` Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ! - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
dubbing image
dubbing protest

ಒಂದು ಚಿಕ್ಕ ಕತೆಯೊಂದಿಗೆ ಈ ಬಾರಿಯ ಅಂಕಣ ಶುರು ಮಾಡುತ್ತೇನೆ. ನಮ್ಮನೆಗೆ ವಾರಕ್ಕೊಬ್ಬ ಅತಿಥಿ ಬರುತ್ತಿದ್ದ. ಅತಿಥಿ ಅಂದರೆ ವ್ಯಾಪಾರಿ, ಕಾಶ್ಮೀರಿ ಶಾಲು ಮಾರಾಟ ಮಾಡುವವನು. ಅವನ ಬಳಿಯಿದ್ದ ಶಾಲು, ಕುರ್ತಾ, ಟೋಪಿ ಎಲ್ಲವೂ ನಮ್ಮ ಮಕ್ಕಳಿಗೆ ಆಕರ್ಷಕವೇ. ಅವನಿಗೆ ಕನ್ನಡ ಮಾತಾಡುವುದಕ್ಕೆ ಬರುತ್ತಿರಲಿಲ್ಲ, ಆದರೆ ನಮಗೆ ಆತ ಹೇಳುವುದು ಅರ್ಥವಾಗುತ್ತಿತ್ತು. ವ್ಯಾಪಾರ ಕುದುರಬೇಕಾದರೆ ನೀವು ಮಾರಾಟ ಮಾಡುವ ವಸ್ತು ಚೆನ್ನಾಗಿರಬೇಕು, ಭಾಷೆ ಮುಖ್ಯವಲ್ಲ ಎಂದು ನಮಗೆ ಅನಿಸಿದ್ದೇ ಅವನನ್ನು ನೋಡಿ.  ಹಾಗೆ ವಾರಕ್ಕೊಮ್ಮೆ ಬರುತ್ತಿದ್ದವನು ಒಂದು ದಿನ ಅಂಗಳ ದಾಟಿ ಮನೆಯ ಮೆಟ್ಟಲೇರಿ, ಹೊಸ್ತಿಲ ಬಳಿ ನಿಂತ. ಈಗ ಅವನು  ಬಾಗಿಲು ಬಡಿಯುತ್ತಿದ್ದಾನೆ, ಒಳಗೆ ಬರಲಪ್ಪಣೆಯೆ ದೊರೆಯೇ ಎಂದು ಕೇಳುತ್ತಿಲ್ಲ. ಯಾಕೆಂದರೆ ಅಪ್ಪಣೆಯ ಕಾಗದ ಅವನ ಕೈಯಲ್ಲಿದೆ, ಅದನ್ನು ಕೊಟ್ಟವನು ಮನೆಯ ಯಜಮಾನನಲ್ಲ, ಕೋರ್ಟು. ಹಾಗಾಗಿ ನಾವು ವಿರೋಧಿಸುವಂತಿಲ್ಲ.  ಅವನನ್ನು ಮನೆಯೊಳಗೆ ಕರೆಯಲೇಬೇಕು, ಸತ್ಕರಿಸಬೇಕು, ನಮ್ಮದೇ ಭಾಷೆ ಕಲಿಸಬೇಕು. ಅವನ ಕೊಡುವ ಶಾಲುಗಳನ್ನು, ರಗ್ಗುಗಳನ್ನು ನಮ್ಮದೇ ಎಂಬಂತೆ ಹೊದ್ದು ಮಲಗಬೇಕು.  ಮುಂದೊಂದು ದಿನ ಅವನು  ಥೇಟು ನಮ್ಮ ಥರಾನೇ ಆಗಿಹೋಗುತ್ತಾನೆ, ನಮ್ಮ ಮಕ್ಕಳು ಅವನನ್ನು ಇಷ್ಟಪಡುತ್ತಾರೆ. ಅವನ ಜೊತೆ ನಮ್ಮನ್ನು ಹೋಲಿಸಿ ಗೇಲಿ ಮಾಡುತ್ತಾರೆ. ಯಾಕೆಂದರೆ ನಮಗೆ ಅವರ ನಿರೀಕ್ಷೆಗೆ ತಕ್ಕಂತೆ ಇರುವುದಕ್ಕಾಗುತ್ತಿಲ್ಲ, ಯಾಕೆಂದರೆ ನಮ್ಮಲ್ಲಿ ಅಷ್ಟೊಂದು ಹಣ ಇಲ್ಲ. ಅತಿಥಿಯಾಗಿ ಬಂದವನು ಮನೆಯವನೇ ಆಗಿಬಿಟ್ಟು, ಈಗ ನಾವೇ ನಮ್ಮ ಮನೆಯಲ್ಲೇ ಅತಿಥಿಗಳಾಗುತ್ತಿದ್ದೇವೋ ಎಂಬ ಪರಕೀಯ ಪ್ರಜ್ಞೆ ಕಾಡುತ್ತಾ ನಾವು ಕಂಗಾಲಾಗುತ್ತೇವೆ...

