‘ನಾನು ಭಟ್ಟರ ಕ್ಯಾಂಪಿಗೆ ಸೇರಿದವನಲ್ಲ’ಎಂದು ಸೂರಿ ಘೋಷಿಸುವುದರೊಂದಿಗೆ ಕ್ಯಾಂಪ್ ಅನ್ನುವ ಪದ ಅಷ್ಟೇನೂ ಹಿತವಾದದ್ದಲ್ಲ ಅನ್ನುವುದು ರುಜುವಾತಾಗಿದೆ. ನಿಮಗೆ ಗೊತ್ತಿರುವ ಹಾಗೆ ಹಿಟ್ಲರ್ ಕಾಲದಲ್ಲಿ ಇದು ತುಂಬಾ ಕುಖ್ಯಾತಿ ಪಡೆದಿತ್ತು. ತನ್ನ ಶತ್ರುಗಳನ್ನು ಹಿಂಸಿಸುವುದಕ್ಕೋಸ್ಕರಾನೇ ಆತ ನಿರ್ಮಿಸಿದ್ದ ಕಾನ್ಸಂಟ್ರೇಷನ್ ಕ್ಯಾಂಪುಗಳಲ್ಲಿ 45 ಸಾವಿರ ಕೈದಿಗಳಿದ್ದರಂತೆ. ಆ ಮಟ್ಟಿಗೆ ಭಟ್ಟರ ಕ್ಯಾಂಪು ಎಷ್ಟೋ ವಾಸಿ, ಅಬ್ಬಬ್ಬಾ ಅಂದರೆ ಅಲ್ಲಿ ಹತ್ತು ಜನರಿರಬಹುದು ಮತ್ತು ಅವರ್ಯಾರೂ ಕೈದಿಗಳಲ್ಲ.ಕೆಲವರು ಈಗಾಗಲೇ ಸ್ವತಂತ್ರ ನಿರ್ದೇಶಕರಾಗಿರುವವರು, ಇನ್ನು ಕೆಲವರು ನಿರ್ದೇಶಕರಾಗುವವರು ಮತ್ತು ಮುಂದೊಂದು ದಿನ ಚಿತ್ರೋದ್ಯಮ ಎಂಬ ವ್ಯವಸ್ಥೆಯ ಕೈದಿಗಳಾಗುವವರು ಕೂಡಾ.
ಹಿಟ್ಲರ್ ನ ಕ್ಯಾಂಪು ಮತ್ತು ಭಟ್ಟರ ಕ್ಯಾಂಪು ಮಧ್ಯೆ ಇನ್ನೂ ಹಲವಾರು ಕ್ಯಾಂಪುಗಳು ಬಂದುಹೋಗಿವೆ. ದೋಸೆ ಕ್ಯಾಂಪು, ಸಮ್ಮರ್ ಕ್ಯಾಂಪ್, ಕ್ರಿಕೆಟ್ ಕ್ಯಾಂಪ್, ಫಿಷಿಂಗ್ ಕ್ಯಾಂಪ್ ಹೀಗೆ. ಆದರೆ ಸೂರಿಗೆ ಅದ್ಯಾಕೋ ಕ್ಯಾಂಪ್ ಎಂದಾಕ್ಷಣ ಕಾನ್ಸಂಟ್ರೇಷನ್ ಕ್ಯಾಂಪೇ ನೆನಪಾಯಿತೋ ಏನೋ, ಅವರು ಉರಿದುಬಿದ್ದರು. ಆಮೇಲೆ ತಣ್ಣಗಾದರು. ಅದಕ್ಕೆ ಬೆಂಗಳೂರಿನ ಈಗಿನ ಹವಾಮಾನವೂ ಕಾರಣವಾಗಿರಬಹುದು. ಆದರೆ ತನ್ನನ್ನು ಭಟ್ಟರ ಕ್ಯಾಂಪಿನವನು (ಹಾಗಂತ ಕರೆದವರು ಯಾರು?) ಎಂದು ಅಂದಿದ್ದನ್ನೇ ಅವಮಾನ ಎಂದು ಸೂರಿ ಭಾವಿಸಿದ್ದೇಕೆ? ಕ್ಯಾಂಪ್ ಬದಲಾಗಿ ಗ್ಯಾಂಗ್, ಬಳಗ ಮೊದಲಾದ ಪರ್ಯಾಯ ಪದಗಳನ್ನು ಬಳಸಿದ್ದರೆ ಅವರಿಗೆ ಇಷ್ಟೊಂದು ಸಿಟ್ಟು ಬರುತ್ತಿತ್ತಾ?ಇಂಗ್ಲಿಷ್ – ಕನ್ನಡ ನಿಘಂಟಲ್ಲಿ Camp ಅನ್ನುವ ಪದಕ್ಕೆ ಶಿಬಿರ, ಗುಡಾರ ಎಂಬ ಅರ್ಥಗಳಿವೆ. ಶಿಬಿರ ಅಂದಾಕ್ಷಣ ನಮಗೆ ತಕ್ಷಣಕ್ಕೆ ನೆನಪಾಗುವುದು ನಿರಾಶ್ರಿತರ ಶಿಬಿರ ಅನ್ನುವ ಪದವೇ. ಸೂರಿ ತುಂಬಾ ಸೂಕ್ಷ್ಮಜೀವಿಯಾಗಿರುವುದರಿಂದ ಹೀಗೆಲ್ಲಾ ಕಲ್ಪಿಸಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವ ಹಾಗಿಲ್ಲ. ಒಟ್ಟಲ್ಲಿ ಮಂಗಳಾರತಿ ಸಮಯದಲ್ಲಿ ಅರ್ಚಕರಿಗೆ ಸೀನು ಬಂದಂತೆ ವಿನಾಕಾರಣ ಒಂದು ವಿವಾದ ಧೂಳು ಹಾರಿಸಿ ಹೊರಟುಹೋಯಿತು. ಸೂರಿ ಸುಮ್ಮನಾಗಿದ್ದಾರೆ, ನಾವಿನ್ನೂ ಕಣ್ಣು ಉಜ್ಜಿಕೊಳ್ಳುತ್ತಲೇ ಇದ್ದೇವೆ.
ಮಾಧ್ಯಮಗಳು ಕೂಡಾ ಅದ್ಯಾಕೆ ಕ್ಯಾಂಪ್ ಪದದ ಹಿಂದೆ ಬಿದ್ದರೋ ಗೊತ್ತಿಲ್ಲ, ಟೀವಿ ಚಾನೆಲ್ಲಿನವರಂತೂ ಭಟ್ಟರ ಶಿಷ್ಯರು ಎಂಬ ಹೆಸರಲ್ಲಿ ಅವರ ಕ್ಯಾಂಪಲ್ಲಿದ್ದವರನ್ನೆಲ್ಲಾತೆರೆಯ ಮೇಲೆ ಮೆರವಣಿಗೆ ಮಾಡಿದರು. ಇದು ಸೂರಿಯ ಇರಿಸುಮುರಿಸಿಗೆ ಕಾರಣವಾಯಿತಾ, ಗೊತ್ತಿಲ್ಲ. ಇಬ್ಬರು ಗೆಳೆಯರ ನಡುವೆ ಕ್ಯಾಂಪ್, ಶಿಷ್ಯ ಮೊದಲಾದ ಪದಗಳು ಇಣುಕಲೇಬಾರದು. ಪ್ರತ್ಯೇಕ ಸಿದ್ಧಾಂತಗಳನ್ನು ಹೊಂದಿರುವ ಇಬ್ಬರು ಪ್ರತಿಭೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಬದಲು ಬೇರೆಬೇರೆಯಾಗಿ ನೋಡುವುದನ್ನುಮತ್ತು ಅವರ ಚಿತ್ರಗಳನ್ನು ಬೇರೆಬೇರೆ ರೀತಿಯಲ್ಲಿ ಗ್ರಹಿಸುವುದನ್ನು ನಾವು ಕಲಿಯಬೇಕಾಗಿದೆ. ನಾನು ಸೂರಿಯನ್ನೂ ಮತ್ತು ಭಟ್ಟರನ್ನೂ ಅವರ ಆರಂಭದ ದಿನಗಳಿಂದಲೇ ನೋಡುತ್ತಾ ಬಂದಿದ್ದೇನೆ (ಅಫ್ ಕೋರ್ಸ್ ಜೊತೆಯಾಗಿಯೇ). ಸೂರಿಯದ್ದು ಏಕಾಂತ, ಭಟ್ಟರದ್ದು ಲೋಕಾಂತ. ಭಟ್ಟರು ನಕ್ಕರೆ ಅವರ ದೇಹ ಸ್ವಲ್ಪಹೊತ್ತು ಕುಲುಕುತ್ತಲೇ ಇರುತ್ತದೆ, ಸೂರಿ ನಗುವುದನ್ನು ನೋಡುವುದಕ್ಕೆ ಬ್ಲಾಕಲ್ಲಿ ಟಿಕೆಟ್ ತೆಗೆದುಕೊಳ್ಳಬೇಕು. ಸೂರಿ ನಿಷ್ಠುರವಾದಿ. ಅವರ ಮುಖ, ಗಡ್ಡ ಎಲ್ಲವೂ ಈ ಹೇಳಿಕೆಗೆ ಮ್ಯಾಚ್ ಆಗುವಂತಿವೆ. ಭಟ್ಟರು ಉದಾರವಾದಿ. ಅವರ ದೇಹ, ಹೊಟ್ಟೆ ಎಲ್ಲವೂ ಅದಕ್ಕೆ ಮ್ಯಾಚ್ ಆಗುವಂತಿವೆ. ಸೂರಿ ಮಾತಾಡುವುದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಾರೆ, ಭಟ್ಟರು ಮಾತು ನಿಲ್ಲಿಸುವುದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಾರೆ. ಸೂರಿ ಒಂದು ಕಾಲದಲ್ಲಿ ಒಳ್ಳೆಯ ಚಿತ್ರ ಕಲಾವಿದ, ಆ ಕಾರಣಕ್ಕೇ ಅವರ ಸಿನಿಮಾಗಳ ಫ್ರೇಮುಗಳು ಪೇಂಟಿಂಗ್ ಇದ್ದ ಹಾಗಿರುತ್ತವೆ. ಭಟ್ಟರು ಕವಿ, ಹಾಗಾಗಿ ಅವರ ಸಿನಿಮಾಗಳ ಸಂಭಾಷಣೆ ಕಾವ್ಯಮಯ. ಸೂರಿ ವಿಕ್ಷಿಪ್ತ, ಭಟ್ರು ನಿರ್ಲಿಪ್ತ (ಇದು ನನ್ನ ಹೇಳಿಕೆಯಲ್ಲ ಹಾಗೂ ಈ ವ್ಯಾಖ್ಯಾನಕ್ಕೆ ನನ್ನ ತಕರಾರಿದೆ). ಇಂಥಾ ವೈರುಧ್ಯಗಳೇ ಇಬ್ಬರನ್ನು ಗೆಳೆಯರನ್ನಾಗಿಸಿರಬಹುದು. ಯಾಕೆಂದರೆ ಇಬ್ಬರೂ ಒಂದೇ ಸ್ವಭಾವದವರಾದರೆ ಜಾಸ್ತಿ ದಿನ ಸಂಸಾರ ಮಾಡುವುದಕ್ಕಾಗುವುದಿಲ್ಲ. ಹಾಗಿದ್ದರೂ ಈ ಅಪಸ್ವರ ಯಾಕೆ ಬಂತು? ಇಬ್ಬರ ಮೇಲೂ ಗಾಂಧಿನಗರದ ದೃಷ್ಟಿ ಬಿತ್ತಾ?
ಈ ಇಬ್ಬರೂ ಪ್ರತಿಭೆಗಳೂ ಕನ್ನಡ ಚಿತ್ರರಂಗಕ್ಕೆ ದಾಳಿಯಿಟ್ಟಿದ್ದು ಏಕಕಾಲಕ್ಕೆ. ‘ಇದ್ದರಿಬ್ಬ ಗೆಳೆಯರು ಬೆರಳಕೊರಳ ಗೆಳೆಯರು’ಅನ್ನುವ ‘ಸಂಗ್ಯಾಬಾಳ್ಯಾ’ರಂಗಗೀತೆಗೆ ಮಾದರಿಯಂತಿದ್ದವರು. ಹಾಗೆ ನೋಡಿದರೆ ಕನ್ನಡ ಚಿತ್ರರಂಗ ಇಂಥಾ ಜೋಡಿಗಳನ್ನು ಈ ಹಿಂದೆಯೂ ಕಂಡಿದೆ. ದೊರೆ- ಭಗವಾನ್, ರಾಜನ್-ನಾಗೇಂದ್ರ, ಅಶ್ವತ್ಥ್-ವೈದಿ, ವಿಜಯ್ – ಸೋಮಶೇಖರ್. ಅವರ್ಯಾರೂ ಜಗಳ ಆಡಿ ಬೇರೆಯಾಗಲಿಲ್ಲ.ಉದಾಹರಣೆಗೆ ದೊರೈ ಮತ್ತು ನಾಗೇಂದ್ರ ತೀರಿಕೊಂಡ ಕಾರಣ ಆ ಜೋಡಿ ಸಹಜವಾಗಿಯೇ ಇತಿಹಾಸಕ್ಕೆ ಸೇರಿತು. ಸಿನಿಮಾದಲ್ಲಿ ನಿರ್ದೇಶನ ಮತ್ತು ಸಂಗೀತ ನಿರ್ದೇಶನದಲ್ಲಷ್ಟೇ ಇಬ್ಬರು ಜೊತೆಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯ. ಹಾಗಾಗಿ ಸಿನಿಮಾದ ಬೇರೆ ವಿಭಾಗಗಳಲ್ಲಿ ಜೋಡಿಗಳು ಮೋಡಿ ಮಾಡಿರುವ ಉದಾಹರಣೆಗಳು ನಮ್ಮ ಮುಂದಿಲ್ಲ.
