ಜನನಿ. ಶಿವಾಜಿ ಸುರತ್ಕಲ್ ಸಿನಿಮಾ ನೋಡಿದ್ದವರಿಗೆ ಜನನಿ ಪಾತ್ರ ಖಂಡಿತಾ ಗೊತ್ತಿರುತ್ತೆ. ಶಿವಾಜಿಯ ಪತ್ನಿಯ ಪಾತ್ರ ಅದು. ಮೊದಲ ಭಾಗದಲ್ಲೇ ಸತ್ತು ಹೋಗಿರುವ ಪಾತ್ರ, ಭಾಗ-2ರಲ್ಲಿ ಹೇಗೆ ಬರೋಕೆ ಸಾಧ್ಯ..? ಅದಕ್ಕೆ ಜನನಿ ಪಾತ್ರ ಮಾಡಿರುವ ರಾಧಿಕಾ ನಾರಾಯಣ್ ಉತ್ತರ ಕೊಡುವುದು ಹೀಗೆ. ನನ್ನ ಜನನಿ ಪಾತ್ರ ಶಿವಾಜಿಯ ಅರೆಪ್ರಜ್ಞೆಯ ಮನಸ್ಥಿತಿ ಎನ್ನುತ್ತಾರೆ ರಾಧಿಕಾ.
ಶಿವಾಜಿಯ ಅರೆಪಜ್ಞೆಯ ಮನಸ್ಥಿತಿಯನ್ನು ನಾನು ಪ್ರತಿನಿಧಿಸುತ್ತೇನೆ. ಒಂದನೇ ಭಾಗಕ್ಕಿಂತ ಎರಡನೇ ಭಾಗದಲ್ಲಿ ನನಗೆ ಹೆಚ್ಚು ಎಕ್ಸ್ಪ್ಲೋರ್ ಮಾಡುವ ಅವಕಾಶ ಸಿಕ್ಕಿದೆ. ಅಂದರೆ ಭಾವನಾತ್ಮಕವಾಗಿಯೂ ನನ್ನ ಪಾತ್ರ ತುಂಬಾ ಗಾಢವಾಗಿದೆ ಎನ್ನುವುದು ಶಿವಾಜಿ ಸುರತ್ಕಲ್`ನ ಅರೆಪ್ರಜ್ಞೆಯ ಮನಸ್ಥಿತಿಯ ಮಾತು.
ಇನ್ನು ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ಜೊತೆ ನಟಿಸುತ್ತಿರುವ ಮೇಘನಾ ಗಾಂವ್ಕರ್ ಅವರದ್ದು ದೀಪಾ ಕಾಮತ್ ಎಂಬ ಪೊಲೀಸ್ ಆಫೀಸರ್ ಪಾತ್ರ. ಎಸಿಪಿ ಶಿವಾಜಿ ಸುರತ್ಕಲ್ ಅವರ ಬಾಸ್ ಪಾತ್ರದಲ್ಲಿ ನಾನಿದ್ದೇನೆ. ಮಾಯಾವಿಯ ಮಿಸ್ಟ್ರಿ ಕಥೆಯನ್ನು ಬಗೆಹರಿಸುವ ಪತ್ತೆದಾರರ ಕೆಲಸದಲ್ಲಿ ನಾನು ನೆರವಾಗುತ್ತೇನೆ. ನಾನಿದರಲ್ಲಿ ಸ್ಟ್ರೈಟ್ ಫಾರ್ವರ್ಡ್ ಪೊಲೀಸ್ ಆಫೀಸರ್ ಆಗಿದ್ದು, ನನ್ನ ವೃತ್ತಿ ಜೀವನದಲ್ಲಿಇದೇ ಮೊದಲ ಬಾರಿಗೆ ಖಾಕಿ ಧರಿಸಿದ್ದೇನೆ. ಆದರೆ ನನ್ನ ತಂದೆಯೂ ಪೊಲೀಸ್ ಅಧಿಕಾರಿಯಾಗಿದ್ದರಿಂದ ನನಗೆ ಈ ಪಾತ್ರ ನಿರ್ವಹಣೆ ಕಷ್ಟವಾಗಲಿಲ್ಲ. ಆ ಕಾಸ್ಟ್ಯೂಮ್ ಹಾಕಿದ ತಕ್ಷಣ ಆ ಪೊಲೀಸ್ ಖದರ್ ಮತ್ತು ಬಾಡಿ ಲಾಂಗ್ವೇಜ್ ಬಂದೇ ಬಿಡುತ್ತದೆ. ಖಡಕ್ ಆಗಿ ಡೈಲಾಗ್ ಹೊಡೆದಿದ್ದೇನೆ. ಮೇಘನಾ ಹೇಗೆಲ್ಲ ಡೈಲಾಗ್ ಹೊಡೆದಿರಬಹುದು ಎಂಬ ಕಲ್ಪನೆಗೆ ಉತ್ತರ ಇದೇ ವಾರ ಚಿತ್ರಮಂದಿರದಲ್ಲಿ ಸಿಗಲಿದೆ.
ಇವರಿಬ್ಬರ ಮಧ್ಯೆ ಚಿತ್ರದಲ್ಲಿ ಇನ್ನೂ ಒಂದು ಪಾತ್ರ ತಂದಿದ್ದಾರೆ ನಿರ್ದೇಶಕ ಅಶೋಕ್ ಶ್ರೀವತ್ಸ. ಸಂಗೀತಾ ಶೃಂಗೇರಿ ಅವರದ್ದು ಕೇವಲ ಗ್ಲಾಮರ್ ರೋಲ್ ಅಲ್ಲವಂತೆ. ನನ್ನದು ಕೇವಲ ಹಾಡಿಗೆ ಬಂದು ಹೋಗುವ ಪಾತ್ರವಲ್ಲ, ಸ್ಟ್ರಾಂಗ್ ಕ್ಯಾರೆಕ್ಟರ್ ಇದೆ ಎಂದಿದ್ದಾರೆ ಸಂಗೀತಾ ಶೃಂಗೇರಿ.
ರಾಧಿಕಾ ನಾರಾಯಣ್ ಭಾವನೆಗಳನ್ನು ತರುತ್ತಾರೆ, ಮೇಘನಾ ಗಾಂವ್ಕರ್ ಪವರ್ ನೀಡುತ್ತಾರೆ, ಸಂಗೀತಾ ಶೃಂಗೇರಿ ಗ್ಲಾಮರ್ ಬೆರೆಸುತ್ತಾರೆ' ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. ಈ ಸಿನಿಮಾವನ್ನು ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.