ಅಚ್ಚರಿಯಾದರೂ ಇದು ಸತ್ಯ. ಚಿತ್ರಮಂದಿರಗಳು ಖಾಲಿ ಖಾಲಿ ಹೊಡೆಯುತ್ತಿವೆ. ಜನ ಥಿಯೇಟರಿಗೆ ಬರುತ್ತಿಲ್ಲ. ಹಾಗಂತ ಜನ ಥಿಯೇಟರಿಗೆ ಬಂದು ಸಿನಿಮಾ ನೋಡುತ್ತಿಲ್ಲವೇ ಎಂದರೆ, ಹಾಗೇನಿಲ್ಲ. ಜನ ಥಿಯೇಟರಿಗೂ ಬರುತ್ತಾರೆ. ಆದರೆ ಸ್ಟಾರ್ ಸಿನಿಮಾಗಳಾಗಿದ್ದರೆ ಮಾತ್ರ. ಆಗ ಓಪನಿಂಗ್ ಭರ್ಜರಿಯಾಗಿರುತ್ತದೆ. ಆದರೆ ಅದೇ ಸಿನಿಮಾ ಕ್ವಾಲಿಟಿ ಇಲ್ಲದಿದ್ದರೆ, ಮಾರನೇ ದಿನವೇ ಮತ್ತೆ ಖಾಲಿ ಹೊಡೆಯುತ್ತಿರುತ್ತದೆ. ಇದೆಲ್ಲದರ ಪರಿಣಾಮ ಮುಖ್ಯ ಚಿತ್ರಮಂದಿಗಳೂ ಟೆಂಪೊರರಿ ಚಿತ್ರಮಂದಿರಗಳಾಗಿವೆ.
ನಿಜ. ಚಿತ್ರಮಂದಿರಗಳಲ್ಲಿ ಈಗ ಫುಲ್ ಟೈಮ್ ಶೋಗಳು ನಡೆಯುವುದಿಲ್ಲ. ಸಿನಿಮಾಗಳಿದ್ದರೆ ಶೋ, ಇಲ್ಲವಾದರೆ ಥಿಯೇಟರ್ ಬಾಗಿಲು ಬಂದ್. ಕರ್ನಾಟಕದಲ್ಲಿದ್ದ ಒಟ್ಟು 650 ಚಿತ್ರಮಂದಿರಗಳಲ್ಲಿ 100 ಚಿತ್ರಮಂದಿರಗಳು ಮುಚ್ಚಿರುವ ಲೆಕ್ಕಕ್ಕೆ ಸಂದಿವೆ. ವಿಶೇಷವೆಂದರೆ ಈ 100ರಲ್ಲಿ 60 ಸಂಪೂರ್ಣ ಮುಚ್ಚಿದ್ದು, 40 ಚಿತ್ರಮಂದಿರಗಳು ಸಿನಿಮಾಗಳಿದ್ದಾಗ ಮಾತ್ರ ಪ್ರದರ್ಶನ ನಡೆಸುತ್ತವೆ. ಇಲ್ಲದಿರುವಾಗ ಮುಚ್ಚಿರುತ್ತವೆ.
ವಿಚಿತ್ರವೆಂದರೂ ಇದು ವಾಸ್ತವ. ಈಗ 4 ತಿಂಗಳು ಮುಗಿಯುತ್ತಾ ಬರುತ್ತಿದೆ. ಈ 4 ತಿಂಗಳಲ್ಲೇ ಚಿತ್ರಮಂದಿರದಲ್ಲಿ ಪ್ರದರ್ಶನವಾದ ಚಿತ್ರಗಳ ಸಂಖ್ಯೆ ಸರಿಸುಮಾರು 100. ಈ ನೂರರಲ್ಲಿ ಗೆದ್ದ ಚಿತ್ರಗಳೆಷ್ಟು, ನಿರ್ಮಾಪಕರಿಗೆ ಹಣ ವಾಪಸ್ ಕೊಟ್ಟ ಚಿತ್ರಗಳೆಷ್ಟು ಎನ್ನುವುದು ಒಂದು ಕೈನ ಬೆರಳುಗಳಲ್ಲಿಯೇ ಎಣಿಸಲು ಹೊರಟರೆ, ಲೆಕ್ಕ ಮುಗಿದೇ ಹೋಗುತ್ತದೆ. ಹಿಟ್, ಆವರೇಜ್ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಹಿಟ್ ಎನ್ನುವುದೆಲ್ಲ ಮುಗಿದು, ಹಾಕಿದ್ ಬಂಡವಾಳ ವಾಪಸ್ ಬಂತಾ ಎನ್ನುವಲ್ಲಿಗೆ ಶೋಗಳು ಬಂದಿವೆ. ಕಾರಣವೇನು ಎಂದು ಹುಡುಕ ಹೊರಟರೆ.. ಅರ್ಜೆಂಟಾಗಿ ಹಣ ಮಾಡುವ ನಿರ್ಮಾಪಕರ ಹಪಾಹಪಿತನವೇ ಎದ್ದು ಕಾಣುತ್ತಿದೆ.
