` Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mungaru male pooja gandhi image
pooja gandhi image

ಹಳೇ ಕಾಲದ ದೊಡ್ಡ ಮನೆ. ಎಲ್ಲಿ ನೋಡಿದರಲ್ಲಿ  ಕಂಬಗಳು, ಶಕೀಲಾಳನ್ನು ನಾಚಿಸುವಂಥಾ ದಪ್ಪ ಬಾಗಿಲುಗಳು, ಪಕ್ಕಾ ಮಲೆನಾಡಿನ ಮನೆ ಹೇಗಿರುತ್ತದೆ ಅನ್ನುವುದನ್ನು ನಿಮಗೆ ನಾನು ವಿವರಿಸಿ ಹೇಳಬೇಕಾಗಿಲ್ಲ.   ಅದೆಷ್ಟೋ ನೂರು ವರ್ಷಗಳ ಇತಿಹಾಸ ಆ ಮನೆಗಿದೆ ಅಂತ ವರ್ಣಿಸುತ್ತಿದ್ದ ಪ್ರೊಡಕ್ಷನ್ ಮೆನೇಜರ್.  ಆ ಮನೆ ಪ್ರಕಾಶ್ ಶೆಟ್ಟಿ ಅವರದು. ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ಲಿನ ಮಾಲಿಕರವರು, ಸಕಲೇಶಪುರದಲ್ಲಿರುವ ಅವರ ಮನೆ ತಾತಮುತ್ತಾತರ ಕಾಲದಿಂದ ಬಳುವಳಿಯಾಗಿ ಬಂದಿದ್ದು. ಅಲ್ಲಿ ತನಕ ಯಾವ ಸಿನಿಮಾ ಶೂಟಿಂಗಿಗೂ ಆ ಮನೆಯನ್ನು ಕೊಟ್ಟಿರಲಿಲ್ಲವಂತೆ. ಸಿನಿಮಾದವರ ಕೈಗೆ ಮನೆ ಕೊಡುವುದು ತುಂಬಾ ಅಪಾಯಕಾರಿ ಅಂತ ಅವರಿಗೆ ಯಾರೋ ಹೇಳಿರಬೇಕು. ಒಟ್ಟಲ್ಲಿ ಮುಂಗಾರು ಮಳೆ ಚಿತ್ರದ ಶೂಟಿಂಗಿಗೆ ಅವರು ಮನೆ ಕೊಟ್ಟ ಘಳಿಗೆಯಿಂದಲೇ ಚಿತ್ರದ ಅದೃಷ್ಟ ಖುಲಾಯಿಸಿತು. ಹಾಗಂತ ಚಿತ್ರ ಗೆದ್ದಮೇಲೆ ಎಲ್ಲರೂ ಆಡಿಕೊಂಡರು. ಸಿದ್ದರಾಮಯ್ಯನವರಿಗೆ ಬೇಜಾರಾದರೂ ಪರವಾಗಿಲ್ಲ,  ಒಂದು ಚಿತ್ರದ ಯಶಸ್ಸಿನಲ್ಲಿ ಇಂಥಾ ಚಿಕ್ಕಪುಟ್ಟ ಮೂಢನಂಬಿಕೆಗಳಿಗೂ ನಾವು ಪಾಲು ಕೊಡಬೇಕು. ಅದು ಮನುಷ್ಯ ಧರ್ಮ.

sanjana gandhi, ganesh

ಹೊರಗೆ ವಿಶಾಲ ಅಂಗಳ, ಅದರಾಚೆಗೆ ಅಂಗಳವನ್ನು ಕಾಯುವುದಕ್ಕೆ ನಿಂತ ಬಾಡಿ ಗಾರ್ಡುಗಳಂತೆ  ಕಾಣಿಸುತ್ತಿದ್ದ ಅಡಿಕೆ ಮರಗಳು, ತೋಟ ದಾಟಿದರೆ ಪುಟ್ಟ ಕೆರೆ, ಗದ್ದೆ, ಬಯಲು, ಗುಡ್ಡ ಹೀಗೆ ಎಲ್ಲವೂ ಪ್ರಕೃತಿಯೆಂಬ ಶೋಕೇಸಲ್ಲಿ ನೀಟಾಗಿ ಜೋಡಿಸಿಟ್ಟ ದೇವರ ಮೂರ್ತಿಗಳಂತೆ ಕಾಣಿಸುತ್ತಿದ್ದವು. ಅಂಗಳದಲ್ಲಿ ನಾಲ್ಕೈದು ಕುರ್ಚಿಗಳನ್ನು ಹಾಕಿದ್ದರು. ಒಂದರಲ್ಲಿ ಯೋಗರಾಜ ಭಟ್ರು, ಅವರ ಎಡಗಡೆ ಕಾಮೆಡಿ ಟೈಮ್ ಗಣೇಶ, ಬಲಗಡೆ ಒಂದು ಸಾಮಾನ್ಯ ರೂಪಿನ ಅಪರಿಚಿತ ಮಹಿಳೆ. ಮುಂದೆ ಸಾಲಾಗಿ ಕುಳಿತ ಪತ್ರಕರ್ತರು, ಅನಂತ ನಾಗ್ ಒಳಗೆ ಮೇಕಪ್ಪು ಹಾಕಿಕೊಳ್ಳುತ್ತಿದ್ದರು, ಆವತ್ತಿನ ಮೊದಲ ಶಾಟ್ ಚಿತ್ರೀಕರಣಕ್ಕೆ ಇನ್ನೂ ಸ್ವಲ್ಪ ಸಮಯ ಇತ್ತು. ಹಾಗಾಗಿ ಪತ್ರಕರ್ತರ ಜೊತೆ ಮೊದಲಸುತ್ತಿನ ಮಾತುಕತೆ ನಡೆಸಿಯೇ ಬಿಡೋಣ ಅನ್ನುವ ಉಮೇದಲ್ಲಿದ್ದರು ಭಟ್ರು. ಅದೆಲ್ಲಾ ಸರಿ, ಅವರ ಪಕ್ಕದಲ್ಲಿ ಕುಳಿತ ಮಹಿಳೆ ಯಾರು. ಇಲ್ಲಿತನಕ ನಾವ್ಯಾರೂ ನೋಡದೇ ಇದ್ದ ಆ ಮುಖ ಯಾರದು. ಮುಂಗಾರುಮಳೆಯ ಬಗ್ಗೆ ಪತ್ರಿಕಾ ಪ್ರಚಾರಕರ್ತರು ಕಳಿಸಿದ ಸುದ್ದಿಗಳಲ್ಲಿ ಇ,ಕೃಷ್ಣಪ್ಪ ಎಂಬವರು ಚಿತ್ರದ ನಿರ್ಮಾಪಕರು ಎಂದೇ ಇತ್ತು. ಹಾಗಿದ್ದರೆ ಈ ಮಹಿಳೆ ಅವರ ಪಾರ್ಟ್ನರ್ ಆಗಿರಬಹುದಾ. ಆಗಿದ್ದಾಗಲಿ ಅಂತ ಭಟ್ಟರನ್ನು ಕೇಳಿಯೇ ಬಿಟ್ಟೆ. ಅವರು ಶಾಕ್ ಹೊಡೆದವರಂತೆ ಈಕೆಯೇ ನಮ್ಮ ಚಿತ್ರದ ಹೀರೋಯಿನ್ ಅಂದುಬಿಟ್ಟರು. ಈಗ ನನಗೆ ಶಾಕ್ ಹೊಡೆಯಿತು. ನಾನು ಕಣ್ಣುಜ್ಜಿಕೊಂಡು ಮತ್ತೊಂದು ಸಾರಿ ನೋಡಿದೆ , ಯಾವ angleಲ್ಲೂ ಆಕೆಯಲ್ಲಿ ನಾಯಕಿಯ ಲಕ್ಷಣಗಳು ಕಾಣಿಸಲಿಲ್ಲ. ಐ ಮೀನ್ ಕವಿಗಳು ವರ್ಣಿಸುವಂಥಾ ಬೆಂಡೆ, ತೊಂಡೆ, ಬಾಳೆ, ದಾಳಿಂಬೆಯಂಥಾ ಯಾವುದೇ ಹಣ್ಣು-ತರಕಾರಿಗಳನ್ನು ಹೋಲುವ ಅವಯವಗಳು ಆಕೆಯ ದೇಹದಲ್ಲಿರಲಿಲ್ಲ. ಮುಂಗಾರು ಮಳೆ ಒಂದು ಕಲಾತ್ಮಕ ಚಿತ್ರವಾಗಿದ್ದರೆ ಈಕೆಯನ್ನು ನಾಯಕಿ ಎಂದು ಒಪ್ಪಿಕೊಳ್ಲುವುದಕ್ಕೆ ನನ್ನದೇನೂ ತಕರಾರು ಇರುತ್ತಿರಲಿಲ್ಲ.  ಆದರೆ ಭಟ್ಟರು ಮೊದಲೇ ಹೇಳಿದ್ದರು- ಮುಂಗಾರುಮಳೆ ಭಯಂಕರ ಕಮರ್ಷಿಯಲ್ ಕರೆಂಟು ಇರುವ ಸಿನಿಮಾ ಅಂತ.  ಬಹುಶಃ ಈ ಮಹಿಳೆ ಚಿತ್ರಕ್ಕೆ ಸ್ವಲ್ಪ ಬಂಡವಾಳ ಹೂಡಿರಬೇಕು, ಆ ಮುಲಾಜಿಗೆ ಈಕೆಯನ್ನು ನಾಯಕಿಯನ್ನಾಗಿ ಹಾಕಿಕೊಂಡಿರಬೇಕು ಅಂತ ನನ್ನೊಳಗಿನ ಪತ್ರಕರ್ತನ ಕುಹಕ ಮನಸ್ಸು ಅಂದುಕೊಳ್ಳುವ ಹೊತ್ತಿಗೆ ಈ ಮಹಿಳೆ ‘ಕೊಕ್ಕಿ’ಅನ್ನುವ ತಮಿಳು ಚಿತ್ರದಲ್ಲಿ ನಟಿಸಿದ್ದಾಳೆ ಅನ್ನುವ ಮಾಹಿತಿ ಸಿಕ್ಕಿತು. ನನಗೆ ಮೊದಲಬಾರಿಗೆ ಭಟ್ಟರ ಅಭಿರುಚಿ ಮತ್ತು ಆಯ್ಕೆಯ ಬಗ್ಗೆ ಬೇಸರವಾಯಿತು.