ಡಬ್ಬಿಂಗ್ ಗಲಾಟೆ ಹಿನ್ನೆಲೆಯಲ್ಲಿ ಈ ಕತೆಯನ್ನು ಓದಿಕೊಳ್ಳಿ. ನನಗೆ ಗೊತ್ತಿದೆ, ಕಾನೂನಿನ ಶಸ್ತ್ರ ಬಗಲಲ್ಲಿಟ್ಟುಕೊಂಡವರು ಕೇಳಿಯೇ ಕೇಳುತ್ತಾರೆಃ ಅತಿಥಿ ಮನೆಯೊಳಗೆ ಬಂದರೇನು ತಪ್ಪು..ಕೆಲವು ದಿನ ನಮ್ಮನೇಲಿರಲಿ, ಇಷ್ಟವಾಗಿಲ್ಲ ಅಂದರೆ ವಾಪಸ್ ಕಳಿಸೋಣವಂತೆ. ಅದು ಅಷ್ಟು ಸುಲಭ ಅಲ್ಲ ಸ್ವಾಮಿ, ಇಲ್ಲಿ ಬಂದವರು ವಾಪಸ್ ಹೋಗಿದ್ದು ಕಡಿಮೆ ಅಂತ ಹೇಳುವವರು ಅಲ್ಪಸಂಖ್ಯಾತರಾಗುತ್ತಾರೆ. ಹಕ್ಕಿಗೋಸ್ಕರ ಹೋರಾಡುವವರಲ್ಲಿ ವಿವೇಚನಾಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ ಅಂತ ಯಾರೋ ಹೇಳಿದ ನೆನಪು. ಡಬ್ಬಿಂಗ್ ಹೋರಾಟ ಅಮೋಘ ಮೂರನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಚಿತ್ರೋದ್ಯಮದ ಅರ್ಧಭಾಗ ಡಬ್ಬಿಂಗ್ ಪರವಾಗಿಯೇ ಮಾತಾಡುತ್ತಿರುವ ಹಿನ್ನೆಲೆಯಲ್ಲಿ, ಚಿರಂಜೀವಿ ಕನ್ನಡದಲ್ಲಿ ಮಾತಾಡುವ ಕಾಲ ದೂರವಿಲ್ಲ ಅಂತ ನಿಮಗೆ ಅನಿಸುತ್ತಿದ್ದರೆ ಯೂ ಆರ್ ರೈಟ್.

rajkumar in protest

ನಾನು ಕಳೆದ ವಾರ ಬರೆದ ‘ಡಬ್ಬಿಂಗ್ ಭೂತ ಅಲ್ಲ ಭವಿಷ್ಯ’ಕಾಲಂ ಬರೆಯುವಾಗ ಇದು ಡಬ್ಬಿಂಗ್ ಪರವೂ ಅಲ್ಲ, ವಿರುದ್ಧವೂ ಅಲ್ಲ ಎಂದು ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದೆ. ಅದರಿಂದೇನೂ ಉಪಯೋಗವಾದಂತೆ ಕಾಣಿಸುತ್ತಿಲ್ಲ. ‘ನೀವೇನೇ ಹೇಳಿದರೂ ನಿಮ್ಮ ಅಂಕಣದ ಧಾಟಿ ಡಬ್ಬಿಂಗ್ ವಿರುದ್ಧವಾಗಿಯೇ ಇದೆ’ಎಂದು ಕೆಲವು ಹೋರಾಟಗಾರರು ಗುಡುಗಿದ್ದಾರೆ. ಅವರು ಎತ್ತಿರುವ ಕೆಲವು ಪ್ರಶ್ನೆಗಳು ಡಬ್ಬಿಂಗ್ ಅಲ್ಲದೇ ಇರುವ ಚಿತ್ರಗಳ ಹಾಸ್ಯ ದೃಶ್ಯಗಳಲ್ಲೂ ಬಳಸಬಹುದಾಗಿವೆ. ಉದಾಹರಣೆಗೆ ‘ಬಡವರ ಮಕ್ಕಳಷ್ಟೇ  ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದುತ್ತಾರೆ ಎಂದು ನಿಮಗೆ ಯಾರು ಹೇಳಿದರು’ಎಂದು ಒಬ್ಬರು ಪ್ರಶ್ನಿಸುತ್ತಾರೆ. ಗಾಂಧೀಜಿ ರಾಮರಾಜ್ಯದ ಕನಸು ಕಂಡ ಹಾಗೆ ಶ್ರೀಮಂತರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವುದೂ ಕನಸಾಗಿಯೇ ಉಳಿಯುತ್ತದೆ ಎಂದಷ್ಟೇ ಹೇಳಬಲ್ಲೆ. ‘ಬೆಂಗಳೂರಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಅನ್ನೋದಕ್ಕೆ ಪುರಾವೆ ಎಲ್ಲಿದೇ..’ಎಂದು ಇನ್ನೊಬ್ಬರು ಯಾವುದೋ ಜಾಹಿರಾತಲ್ಲಿ ಬರುವ ಪಾತ್ರಧಾರಿ ಥರ ಕಿರುಚಿದ್ದಾರೆ.  ಇದಕ್ಕೆ ಉತ್ತರ ಕನ್ನಡ ಸಂಘಟನೆಗಳು ನಡೆಸಿರುವ ಸರ್ವೆಗಳಲ್ಲಿವೆ.

