ಕನ್ನಡಕ್ಕೆ ಡಬ್ಬಿಂಗ್ ಸಿನಿಮಾಗಳು ಬಂದರೇನಾಗುತ್ತೆ? ಕಳೆದ ವರ್ಷ ಸರಿಸುಮಾರು ಇದೇ ಹೊತ್ತಿಗೆ ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಂಡು ಫೇಸ್ ಬುಕ್ಕಲ್ಲಿ, ನ್ಯೂಸ್ ಚಾನೆಲ್ಲುಗಳಲ್ಲಿ ಭಯಂಕರ ಚರ್ಚೆ ನಡೆದಿತ್ತು. ತ್ಯಾಗ, ಬಲಿದಾನ, ರಕ್ತಕ್ರಾಂತಿ, ಆತ್ಮಹತ್ಯೆ, ನಾಡುನುಡಿಮಡಿ, ಹೊಡಿಕಡಿ ಮೊದಲಾದ ಪದಗಳು ಬೆಂಗಳೂರಿನ ರಸ್ತೆಯುದ್ದಕ್ಕೂ ಚೆಲ್ಲಾಡಿದ್ದವು. ಇನ್ನೇನು, ಏನೋ ಅನಾಹುತ ಆಗಿಹೋಗುತ್ತೆ ಎಂದು ಎಂದು ಬೆರಳೆಣಿಕೆಯಷ್ಟು ಜನ ಹೌಹಾರಿದ್ದರು. ಅದೇನೋ ಸಿಸಿಐ ಅಂತೆ (ಅದನ್ನು ಕನ್ನಡಕ್ಕೆ ಅನುವಾದಿಸಿದರೆ ಭಾರತೀಯ ಸ್ಪರ್ಧಾತ್ಮಕ ಸಮಿತಿ ಎಂದಾಗುತ್ತದೆ. ಹಾಗಂದರೇನು ಅನ್ನುವುದನ್ನು ವಿವರಿಸುವುದಕ್ಕೆ ಆ ಸಮಿತಿಯ ಅಧ್ಯಕ್ಷರೇ ಬರಬೇಕೇನೋ. ಡಬ್ಬಿಂಗ್ ಸಿನಿಮಾಗಳ ಭಾಷೆ ಹೇಗಿರುತ್ತದೆ ಅನ್ನುವುದಕ್ಕೆ ಇದೇ ಉದಾಹರಣೆಯಾದೀತು), ಅದಕ್ಕೆ ಸುಪ್ರೀಂ ಕೋರ್ಟಿಗಿರುವಷ್ಟೇ ಪವರ್ ಇದೆಯಂತೆ, ಹಾಗಾಗಿ ಅದರ ನಿರ್ಧಾರವನ್ನು ಆ ಭಗವಂತನೇ ಬಂದರೂ ಬದಲಾಯಿಸುವುದಕ್ಕಾಗುವುದಿಲ್ಲವಂತೆ ಎಂದೆಲ್ಲಾ ಸುದ್ದಿ ಹರಡಿ ಟೀವಿ ಮತ್ತು ಸಿನಿಮಾ ಕಲಾವಿದರು ಕಂಗಾಲಾಗಿದ್ದರು. ಆಮೇಲೆ ಎಂದಿನಂತೆ ಎಲ್ಲರೂ ಆ ಇಶ್ಯೂವನ್ನು ಮರೆತು, ಸಕಲ ಭಾಷೆಗಳ ಚಿತ್ರಗಳನ್ನು ಥಿಯೇಟರಲ್ಲಿ ಮತ್ತು ಟೀವಿಯಲ್ಲಿ ನೋಡುತ್ತಾ ಹಾಯಾಗಿದ್ದರು. ಕೆಲವರು ಯಾವುದಕ್ಕೂ ಸೇಫ್ಟಿಗಿರಲಿ ಅಂತ ಗುಟ್ಟಾಗಿ ಕೆಲವು ಪರಭಾಷಾ ಚಿತ್ರಗಳ ಡಬ್ಬಿಂಗ್ ಹಕ್ಕು ಖರೀದಿಸಿದ್ದರು. ಈಗ ಮತ್ತೆ ಡಬ್ಬಿಂಗ್ ಎಂಬ ಸೋ ಕಾಲ್ಡ್ ಉಗ್ರಗಾಮಿ ಹಾಜರಾಗಿದೆ. ಈ ಬಾರಿ ಸಿಸಿಐ ಫರ್ಮಾನು ಹೊರಡಿಸಿದ್ದಾಗಿದೆ. ಕೆಲವರು ಡಬ್ಬಿಂಗ್ ನ್ನು ಭೂತವೆಂದು ಜರೆಯುತ್ತಾ, ಇನ್ನು ಕೆಲವರು ಅದನ್ನು ದೇವರೆಂದು ಬಣ್ಣಿಸುತ್ತಾ ಮತ್ತದೇ ಜಗಳ ಶುರುಮಾಡಿದ್ದಾರೆ. ವಾಟಾಳ್ ನಾಗರಾಜ್ ಮತ್ತೆ ಬೀದಿಗಿಳಿದಿದ್ದಾರೆ. ವಿಜಯ್ ಹೆರಗು ಎಂಬವರು “ಅದನ್ನು