ಈ ಮಧ್ಯೆ ಒಂದು ತಮಾಷೆಯ ಪ್ರಸಂಗ ರಿಪೀಟ್ ಆಗುತ್ತಾನೇ ಇತ್ತು. ಗೆಳೆಯ ಫೋಟೋಗ್ರಾಫರ್ ನಾಗೇಶ್ ಕುಮಾರ್ ‘ಗಾಂಧೀಜಿ ಗಾಂಧೀಜಿ’ಎಂದು ಕರೆಯುತ್ತಾ ಪೂಜಾಗಾಂಧಿಯನ್ನು  ತೋಟದ ಮಧ್ಯೆ, ಮನೆ ಜಗಲಿಯ ಮೇಲೆ ನಿಲ್ಲಿಸಿ ಕ್ಲಿಕ್ ಮಾಡುತ್ತಾನೇ ಇದ್ದರು. ‘ಯಾಕೆ ನನ್ನ ಗಾಂಧೀಜಿ ಅಂತ ಕರೀತೀರಿ”ಅಂತ ಪೂಜಾ ಆಂಗ್ಲಭಾಷೆಯಲ್ಲಿ ಪ್ರಶ್ನಿಸಿದರು. “ನಿಮ್ಮ ಕಡೆ ಪ್ರತಿಯೊಬ್ಬರ ಹೆಸರಿಗೆ ಜೀ ಅಂತ ಸೇರಿಸಿ ಕರೀತರಲ್ವಾ. ನಿಮ್ಮ ಹೆಸರು ಪೂಜಾ ಗಾಂಧಿ, ಅದಕ್ಕೇ ಗಾಂಧೀಜೀ ಎಂದು ಕರೆದೆ”ಅಂದರು ನಾಗೇಶ್ ಕುಮಾರ್. ಗಾಂಧೀಜಿ ನಕ್ಕರು, ಆಗಲೂ ಅಷ್ಟೇನೂ ಸುಂದರವಾಗಿ ಕಾಣಿಸಲಿಲ್ಲ.

