ಹುಲಿಯಾ. ಈ ಚಿತ್ರವನ್ನು ಕನ್ನಡಿಗರು ಮರೆಯೋಕೆ ಸಾಧ್ಯವೇ ಇಲ್ಲ. 1996ರಲ್ಲಿ ರಿಲೀಸ್ ಆಗಿದ್ದ ಹುಲಿಯಾ, ಪ್ರೇಕ್ಷಕರನ್ನ ಬಡಿದೆಬ್ಬಿಸಿದ್ದ ಚಿತ್ರ. ಚಿತ್ರ ಬಾಕ್ಸಾಫೀಸಿನಲ್ಲಿ ಗೆಲ್ಲದೇ ಹೋದರೂ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಕನ್ನಡದ ಕಲ್ಟ್ ಸಿನಿಮಾಗಳ ಪಟ್ಟಿಯಲ್ಲಿ ಹುಲಿಯಾಗೊಂದು ಶಾಶ್ವತ ಸ್ಥಾನವಿದೆ. ಅದು ಕೆ.ವಿ.ರಾಜು ಅವರ ಮಾಸ್ಟರ್ ಪೀಸ್. ದೇವರಾಜ್ ಅವರ ವೃತ್ತಿಜೀವನದ ಕೆರಿಯರ್ ಬೆಸ್ಟ್. ಈಗ ಮತ್ತೊಮ್ಮೆ ಹುಲಿಯಾ ನೆನಪಾಗುತ್ತಿದೆ.
ತೂತುಮಡಿಕೆ ಅನ್ನೋ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಚಂದ್ರಕೀರ್ತಿ ಈಗ ಹುಲಿಯಾ ಸಿನಿಮಾ ಮಾಡುತ್ತಿದ್ದಾರೆ. ಈ ಹುಲಿಯಾ ಲವ್ ಆಕ್ಷನ್ ಸಿನಿಮಾ ಅಂತೆ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಡೈರೆಕ್ಟರ್.
ದೇವರಾಜ್ ನಟನೆಯ ಹುಲಿಯಾ ಸಿನಿಮಾಗೂ ನಮ್ಮ ಹುಲಿಯಾಗೂ ಏನೂ ಸಂಬಂಧವಿಲ್ಲ. ನಾನು ಬರೆದ ಕಥೆಗೆ ಇದು ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂದು ಈ ಟೈಟಲ್ ಇಟ್ಟೆ. ಕಾಡಿನ ಪಕ್ಕದ ಹಳ್ಳಿಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಕಾಡಿನಲ್ಲಿ ಹುಲಿಯಪ್ಪನ ಗದ್ದಿಗೆ ಎಂಬ ಬಳಿ ಒಬ್ಬ ಹುಡುಗ ಸಿಗುತ್ತಾನೆ. ಅವನೇ ಹುಲಿಯಾ. ಅವನ ಲವ್ ಸ್ಟೋರಿ, ರಿವೇಂಜ್ ಎಲ್ಲವೂ ಈ ಚಿತ್ರದಲ್ಲಿವೆ ಎಂದು ನಿರ್ದೇಶಕ, ನಟ ಚಂದ್ರಕೀರ್ತಿ ಹೇಳಿದ್ದಾರೆ.
ಸಿಕ್ಸ್ ಪ್ಯಾಕ್ ಮಾಡಿಕೊಂಡು ರೆಡಿಯಾಗಿದ್ದಾರೆ ಚಂದ್ರಕೀರ್ತಿ. ಈ ಚಿತ್ರಕ್ಕೂ ತೂತುಮಡಿಕೆಗೆ ಹಣ ಹಾಕಿದ್ದ ನಿರ್ಮಾಪಕರೇ ನಿರ್ಮಾಪಕರು. ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಮತ್ತು ವಸಂತ್ ಬೆಲ್ಲದ್ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.