ಶೃತಿ ಹರಿಹರನ್ ಅವರು ಮಾಡಿದ್ದ ಮೀಟೂ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದಾದ ನಂತರ ಪ್ರಕರಣ ಮುಗಿಯಿತು ಎಂದುಕೊಂಡಿದ್ದರು. ಆದರೆ ಮುಗಿದಿಲ್ಲ. ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ಅನ್ನು ಚಾಲೇಂಜ್ ಮಾಡಿದ್ದ ಶೃತಿ ಹರಿಹರನ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಾಕ್ಷ್ಯ ಒದಗಿಸುವಂತೆ ನಟಿ ಶ್ರುತಿ ಹರಿಹರನ್ ಅವರಿಗೆ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿರುವ ಬಿ-ರಿಪೋರ್ಟ್ ಪ್ರಶ್ನಿಸಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ಸಾಕ್ಷ್ಯಗಳನ್ನು ಒದಗಿಸುವಂತೆ ಶ್ರುತಿಗೆ ನೋಟಿಸ್ ಜಾರಿ ಮಾಡಿದೆ.
ವಿಸ್ಮಯ ಸಿನಿಮಾದ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಚಿತ್ರದ ರೊಮ್ಯಾನ್ ದೃಶ್ಯ ಚಿತ್ರೀಕರಣದಲ್ಲಿ ಅರ್ಜುನ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಶ್ರುತಿ ಹರಿಹರನ್ ದೂರು ದಾಖಲಿಸಿ ವಿಚಾರಣೆಯಲ್ಲಿ ಭಾಗಿಯಾಗುವ ಮೂಲಕ ಮೀ ಟೂ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ನಟ ಅಂಬರೀಶ್ ಮತ್ತು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯು ಸಭೆ ನಡೆಸಿ ಸಮಸ್ಯೆಯನ್ನು ರಾಜಿ ಮೂಲಕ ಬಗೆಹರಿಸಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಮಣಿಯದ ಶ್ರುತಿ ಹರಿಹರನ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ಬಳಿಕ ಪೊಲೀಸರು ಡಿಸೆಂಬರ್ 2021 ರಲ್ಲಿ ಬಿ ರಿಪೋರ್ಟ್ ಫೈಲ್ ಮಾಡಿದ್ದರು. ಜನವರಿ 13, 2022 ರಂದು, ಬೆಂಗಳೂರು ನ್ಯಾಯಾಲಯವು ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ಶೃತಿ ಹರಿಹರನ್ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ಪೊಲೀಸರಿಗೆ ಸರಿಯಾದ ಸಾಕ್ಷ್ಯವನ್ನು ಒದಗಿಸುವಂತೆ ನಟಿಗೆ ಕೋರ್ಟ್ ಸೂಚಿಸಿದೆ.