ಡಬ್ಬಿಂಗ್ ಬಂದರೆ ಮುಂದೇನಾಗಬಹುದು ಅನ್ನುವುದರ ಬಗ್ಗೆ ಒಂದು ಚಿತ್ರಣವನ್ನಷ್ಟೇ ನೀಡುವುದಕ್ಕೆ ನಾನು ಪ್ರಯತ್ನಿಸಿದ್ದೆ ಎಂದು ಮತ್ತೊಮ್ಮೆ ವಿನಮ್ರಪೂರ್ವಕವಾಗಿ ಹೇಳುತ್ತೇನೆ. ಹಾಗೆ ಹೇಳುವ ಹೊತ್ತಿಗೆ ಗೋಲ್ ಮಾಲ್ ರಾಧಾಕೃಷ್ಣ ಚಿತ್ರದಲ್ಲಿ “ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ..’ ಅನ್ನುವ ಉಮೇಶ್ ನೆನಪಾಗಿ ನನ್ನ ಬಗ್ಗೆ ನನಗೇ ಬೇಜಾರಾಗುತ್ತಿದೆ. ಅದೇನೇ ಇರಲಿ,  ಯಾವುದೇ ಪೂರ್ವಾಗ್ರಹಗಳಿಲ್ಲದೇ ಒಂದು ಸಮಸ್ಯೆಯ ಎಲ್ಲಾ ಮಗ್ಗುಲುಗಳನ್ನು ತಡವುತ್ತಾ ಹೋಗುವುದರಲ್ಲಿ ಒಂದು ಸುಖವಿದೆ. ಹಕ್ಕು, ಭಾಷಾಭಿಮಾನ, ಗ್ರಾಹಕಪ್ರಜ್ಞೆ, ರಸಿಕಪ್ರಜ್ಞೆಗಳ ಜಗಳ ಅತಿರೇಕಕ್ಕೆ ಹೋಗುತ್ತಿರುವ ಈ ಸಂದರ್ಭದಲ್ಲಿ ತಣ್ಣಗೆ ಮಾತಾಡುವವರು ನಮಗೆ ಬೇಕಾಗಿದ್ದಾರೆ. ಅಂಥಾ ಒಂದೆರಡು ಪತ್ರಗಳ ಸಾರಾಂಶವನ್ನು ನಿಮಗೆ ನೀಡುತ್ತಿದ್ದೇನೆ. ಎಂದಿನಂತೆ ನನ್ನ ಘೋಷವಾಕ್ಯ ಮುಂದುವರಿಯುತ್ತದೆಃ ಇದು ಡಬ್ಬಿಂಗ್ ಪರವೂ ಅಲ್ಲ, ವಿರುದ್ಧವೂ ಅಲ್ಲ.

ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗ ಜಗದೀಶ್ ವೆಂಕಟೇಶ್ ಒಂದು ಈಮೇಲ್ ಕಳಿಸಿದ್ದಾರೆ. ಅವರು ಬರೆಯುತ್ತಾರೆಃ“ಡಬ್ಬಿಂಗ್ ಅನ್ನುವುದು ಎರಡು ಅಲಗಿನ ಕತ್ತಿ. ಹಳ್ಳಿಯಲ್ಲಿ ನೆಲೆಸಿರುವ ಮಕ್ಕಳಿಗೆ ಈ ಮೂಲಕ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಯಂಥಾ ಚಾನೆಲ್ಲುಗಳನ್ನು ಮತ್ತು ಕೆಲವು ಅದ್ಭುತ ಸಾಕ್ಷ್ಯ ಚಿತ್ರಗಳನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶ ಸಿಗಬಹುದಾದರೂ ಕೊನೆಗೆ ಈ ಸಂಸ್ಕೃತಿ ಕನ್ನಡ ಚಿತ್ರರಂಗವನ್ನು ಘಾಸಿಗೊಳಿಸಿಯೇ ತೀರುತ್ತದೆ.

ನಾನು ಅಮೆರಿಕಾದಲ್ಲಿ ನೆಲೆಸಿದ್ದೇನೆ ಮತ್ತು ನನ್ನ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ತೆಲುಗು ಮತ್ತು ಹಿಂದಿ ಭಾಷಿಗರು. ನಾನು ಅವರಿಗೊಂದು ಪ್ರಶ್ನೆ ಕೇಳಿದೆ. ಅಕ್ಕಪಕ್ಕ ಎರಡು ಥಿಯೇಟರುಗಳಿಗೆ ಅಂತಿಟ್ಟುಕೊಳ್ಳಿ. ಒಂದರಲ್ಲಿ ಕೆಟ್ಟಕೊಳಕ ತೆಲುಗು ಕಮರ್ಷಿಯಲ್ ಚಿತ್ರ ಪ್ರದರ್ಶನವಾಗುತ್ತಿದೆ, ಇನ್ನೊಂದರಲ್ಲಿ ಆಸ್ಕರ್ ಪ್ರಶಸ್ತಿಗೆ ಅರ್ಹವೆನಿಸುವ ಕನ್ನಡ ಚಿತ್ರ ಪ್ರದರ್ಶನವಾಗುತ್ತಿದೆ. ನಿಮ್ಮ ಆಯ್ಕೆ ಯಾವುದು. ಪ್ರತಿಯೊಬ್ಬರೂ ತಾವು ತೆಲುಗು ಚಿತ್ರವನ್ನೇ ನೋಡುತ್ತೇವೆ ಅಂದರು.

ನಾನು ಇದೇ ಪ್ರಶ್ನೆಯನ್ನು ಕನ್ನಡಿಗರಲ್ಲಿ ಕೇಳಿದ್ದರೆ ತೊಂಭತ್ತು ಪರ್ಸೆಂಟು ಜನರು ಅದೇ ಉತ್ತರವನ್ನೇ ನೀಡುತ್ತಿದ್ದರು ಅನ್ನುವ ಬಗ್ಗೆ ಯಾವ ಅನುಮಾನವೂ ಇಲ್ಲ. ಇದ್ಯಾಕೆ ಹೀಗೆ, ಕನ್ನಡಿಗರ ಈ ಧೋರಣೆ ನನಗೆ ಅರ್ಥವಾಗುವುದಿಲ್ಲ. ಮಾಸ್ಟರ್ ಹಿರಣ್ಣಯ್ಯ ತಮ್ಮ ಒಂದು ನಾಟಕದಲ್ಲಿ ಹೇಳಿದ ಹಾಗೆ -  ನಾನು ಕನ್ನಡಿಗರು ನೆರೆಕರೆಯ ಕೂಸನ್ನು ಮನೆಯೊಳಗೆ ಕರೆದು ಮುದ್ದು ಮಾಡುತ್ತೇವೆ, ನಮ್ಮ ಕಂದಮ್ಮ ಮಾತ್ರ ಹೊರಗೆ ಬಿರು ಬಿಸಿಲಲ್ಲಿ ಮಲಗಿರುತ್ತದೆ.