ಮುಂಗಾರು ಮಳೆ ಹಿಟ್ ಆಯಿತು. ಅದು ಹಿಟ್ ಅನ್ನುವುದು ಗ್ಯಾರಂಟಿ ಆದಮೇಲೆಯೇ ಆ ಚಿತ್ರವನ್ನು ನಾನು ನೋಡಿದೆ.  ಶೂಟಿಂಗ್ ಸಂದರ್ಭದಲ್ಲಿ ನಾವು ಕಂಡ ಪೂಜಾಗಿಂತ ತೆರೆಯ ಮೇಲಿದ್ದ ಪೂಜಾ ಎಷ್ಟೋ ವಾಸಿ ಅನಿಸಿತು.   ಇದು ಛಾಯಾಗ್ರಾಹಕ ಕೃಷ್ಣರ ಕೈಚಳಕವೋ ಅಥವಾ ನನ್ನ ಭ್ರಮೆಯೋ ಗೊತ್ತಿಲ್ಲ.   ಯಾಕೆಂದರೆ ಒಂದು ಸಿನಿಮಾ ಗೆದ್ದಾಗ ಅದಕ್ಕೆ ಸಂಬಂಧಪಟ್ಟ ಎಲ್ಲಾ ಸಂಗತಿಗಳು ಚೆನ್ನಾಗಿವೆ ಅಂತಾನೇ ಅನಿಸುವುದಕ್ಕೆ ಶುರುವಾಗುತ್ತದೆ. ಆ ಮೊಲ ಎಷ್ಟು ಸೂಪರ್ರಾಗಿ ನಟಿಸಿದೆ ಅಂತ ಹೇಳಿದವರೂ ಇದ್ದರು. ಆದರೆ ಚಿತ್ರದಲ್ಲಿ ಎರಡು ಮೊಲಗಳನ್ನು ಬಳಸಿಕೊಳ್ಳಲಾಗಿತ್ತು ಅನ್ನುವುದು ಬಹಳ ಜನಕ್ಕೆ ಗೊತ್ತಿರಲಿಲ್ಲ. ಒಂದು ಸಿನಿಮಾ ಗೆದ್ದರೆ ಏನೆಲ್ಲಾ ಅಚ್ಚರಿಗಳು ಸಂಭವಿಸಬಹುದು ಅನ್ನುವುದಕ್ಕೆ ಮುಂಗಾರು ಮಳೆ ಕೂಡಾ ಒಂದು ಉದಾಹರಣೆಯಾಗಿ ನಿಲ್ಲುತ್ತದೆ. ಜೋಗ್ ಜಲಪಾತ ನೋಡುವುದಕ್ಕೆ ನೂಕುನುಗ್ಗಲು ಶುರುವಾಯಿತು, ಗಣೇಶ ಮತ್ತು ಪೂಜಾ ಗಾಂಧಿ ಕಲ್ಲಿನ ಮೇಲೆ ಮಲಗಿ ಹಾಡಿದ್ದೇ ದೊಡ್ಡ ಸಂಗತಿಯಾಗಿಆ ಕಲ್ಲಿಗೆ ಮುಂಗಾರು ಮಳೆ ಕಲ್ಲು ಎಂಬ ಹೆಸರು ಬಂತು. ಅಲ್ಲೇ ಇರುವ ಅಂಗಡಿ ಸಾಲಿನಲ್ಲಿ ಮುಂಗಾರು ಮಳೆ ಚುರುಮುರಿ, ಮುಂಗಾರು ಬಳೆ ಬಜೆ, ಬೊಂಡಾ ಮಾರುವುದಕ್ಕೂ ಶುರು ಮಾಡಿದ್ದರಂತೆ. ಇದರ ಜೊತೆಗೆ ಮುಂಗಾರು ಮಳೆ ಟೀಶರ್ಟುಗಳು, ಸೀರೆಗಳಿಗೂ ಒಳ್ಳೇ ವ್ಯಾಪಾರ ಕುದುರಿತು. ಗಣೇಶ ಅಂತ ಹೆಸರಿಟ್ಟುಕೊಂಡ ಯುವಕರಿಗೆ ಕನ್ಯಾಬಲ ಕೂಡಿಬಂದಿದ್ದರೂ ಏನೂ ಆಶ್ಚರ್ಯವಿಲ್ಲ.