ಡಬ್ಬಿಂಗ್ ಭೂತ ಎಂದು ಯಾಕೆ ಕರೆಯುತ್ತೀರಿ ಸ್ವಾಮಿ, ಅದು ಭೂತ ಅಲ್ಲ ಭವಿಷ್ಯ”ಎಂದು ಫೇಸ್ ಬುಕ್ಕಲ್ಲಿ ಬರೆದು ನನ್ನಂಥವರನ್ನು ರಂಜಿಸಿದ್ದಾರೆ. ಇದು ಜೋಕ್ ಅಲ್ಲ, ವಾಸ್ತವ. ಈ ಭೂತ ನಮ್ಮ ಭವಿಷ್ಯದಲ್ಲಿ ಹಾಜರಾಗುತ್ತಾ ಎಂದು ನ್ಯೂಸ್ ಚಾನೆಲ್ಲುಗಳು ಯಾಕೆ ಒಬ್ಬ ಜ್ಯೋತಿಷಿಯನ್ನು ಕರೆಸಿ ಪ್ರೋಗ್ರಾಂ ಮಾಡಿಲ್ಲ ಎಂಬ ವಿಸ್ಮಯವೂ ನನ್ನನ್ನು ಕಾಡುತ್ತಿದೆ.
ಪೇಸ್ ಬುಕ್ಕಲ್ಲಿ ಬಿ. ಸುರೇಶ್ ಡಬ್ಬಿಂಗ್ ವಿರೋಧವಾಗಿ ತಮ್ಮ ವೈಯಕ್ತಿಕ ನಿಲುವನ್ನು ಚೆನ್ನಾಗಿ ಮಂಡಿಸಿದ್ದಾರೆ. ಸುರೇಶ್ ಇಂಥಾ ವಾದ ಮಾಡುವಲ್ಲಿ ಸಿದ್ಧಹಸ್ತರು. ಅದನ್ನು ಓದುವುದೇ ಒಂದು ಸುಖ. ಆದರೆ ವಾದಗಳು ಸಂವಾದದ ರೂಪ ಪಡೆಯುವಾಗಲೇ ಸಮಸ್ಯೆಯಾಗುವುದು. ಚರ್ಚೆ ಹಳಿ ತಪ್ಪುತ್ತದೆ. ಎಲ್ಲೆಲ್ಲಿಗೋ ಲಿಂಕ್ ಆಗುತ್ತದೆ. ಆಗ ಡಬ್ಬಿಂಗ್ ಬೇಕು ಅನ್ನುವವವರು ಕನ್ನಡ ವಿರೋಧಿಗಳಂತೆಯೂ, ಡಬ್ಬಿಂಗ್ ಬೇಡ ಅನ್ನುವವರು ವಿನಾಕಾರಣ ತರಲೆ ಮಾಡುವವರಂತೆಯೂ ಕಾಣಿಸುತ್ತಾರೆ. ರೀಮೇಕು ಚಿತ್ರಗಳನ್ನೇ ಡಬ್ಬಿಂಗ್ ಪಿಕ್ಚರ್ ಎಂದು ಕರೆಯುವ ಶ್ರೀಸಾಮಾನ್ಯ ಇದ್ಯಾವುದೂ ಅರ್ಥವಾಗದೇ ಮಿಸ್ಟರ್ ಬೀನ್ ಥರ ಕಕ್ಕಾಬಿಕ್ಕಿಯಾಗಿ ನೋಡುತ್ತಾನೆ (ಅವನೇ ಪುಣ್ಯವಂತ ನೋಡಿ. ಯಾಕೆಂದರೆ ಆತ ಮಾತೇ ಆಡದೇ ಇರುವುದರಿಂದ ಆತನ ಪ್ರಹಸನಗಳಿಗೆ ಡಬ್ಬಿಂಗ್ ಸಮಸ್ಯೆಯಿಲ್ಲ). ನಿರ್ಮಾಪಕರಲ್ಲೂ ಈಗ ಎರಡು ಗುಂಪುಗಳಾಗಿರುವುದು ಸ್ಪಷ್ಟವಾಗಿದೆ ಮತ್ತು ಅದು ನಿರೀಕ್ಷಿತ ಕೂಡಾ. ಯಾಕೆಂದರೆ ದೊಡ್ಡ ಸ್ಟಾರ್ ಗಳ ಕಾಲ್ ಷೀಟ್ ಸಿಗದೇ ಸಿಟ್ಟಲ್ಲಿರುವ ನಿರ್ಮಾಪಕ ಡಬ್ಬಿಂಗ್ ಬರಲಿ ಅನ್ನುತ್ತಾನೆ. ಡಬ್ಬಿಂಗ್ ಬಂದರೆ ನಮ್ಮ ಸ್ಟಾರ್ ಗಳಿಗೆ ಅವಮಾನ ಆಗುತ್ತದೆ, ಅವರ ರೇಟು ಕಡಿಮೆಯಾಗುತ್ತದೆ, ಮಾರುಕಟ್ಟೆ ಬೀಳುತ್ತದೆ ಅನ್ನುವ ಸೇಡಿನ ಲೆಕ್ಕಾಚಾರ ಅದು. ಆದರೆ ಡಬ್ಬಿಂಗ್ ನ ಏಟು ತಿನ್ನುವವರು ಸಣ್ಣ ನಿರ್ಮಾಪಕರೇ ಅನ್ನುವ ಸರಳ ಲೆಕ್ಕಾಚಾರ ಆತನಿಗೆ ಅರ್ಥವಾಗುವುದಿಲ್ಲ.