dubbing protest

ನಮ್ಮಲ್ಲಿ ಭಾಷಾಭಿಮಾನವಿಲ್ಲ. ಇದಕ್ಕೆ ಪೂರಕವಾಗಿಯೋ ಎಂಬಂತೆ ಕರ್ನಾಟಕದ ಕೆಲವೇ ಕೆಲವು ದೊಡ್ಡ ನಗರಗಳಲ್ಲಿ ಮಾತ್ರ ಕನ್ನಡ ಚಿತ್ರಗಳು ನಿಯಮಿತವಾಗಿ ಪ್ರದರ್ಶನ ಕಾಣುತ್ತಿವೆ. ಆದರೆ ತೆಲುಗು, ತಮಿಳು ಚಿತ್ರಗಳು ಜಗತ್ತಿನಾದ್ಯಂತ ಪ್ರದರ್ಶನ ಕಾಣುತ್ತಿವೆ. ಆ ಭಾಷೆಯ ಜನರು ಎಲ್ಲೇ ಇದ್ದರೂ ತಮ್ಮದೇ ಭಾಷೆಯ ಚಿತ್ರವನ್ನು ಅದೆಷ್ಟೇ ಕೆಟ್ಟದಾಗಿದ್ದರೂ ನೋಡುತ್ತಾರೆ. ಅವರ ಈ ಭಾಷಾಭಿಮಾನದಿಂದಲೇ ತೆಲುಗು, ತಮಿಳು ಚಿತ್ರಗಳು ಡಬ್ಬಿಂಗ್ ಇದ್ದಾಗಲೂ ಬಚಾವಾಗುತ್ತದೆ, ಇನ್ನಾವುದೇ ಹೊಸ ತಂತ್ರಜ್ಞಾನ ಬಂದಾಗಲೂ ಉಳಿಯುತ್ತವೆ.

ಕಳಪೆ ಚಿತ್ರಗಳನ್ನೇ ನಿರ್ಮಿಸುವ ಉದ್ಯಮವನ್ನು ಕಾಪಾಡುವ ಅಗತ್ಯವಾದರೂ ಏನಿದೆ ಎಂದು ಕೆಲವರು ವಾದಿಸಬಹುದು. ನಾನು ಅವರನ್ನು ಕೇಳುತ್ತೇನೆಃ 60ರ ದಶಕದಲ್ಲೂ ಇದೇ ವಾದ ಮಂಡಿಸಬಹುದಾಗಿತ್ತು, ಆಗ ಏನಾದರೂ ಆ ವಾದಕ್ಕೆ ಮನ್ನಣೆ ಸಿಕ್ಕಿದ್ದರೆ ನಾವು ರಾಜ್ ಕುಮಾರ್ ಅವರು ಡಾಕ್ಟರ್ ರಾಜ್ ಕುಮಾರ್ ಆಗಿ ಬೆಳೆಯುವುದನ್ನು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿಷ್ಣುವರ್ಧನ್, ಅನಂತನಾಗ್ ಅವರಂಥ ಮೇರು ನಟರು ನಮಗೆ ದೊರಕುತ್ತಿರಲಿಲ್ಲ.

ಪೈಪೋಟಿ ಅನ್ನುವುದು ಅಹಿತಕರವಾಗಿದ್ದಾಗ ಅದರಿಂದ ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಪರಭಾಷಾ ಚಿತ್ರದ ಒಂದು ಹಾಡಿಗೆ ತಗಲುವ ಖರ್ಚು ಒಂದು ಕನ್ನಡ ಸಿನಿಮಾದ ಬಜೆಟ್ಟಿಗೆ ಸರಿಸಮಾನವಾಗಿರುತ್ತದೆ. ಡಬ್ಬಿಂಗಿಗೆ ಅವಕಾಶ ಮಾಡಿಕೊಡುವುದು ಅಂದರೆ ಕನ್ನಡ ಚಿತ್ರೋದ್ಯಮದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ.”