ಹಾಗೆ ನೋಡಿದರೆ ಸೂರಿ ಮತ್ತು ಭಟ್ರು ಜೊತೆಯಾಗಿ ಕೆಲಸ ಮಾಡಿದ್ದು ಎರಡೇ ಚಿತ್ರಗಳಿಗೆ. ‘ಮಣಿ’ಮತ್ತು ‘ರಂಗ ಎಸ್ಸಸ್ಸೆಲ್ಸಿ’. ಅವೆರಡೂ ಗೆಲ್ಲಲಿಲ್ಲ.ಆಮೇಲೆ ಇಬ್ಬರೂ ತಮ್ಮತಮ್ಮ ದಾರಿ ಹುಡುಕಿಕೊಂಡರು. ಅಫ್ ಕೋರ್ಸ್, ಅವರು ಬೇರೆಯಾಗುವುದಕ್ಕೂ ಆ ಚಿತ್ರಗಳು ಸೋತಿದ್ದಕ್ಕೂ ಯಾವ ಸಂಬಂಧವೂ ಇರಲಿಲ್ಲ. ಒಂದು ಶುಭದಿನ ಇಬ್ಬರಿಗೂ ಬೇರೆ ಬೇರೆ ನಿರ್ಮಾಪಕರಿಂದ ಆಫರ್ ಬಂತು. ಇಬ್ಬರೂ ಸ್ವತಂತ್ರವಾಗಿ ನಿರ್ದೇಶನ ಮಾಡುವುದಕ್ಕೆ ಶುರು ಮಾಡಿದರು. ವಿಶೇಷವೆಂದರೆ ಇಬ್ಬರ ಮೊದಲ ಚಿತ್ರಗಳು ದೊಡ್ಡ ಯಶಸ್ಸು ಕಂಡವು – ಮುಂಗಾರು ಮಳೆ ಮತ್ತು ದುನಿಯಾ. ಎರಡೂ ಚಿತ್ರಗಳ ಕತೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಯಾವುದೇ ಯಾವುದೇ ಹೋಲಿಕೆಯಿರಲಿಲ್ಲ. ಎಂಬಲ್ಲಿಗೆ ನಮ್ಮಿಬ್ಬರ ಹಾದಿಯೇ ಬೇರೆ ಎಂಬ ಸೂರಿ ಮಾತು ನಿಜವಾಗುತ್ತದೆ. ಬದುಕಿನ ಕ್ರೌರ್ಯವನ್ನು ವಿಡಂಬನೆಯ ಚೌಕಟ್ಟಿನೊಳಗಿಟ್ಟು ಸರ್ರಿಯಲಿಸಂ ಮಾದರಿಯ ಚಿತ್ರಗಳನ್ನು ನೀಡುವ ಶಕ್ತಿ ಅವರಿಗಿದೆ. ಭಟ್ಟರ ಚಿತ್ರಗಳು ಕೆಎಸ್, ನರಸಿಂಹಸ್ವಾಮಿಯವರ ಕವಿತೆಗಳಿಗೆ ಲಂಕೇಶರ ಗದ್ಯವನ್ನು ಬೆರೆಸಿದ ಉಪ್ಪುಕರಿಯಂತೆ.
