ಕೆಜಿಎಫ್ ಮುಗಿದ ನಂತರ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಚಾಲ್ತಿಯಲ್ಲಿತ್ತು. ಕೆಜಿಎಫ್ ಚಿತ್ರದ ಸಕ್ಸಸ್ ಯಶ್ ಅವರ ಗ್ರಾಫ್, ಪ್ಲಾನ್ ಎಲ್ಲವನ್ನೂ ಬದಲಿಸಿತ್ತು. ಅದೇ ಕಾರಣಕ್ಕೆ ಕಿರಾತಕ 2 ಚಿತ್ರವೂ ಸ್ಥಗಿತಗೊಂಡಿದ್ದೂ ನೆನಪಿದೆ. ಈ ಮಧ್ಯೆ ಮಫ್ತಿ ಚಿತ್ರ ಕೊಟ್ಟಿದ್ದ ನರ್ತನ್, ಯಶ್ ಅವರಿಗೆ ಕಾನ್ಫಿಡೆನ್ಸ್ ಕೊಟ್ಟಿದ್ದರು. ಈಗ ಅದೇ ನರ್ತನ್ ಭೈರತಿ ರಣಗಲ್ ಸಿನಿಮಾ ಮಾಡುತ್ತಿದ್ದಾರೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಅದು.
ಯಶ್ ಅವರ ಮುಂದಿನ ಸಿನಿಮಾ ಯಾವುದು? ನಿರ್ದೇಶಕ ಯಾರು? ಪ್ರೊಡಕ್ಷನ್ ಯಾರು? ಪ್ರೊಡ್ಯೂಸರ್ ಯಾರು? ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ನರ್ತನ್ ಚಿತ್ರವಂತೂ ಸದ್ಯಕ್ಕಿಲ್ಲ. ಹಾಗಾದರೆ ಯಶ್-ನರ್ತನ್ ಚಿತ್ರದ ಕಥೆ ಮುಗಿದಂತೆಯಾ..? ಹಾಗೇನಿಲ್ಲ ಎಂಬ ಉತ್ತರ ಸಿಕ್ಕಿದೆ ನರ್ತನ್ ಅವರ ಕಡೆಯಿಂದ.
ಯಶ್ ಅವರ ಜತೆಗೆ ಸಿನಿಮಾ ಮಾಡಬೇಕು ಅನ್ನೋ ಆಸೆ ನನಗೆ ಮಾತ್ರವಲ್ಲ, ಎಲ್ಲ ನಿರ್ದೇಶಕರಿಗೂ ಇರುತ್ತದೆ. ಅವರಿಗಾಗಿಯೇ ಎಲ್ಲರೂ ಕಾಯುತ್ತಿರುವುದು. ಯಶ್ ಅವರಿಗೆ ನಾವು ದೊಡ್ಡ ಕಥೆಯನ್ನು ಮಾಡಿಕೊಳ್ಳುತ್ತಿದ್ದೆವು. ಕಾರಣಾಂತರಗಳಿಂದ ಮುಂದೆ ಹೋಗಿದೆ. ಇವತ್ತಲ್ಲ, ನಾಳೆ ಅವರೊಂದಿಗೆ ನನ್ನ ಸಿನಿಮಾ ಆಗುತ್ತದೆ ಎಂದಿದ್ದಾರೆ ನರ್ತನ್.
ನರ್ತನ್ ಅವರ ಚಿತ್ರ ವಿಳಂಬವಾಗಿದ್ದಕ್ಕೆ ಕಾರಣ ಒಟಿಟಿಯಂತೆ. ದಿನ ಬೆಳಗಾದರೆ ಒಟಿಟಿಗಳಲ್ಲಿ ಐದೈದು ಸಿನಿಮಾಗಳು ರಿಲೀಸ್ ಆಗುತ್ತಿವೆ. ನಾವು ಅಂದುಕೊಂಡ ಕಂಟೆಂಟ್ ಯಾವ್ ಯಾವುದೋ ಸಿನಿಮಾಗಳಲ್ಲಿ ಬರ್ತಾ ಇದೆ. ಹೀಗೆ ನಮ್ಮ ಕಂಟೆಂಟ್ಗೆ ಬೇರೆ ಬೇರೆ ಸಿನಿಮಾಗಳು ಕನೆಕ್ಷನ್ ಆಗುತ್ತಿರುವುದರಿಂದ, ಬೇರೆಯದೇ ಕಥೆ ಮಾಡೋಣ ಅಂತ ಮುಂದಕ್ಕೆ ಹೋಗುತ್ತಿದ್ದೇವೆ ಅಷ್ಟೇ ಎಂದು ನರ್ತನ್ ಹೇಳಿದ್ದಾರೆ.