ಊರು ಬಿಟ್ಟು ಹೋದವರಿಗೆ ಯಾವಾಗಲೂ ತಮ್ಮೂರು, ಭಾಷೆ, ಸಂಸ್ಕೃತಿಯ ಬಗ್ಗೆ ವಿಪರೀತ ಸೆಳೆತವಿರುತ್ತದೆ. ಹಾಗಾಗಿ ಜಗದೀಶ್ ಅವರಲ್ಲೂ ಸಹಜವಾಗಿಯೇ ಈ ಕನ್ನಡಪ್ರೇಮ ಕೊಂಚ ಜಾಸ್ತಿಯೇ ಇದೆ ಎಂದು ನಾವಂದುಕೊಳ್ಳಬಹುದು. ಆದರೆ 60-70ರ ದಶಕದಲ್ಲಿಯೇ ಡಬ್ಬಿಂಗ್ ಬಂದರೆ ಏನಾಗುತ್ತಿತ್ತು ಅನ್ನುವ ಅವರ ವಾದ ನಮ್ಮನ್ನೆಲ್ಲಾ ಯೋಚನೆಗೆ ಹಚ್ಚುವಂಥಾದ್ದೇ. ರಾಜ್ ಕುಮಾರ್ , ವಿಷ್ಣುವರ್ಧನ್ ಅಷ್ಟೇ ಅಲ್ಲ, ಹಂಸಲೇಖಾ, ಚಿ.ಉದಯಶಂಕರ್, ಶಂಕರನಾಗ್ ಮೊದಲಾದ ಮಹಾನುಭಾವರನ್ನೂ ನಾವು ಮಿಸ್ ಮಾಡಿಕೊಳ್ಳುತ್ತಿದ್ದೆವೋ ಏನೋ. ಜಗದೀಶ್ ಥರ ಸಮಚಿತ್ತದಲ್ಲಿ ಯೋಚನೆ ಮಾಡುವವರಿಗೆ ಇಂಥಾದ್ದೆಲ್ಲಾ ಹೊಳೆಯುತ್ತದೆ.

“ನಿಮ್ಮನೇ ಮುಂದಿರುವ ರಸ್ತೆಯಲ್ಲಿ ಪಾನಿಪೂರಿ ಮಾರಾಟ ಮಾಡುವ ಬಂಗಾಲಿ ಪ್ರಜೆ ಕಳೆದ ಐದು ವರ್ಷದಿಂದ ಒಳ್ಳೆಯ ವ್ಯಾಪಾರ ಮಾಡುತ್ತಿದ್ದಾನೆ. ಅವನು ಯಾವತ್ತೂ ನಿಮ್ಮ ಜೊತೆ ಕನ್ನಡದಲ್ಲಿ ಮಾತಾಡುವುದಿಲ್ಲ, ನೀವೂ ಅವನ ಜೊತೆ ನಿಮಗೆ ಗೊತ್ತಿರುವ ಹರಕುಮುರುಕು ಹಿಂದಿಯಲ್ಲೇ ಮಾತಾಡುತ್ತೀರಿ. ಮೊದಲು ಅವನಿಗೆ ಕನ್ನಡ ಕಲಿಸಿರಿ, ನಂತರ ತಮಿಳು ಅಥವಾ ತೆಲುಗು ಪಾತ್ರಗಳಿಗೆ ಕನ್ನಡದಲ್ಲಿ ಮಾತಾಡುವುದಕ್ಕೆ ಹೇಳಿ”ಎಂದು ಸಕಲೇಶಪುರದ ಅನಂತರಾಮಯ್ಯ ಸಲಹೆ ನೀಡಿದ್ದಾರೆ.

ಧಾರವಾಡದಿಂದ ಜಿ.ಎಸ್. ರಾಘವೇಂದ್ರ ಅವರು ಇಂಥಾದ್ದೇ ಮೇಲ್ ಕಳಿಸಿದ್ದಾರೆ. “ಇಲ್ಲೊಬ್ಬರು ಬ್ಯಾಂಕ್ ಮೆನೇಜರ್ ಇದ್ದಾರೆ. ಅವರ ಬೆಂಗಳೂರಲ್ಲೇ ಹುಟ್ಟಿ ಬೆಳೆದವರು. ನಮ್ಮ ಜೊತೆ ಧಾರವಾಡದ ಭಾಷೆಯಲ್ಲಿ ಮಾತಾಡುವುದಕ್ಕೆ ಹೆಣಗುತ್ತಾರೆ, ಅದೇ ರೀತಿ ನಮ್ಮ ಪಕ್ಕದ ಮನೆಯಲ್ಲಿರುವ ಮಂಗಳೂರಿನವರ ಜೊತೆ ದಕ್ಷಿಣ ಕನ್ನಡ ಭಾಷೆಯಲ್ಲಿ ಮಾತಾಡುತ್ತಾರೆ. ಇದು ಬಹಳ ವಿಚಿತ್ರವಾಗಿ ಕೇಳಿಸುತ್ತದೆ. ನಾನವರಿಗೆ ಒಂದು ಸಾರಿ ಹೇಳಿದೆ, ನೀವು ನಿಮ್ಮ ಭಾಷೆಯಲ್ಲೇ ಮಾತಾಡಿ, ನಾವು ನಮ್ಮದೇ ಭಾಷೆಯಲ್ಲಿ ಮಾತಾಡುತ್ತೇವೆ. ನಿಮಗೆ ಅದೇ ಸರಿ, ನಮಗಿದೇ ಸರಿ. ಜೊತೆಗೆ ಎರಡೂ ಭಾಷೆಗಳಲ್ಲಿರುವ ಸೊಗಸನ್ನು ಪರಸ್ಪರ ಅರ್ಥ ಮಾಡಿಕೊಳ್ಳುವುದಕ್ಕೂ ಇದರಿಂದ ಸಹಾಯವಾಗುತ್ತದೆ. ಆವತ್ತಿಂದ ಅವರು ಬೆಂಗಳೂರು ಭಾಷೆಯಲ್ಲೇ ಮಾತಾಡುತ್ತಿದ್ದಾರೆ”.