ಆರು ತಿಂಗಳ ಹಿಂದೆ ನಾನು ಮತ್ತು ‘ಚಿತ್ರಲೋಕ ಡಾಟ್ ಕಾಂ’ಸಂಪಾದಕ ವೀರೇಶ್ ಕಂಪ್ಯೂಟರ್ ಮುಂದೆ ಕುಳಿತುಕೊಂಡು 2012ನೇ ಇಸ್ವಿಯಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಚಿತ್ರಗಳ ಸಾಧನೆಯನ್ನು ನೋಡುತ್ತಿದ್ದೆವು. ಅದೇನೋ ಒಂದು ಭಯಂಕರ ಸಂಶೋಧನೆ ಮಾಡುತ್ತಿದ್ದೇವೆ ಅನ್ನುವ ಹೆಮ್ಮೆ ನಮ್ಮಲ್ಲಿತ್ತು. ವಿಚಿತ್ರ ಅಂದರೆ ಇವೆರಡೂ ಬಾಷೆಗಳಲ್ಲಿ ಡಬ್ ಆದ ಚಿತ್ರಗಳು ಗೆದ್ದಿದ್ದು ತುಂಬಾ ಕಡಿಮೆ. ಮಲೆಯಾಳಂನಲ್ಲಂತೂ ಕೇವಲ ಬೆರಳೆಣಿಕೆಯಷ್ಟು ಚಿತ್ರಗಳಷ್ಟೇ ಗೆದ್ದಿದ್ದವು. ಈ ಹಿನ್ನೆಲೆಯಲ್ಲಿ ಕೆಲವು ಸರಳ ಸತ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನೆನಪಿರಲಿ, ಇದು ಡಬ್ಬಿಂಗ್ ಪರವಾದ ವಾದವೂ ಅಲ್ಲ, ವಿರೋಧವಾದ ವಾದವೂ ಅಲ್ಲ.
1. ಕೆಲವು ವರ್ಷದ ಹಿಂದೆ ಖಾಸಗಿ ಟೀವಿ ಚಾನೆಲ್ಲುಗಳು ಬಂದಾಗ ನಮ್ಮ ನಿರ್ಮಾಪಕರು ಇದೇ ರೀತಿ ಹೌಹಾರಿದ್ದರು. ಜನ ಸೀರಿಯಲ್ಲು ನೋಡುತ್ತಾರೆ, ಅದಕ್ಕೇ ಅಡಿಕ್ಟ್ ಆಗುತ್ತಾರೆ, ಹಾಗಾಗಿ ಕನ್ನಡ ಸಿನಿಮಾಗಳ ಕತೆ ಮುಗಿದೇಹೋಯಿತು ಎಂದು ಗೋಳಾಡಿದ್ದರು. ಸೀರಿಯಲ್ಲುಗಳನ್ನು ಜನ ನೋಡುತ್ತಿರುವುದು ನಿಜ. ಸಿನಿಮಾಗಳು ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕೆ ಯಶಸ್ಸಿನ ರೇಟು ಕಡಿಮೆಯಾಗಿರಬಹುದು. ಹಾಗಂತ ಕನ್ನಡ ಚಿತ್ರಗಳ ನಿರ್ಮಾಣ ಸಂಖ್ಯೆಯೇನೂ ಕಡಿಮೆಯಾಗಿಲ್ಲ, ಬಜೆಟ್ಟೂ ಕಡಿಮೆಯಾಗಿಲ್ಲ. ಈಗಂತೂ ಎಲ್ಲಾ ನಿರ್ಮಾಪಕರು ಟೀವಿಯಲ್ಲೇ ಜಾಹಿರಾತು ನೀಡುತ್ತಾರೆ (ಬೆಂಗಳೂರಿನ ಗೋಡೆಗಳಲ್ಲಿ ಪೋಸ್ಟರ್ ಹಾಕುವ ಹಾಗಿಲ್ಲ), ಅಲ್ಲೇ ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಮಾಡುತ್ತಾರೆ. ಚಾನೆಲ್ಲುಗಳಿಗೇ ತಮ್ಮ ಚಿತ್ರಗಳನ್ನು ಮಾರಾಟ ಮಾಡಿ ಅರ್ಧ ಸೇಫ್ ಆಗುತ್ತಾರೆ. ಎಂಬಲ್ಲಿಗೆ ಯಾವುದನ್ನು ಶತ್ರು ಎಂದು ನಿರ್ಮಾಪಕರು ಭಾವಿಸಿದ್ದರೋ ಅದೇ ಈಗ ಆಪ್ತಮಿತ್ರನಾಗಿದೆ.
2. ಡಬ್ಬಿಂಗ್ ಚಿತ್ರಗಳಿಂದ ಕನ್ನಡದ ಮಾರುಕಟ್ಟೆ ವಿಸ್ತಾರವಾಗುತ್ತದೆ ಅನ್ನುವುದು ಶುದ್ಧ ಭ್ರಮೆ. ಕನ್ನಡದ ಸೀಮಿತ ಮಾರುಕಟ್ಟೆಗೆ ಈಗ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೇ ತುಂಬಾ ಜಾಸ್ತಿಯಾಯಿತು. ಕನ್ನಡಿಗರು ತಮ್ಮೆಲ್ಲಾ ಕೆಲಸ ಬಿಟ್ಟು ಹಗಲುರಾತ್ರಿ ಕನ್ನಡ ಸಿನಿಮಾಗಳನ್ನೇ ನೋಡಿದರೂ ವರ್ಷಕ್ಕೆ ಅರುವತ್ತು ಸಿನಿಮಾಗಳು ಸಾಕಾಗಬಹುದು. ಆದರೆ ನಮ್ಮ ಚಿತ್ರರಂಗ ಪ್ರತಿವರ್ಷ ಸೆಂಚುರಿ ಬಾರಿಸುತ್ತಿದೆ, ಸಂಖ್ಯೆಯಲ್ಲಿ. ಆಂಧ್ರ ಮತ್ತು ತಮಿಳ್ನಾಡು ರಾಜ್ಯಗಳು ಜನಸಂಖ್ಯೆಯಲ್ಲಷ್ಟೇ ನಮ್ಮನ್ನು ಮೀರಿಸಿಲ್ಲ, ಸಿನಿಮಾ ನೋಡುಗರ ಸಂಖ್ಯೆಯೂ ಅಲ್ಲಿ ಜಾಸ್ತಿಯಿದೆ. ನಮ್ಮಲ್ಲಿರುವ ಪಂಚಕೋಟಿ ಕನ್ನಡಿಗರ ಪೈಕಿ ಸಿನಿಮಾ ಹುಚ್ಚರ ಸಂಖ್ಯೆ ಒಂದು ಕೋಟಿಯನ್ನೂ ದಾಟುವುದಿಲ್ಲ. ಆ ಪೈಕಿ ಕನ್ನಡ ಸಿನಿಮಾ ನೋಡುವವರು ಮೂವತ್ತು ಪರ್ಸೆಂಟು ಇರಬಹುದು. ಅದರಲ್ಲೂ ಬೆಂಗಳೂರಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ಕೇವಲ 27 ಪರ್ಸೆಂಟ್. ಆ ಪೈಕಿ ಕನ್ನಡ ಸಿನಿಮಾ ನೋಡುವವರ ಪರ್ಸೆಂಟೇಜ್ 15 ಕೂಡಾ ಇರಲಾರದು. ಅದರಲ್ಲೂ ಮತ್ತೆ ಕೆಲವು ಪರ್ಸೆಂಟು ಟೀವಿ ವೀಕ್ಷಕರಿಗೆ ಮೀಸಲಾತಿ ನೀಡಬೇಕು. ವಾಸ್ತವ ಹೀಗಿರುವಾಗ ಡಬ್ಬಿಂಗ್ ಚಿತ್ರಗಳು ಅಪ್ಪಳಿಸಿದರೆ ಮಾರುಕಟ್ಟೆ ವಿಸ್ತಾರವಾಗುವ ಬದಲು, ತನ್ನ ಮುಂದಿರುವ ವಿಪರೀತ ಆಯ್ಕೆಗಳಿಂದ ಗೊಂದಲಕ್ಕೀಡಾಗುವ ಪ್ರೇಕ್ಷಕ ಯಾವ ಸಿನಿಮಾವನ್ನೂ ನೋಡದೇ ಇರುವ ಅಪಾಯವಿದೆ.
