ಪುಷ್ಪ. ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದು. ತೆಲುಗಿನ ಚಿತ್ರ ಕನ್ನಡದಲ್ಲೂ ಡಬ್ ಆಗಿ ಭಾರಿ ಸದ್ದು ಮಾಡಿತ್ತು. ಈಗ ಪುಷ್ಪ ಚಿತ್ರದ ಸೀಕ್ವೆಲ್ ಬಿಡುಗಡೆಗೆ ಮುಹೂರ್ತ ಸಿದ್ಧವಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ, ಸುನಿಲ್, ಅನುಸೂಯ, ರಾವ್ ರಮೇಶ್..ನಟಿಸಿದ್ದ ಚಿತ್ರಕ್ಕೆ ಸುಕುಮಾರ್ ನಿರ್ದೇಶನವಿದೆ. ಪುಷ್ಪದಲ್ಲಿ ಸಾಮಾನ್ಯ ಕೂಲಿಯೊಬ್ಬ ರಕ್ತಚಂದನ ಸ್ಮಗ್ಲಿಂಗ್ ಲೋಕದ ಡಾನ್ ಆಗುವ ಕಥೆಯಿದ್ದರೆ, ಪುಷ್ಪ 2 ರೂಲ್`ನಲ್ಲಿ ಬೇರೆಯದೇ ಕಥೆ ಇದೆ. ಚಿತ್ರದ ಸೀಕ್ವೆಲ್ ಕಥೆಯ ಬಗ್ಗೆ ಸುಳಿವನ್ನೇ ಕೊಟ್ಟಿರಲಿಲ್ಲ ಸುಕುಮಾರ್. ಈಗ ಟೀಸರ್ ಬಂದಿದೆ.
ಪುಷ್ಪ ಎಲ್ಲಿದ್ದಾನೆ ಎಂಬ ಥೀಮ್ ಮೇಲೆಯೇ ಕುತೂಹಲ ಕೆರಳಿಸಿದೆ ಟೀಸರ್. ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುವ ಪುಷ್ಪ, ಪೊಲೀಸರ ಬುಲೆಟ್ ಗುಂಡಿನಿಂದ ಗಾಯಗೊಂಡಿದ್ದಾನೆ. ದಟ್ಟ ಅರಣ್ಯದಲ್ಲಿ ಆತ ನಾಪತ್ತೆ ಆಗಿದ್ದಾನೆ. ಪುಷ್ಪನಿಗಾಗಿ ಹುಡುಕಾಟ ನಡೆಯುತ್ತಿದೆ. ಪುಷ್ಪ ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದ್ದಾನೆ ಎಂಬುದು ಮಾತ್ರ ಎಲ್ಲರಿಗೂ ಗೊತ್ತು. ಆದ್ರೆ ಆ ಹಣವನ್ನು ಅವನು ಏನು ಮಾಡಿದ ಎಂಬುದು ಯಾರಿಗೂ ಗೊತ್ತಿಲ್ಲ ಎನ್ನುವ ಡೈಲಾಗ್ ಮೂಲಕ ಪುಷ್ಪನ ಒಳ್ಳೆಯತನವನ್ನು ಕೂಡ ಹೇಳಲಾಗಿದೆ. ಮಾಧ್ಯಮಗಳಲ್ಲಿ ಪುಷ್ಪ ನಾಪತ್ತೆ ಆಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಪತ್ತೆಯಾಗಿರುವ ಪುಷ್ಪನಿಗಾಗಿ ಪೊಲೀಸರ ಹುಡುಕಾಟ ಒಂದು ಕಡೆಯಾದರೆ, ಪುಷ್ಪನ ಪರವಾಗಿ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನ ಇನ್ನೊಂದು ಕಡೆ. ಅಲ್ಲಿಯವರೆಗೂ ಪುಷ್ಪನ ದರ್ಶನವೇ ಆಗಲ್ಲ.
ಆಗ ಕಾಡಿನಲ್ಲಿ ಹುಲಿಗಳ ಚಲನವಲನ ಗುರುತಿಸಲು ಇಟ್ಟಿರುವ ಕ್ಯಾಮೆರಾದ ಎದುರು ಹುಲಿಯೊಂದು ಘರ್ಜಿಸುತ್ತದೆ. ಹಾಗೆ ಘರ್ಜಿಸುತ್ತಿರುವಾಗಲೇ ವ್ಯಕ್ತಿಯೊಬ್ಬ ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಾನೆ. ಹುಲಿ ಎರಡು ಹೆಜ್ಜೆ ಹಿಂದಿಡುತ್ತದೆ. ಅವನೇ ಪುಷ್ಪ. ಕಾಡಿನಲ್ಲಿ ಪ್ರಾಣಿಗಳು ಎರಡು ಹೆಜ್ಜೆ ಹಿಂದೆ ಇಟ್ರೆ, ಹುಲಿ ಬಂದಿದೆ ಅಂತ ಅರ್ಥ.. ಆದ್ರೆ ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ, ಅಲ್ಲಿ ಪುಷ್ಪ ಬಂದಿದ್ದಾನೆ ಅಂತ ಅರ್ಥ.. ಎಂಬ ಡೈಲಾಗ್ ಇದೆ.
ಇದೇ ವೇಳೆ ಚಿತ್ರತಂಡ ಅಲ್ಲು ಅರ್ಜುನ್ ಅವರ ಲುಕ್ ಪೋಸ್ಟರ್ ಮಾಡಿದ್ದು, ಸ್ತ್ರೀದೇವತೆಯ ಗೆಟಪ್ಪಿನಲ್ಲಿದ್ದಾರೆ ಅಲ್ಲು ಅರ್ಜುನ್. ಒಟ್ಟಿನಲ್ಲಿ ಚಿತ್ರದ ಟೀಸರ್ ಹವಾ ಎಬ್ಬಿಸಿದೆ.