pooja gandhi engagement

ಇದೆಲ್ಲಾ ಈಗ ಹಳೇ ಕತೆ. ಮೊನ್ನೆ ಡಿಸೆಂಬರ್ 30ಕ್ಕೆ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾಗಿ ಆರು ವರ್ಷ ತುಂಬಿದವು. ಜೋಗ್ ಜಲಪಾತ ನೋಡುವುದಕ್ಕೆ ಈಗ ಮೊದಲಿದ್ದ ಜನಸಂದಣಿ ಇಲ್ಲ, ಗಣೇಶ್ ಸಿನಿಮಾ ನೋಡುವುದಕ್ಕೂ ಮೊದಲಿದ್ದ ಜನಸಂದಣಿ ಇಲ್ಲ. ಮುಂಗಾರು ಮಳೆಯ ಯಶಸ್ಸಿನಲ್ಲಿ ಮತ್ತೊಬ್ಬ ದೊಡ್ಡ ಪಾಲುದಾರನಾಗಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ ಗಾಯಬ್ ಆಗಿದ್ದಾರೆ, ಜಯಂತಕಾಯ್ಕಿಣಿ ಅವರು ಹಾಡು ಬರೆಯುವುದು ಅಪರೂಪ ಆಗಿದೆ, ಸೋನುನಿಗಮ್ ಕನ್ನಡ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಕುನಾಲ್ ಗಾಂಜಾವಾಲಾ ತಮ್ಮೂರಿಗೆ ವಾಪಸ್ ಆಗಿದ್ದಾರೆ, ಅನಂತನಾಗ್ ಸೀರಿಯಲ್ಲಲ್ಲೇ ಹೆಚ್ಚು ಬಿಜಿಯಾಗಿದ್ದಾರೆ, ನಿರ್ಮಾಪಕ ಇ.ಕೃಷ್ಣಪ್ಪರ ರಾಜಕೀಯ ಬದುಕು ಅಸ್ತವ್ಯಸ್ತವಾಗಿದೆ.  ಮಳೆಹುಡುಗಿ ಪೂಜಾಗಾಂಧಿ ಆಮೇಲೆ ತೆನೆಹೊತ್ತ ಮಹಿಳೆಯಾಗಿ ಪರಿವರ್ತನೆಗೊಂಡು, ಸದ್ಯಕ್ಕೆ ತಲೆಮೇಲೆ ಕೈಹೊತ್ತ ಮಹಿಳೆಯಾಗಿದ್ದಾಳೆ. ಮೊಲ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ. ಛಾಯಾಗ್ರಾಹಕ ಕೃಷ್ಣ ಮತ್ತು ಯೋಗರಾಜ ಭಟ್ಟರು ಮಾತ್ರ ಇಂದಿಗೂ ಚಾಲ್ತಿಯಲ್ಲಿದ್ದಾರೆ. ಕೇವಲ ಆರೇ ವರ್ಷದಲ್ಲಿ ಮಿಕ್ಕವರೆಲ್ಲರೂ ಬಣ್ಣ ಕಳಕೊಂಡು ಪೇಲವವಾಗಿ ಹೋದರಾ. ಒಂದು ‘ನಾಗರಹಾವು’ಅದೆಷ್ಟು ವರ್ಷ ವಿಷ್ಣುವರ್ಧನ್ ಅವರ ವೃತ್ತಿಯನ್ನು ಜೋಪಾನವಾಗಿ ಕಾಪಾಡಿತ್ತು, ಒಂದು ‘ಬಂಗಾರದ ಮನುಷ್ಯ’ರಾಜ್ ಕುಮಾರ್ ಅವರನ್ನು ಅದೆಷ್ಟು ವರ್ಷ ಅಣ್ಣಾವ್ರ  ಸ್ಥಾನದಲ್ಲಿ ಕೂರಿಸಿತ್ತು, ಆ ಲೆಕ್ಕಾಚಾರದಲ್ಲಿ ಒಂದು ‘ಮುಂಗಾರು ಮಳೆ’ಗಣೇಶ್ ಅವರನ್ನು ಕನಿಷ್ಠ ಹತ್ತು ವರ್ಷದ ಮಟ್ಟಿಗಾದರೂ ಜನಪ್ರಿಯ ನಟನನ್ನಾಗಿ ಉಳಿಸಬೇಕಾಗಿತ್ತು. ಊಹೂಂ, ಜನರಿಗೆ ಈಗ ಅಷ್ಟೊಂದು ತಾಳ್ಮೆಯಿಲ್ಲ, ವ್ಯವಧಾನವೂ ಇಲ್ಲ.  ಕಲಾವಿದರನ್ನು ಆರಾಧಿಸುವ ಸಂಸ್ಕೃತಿಯೂ ಈಗ ಕಣ್ಮರೆಯಾಗಿದೆ. 

