ಭಾರತ ಇಬ್ಭಾಗವಾಗುತ್ತಿದೆಯಾ..? ಅತಿಯಾಯ್ತು ಎನ್ನಿಸಬಹುದೇನೋ.. ಆದರೆ ಸಿನಿಮಾಗಳ ವಿಷಯದಲ್ಲಿ ಆ ರೀತಿಯ ಅರ್ಥ ಮೂಡುತ್ತಿರುವುದು ಸತ್ಯ. ಈ ಹಿಂದೆ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಇದೇ ರೀತಿ ಆಗಿತ್ತು. ಈಗ ಕೇರಳ ಸ್ಟೋರಿಗೆ. ಕೇರಳದಲ್ಲಿ ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಮೋಸದಿಂದ ಮತಾಂತರ ಮಾಡಿ, ಐಸಿಸ್ ಉಗ್ರರ ಗುಂಪಿಗೆ ಸೇರಿಸಲಾಗುತ್ತಿದೆ ಎಂಬ ಕಥೆಯನ್ನು ಸಿನಿಮಾ ಮಾಡಲಾಗಿದೆ. ಇದೀಗ ಈ ಚಿತ್ರ ಬಿಡುಗಡೆಯೂ ಆಗಿದೆ. ಚಿತ್ರದ ವಿರುದ್ಧ ಪರ ವಿರೋಧ ನಿಲುವು ವ್ಯಕ್ತವಾಗುತ್ತಿವೆ.
ಕೇರಳ ಸ್ಟೋರಿ ಚಿತ್ರಕ್ಕೆ ತಮಿಳುನಾಡು, ಪ.ಬಂಗಾಳ ನಿಷೇಧ ಹೇರಿವೆ. ಅಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಕೇರಳದಲ್ಲಿ ಸಿನಿಮಾ ಶೋಗಳಿವೆ. ಆದರೆ ಪ್ರದರ್ಶನ ಮಾಡುವುದಕ್ಕೆ ಗಲಾಟೆ ನಡೆಯುತ್ತಿವೆ. ಹೀಗಾಗಿ ಸೂಕ್ತ ರೀತಿಯಲ್ಲಿ ಪ್ರದರ್ಶನವಾಗುತ್ತಿಲ್ಲ. ಜನರಿದ್ದಾರೆ, ಸಿನಿಮಾ ನೋಡುವವರೂ ಇದ್ದಾರೆ. ಪ್ರದರ್ಶನ ಇಲ್ಲ.
ರಾಜಸ್ತಾನದಲ್ಲಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಗಳಾಗುತ್ತಿವೆ. ಶೋಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗುತ್ತಿದೆ. ಏರ್ ಕಂಡೀಷನ್ ಆಫ್ ಮಾಡಿ ಕಿರುಕುಳ ನೀಡಿಯೂ ಆಗಿದೆ. ಅಲ್ಲಿಗೆ ಕೇರಳ ಮತ್ತು ರಾಜಸ್ತಾನದಲ್ಲಿ ಅಧಿಕೃತವಾಗಿ ಬ್ಯಾನ್ ಮಾಡಿಲ್ಲ.
ಇದು ನಿಷೇಧ ಮಾಡಿದವರ ಕಥೆಯಾದರೆ, ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಅತ್ತ ಸುಪ್ರೀಂಕೋರ್ಟಿನಲ್ಲಿ ಚಿತ್ರದ ನಿರ್ಮಾಪಕ ವಿಫುಲ್ ಶಾ ನಿಷೇಧದ ವಿರುದ್ಧ ದೂರು ದಾಖಲಿಸಿದ್ದಾರೆ. ಚಿತ್ರವನ್ನು ಪ್ರದರ್ಶನ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ಕಪಿಲ್ ಸಿಬಲ್ ಕೂಡಾ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ.
ಇನ್ನು ಚಿತ್ರವನ್ನು ನಿಷೇಧಿಸಿರುವ ಬಗ್ಗೆ ಕೆಲವು ನಟರು ಧ್ವನಿ ಎತ್ತಿದ್ದಾರೆ. ಅನುಪಮ್ ಖೇರ್, ಶಬಾನಾ ಅಜ್ಮಿ, ಕಂಗನಾ ರಣಾವತ್ ಮೊದಲಾದವರು ಚಿತ್ರದ ಬ್ಯಾನ್ ಬಗ್ಗೆ ಪ್ರಶ್ನಿಸಿದ್ದಾರೆ. ನಟ ಪ್ರಕಾಶ್ ರೈ ಮೊದಲಾದವರು ನಿಷೇಧದ ಪರ ಧ್ವನಿ ಎತ್ತಿರುವವರ ಪರ ನಿಂತಿದ್ದಾರೆ.
ಇವೆಲ್ಲದರ ನಡುವೆ ಉಳಿದ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕೇರಳ ಸ್ಟೋರಿ 50 ಕೋಟಿಯ ಕ್ಲಬ್ ಸೇರಿದೆ. ಸೋಮವಾರ, ಮಂಗಳವಾರವೂ ಕಲೆಕ್ಷನ್ ಚೆನ್ನಾಗಿದ್ದು, ಈಗಾಗಲೇ ಒಟ್ಟಾರೆ ಬಜೆಟ್ಟಿಗಿಂತ ಡಬಲ್ ಕಲೆಕ್ಷನ್ ಆಗಿದೆ. ಸೂಪರ್ ಹಿಟ್ ಲಿಸ್ಟಿಗೆ ಸೇರಿಯಾಗಿದೆ.