ಸಿದ್ಧಾರ್ಥ ಚಿತ್ರದ ಮೂಲಕ ಕಾಲಿಟ್ಟ ವಿನಯ್ ರಾಜ್`ಕುಮಾರ್ ಅವರಿಗೆ ಚಿತ್ರರಂಗದಲ್ಲಿ ಇನ್ನೂ ಶುಕ್ರದೆಸೆ ಆರಂಭವಾಗಿಲ್ಲ ಎಂದೇ ಹೇಳಬೇಕು. ವಿನಯ್ ಅವರ ಹಲವು ಚಿತ್ರಗಳು ಸುದ್ದಿಯಲ್ಲಿರುವುದು ನಿಜ. ವಿನಯ್ ಹೊಸ ಚಿತ್ರಗಳನ್ನು, ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅವರ ಚಿತ್ರಗಳು ಶುರುವಾಗಿ ಬಿಡುಗಡೆಯಾವುದಕ್ಕೆ ನಿಧಾನವಾಗುತ್ತಿದೆ. ಗ್ರಾಮಾಯಣದ ಕಥೆಯೂ ಹಾಗೆಯೇ ಆಗಿದೆ.
ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಶುರುವಾಗಿದ್ದ, ಬಹುತೇಕ ನಿಂತೇ ಹೋಗಿದ್ದ ಗ್ರಾಮಾಯಣಕ್ಕೆ ಈಗ ಮುಕ್ತಿ ಸಿಗುವಂಂತೆ ಕಾಣುತ್ತಿದೆ. ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಶಿವಣ್ಣ ಆಪ್ತಬಳಗದ ಕೆ.ಪಿ.ಶ್ರೀಕಾಂತ್ ಸಿನಿಮಾವನ್ನು ಟೇಕಾಫ್ ಮಾಡುತ್ತಿದ್ದಾರೆ. ‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್ನಿಂದ ಹಲವರ ಗಮನ ಸೆಳೆದಿತ್ತು. ಕೋವಿಡ್ನಿಂದ ಮತ್ತು ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಹೊಸದಾಗಿ ಚಿತ್ರವನ್ನ ಶುರು ಮಾಡ್ತಿದ್ದಾರೆ. ಜೂನ್ 8ರಂದು ಈ ಸಿನಿಮಾದ ಮುಹೂರ್ತ ನಡೆಯಲಿದೆ. ಆರಂಭದಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್, ನಿಜಕ್ಕೂ ಅದ್ಭುತವಾಗಿತ್ತು. ಬೇರೆಯದೇ ಫ್ಲೇವರ್ ಇತ್ತು. ವಿನಯ್ ರಾಜಕುಮಾರ್ ವ್ಹಾವ್ ಎನ್ನುವಂತೆ ಕಾಣಿಸಿದ್ದರು. ಟೇಕಿಂಗ್ಸ್ ಸಖತ್ತಾಗಿಯೇ ಇತ್ತು. ಈಗ ನಿರ್ಮಾಪಕರು ಬದಲಾಗಿದ್ದಾರೆ. 8ನೇ ತಾರೀಕು ಮುಹೂರ್ತ.