3. ಕನ್ನಡ ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಆ ಸಮಸ್ಯೆಯನ್ನು ಕನ್ನಡ ಭಾಷಾಪ್ರೇಮದ ಜೊತೆ ತಳುಕು ಹಾಕುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಂಡಿರುವವರು, ಕನ್ನಡ ಸಿನಿಮಾಗಳ ಬಗ್ಗೆಯೂ ಅಭಿಮಾನ ಬೆಳೆಸಿಕೊಂಡಿರಬೇಕು ಅಂತ ನಿರೀಕ್ಷಿಸುವುದೇ ತಪ್ಪು. ಯಾಕೆಂದರೆ ಭಾಷಾಪ್ರೇಮ ಅನ್ನುವುದು ನಮ್ಮ ಮನಸ್ಸಿನ ಭಾವನೆಗೆ ಸಂಬಂಧಪಟ್ಟಿದ್ದು, ಸಿನಿಮಾ ವೀಕ್ಷಣೆ ಅನ್ನುವುದು ನಮ್ಮ ಆಸಕ್ತಿ ಮತ್ತು ಅಭಿರುಚಿಗೆ ಸಂಬಂಧಿಸಿದ್ದು. ಅವೆರಡೂ ಸಂಗಮಿಸಬೇಕಾದರೆ ನಾವು ಪ್ರೀತಿಸುವ ಕನ್ನಡದ ಸಂಸ್ಕೃತಿ, ಪರಿಸರ, ಆಚಾರವಿಚಾರ, ಭಾಷಾವೈವಿಧ್ಯಗಳು ಕನ್ನಡ ಸಿನಿಮಾಗಳಲ್ಲೂ ಪ್ರತಿಬಿಂಬಿತವಾಗಬೇಕಾಗುತ್ತದೆ. ಅಂಥಾ ಕೆಲಸ ಇಲ್ಲಿ ನಡೆಯುತ್ತಿಲ್ಲ. ಕೇವಲ ಮನರಂಜನೆಗಾಗಿಯೇ ಸಿನಿಮಾ ನೋಡುವುದಾದರೆ ಕನ್ನಡವೇ ಯಾಕೆ, ಬೇರೆ ಭಾಷೆಯ ಸಿನಿಮಾ ನೋಡಬಹುದಲ್ವಾ ಅನ್ನುವ ತರ್ಕ ಹುಟ್ಟಿಕೊಳ್ಳುವುದೇ ಈ ಕಾರಣಕ್ಕೆ.
4. ಪತ್ರಕರ್ತ ಮಿತ್ರ ಇಸ್ಮಾಯಿಲ್ ಗುರುತಿಸಿರುವ ಹಾಗೆ ಕನ್ನಡ ಚಿತ್ರರಂಗ ಈಗ ಅಧಿಕೃತವಾಗಿ ಒಂದು ಉದ್ಯಮವಾಗಿದೆ. ಉದ್ಯಮದ ಕೆಲಸ ತಾನು ಉತ್ಪಾದಿಸುವ ಸರಕನ್ನು ಮಾರಾಟ ಮಾಡುವುದು, ಅದನ್ನು ಖರೀದಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯ ಗ್ರಾಹಕನಿಗಿದೆ. ಇಂಥಾ ಶುದ್ಧ ವ್ಯಾಪಾರದಲ್ಲಿ ಡಬ್ಬಿಂಗ್, ರೀಮೇಕು, ಸ್ವಮೇಕು ಅನ್ನುವ ಪದಗಳೆಲ್ಲಾ ಅರ್ಥ ಕಳಕೊಳ್ಳುತ್ತವೆ. ನಿರ್ಮಾಪಕ ಒಬ್ಬ ವ್ಯಾಪಾರಿ, ಪ್ರೇಕ್ಷಕ ಒಬ್ಬ ಗ್ರಾಹಕ ಅಷ್ಟೇ.
