ಶಿವಣ್ಣ ಕಳೆದ ವರ್ಷವಷ್ಟೇ ಗೀತಾ ಪಿಕ್ಚರ್ಸ್ ಸಂಸ್ಥೆ ಆರಂಭಿಸಿದ್ದರು. ಆ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ಗೀತಾ ಶಿವ ರಾಜ್ ಕುಮಾರ್. ಪ್ರೊಡಕ್ಷನ್ ಹೌಸ್ ಮಾತ್ರವೇ ನೋಡಿಕೊಳ್ಳುತ್ತಿದ್ದ ಗೀತಾ, ವೇದ ಚಿತ್ರದ ಮೂಲಕ ಅಧಿಕೃತವಾಗಿ ನಿರ್ಮಾಪಕಿಯಾಗಿದ್ದರು. ಇದೀಗ ಶಿವಣ್ಣ ಮಗಳು ನಿವೇದಿತಾ ನಿರ್ಮಾಪಕಿಯಾಗುತ್ತಿದ್ದಾರೆ.
ಶ್ರೀ ಮುತ್ತು ಸಿನಿ ಸರ್ವಿಸ್, ನಿವೇದಿತಾ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ಸೃಷ್ಟಿಯಾಗಿರುವ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯಡಿ ಈಗಾಗಲೇ ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್ ಗಳು ಹೊರ ಬಂದಿವೆ. ಈಗ ಇದೇ ಬ್ಯಾನರ್ ನಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. 'ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಮೇ 1ರಂದು ಒಂದು ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ' ಎಂಬ ಪೋಸ್ಟರ್ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ.
ಮೊದಲ ಚಿತ್ರಕ್ಕೆ ವಂಶಿ ಎಂಬುವವರು ನಿರ್ದೇಶಕರು. ಪುನೀತ್ ರಾಜಕುಮಾರ್ ಅವರ ಪಿಆರ್`ಕೆಯಲ್ಲಿ ಮಾಯಾಬಜಾರ್ ಚಿತ್ರ ಬಂದಿದ್ದು ನೆನಪಿದೆ ತಾನೇ. ಆ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದವರು ವಂಶಿ. ಅಷ್ಟೇ ಅಲ್ಲ, 5 ಕಥೆಗಳನ್ನು ಒಟ್ಟಿಗೇ ಸೇರಿಸಿ ಮಾಡಿದ್ದ ಪ್ರಯೋಗಾತ್ಮಕ ಸಿನಿಮಾ ಪೆಂಟಗನ್`ನಲ್ಲಿ ಒಂದು ಕಥೆಯಲ್ಲಿ ನಟಿಸಿದ್ದರೂ ಕೂಡಾ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ರಾಜ್ ಕುಟುಂಬದಲ್ಲಿ ನಿರ್ಮಾಪಕರಿಗೆ ಕೊರತೆಯಿಲ್ಲ. ಪೂರ್ಣಿಮಾ ಎಂಟರ್`ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಮೂಲಕ ರಾಘವೇಂದ್ರ ರಾಜಕುಮಾರ್, ಪಿಆರ್`ಕೆ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್, ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್ ಕುಮಾರ್ ಈಗಾಗಲೇ ನಿರ್ಮಾಪಕರಾಗಿದ್ದಾರೆ. ರಣಧೀರ ಕಂಠೀರವ ಚಿತ್ರದ ಮೂಲಕ ರಾಜಕುಮಾರ್ ಕೂಡಾ ನಿರ್ಮಾಪಕರಾಗಿದ್ದರು. ರಾಜ್ ಹೆಸರು ನಿರ್ಮಾಪಕರ ಟೈಟಲ್ ಕಾರ್ಡಿನಲ್ಲಿ ಬಂದಿದ್ದ ಏಕೈಕ ಚಿತ್ರ ರಣಧೀರ ಕಂಠೀರವ. ಅದಾದ ಮೇಲೆ ತ್ರಿಮೂರ್ತಿ ಮೂಲಕ ಪಾರ್ವತಮ್ಮ ಸ್ವತಃ ನಿರ್ಮಾಪಕರಾದರು. ವರದಪ್ಪ ಕೂಡಾ ನಿರ್ಮಾಪಕರಾಗಿದ್ದರು. ಇದೀಗ ಇವರ ಲಿಸ್ಟಿಗೆ ನಿವೇದಿತಾ ಸೇರಿಕೊಂಡಿದ್ದಾರೆ.