ಭಟ್ಟರ ಎರಡನೇ ಚಿತ್ರ ‘ಗಾಳಿಪಟ’ವೂ ಚೆನ್ನಾಗಿಯೇ ಹಾರಾಡಿತು. ಆದರೆ ಸೂರಿಯ ಎರಡನೇ ಚಿತ್ರ ‘ಇಂತಿ ನಿನ್ನ ಪ್ರೀತಿಯ’ದಯನೀಯ ಸೋಲು ಕಂಡಿತು. ಆ ಚಿತ್ರಕ್ಕೆ ಭಟ್ಟರು ಕೂಡಾ ಪಾಲುಗಾರರಾಗಿದ್ದರು ಮತ್ತು ಇಡೀ ಉದ್ಯಮವೇ ಆ ಚಿತ್ರವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾಗ, ಭಟ್ಟರೊಬ್ಬರೇ ಅದನ್ನು ಕಾಪಾಡಲು ಪ್ರಯತ್ನ ಪಟ್ಟಿದ್ದರು. ಹಾಗಾಗಿ ಭಟ್ಟರು ತನ್ನ ಚಿತ್ರಗಳನ್ನು ಟೀಕಿಸುತ್ತಿದ್ದರು ಅನ್ನುವ ಸೂರಿ ಅಭಿಪ್ರಾಯ ಸತ್ಯಕ್ಕೆ ದೂರ ಆಗುತ್ತದೆ. ಅನಂತರದ ಇಬ್ಬರ ಪಯಣ ಅಷ್ಟೇನೂ ಹಿತಕರವಾಗಿರಲಿಲ್ಲ. ಭಟ್ಟರು ನಿರ್ದೇಶಿಸಿದ ಪಂಚರಂಗಿ, ಮನಸಾರೆ, ಚಿತ್ರಗಳು ಲಾಭ ಮಾಡಿದರೂ ಹಿಟ್ ಅನ್ನುವ ಕೆಟಗರಿಗೆ ಸೇರಲಿಲ್ಲ. ಪರಮಾತ್ಮ ಚಿತ್ರ ಪುನೀತ್ ಪವರ್ ಇದ್ದೂ ಸೋತುಹೋಯಿತು. ಡ್ರಾಮಾ ಚಿತ್ರದಿಂದ ಅವರೀಗ ಮತ್ತೆ ಯೋಗರಾಜರಾಗಿದ್ದಾರೆ. ಸೂರಿಯ ಗ್ರಾಫ್ ಕೂಡಾ ಹೆಚ್ಚುಕಡಿಮೆ ಹಾಗೆಯೇ ಇದೆ. ಇಂತಿ ನಿನ್ನ ಪ್ರೀತಿಯಲ್ಲಿ ತನ್ನನ್ನು ತಿರಸ್ಕರಿಸಿದ ಪ್ರೇಕ್ಷಕರ ಮೇಲೆ ಸೇಡು ತೀರಿಸಿಕೊಳ್ಳುವ ಥರ ಜಂಗ್ಲಿ ಎಂಬ ಚಿತ್ರ ನಿರ್ದೇಶಿಸಿದರು. ಅದು ಸೋಲಲಿಲ್ಲ. ಜಾಕಿ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದಿತು. ಅಣ್ಣಾ ಬಾಂಡ್ ಮತ್ತು ಕಡ್ಡಿಪುಡಿ ಚಿತ್ರಗಳು ತೋಪಾದವು. ಯಶಸ್ಸಿನ ರೇಟ್ ತೆಗೆದುಕೊಂಡರೆ ಸೂರಿಯದ್ದು ನಲುವತ್ತಾದರೆ, ಭಟ್ಟರದ್ದು ಅರುವತ್ತು ಪರ್ಸೆಂಟು.