5. ಡಬ್ಬಿಂಗ್ ಚಿತ್ರಗಳು ಮತ್ತು ಸೀರಿಯಲ್ಲುಗಳು ಬಂದರೆ ಕನ್ನಡದ ಕಾರ್ಮಿಕರು ಮತ್ತು ತಂತ್ರಜ್ಞರು ಕೆಲಸ ಕಳೆದುಕೊಳ್ಳುತ್ತಾರೆ ಅನ್ನುವ ಮಾತಲ್ಲಿ ಹುರುಳಿದೆ. ಕಾರ್ಮಿಕರ ಕ್ಷಮೆಕೋರುತ್ತಾ, ಕೆಲವು ವರ್ಷಗಳ ಹಿಂದೆ ಸಾಹಿತಿ ಭೈರಪ್ಪನವರು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಮಾಡಿದ ಭಾಷಣದ ಕೆಲವು ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಒಬ್ಬ ರೈತನ ಇಡೀ ದಿನದ ದುಡಿಮೆ ಇಪ್ಪತ್ತು ರುಪಾಯಿ ಮೀರುವುದಿಲ್ಲ, ಆದರೆ ಅದರ ಅರ್ಧದಷ್ಟೂ ಕೆಲಸ ಮಾಡದೇ ಇರುವ ಸಿನಿಮಾ ಕಾರ್ಮಿಕರ ಸಂಪಾದನೆ ದಿನಕ್ಕೆ ಐವತ್ತು ರುಪಾಯಿಗಿಂತ ಜಾಸ್ತಿಯಿದೆ (ಆ ಕಾಲದಲ್ಲಿ). ಹಾಗಾಗಿ ಕನ್ನಡ ಸಿನಿಮಾಗಳ ನಿರ್ಮಾಣ ಸಂಖ್ಯೆ ಕಡಿಮೆಯಾದರೆ ಯಾರಿಗೂ ಏನೂ ನಷ್ಟವಾಗುವುದಿಲ್ಲ. ಇಲ್ಲಿ ಕೆಲಸ ಮಾಡುವವರು ಹೊಲಕ್ಕೆ ಹೋಗಿ ರೈತರಾಗಬಹುದು ಎಂಬರ್ಥದಲ್ಲಿ ಭೈರಪ್ಪ ಮಾತಾಡಿದ್ದರು. ಆಗ ಅವರ ಅಭಿಪ್ರಾಯವನ್ನು ಕಾರ್ಮಿಕ ವಿರೋಧಿ ಎಂದೇ ಬಣ್ಣಿಸಲಾಗಿತ್ತು. ಆದರೆ ಈಗ ಆಗುತ್ತಿರುವುದು ಅದೇ. ಮಾಲ್ ಸಂಸ್ಕೃತಿ ಬಂದಮೇಲೆ ಚಿಲ್ಲರೆ ಅಂಗಡಿಗಳು ಮುಚ್ಚಿಹೋಗಿವೆ, ಸ್ಟಾರ್ ಕಲ್ಚರ್ ಬಂದಮೇಲೆ ಕಲಾತ್ಮಕ ಚಿತ್ರಗಳನ್ನು ಕೇಳುವವರೇ ಇಲ್ಲ. ಅದೇ ಥರ ಡಬ್ಬಿಂಗ್ ಬಂದಮೇಲೆ ಕಾರ್ಮಿಕರೂ ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕಾಗಬಹುದು.
6. ಡಬ್ಬಿಂಗ್ ಚಿತ್ರಗಳು ಬಂದವು ಅಂದಾಕ್ಷಣ, ಮೂಲಭಾಷೆಯ ಚಿತ್ರಗಳ ಬಿಡುಗಡೆಯನ್ನು ಇಲ್ಲಿ ತಡೆಹಿಡಿಯುವುದಕ್ಕಾಗುವುದಿಲ್ಲ. ಉದಾಹರಣೆಗೆ ರಜನಿಕಾಂತ್ ಸಿನಿಮಾದ ತಮಿಳು ವರ್ಷನ್ ತಮಿಳಿಗೋಸ್ಕರ ಮೀಸಲಾಗಿರುವ ಚಿತ್ರಮಂದಿರಗಳಲ್ಲಿ ತನ್ನ ಪಾಡಿಗೆ ತೆರೆಕಾಣುತ್ತದೆ. ಅದರ ಡಬ್ಬಿಂಗ್ ವರ್ಷನ್ ಕನ್ನಡಕ್ಕೋಸ್ಕರ ಮೀಸಲಾಗಿರುವ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತದೆ. ತಮಿಳರು (ಬಹುಪಾಲು ಕನ್ನಡಿಗರೂ ಕೂಡಾ) ಮೂಲ ಭಾಷೆಯಲ್ಲಿರುವ ಚಿತ್ರವನ್ನೇ ನೋಡುತ್ತಾರೆ. ಹಾಗಾದಾಗ ಡಬ್ಬಿಂಗ್ ಹಕ್ಕನ್ನು ದುಬಾರಿ ಬೆಲೆಗೆ ಖರೀದಿಸಿದ ಹಂಚಿಕೆದಾರನಿಗೆ ನಷ್ಟವಾಗುವ ಸಾಧ್ಯತೆಯಿಲ್ಲವೇ. ಹಾಗಾಗಿ ಚಿಕ್ಕಪುಟ್ಟ ಕಲಾವಿದರ ಚಿತ್ರಗಳಷ್ಟೇ ಡಬ್ ಆಗಿ ಕನ್ನಡಕ್ಕೆ ಬರಬಹುದು. ಅವುಗಳ ಜೊತೆಗೂ ನಮ್ಮ ಸ್ಟಾರ್ ಚಿತ್ರಗಳಿಗೆ ಪೈಪೋಟಿ ನಡೆಸುವುದಕ್ಕಾಗೋದಿಲ್ಲ ಅಂದರೆ ಅದಕ್ಕಿಂತ ದುರ್ದೈವದ ಸಂಗತಿ ಇನ್ನೇನಿದೆ.