ಸದಾಶಿವ ಕಮಾಲ್ ಅವರು ಚಿತ್ರಲೋಕ ಡಾಟ್ ಕಾಂನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆಃ  “ಇವತ್ತಿನ ಸ್ಪರ್ಧಾತ್ಮಕ ಕಾಲದಲ್ಲಿ ನಾವು ಬಾಗಿಲು ಹಾಕಿಕೊಂಡು ನಮ್ಮನ್ನು ನಾವೇ ರಕ್ಷಿಸಿಕೊಳ್ಳುವುದಕ್ಕೆ ನೋಡಬಾರದು. ಬದಲಾಗಿ ಉದ್ಯಮವನ್ನು ಇನ್ನಷ್ಟು ಹೊಸ ಸಾಧ್ಯತೆಗಳಿಗೆ ತೆರೆದಿಡಬೇಕು, ಜನರ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನುವುದನ್ನು ಗಮನಿಸಬೇಕು. ಇನ್ನಷ್ಟು ದಿನಾಂತ ಈ  ಈ ರಕ್ಷಣೆಯ ಚೌಕಟ್ಟಿನೊಳಗೆ ಬಂಧಿಯಾಗಿರುವುದು. ಪೈಪೋಟಿ ಇದ್ದಾಗಲೇ ಒಂದು ಉದ್ಯಮದ ಬೆಳವಣಿಗೆ ಸಾಧ್ಯ ಅಲ್ಲವೇ?”

ಮೈಕೆಲ್ ಡಿಸೋಜಾ ಅವರ ವಾದ ಗಮನಿಸಿಃ “ಡಬ್ಬಿಂಗ್ ಬೇಕು ಎನ್ನುವುದು ಭಾಷೆಯನ್ನು ಪ್ರೀತಿಸಲು ಅಥವಾ ವಿರೋಧಿಸಲು ಅಲ್ಲ. ಕೆಲವಾದರೂ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳನ್ನು ರಸಾನುಭವಿಯಾಗಿ ನೋಡಿ ಆನಂದಿಸಲು. ಮಾತೃ ಭಾಷೆಯಲ್ಲದೆ ಬೇರಾವುದೇ ಭಾಷೆಯಲ್ಲಿ ಚಿತ್ರವನ್ನು ಪೂರ್ತಿಯಾಗಿ ಗ್ರಹಿಸಲಾಗದು. ಶೀರ್ಷಿಕೆಗಳನ್ನು ಹಾಕಿದರೂ ಅವುಗಳನ್ನು ಓದುತ್ತಿರುವಾಗ ಪಾತ್ರಧಾರಿಗಳ ಮೇಲೆ ಗಮನ ಹರಿಸಲಾಗದೆ ರಸಭಂಗವಾಗುತ್ತದೆ”

ಡಿಸೋಜಾ ಅವರೇ, ನಿಮ್ಮ ಆಸೆ ಔಚಿತ್ಯಪೂರ್ಣವಾದದ್ದೇ. ಆದರೆ ಪ್ರಶಸ್ತಿ ವಿಜೇತ ಚಿತ್ರಗಳನ್ನು ಯಾರಾದರೂ ಕನ್ನಡಕ್ಕೆ ಡಬ್ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಾರಾ?ಯಾಕೆಂದರೆ ಇಲ್ಲಿರುವುದು ವ್ಯಾಪಾರಿ ಉದ್ಧೇಶ ಮಾತ್ರ. ಪರಭಾಷೆಯಲ್ಲಿ ಗೆದ್ದ ಚಿತ್ರಗಳಷ್ಟೇ ಡಬ್ಬಿಂಗಿಗೆ ಅರ್ಹವೆನಿಸುತ್ತದೆ. ಬಹುಶಃ ಟೀವಿ ಚಾನೆಲ್ಲುಗಳಲ್ಲಿ ಕೆಲವು ಪ್ರಶಸ್ತಿ ವಿಜೇತ ಚಿತ್ರಗಳು ಪ್ರಸಾರವಾಗಬಹುದೇನೋ.

