ಕಿಚ್ಚ ಸುದೀಪ್ ಯಾವ ಜಾತಿ..? ಅಭಿಮಾನಿಗಳನ್ನು ಕೇಳಿದರೆ ಅಣ್ಣಾವ್ರ ಶೈಲಿಯಲ್ಲಿ ಕಲಾವಿದರ ಜಾತಿ ಅಂತಾರೆ. ಆದರೆ ರಾಜಕೀಯಕ್ಕೆ ಯಾವುದೋ ಒಂದು ರೀತಿಯಲ್ಲಿ ಒಂದು ಕಾಲಿಟ್ಟ ಮೇಲೆ ಜಾತಿ, ಒಳ ಪಂಗಡ ಸೇರಿ ಎಲ್ಲವನ್ನೂ ಅಳೆದು ಬಿಡ್ತಾರೆ. ಹಾಗೆ ಗೊತ್ತಾಗಿದ್ದೇ ಸುದೀಪ್ ಜಾತಿ. ಸುದೀಪ್ ಬೊಮ್ಮಾಯಿ ಹಾಗೂ ಬಿಜೆಪಿಯ ಕೆಲವರ ಪರ ಪರ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ಅವರು ಅಧಿಕೃತವಾಗಿ ಘೋಷಿಸಿಯೇ ಪ್ರಚಾರಕ್ಕೆ ಹೊರಟವರು. ಹೀಗಾಗಿ ಸುದೀಪ್ ಎಲ್ಲಿಗೇ ಹೋದರೂ ಸುದೀಪ್ ಅವರ ಜಾತಿಯ ಪ್ರಶ್ನೆಯೂ ಎದುರಾಗುತ್ತಿದೆ.
ಇತ್ತೀಚೆಗೆ ಬೆಳಗಾವಿಯ ಯಮಕನಮರಡಿಗೆ ಪ್ರಚಾರಕ್ಕೆ ಹೋಗಿದ್ದಾರೆ ಸುದೀಪ್ ಅವರಿಗೆ ಮತ್ತೊಮ್ಮೆ ಈ ಪ್ರಶ್ನೆ ಎದುರಾಯ್ತು. ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ ಸುದೀಪ್.
ರೋಡ್ ಶೋ, ಪ್ರಚಾರವನ್ನೆಲ್ಲ ಮುಗಿಸಿ ಹೊರಡುವಾಗ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ರು. ಮದಕರಿ ಚಿತ್ರದ ಡೈಲಾಗ್ ಹೇಳಿ ಅಂತೀರಾ.. ಹೇಳಿದ್ರೆ ಜಾತಿ ಹೆಸರು ಹೇಳಿ ಟೀಕೆ ಮಾಡ್ತಾರೆ. ಇದು ಯಾವ ನ್ಯಾಯ ಎಂದ ಸುದೀಪ್, ಅಭಿಮಾನಿಗಳ ಆಸೆಯನ್ನೇನೂ ಹುಸಿ ಮಾಡಲಿಲ್ಲ. ವೀರ ಮದಕರಿ ಚಿತ್ರದ ಡೈಲಾಗ್ ಹೊಡೆದರು.
ಅಂದಹಾಗೆ ಸುದೀಪ್ ಈ ಪ್ರಚಾರಕ್ಕೆ ಬರುತ್ತಿರುವುದು ಬೊಮ್ಮಾಯಿ ಮಾಮನಿಗಾಗಿ ಎಂದಿದ್ದರು. ಬಸವರಾಜ ಬೊಮ್ಮಾಯಿ ಸುದೀಪ್ ಜಾತಿಯವರಲ್ಲ. ಬೊಮ್ಮಾಯಿ ಜೊತೆಯಲ್ಲಿ ಈ ಮಾತು ಹೇಳಿದಾಗ ವೇದಿಕೆಯಲ್ಲಿದ್ದ ಸುಧಾಕರ್, ಮುನಿರತ್ನ, ಆರ್.ಅಶೋಕ್ ಕೂಡಾ ಸುದೀಪ್ ಜಾತಿಗೆ ಸೇರಿದವರಲ್ಲ.