pooja gandhi

ಪೂಜಾ ಗಾಂಧಿಯನ್ನೇ ನೋಡಿ. ನಂಜುಂಡಿ ಕಲ್ಯಾಣ ಎಂಬ ಒಂದೇ ಚಿತ್ರ ಮಾಡಿದ ಮ್ಯಾಜಿಕ್ಕಿನಿಂದ ಮಾಲಾಶ್ರೀ ಹತ್ತಾರು ವರ್ಷ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದರು. ಆದರೆ ಪೂಜಾ ಗಾಂಧಿಗೆ ಮುಂಗಾರು ಮಳೆಯ ನಂತರ ಒಂದೇ ಒಂದು ಹಿಟ್ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಅದರ ಅರ್ಥ ತುಂಬಾ ಸರಳ. ಮುಂಗಾರು ಮಳೆಯಲ್ಲು ಕೂಡಾ ಆಕೆಯ ಜಾಗದಲ್ಲಿ ಇನ್ಯಾರೇ ನಾಯಕಿದ್ದರೂ ಚಿತ್ರದ ಫಲಿತಾಂಶ ಬದಲಾಗುತ್ತಿರಲಿಲ್ಲ. ನಾನು ಆಕೆಯ ಅಂದಚಂದದ ಬಗ್ಗೆ ಮಾತಾಡುತ್ತಿಲ್ಲ, ಯಾಕೆಂದರೆ ಆರತಿ, ಕಲ್ಪನಾ, ಮಂಜುಳಾ ಕೂಡಾ ಸುರಸುಂದರಿಯರೇನೂ ಆಗಿರಲಿಲ್ಲ. ಕೇವಲ ತಮ್ಮ ನಟನಾ ಚಾತುರ್ಯದಿಂದಲೇ ಪ್ರೇಕ್ಷಕರನ್ನು ಸೆಳೆದರು. ಪೂಜಾಗಾಂಧಿಗೂ ಅಂಥಾ ಅವಕಾಶ ಇತ್ತು, ಆಕೆ ತೀರಾ ಕೆಟ್ಟ ನಟಿಯೇನೂ ಅಲ್ಲ. ಆದರೆ ಗೆಲ್ಲಬೇಕೆನ್ನುವ ಅವಸರಕ್ಕೋ ಅಥವಾ ವಯಸ್ಸಾಗುತ್ತಿದೆ ಅನ್ನುವ ಆತಂಕಕ್ಕೋ ಏನೋ ಒಂದರ ಹಿಂದೊಂದರಂತೆ ಕೈಗೆ ಸಿಕ್ಕ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳುತ್ತಾ ಹೋದಳು. ಅವೆಲ್ಲವೂ ನೆಲಕಚ್ಚುತ್ತಾ ಹೋದಂತೆ ಹತಾಶೆ ಶುರುವಾಯಿತು, ಸೀರೆಯ ಜಾಗದಲ್ಲಿ ಸ್ವಿಮ್ ಸೂಟ್ ಬಂತು, ಎದೆಯ ಮೇಲಿನ ಬಟ್ಟೆ ಚಿಕ್ಕದಾಗುತ್ತಾ ಹೋಯಿತು. ಕೊನೆಗೆ ಐಟಂ ಸಾಂಗ್ ಮಾಡುವ ಹಂತಕ್ಕೂ ತಲುಪಿದ್ದಾಯಿತು.

ವೃತ್ತಿಬದುಕು ಪಾತಾಳದತ್ತ ಜಾರುತ್ತಿದ್ದಂತೆಯೇ ಪೂಜಾ ರಾಜಕೀಯದತ್ತ ಮುಖ ಮಾಡಿದರು. ಮೊದಲು ಜೆಡಿಎಸ್.   ಆಕೆಯನ್ನು ದಂಡು ಪಾಳ್ಯ ಕ್ವೀನ್ ಎಂದು ಆಯನೂರು ಮಂಜುನಾಥ್  ಗೇಲಿ ಮಾಡಿದರು, ಪಕ್ಷದ ನಾಯಕರ್ಯಾರೂ ಆಕೆಯ ಪರವಾಗಿ ನಿಲ್ಲಲಿಲ್ಲ. ಪೂಜಾ ಬೇಜಾರು ಮಾಡಿಕೊಂಡು ಕೆಜೆಪಿಗೆ ಜಿಗಿದರು, ಅಲ್ಲಿ ಟಿಕೆಟ್ ಸಿಗಲಿಲ್ಲ. ಪೂಜಾ ಮತ್ತೊಂದು ಲಾಗ ಹಾಕಿದರು.  ಬಿಆರ್ ಎಸ್ ಪಕ್ಷದಿಂದ ಟಿಕೆಟ್ ಸಿಕ್ಕಿದರೂ ಠೇವಣಿ ಉಳಿಸಿಕೊಳ್ಳುವುದಕ್ಕಾಗಲಿಲ್ಲ. ಈ ಮಧ್ಯೆ ಮದುವೆ ಎಂಬ ಪ್ರಹಸನ ನಡೆದುಹೋಯಿತು. ಅದು ಬರ್ಖತ್ತಾಗಲಿಲ್ಲ. ಡಾಕ್ಟರ್ ಒಬ್ಬರ ಜೊತೆ ಶರಂಪರ ಜಗಳ ಆಡಿದರು. ಅದು ಪೊಲೀಸ್ ಠಾಣೆ ಮೆಟ್ಟಲೇರಿತು.  ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಕಲ್ಪನಾ ಬದುಕಿನ ಕತೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಅಭಿನೇತ್ರಿಯಲ್ಲಿ ಪೂಜಾ ನಾಯಕಿ ಕಂ ನಿರ್ಮಾಪಕಿ. ಈಗಾಗಲೇ ರೋಚಕ ಸ್ಟಿಲ್ ಒಂದು ಬಿಡುಗಡೆಯಾಗಿದೆ, ಮುಂದೇನು ಕಾದಿದೆಯೋ ಆ ಭಗವಂತನಿಗೇ ಗೊತ್ತು.  

