ಈಗಾಗಲೇ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಜೂನ್ 5ರಿಂದ ಹೊಸ ಸಮಸ್ಯೆ ಶುರುವಾಗಲಿದೆ. ಚಿತ್ರರಂಗದ ಹೊರಾಂಗಣ ಚಿತ್ರೀಕರಣವೇ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಕರ್ನಾಟಕ ಸಿನಿ ಔಟ್`ಡೋರ್ ಯುನಿಟ್ಸ್ ಅಸೋಸಿಯೇಷನ್, ಜೂನ್ 5ರಿಂದ ಹೊರಾಂಗಣ ಚಿತ್ರೀಕರಣಕ್ಕೆ ಅಗತ್ಯ ಇರುವ ಜನರೇಟರ್, ಕ್ಯಾಮೆರಾ, ಸೌಂಡ್, ಲೈಟ್ಸ್.. ಸೇರಿದಂತೆ ಯಾವುದನ್ನೂ ಸರಬರಾಜು ಮಾಡದೇ ಇರಲು ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಜೂನ್ 25ರಂದು ಸಭೆ ಕರೆದು 5ರಿಂದ ಚಿತ್ರೀಕರಣ ಸ್ಥಗಿತಗೊಳಿಸುವ, ಯಾವುದೇ ರೀತಿ ಸಹಕಾರ ನೀಡದೇ ಇರುವ ತೀರ್ಮಾನ ಕೈಗೊಳ್ಳಲಾಗಿದೆ.
ಹೊರಾಂಗಣ ಚಿತ್ರೀಕರಣ ಸ್ಥಗಿತಕ್ಕೆ ಕಾರಣ ಏನು..?
ಸರ್ಕಾರದ ಸಬ್ಸಿಡಿಗಾಗಿ ಸಿನಿಮಾಗಳು ಎನ್`ಓಸಿ ಕೊಡಬೇಕು. ಆದರೆ ಹಲವು ಸಿನಿಮಾಗಳು ನಕಲಿ ಪ್ರಮಾಣ ಪತ್ರ ಬಳಸುತ್ತಿವೆ. ಆದರೆ ವಾಸ್ತವದಲ್ಲಿ ಅದು ಸಂಘದ ಗಮನಕ್ಕೇ ಬಂದಿಲ್ಲ. ಇದು ಅತ್ತ ಸಂಘದಲ್ಲಿರುವ ಕಾರ್ಮಿಕರು, ಮಾಲೀಕರು ಹಾಗೂ ವಾರ್ತಾ ಇಲಾಖೆ ಅರ್ಥಾತ್ ಸರ್ಕಾರಕ್ಕೂ ಮೋಸ ಎನ್ನುವುದು ಸಂಘದ ಆರೋಪ.
ಕೆಲವು ಔಟ್`ಡೋರ್ ಯೂನಿಟ್`ಗಳು ಸಂಘದ ಸದಸ್ಯರೂ ಅಲ್ಲ. ಬೆಂಗಳೂರಿನ ಹೊರಗೂ ಮೈಸೂರು, ಹುಬ್ಬಳ್ಳಿಯಲ್ಲೂ ಯುನಿಟ್`ಗಳಿವೆ. ಅವರಿಗೆ ಯಾರು ಅನುಮತಿ ಕೊಟ್ಟರು, ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಇಲ್ಲಿಯೂ ಸರ್ಕಾರಕ್ಕೆ ಹಾಗೂ ನೋಂದಣಿ ಮಾಡಿಕೊಂಡಿರುವ ಯುನಿಟ್ ಮತ್ತು ಕಾರ್ಮಿಕರಿಗೆ ವಂಚನೆಯಾಗುತ್ತಿದೆ.
ಇಲ್ಲಿ ವಾರ್ತಾ ಇಲಾಖೆಗೆ, ಸರ್ಕಾರಕ್ಕೆ ಈ ಔಟ್ ಡೋರ್ ಯುನಿಟ್`ಗಳಿಂದ ವಂಚನೆಯಾಗುತ್ತಿದೆ. ಅತ್ತ ಸರ್ಕಾರದಿಂದಲೂ ಈ ಔಟ್`ಡೋರ್ ಯುನಿಟ್`ಗಳಿಗೆ ವಂಚನೆಯಾಗುತ್ತಿದೆ…
ಹೀಗೆ ಹಲವು ಕಾರಣಗಳನ್ನು ಮುಂದಿಟ್ಟಿದೆ ಕನಾಟಕದ ಚಲನಚಿತ್ರ ಔಟ್`ಡೋರ್ ಯುನಿಟ್ ಅಸೋಸಿಯೇಷನ್. ಈ ಹಿಂದೆಯೂ ಇದರ ಬಗ್ಗೆ ಗಮನಕ್ಕೆ ತರಲಾಗಿತ್ತು. ಜನವರಿಯಲ್ಲಿ ಈ ಪ್ರಸ್ತಾಪ ಮಾಡಲಾಗಿತ್ತಾದರೂ, ಸರಿ ಪಡಿಸುತ್ತೇವೆ ಎಂಬ ಭರವಸೆಯೊಂದಿಗೆ ಮುಷ್ಕರ ಹಿಂದೆಗೆದುಕೊಳ್ಳಲಾಗಿತ್ತು ಆದರೆ ಯುನಿಟ್ ಅಸೋಸಿಯೇಷನ್ ಮುಷ್ಕರ ವಾಪಸ್ ಪಡೆಯುತ್ತಿದ್ದಂತೆ, ಭರವಸೆ ಕೊಟ್ಟಿದ್ದವರೂ ಸುಮ್ಮನಾಗಿಬಿಟ್ಟರು. ಹೀಗಾಗಿ ಈ ಬಾರಿ ಜೂನ್ 5ರಂದು ಹೊರಾಂಗಣ ಚಿತ್ರೀಕರಣಕ್ಕೆ ಲೈಟ್ಸ್, ಜನರೇಟರ್, ಕ್ಯಾಮೆರಾ, ಸೌಂಡ್.. ಹೀಗೆ ಹೊರಾಂಗಣ ಚಿತ್ರೀಕರಣಕ್ಕೆ ಬೇಕಾದ ಯಾವ ವ್ಯವಸ್ಥೆಯನ್ನೂ ಮಾಡದೆ ಮುಷ್ಕರ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ ಕರ್ನಾಟಕ ಸಿನಿ ಔಟ್`ಡೋರ್ ಯುನಿಟ್ ಅಸೋಸಿಯೇಷನ್ ಅಧ್ಯಕ್ಷರಾದ ಎ.ಹೆಚ್.ಭಟ್.