7. ಡಬ್ಬಿಂಗ್ ಚಿತ್ರಗಳು ಬಂದರೆ ಮುಂಬೈನಲ್ಲಿ ಮರಾಠಿ ಚಿತ್ರಗಳಿಗಾದ ಗತಿಯೇ ಕನ್ನಡಕ್ಕೂ ಆಗಬಹುದು ಅನ್ನುವ ವಾದವಿದೆ. ಇದು ಆತಾರ್ಕಿಕವಾದದ್ದು. ಯಾಕೆಂದರೆ ಮುಂಬೈನಲ್ಲಿ ಸ್ಪರ್ಧೆಯಿರುವುದು ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳ ನಡುವೆ ಮಾತ್ರ. ಬೆಂಗಳೂರಿನಲ್ಲಿರುವ ಪರಿಸ್ಥಿತಿ ಇಡೀ ಭಾರತದಲ್ಲೇ ಇಲ್ಲ. ಅಲ್ಲಿ ತೆಲುಗು, ತಮಿಳು, ಹಿಂದಿ, ಹಾಲಿವುಡ್, ಮಲೆಯಾಳಂ , ಕನ್ನಡ ಇವಿಷ್ಟೂ ಭಾಷೆಯ ಚಿತ್ರಗಳು ಪ್ರದರ್ಶನ ಕಾಣುತ್ತವೆ. ಅಷ್ಟೂ ಭಾಷೆಗಳನ್ನಾಡುವ ಜನರು ಇಲ್ಲಿದ್ದಾರೆ ಕೂಡಾ. ಹಾಗಾಗಿ ಡಬ್ಬಿಂಗ್ ಬಂದರೆ ಅದು ಹತ್ತರಲ್ಲೊಂದಾಗಬಹುದೇ ಹೊರತಾಗಿ ಕನ್ನಡ ಚಿತ್ರಗಳ ಸ್ಥಿತಿಗತಿ ಈಗಿರುವುದಕ್ಕಿಂತೇನೂ ಹೀನಾಯವಾಗಲಾರದು.
8. ಡಬ್ಬಿಂಗ್ ಚಿತ್ರಗಳು ಬಂದರೆ ಟೀವಿ ಚಾನೆಲ್ಲುಗಳಿಗಂತೂ ಸುಗ್ಗಿ. ಟೀವಿಗೆ ಮಾರಾಟ ಮಾಡುವ ಸಲುವಾಗಿಯೇ ಡಬ್ಬಿಂಗ್ ಹಕ್ಕನ್ನು ಖರೀದಿಸುವ ನಿರ್ಮಾಪಕರ ಒಂದು ಗುಂಪೇ ಸೃಷ್ಟಿಯಾಗಬಹುದು. ಅಥವಾ ಮೂಲಚಿತ್ರದ ನಿರ್ಮಾಪಕರೇ ನೇರವಾಗಿ ತಮ್ಮ ಚಿತ್ರಗಳ ಡಬ್ಬಿಂಗ್ ಪ್ರತಿಗಳನ್ನು ಕನ್ನಡ ಚಾನೆಲ್ಲುಗಳಿಗೆ ಮಾರಾಟ ಮಾಡಬಹುದು. ಸೀರಿಯಲ್ಲುಗಳ ಕತೆಯೂ ಅದೇ ಆದೀತು.
9. ಡಬ್ಬಿಂಗಿಗೆ ನಿಷೇಧ ಹೇರುವುದರಿಂದ ನಮ್ಮ ಮಕ್ಕಳು ನಮ್ಮದೇ ಭಾಷೆಯಲ್ಲಿ ಡಿಸ್ಕವರಿ ಚಾನೆಲ್ಲು, ಪೋಗೋ ಚಾನೆಲ್ಲುಗಳನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಾರೆ ಅನ್ನುವ ವಾದದಲ್ಲಿ ನನಗ್ಯಾಕೋ ಹುರುಳಿಲ್ಲ ಅನಿಸುತ್ತದೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಈಗ ಎಷ್ಟಿದ್ದಾರೆ ಹೇಳಿ. ಇದ್ದರೂ ಅವರೆಲ್ಲರೂ ಬಡತನದ ರೇಖೆಯಿಂದ ಕೆಳಗಿರುವುದರಿಂದ ಅವರ ಮನೆಯಲ್ಲಿ ಟೀವಿಗಳೇ ಇರುವುದಿಲ್ಲ.
