ಏಪ್ರಿಲ್ 24. ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬ. ಬದುಕಿದ್ದರೆ ಅವರಿಗೆ 95 ತುಂಬುತ್ತಿತ್ತು. ಕನ್ನಡಿಗರ ಪಾಲಿಗೆ ನಾಡಹಬ್ಬವೇ ಆಗಿ ಹೋಗಿರುವ ಡಾ.ರಾಜ್ ಹುಟ್ಟಿದ ಹಬ್ಬಕ್ಕೆ, ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಯುವ ರಾಜ ಕುಮಾರ್ ಅವರಿಗೂ ಮಧ್ಯೆ ಒಂದು ದಿನದ ವಿಶೇಷ ಅಂತರವಿದೆ.
ಡಾ.ರಾಜ್ ಹುಟ್ಟಿದ ದಿನ 24 ಆದರೆ, ಯುವ ರಾಜಕುಮಾರ್ ಹುಟ್ಟಿದ ದಿನ ಏ.23. ಯುವರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಯುವ ಚಿತ್ರತಂಡ ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಮನೆಯ ಮುಂದೆ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿದ್ದಾರೆ. ಅಂದಹಾಗೆ ಯುವ ರಾಜ್ ಕುಮಾರ್ ಅವರ ಒಂದು ಸಿನಿಮಾ ಕೂಡಾ ಇನ್ನೂ ರಿಲೀಸ್ ಆಗಿಲ್ಲ.
ಯುವ ಹುಟ್ಟುಹಬ್ಬದ ಸಂಭ್ರಮದ ವೇಳೆ ಪುನೀತ್ ಅವರನ್ನು ನೆನಪಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಇವತ್ತಿನ ದಿನ ನಾವು ನನ್ನ ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇವೆಲ್ಲ ನಡೆಯುತ್ತಿರೋದು. 2002ರಲ್ಲಿ 2003ರಲ್ಲಿ ನಮ್ಮ ತಮ್ಮನ ಹುಟ್ಟಿದ ಹಬ್ಬ ಆಯ್ತು. 'ಅಪ್ಪು' ಸಿನಿಮಾ ರಿಲೀಸ್ ಆದ್ಮೇಲೆ. ಈ ತರ ಸಿಕ್ಕಾಪಟ್ಟೆ ಜನ ಬಂದಿದ್ದರು. ಅದು ಹಳೇ ಮನೆ. ನಮ್ಮ ತಂದೆ ಇದ್ದರು. ನಮ್ಮ ತಂದೆ ನಮ್ಮ ತಾಯಿಯನ್ನು ಕರೆದು ಪಾರ್ವತಿ ಬಾ ಇಲ್ಲಿ. ಚಿಕ್ಕ ಯಜಮಾನರ ಹುಟ್ಟಿದ ಹಬ್ಬವನ್ನು ಹೇಗೆ ಮಾಡುತ್ತಾರೆ ನೋಡು. ನಮ್ಮದೆಲ್ಲ ಏನೂ ಇರಲಿಲ್ಲ. ಆ ತರ ಮಾಡುತ್ತಿದ್ದಾರೆ. ಆಗ ನಮ್ಮ ತಾಯಿ, ನೀವು ಹುಟ್ಟಿದ ಹಬ್ಬ ಮಾಡಿಸಿಕೊಳ್ಳುತ್ತಿರಲಿಲ್ಲ. ಇಲ್ಲಾ, ಅಂದಿದ್ದರೆ ನಮ್ಮ ಜನ ಒಂದು ವಾರದಿಂದ ಆಚರಣೆ ಮಾಡೋರು ಎಂದಿದ್ರು. ಇವತ್ತು ನನಗೆ ದೃಶ್ಯ ನೆನಪಾಗುತ್ತೆ ಎಂದು ನೆನಪಿಸಿಕೊಂಡಿದ್ದಾರೆ.
ಅಲ್ಲದೆ ಮಕ್ಕಳ ಹುಟ್ಟುಹಬ್ಬವನ್ನು ಹೀಗೆ ಆಚರಣೆ ಮಾಡಿದರೆ ಯಾವ ಹೆತ್ತವರಿಗೆ ಖುಷಿಯಾಗಲ್ಲ, ಹೇಳಿ. ಈ ಸಂಭ್ರಮವನ್ನೆಲ್ಲ ನೋಡೋಕೆ ನಾನು ಇದ್ದೇನೆ ಎಂದು ಭಾವುಕರಾಗಿದ್ದಾರೆ ರಾಘವೇಂದ್ರ ರಾಜಕುಮಾರ್.