“ಕನ್ನಡ ಭಾಷೆ-ಸಂಸ್ಕೃತಿಗೂ ಕನ್ನಡ ಚಿತ್ರಗಳಿಗೂ ಸಂಬಂಧವಿಲ್ಲ. ಹಾಗಾಗಿ ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗುವುದಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಸಿನಿಮಾ, ನಾಟಕ, ಬಯಲಾಟ, ಯಕ್ಷಗಾನ ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಸಂಕೇತಿಸುವ ಮತ್ತು ಪೊರೆಯುವ ಪರಿಕರಗಳು. ಜೊತೆಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಒಯ್ಯುವ ವಾಹಕಗಳು ಕೂಡಾ. ಹಾಗಾಗಿ ಪರಭಾಷಾ ಚಿತ್ರಗಳ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಅಲ್ಲಿಯ ಸಂಸ್ಕೃತಿಯನ್ನಷ್ಟೇ ಅವುಗಳು ಪ್ರಚಾರ ಮಾಡುತ್ತವೆ. ಚೋಲಿ ಕೆ ಪೀಚೇ ಹಾಡನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಹೇಗಿರುತ್ತೆ”. ಹೀಗಂತ ಮುತ್ತುರಾಜ್ ಪ್ರಶ್ನಿಸುತ್ತಾರೆ.

ಡಬ್ಬಿಂಗ್ ವಿವಾದದಲ್ಲಿ ಪಾಲ್ಗೊಂಡಿರುವ ಹೋರಾಟಗಾರರ ಹಿನ್ನೆಲೆ ಮತ್ತು ಮನಸ್ಥಿತಿಯಲ್ಲಿರುವ ವಿಪರ್ಯಾಸಗಳ ಬಗ್ಗೆ ನನ್ನ ಸನ್ಮಿತ್ರರೊಬ್ಬರು ಮಾಡಿದ ಕಾಮೆಂಟಿನೊಂದಿಗೆ ಈ ಬಾರಿಯ ಅಂಕಣ ಮುಗಿಸುತ್ತೇನೆಃ “ಡಬ್ಬಿಂಗ್ ಇರಲಿ ಎಂದು ಹೋರಾಡುತ್ತಿರುವವರು ಫೇಸ್ ಬುಕ್ಕಲ್ಲೇ ಜಾಸ್ತಿಯಿದ್ದಾರೆ. ಅವರೆಲ್ಲರೂ ವಿದ್ಯಾವಂತರು, ಪರದೇಶಿ ಕಂಪನಿಗಳಲ್ಲಿ ಒಳ್ಳೆಯ ಸಂಬಳ ಪಡೆಯುತ್ತಿರುವವರು. ಇನ್ನೊಂದೆಡೆ ಚಿತ್ರೋದ್ಯಮದೊಳಗೆ ಡಬ್ಬಿಂಗ್ ಪರವಾಗಿ ಮಾತಾಡುತ್ತಿರುವ ನಿರ್ಮಾಪಕರು  ಅಷ್ಟೇನೂ ಓದಿಕೊಂಡವರಲ್ಲ, ಅಕ್ಷರಪ್ರೇಮಿಗಳೂ ಅಲ್ಲ. ಒಂದು ಇಶ್ಯೂ ಇವರಿಬ್ಬರನ್ನೂ ಬೆಸೆದಿರುವ ಹಿಂದಿರುವ ರಾಜಕೀಯ ದಂಗುಬಡಿಸುವಂಥಾದ್ದು”.

Also See

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Who Will Survive Dubbing? - Analysis

Anti Dubbing Cartel - CCI ACT- Decoded

Producers To Support Dubbing

Bundh On 27th - Will Film Industry Support?

Protest Against Dubbing - Industry Bundh on 27th

CCI Notice - Movie Industry In Problem?

KFCC to challenge CCI Order

Raavana - CCI Order Not of Much Help

Dubbing In Kannada Will Be Failure - Prashanth

Kamal Hassan Says Dubbing Not Good

Anti Dubbing Lobby takes Their Battle to Capital

Dubbing Issue - Film Industry Meeting Today

Ramu and K Manju Defend Their Dubbing Actions

Dubbing Films To Have A Grand Entry - Exclusive

Dubbing To Enter Kannada Cinema?

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.