ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಕಾರುಬಾರು ದೊಡ್ಡದು. ನಟರನ್ನು ದೇವರಂತೆಯೇ ಕಾಣುತ್ತಾರೆ. ಅಂತಹ ಚಿತ್ರರಂಗದಲ್ಲಿ ಸ್ಟಾರ್ ನಟರು ಈಗ ಬಹಿಷ್ಕಾರದ ಬಿಸಿ ಎದುರಿಸುತ್ತಿದ್ದಾರೆ. ಅದರಲ್ಲೂ ಧನುಷ್, ವಿಶಾಲ್, ಸಿಂಬು, ಅಥರ್ವ ಅವರಂತಹ ನಟರು. ಈ ಎಲ್ಲ ನಟರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ. ಕಳೆದ 13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ ನಟರು ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್ ಮಾಡಲಾಗಿದೆ ಎನ್ನುವುದು.
ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ ಹಾಗೂ ಕಲಾವಿದರ ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ.
ಇಷ್ಟಕ್ಕೂ ಯಾವ್ಯಾವ ನಟರ ಮೇಲೆ ಯಾವ ರೀತಿಯ ಆರೋಪಗಳಿವೆ ಅನ್ನೋದನ್ನ ನೋಡೋದಾದ್ರೆ..
ನಟ ಸಿಂಬು : ಶೂಟಿಂಗ್ ಜಾಗಕ್ಕೆ ಹೇಳಿದ ಸಮಯಕ್ಕೆ ಬರುವುದಿಲ್ಲ. ಚಿತ್ರೀಕರಣವನ್ನ ಯಾವಾಗ ಎಂದರೆ ಆವಾಗ ಪ್ಯಾಕಪ್ ಮಾಡಿಸ್ತಾರೆ.
ಧನುಷ್ : ತಮ್ಮ ಬ್ಯಾನರ್ ಚಿತ್ರಕ್ಕಾಗಿ ಬೇರೆಯವರಿಗೆ ಒಪ್ಪಿಕೊಂಡಿದ್ದ ಚಿತ್ರಗಳಿಗೆ ಸ್ಪಂದಿಸುವುದಿಲ್ಲ
ವಿಶಾಲ್ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ.
ಅಥರ್ವ : ಇವರನ್ನು ನಂಬಿಕೊಂಡು ಯಾವುದೇ ಪ್ಲಾನ್ ಮಾಡಿಕೊಳ್ಳೋಕೆ ಆಗಲ್ಲ. ಚಿತ್ರೀಕರಣ, ಚಿತ್ರದ ಪ್ರಚಾರ ಎಲ್ಲವೂ ಇವರ ಬೇಜವಾಬ್ದಾರಿಯಿಂದಾಗಿ ದುಬಾರಿಯಾಗುತ್ತಿದೆ.