ಗಾಂಧಿನಗರದಲ್ಲೊಂದು ಕೆಟ್ಟ ಜೋಕ್ ಇದೆ. ಭಟ್ಟರಿಂದಾಗಿ ಗಣೇಶನಿಗೆ ಮಾರ್ಕೆಟು ಬಂತು. ಸೂರಿಯಿಂದಾಗಿ ವಿಜಯ್ ಸ್ಟಾರ್ ಆದರು. ಆದರೆ ಇವರಿಬ್ಬರು ಸೇರಿ ಪುನೀತ್ ಮಾರ್ಕೆಟ್ಟನ್ನು ಹಾಳು ಮಾಡಿದರು ಅಂತ. ಈ ಜೋಕನ್ನು ಸ್ವಲ್ಪ ಸೀರಿಯಸ್ಸಾಗಿಯೇ ತೆಗೆದುಕೊಳ್ಳಬೇಕು. ಒಬ್ಬ ಸೃಜನಶೀಲ ನಿರ್ದೇಶಕ ಸ್ಟಾರ್ ಜೊತೆ ಕೆಲಸ ಮಾಡಿದಾಗ ಈ ಅನಾಹುತ ಸಂಭವಿಸುತ್ತದೆ. ಒಂದೆಡೆ ಸ್ಟಾರ್ ಇಮೇಜು ಕಾಪಾಡಬೇಕು, ಇನ್ನೊಂದೆಡೆ ತನ್ನ ಸ್ವಂತಿಕೆಯನ್ನೂ ತೋರಿಸಬೇಕು. ಇವೆರಡನ್ನೂ ಬ್ಯಾಲೆನ್ಸ್ ಮಾಡೋದಕ್ಕೆ ಹೋದಾಗ ಪರಮಾತ್ಮ, ಅಣ್ಣಾ ಬಾಂಡ್ ನಂಥಾ ಚಿತ್ರಗಳು ಜನ್ಮತಾಳುತ್ತವೆ. ಬುದ್ದಿವಂತ ನಿರ್ದೇಶಕ ಒಬ್ಬ ನಟನಿಗೆ ಒಂದು ಇಮೇಜನ್ನು ದಯಪಾಲಿಸುತ್ತಾನೆ, ಮಿಕ್ಕ ನಿರ್ದೇಶಕರು ಆ ಇಮೇಜಿಗೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ. ಈಗಾಗಲೇ ಒಂದು ಇಮೇಜನ್ನು ಕಟ್ಟಿಕೊಂಡಿರುವ ನಟನೊಬ್ಬ ಬುದ್ದಿವಂತ ನಿರ್ದೇಶಕನ ಜೊತ ಕೆಲಸ ಮಾಡಿದರೆ ಇಬ್ಬರಿಗೂ ತೊಂದರೆ ತಪ್ಪಿದ್ದಲ್ಲ. ಸೂರಿ ಮತ್ತು ಯೋಗರಾಜ ಭಟ್ಟರಿಬ್ಬರೂ ಈಗ ಈ ಹಂತ ತಲುಪಿದ್ದಾರೆ.
ಸ್ನೇಹದ ವಿಚಾರಕ್ಕೆ ಬಂದರೆ ಭಟ್ಟರು ಯಾವತ್ತೂ ಸೂರಿಯನ್ನು ಬಿಟ್ಟುಕೊಟ್ಟವರಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರ ಸೋತಾಗ ಅವರು ಸೂರಿ ಪತ್ರಕರ್ತರ ಮೇಲೆ ರೇಗಿದ್ದುಂಟು, ಇನ್ನು ಸಿನಿಮಾನೇ ಮಾಡೋಲ್ಲ ಅಂತ ಬೆದರಿಸಿದ್ದುಂಟು. ಆಗ ಡ್ಯಾಮೇಜ್ ಕಂಟ್ರೋಲ್ ಮಾಡಿದವರು ಭಟ್ಟರು. ಚಿತ್ರ ಸೋತ ಬೇಜಾರಲ್ಲಿ ಸೂರಿ ಹಾಗಂದಿರಬಹುದು, ಯಾರೂ ಮನಸ್ಸಿಗೆ ಹಚ್ಕೋಬೇಡಿ ಎಂದು ಭಟ್ಟರು ಹೆಚ್ಚುಕಮ್ಮಿ ಗೋಗೆರೆದಿದ್ದರು. ಆಂಗ್ಲ ಪತ್ರಕರ್ತನೊಬ್ಬ ಹೆಗಲ ಮೇಲೆ ಕೈಯಿಟ್ಟು ಏನೋ ತಮಾಷೆ ಮಾಡಿದಾಗ ಆತನ ಕೈಯನ್ನು ಕಿತ್ತೆಸೆದು ‘ಇಂಥಾದ್ದೆಲ್ಲಾ ನನ್ ಹತ್ತಿರ ಇಟ್ಕೋಬೇಡಿ’ಎಂದು ಸೂರಿ ರೇಗಿದ್ದನ್ನು ನಾನು ನೋಡಿದ್ದೇನೆ, ಇನ್ನೊಬ್ಬ ಸಿನಿಮಾ ಪತ್ರಕರ್ತರು ಥಿಯೇಟರಲ್ಲಿ ತನ್ನ ತೊಡೆ ಮೇಲೆ ಕೈಇಟ್ಟರು ಅಂತ ಸೂರಿ ರೇಗಿದ್ದು ವರದಿ ಆಗಿತ್ತು. ಸೂರಿ ಎಷ್ಟು ಭಾವುಕ ಅನ್ನುವುದಕ್ಕೆ ಇನ್ನೊಂದು ಘಟನೆ ಹೇಳುತ್ತೇನೆ. ‘ರಂಗ ಎಸ್ಸಸ್ಸೆಲ್ಸಿ’ಚಿತ್ರ ಬಿಡುಗಡೆಯ ನಂತರ ಸರೋವರ್ ಹೋಟಲ್ಲಲ್ಲಿ ಒಂದು ಪಾರ್ಟಿ ಏರ್ಪಾಡಾಗಿತ್ತು. ಸೂರಿ ಮತ್ತು ಭಟ್ರು ಒಂದು ಮೂಲೆ ಸೇರಿಕೊಂಡಿದ್ದರು. ಮಾತಾಡಿಸೋಣ ಅಂತ ಹತ್ತಿರಕ್ಕೆ ಹೋದರೆ ಸೂರಿ ಗದ್ಗದ ಕಂಠದಲ್ಲಿ ಹೇಳಿದರು ‘ದಯವಿಟ್ಟು ಈ ಚಿತ್ರದ ಬಗ್ಗೆ ಬರೆಯುವಾಗ ನಮ್ಮ ಹೆಸರು ಹಾಕಬೇಡಿ. ಇದು ನಮ್ಮ ಚಿತ್ರವಲ್ಲ. ನಾವಂದುಕೊಂಡಿದ್ದೇ ಬೇರೆ, ಚಿತ್ರದಲ್ಲಾಗಿರುವುದೇ ಬೇರೆ’. ತಕ್ಷಣ ಭಟ್ರು ಸೂರಿಯನ್ನು ‘ಹಾಗೆಲ್ಲಾ ಮಾತಾಡಬಾರದು’ಎಂದು ಅಣ್ಣನಂತೆ ಗದರಿದರು.
‘ಮಣಿ’ಚಿತ್ರ ಬಿಡುಗಡೆಗೆ ಮುಂಚೆ ಇಂಥಾದ್ದೇ ಇನ್ನೊಂದು ಪ್ರಸಂಗ ನಡೆಯಿತು. ಮಣಿ ಚಿತ್ರ ದೊಡ್ಡ ಹಿಟ್ ಆಗುತ್ತೆ ಅನ್ನುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಸಂದರ್ಭವದು. ಹಾಗಿದ್ದೂ ಭಟ್ಟರಿಗೆ ಯಾವ ನಿರ್ಮಾಪಕರೂ ಮತ್ತೊಂದು ಅವಕಾಶ ನೀಡುವುದಕ್ಕೆ ಮುಂದೆ ಬಂದಿರಲಿಲ್ಲ. ಇಂಥಾ ಪ್ರತಿಭೆ ವೇಸ್ಟ್ ಆಗಬಾರದು ಅನ್ನುವ ಕಳಕಳಿಯಿಂದ ನಾನು ಮತ್ತೆ ಜೋಗಿಸೇರಿಕೊಂಡು ಭಟ್ಟರನ್ನು ಜಯಮಾಲಾ ಅವರಿಗೆ ಪರಿಚಯ ಮಾಡಿಕೊಟ್ಟೆವು. ಆಗ ಜಯಮಾಲಾ ತಮ್ಮ ಮಗಳನ್ನು ನಾಯಕಿಯಾಗಿ ಲಾಂಚ್ ಮಾಡುವ ಉತ್ಸಾಹದಲ್ಲಿದ್ದರು. ನಾಲ್ಲೈದು ಮೀಟಿಂಗುಗಳು ನಡೆದವು, ಜಯಮಾಲಾರೇ ಒಂದು ಕತೆ ಹೇಳಿದರು. ಅದು ಭಟ್ಟರಿಗೆ ಇಷ್ಟವಾಗಲಿಲ್ಲ. ಇವರು ಹೇಳಿದ ಕತೆ ಅವರಿಗಿಷ್ಟವಾಗಿರಲಿಲ್ಲ. ಆದರೆ ಮಾತುಕತೆಯುದ್ದಕ್ಕೂ ಭಟ್ಟರು ಸೂರಿಯನ್ನು ಹೊಗಳುತ್ತಲೇ ಇದ್ದರು. ಅಂಥಾ ರೈಟರ್ ಸಿಗಬೇಕಾದರೆ ಕನ್ನಡ ಚಿತ್ರರಂಗ ಪುಣ್ಯ ಮಾಡಿರಬೇಕು ಅನ್ನುವಂತಿತ್ತು ಅವರ ಮಾತಿನ ಧಾಟಿ. ಭಟ್ಟರಿಗೆ ಕೆಲಸ ಕೊಡಿಸೋಣ ಅಂತ ನಾವು ಒದ್ದಾಡುತ್ತಿದ್ದರೆ ಈ ಮನುಷ್ಯ ತನ್ನ ಗೆಳೆಯನ ಪ್ರವರ ಹೇಳುತ್ತಿದ್ದಾನಲ್ಲ ಅಂತ ನನಗೂ ಕೊಂಚ ಕಿರಿಕಿರಿಯಾಗಿದ್ದು ನಿಜ.