10. ಕಾನೂನಿನ ನೆಲೆಗಟ್ಟಲ್ಲಿ ನೋಡುವುದಾದರೆ ಡಬ್ಬಿಂಗ್ ಸಂಸ್ಕೃತಿಯನ್ನು ಕನ್ನಡಕ್ಕೆ ಬಾರದೇ ಇರುವಂತೆ ತಡೆಯುವುದಕ್ಕೆ ಕಷ್ಟವಿದೆ. ಆದರೆ ಪ್ರತಿಭಟನೆಗಳಂಥ ಹೋರಾಟದ ಮಾರ್ಗ ಹಿಡಿದರೆ ಅದು ಅಸಾಧ್ಯವಲ್ಲ. ಅಂಥಾದ್ದೊಂದು ಇಚ್ಛಾಶಕ್ತಿ ಕನ್ನಡಿಗರಲ್ಲಿ ಇದೆಯಾ. ಕಾವೇರಿ ನೀರಿಗೆ ಹೋರಾಟ ನಡೆದಾಗಲೇ ಅದು ಮಂಡ್ಯದ ಸಮಸ್ಯೆ ಅಂತ ಸುಮ್ಮನಿದ್ದವರು ನಾವು. ಈಗಲೂ ಇದು ಸಿನಿಮಾದವರ ಸಮಸ್ಯೆ, ನಮಗ್ಯಾಕೆ ಅಂತ ಜನರು ತೆಪ್ಪಗಿರುವ ಸಾಧ್ಯತೆಯೇ ಜಾಸ್ತಿ.
ಅಷ್ಟಕ್ಕೂ ಡಬ್ಬಿಂಗ್ ಅನ್ನುವುದು ನಾವಂದುಕೊಂಡ ಹಾಗೆ ರಾಕ್ಷಸನಾ?ಅಥವಾ ಹಾಗೇ ಸುಮ್ಮನೆ ಬಂದುಹೋಗುವ ಅನಪೇಕ್ಷಿತ ಅತಿಥಿಯಾ? ಗ್ರಾಹಕರು (ಪ್ರೇಕ್ಷಕರು) ನಿರ್ಧರಿಸಬೇಕಾದ ಸಂಗತಿಯಿದು. ತಮಾಷೆಗೆ ಹೇಳುವುದಾದರೆ ಡಬ್ಬಿಂಗ್ ಬಂದರೆ ನಮ್ಮ ಮಕ್ಕಳು ತಮಿಳು, ತೆಲುಗು, ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಬಹುದು, ಜೇಮ್ಸ್ ಬಾಂಡ್ ಕನ್ನಡದಲ್ಲಿ ಮಾತಾಡುವುದನ್ನು ನೋಡಿ ನಾವು ಬಿಕ್ಕಿಬಿಕ್ಕಿ ನಗಬಹುದು. ಪರಭಾಷಾ ಚಿತ್ರಗಳಿಂದ ದೃಶ್ಯಗಳನ್ನು ಕದ್ದವರೆಲ್ಲಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬೀಳಬಹುದು. ಇಂಡಿಯಾದಲ್ಲಿರುವ ಎಲ್ಲಾ ನಟರೂ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ ಖ್ಯಾತಿಗೆ ಪಾತ್ರರಾಗಬಹುದು. ಕಂಠದಾನ ಕಲಾವಿದರ ಎಲ್ಲಾ ಬೇಡಿಕೆಗಳಿಗೂ ಫಿಲಂ ಛೇಂಬರ್ ಒಪ್ಪಿಕೊಳ್ಳಲೇಬೇಕಾಗಬಹುದು.
Also See
Who Will Survive Dubbing? - Analysis
Anti Dubbing Cartel - CCI ACT- Decoded
Bundh On 27th - Will Film Industry Support?
Protest Against Dubbing - Industry Bundh on 27th
CCI Notice - Movie Industry In Problem?
Raavana - CCI Order Not of Much Help
Dubbing In Kannada Will Be Failure - Prashanth
Kamal Hassan Says Dubbing Not Good
Anti Dubbing Lobby takes Their Battle to Capital
Dubbing Issue - Film Industry Meeting Today
Ramu and K Manju Defend Their Dubbing Actions
Dubbing Films To Have A Grand Entry - Exclusive
Dubbing To Enter Kannada Cinema?
Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ
Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್
Uma Column 20 -...ವಿಷ್ಣೂ ಎನಬಾರದೇ....
Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.