ನಾಗರಹಾವು. ಅದೆಷ್ಟು ಹೊಸ ಹೊಸ ಕಥೆಗಳಿಗೆ ಜನ್ಮ ಕೊಟ್ಟಿದೆಯೋ.. ರಾಮಾಚಾರಿ ಪಾತ್ರವನ್ನು ಕನ್ನಡಿಗರು ಮರೆಯೋದಿಲ್ಲ. ನಾಗರಹಾವು ಚಿತ್ರದ ಆ ಪಾತ್ರ.. ಚಿತ್ರದುರ್ಗದ ಏಳು ಸುತ್ತಿನ ಕೋಟೆ.. ಆಲಮೇಲು..ಮಾರ್ಗರೇಟ್..ಚಾಮಯ್ಯ ಮೇಷ್ಟು.. ಎಲ್ಲವೂ ಇವತ್ತಿಗೂ ನೆನಪಾಗುತ್ತವೆ. ನಾಗರಹಾವು ರಾಮಾಚಾರಿಯಿಂದ ವಿಷ್ಣುವರ್ಧನ್, ರಾಮಾಚಾರಿ ಸಿನಿಮಾದಿಂದ ರವಿಚಂದ್ರನ್, ಮಿ.&ಮಿಸಸ್ ರಾಮಾಚಾರಿಯಿಂದ ಯಶ್.. ಪರಿಚಿತ. ಈಗ ಹೊಸ ರಾಮಾಚಾರಿ ಬರುತ್ತಿದ್ದು, ಜೊತೆಗೆ ಮಾರ್ಗರೇಟ್ ಕೂಡಾ ಇರೋದು ವಿಶೇಷ. ಈ ಲವ್ ಸ್ಟೋರಿಯ ಸಿನಿಮಾ ಈಗ ಸೆಟ್ಟೇರಿದೆ.
ಯುವ ಪ್ರತಿಭೆ ಅಭಿಲಾಶ್ ನಾಯಕ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ನೆರವೇರಿದೆ. ನಟರಾಕ್ಷಸ ಡಾಲಿ ಧನಂಜಯ್ ಹೊಸ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷ. ಅದಕ್ಕೂ ಕಾರಣ ಇದೆ. ಈ ಅಭಿಲಾಷ್ ಬಡವ ರಾಸ್ಕಲ್ ಹಾಗೂ ಹೊಯ್ಸಳ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದಾರೆ. ಅಭಿಮಾನಿಯಾಗಿ ಪರಿಚಯವಾದರು. ನನ್ನ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ. ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಡಾಲಿ ಧನಂಜಯ.
ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ ಎಂದಿದ್ದಾರೆ ನಿರ್ದೇಶಕ ಗಿರಿಧರ್ ಕಂಭಾರ್.
. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಧನಂಜಯ್ ಬಂದಿರುವುದೇ ಖುಷಿ ಎಂದು ಹೇಳಿದವರು ನಿರ್ಮಾಪಕ ಹರೀಶ್.
ಅಭಿಲಾಷ್ ಚಿತ್ರದಲ್ಲಿ ರಾಮು ಅಲಿಯಾಸ್ ರಾಮಾಚಾರಿಯಾಗಿದ್ದರೆ, ಸೋನಲ್ ಮಂಥೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿಯಾಗಿ ನಟಿಸಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲನಾಗಿದ್ದಾರಂತೆ. ಅವಿನಾಶ್, ರವಿಶಂಕರ್ ಮೊದಲಾದವರು ನಟಿಸುತ್ತಿದ್ದು, ಮೇ 15ರಿಂದ ಶೂಟಿಂಗ್ ಶುರುವಾಗಲಿದೆ.