ರವಿಚಂದ್ರನ್ ಅವರನ್ನ ಬಯ್ಯೋದಾ.. ಇಷ್ಟಕ್ಕೂ ರವಿಚಂದ್ರನ್ ಅವರನ್ನ ಬಯ್ಯುವ ಅಧಿಕಾರ ಯಾರಿಗೆ ಇದೆ.. ಧೈರ್ಯವಾದರೂ ಎಲ್ಲಿದೆ.. ಎಂದೆಲ್ಲ ಪ್ರಶ್ನೆ ಕೇಳುವಂತಿಲ್ಲ. ಇದನ್ನು ಹೇಳಿರುವುದು ಸ್ವತಃ ರವಿಚಂದ್ರನ್. ಆದರೆ ಸಿನಿಮಾದಲ್ಲಿ. ಬಯ್ಯಿಸಿಕೊಳ್ಳೋದು ರವಿಚಂದ್ರನ್ ಅವರ ಪಾತ್ರ. ಸಿನಿಮಾ ಹೆಸರು ದಿ ಜಡ್ಜ್‍ಮೆಂಟ್.
ಇದ್ರಲ್ಲಿ ಎಲ್ಲರ ಕೈಯಲ್ಲಿ ಬೈಸ್ಕೊಳ್ಳೋ ಪಾತ್ರ ನಂದು. ಹತ್ತಾರು ಮಂದಿ ಬೈತಾನೇ ಇರ್ತಾರೆ. ಧನ್ಯಾ ರಾಮ್ಕುಮಾರ್ ಅಂತೂ ಬಿಸಿನೀರು ಎರಚಿ ಬಾಯಿಗೆ ಬಂದ ಹಾಗೆ ಬೈತಾರೆ. ನೇರವಾಗಿ ಬೈಯೋದಕ್ಕಾಗಲ್ಲ ಅಲ್ವಾ. ಅದಕೆ ಪಾತ್ರದ ಮೂಲಕ ಬೈತಾರೆ. ನಾನು ಜೀವನದಲ್ಲಿ ಏನು ಕಳ್ಕೊಂಡರೂ ನಗು ಕಳ್ಕೊಂಡಿಲ್ಲ. ಇವತ್ತಿಗೂ ಜಗತ್ತಿನ ಹ್ಯಾಪಿಯೆಸ್ಟ್ ವ್ಯಕ್ತಿ ನಾನು ಎಂದು ಹೇಳಿಕೊಂಡಿದ್ದಾರೆ ರವಿಚಂದ್ರನ್.
ಈ ಚಿತ್ರದಲ್ಲಿ ಧನ್ಯಾ ರಾಮ್ ಕುಮಾರ್ ವಿದೇಶದಿಂದ ಬಂದು ಸಮಸ್ಯೆಗೆ ಸಿಲುಕಿಕೊಳ್ಳುವ ಹುಡುಗಿಯಾಗಿ ನಟಿಸುತ್ತಿದ್ದರೆ, ಮೇಘನಾ ಗಾಂವ್ಕರ್ ಲೆಕ್ಚರರ್ ಆಗಿ, ರವಿಚಂದ್ರನ್ ಪತ್ನಿಯಾಗಿ ನಟಿಸುತ್ತಿದ್ದಾರೆ. ಇಷ್ಟಕ್ಕೂ ಈ ಪಾತ್ರವನ್ನ ಒಪ್ಪಿಕೊಂಡಿದ್ದೇಕೆ ಎಂದರೆ ಮುಲಾಜಿಲ್ಲದೆ ಉತ್ತರ ಕೊಟ್ಟರು ರವಿಚಂದ್ರನ್. ದುಡ್ಡು ಕೊಟ್ರು, ಪಾತ್ರ ಒಪ್ಪಿಕೊಂಡೆ. ಅದನ್ನು ಹೇಳೋ ಧೈರ್ಯ ಇರುವುದು ಬಹುಶಃ ಅವರಿಗೆ ಮಾತ್ರ ಎನ್ನಬಹುದೇನೋ. ಅಂದಹಾಗೆ ಡೈರೆಕ್ಟರ್ ಗಿರಿರಾಜ ಕುಲಕರ್ಣಿ. ಇದೊಂದು ಲೀಗಲ್ ಥ್ರಿಲ್ಲರ್. ಹಣಕ್ಕಾಗಿ ನಡೆಯುವ ಕ್ರೈಮ್, ಕ್ರಿಪ್ಟೊಕರೆನ್ಸಿ, ಸಾಮಾಜಿಕ, ರಾಜಕೀಯವಾಗಿ ನಡೆಯುವ ಘಟನೆಯ ಸುತ್ತ ಸಿನಿಮಾವಿದೆ. ಸಾಮಾಜಿಕ ಕಳಕಳಿಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ ಎಂದಿದ್ದಾರೆ ಡೈರೆಕ್ಟರ್ ಕುಲಕರ್ಣಿ.