ನಿಮಗೆ ನೆನಪಿರಬಹುದು, ಉದಯ ಟಿವಿ ಜೊತೆ ಈಟಿವಿ ಕನ್ನಡ, ಝೀಟಿವಿ, ಸ್ಟಾರ್ ಸುವರ್ಣ ಬಂದಾಗ ಟಿವಿಗಳಿಗೆ ಚಿತ್ರಗಳು ಧಂಡಿಯಾಗಿ ಬೇಕಾಗಿದ್ದವು. ಅವರಿಗೆ ಟಿವಿಯಲ್ಲಿ ಹಾಕೋಕೆ ಸಿನಿಮಾ ಬೇಕಿತ್ತು. ಇವರಿಗೆ ದುಡ್ಡು ಬೇಕಿತ್ತು. ಕೆಲವರಂತೂ (ಸ್ಟಾರ್ ಹೀರೋಗಳೂ ಸೇರಿದಂತೆ) ತಿಂಗಳಿಗೆರಡು ಸಿನಿಮಾ ಸುತ್ತಿ ಟಿವಿಯವರಿಗೆ ಮಾರಿದರು. ಆದರೆ ಕ್ವಾಲಿಟಿ ಹೋಗಿತ್ತು. ಕೊನೆಗೆ ಹೇಗಾಯಿತೆಂದರೆ ಟಿವಿಯವರು ಸಿನಿಮಾ ಕೊಳ್ಳುವುದನ್ನೇ ಬಿಟ್ಟುಬಿಟ್ಟರು. ಈಗ ಒಟಿಟಿಗಳಲ್ಲಿ ಇದೇ ರೀತಿಯ ವ್ಯವಹಾರವಾಗುತ್ತಿದೆ.
ಎಂಥದ್ದೋ ಒಂದು ಸಿನಿಮಾ ಮಾಡುವುದು. ಸಾಧ್ಯವಾದರೆ ಸ್ಟಾರ್ ಹೀರೋ/ಡೈರೆಕ್ಟರುಗಳಿಂದ ಹೊಗಳಿಸುವುದು. ಅಥವಾ ಸ್ಟಾರ್ ಡೈರೆಕ್ಟರುಗಳಿಂದ ಹಾಡು ಬರೆಸುವುದು, ಸ್ಟಾರ್ ಹೀರೋಗಳಿಂದ ಹಾಡಿಸುವುದು.. ಮಾಡುವುದು. ಶಾಸ್ತ್ರಕ್ಕೆ ಸಿನಿಮಾಗಳನ್ನು ಥಿಯೇಟರಿಗೆ ತಂದು ನಂತರ ಎರಡೇ ವಾರಕ್ಕೆ ಒಟಿಟಿಗೆ ಹಾಕುವುದು. ಒಟ್ಟಿನಲ್ಲಿ ಅರ್ಜೆಂಟಾಗಿ ದುಡ್ಡು ಮಾಡಬೇಕು. ಈ ಹಪಾಹಪಿಗೆ ಬಿದ್ದವರು ಈಗ ಟಿವಿ ಮಾರುಕಟ್ಟೆಯನ್ನು ಹಾಳು ಮಾಡಿಕೊಂಡಂತೆಯೇ ಒಟಿಟಿ ಮಾರುಕಟ್ಟೆಯನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅತ್ತ ಒಟಿಟಿಯಲ್ಲಿ ನೋಡಿದರೆ ಪಕ್ಕದ ಮಲಯಾಳಂನವರು ಕ್ವಾಲಿಟಿಯಲ್ಲಿ ಕಡಿಮೆ ಬಜೆಟ್ಟಿನ ಚಿತ್ರಗಳ ಮೂಲಕವೇ ಬಾಲಿವುಡ್ಡಿಗೂ ಪೈಪೋಟಿ ಒಡ್ಡುತ್ತಿದ್ದಾರೆ. ತೆಲುಗು, ತಮಿಳಿನ ಚಿತ್ರಗಳು ಕನಿಷ್ಠ ತಿಂಗಳಿಗೊಂದು ಸೆನ್ಸೇಷನ್ ಸೃಷ್ಟಿಸುವ ಚಿತ್ರಗಳಿರುತ್ತವೆ. ಪ್ರಚಾರವಂತೂ ಅದ್ಧೂರಿಯಾಗಿರುತ್ತದೆ.
