ನಟ ಡಾ. ವಿಷ್ಣುವಿರ್ಧನ್ ಅವರ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ಕೆಲಸ ಮಾಡಿದ್ದ, ವಿಷ್ಣುವರ್ಧನ್ ಅವರ ಕೆಲವು ಚಿತ್ರಗಳಿಗೆ ಡೈರೆಕ್ಷನ್ ಕೂಡಾ ಮಾಡಿದ್ದ ಹಿರಿಯ ನಿರ್ದೇಶಕ ವಿ.ಆರ್.ಭಾಸ್ಕರ್ ನಿಧನರಾಗಿದ್ದಾರೆ. ಸಂಭಾಷಣೆಕಾರರಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದ ವಿ.ಆರ್.ಭಾಸ್ಕರ್, ಕೆಲವು ಚಿತ್ರಗಳಿಗೆ ಆಕ್ಷನ್ ಕಟ್ ಕೂಡಾ ಹೇಳಿದ್ದರು.
ಅನುರಾಗ ದೇವತೆ, ಮನೆಮನೆ ರಾಮಾಯಣ, ಸಕಲಕಲಾವಲ್ಲಭ, ಹೃದಯಾಂಜಲಿ, ಪಂಜಾಬಿ ಹೌಸ್, ಮುಂತಾದ ಸಿನಿಮಾಗಳಿಗೆ ವಿ.ಆರ್.ಭಾಸ್ಕರ್ ನಿರ್ದೇಶನ ಮಾಡಿದ್ದರು.
ಸುಪ್ರಭಾತ, ಆಪ್ರಮಿತ್ರ, ಆಪ್ತರಕ್ಷಕ, ರುದ್ರ ನಾಗ, ಕರ್ತವ್ಯ, ನನ್ನ ಶತ್ರು , ಪೊಲೀಸ್ ಮತ್ತು ದಾದಾ, ರುದ್ರ ವೀಣೆ, ದಾದಾ, ಆರಾಧನೆ, ಕರುಳಿನ ಕುಡಿ, ಕದಂಬರುದ್ರ, ಲಯನ್ ಜಗಪತಿ ರಾವ್, ಒಂದಾಗಿ ಬಾಳು, ಡಿಸೆಂಬರ್ 31, ಹೃದಯವಂತ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಏಕದಂತ, ಡಾಕ್ಟರ್ ಕೃಷ್ಣ, ಗಾಡ್ ಫಾದರ್, ಸೇರಿದಂತೆ ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.
ವಿಷ್ಣುವರ್ಧನ್ ಮತ್ತು ಭಾಸ್ಕರ್ ಅವರ ನಡುವೆ ಸಿನಿಮಾಗಳನ್ನೂ ಮೀರಿದ ಬಾಂಧವ್ಯವಿತ್ತು. ಒಡನಾಟವಿತ್ತು. ಇತ್ತೀಚೆಗೆ ಪತ್ನಿ ಹಾಗೂ ಮಗನನ್ನು ಕಳೆದುಕೊಂಡಿದ್ದ ಭಾಸ್ಕರ್ ದುಃಖದಲ್ಲಿದ್ದರು. ವಿ.ಆರ್. ಭಾಸ್ಕರ್ ಅವರಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ.