ರಾಜಕುಮಾರ ಚಿತ್ರ ಶತದಿನೋತ್ಸವ ಆಚರಿಸಿ, ಚಿತ್ರರಂಗವನ್ನೇ ಸಂಭ್ರಮದಲ್ಲಿ ಮುಳುಗಿಸಿದೆ ನಿಜ. ಆದರೆ, ಅದ್ಭುತ ಸಂದೇಶವೂ ಇರುವ ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರಕ್ಕೂ ಪೈರಸಿ ಕಾಟ ತಪ್ಪಿಲ್ಲ. ಈ ಮೊದಲು ಕೇಬಲ್ ಚಾನೆಲ್ವೊಂದರಲ್ಲಿ ಚಿತ್ರ ಪ್ರಸಾರವಾಗಿತ್ತು. ನಂತರ ಅದು ಸಿಡಿಗಳ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಖುದ್ದು ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಅವರೇ ಪೈರಸಿ ವಿರುದ್ಧ ಹೋರಾಡಿದ್ದರು.
ಈ ಪೈರಸಿ ಕಾಟ ಈಗ ಫೇಸ್ಬುಕ್ಗೂ ಕಾಲಿಟ್ಟಿದೆ. ಫೇಸ್ಬುಕ್ನಲ್ಲಿ ಹಲವು ಪೇಜ್ಗಳಲ್ಲಿ ರಾಜಕುಮಾರ ಚಿತ್ರದ ವಿಡಿಯೋ ಓಡಾಡುತ್ತಿದೆ. ಈ ಹಿಂದೆ ಚಿತ್ರಲೋಕ.ಕಾಮ್, ಕನ್ನಡ ಚಿತ್ರಗಳ ಪೈರಸಿ ಬಗ್ಗೆ ಮಾಹಿತಿ ನೀಡಿತ್ತು. ಚಿತ್ರರಂಗದ ಹಲವರಿಗೂ ಮಾಹಿತಿ ಹೋಗಿ, ಪೈರಸಿ ವಿರುದ್ಧ ಸಮರವೇ ನಡೆದಿತ್ತು.
ಅಷ್ಟೇ ಏಕೆ, ಸ್ವತಃ ಹೊಂಬಾಳೆ ಪ್ರೊಡಕ್ಷನ್ಸ್ನ ಕಾರ್ತಿಕ್ ಗೌಡ, 800ಕ್ಕೂ ಹೆಚ್ಚು ಲಿಂಕ್ಗಳನ್ನು ಡಿಲೀಟ್ ಮಾಡಿಸಿದ್ದರು. ಇಷ್ಟಿದ್ದರೂ ಪೈರಸಿ ನಿಂತಿಲ್ಲ.
ಕನ್ನಡ ಚಿತ್ರರಸಿಕರಿಗೆ ಚಿತ್ರಲೋಕ.ಕಾಮ್ ಕೂಡಾ ಮಾಡುವ ಮನವಿ ಇಷ್ಟೆ. ಇಂತಹ ಪೈರಸಿ ಬಗ್ಗೆ ಮಾಹಿತಿ ಸಿಕ್ಕರೆ, ಗಮನಕ್ಕೆ ಬಂದರೆ, ತಕ್ಷಣ ಸಂಬಂಧಪಟ್ಟವರಿಗೆ ಅಥವಾ ಪೊಲೀಸರಿಗೆ ಮಾಹಿತಿ ಕೊಡಿ. ಚಿತ್ರರಂಗಕ್ಕೆ ಅಂಟಿರುವ ಶನಿಯಾಗಿರುವ ಪೈರಸಿ ನಿರ್ಮೂಲನೆಯಾಗಲೇ ಬೇಕು. ಕನ್ನಡ ಮತ್ತು ಕನ್ನಡ ಚಿತ್ರರಂಗದ ಉಳಿವಿಗಾಗಿ ಅದು ನಮ್ಮ ಸೇವೆ ಎಂದರೂ ತಪ್ಪಿಲ್ಲ.