ಆದರೆ ಕನ್ನಡದಲ್ಲಿ ಮಾತ್ರ ಒಂದಷ್ಟು ಜನ ಅತ್ತ ಪ್ರಚಾರವನ್ನೂ ಕೊಡದೆ, ಇತ್ತ ಕ್ವಾಲಿಟಿಯನ್ನೂ ಕೊಡದೆ.. ಯಾವತ್ತೋ ಮಾಡಿದ ಒಂದು ಹಿಟ್ ಸಿನಿಮಾ ಹೆಸರೇಳಿಕೊಂಡೇ ಸಿನಿಮಾ ಮಾಡುತ್ತಿದ್ದಾರೆ. ಮೇಲಿನ ಜಿದ್ದಿಗೆ ಬಿದ್ದವರಂತೆ ಸಿನಿಮಾ ಮಾರುಕಟ್ಟೆಯನ್ನೇ ಹಾಳು ಮಾಡುತ್ತಿದ್ದಾರೆ.
ಇವುಗಳ ಜೊತೆ ಒನ್ಸ್ ಎಗೇನ್ ಐಪಿಎಲ್, ಎಲೆಕ್ಷನ್, ಒಟಿಟಿಗಳ ಹಾವಳಿಯಿಂದಾಗಿ ಜನ ಚಿತ್ರಮಂದಿರಕ್ಕೆ ಮುಖ ತೋರಿಸುವ ಬದಲು ಬೆನ್ನು ತೋರಿಸುತ್ತಿದ್ದಾರೆ. ಅಂದಹಾಗೆ ಕಳೆದ 10 ವರ್ಷಗಳಿಂದ ಟಿವಿಯವರೂ ಖರೀದಿ ಮಾಡದೇ ಬಿಟ್ಟಿರುವ ಚಿತ್ರಗಳ ಸಂಖ್ಯೆ 150ಕ್ಕೂ ಹೆಚ್ಚು. ಒಟಿಟಿಯವರು 2023ರಲ್ಲಿ ಖರೀದಿಸಿರುವ ಚಿತ್ರಗಳ ಸಂಖ್ಯೆ 20 ದಾಟಿಲ್ಲ. ಕನ್ನಡ ಚಿತ್ರಗಳೇ ಬೇಡ ಎಂದು ಹೇಳುತ್ತಿದ್ದಾರಂತೆ ಕೆಲವು ಒಟಿಟಿಯವರು.
ಸದ್ಯಕ್ಕೆ ಅತಿ ಹೆಚ್ಚು ಕನ್ನಡ ಚಿತ್ರಗಳಿರುವುದು ಅಮೇಜಾನ್ ಪ್ರೈಂನಲ್ಲಿ. ಎರಡನೇ ಒಟಿಟಿ ಬಂದು ಝೀ5. ಹಾಟ್ ಸ್ಟಾರ್, ಸೋನಿ ಲೈವ್‍ನಲ್ಲಿ. ನೆಟ್`ಫ್ಲಿಕ್ಸ್`ನಲ್ಲಿ ಇದುವರೆಗೆ ಪ್ರದರ್ಶನವಾಗಿರುವ ಏಕೈಕ ಕನ್ನಡ ಚಿತ್ರ ಕಾಂತಾರ.