ಕೆರಾಡಿ ಸ್ಟುಡಿಯೋಸ್. ರಿಷಬ್ ಶೆಟ್ಟಿ ಆರಂಭಿಸಿರುವ ಹೊಸ ಸಂಸ್ಥೆ. ಈ ಸಂಸ್ಥೆಯ ಕೆಲಸವೇನು? ಉದ್ದೇಶವೇನು? ಈ ಪ್ರಶ್ನೆಗಳಿಗೆ ಸ್ವತಃ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ. ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.
ಕೆರಾಡಿ, ರಿಷಬ್ ಶೆಟ್ಟಿಯವರ ಹುಟ್ಟೂರು. ಕಾಂತಾರದ ಬಹುತೇಕ ಶೂಟಿಂಗ್ ಆಗಿದ್ದು ಕೂಡಾ ಅದೇ ಊರಿನಲ್ಲಿ. ಈ ಸಂಸ್ಥೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಗತಿ ಶೆಟ್ಟಿ. ಇದು ಕೇವಲ ಚಿತ್ರದ ಪ್ರಚಾರ, ಮಾರ್ಕೆಟಿಂಗ್ ನೋಡಿಕೊಳ್ಳುವ ಸಂಸ್ಥೆ. ಈಗಾಗಲೇ ರಿಷಬ್ ಶೆಟ್ಟಿಯವರು ಚಿತ್ರ ನಿರ್ಮಾಣಕ್ಕೆಂದು ರಿಷಬ್ ಶೆಟ್ಟಿ ಫಿಲಮ್ಸ್ ಎಂಬ ಸಂಸ್ಥೆ ಸೃಷ್ಟಿಸಿದ್ದಾಗಿದೆ. ಆ ಸಂಸ್ಥೆಯ ಮೂಲಕವೇ ಹೀರೋ, ಪೆದ್ರೋ, ಶಿವಮ್ಮ ಸಿನಿಮಾ ನಿರ್ಮಾಣವಾಗಿದೆ.
ಪೆದ್ರೊ, ಶಿವಮ್ಮ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿವೆ. ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿವೆ. 'ಪೆದ್ರೋ' ನಿರ್ದೇಶಕ ನಟೇಶ್ ಹೆಗಡೆ ಜತೆ 'ವಾಘಾಚಿ ಪಾಣಿ' ಅನ್ನೋ ಮತ್ತೊಂದು ಸಿನಿಮಾಕ್ಕೂ ರಿಷಬ್ ಹಣ ಹಾಕಿದ್ದಾರೆ. ಅತ್ತ ಪ್ರಮೋದ್ ಶೆಟ್ಟಿ ನಾಯಕತ್ವದಲ್ಲಿ ಸಿದ್ಧವಾಗುತ್ತಿರುವ 'ಲಾಫಿಂಗ್ ಬುದ್ಧ' ಸಿನಿಮಾಕ್ಕೂ ರಿಷಬ್ ನಿರ್ಮಾಪಕ.
ನಿರ್ದೇಶಕರಾಗಿ ರಿಷಬ್ ಶೆಟ್ಟಿಯವರ ಸಿನಿಮಾ ಜರ್ನಿ ಶುರುವಾಗಿದ್ದು ರಿಕ್ಕಿ ಚಿತ್ರದಿಂದ. ಆದರೆ ರಿಕ್ಕಿ ಚಿತ್ರಕ್ಕೆ ಸೂಕ್ತ ಪ್ರಚಾರ ದೊರಕಿಸಿಕೊಳ್ಳಲು ಪರದಾಡುವಂತಾಗಿತ್ತು. ಅಲ್ಲದೆ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಿರಿಕ್ ಪಾರ್ಟಿ, ಹೀರೋ ಸೇರಿದಂತೆ ಹಲವು ಚಿತ್ರಗಳ ಪ್ರಚಾರಕ್ಕೆ ಸ್ವತಃ ರಿಷಬ್ ಐಡಿಯಾ ಕೊಡುತ್ತಿದ್ದರು. ಪ್ರಚಾರ ಮಾಡುತ್ತಿದ್ದರು. ಈಗ ಅದನ್ನು ತಾವೇ ಮಾಡುವುದು ಹಾಗೂ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಈ ಕೆರಾಡಿ ಸ್ಟುಡಿಯೋಸ್ ತಲೆಯೆತ್ತಿದೆ.