ಇದು ಮೊದಲನೇನಲ್ಲ. ದ್ವಾರಕೀಶ್ ನಿಧನರಾದ್ರಂತೆ ಎಂದು ಸುದ್ದಿ ಬರುವುದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವುದು, ಆನಂತರ ಪತ್ರಕರ್ತರು ದ್ವಾರಕೀಶ್ ಅವರಿಗೆ ಫೋನ್ ಮಾಡುವುದು.. ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಹಾಗೆ ಫೋನ್ ಮಾಡಿದಾಗಲೆಲ್ಲ ಮೊದಲಿಗೆ ಫೋನ್ ಮಾಡಿ ಮಾತನಾಡುವುದೇ ದ್ವಾರಕೀಶ್. ನಗು ನಗುತ್ತಲೇ ನಾನು ಬದುಕಿದ್ದೇನೆ ಎನ್ನುತ್ತಾರೆ. ಇಂತಹ ಘಟನೆಗಳು ಈ ಹಿಂದೆ ಹೆಚ್ಚಾಗಿ ಅಂಬರೀಷ್ ಕುರಿತಾಗಿ ಹಬ್ಬುತ್ತಿದ್ದವು. ಅದು ಹೇಗೋ ಅವರಿಗೆ ಗೊತ್ತಾಗುತ್ತಿತ್ತು. ಫೋನ್ ಮಾಡಿದ್ರೆ ಅಂಬಿ ಭಾಷೆಯಲ್ಲಿ ಮಂತ್ರ ಹೇಳಿಯೇ ನಾನು ಬದುಕಿದ್ದೇನೆ ಎಂದು ಹೇಳುತ್ತಿದ್ದರು.
ಇತ್ತೀಚೆಗೆ ಮೃತಪಟ್ಟ ಭಗವಾನ್ ಅವರ ಬಗ್ಗೆಯೂ ಆಗಾಗ್ಗೆ ಸಾವಿನ ಸುದ್ದಿ ಎದ್ದು ತಣ್ಣಗಾಗುತ್ತಿತ್ತು. ಜಯಂತಿಯವರ ಬಗ್ಗೆಯೂ ಹೀಗೆಯೇ ಆಗಿತ್ತು. ಆಗ ಜಯಂತಿ ನಿಜಕ್ಕೂ ಆಸ್ಪತ್ರೆಯಲ್ಲಿದ್ದರು. ಆದರೆ ಜೀವಕ್ಕೆ ಅಪಾಯ ಇರಲಿಲ್ಲ. ಆಸ್ಪತ್ರೆಯಿಂದಲೇ ಕಷ್ಟಪಟ್ಟು ವಿಡಿಯೋ ಮಾಡಿ ಕಳಿಸಿಕೊಟ್ಟಿದ್ದರು. ಅದಾದ ಮೇಲೂ ಗಟ್ಟಿಮುಟ್ಟಾಗಿಯೇ ಇದ್ದರು. ಸಂಗೀತ ನಿರ್ದೇಶಕ ಅಶ್ವತ್ಥ್ ಅವರ ಕುಟುಂಬದವರು ಇಂತಹ ಸುದ್ದಿಗಳಿಗೆ ಬೇಸತ್ತು, ಅವರು ಮೃತಪಟ್ಟಾಗ ಕುಟುಂಬದವರಿಗಿಂತ ಮೊದಲು ನಿಮಗೇ (ಪತ್ರಕರ್ತರಿಗೆ) ಮೊದಲು ಹೇಳುತ್ತೇನೆ ಎಂದು ಸಿಟ್ಟಾಗಿದ್ದರು. ಸೆಲಬ್ರಿಟಿಗಳ ಬಗ್ಗೆ ಹೀಗೆ ಸುದ್ದಿ ಹರಡುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಈ ಸಾವಿನ ವದಂತಿಗೆ ಪದೇ ಪದೇ ಗುರಿಯಾಗುತ್ತಿರುವುದು ದ್ವಾರಕೀಶ್.
ಪತ್ರಕರ್ತರಂತೂ ಹಾಗೆ ಸುದ್ದಿ ಹಬ್ಬಿದಾಗಲೆಲ್ಲ ನೇರವಾಗಿ ಯೋಗಿ ದ್ವಾರಕೀಶ್ ಅವರಿಗೋ, ಖುದ್ದು ದ್ವಾರಕೀಶ್ ಅವರಿಗೋ ಫೋನ್ ಮಾಡುತ್ತಾರೆ. ವಿಚಿತ್ರವೆಂದರೆ ಆ ಸುದ್ದಿ ಅದಾಗಲೇ ಅವರಿಗೆ ತಲುಪಿರುತ್ತದೆ. ಮೊದ ಮೊದಲು ನನ್ನ ಸಾವನ್ನೇಕೆ ಜನ ಬಯಸುತ್ತಾರೆ ಎಂದು ಬೇಸರವಾಗುತ್ತಿತ್ತು. ಈಗ ಅಭ್ಯಾಸವಾಗಿಬಿಟ್ಟಿದೆ. ಅದನ್ನು ಕಾಮಿಡಿಯಾಗಿ ಸ್ವೀಕರಿಸೋಕೆ ಶುರು ಮಾಡಿದ ಮೇಲೆ ಆರಾಮಾಗಿದ್ದೇನೆ. ತೀರಾ ಆತ್ಮೀಯರು ಕರೆ ಮಾಡಿ ವಿಚಾರಿಸಿದಾಗ ಮಾತನಾಡುತ್ತೇನೆ ಎನ್ನುತ್ತಾರೆ ದ್ವಾರಕೀಶ್. ಈ ಬಾರಿ ನಾನು ಬದುಕಿದ್ದೇನೆ ಎನ್ನುವ ವಿಡಿಯೋದಲ್ಲಿಯೇ ದ್ವಾರಕೀಶ್ ಅದನ್ನು ಎಷ್ಟು ಹಾಸ್ಯವಾಗಿ ತೆಗೆದುಕೊಂಡರು ಎನ್ನುವ ಅರಿವಾಗುತ್ತದೆ. ದ್ವಾರಕೀಶ್ ಕಾಮಿಡಿ ಕಲಾವಿದ. ಹಾಸ್ಯ ಮಾಡುತ್ತಲೇ.. ಕನ್ನಡಿಗರನ್ನು ನಕ್ಕು ನಗಿಸುತ್ತಲೇ ಗೆದ್ದವರು. ಆದರೆ.. ಸಾವಿನ ಬಗ್ಗೆ ಕಾಮಿಡಿ ಬೇಡ. ಹೊರಗಿನ ಜಗತ್ತಿಗೆ ಎಷ್ಟು ನಕ್ಕರೂ.. ನಗಿಸಿದರೂ.. ಒಳಗೆ ನೋವು ಇದ್ದೇ ಇರುತ್ತದೆಯಲ್ಲವೇ..