ಡುಮ್ಮ ಹೊಟ್ಟೆ. ತಪ್ಪೇನಲ್ಲ ಬಿಡಿ.. ಆದರೆ ಪೊಲೀಸರಿಗೆ ಇದ್ದರೆ ಅದೇ ಕಾಮಿಡಿ.. ಕಳ್ಳರನ್ನು ಹಿಡಿಯುವ ಡ್ಯೂಟಿಯಲ್ಲಿರೋ ಪೊಲೀಸರೇ ಹೊಟ್ಟೆ ಡುಮ್ಮಣ್ಣ ಆಗಿದ್ದರೆ ಹೇಗೆ..? ಇದು ಸೀರಿಯಸ್ ಆಯ್ತು. ಅವರಿಗೂ ಒಂದು ಮನಸ್ಸಿರುತ್ತಲ್ವಾ.. ಅವರಿಗೂ ನೋವಾಗುತ್ತಲ್ವಾ.. ಇಂತದ್ದನ್ನೆಲ್ಲ ಇಟ್ಟುಕೊಂಡೇ ಸಿದ್ಧವಾಗುತ್ತಿರೋ ಚಿತ್ರ ಲಾಫಿಂಗ್ ಬುದ್ದ.
ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ಮಾಪಕರಾದರೆ, ಅವರ ಜೊತೆಯಲ್ಲಿರೋ ಗೆಳೆಯ ಪ್ರಮೋದ್ ಶೆಟ್ಟಿ ನಾಯಕ. ನಿರ್ದೇಶನ ಮಾಡುತ್ತಿರುವುದು ಭರತ್ ರಾಜ್. ಈ ಹಿಂದೆ ಹೀರೋ ಎಂಬ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ಭರತ್ ರಾಜ್, ಈಗ ದೇಹತೂಕ ಹೆಚ್ಚಿರುವ ಕಾನ್ಸ್‍ಟೇಬಲ್ ಒಬ್ಬರ ಕಥೆ ಎತ್ತಿಕೊಂಡಿದ್ದಾರೆ.
‘ಅತಿ ಹೆಚ್ಚು ತೂಕವಿರುವ ಹೆಡ್ ಕಾನ್ಸ್ಟೆಬಲ್ ಒಬ್ಬನ ಕಥೆ ಈ ಚಿತ್ರದಲ್ಲಿದೆ. ಜತೆಗೆ ಪೊಲೀಸರ ಕೆಲಸದ ಒತ್ತಡದ ಬಗ್ಗೆಯೂ ನಾವು ಇಲ್ಲಿ ಹೇಳಿದ್ದೇವೆ. ಕಥೆಗಾಗಿ ನಾಯಕನಾಗಿದ್ದೇನೆಯೇ ಹೊರತು, ನಾಯಕನಾಗಬೇಕು ಎಂದು ಸಿನಿಮಾ ಮಾಡುತ್ತಿಲ್ಲ. ಸಿನಿಮಾ ನೋಡುವಾಗ ನಾನು ಹೀರೊ ಎನಿಸುವುದಕ್ಕಿಂತಲೂ ಕಥೆ ಹೀರೊ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ಪ್ರಮೋದ್ ಶೆಟ್ಟಿ.
ಪ್ರಮೋದ್ ಶೆಟ್ಟಿ ಜೊತೆ ಟರ್ನಿಂಗ್ ಕೊಡೋ ಪಾತ್ರದಲ್ಲಿ ದಿಗಂತ್ ಕೂಡಾ ಬರ್ತಾರೆ. ಹೀರೋಯಿನ್ ಆಗಿ ಗಂಟುಮೂಟೆ ಖ್ಯಾತಿಯ, ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಟಿಸಿದ್ದಾರೆ. ಹೀರೊಯಿಸಂ ಇಲ್ಲದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಾಸ್ಯ ಸಿನಿಮಾವಾದರೂ, ಬೇಕೆಂದೇ ಹಾಸ್ಯ ಮಾಡಿಲ್ಲ. ಬದಲಿಗೆ ಸಂದರ್ಭ ನೋಡುಗರನ್ನು ನಗಿಸುತ್ತದೆ. ರಿಷಬ್ ಕೂಡ ಕಥೆ ಕೇಳಿ ಹಣ ಹೂಡಿದ್ದಾರೆ. ಒಳ್ಳೆಯ ಕಥೆಯ ಭಾಗವಾಗಿರುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ ನಟ ಪ್ರಮೋದ್ ಶೆಟ್ಟಿ. ರಿಷಬ್ ಶೆಟ್ಟಿಯವರ ಚಿತ್ರಗಳಲ್ಲಿ ಇದುವರೆಗೆ ಹೀರೋಗಳಿಗಿಂತ ಹೆಚ್ಚಾಗಿ ಕಥೆಯೇ ಹೀರೋ ಆಗಿದೆ. ಕಥೆಯಿಂದಾಗಿ ಹೀರೋಗಳು ಹೈಲೈಟ್ ಆಗಿದ್ದಾರೆ. ಲಾಫಿಂಗ್ ಬುದ್ದ ಚಿತ್ರೀಕರಣ ಈಗ ಕ್ಲೈಮಾಕ್ಸ್ ಹಂತದಲ್ಲಿದೆ.