ಮಣಿರತ್ನಂ ವೃತ್ತಿ ಜೀವನದಲ್ಲಿ ಬಹುತೇಕ ಚಿತ್ರಗಳು ಲ್ಯಾಂಡ್ ಮಾರ್ಕ್ ಸಿನಿಮಾಗಳೇ. ಮಣಿರತ್ನಂ ನಿರ್ದೇಶನದ ಗೀತಾಂಜಲಿಯಂತೂ ಅಮರ ಪ್ರೇಮ ಕಾವ್ಯ. ತೆಲುಗು ಚಿತ್ರವಾದರೂ, ಇಡೀ ಭಾರತದಾದ್ಯಂತ ಸಿನಿಮಾ ಸಕ್ಸಸ್ ಆಗಿತ್ತು. 1989ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಅಂದಿನ ಕಾಲಕ್ಕೆ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಜತೆಗೆ ಒಂದು ರಾಷ್ಟ್ರಪ್ರಶಸ್ತಿ, ಐದು ನಂದಿ ಪ್ರಶಸ್ತಿಗಳನ್ನು ಈ ಚಿತ್ರ ಬಾಚಿಕೊಂಡಿತ್ತು. ಈ ಸಿನಿಮಾದಲ್ಲಿ ತೆಲುಗು ನಟ ನಾಗಾರ್ಜುನ ಜತೆ ಗಿರಿಜಾ ಶೆಟ್ಟರ್ ಎಂಬ ಹುಡುಗಿ ನಟಿಸಿದ್ದರು. ತಮ್ಮ ಮೊದಲ ಸಿನಿಮಾದಲ್ಲಿ ಬಹಳ ಲವಲವಿಕೆಯಿಂದ ನಟಿಸಿದ್ದ ಈ ಬೆಡಗಿ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಗೀತಾಂಜಲಿ’ ಖ್ಯಾತಿಯ ಗಿರಿಜಾ ಶೆಟ್ಟರ್ ಕನ್ನಡದ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. . ‘ಗೀತಾಂಜಲಿ’ ಚಿತ್ರದಲ್ಲಿನ ನಟನೆಯ ನಂತರ ಮೋಹನ್ ಲಾಲ್ ಜತೆಗೆ ‘ವಂದಮ್’ ಎಂಬ ಸಿನಿಮಾದಲ್ಲಿ, ತೆಲುಗಿನಲ್ಲಿ ‘ಹೃದಯಾಂಜಲಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಬಹಳ ವರ್ಷಗಳ ನಂತರ ‘ತುಜೆ ಮೇರಿ ಕಸಮ್’ ಎಂಬ ಹಿಂದಿ ಸಿನಿಮಾದಲ್ಲಿ ಸಣ್ಣ ಪಾತ್ರ ನಿರ್ವಹಿಸಿ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಗಿರಿಜಾ ಅವರನ್ನು ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಕರೆತಂದಿದೆ.
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕಿಯ ತಾಯಿಯಾಗಿ ನಟಿಸಲಿದ್ದಾರೆ. ಗೀತಾಂಜಲಿಯಲ್ಲಿ ಜೀವನೋತ್ಸಾಹದ ಹುಡುಗಿಯಾಗಿ ನಟಿಸಿದ್ದ ಗಿರಿಜಾ, ತಾಯಿಯಾದ ಮೇಲೆ ಹೇಗಿರುತ್ತಾರೆ ಅನ್ನೋ ಕಲ್ಪನೆಯಲ್ಲೇ ಪಾತ್ರವನ್ನು ಚಿತ್ರಿಸಿದ್ದಾರಂತೆ ಬೆಳ್ಳಿಯಪ್ಪ. ಬ್ರಿಟನ್ನಿನಲ್ಲಿಯೇ ವಾಸವಿರುವ ಗಿರಿಜಾ ಅವರನ್ನ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿ ಕರೆತರಲಾಗಿದೆ. ಈಗಾಗಲೇ ಗಿರಿಜಾ ಅವರ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಅವರು ಲಂಡನ್ಗೆ ಹಿಂತಿರುಗಿದ್ದಾರಂತೆ.
ಗಿರಿಜಾ ಶೆಟ್ಟರ್ ಚಿತ್ರರಂಗದಿಂದ ದೂರವಾಗಿ ಪತ್ರಕರ್ತೆ ಮತ್ತು ಲೇಖಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್ ಸ್ಪಿರಿಚುಯಲ್ ಸೈಕಾಲಜಿ ಮತ್ತು ಇಂಟರ್ನಲ್ ಯೋಗ ಫಿಲಾಸಫಿಯ ಬಗ್ಗೆ ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಿದ್ದಾರೆ.