pooja gandhi in dandupalya

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪೂಜಾ ಗಾಂಧಿಯಷ್ಟು ಸದ್ದು ಮಾಡಿದ ಬೇರೆ ಯಾವ ನಾಯಕಿಯೂ ಸಿಗುವುದಿಲ್ಲ. ಅದು ಹತಾಶೆಯೋ, ದುರಾಸೆಯೋ, ಪರಿಸ್ಥಿತಿಯ ಅನಿವಾರ್ಯವೋ, ಅಥವಾ ಆಕೆಯ ವ್ಯಕ್ತಿತ್ವದಲ್ಲೇ ಅಡಕವಾಗಿರುವ ವಿಕ್ಷಿಪ್ತತೆಯೋ ಗೊತ್ತಿಲ್ಲ. ಆದರೆ ಈಗ ಪ್ರೇಕ್ಷಕರು ಆಕೆ ಏನೇ ಮಾಡಿದರೂ ಅದನ್ನೊಂದು ಮನರಂಜನೆ ಎಂದೇ ಭಾವಿಸುವ ಹಂತ ತಲುಪಿದ್ದಾರೆ. ಇಂತಿಪ್ಪ ಪೂಜಾ ಗಾಂಧಿ ಮೊನ್ನೆ ಚಾನೆಲ್ಲೊಂದರಲ್ಲಿ ಆಕೆಯ ಮುರಿದುಹೋದ ಮದುವೆಯ ಪ್ರಸ್ತಾಪ ಬಂದಾಗ ತನಗೆ ಆ ಘಟನೆಯೇ ನೆನಪಿಲ್ಲ ಅಂದುಬಿಟ್ಟರು. ತಾನು ಘಜನಿ ಖಾಯಿಲೆಯಿಂದ ಬಳಲುತ್ತಿರುವುದರಿಂದ ಹಳೆಯದ್ಯಾವುದೂ ನೆನಪಿಲ್ಲ ಅಂದರು. ಜನ ಬಿದ್ದೂ ಬಿದ್ದೂ ನಕ್ಕರು. ಅಂದಹಾಗೆ ವೈದ್ಯಕೀಯ ವಿಜ್ಞಾನದಲ್ಲಿ ನಾನಾ ರೀತಿಯ ಮರೆವಿನ ಖಾಯಿಲೆಗಳಿವೆಃ ಡೆಲಿರಿಯಂ, ಡೆಮೆನ್ಶಿಯಾ, ಅಲ್ಜೈಮರ್, ಪಾರ್ಕಿನ್ಸನ್ ಇತ್ಯಾದಿ. ಇದರಲ್ಲಿ ಪೂಜಾ ಗಾಂಧಿಯನ್ನು ಕಾಡುವ ಖಾಯಿಲೆ ಯಾವುದು ಅನ್ನುವುದು ಪತ್ತೆಯಾಗಬೇಕು. ನೀವೀಗ ಯಾವ ಪಕ್ಷದಲ್ಲಿದ್ದೀರಿ ಎಂಬ ಪ್ರಶ್ನೆ ಕೇಳಿದರೆ ಅದನ್ನು ಪತ್ತೆ ಮಾಡಬಹುದೇನೋ!

Also See

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

K Manju Demands Apology From GK Govindarao

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Malashree Vs Ragini On Dec 27

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.