ಸೆಪ್ಟೆಂಬರ್ 18. ಆ ದಿನ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ ನಾಡಹಬ್ಬದಂತೆ ಆಚರಿಸಿತ್ತು ವಿಷ್ಣುಸೇನೆ. ವೀರಕಪುತ್ರ ಶ್ರೀನಿವಾಸ್ ಅವರು ಆ ದಿನ ವಿಷ್ಣುವರ್ಧನ್ ಅವರ 50 ಕಟೌಟ್`ಗಳನ್ನು ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ನಿಲ್ಲಿಸಲಾಗಿತ್ತ. ಅದಕ್ಕೆ ಕಾರಣವೂ ಇತ್ತು. ನಾಗರಹಾವು ತೆರೆಕಂಡು 50 ವರ್ಷ ಪೂರೈಸಿದ ಸಂಭ್ರಮವನ್ನು ಹುಟ್ಟುಹಬ್ಬದಂದು ವಿಶೇಷವಾಗಿ ಆಚರಿಸಿದ್ದರು ವಿಷ್ಣು ಫ್ಯಾನ್ಸ್. ಇದೀಗ ಆ ಸಂಭ್ರಮ ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ 'ಕಟೌಟ್ ಜಾತ್ರೆ' ದಾಖಲಾಗಿದೆ.
ವಿಷ್ಣುವರ್ಧನ್ ಅವರ ೫೦ ಸೇನಾನಿಗಳು 2022ರ ಸೆಪ್ಟೆಂಬರ್ 18ರಂದು ಬೆಂಗಳೂರಿನ ಡಾ ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್ ಕಟೌಟ್ಗಳನ್ನು ಸ್ಥಾಪಿಸಿ 'ಕಟೌಟ್ ಜಾತ್ರೆ' ಸಮಾರಂಭ ಆಯೋಜಿಸಿದ್ದರು. ಬೃಹತ್ ಹಾರಗಳನ್ನು ಸಹ ಹಾಕಿಸಿದ್ದರು. ಅಂದಾಜು 40 ಲಕ್ಷ ರೂಪಾಯಿ ಹಣ ಖರ್ಚಾಗಿತ್ತು. ಪೊಲೀಸ್ ಇಲಾಖೆಯ ಪ್ರಕಾರ, ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್ ಜಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಕಟೌಟ್ ಜಾತ್ರೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದ್ದರು. ಅಲ್ಲದೆ, ಅವರೇ ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಮಾಡಿದ್ದರು. ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಕಟೌಟ್ ಜಾತ್ರೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿ ಸೇರ್ಪಡೆಗೊಂಡಿವೆ. ದಾಖಲೆಯ ಪ್ರಮಾಣ ಪತ್ರ ಮತ್ತು ಪದಕಗಳು ನಮಗೆ ತಲುಪಿವೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಇದರ ಯಶಸ್ಸಿನ ಪಾಲು 50 ಸೇನಾನಿಗಳಿಗೆ ಹಾಗೂ ಕಟೌಟ್ ವಿನ್ಯಾಸ ಮಾಡಿದ ರಾಜು, ವಿಷ್ಣು ಹಾಗೂ ಇಡೀ ಕಾರ್ಯಕ್ರಮ ಆಯೋಜನೆ ನೋಡಿಕೊಂಡ ಆನಂದರಾಜ್, ಸಾಹಿತಿ ಜನಾರ್ದನ್ ರಾವ್ ಅವರಿಗೆ ಸಲ್ಲಬೇಕು ಎಂದು ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.