ಇದಕ್ಕಿಂತಲೂ ತಮಾಷೆಯ ಸಂಗತಿಯೆಂದರೆ ನಾನು ಬರೆದ ಎರಡು ಸಿನಿಮಾ ಕತೆಗಳನ್ನು ಭಟ್ರು ತಿರಸ್ಕರಿಸಿದ ಪ್ರಸಂಗ. ಅದ್ಯಾಕಾದರೂ ಕತೆ ಬರೆಯುವ ಉಮೇದು ನನಗೆ ಬಂತೋ ಗೊತ್ತಿಲ್ಲ, ಮೂರೇ ದಿನದಲ್ಲಿ ನಾಲ್ಕು ಕತೆಗಳನ್ನು ‘ಮಾಡಿ’, ಅದರಲ್ಲಿ ಎರಡು ಕತೆಗಳನ್ನು ಅಕ್ಷರಶಃ ಬರೆದು ಭಟ್ಟರಿಗೆ ಮೇಲ್ ಮಾಡಿದ್ದೆ. ಅದಾಗಿ ಒಂದು ತಿಂಗಳಿಗೆ ರಿಪ್ಲೈ ಬಂತು. ‘ಕತೆಗಳು ಚೆನ್ನಾಗಿವೆ, ಆದರೆ ಇದು ನಾನು ಮಾಡುವ ಚಿತ್ರಗಳಿಗೆ ಹೊಂದಿಕೊಳ್ಳುವುದಿಲ್ಲ. ಸೂರಿ ಶೈಲಿಗೆ ಹೇಳಿ ಮಾಡಿಸಿದಂತಿವೆ. ಆದರೆ ಸೂರಿ ಬೇರೆಯವರ ಕತೆಗಳನ್ನು ನಿರ್ದೇಶಿಸುವುದಿಲ್ಲ’. ಎಂಬಲ್ಲಿಗೆ ನಾನು ಭಗ್ನ ಕತೆಗಾರನಾದೆ.
ಈಗ ನಾನೇ ಈ ಜೀವದ ಗೆಳೆಯರ ಜಗಳದ ಕತೆ ಬರೆಯಬೇಕಾಗಿದೆ ಬಂದಿದೆ. ಹಾಗೆ ನೋಡಿದರೆ ಇದು ಜಗಳವೂ ಅಲ್ಲ, ಯಾವದೋ ಮುನಿಸು ಅಥವಾ ಕಾಂಪ್ಲೆಕ್ಸು. ಭಟ್ಟರು ಹೇಳಿ ಹೋಗು ಕಾರಣ ಎಂದಿದ್ದಾರೆ. ಸೂರಿ ಕಾರಣವನ್ನೇ ಹೇಳದೇ ಶರಣಾಗಿದ್ದಾರೆ. ಇದು ಕ್ಯಾಂಪ್ ಫೈರೋ ಅಥವಾ ಫೈರ್ ಕ್ಯಾಂಪೋ ಅನ್ನುವುದು ಅರ್ಥವಾಗದೇ ನಾವು ತಬ್ಬಿಬ್ಬಾಗಿ ಕುಳಿತಿದ್ದೇವೆ. ಅಂದಹಾಗೆ ಈ ಕತೆ ಕಮರ್ಷಿಯಲ್ಲಾಗಿ ಗಿಟ್ಟುತ್ತದೆ ಅಂತೀರಾ. ನನ್ನ ಪ್ರಕಾರ ನೋ ಚಾನ್ಸ್!
Also See
Yogaraj Bhat And Soori Patched Up
Uma Column 20 -...ವಿಷ್ಣೂ ಎನಬಾರದೇ....
Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ
K Manju Demands Apology From GK Govindarao
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.