ರವಿಚಂದ್ರನ್ ಹುಟ್ಟುಹಬ್ಬದ ದಿನ ಸರ್`ಪ್ರೈಸ್ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಮಹಾವಿಷ್ಣುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು, ಭಕ್ತಿಪ್ರಧಾನ ಚಿತ್ರದಲ್ಲಿ ದೇವರ ಅವತಾರದಲ್ಲಿ ನಟಿಸೋಕೆ ಓಕೆ ಎಂದಿದ್ದಾರೆ ರವಿಚಂದ್ರನ್. ಕನ್ನಡದಲಿ ಪೌರಾಣಿಕ ಚಿತ್ರಗಳಲ್ಲಿ ನಟಿಸಿದ ಕಲಾವಿದರ ಸಂಖ್ಯೆ ಅದರಲ್ಲೂ ಹೀರೋಗಳ ಸಂಖ್ಯೆ ಕಡಿಮೆ. ಈಗ ಇರೋ ಹೀರೋಗಳಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಮಾತ್ರ ಶಿವ ಮೆಚ್ಚಿದ ಕಣ್ಣಪ್ಪ ಹಾಗೂ ಸಂತೆಯಲ್ಲಿ ನಿಂತ ಕಬೀರ ಚಿತ್ರಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್, ಶಿವಣ್ಣ ಅವರ ಸಮಕಾಲೀನ ನಟರಾದರೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದು ಕುರುಕ್ಷೇತ್ರದಲ್ಲಿಯೇ. ಆ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್, ಈಗ ಮಹಾವಿಷ್ಣುವಾಗುತ್ತಿದ್ದಾರೆ.
ರವಿಚಂದ್ರನ್ ಒಪ್ಪಿಕೊಂಡಿರುವ ಭಕ್ತಿ ಪ್ರಧಾನ ಸಿನಿಮಾವನ್ನು ಪುರುಷೋತ್ತಮ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಎನ್ ಎಸ್ ರಾಜ್ಕುಮಾರ್. ಈ ಹಿಂದೆ 'ಕ್ರೇಜಿ ಸ್ಟಾರ್', 'ಕನ್ನಡಿಗ' ಸಿನಿಮಾಗಳನ್ನು ರಾಜ್ಕುಮಾರ್ ನಿರ್ಮಾಣ ಮಾಡಿದ್ದ, ಈಗ ಗೌರಿ ಶಂಕರ ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿರುವ ಎನ್.ಎಸ್.ರಾಜಕುಮಾರ್ ಅವರೇ ಈ ಚಿತ್ರಕ್ಕೂ ಪ್ರೊಡ್ಯೂಸರ್.
ಇನ್ನು ಡೈರೆಕ್ಟರ್ ಪುರುಷೋತ್ತಮ್ ವಿಷಯಕ್ಕೆ ಬಂದರೆ, ಅವರು ಕಳೆದ 20 ವರ್ಷಗಳಲ್ಲಿ ಮಾಡಿದ್ದ ಚಿತ್ರಗಳಲ್ಲಿ ಭಕ್ತಿ ಪ್ರಧಾನ ಚಿತ್ರಗಳೇ ಹೆಚ್ಚು. 'ಜಗದ್ಗುರು ಶ್ರೀರೇಣುಕಾಚಾರ್ಯ ಮಹಾತ್ಮೆ', 'ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗ', 'ಮಹಾಶರಣ ಹರಳಯ್ಯ', 'ಭಕ್ತ ಶಂಕರ' ಮುಂತಾದ ಸಿನಿಮಾಗಳನ್ನು ಪುರುಷೋತ್ತಮ್ ನಿರ್ದೇಶಿಸಿದ್ದು, ಜತೆಗೆ ಕಥೆ, ಚಿತ್ರಕಥೆ, ಹಾಡುಗಳನ್ನು ಕೂಡ ಅವರು ಬರೆಯುತ್ತಾರೆ. ರವಿಚಂದ್ರನ್ ಮತ್ತು ಪುರುಷೋತ್ತಮ್ ಕಾಂಬಿನೇಷನ್ ಸಿನಿಮಾಗೆ ಈಗಾಗಲೇ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಕಳೆದ ನಾಲ್ಕು ತಿಂಗಳಿಂದ ಈ ಸಿನಿಮಾಗೆ ಕೆಲಸ ಮಾಡಲಾಗಿದೆಯಂತೆ. ಜೂನ್ನಿಂದ ಶೂಟಿಂಗ್ ಆರಂಭವಾಗಲಿದೆ.
ರವಿಚಂದ್ರನ್ ಸದ್ಯಕ್ಕೆ ಪುರುಷೋತ್ತಮ್-ರಾಜ್`ಕುಮಾರ್ ಜೊತೆ ಜಡ್ಜ್`ಮೆಂಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ರವಿಚಂದ್ರನ್ ಅವರಿಗೆ ಮೇಘನಾ ಗಾಂವ್ಕರ್ ನಾಯಕಿ. ಇನ್ನು ಧ್ರುವ ಸರ್ಜಾ-ಜೋಗಿ ಪ್ರೇಮ್ ಜೋಡಿಯ ಕೆಡಿಯಲ್ಲೂ ನಟಿಸುತ್ತಿದ್ದಾರೆ.