ಮೆಗಾಸ್ಟಾರ್ ಚಿರಂಜೀವಿಗೆ ಕ್ಯಾನ್ಸರ್ ಬಂದಿದೆಯಂತೆ ಅಭಿಮಾನಿಗಳಿಗೆ ಹೇಗಾಗಬೇಡ. ಚಿರಂಜೀವಿಯವರನ್ನ ಅಭಿಮಾನಿಗಳು ಹೃದಯದಲ್ಲಿಟ್ಟುಕೊಂಡು ಪೂಜಿಸುತ್ತಾರೆ. ಆರಾಧಿಸುತ್ತಾರೆ. ಅಂತಹ ಚಿರುಗೆ ಕ್ಯಾನ್ಸರ್ ಸೋಂಕು ತಗುಲಿದೆ ಎಂಬ ಸುದ್ದಿ ಹಬ್ಬಿದರೆ ಏನೇನೆಲ್ಲ ಅನಾಹುತವಾಗಬೇಡ. ಅಭಿಮಾನಿಗಳಂತೂ ಸುದ್ದಿ ತಿಳಿಯುತ್ತಲೇ ಕಣ್ಣೀರಿಟ್ಟರು. ಒಂದು ಸಂಚಲನವೇ ಸೃಷ್ಟಿಯಾಗಿ ಹೋಯಿತು. ತಕ್ಷಣವೇ ಸುದ್ದಿಗೆ ಸ್ಪಂದಿಸಿದರು ಚಿರಂಜೀವಿ. ತಮ್ಮ ಅಭಿಮಾನಿಗಳ ವಿಷಯ ಚೆನ್ನಾಗಿ ಗೊತ್ತಿದ್ದ ಚಿರಂಜೀವಿ, ಕ್ಯಾನ್ಸರ್ ವಿಷಯ ಸುಳ್ಳು ಎಂದು ಟ್ವೀಟ್ ಮಾಡಿದರು. ಇದೆಲ್ಲ ಕೆಲವೇ ಗಂಟೆಗಳಲ್ಲಿ ಆಗಿ ಹೋಗಿತ್ತು.
ಇಷ್ಟಕ್ಕೂ ಆಗಿದ್ದೇನೆಂದರೆ, ಇತ್ತೀಚೆಗೆ ಚಿರಂಜೀವಿ ಒಂದು ಕ್ಯಾನ್ಸರ್ ಸೆಂಟರ್ ಉದ್ಘಾಟಿಸಿದ್ದರು. ಅಲ್ಲಿ ಮಾತನಾಡುತ್ತಾ . ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ತಡೆಗಟ್ಟಬಹುದು. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು. ಅದು ಹೇಗ್ ಹೇಗೋ ಹರಡಿ, ಸುದ್ದಿಯಾಗಿ ಚಿರಂಜೀವಿಯವರಿಗೆ ಮಾರಣಾಂತಿಕ ಕ್ಯಾನ್ಸರ್ ಇದೆಯಂತೆ. ಲುಕೇಮಿಯಾದಲ್ಲಿದ್ದಾರಂತೆ. ಫೈನಲ್ ಸ್ಟೇಜ್ ತಲುಪಿದ್ದಾರಂತೆ.. ಎಂದೆಲ್ಲ ತರಹೇವಾರಿ ಸುದ್ದಿಗಳು ಹೊರಬಿದ್ದಿದ್ದವು.
ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನಗೆ ಕ್ಯಾನ್ಸರ್ ಆಗಿದೆ ಮತ್ತು ಚಿಕಿತ್ಸೆಯಿಂದ ಬದುಕಿದೆ ಅಂತ ಸುದ್ದಿ ಮಾಡಿದ್ದಾರೆ. ಅನಗತ್ಯವಾಗಿ ಗೊಂದಲ ಶುರುವಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ ಅಂತ ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ಅನೇಕರಿಗೆ ಭಯ ಮತ್ತು ನೋವು ಆಗುತ್ತದೆ ಎಂದು ಹೇಳಿಕೆ ಕೊಟ್ಟರು. ಆ ಹೇಳಿಕೆ ಬಂದ ಮೇಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.
ಅಭಿಮಾನಿಗಳ ಅತಂಕಕ್ಕೆ ಕಾರಣಗಳಿವೆ. ಕ್ಯಾನ್ಸರ್ ಎಂಬುದು ಚಿತ್ರರಂಗದಲ್ಲಿರುವವನ್ನು ಅತಿಯಾಗಿ ಕಾಡುತ್ತಿದೆ. ಮನಿಶಾ ಕೊಯಿರಾಲಾ, ಸೊನಾಲಿ ಬೇಂದ್ರೆ, ಯುವರಾಜ್ ಸಿಂಗ್, ಕಿರಣ್ ಖೇರ್, ರಾಕೇಶ್ ರೋಷನ್..ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೆಲವು ಸೆಲಬ್ರಿಟಿಗಳು ಹೇಳಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಚಿರಂಜೀವಿ ಫ್ಯಾನ್ಸ್ ಈಗ ನಿರಾಳ.