ಹುಡುಗರಿದ್ದಾರೆ. ಹುಡುಗಿಯರಿಲ್ಲ. ಮದುವೆ ಬಂದಿದ್ದಾರೆ. ವಧು ಸಿಗುತ್ತಿಲ್ಲ. ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಡ್ಯದ ಹೆಣ್ಣು ಸಿಗದ ಹುಡುಗರೆಲ್ಲ ಪಾದಯಾತ್ರೆ ಹೊರಟಿದ್ದರು. ಬ್ರಹ್ಮಚಾರಿಗಳ ಪಾದಯಾತ್ರೆಗೆ ಡಾಲಿ ಧನಂಜಯ ಸಪೋರ್ಟ್ ಕೊಟ್ಟಿದ್ದರು. ಇದರ ಮಧ್ಯೆ ಹುಡುಗಿ ಸಿಕ್ಕದ ಹುಡುಗರ ಫಜೀತಿಯನ್ನೇ ಸಿನಿಮಾ ಮಾಡಿದ್ದಾರೆ ಹೇಮಂತ್ ಹೆಗಡೆ.
ಹೇಮಂತ್ ಹೆಗಡೆ, ಉತ್ತರ ಕನ್ನಡದವರು. ಕಾರವಾರ ಸುತ್ತಮುತ್ತಲಿನ ಪರಿಸರದಲ್ಲಿ ಇಂತಹ ಹುಡುಗರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಮೊದಲು ಕೇವಲ ಹವ್ಯಕ ಬ್ರಾಹ್ಮಣರಿಗಷ್ಟೇ ಸೀಮಿತವಾಗಿದ್ದ ಸಮಸ್ಯೆ ಈಗ ಎಲ್ಲರಿಗೂ ಎಲ್ಲ ಜಾತಿಯವರಿಗೂ ತಟ್ಟುತ್ತಿದೆ.
ಊರಿಗೆ ಹೋದಾಗಲೆಲ್ಲ ಈ ಹುಡುಗಂಗೆ ಮದುವೆ ಆಗಿಲ್ಲ, ಆ ಹುಡುಗಂಗೆ ಮದುವೆ ಆಗಿಲ್ಲ ಅನ್ನೋ ಮಾತೇ ಪದೇ ಪದೇ ಕಿವಿಗೆ ಬೀಳ್ತಿತ್ತು. ಪಾಪ, ಮೂವತ್ತಾರು ಮೂವತ್ತೇಳು ವರ್ಷ ದಾಟಿದ ಹುಡುಗರು ಮುಖ ಒಣಗಿಸಿಕೊಂಡು ಲುಂಗಿ ಉಟ್ಕೊಂಡು ಓಡಾಡ್ತಿದ್ರು. ಇದನ್ನೆಲ್ಲ ಗಮನಿಸುತ್ತಿದ್ದೆ. ಕಾಶ್ಮೀರ, ವಾರಣಾಸಿ, ಬಿಜಾಪುರಕ್ಕೆಲ್ಲ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆಯಾಗಲು ಶುರು ಮಾಡಿದ್ರು. ನಾನು ಹುಡುಗ ನೀನು ಹುಡುಗಿ ಅನ್ನೋದೆಷ್ಟೆಅಲ್ಲೀಗ ಉಳ್ಕೊಂಡಿದ್ದು. ಈ ಹತಾಶೆಯಲ್ಲಿ ಒಬ್ಬ ಹುಡುಗ ಏನೇನು ಫಚೀತಿ ಮಾಡ್ಕೊಳ್ಳಬಹುದು ಅನ್ನೋದನ್ನ ನೆನೆಸ್ಕೊಂಡು ನಂಗೆ ನಗು ಬರ್ತಿತ್ತು ಅದನ್ನೇ ಸಿನಿಮಾ ಮಾಡಿದ್ದೇನೆ ಎನ್ನುತ್ತಾರೆ ಹೇಮಂತ್ ಹೆಗಡೆ. ಅವರೇ ಈ ಚಿತ್ರದ ನಿರ್ದೇಶಕರು ಕೂಡಾ. ಹೀರೋನೂ ಅವರೇ.
ಇದು ಕಾಮಿಡಿ ಸಿನಿಮಾ. ಎಂಟ್ಹತ್ತು ವರ್ಷಗಳಿಂದ ಕಾಮಿಡಿ ಸಿನಿಮಾಗಳೇ ಬರ್ತಿಲ್ಲ. ಹಾಗಾಗಿ ಇಡೀ ಕಥೆಯನ್ನ ಕಾಮಿಡಿ ಟ್ರ್ಯಾಕ್‍ನಲ್ಲಿ ಹೇಳಿದ್ದೇನೆ ಎನ್ನುವ ಹೇಮಂತ್ ಹೆಗಡೆ, ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆ ಮೇಲೆ ತರಲಿದ್ದಾರೆ. ಸಂದೀಪ್ ನಾಗರಾಜ್ ನಿರ್ಮಾಪಕರು. ಹೇಮಂತ್ ಹೆಗಡೆ ಜೊತೆಗೆ ಗೀತಾಂಜಲಿ ಮಂಗಲ್, ಸೃಷ್ಟಿ, ರಾಜೇಶ್ ನಟರಂಗ ನಟಿಸಿದ್ದಾರೆ.