ರಜನಿಕಾಂತ್. ಸದ್ಯಕ್ಕೆ ಇಂಡಿಯಾದಲ್ಲಿ ಸೂಪರ್ ಸ್ಟಾರ್ ಪದಕ್ಕೆ ಅನ್ವರ್ಥವಾಗಿರುವ ಏಕೈಕ ಸ್ಟಾರ್. ಮಾತೃಭಾಷೆ ಮರಾಠಿ. ಹುಟ್ಟಿದ್ದು-ಬೆಳೆದಿದ್ದು ಕನ್ನಡದ ನೆಲದಲ್ಲಿ. ಸ್ಟಾರ್ ಆಗಿ ಮೆರೆದಿದ್ದು ತಮಿಳುನಾಡಿನಲ್ಲಿ. ಹೀಗೆ ಜರ್ನಿ ಸಾಗಿಸಿರುವ ರಜನಿಕಾಂತ್ ಈಗ ಅಭಿನಯಕ್ಕೇ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ರಜನಿಕಾಂತ್ ಜೈಲರ್ ಸಿನಿಮಾ ಬಳಿಕ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ಸಿನಿಮಾ ಬಳಿಕ ರಜನಿಕಾಂತ್ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾರಂಗದಲ್ಲಿ ವೈರಲ್ ಆಗಿದೆ. ಲೋಕೇಶ್ ಕನಗರಾಜ್ ಅವರ ಜೊತೆಗಿನ ಸಿನಿಮಾವೇ ರಜನಿಕಾಂತ್ ಅವರ ಕೊನೆಯ ಸಿನಿಮಾ ಆಗಲಿದೆ ಎಂದ ನಿರ್ದೇಶಕ ಮಿಸ್ಕಿನ್ ಅವರ ಮಾತು ಇಷ್ಟೆಲ್ಲ ಸುದ್ದಿಯಾಗಲು ಕಾರಣ.
ರಜನಿಕಾಂತ್ ಅವರಿಗೆ ಈಗ 73 ವರ್ಷ. ರಜನಿಕಾಂತ್ ಅವರು ಅಣ್ಣಾತೆ ಸಿನಿಮಾ ಮಾಡಿದಾಗಲೇ ನಿವೃತ್ತರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಆಗಲಿಲ್ಲ. ಈಗ ಜೈಲರ್, ಲಾಲ್ ಸಲಾಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಲೋಗೇಶ್ ಅವರ ಸಿನಿಮಾ ಕೂಡಾ ಇದೆ. ಇನ್ನೂ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯಕ್ಕಂತೂ ನಿವೃತ್ತಿ ಇಲ್ಲ ಎನ್ನುತ್ತಿವೆ ರಜನಿಕಾಂತ್ ಕುಟುಂಬದ ಮೂಲಗಳು. ಆದರೆ ಡಿಸೈಡ್ ಮಾಡೋದು ರಜನಿಕಾಂತ್.