ ಸಂಗತಿಯನ್ನು ಗಣನೆಗೆ ತೆಗೆದುಕೊಂಡಾಗ ಪ್ರಶಸ್ತಿ ರಾಜಕೀಯದ ಹಿಂದಿನ ಮರ್ಮ ಅರ್ಥವಾಗುತ್ತದೆ.
ಹಾಗಿದ್ದೂ ನಮ್ಮ ಲೋಕಸಭಾ ಸದಸ್ಯರಾಗಲಿ, ಮುಖ್ಯಮಂತ್ರಿಗಳಾಗಲಿ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ. ಮನಮೋಹನ್ ಸಿಂಗ್ ಮಾತಾಡುವುದಿಲ್ಲ ಅನ್ನುವುದನ್ನೇ ನೆಪವಾಗಿಟ್ಟುಕೊಂಡು ನಾವೂ ಮೌನವಾಗಿ ಕುಳಿತರೆ ಸೈಫ್ ಆಲಿ ಖಾನ್, ವಿದ್ಯಾ ಬಾಲನ್ ಅಂಥವರು ಪದ್ಮಪುರಸ್ಕಾರಗಳನ್ನು ಇನ್ನಷ್ಟು ಡರ್ಟಿಯಾಗಿಸುತ್ತಾ ಹೋಗುತ್ತಾರೆ. ಡಬ್ಬಿಂಗ್ ಚಿತ್ರಗಳ ಪ್ರದರ್ಶನ ಶುರುವಾದರೆ ಸೈಫ್ ಆಲಿ ಖಾನ್ ಕೂಡಾ ಕನ್ನಡದ ನಟನಾಗುವುದರಿಂದ ನಾವು ಹೆಮ್ಮೆ ಪಡಲೇಬೇಕಾಗುತ್ತದೆ.
Also See
Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!
Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ
Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ
Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್
Uma Column 20 -...ವಿಷ್ಣೂ ಎನಬಾರದೇ....
Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.